ಸಿ.ಎಮ್.ಪೂಣಚ್ಚ

ಭಾರತದ ರಾಜಾಕಾರಣಿ

ಚೆಪುಡಿರ ಮುತ್ತಣ್ಣ ಪೂಣಚ್ಚ, ಸಿ.ಎಮ್.ಪೂಣಚ್ಚ ಎಂಬ ಹೆಸರಿನಿಂದ ಪರಿಚಿತರಾಗಿರುವ ಕೊಡಗು ಪ್ರಾಂತ್ಯದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ರಾಜಕೀಯ ಮುಖಂಡರು. ಇವರು ಕೊಡಗು ರಾಜ್ಯದ ಮೊದಲ ಹಾಗೂ ಕೊನೆಯ ಮುಖ್ಯಮಂತ್ರಿಯಾಗಿದ್ದರು. ಲೋಕಸಭೆ, ರಾಜ್ಯಸಭೆಯ ಸದಸ್ಯರಾದ್ದರಷ್ಟೇ ಅಲ್ಲದೇ, ಕೇಂದ್ರ ಮಂತ್ರಿಗಳಾಗಿ ಕಾರ್ಯನಿರ್ವಹಿಸಿದ್ದಾರೆ. ಒರಿಸ್ಸಾ ಮತ್ತು ಮಧ್ಯ ಪ್ರದೇಶ ರಾಜ್ಯಗಳ ರಾಜ್ಯಪಾಲರಾಗಿಯೂ ನಿಯುಕ್ತರಾಗಿದ್ದರು.

ಸಿ.ಎಮ್‌.ಪೂಣಚ್ಚ
ವೈಯಕ್ತಿಕ ಮಾಹಿತಿ
ಜನನ ಚೆಪುಡಿರ ಮುತ್ತಣ್ಣ ಪೂಣಚ್ಚ
(೧೯೧೦-೦೯-೨೬)೨೬ ಸೆಪ್ಟೆಂಬರ್ ೧೯೧೦
ಅಟ್ಟೂರು, ವಿರಾಜ ಪೇಟೆ
ಮರಣ 7 August 1990(1990-08-07) (aged 79)
ರಾಷ್ಟ್ರೀಯತೆ ಭಾರತೀಯ
ವೃತ್ತಿ ಸ್ವಾತಂತ್ರ್ಯ ಹೋರಾಟಗಾರ, ರಾಜಕಾರಣಿ

ಪ್ರಾರಂಭಿಕ ದಿನಗಳು

ಬದಲಾಯಿಸಿ

೧೯೧೦ರಲ್ಲಿ ಗೋಣಿಕೊಪ್ಪದ ಬಳಿ ಅಟ್ಟೂರಿನಲ್ಲಿ ಜನಿಸಿದ ಸಿ.ಎಮ್.ಪೂಣಚ್ಚ ಅವರು ಕೊಡಗಿನ ದಿವಾನರ ವಂಶಕ್ಕೆ ಸೇರಿದವರಾಗಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಮಡಿಕೇರಿ ಹಾಗೂ ಕುಶಾಲ ನಗರದಲ್ಲಿ ಮುಗಿಸಿ ನಂತರ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿಗೆ ಸೇರಿದರು ಸ್ವಾತಂತ್ಯ ಚಳುವಳಿಯಲ್ಲಿ ಭಾಗವಹಿಸುವ ಸಲುವಾಗಿ ಕಾಲೇಜು ವಿದ್ಯಾಭ್ಯಾಸವನ್ನು ಅರ್ಧದಲ್ಲಿಯೇ ತ್ಯಜಿಸಿದರು.[] ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡು ೧೯೩೨ ಮತ್ತು ೧೯೩೩ರಲ್ಲಿ, ಒಟ್ಟು ಎರಡು ಬಾರಿ ಬಂಧಿತರಾಗಿ ಕಾರಾಗೃಹ ವಾಸವನ್ನು ಅನುಭವಿಸಿದರು. ೧೯೪೦-೪೧ಹಾಗೂ ೧೯೪೨-೪ರಲ್ಲಿ ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡ ಕಾರಣ ಮತ್ತೆ ಬಂಧನಕ್ಕೀಡಾಗಿ ಕಾರಾವಾಸದಲ್ಲಿದ್ದರು.

ರಾಜಕೀಯ ಜೀವನ

ಬದಲಾಯಿಸಿ

ಸಿ.ಎಮ್.ಪೂಣಚ್ಚ,೧೯೩೮ರಲ್ಲಿ ಭಾರತೀಯ ಕಾಂಗ್ರೆಸ್‍ನ ರಾಷ್ಟ್ರೀಯ ಸಮಿತಿಯ ಸದಸ್ಯರಾಗಿದ್ದರಲ್ಲದೆ, ಅದೇ ವರ್ಷ ಕೊಡಗು ಜಿಲ್ಲಾ ಪರಿಷತ್‍ನ ಸದಸ್ಯರಾಗಿ ಚುನಾಯಿತರಾದರು. ಮುಂದೆ ೧೯೪೧ರಲ್ಲಿ ಜಿಲ್ಲಾ ಪರಿಷತ್‍ನ ಅಧ್ಯಕ್ಷರಾಗಿ ನಿಯುಕ್ತರಾದರು. ೧೯೪೫ರಲ್ಲಿ ಅಸ್ಥಿತ್ವದಲ್ಲಿದ್ದ ಕೊಡಗು ವಿಧಾನ ಪರಿಷತ್‍ನ ಸದಸ್ಯರಾಗಿದ್ದ ಇವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ೧೯೫೧ರವರೆಗೆ ಕಾರ್ಯನಿರ್ಹಿಸಿದ್ದರು. ಇವರು ಭಾರತದ ಸಂವಿಧಾನ ರಚನಾ ಸಭೆಯ ಸದಸ್ಯರಾಗಿದ್ದರು.

ಮುಖ್ಯಮಂತ್ರಿಯಾಗಿ

ಬದಲಾಯಿಸಿ

ದಕ್ಷಿಣ ಬಾರತದ ಪ್ರಾಂತ್ಯಗಳು ಬಾಂಬೆ ಪ್ರೆಸಿಡೆನ್ಸಿ, ಮದ್ರಾಸ್ ಪ್ರೆಸಿಡೆನ್ಸಿ, ಮೈಸೂರು ರಾಜ್ಯ, ತಿರವಾಂಕೂರು ರಾಜ್ಯ, ಕೊಚ್ಚಿ ಹಾಗೂ ಹೈದರಾಬಾದ್ ರಾಜ್ಯಗಳ ಭಾಗವಾಗಿದ್ದರೆ, ಕೊಡಗು ಪ್ರಾಂತ್ಯವು ೧೯೪೭ರಿಂದ ೧೯೫೬ರವರಗೆ ಪ್ರತ್ಯೇಕ ರಾಜ್ಯವಾಗಿ ಅಸ್ಥಿತ್ವದಲ್ಲಿತ್ತು. ಸ್ವಾತಂತ್ರ್ಯಾ ನಂತರ ರಚನೆಗೊಂಡ ಕೊಡಗು ರಾಜ್ಯದ ವಿಧಾನಸಭೆ ೨೪ ಸದಸ್ಯ ಸ್ಥಾನಗಳನ್ನು ಹೊಂದಿತ್ತು. ೧೯೫೨ ರಲ್ಲಿ ನಡೆದ ಕೊಡಗು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ೨೪ ಸ್ಥಾನಗಳಲ್ಲಿ ೧೫ ಸ್ಥಾನ ಸ್ಥಾನಗಳನ್ನು ಗಳಿಸಿದ ಭಾರತೀಯ ಕಾಂಗ್ರೆಸ್‌ ಸರ್ಕಾರ ರಚಿಸಿತು. ಸಿ.ಎಮ್.ಪೂಣಚ್ಚ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಕೊಡಗು ರಾಜ್ಯವು ೧ ನವೆಂಬರ್ ೧೯೫೬ ರ ರಾಜ್ಯ ಮರುಸಂಘಟನೆ ಕಾಯಿದೆಯ ಪರಿಣಾಮವಾಗಿ, ಭಾರತದ ರಾಜ್ಯ ಗಡಿಗಳನ್ನು ಮರುಸಂಘಟಿಸಿದಾಗ, ಕೊಡಗು ಜಿಲ್ಲೆಯಾಗಿ ಮೈಸೂರು ರಾಜ್ಯಕ್ಕೆ ಸೇರಿತು. ಅಸ್ತಿತ್ವವಿದ್ದ ಮೊದಲ ಹಾಗೂ ಕೊನೆಯ ಕೊಡುಗು ರಾಜ್ಯ ವಿಧಾನಸಭೆಯಲ್ಲಿ ಸಿ.ಎಮ್.ಪೂಣಚ್ಚರವರ ಸಂಪುಟದಲ್ಲಿ ಇಬ್ಬರು ಸಚಿವರಿದ್ದರು[].

ರಾಜ್ಯ ಹಾಗೂ ಕೇಂದ್ರ ಸಂಪುಟದಲ್ಲಿ

ಬದಲಾಯಿಸಿ

ಕೊಡಗು ಮೈಸೂರು ರಾಜ್ಯದಲ್ಲಿ ವಿಲೀನಗೊಂಡ ಸಂದರ್ಭದಲ್ಲಿ ಎಸ್. ನಿಜಲಿಂಗಪ್ಪ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿತ್ತು. ಈ ಸರ್ಕಾರದ ಸಂಪುಟದಲ್ಲಿ ಸಿ.ಎಮ್.ಪೂಣಚ್ಚ ಅವರು ಕೈಗಾರಿಕೆ ಮತ್ತು ಗೃಹ ಖಾತೆಯ ಸಚಿವರಾಗಿ ನಿಯುಕ್ತರಾದರು. ೧೯೫೯ರಿಂದ ೧೯೬೩ರ ವರಗೆ ಭಾರತ ಸರ್ಕಾರದ ರಾಜ್ಯ ವ್ಯಾಪಾರ ನಿಗಮದ ಅಧ್ಯಕ್ಷರಾಗಿದ್ದರು. ೧೯೬೦ರಲ್ಲಿ ಪೂರ್ವ ಯುರೋಪಿಯನ್ ದೇಶಗಳು ಹಾಗೂ ೧೯೬೧ರಲ್ಲಿ ಜಪಾನ್‍ಗೆ ಭೇಟಿ ನೀಡಿದ ಕೇಂದ್ರ ಸರ್ಕಾರ ನಿಯೋಜಿಸಿದ ನಿಯೋಗದ ಮುಖ್ಯಸ್ಥರಾಗಿದ್ದರು.

ಇವರು ೧ ಏಪ್ರಿಲ್ ೧೯೬೪ರಂದು ರಾಜ್ಯಭೆಗೆ ಆಯ್ಕೆಯಾದರು.ಪಂ. ಜವಹರ ಲಾಲ್ ನೆಹರು ರವರ ಸಂಪುಟದಲ್ಲಿ ಖಾತೆ ರಹಿತ ಸಚಿವರಾಗಿದ್ದರು. ಖಾತೆ ಹಂಚುವಿಕೆಯ ಮುನ್ನವೇ ನೆಹರೂರವರು ನಿಧನರಾದರು. ೧೯೬೬ರಲ್ಲಿ ಮತ್ತೆ ಕೇಂದ್ರ ಸಚಿವರಾಗಿ ಹುದ್ದೆ ಸ್ವೀಕರಿಸಿದ ಪೂಣಚ್ಚ, ವಿತ್ತ ರಾಜ್ಯ ಖಾತೆಯನ್ನು ನಿಭಾಯಿಸಿದರು. ನಂತರ ಕೆಲವು ಕಾಲ ಭೂ ಸಾರಿಗೆ, ವಾಯುಯಾನ, ಜಲಯಾನ ಹಾಗೂ ಪ್ರವಾಸೋದ್ಯಮ ಖಾತೆಯ ರಾಜ್ಯ ಸಚಿವರಾಗಿದ್ದರು. ೧೯೬೭ರಿಂದ ೧೯೬೯ರವರೆಗೆ ಕೇಂದ್ರ ರೈಲ್ವೇ ಸಚಿವರಾಗಿದ್ದರು. ೧೯೬೯ರ ಅಂತ್ಯದಲ್ಲಿ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆಯ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ೧೯೬೯ರಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಚುನಾಯಿತರಾಗಿದ್ದರು. ೧೯೭೧ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಕಾಂಗ್ರೆಸ್ (ಒ) ಅಭ್ಯರ್ಥಿಯ ಎದುರು ಸೋಲನ್ನಪ್ಪಿದರು.

ರಾಜ್ಯಪಾಲರಾಗಿ

ಬದಲಾಯಿಸಿ

ಸಕ್ರಿಯ ರಾಜಕಾರಣದಿಂದ ನಿವೃತ್ತರಾದ ಬಳಿಕ ಎರಡು ಅವಧಿಗಳ ಕಾಲ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದರು. ೧೯೭೮, ೧೭ ಅಗಸ್ಟ್ ನಿಂದ ಮಧ್ಯ ಪ್ರದೇಶದ ರಾಜ್ಯಪಾಲರಾಗಿದ್ದರು. ನಂತರ ೩೦, ಏಪ್ರಿಲ್ ೧೯೮೦ರಲ್ಲಿ ಒರಿಸ್ಸಾ ರಾಜ್ಯದ ರಾಜ್ಯಪಾಲರಾಗಿ ನಿಯುಕ್ತರಾದರು.

ಕುಟುಂಬ

ಬದಲಾಯಿಸಿ

ಪೂಣಚ್ಚರಿಗೆ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು . ಇವರಲ್ಲಿ ಸಿ.ಪಿ. ಬೆಳ್ಳಿಯಪ್ಪ ಹಾಗೂ ಕಾವೇರಿ ನಂಬೀಸನ್, ಇಬ್ಬರೂ ಲೇಖಕ, ಕಾದಂಬರಿಕಾರರಾಗಿ ಹೆಸರುವಾಸಿಯಾಗಿದ್ದಾರೆ.


೧೯೯೦, ಆಗಸ್ಟ್ ೭ರಂದು ಚೆಪುಡಿರ ಮುತ್ತಣ್ಣ ಪೂಣಚ್ಚ ಅವರು ಪಾಲಿಬೆಟ್ಟದಲ್ಲಿರುವ ತಮ್ಮ ಮನೆಯಲ್ಲಿ ನಿಧನ ಹೊಂದಿದರು.

ಇವನ್ನೂ ನೋಡಿ

ಬದಲಾಯಿಸಿ
  1. ಕೊಡಗಿನ ಇತಿಹಾಸ
  2. 1952 Coorg Legislative Assembly election
  3. ಸಿ.ಎಂ.ಪೂಣಚ್ಚರು ಲೋಕಸಭೆಯಲ್ಲಿ ಮಂಡಿಸಿದ ಮಧ್ಯಂತರ ರೈಲ್ವೇ ಆಯವ್ಯಯ ಪಟ್ಟಿ

ಉಲ್ಲೇಖ

ಬದಲಾಯಿಸಿ
  1. http://loksabhaph.nic.in/writereaddata/biodata_1_12/1897.htm
  2. https://kodavaclan.co/kodaguheritage/chepudira-muthanna-poonacha/[ಶಾಶ್ವತವಾಗಿ ಮಡಿದ ಕೊಂಡಿ]