ಹೈಪೊಸಲ್ಫ್ಯೂರಸ್ ಆಮ್ಲ
ಹೈಪೊಸಲ್ಫ್ಯೂರಸ್ ಆಮ್ಲ (H2S2O4) ಗಂಧಕದ ಒಂದು ಆಕ್ಸಿಆಸಿಡ್. ಇದರ ಆಮ್ಲ ವಿಯೋಜನಾ ಸ್ಥಿರಾಂಕ 0.35, 2.45.[೧] ಈ ಆಮ್ಲವನ್ನು ಪ್ರಾಯೋಗಿಕವಾಗಿ ಗಮನಿಸಲಾಗಿಲ್ಲ.[೨]
ಪರಿಶೋಧನೆ
ಬದಲಾಯಿಸಿಸಲ್ಫ್ಯೂರಸ್ ಆಮ್ಲದಲ್ಲಿ (H2SO3) ಕಬ್ಬಿಣ ವಿಲೀನವಾದಾಗ ಯಾವ ಅನಿಲವೂ ಬಿಡುಗಡೆಯಾಗುವುದಿಲ್ಲವೆಂದು ಸಿ.ಎಲ್. ಬರ್ತೊಲೆ ಗಮನಿಸಿದ್ದ (1789). ಸತು ಮತ್ತು ತವರಗಳೂ ಅದರೊಡನೆ ಹೀಗೆಯೇ ವಿಲೀನವಾಗುವುವು ಎಂದು ಎಲ್.ಎನ್. ವಾಕ್ವೆಲಿನ್ ಮತ್ತು ಎ.ಎಫ್. ಫೂರ್‌ಕ್ರಾಯ್ ತೋರಿಸಿದರು (1798). ಹೀಗಾಗಲು ಆಯಾ ಹೈಪೊಸಲ್ಫೈಟುಗಳು ಉಂಟಾಗುವುದೇ ಕಾರಣ ಎಂದು ಶೋಧಿಸಿದವನು ಷೂಟ್ಸೆನ್‍ಬರ್ಗರ್ (1869). ಹೈಪೊಸಲ್ಫ್ಯೂರಸ್ ಆಮ್ಲವನ್ನು ಆವಿಷ್ಕರಿಸಿದ ಕೀರ್ತಿಯೂ ಅವನದೇ.
ಗುಣಗಳು
ಬದಲಾಯಿಸಿಹೈಪೊಸಲ್ಫ್ಯೂರಸ್ ಆಮ್ಲ ಬಲು ಅಸ್ಥಿರ ವಸ್ತು. ದ್ರಾವಣ ರೂಪದಲ್ಲಿ ಮಾತ್ರ ಇದು ನಮಗೆ ಪರಿಚಿತ. ದ್ರಾವಣದ ಬಣ್ಣ ಹಳದಿ. ದುರ್ವಾಸನೆ ಬೀರುತ್ತಿರುತ್ತದೆ. ವಾಯುವಿನಿಂದ ಸರಾಗವಾಗಿ ಆಕ್ಸಿಜನ್ನನ್ನು ಹೀರಿ ಪೈರೊಸಲ್ಫ್ಯೂರಸ್ ಆಮ್ಲವಾಗಿ (H2S2O5) ಪರಿವರ್ತನೆಗೊಳ್ಳುತ್ತದೆ. ಹೈಪೊಸಲ್ಫ್ಯೂರಸ್ ಆಮ್ಲ ಸಲ್ಫ್ಯೂರಿಕ್ ಆಮ್ಲದಷ್ಟೇ ಪ್ರಬಲವಾದ ಆಮ್ಲ. ದ್ವಿ ಪ್ರತ್ಯಾಮ್ಲೀಯ ಆಮ್ಲ. ತನ್ನ ಆಕ್ಸಿಜನ್ ಒಲವಿನ ದೆಸೆಯಿಂದ ಪ್ರಬಲ ಅಪಕರ್ಷಣಕಾರಿ ಎನಿಸಿಕೊಂಡಿದೆ.
ಉಪಯೋಗಗಳು
ಬದಲಾಯಿಸಿಇದರ ಲವಣಗಳಿಗೆ ಹೈಪೊಸಲ್ಫೈಟುಗಳು ಎಂದು ಹೆಸರು. ಇವುಗಳಲ್ಲಿ ಮುಖ್ಯವಾದದ್ದು ಸೋಡಿಯಂ ಹೈಪೊಸಲ್ಫೈಟ್ (Na2S2O3). ಇದು ಉಪಯುಕ್ತ ಲವಣ. ಉದಾಹರಣೆಗೆ ಇದರ ದ್ರಾವಣ ಆಕ್ಸಿಜನನ್ನು ಅವಶೋಷಿಸಬಲ್ಲದು (absorb). ಒಂದು ಅನಿಲ ಮಿಶ್ರಣದಲ್ಲಿರುವ ಆಕ್ಸಿಜನ್ನಿನ ಪ್ರಮಾಣವನ್ನು ನಿರ್ಧರಿಸಲು ಈ ಕ್ರಿಯೆ ಸಹಾಯಕ. ಸಕ್ಕರೆ ಮತ್ತು ಇಂಡಿಗೋಗಳನ್ನು ಇದರಿಂದ ಚಲುವೆ ಮಾಡಬಹುದು. ಇದರ ಸಂಪರ್ಕದಲ್ಲಿ ಪರ್ಮ್ಯಾಂಗನೇಟುಗಳು ಬಣ್ಣ ಕಳೆದುಕೊಳ್ಳುತ್ತವೆ. ಬೆಳ್ಳಿಯ ನೈಟ್ರೇಟ್, ಚಿನ್ನದ ಕ್ಲೋರೈಡ್ ಮತ್ತು ಪ್ಲ್ಯಾಟಿನಂ ಕ್ಲೋರೈಡುಗಳ ದ್ರಾವಣಗಳಿಂದ ಆಯಾ ಲೋಹಗಳು ಒತ್ತರಿಸಿವುವು. ಕ್ಯುಪ್ರಿಕ್ ಲವಣವಾದರೆ ಬಿಡುಗಡೆಯಾದ ತಾಮ್ರ ಕಲಿಲ ಸ್ಥಿತಿಯಲ್ಲಿರುತ್ತದೆ. ತೇವಾಂಶದ ಸಂಪರ್ಕದಲ್ಲಿ ಇದು ಹೈಡ್ರೊಜನ್ ಸಲ್ಫೈಡನ್ನು ಗಂಧಕಕ್ಕೆ ಪರಿವರ್ತಿಸುವುದರಿಂದ ಸೋಡಿಯಂ ಹೈಪೊಸಲ್ಫೈಟಿಗೆ ಉತ್ಕರ್ಷಣ ಗುಣ ಕೂಡ ಇರುವಂತೆ ತೋರುತ್ತದೆ. ಇಂಡಿಗೋ ನೀಲಿ ಇದರ ಸಂಪರ್ಕದಲ್ಲಿ ಬೆಳ್ಳಗಾಗುವುದು. ಇಂಡಿಗೋ ಬಿಳುಪು ದ್ರಾವ್ಯ ವಸ್ತು. ಇದರ ದ್ರಾವಣದಲ್ಲಿ ಬಟ್ಟೆಯನ್ನು ಆ ಗಾಳಿಗೆ ಒಡ್ಡಿದರೆ ನೀಲಿ ಬಣ್ಣ ಮರುಕಳಿಸುತ್ತದೆ.
ಉಲ್ಲೇಖಗಳು
ಬದಲಾಯಿಸಿ- ↑ Catherine E. Housecroft; Alan G. Sharpe (2008). "Chapter 16: The group 16 elements". Inorganic Chemistry, 3rd Edition. Pearson. p. 520. ISBN 978-0-13-175553-6.
- ↑ Drozdova, Yana; Steudel, Ralf; Hertwig, Roland H.; Koch, Wolfram; Steiger, Thomas (1998). "Structures and Energies of Various Isomers of Dithionous Acid, H2S2O4, and of Its Anion HS2O4- 1". The Journal of Physical Chemistry A. 102 (6): 990–996. Bibcode:1998JPCA..102..990D. doi:10.1021/jp972658d.