ಮರಗೆಲಸ
ಮರಗೆಲಸವು ಒಂದು ಕುಶಲ ವೃತ್ತಿ ಮತ್ತು ಕಸುಬಾಗಿದೆ. ಇದರಲ್ಲಿ ಮಾಡಲಾದ ಮುಖ್ಯ ಕೆಲಸವೆಂದರೆ ನಿರ್ಮಾಣ ವಸ್ತುಗಳ ಕತ್ತರಿಸುವಿಕೆ, ಆಕಾರ ಕೊಡುವಿಕೆ ಹಾಗೂ ಅನುಸ್ಥಾಪನ. ಈ ಕೆಲಸವನ್ನು ಕಟ್ಟಡಗಳು, ಹಡಗುಗಳು, ಮರದ ಸೇತುವೆಗಳು, ಕಾಂಕ್ರೀಟ್ ಆಕಾರಗೆಲಸ, ಇತ್ಯಾದಿಗಳ ನಿರ್ಮಾಣದ ಅವಧಿಯಲ್ಲಿ ಮಾಡಲಾಗುತ್ತದೆ. ಮರಗೆಲಸವನ್ನು ಮಾಡುವವನನ್ನು ಬಡಗಿ ಎಂದು ಕರೆಯಲಾಗುತ್ತದೆ. ಸಾಂಪ್ರದಾಯಿಕವಾಗಿ ಬಡಗಿಗಳು ನೈಸರ್ಗಿಕ ಕಟ್ಟಿಗೆ ಬಳಸಿ ಕೆಲಸ ಮಾಡುತ್ತಿದ್ದರು ಮತ್ತು ಚೌಕಟ್ಟು ನಿರ್ಮಾಣದಂತಹ ಹೆಚ್ಚು ಒರಟಾದ ಕೆಲಸವನ್ನು ಮಾಡುತ್ತಿದ್ದರು, ಆದರೆ ಇಂದು ಅನೇಕ ಇತರ ವಸ್ತುಗಳನ್ನು ಕೂಡ ಬಳಸಲಾಗುತ್ತದೆ[೧]. ಕೆಲವೊಮ್ಮೆ ಜೋಡಣೆಗಾರಿಕೆ ಹಾಗೂ ಪೀಠೋಪಕರಣ ನಿರ್ಮಾಣದಂತಹ ಹೆಚ್ಚು ಸೂಕ್ಷ್ಮವಾದ ಉದ್ಯೋಗಗಳನ್ನು ಮರಗೆಲಸವೆಂದು ಪರಿಗಣಿಸಲಾಗುತ್ತದೆ. ಅಮೇರಿಕದಲ್ಲಿ, ಶೇಕಡ ೯೮.೫ ರಷ್ಟು ಬಡಗಿಗಳು ಪುರುಷರಾಗಿದ್ದಾರೆ, ಮತ್ತು ೧೯೯೯ರಲ್ಲಿ ಆ ದೇಶದಲ್ಲಿನ ನಾಲ್ಕನೇ ಅತಿ ಹೆಚ್ಚು ಪುರುಷ ಪ್ರಾಬಲ್ಯದ ವೃತ್ತಿಯಾಗಿತ್ತು. ೨೦೦೬ರಲ್ಲಿ ಅಮೇರಿಕದಲ್ಲಿ, ಸುಮಾರು ೧.೫ ಮಿಲಿಯನ್ ಮರಗೆಲಸ ಸ್ಥಾನಗಳಿದ್ದವು. ಒಂದು ಕೆಲಸದಲ್ಲಿ ಸಾಮಾನ್ಯವಾಗಿ ಬಡಗಿಗಳು ಮೊದಲು ಬರುವ ಮತ್ತು ಕೊನೆಯಲ್ಲಿ ಮನೆಗೆ ಹೋಗುವ ಕುಶಲಕರ್ಮಿಯಾಗಿರುತ್ತಾರೆ.[೨]