ಹೊಯ್ಸಳ ವಾಸ್ತುಶಿಲ್ಪ
ಹೊಯ್ಸಳ ವಾಸ್ತುಶಿಲ್ಪ
ಕರ್ನಾಟಕವನ್ನು ಬಹುಕಾಲದವರೆಗೆ ಆಳಿದವರಲ್ಲಿ ಹೊಯ್ಸಳರೂ ಪ್ರಮುಖರು. ಕದಂಬರು ಮತ್ತು ಚಾಲುಕ್ಯರಂತೆ ಇವರೂ ಸಹ ಕನ್ನಡನಾಡಿನಾದ್ಯಂತ ಅನೇಕ ದೇವಾಲಯಗಳನ್ನು ನಿರ್ಮಿಸಿದರು. ಕನ್ನಡನಾಡಿನಲ್ಲಿ ಸುಮಾರು ೯೨ ದೇವಾಲಯಗಳನ್ನು ಹೊಯ್ಸಳರು ನಿರ್ಮಿಸಿದ್ದಾರೆ. ಇದರಲ್ಲಿ ಸುಮಾರು ೪೦ ದೇವಾಲಯಗಳು ಹೊಯ್ಸಳರ ರಾಜಕೀಯ ಕಾರ್ಯಕ್ಷೇತ್ರವಾಗಿದ್ದ ಹಾಸನ ಜಿಲ್ಲೆಯೇ ಇವೆ.ಅವುಗಳಲ್ಲಿ ಮುಖ್ಯವಾದುದು ಬೇಲೂರು ಮತ್ತು ಹಳೆಬೀಡುದೇವಾಲಯಗಳು. ದ್ರಾವಿಡ ಮತ್ತು ನಾಗರ ಶೈಲಿಯ ಮಿಶ್ರಣವನ್ನು ಹೊಯ್ಸಳ ವಾಸ್ತುಶೈಲಿಯಲ್ಲಿ ನಾವು ಕಾಣಬಹುದು. ಕೆಲವು ಪಾಶ್ಚಾತ್ಯ ಪಂಡಿತರು, ವಿದ್ವಾಂಸರು ಚಾಲುಕ್ಯರ ವಾಸ್ತುಶೈಲಿಗೆ ಕೊಟ್ಟ ಮಹತ್ವವನ್ನು ಹೊಯ್ಸಳ ಶೈಲಿಗೆ ಕೊಡದೆ ಚಾಲುಕ್ಯ ಸಂಸ್ಕೃತಿಯೊಳಗೆ ಇದನ್ನೂ ಸೇರಿಸಿ ಬದಿಗಿರಿಸಿದ್ದಾರೆ. ಆದರೆ, ಅನೇಕ ಭಾರತೀಯ ಮತ್ತು ಪಾಶ್ಚಾತ್ಯ ವಿದ್ವಾಂಸರು ಹೊಯ್ಸಳ ಶೈಲಿಯನ್ನು ಮರು ವಿಮರ್ಶಿಸಿ ಈ ಶೈಲಿಯ ಬೆರಗನ್ನು ಕಂಡು ವಿಸ್ಮಿತರಾಗಿದ್ದಾರೆ. ಹೊಯ್ಸಳ ದೇವಾಲಯಗಳಲ್ಲಿ ಕಂಡುಬರುವ ಅನೇಕಾನೇಕ ಸೂಕ್ಷ್ಮ ಕೆತ್ತನೆಗಳಿರುವ ವಿಗ್ರಹಗಳು, ಶಿಲಾಬಾಲಿಕೆಯರು ಮತ್ತು ರಾಮಾಯಣ , ಮಹಾಭಾರತದಂತಹ ಪುರಾಣ ಕತೆಗಳನ್ನು ಕಣ್ಣಿಗೆ ಕಟ್ಟುವಂತೆ ಕಲ್ಲಿನಲ್ಲಿ ಕಡೆದಿರುವುದನ್ನು ಕಂಡಾಗ ಹೊಯ್ಸಳ ವಾಸ್ತುಶೈಲಿಯನ್ನು ಪ್ರತ್ಯೇಕವಾಗಿಯೇ ನೋಡಬೇಕೆಂಬುದು ಮನದಟ್ಟಾಗುತ್ತದೆ.
ಹೊಯ್ಸಳ ವಾಸ್ತುಶಿಲ್ಪದ ಪ್ರಮುಖ ಅಂಶಗಳು
ಬದಲಾಯಿಸಿಹೊಯ್ಸಳ ವಾಸ್ತುಶಿಲ್ಪದ ಪ್ರಕಾರವನ್ನು ಸಂಗ್ರಹವಾಗಿ ನಾಲ್ಕು ಅಂಶಗಳಾಗಿ ವಿಂಗಡಿಸಬಹುದು
ಕಟ್ಟಡದ ರೂಪ ಮತ್ತು ತಲವಿನ್ಯಾಸ
ಬದಲಾಯಿಸಿಹೊಯ್ಸಳ ದೇವಾಲಯಗಳ ತಲವಿನ್ಯಾಸವು ಸಾಮಾನ್ಯವಾಗಿ ಬಹುಕೋನಾಕೃತಿ ಅಥವಾ ನಕ್ಷತ್ರಾಕೃತಿಯಲ್ಲಿ ಇರುತ್ತದೆ. ಎತ್ತರವಾದ ಜಗತಿಯ ಮೇಲೆ ತಲವಿನ್ಯಾಸದ ಆಕಾರದಲ್ಲಿಯೆ ದೇವಾಲಯದ ಆಕಾರವು ರೂಪುಗೊಂಡಿರುತ್ತದೆ. ಜಗತಿಯು ವಿಶಾಲವಾಗಿದ್ದು ಸಲೀಸಾಗಿ ಓಡಾಡುವಷ್ಟು ಅನುಕೂಲಕರವಾಗಿರುತ್ತದೆ. ದೇವಾಲಯಕ್ಕೆ ಒಳಬರುವ ಮೊದಲು ಕೆಲವು ಮೆಟ್ಟಿಲುಗಳನ್ನು ಹತ್ತಿ ಪ್ರವೇಶಿಸಬೇಕಾಗುತ್ತದೆ. ಈ ರಚನೆಯು ಹೊಯ್ಸಳರ ಎಲ್ಲಾ ಆಲಯಗಳಲ್ಲೂ ಕಂಡುಬರುತ್ತದೆ. ಮೊದಲಿಗೆ ಸಿಗುವ ವಿಶಾಲವಾದ ಜಗತಿಯೇ ಪ್ರದಕ್ಷಿಣಾ ಪಥವೂ ಆಗಿರುತ್ತದೆ. ಚಾಲುಕ್ಯರ ದೇವಾಲಯಗಳಲ್ಲಿರುವಂತೆ ಗರ್ಭಗೃಹದ ಸುತ್ತಲಿನ ಸುತ್ತುಗಟ್ಟುವ ಹಾದಿಯು ಇಲ್ಲಿ ಕಾಣುವುದಿಲ್ಲ. ಹೊಯ್ಸಳರ ಎಲ್ಲಾ ದೇವಾಲಯಗಳೂ ಬಳಪದ ಕಲ್ಲಿನಿಂದಲೇ ನಿರ್ಮಾಣವಾಗಿರುತ್ತದೆ.
ಗೋಡೆಗಳ ರಚನೆ/ವಿಗ್ರಹಗಳು
ಬದಲಾಯಿಸಿ
ಹೊಯ್ಸಳರ ದೇವಾಲಯದ ಗೋಡೆಗಳ ರಚನೆಯು ಜಗತಿಯ ಒಟ್ಟು ಎತ್ತರದ ಎರಡಷ್ಟಿರುತ್ತದೆ. ಗೋಡೆಗಳ ಮೇಲಿನ ಅಲಂಕಾರವು ತಲಭಾಗದಿಂದ ಆರಂಭವಾಗಿ ಶಿಖರದಲ್ಲಿ ಕೊನೆಗೊಳ್ಳುತ್ತದೆ. ಮೊದಲಿಗೆ ದೇವಾಲಯಗಳ ಸುತ್ತಲೂ ಬಳಸಿ ಬರುವ ಅಲಂಕಾರ ಪಟ್ಟಿಕೆಗಳು ಈ ಗೋಡೆಗಳ ವಿಶಿಷ್ಟತೆ. ಜಗತಿಯ ಬುಡದಿಂದ ಸುಮಾರು ಐದು ಅಡಿಗಳಷ್ಟು ಎತ್ತರದವರೆಗೆ ಒಂದರ ಮೇಲೊಂದರಂತೆ ಪಟ್ಟಿಕೆಗಳು ಕಂಡುಬರುತ್ತದೆ. ಬುಡದಿಂದ ಮೊದಲನೆಯ ಪಟ್ಟಿಯಲ್ಲಿ ಆನೆಗಳ ಸಾಲು ಮತ್ತು ಎರಡನೆಯ ಪಟ್ಟಿಯಲ್ಲಿ ಕುದುರೆಗಳ ಮೇಲೆ ಏರಿ ಹೊರಟಿರುವ ರಾವುತರನ್ನು ನೋಡಬಹುದು. ದೇವಾಲಯದ ಸುತ್ತ ಮೆರವಣಿಗೆ ಹೊರಟಿರುವಂತೆ ಈ ಸಾಲುಗಳು ಕಂಡುಬರುತ್ತವೆ. ಮುಂದಿನ ಪಟ್ಟಿಯಲ್ಲಿ ಶಾರ್ದೂಲಗಳು, ಹಂಸಗಳು ಮತ್ತು ಬಳ್ಳಿಯ ರಚನೆಯು ಕಾಣಸಿಗುತ್ತದೆ. ಈ ಪಟ್ಟಿಗಳು ದೇವಾಲಯದ ಅಂದವನ್ನು ಹೆಚ್ಚಿಸುವಂತಿರುತ್ತದೆ. ಅಗಲದಲ್ಲಿ ಒಂದು ಅಡಿಗಿಂತಲೂ ಕಿರಿದಾಗಿರುವ ಈ ಪಟ್ಟಿಕೆಗಳಲ್ಲಿ ರಾಮಾಯಣ-ಮಹಾಭಾರತದ ಕತೆಗಳೂ ಸಹ ಕೆತ್ತಲ್ಪಟ್ಟಿವೆ. ನಮ್ಮ ಕಣ್ಣಿನ ಮಟ್ಟಕ್ಕೆ ಇವು ಬರುವುದರಿಂದ ಚಿಕ್ಕದಾಗಿದ್ದರೂ ಸ್ಪಷ್ಟವಾಗಿ ನೋಡಿದ ತಕ್ಷಣ ಶಿಲ್ಪಗಳ ಹಿಂದಿನ ಕತೆಯನ್ನು ಅರಿತುಕೊಳ್ಳಬಹುದು. ನಮ್ಮ ತಲೆಯ ಮೇಲಿನ ಅಥವಾ ನಮಗಿಂತಲೂ ಎತ್ತರದಲ್ಲಿರುವ ಗೋಡೆಯ ಸಾಲನ್ನು ದೊಡ್ಡ ವಿಗ್ರಹಗಳಿಂದ ಅಲಂಕಾರಿಸಲಾಗಿದೆ. ಪಟ್ಟಿಕೆಯ ಕೊಲೆಯ ಸಾಲಿನಲ್ಲಿ ಕಾಮಸೂತ್ರದ ವಿವಿಧ ಚಿತ್ರಗಳನ್ನು ತೋರಿಸಲಾಗಿದೆ ನೋಡುಗನ ಒಳತೋಟಿಯನ್ನು ಶಿಲ್ಪಿಗಳು ಅದೆಷ್ಟು ಚೆನ್ನಾಗಿ ಬಲ್ಲವರಾಗಿದ್ದರು ಎಂದು ಇಲ್ಲಿ ತಿಳಿಯಬಹುದು. ಪೂರ್ವ ಭಾಗದಲ್ಲಿ ಪಟ್ಟಿಕೆಗಳನ್ನು ಬಿಟ್ಟರೆ ದೊಡ್ಡ ವಿಗ್ರಹಗಳು ಕಂಡುಬರುವುದಿಲ್ಲ. ಗೋಡೆಗಳನ್ನು ರಚಿಸುವುದರ ಬದಲು ಆ ಸ್ಥಳದಲ್ಲಿ ದೊಡ್ದ ಕಿಟಕಿಗಳನ್ನು (ಜಾಲಂಧ್ರ) ನಿರ್ಮಿಸಲಾಗಿರುತ್ತದೆ. ಗಾಳಿ ಮತ್ತು ಬೆಳಕಿನ ವೈಜ್ಞಾನಿಕ ವ್ಯವಸ್ಥೆಗೆ ಇದೊಂದು ನಿದರ್ಶನ. ದೇವಾಲಯಗಳ ಪಶ್ಚಿಮದ ಭಾಗವು ವಿಗ್ರಹಗಳಿಂದ ಅಲಂಕೃತವಾಗಿ ಪೂರ್ಣ ಮುಚ್ಚಲ್ಪಟ್ಟಿರುತ್ತದೆ. ದೇವಾಲಯದ ನಕ್ಷತ್ರಾಕಾರದ ರಚನೆ ಮತ್ತು ಗೋಡೆಯ ಮೇಲಿನ ಅಲಂಕಾರವು ದೇವಾಲಯದ ಒಟ್ಟಂದವನ್ನು ಹೆಚ್ಚಿಸಿ ಶಿಲ್ಪ ಸೌಂದರ್ಯವನ್ನು ಎತ್ತಿ ತೋರಿಸಲು ಸಹಾಯಕವಾಗುತ್ತದೆ.
ಶಿಖರಗಳ ರಚನೆ
ಬದಲಾಯಿಸಿಹೊಯ್ಸಳರ ದೇವಾಲಯಗಳಲ್ಲಿ ಮುಂಭಾಗದ ಗೋಪುರಗಳ ರಚನೆಯು ಕಂಡುಬರುವುದಿಲ್ಲ. ಆದರೆ, ಶಿಖರಗಳನ್ನು ಅದ್ಭುತವೆನ್ನುವಷ್ಟು ಸುಂದರವಾಗಿ ನಿರ್ಮಿಸಲಾಗಿರುತ್ತದೆ. ದೇವಾಲಯದ ಮುಖ್ಯ ರಚನೆಯಿಂದ ತುಸು ಬೇರ್ಪಟ್ಟಂತೆ ಇವು ಕಾಣುತ್ತವೆ. ಸೋಮನಾಥಪುರ ದೇವಾಲಯದ ಶಿಖರವು ಇದಕ್ಕೆ ಅಪವಾದದಂತಿದೆ. ಅಡಿಯಿಂದ ಮುಡಿಯವರೆವಿಗೂ ಸಮಾನತೆಯು ಅಲ್ಲಿ ಕಾಣುತ್ತದೆ. ದ್ರಾವಿಡ ಶೈಲಿಯಂತೆ ಮೆಟ್ಟಿಲುಗಳ ಆಕಾರದಲ್ಲಿ ಶಿಖರವು ಬೆಳೆಯುತ್ತಾ ಹೋಗದೆ, ಆರಂಭದಲ್ಲಿ ಪಟ್ಟಿಕೆಗಳನ್ನು ಒಳಗೊಂಡು ನಡುವೆ ಸಣ್ಣ-ಸಣ್ಣ ಮಂಟಪಗಳನ್ನು ಸೇರಿಕೊಂಡು ಬೆಳೆಯುತ್ತಾ ಹೋಗುತ್ತದೆ. ತುದಿಯಲ್ಲಿ ಕೋನಾಕೃತಿಯ ರಚನೆಯ ಜೊತೆಗೆ ಕಲಶವು ಇರುತ್ತದೆ. ಕಲಶದ ಭಾಗವೇ ದೇವಾಲಯದ ಅಂತ್ಯ ಭಾಗ. ಶಿಖರಗಳಲ್ಲಿ ಬಳ್ಳಿಗಳ ರಚನೆಯು ಹೆಚ್ಚಾಗಿ ಕಂಡುಬರುತ್ತದೆ. ತುದಿಯ ಒಂದು ಬದಿಯಲ್ಲಿ ಹೊಯ್ಸಳ ಲಾಂಛನವು (ಹುಲಿಯನ್ನು ಕೊಲ್ಲುತ್ತಿರುವ ಸಳ) ಕಾಣಸಿಗುತ್ತದೆ. ನಾಗರ ಶೈಲಿಯಂತೆ ಅತಿ ಎತ್ತರಕ್ಕೆ ಶಿಖರವನ್ನು ಬೆಳೆಸುವ ಪ್ರವೃತ್ತಿಯೂ ಇಲ್ಲಿ ಕಂಡುಬರುವುದಿಲ್ಲ. ಕೆಲವು ಹಂತಗಳ ನಂತರ ಕೋನಾಕೃತಿಯಲ್ಲಿ ಕೊನೆಗೊಳ್ಳುತ್ತದೆ. ಶಿಖರವನ್ನು ಗರ್ಭಗುಡಿಯ ಮೇಲೆ ಸರಿಸಮವಾಗಿ ಕಟ್ಟಲಾಗಿರುತ್ತದೆ.
ಕಂಬಗಳು
ಬದಲಾಯಿಸಿದೇವಾಲಯದ ಆಧಾರವೇ ಕಂಬಗಳು. ಹೊಯ್ಸಳರು ಕಂಬಗಳನ್ನು ಕೇವಲ ಆಧಾರಕ್ಕಾಗಿ ಮಾತ್ರ ಬಳಸದೆ, ಅವುಗಳಲ್ಲೂ ಸುಂದರ ಕೆತ್ತನೆಯನ್ನು ತೋರಿಸಿದ್ದಾರೆ. ಕೆಲವು ಕಂಬಗಳು ಕನ್ನಡಿಯಷ್ಟು ಹೊಳಪಿನಿಂದ ಕೂಡಿದ್ದರೆ ಇನ್ನೂ ಕೆಲವು ಕುಸುರಿ ಕೆತ್ತನೆಯಿಂದ ಮನಸುರೆಗೊಳ್ಳುತ್ತದೆ. ಕಂಬಗಳನ್ನು ಇಂಟರ್ ಲಾಕ್ ಮಾದರಿಯಲ್ಲಿ ಜೋಡಿಸಲಾಗಿದ್ದು ಕುಸಿದು ಬೀಳುವ ಪ್ರಮೇಯವೇ ಒದಗಿಬರುವುದಿಲ್ಲ. ಹಾಗೊಮ್ಮೆ ಕುಸಿದರೂ ಮತ್ತೆ ಸುಲಭವಾಗಿ ಜೋಡಿಸುವಂತೆ ಕಂಬಗಳನ್ನು ನಿರ್ಮಿಸಲಾಗಿದೆ. ಕಂಬಗಳು ಸಾಮಾನ್ಯವಾಗಿ ಐದು ಕಲ್ಲಿನಿಂದ ಮಾಡಲ್ಪಟ್ಟಿದ್ದು , ತಳಭಾಗದಿಂದ ಕ್ರಮವಾಗಿ ಪೀಠ, ಕಂಬ, ಕುಂಭ, ಕಟಿ ಮತ್ತು ಭಾರವಾಹಕ ಎಂದು ವಿಂಗಡಿಸಲಾಗಿದೆ. ಕಂಬಗಳ ದುಂಡನೆಯ ಆಕಾರವನ್ನು ಹೊಂದಿದ್ದು ಮಧ್ಯಭಾಗದಲ್ಲಿ ಚೂಪಾಗಿರುವಂತಹ ಚಕ್ರದ ಆಕೃತಿಯನ್ನು ಹೊಂದಿರುತ್ತದೆ. ಯಾವ ಯಂತ್ರದ ಸಹಾಯವೂ ಇಲ್ಲಲಿದ್ದ ಕಾಲದಲ್ಲಿ ಇವುಗಳು ನಿರ್ಮಾಣವಾಗಿರುವುದನ್ನು ಕಂಡಾಗ ವಿಸ್ಮಯವಾಗುತ್ತದೆ. ದೇವಾಲಯದ ವಿಸ್ತೀರ್ಣಕ್ಕನುಸಾರವಾಗಿ ಕಂಬಗಳ ಸಂಖ್ಯೆಯು ನಿಗದಿಯಾಗಿರುತ್ತದೆ. ಕಂಬಗಳ ಪಟ್ಟಿಗಳೂ ಸಹ ಕುಸುರಿ ಕೆತ್ತನೆಯಿಂದ ಅಲಂಕೃತವಾಗಿರುತ್ತದೆ.
ವಿಭಾಗಗಳು
ಬದಲಾಯಿಸಿಸಾಮಾನ್ಯವಾಗಿ ಹೊಯ್ಸಳರ ದೇವಾಲಯಗಳನ್ನು ನಾಲ್ಕು ವಿಭಾಗಗಳನ್ನಾಗಿ ವಿಂಗಡಿಸಲಾಗುತ್ತದೆ.
- ಗರ್ಭಗೃಹ ಅಥವಾ ಗರ್ಭಗುಡಿ
- ಶುಕನಾಸಿ ಅಥವಾ ಅಂತರಾಳ
- ನವರಂಗ ಅಥವಾ ಸಭಾಮಂಟಪ
- ವಾಹನ ಮಂಟಪ
ಗರ್ಭಗೃಹ ಅಥವಾ ಗರ್ಭಗುಡಿ ಯಲ್ಲಿ ಆಯಾ ದೇವಾಲಯಕ್ಕೆ ಸಂಬಂಧಿಸಿದ ಮೂಲ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿರುತ್ತದೆ. ಇಲ್ಲಿ ಯಾವುದೇ ಕಿಟಕಿ ಅಥವಾ ವಾತಾಯನ ವ್ಯವಸ್ಥೆಯು ಇರುವುದಿಲ್ಲವೇ. ಗರ್ಭಗೃಹದಲ್ಲಿ ಘಂಟಾನದವನ್ನು ಮಾಡಿದರೆ ಅದು ಪ್ರತಿಧ್ವನಿತವಾಗುವಂತೆ ಕೋಣೆಯ ರಚನೆಯಿರುತ್ತದೆ. ಈ ಕೋಣೆಯಲ್ಲಿ ಯಾವುದೇ ರೀತಿಯ ಕೆತ್ತನೆಗಳಾಗಲೀ ಇತರ ವಿಗ್ರಹಗಳಾಗಲೀ ಇರುವುದಿಲ್ಲ. ಹೊಯ್ಸಳರ ಕೆಲವು ದೇವಾಲಯಗಳ ಗರ್ಭಗುಡಿಯಲ್ಲಿ ಮೂಲ ವಿಗ್ರಹದ ಹಿಂಭಾಗ ಮತ್ತು ಅಕ್ಕ-ಪಕ್ಕದಲ್ಲಿ ಸಣ್ಣ ಕೋಣೆಗಳ ರಚನೆಯು ಕಂಡುಬರುತ್ತದೆ. ಈ ಕೋಣೆಗಳನ್ನು ದೇವರ ಆಭರಣಗಳು ಮತ್ತು ನಗ-ನಾಣ್ಯಗಳನ್ನು ಇರಿಸಲು ಬಳಸುತ್ತಿದ್ದಿರಬಹುದೆಂದು ಸಂಶೋಧಕರು ಹೇಳುತ್ತಾರೆ.
ಶುಕನಾಸಿ ಅಥವಾ ಅಂತರಾಳ ವು ಗರ್ಭಗೃಹದ ಮುಂದಿನ ಭಾಗವಾಗಿದ್ದು ಇದನ್ನು ವಿಶೇಷ ಪ್ರಾರ್ಥನೆ ಸಲ್ಲಿಸಲು ಪೂಜಾ ಪರಿಕರಗಳನ್ನಿರಿಸಿಕೊಳ್ಳಲು ಬಳಸಲಾಗುತ್ತಿತ್ತೆಂದು ಹೇಳಲಾಗಿದೆ. ಇದೇ ಜಾಗದಲ್ಲಿ ಉತ್ಸವ ಮೂರ್ತಿಗಳನ್ನೂ ಇರಿಸಲಾಗುತ್ತದೆ. ಶುಕನಾಸಿಯ ಗೋಡೆಗಳಲ್ಲಿ ತುಂಬ ನಾಜೂಕಿನ ಕುಸುರಿ ಕೆಲಸವು ಕಂಡುಬರುತ್ತದೆ. ದ್ವಾರದ ಮೇಲೆ ಗಜಲಕ್ಷ್ಮಿಯ ವಿಗ್ರಹವಿದ್ದು ಅಕ್ಕ-ಪಕ್ಕದಲ್ಲಿ ನೆಲದವರೆವಿಗೂ ಏಳು ಪಟ್ಟಿಕೆಗಳನ್ನು ಉದ್ದವಾಗಿ ನಿರ್ಮಿಸಲಾಗಿರುತ್ತದೆ. ಇವುಗಳನ್ನು ಸಪ್ತಶಾಖೆಗಳೆಂದು ಕರೆಯುತ್ತಾರೆ. ವಜ್ರ, ಪ್ರಾಣಿ, ಅಗ್ನಿ, ಕುಂಭ, ಪಕ್ಷಿ, ನರ ಶಾಕೆಗಳೆಂದು ವಿಂಗಡಿಸಲಾಗಿದೆ. ಇವುಗಳಲ್ಲಿನ ಕುಸುರಿ ಕೆಲಸವು ಮೈ ನವಿರೇಳಿಸುತ್ತದೆ.
ನವರಂಗ ಅಥವಾ ಸಭಾಮಂಟಪ ವು ವೃತ್ತಾಕಾರವಾಗಿರುತ್ತದೆ. ಇದು ಶುಕನಾಸಿಯ ನಂತರದ ಭಾಗ. (ಹೊಯ್ಸಳರ ದೇವಾಲಯಗಳಲ್ಲಿ ಶುಕನಾಸಿ ಮತ್ತು ಅಂತರಾಳದ ನಡುವೆ ದರ್ಶನ ಮಂಟಪ ಎಂಬ ಸ್ಥಳವೂ ಕಂಡು ಬರುತ್ತದೆ. ಇಲ್ಲಿಂದ ದೇವರ ದರ್ಶನ ಪಡೆಯುವ ಪಧ್ಧತಿಯಿದೆ). ನವರಂಗ ಮಂಟಪವನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬಳಸಲಾಗುತ್ತಿತ್ತೆಂದು ಶಾಸನಗಳಿಂದ ತಿಳಿದು ಬರುತ್ತದೆ. ಎಲ್ಲ ಬಗೆಯ (ಅಥವಾ ಒಂಬತ್ತು ಬಗೆಯ) ರಂಗ ಪ್ರಕಾರಗಳಿಗೂ ನವರಂಗವು ವೇದಿಕೆಯಾಗಿರುತ್ತಿತ್ತು. ಭಾರತೀಯ ನೃತ್ಯ ಪ್ರಕಾರವು ಹೆಚ್ಚಾಗಿ ವೃತ್ತಾಕಾರವಾಗಿಯೇ ಆರಂಭವಾಗುವುದರಿಂದ ನವರಂಗವನ್ನೂ ಅದೇ ಮಾದರಿಯಲ್ಲಿ ಇರಿಸಿದ್ದಾರೆ ಎನ್ನಬಹುದು. ಮುಂಭಾಗಿಲಿಂದ ಬರುವ ಸೂರ್ಯನ ಕಿರಣವನ್ನು ಪ್ರತಿಫಲಿಸಲು ವೃತ್ತಾಕಾರದ ರಚನೆಯು ಹೆಚ್ಚು ಪ್ರಶಸ್ತ ವೆನ್ನುವುದು ಅವರಿಗೆ ತಿಳಿದಿತ್ತು ಎಂದು ನಿಸ್ಸಂದೇಹವಾಗಿ ಹೇಳಬಹುದು. ಚೌಕಾಕಾರದ ರಚನೆಯಲ್ಲಿ ಬೆಳಕು ಕೋನಗಳಲ್ಲಿ ಕೇಂದ್ರೀಕೃತವಾಗುವುದರಿಂದ ಹೆಚ್ಚು ಪ್ರತಿಫಲನಕ್ಕೆ ಅವಕಾಶವಾಗುವುದಿಲ್ಲ. ಈ ಮಂಟಪವನ್ನು ತುರ್ತು ಸಭೆಗಳನ್ನು ನೆಡೆಸಲೂ ಸಹ ಬಳಸುತ್ತಿದ್ದರೆಂದು ಹೇಳಲಾಗುತ್ತದೆ. ದಕ್ಷಿಣ ಭಾರತದ ದೇವಾಲಯಗಳಲ್ಲಿ ನೃತ್ಯಸೇವೆಯ ಸಂಪ್ರದಾಯವು ಇದ್ದಿದ್ದರಿಂದ ನೃತ್ಯ ಮಾಡುವುದಕ್ಕೇ ಇರುತ್ತಿದ್ದ ದೇವದಾಸಿಯರು ನವರಂಗದಲ್ಲಿ ನೃತ್ಯಸೇವೆಯನ್ನು ದೇವರಿಗೆ ಸಲ್ಲಿಸುತ್ತಿದ್ದರೆಂದು ಶಾಸನಗಳು ಹೇಳುತ್ತವೆ.
ವಾಹನ ಮಂಟಪ ವು ಪ್ರತಿಷ್ಠಾಪಿತವಾಗಿರುವ ದೇವರ ವಾಹನವನ್ನಿರಿಸಲು ಮಾಡಿರುವ ಸ್ಥಳ. ಆಯಾ ದೇವರಿಗೆ ಸಂಬಂಧಿಸಿದ ವಾಹನದ ಮೂರ್ತಿಗಳನ್ನು ಕಡೆದು ಕೂರಿಸಲಾಗಿರುತ್ತದೆ. ಶಿವನ ದೇವಾಲಯದಲ್ಲಿ ನಂದಿಯು, ವಿಷ್ಣುವಿಗೆ ಗರುಡನೂ, ದುರ್ಗಿಗೆ ಸಿಂಹವೂ ಈ ಮಂಟಪಗಳಲ್ಲಿ ಕಂಡು ಬರುತ್ತದೆ. ಸೀ ಮಂಟಪವು ದೇವಾಲಯದ ಜಗತಿಯ ಮೇಲಿದ್ದರೂ ಮೂಲ ದೇವಾಲಯದಿಂದ ಪ್ರತ್ಯೇಕವಾಗಿರುತ್ತದೆ. ಕೆಲವು ಗುಡಿಗಳಲ್ಲಿ ಮಂಟಪವು ಇಲ್ಲದೆ ಕೇವಲ ವಾಹನಗಳನ್ನು (ನಂದಿ, ಗರುಡ ಇತ್ಯಾದಿ) ಇರಿಸಿರುವುದೂ ಉಂಟು.
ಕೂಟಗಳು
ಬದಲಾಯಿಸಿಹೊಯ್ಸಳರ ದೇವಾಲಯಗಳನ್ನು ಕೂಟ ದೇವಾಲಯಗಳಾಗಿ ವಿಂಗಡಿಸಲಾಗಿದೆ. ಒಂದು ಜಗತಿಯ ಮೇಲೆ ಒಂದೇ ಮುಖ್ಯ ದೇವಾಲಯವಿದ್ದು ಒಂದೇ ಮುಖ್ಯ ಗರ್ಭಗುಡಿಯಿರುವುದನ್ನು ಏಕಕೂಟ ಎನ್ನಲಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಬೇಲೂರು ನಗರದಲ್ಲಿರುವ ಚೆನ್ನಕೇಶವ ದೇವಾಲಯ. ಒಂದೇ ಜಗತಿಯ ಮೇಲೆ ಎರಡು ಮುಖ್ಯ ಗರ್ಭಗುಡಿಗಳಿರುವುದಕ್ಕೆ ದ್ವಿ-ಕೂಟ ಅಥವಾ ಜೋಡಿಗುಡಿ ಎನ್ನಲಾಗುತ್ತದೆ. ಇದಕ್ಕೆ ಒಳ್ಳೆಯ ಉದಾಹರಣೆ ಹಳೇಬೀಡು ಪಟ್ಟಣದಲ್ಲಿರುವ ಹೊಯ್ಸಳೇಶ್ವರ ದೇವಸ್ಥಾನ. ಮೂರು ಮುಖ್ಯ ಗರ್ಭಗುಡಿಗಳಿರುವ ದೇವಾಲವು ತ್ರಿಕೂಟ , ಇದನ್ನು ನಾವು ಸೋಮನಾಥಪುರದಲ್ಲಿ ಕಾಣಬಹುದು. ನಾಲ್ಕು ಗರ್ಭಗುಡಿಯಿರುವ ಚತುಷ್ಕೂಟ ದೇವಾಲಯವು ಹಾಸನ ಜಿಲ್ಲೆ ಯ ದೊಡ್ಡಗದ್ದವಳ್ಳಿ ಯಲ್ಲಿದೆ. ಐದು ಗರ್ಭಗುಡಿಯಿರುವ ಪಂಚಕೂಟ ಆಲಯವನ್ನು ಮಂಡ್ಯ ಜಿಲ್ಲೆ ಯ ಕಿಕ್ಕೇರಿ ತಾಲ್ಲೂಕಿನ ಗೋವಿಂದನ ಹಳ್ಳಿ ಎಂಬಲ್ಲಿ ಕಾಣಬಹುದು. ಹೀಗೆ ಕೂಟಗಳನ್ನಾಗಿ ವಿಂಗಡಿಸಿಕೊಂಡು ತಮ್ಮದೇ ಶೈಲಿಯಲ್ಲಿ ಹೊಯ್ಸಳರು ಸುಮಾರು ೯೨ ದೇವಾಲಯಗಳನ್ನು ಕರ್ನಾಟಕದಲ್ಲಿ ನಿರ್ಮಿಸಿದ್ದಾರೆ.
ಹೀಗೆಯೇ ಹೊಯ್ಸಳರ ಆಲಯಗಳ ಒಳಛಾವಣಿಗಳನ್ನು ಭುವನೇಶ್ವರಿಗಳು ಎಂದು ಕರೆಯಲಾಗುತ್ತದೆ. ವಿಶೇಷವೆಂದರೆ , ಇವೂಗಳನ್ನು ಸಹ ಸೂಕ್ಷ್ಮ ಕುಸುರಿ ಕೆತ್ತನೆಯಿಂದ ಅಲಂಕರಿಸಲಾಗಿದೆ. ಭುವನೇಶ್ವರಿಗಳಲ್ಲಿ ಸಾಮಾನ್ಯವಾಗಿ ಅಷ್ಟದಿಕ್ಪಾಲಕ (ಎಂಟು ದಿಕ್ಕಿನ ದೇವತೆಗಳು) ರನ್ನು ಅವರ ವಾಹನಗಳ ಜೊತೆಗೆ ತೋರಿಸಲಾಗಿರುತ್ತದೆ. ಈ ವಿಗ್ರಹಗಳನ್ನು ಮೊದಲು ಕೆಳಗೆ ಕೆತ್ತನೆ ಮಾಡಿಕೊಂಡು ನಂತರ ಮೇಲಕ್ಕೆ ಇಂಟರ್ ಲಾಕ್ ಮಾದರಿಯಲ್ಲಿ ಜೋಡಿಸಲಾಗಿದೆ. ಹೆಚ್ಚು ಸ್ಪಷ್ಟತೆ, ಹೆಚ್ಚು ಅಲಂಕಾರ ಮತ್ತು ಪೂರ್ಣ ಚಿತ್ರಣ ಹೊಯ್ಸಳರ ವಾಸ್ತುಶೈಲಿಯ ಪ್ರಮುಖ ಅಂಶ. ವಿಗ್ರಹಗಳನ್ನು ಕೆತ್ತುವುದಕ್ಕೆಂದೇ ದೋರದಮುದ್ರ (ಇಂದಿನ ಹಳೇಬೀಡು ) ದಲ್ಲಿ ಶಿಲ್ಪಕಲಾ ವಿಶ್ವವಿದ್ಯಾಲಯವೇ ಇತ್ತೆಂದು ವಿದ್ವಾಂಸರು ಶಾಸನಗಳ ಆಧಾರದಲ್ಲಿ ಹೇಳುತ್ತಾರೆ. ವಿಗ್ರಹಗಳನ್ನು ಕೆತ್ತುವ ಮುನ್ನ ಅದರ ಕರಡು ತಯಾರಿಕೆ , ನಂತರ ದಪ್ಪ ಕೆತ್ತನೆ, ತದನಂತರ ವಿಗ್ರಹದ ಸೂಕ್ಷ್ಮ ಕೆತ್ತನೆಗಳನ್ನು ಪೂರೈಸುತ್ತಿದ್ದರೆಂದು ಹೊಯ್ಸಳರ ಅನೇಕ ದೇವಾಲಯಗಳಲ್ಲಿನ ಕೆತ್ತನೆಯ ಶೈಲಿಯಿಂದ ತಿಳಿದುಬರುತ್ತದೆ. ಭಾರತೀಯ ವಾಸ್ತುಶೈಲಿಯಲ್ಲಿ ಹೊಯ್ಸಳ ವಾಸ್ತುಶಿಲ್ಪವು ಅತ್ಯಂತ ಪ್ರಮುಖವಾದ ಸ್ಥಾನವನ್ನು ಪಡೆದುಕೊಂಡಿದೆ.
ಉಲ್ಲೇಖನಗಳು
ಬದಲಾಯಿಸಿಮಾಹಿತಿ ಮೂಲ:
- ಕರ್ಣಾಟಕ ಸಂಸ್ಕೃತಿ ಸಮೀಕ್ಷೆ . ಡಾ. ಎಚ್. ತಿಪ್ಪೇರುದ್ರಸ್ವಾಮಿ.
- ಎಪಿಗ್ರಾಫಿಕಾ ಕರ್ನಾಟಕ