ಹೊನ್ನೆ
ಹೊನ್ನೆ | |
---|---|
Conservation status | |
Scientific classification | |
ಸಾಮ್ರಾಜ್ಯ: | plantae
|
Division: | |
ವರ್ಗ: | |
ಗಣ: | |
ಕುಟುಂಬ: | |
ಉಪಕುಟುಂಬ: | |
ಪಂಗಡ: | |
ಕುಲ: | |
ಪ್ರಜಾತಿ: | P. marsupium
|
Binomial name | |
ಟೆರೋಕರ್ಪಸ್ ಮಾರ್ಸುಪಿಯಮ್(Pterocarpus marsupium) |
ಹೊನ್ನೆ (Kino Tree) ಒಂದು ದೊಡ್ಡ ಪ್ರಮಾಣದ ಮುಖ್ಯ ಚೌಬೀನೆ ಮರ. ಮಿಶ್ರಪರ್ಣಪಾತಿ ಅರಣ್ಯಗಳಲ್ಲಿ ೭೫ ರಿಂದ ೨೦೦ ಸೆ.ಮೀ. ಮಳೆ ಬೀಳುವ ಪ್ರದೇಶಗಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಇದು ಭಾರತ, ನೇಪಾಳ, ಶ್ರೀಲಂಕಾಗಳ ಮೂಲ(Native) ಮರ.
ಸಸ್ಯಶಾಸ್ತ್ರೀಯ ವರ್ಗೀಕರಣ
ಬದಲಾಯಿಸಿಇದು ಲೆಗುಮಿನೋಸೆ ಕುಟುಂಬದಲ್ಲಿದೆ. ಸಸ್ಯಶಾಸ್ತ್ರೀಯ ಹೆಸರು: ಟೆರೊಕಾರ್ಪಸ್ ಮಾರ್ಸುಪಿಯಮ್ (Pterocarpus marsupium). ಕನ್ನಡದಲ್ಲಿ 'ಹನೆ', 'ಬಿಜಸಾಲ' ಎಂದೂ ತುಳು ಬಾಷೆಯಲ್ಲಿ ಬೇಂಗ ಎಂದೂ ಕರೆಯುತ್ತಾರೆ.
ವ್ಯಾಪ್ತಿ
ಬದಲಾಯಿಸಿಭಾರತದ ಪರ್ಯಾಯದ್ವೀಪ ಭಾಗದ ಪರ್ಣಪಾತಿ ಕಾಡುಗಳ, ತೇವಮಯ ಪ್ರದೇಶಗಳಲ್ಲಿ ಬೆಳೆಯುತ್ತದೆ. ಹಿಮಾಲಯ ತಪ್ಪಲು ಪ್ರದೇಶ, ಮಹಾರಾಷ್ಟ್ರ, ಆಂಧ್ರ, ಒರಿಸ್ಸ ಈ ಪ್ರಾಂತ್ಯಗಳಲ್ಲಿಯೂ ಇದು ಕಂಡುಬರುತ್ತದೆ.
ಸಸ್ಯದ ಗುಣಲಕ್ಷಣಗಳು ಮತ್ತು ವಿವರಗಳು
ಬದಲಾಯಿಸಿದೊಡ್ಡ ಪ್ರಮಾಣದ ಮರ. ಹರಡಿದ ಕೊಂಬೆಗಳು. ಅನುಕೂಲಕರ ವಾತಾವರಣದಲ್ಲಿ ಕಾಂಡ ನೇರವಾಗಿ ಬೆಳೆದು 30ಮೀ ಎತ್ತರ ಹಾಗೂ 3 ಮೀ ಸುತ್ತಳತೆಯನ್ನು ಪಡೆಯುವುದು. ತೊಗಟೆ ಮಂದ, ಬೂದುಬಣ್ಣ. ಸಣ್ಣ ಅಸಮರೂಪದ ಹೊಪ್ಪಳಿಕೆಗಳು ಕಂಡುಬರುತ್ತವೆ. ತೊಗಟೆ ದಪ್ಪವಾಗಿದ್ದು ಕೆತ್ತಿದಾಗ ಎಳೆಗೆಂಪು ಬಣ್ಣ ಕಾಣುತ್ತದೆ. ಹಳೆಯ ಮರಗಳಿಂದ ರಕ್ತ ಕೆಂಪಿನ ಬಂಧಕ ಅಂಟು (ರಾಳ) (Astringent Gum) ದೊರೆಯುತ್ತದೆ. ದಾರುವಿನಿಂದ ಉತ್ತಮ ಚೌಬೀನೆ ದೊರೆಯುತ್ತದೆ. ದಾರುವು ಗಡುಸಾಗಿದ್ದು, ಚೇಗು ಹಳದಿ ಮಿಶ್ರಿತ ಕಂದು ಬಣ್ಣದ್ದಾಗಿದೆ. ಒಳಭಾಗ ಕೆಲವು ಬಾರಿ ಕೆಟ್ಟಿರುವುದರಿಂದ ಕೊಯ್ಯುವಾಗ ಬೇರ್ಪಡಿಸಬೇಕು. ಚೌಬೀನೆ ಶಕ್ತಿಯುತ ಹಾಗೂ ಗಡುಸಿನದಾಗಿರುತ್ತದೆ. ಬಾಳಿಕೆ ಬರುತ್ತದೆ. ದಾರುವಿನ ಮೇಲೆ ನೀರು ಬಿದ್ದಲ್ಲಿ ಕಪ್ಪು ಬಣ್ಣದ ಕಲೆಯುಂಟಾಗುತ್ತದೆ. ಕೊಯ್ತಕ್ಕೂ ಮರಗೆಲಸಗಳಿಗೂ ಸುಲಭ. ಚೆನ್ನಾಗಿ ಹೊಳಪು ಕೊಡಬಹುದು. ಪದರ ಹಲಗೆಗೆ ಉಪಯುಕ್ತವಾದರೂ ಉರುಳೆಯಂತ್ರ (ರೋಡರ್) ದಿಂದ ತೆಗೆಯಲು ಕಷ್ಟ ತೆಳುವಾದ ಬಿಲ್ಲೆಯಾಗಿ ಕುಮಂತಿ (ಸ್ಲೈಸ್) ಉಪಯೋಗಿಸಬಹುದು.
ಏಪ್ರಿಲ್-ಮೇ ತಿಂಗಳುಗಳಲ್ಲಿ ಕೆಲವು ಕಾಲ ಎಲೆ ಇಲ್ಲದಿದ್ದು, ಮೇ-ಜೂನ್‌ನಲ್ಲಿ ಹೊಸ ಚಿಗುರು ಬಂದು, ಜೂನ್-ಆಗಸ್ಟ್ ತಿಂಗಳಲ್ಲಿ ಸುವಾಸಿತ ಹಳದಿಯ ಹೂಗೊಂಚಲುಗಳಿಂದ ಕೂಡಿರುವುವು. ಜನವರಿ-ಮಾರ್ಚಿನಲ್ಲಿ ಕಾಯಿ ಮಾಗುವುದು. 2-5 ಸೆಂಮೀ ವ್ಯಾಸದ ಕಂದುಬಣ್ಣದ ಚಪ್ಪಟೆಯ ರೆಕ್ಕೆಯುಳ್ಳ ಕಾಯಿಗಳು ಮರದಿಂದ ಜೋಲಾಡುತ್ತಿದ್ದು ದೊಡ್ಡಗಾಳಿ ಬಂದಾಗ ದೂರದವರೆಗೆ ಪ್ರಸಾರವಾಗುತ್ತವೆ.
ತಕ್ಕಮಟ್ಟಿಗೆ ಬಿಸಿಲನ್ನು ಅಪೇಕ್ಷಿಸುತ್ತದೆ. ಕತ್ತರಿಸಿದಾಗ ಚೆನ್ನಾಗಿ ಚಿಗುರುವುದು. ಸ್ವಾಭಾವಿಕ ಪುನುರುತ್ಪತ್ತಿ ಸಮರ್ಪಕವಾಗಿದ್ದರೂ ಸಸಿಗಳು ದೊಡ್ಡವಾಗಬೇಕಾದರೆ ಜಾನುವಾರು, ಬೆಂಕಿ ಕಾಟದಿಂದ ಕಾಪಾಡಬೇಕು. ಬೇರು ಸಸಿಗಳು ಹೇರಳವಾಗಿರುತ್ತವೆ. ಬೀಜಬಿತ್ತಿ ಸಸಿ ಬೆಳೆಸಬಹುದು.
ಉಪಯೋಗಗಳು
ಬದಲಾಯಿಸಿಅತಿಮುಖ್ಯ ಚೌಬೀನೆ ಮರಜಾತಿಗಳಲ್ಲಿ ಇದೂ ಒಂದು. ಗೃಹ ನಿರ್ಮಾಣ, ದೋಣಿ ತಯಾರಿಕೆ ಮುಂತಾಗಿ ಮರಗೆಲಸಕ್ಕೆ ಉತ್ತಮ ಜಾತಿಯ ಮರ. ಇದರ ತೊಗಟೆಯಲ್ಲಿ ದೊರೆಯುವ ರಕ್ತ ಕೆಂಪಿನ ಬಂಧಕ ಅಂಟು (Astringent Gum) ಆಯುರ್ವೇದ ಔಷಧಗಳ ತಯಾರಿಕೆಯಲ್ಲಿ ಉಪಯೋಗವಾಗುತ್ತದೆ.
ದಕ್ಷಿಣ ಭಾರತದಲ್ಲಿ, ಸಾಗುವಾನಿ, ಬೀಟೆ ಹೊರತು, ಅತಿಬಳಕೆಯಲ್ಲಿರುವ ಚೌಬೀನೆ ಇದಾಗಿದೆ. ಪೀಠೋಪಕರಣ, ಗಾಡಿಚಕ್ರ, ಗಣಿ ಆನಿಕೆ, ರೈಲ್ವೆ ಕೋಚು, ಸ್ಲೀಪರುಗಳು, ಕೊಳಗಗಳು, ವ್ಯವಸಾಯದ ಉಪಕರಣಗಳು ಹಾಗೂ ಕೆತ್ತನೆ ಕೆಲಸಗಳು ಮುಂತಾದವುಗಳಿಗೆ ಉಪಯುಕ್ತ. ತೊಗಟೆಯಿಂದ ಬಣ್ಣ ಬರುತ್ತದೆ. ಎಲೆಗಳು ಜಾನುವಾರುಗಳ ಮೇವಿಗೂ ಗೊಬ್ಬರಕ್ಕೂ ಉಪಯುಕ್ತ ಎನಿಸಿದೆ.
ಛಾಯಾಂಕಣ
ಬದಲಾಯಿಸಿ-
ಹೊನ್ನೆ ಮರದ ತೊಗಟೆ
-
ಹೊನ್ನೆ ಮರ
-
ಹೊನ್ನೆ ಮರದ ಬೀಜಗಳು (ಕುನ್ಮಿಂಗ್ ಸಸ್ಯಶಾಸ್ತ್ರೀಯ ಉದ್ಯಾನ)
ಆಧಾರ ಗ್ರಂಥಗಳು
ಬದಲಾಯಿಸಿ೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ