ಉಪ್ಪಿನ ಸತ್ಯಾಗ್ರಹ

ಭಾರತದಲ್ಲಿ ಬ್ರಿಟಿಷ್ ಆಡಳಿತದ ವೇಳೆಯಲ್ಲಿ, ಉಪ್ಪಿನ ಮೇಲೆ ವಿಧಿಸಿದ ಕರವನ್ನು ವಿರೋಧಿಸಿ ಮಹಾತ್ಮ ಗಾಂಧಿಯವರು ನಡೆಸಿದ ಸತ್ಯಾಗ್ರಹ ಚಳುವಳಿಯನ್ನು ಉಪ್ಪಿನ ಸತ್ಯಾಗ್ರಹ ಅಥವಾ ದಾಂಡಿ ಯಾತ್ರೆ ಎನ್ನಲಾಗುತ್ತದೆ. ಉಪ್ಪಿನ ಮೇಲಿನ ಕರವನ್ನು ವಿರೋಧಿಸಿ, ಮಹಾತ್ಮ ಗಾಂಧಿಯವರು ತಮ್ಮಅನುಯಾಯಿಗಳೊಡನೆ, ಸಬರಮತಿ ಆಶ್ರಮದಿಂದ ದಾಂಡಿಯವರೆಗಿನ ೨೪೦ ಮೈಲಿಗಳನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿದರು.ಮಾರ್ಗ ಮದ್ಯ ಆನಂದ ಆಶ್ರಮ ಸ್ಥಾಪಿಸಿದರು ಅಲ್ಲಿ ಮೋತಿಲಾಲ್ ನೆಹರು ಉದ್ಘಾಟನೆ ಮಾಡಿದರು ಇಲ್ಲಿ ಈ ಕರದ ವಿರೋಧದ ಸಂಕೇತವಾಗಿ ನಿಬಂಧನೆಯ ವಿರುದ್ಧವಾಗಿ ಉಪ್ಪನ್ನು ತಯಾರಿಸಿದರು. ಈ ಚಳುವಳಿಯು ೧೯೩೦ನೇ ಇಸವಿಯ ಮಾರ್ಚ್ ೧೨ ರಿಂದ ಏಪ್ರಿಲ್ ೬ರವರಗೆ ನಡೆಯಿತು.

ಡಾಂಡಿ ಯಾತ್ರೆಯ ಪ್ರಾರಂಭದ ಮುನ್ನ ಸಹಚರರೊಂದಿಗೆ ಗಾಂಧೀಜಿ

ಚಳುವಳಿಯ ಹಿನ್ನೆಲೆ

ಬದಲಾಯಿಸಿ

ಡಿಸೆಂಬರ್ ೩೧, ೧೯೨೯ರ ಮಧ್ಯರಾತ್ರಿಯಲ್ಲಿ ಲಾಹೋರ್ ನಗರದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಭೆಯಲ್ಲಿ ಸ್ವತಂತ್ರ ಭಾರತದ ಧ್ವಜವನ್ನು ಹಾರಿಸಲಾಯಿತು. ನಂತರ, ಜನವರಿ ೨೬, ೧೯೩೦ರಂದು ಗಾಂಧೀಜಿ ಮತ್ತು ಜವಹರಲಾಲ್ ನೆಹರೂರವರ ನೇತೃತ್ವದಲ್ಲಿ ಕಾಂಗ್ರೆಸ್ಸು ಭಾರತದ ಸ್ವಾತಂತ್ರ್ಯದ ಘೋಷಣೆಯನ್ನು ಹೊರತಂದರು. ಇದರಂತೆ ಅಖಿಲ ಭಾರತ ಕಾಂಗ್ರೆಸ್ಸಿಗೆ ಸಮಿತಿಯ ನೇತೃತ್ವದಲ್ಲಿ ವಸಾಹತುಶಾಯಿ ಸರ್ಕಾರದ ಕಾಯ್ದೆಗಳನ್ನು ಪಾಲಿಸದೆ ಸಾಮೂಹಿಕ ಕಾನೂನು ಭಂಗ ಚಳುವಳಿಯನ್ನು ನಡೆಸುವ ನಿರ್ಧಾರವನ್ನು ಮಾಡಲಾಯಿತು. ಇದರಡಿಯಲ್ಲಿ ಭಾರತದ ಹಿಂದೂಗಳು ಹಾಗು ಮುಸಲ್ಮಾನರನ್ನು ಒಂದುಗೂಡಿಸಿ ಭಾರತವನ್ನು ಜಾತ್ಯಾತೀತವಾಗಿಸುವುದು ಒಂದು ಗುರಿಯಾಗಿತ್ತು. ಗಾಂಧೀಜಿಯವರು ಅಹಿಂಸಾತ್ಮಕ ರೀತಿಯಲ್ಲಿ ಈ ಚಳುವಳಿಯನ್ನು ನಡೆಸಲು ನಿರ್ಧರಿಸಿದರು. ಗಾಂಧೀಜಿಯವರ ಸತ್ಯಾಗ್ರಹ ತತ್ವವು ಸಹನಶೀಲ ಪ್ರತಿರೋಧಕ್ಕಿಂತ ಹೆಚ್ಚು ವಿಶಾಲ ವ್ಯಾಪ್ತಿ ಹೊಂದಿತ್ತು. ಗಾಂಧೀಜಿಯವರಿಗೆ, ತಮ್ಮ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುತ್ತಿರುವವರು ಅಹಿಂಸಾತ್ಮಕ ಚಳುವಳಿಯಿಂದಲೇ ಬಲವನ್ನು ಪಡೆಯಬೇಕೆಂಬ ಬಯಕೆಯಿತ್ತು. ಅವರದೇ ಮಾತುಗಳಲ್ಲಿ:

" ಸತ್ಯ ಪ್ರೀತಿಯ ಸಂಕೇತ ಮತ್ತು ಆಗ್ರಹ ದೃಢ ಒತ್ತಾಯದ ಸಂಕೇತ… ಅಂದರೆ, ಸತ್ಯ, ಪ್ರೀತಿ ಮತ್ತು ಅಹಿಂಸೆಯಿಂದ ಜನಿತ ಧೃಡತೆ… ನಾವು ಸತ್ಯಾಗ್ರಹಿಗಳಾಗಿದ್ದು, ಸತ್ಯಾಗ್ರಹವನ್ನು ಆಚರಿಸಿ, ನಮ್ಮ ದೃಢತೆಯಲ್ಲಿ ನಂಬಿಕೆಯುಳ್ಳವರಾಗಿದ್ದರೆ… ನಾವು ದಿನೇ ದಿನೇ ಪ್ರಬಲರಾಗುತ್ತೇವೆ. ಈ ಪ್ರಬಲತೆಯಿಂದ ನಮ್ಮ ಸತ್ಯಾಗ್ರಹವೂ ಹೆಚ್ಚು ಪರಿಣಾಮಕಾರಿಯಾಗುತ್ತದೆ, ಮತ್ತು ಅದನ್ನು ತ್ಯಜಿಸಲು ಯಾವುದೇ ಕಾರಣವಿರುವುದಿಲ್ಲ."

ಬ್ರಿಟೀಷ್ ಸರ್ಕಾರವು ಸಾಮಾನ್ಯ ಜನರು ಬಳಸುವ ಉಪ್ಪಿನ ಮೇಲೆ ಕರವನ್ನು ವಿಧಿಸಿ ಸರ್ಕಾರದ ಬೊಕ್ಕಸವನ್ನು ತುಂಬಿಸಿ ಕೊಳ್ಳುತ್ತಿತ್ತು. ಇದು ಮಹಾತ್ಮಾ ಗಾಂಧಿಯವರ ಗಮನ ಸೆಳೆಯಿತು ಹಾಗು ಅವರು ಉಪ್ಪಿನ ಕರವನ್ನು ತಮ್ಮ ಅಹಿಂಸಾತ್ಮಕ ಚಳುವಳಿಯ ಕೇಂದ್ರ ಬಿಂದುವನ್ನಾಗಿಸಿ ತಮ್ಮ ಚಳುವಳಿಯನ್ನು ನಡೆಸಲು ನಿರ್ಧರಿಸಿದರು. ಈ ಕರದಡಿಯಲ್ಲಿ ಬ್ರಿಟಿಷ್ ಸರ್ಕಾರದ ಹೊರತು ಯಾರೂ ಉಪ್ಪನ್ನು ತಯಾರಿಸುವಂತಿರಲಿಲ್ಲ ಅಥವಾ ಮಾರುವಂತಿರಲಿಲ್ಲ. ಸಮುದ್ರ ತಟದಲ್ಲಿದ್ದ ನಾಗರೀಕರಿಗೆ ಸಮುದ್ರದ ಉಪ್ಪು ಪುಕ್ಕಟೆಯಲ್ಲಿ ಸುಲಭವಾಗಿ ದೊರೆಯುವಂತಿದ್ದರೂ ಅವರು ಅದನ್ನು ಸರ್ಕಾರದಿಂದ ಕೊಂಡುಕೊಳ್ಳಬೇಕಾಗಿತ್ತು. ಇದಲ್ಲದೆ ಈ ತೆರಿಗೆಯು ಈ ಅತ್ಯವಶ್ಯಕ ಪದಾರ್ಥವನ್ನು ಜನಸಾಮಾನ್ಯರಿಗೆ ದುಬಾರಿಯನ್ನಾಗಿ ಮಾಡಿತ್ತು. ಹೀಗಾಗಿ ಈ ಕರದ ವಿರೋಧವು ಎಲ್ಲಾ ಧರ್ಮ,ವರ್ಗ ಮತ್ತು ಪ್ರಾಂತ್ಯದ ಜನರನ್ನು ಹುರಿದುಂಬಿಸುವಂತಹದಾಗಿತ್ತು.ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯು ಉಪ್ಪಿನ ಮೇಲಿನ ಕರದಿಂದ ಪ್ರಭಾವಿತನಾಗಿದ್ದರಿಂದ ಇದರ ವಿರುದ್ದ ಪ್ರತಿಭಟಿಸುವುದು ಒಂದು ಅತ್ಯಂತ ಯಶಸ್ವಿ ಚಳುವಳಿಯಾಯಿತು.ಇದೇ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಸೌಮ್ಯವಾದಿಗಳು ಹಾಗು ಸಾಮಾನ್ಯ ಜನತೆ,ಇಬ್ಬರನ್ನು ಈ ಚಳುವಳಿಯಲ್ಲಿ ಭಾಗವಹಿಸಲು ಪ್ರೇರೇಪಿಸುವುದರಲ್ಲಿ ಗಾಂಧೀಜಿ ಯಶಸ್ವಿಯಾದರು. ಫೆಬ್ರವರಿ ೫ರಂದು ಪತ್ರಿಕೆಗಳು ಗಾಂಧೀಜಿಯವರು ಸಾಮೂಹಿಕ ಕಾನೂನು ಭಂಗ ಚಳುವಳಿಯನ್ನು ಉಪ್ಪಿನ ಕರವನ್ನು ಉಲ್ಲಂಘಿಸುವುದರಿಂದ ಪ್ರಾರಂಭಿಸಿದ್ದಾಗಿ ಘೋಷಿಸಿದವು.

ಯಾತ್ರೆ ಮತ್ತು ಚಳುವಳಿ

ಬದಲಾಯಿಸಿ
 
ಯಾತ್ರೆಯ ನಡಿಗೆಯಲ್ಲಿ ಗಾಂಧೀಜಿಯವರು

ಮಾರ್ಚ್ ೨, ೧೯೩೦ರಂದು ಉಪ್ಪಿನ ಕಾನೂನನ್ನು ಬದಲಾಯಿಸುವಂತೆ ಕೋರಿ ಅಂದಿನ ವೈಸ್‍ರಾಯ್, ಲಾರ್ಡ್ ಇರ್ವಿನ್ ರವರಿಗೆ ಒಂದು ಪತ್ರ ಬರೆದರು. ಪತ್ರದ ಕೊನೆಯಲ್ಲಿ: "ಈ ನನ್ನ ಪತ್ರವು ತಮ್ಮ ಮನಸ್ಸನ್ನು ಬದಲಾಯಿಸದಿದ್ದಲ್ಲಿ, ಈ ಮಾಹೆಯ ೧೧ನೇ ತಾರೀಖಿನಂದು ನಾನು ನನ್ನ ಆಶ್ರಮದ ಸಹಚರರೊಂದಿಗೆ ಈ ಕಾನೂನಿನ ಉಪಬಂಧಗಳನ್ನು ನಿರ್ಲಕ್ಷ್ಯ ಮಾಡಲು ಮುಂದಾಗುತ್ತೇನೆ. ಈ ತೆರಿಗೆಯು ಬಡ ಜನರಿಗೆ ಅತ್ಯಂತ ಅನ್ಯಾಯಕಾರಿಯಾದುದು. ನಮ್ಮ ಸ್ವಾತಂತ್ರ್ಯದ ಹೋರಾಟ ಈ ರೀತಿಯ ಬಡ ಬಲ್ಲಿದರಿಗಾಗಿಯೇ ಇರುವುದರಿಂದ, ಈ ತೆರಿಗೆಯ ವಿರೋಧದಿಂದಲೆ ಇದನ್ನು ಪ್ರಾರಂಬಿಸುತ್ತೇವೆ." ವೈಸ್‍ರಾಯ್‍ರವರು ಇದಕ್ಕೆ ಉತ್ತರ ನೀಡಲಿಲ್ಲ. ಇದರಂತೆ ಮಾರ್ಚ್ ೧೨, ೧೯೩೦ರಂದು ಗಾಂಧೀಜಿಯವರು ೭೮ ಮಂದಿ ಸಹ ಸತ್ಯಾಗ್ರಹಿಗಳೊಂದಿಗೆ ಸಬರಮತಿಯಿಂದ ಸುಮಾರು ೩೭೫ ಮೈಲಿ ದೊರದ ಕಡಲ ತೀರದಲ್ಲಿನ ದಾಂಡಿ ಗ್ರಾಮಕ್ಕೆ ನಡೆಯಲು ಪ್ರಾರಂಭಿಸಿದರು. ಈ ನಡಿಗೆಯ ೨೩ ದಿನಗಳಲ್ಲಿ ಸಹಸ್ರಾರು ಸತ್ಯಾಗ್ರಹಿಗಳು ದಾರಿಯುದ್ದಕ್ಕೂ ಸೇರಿದರು. ನಾಲ್ಕು ಜಿಲ್ಲೆಗಳು ಮತ್ತು ೪೮ ಹಳ್ಳಿಗಳ ಮೂಲಕ ಹಾಯ್ದ ಈ ನಡಿಗೆ ಏಪ್ರಿಲ್ ೫ರಂದು ದಾಂಡಿ ತಲುಪಿತು.

 
ಸರೋಜಿನಿ ನಾಯ್ಡುರವರೊಂದಿಗೆ ಯಾತ್ರೆಯಲ್ಲಿ ಗಾಂಧೀಜಿಯವರು

ಸಮುದ್ರ ತಟ ತಲುಪಿದಾಗ ಪತ್ರಕರ್ತರೊಡನೆ ಸಂವಾದನೆಯಲ್ಲಿ:

"ನನ್ನ ವಿಚಾರದಲ್ಲಿ ಇದು ಸ್ವಾತಂತ್ರ್ಯ ಹೋರಾಟದ ಕೊನೆಯ ಅಧ್ಯಾಯ. ದೇವರ ದಯೆಯಿಂದ ಈ ಅಧ್ಯಾಯದ ಮೊದಲ ಭಾಗ ಸುಸೂತ್ರವಾಗಿ ಕೊನೆಗೊಂಡಿದೆ. ಈ ಯಾತ್ರೆಯಲ್ಲಿ ಇಲ್ಲಿಯವರೆಗೆ ಹಸ್ತಕ್ಷೇಪ ಮಾಡದಿರುವ ಸರ್ಕಾರಕ್ಕೆ ಧನ್ಯವಾದಗಳು. ಈ ನಡುವಳಿಕೆ ಸರ್ಕಾರದ ಹೃದಯದ ಬದಲಾವಣೆಯಿಂದ ಎಂದು ನಾನು ನಂಬಲು ಬಯಸಿದೆ. ಆದರೆ ವಿಧಾನ ಸಭೆಯಲ್ಲಿನ ಸಾರ್ವಜಿನಿಕ ಅಭಿಪ್ರಾಯವನ್ನು ಅವರು ತಿರಸ್ಕರಿಸಿರುವ ರೀತಿಯನ್ನು ನೋಡಿದರೆ, ಈ ಸರ್ಕಾರದಲ್ಲಿ ಯಾವುದೇ ಬದಲಾವಣೆಯಿಲ್ಲವೆಂದು ಸ್ಪಷ್ಟವಾಗುತ್ತದೆ. ಕೇವಲ ಭಾರತದ ಹೃದಯಹೀನ ಶೋಷಣೆಯೇ ಗುರಿಯಾಗಿರುವ ಈ ಸರ್ಕಾರ, ಅಹಿಂಸಾಯುತ ಆಂದೋಲನವನ್ನು ಬಗ್ಗುಬಡೆದರೆ ಉಂಟಾಗುವ ಪ್ರಪಂಚದ ಅಭಿಪ್ರಾಯಕ್ಕೆ ಹೆದರಿ ಈ ಯಾತ್ರೆಯಲ್ಲಿ ಹಸ್ತಕ್ಷೇಪ ಮಾಡಿಲ್ಲವೆಂದೆನಿಸುತ್ತದೆ.....ಆದರೆ ನಾಳೆ ಸಾಮೂಹಿಕವಾಗಿ ಉಪ್ಪಿನ ಕಾನೂನು ಉಲ್ಲಂಘಿತವಾದರೆ ಈ ಸರ್ಕಾರ ಏನು ಮಾಡುತ್ತದೆಂದು ನೋಡೋಣ. ರಾಷ್ಟ್ರೀಯ ಕಾಂಗ್ರೆಸ್ಸಿನ ಗೊತ್ತುವಳಿಗೆ ಅಪಾರ ಜನಪ್ರಿಯ ಪ್ರತಿಕ್ರಿಯೆ ದೊರಕುತ್ತದೆಂದು ನನ್ನ ನಿರೀಕ್ಷೆ."

ಮುಂದಿನ ಮುಂಜಾನೆಯ ಪ್ರಾರ್ಥನೆಯ ನಂತರ, ಅಲ್ಲಿ ಗಾಂಧೀಜಿಯವರು ಒಂದು ಹಿಡಿಯಷ್ಟು ಮಣ್ಣು ಮತ್ತು ಉಪ್ಪನ್ನು ತೆಗೆದುಕೊಂಡು (ಕೆಲವೆಡೆ ಇದನ್ನು "ಒಂದು ಚಿಟಿಕೆಯಷ್ಟು" ಎಂದು, ಇನ್ನು ಕೆಲವೆಡೆ "ಒಂದು ಕಾಳಿನಷ್ಟು" ಎನ್ನಲಾಗಿದೆ) "ಈ ಮೂಲಕ, ಬ್ರಿಟೀಷ್ ಸಾಮ್ರಾಜ್ಯದ ಅಡಿಪಾಯವನ್ನು ನಾನು ಅಲುಗಾಡಿಸುತ್ತಿದ್ದೇನೆ" ಎಂದು ಘೋಷಿಸಿದರು. ನಂತರ ಅವರು ಅದನ್ನು ಸಮುದ್ರದ ನೀರಿನಲ್ಲೆ ಕುದಿಸಿ, ಯಾವ ಭಾರತೀಯನೂ ಅಧಿಕೃತವಾಗಿ ತಯಾರಿಸಲಾಗದಂತಹ ಪದಾರ್ಥವನ್ನು ತಯಾರಿಸಿದರು, ಅದುವೇ — ಉಪ್ಪು. ನಂತರ ನೆರೆದಿದ್ದ ಸಹಸ್ರಾರು ಅನುಯಾಯಿಗಳಿಗೆ "ತಮಗೆ ಎಲ್ಲಿ ಸಾಧ್ಯವೊ ಹಾಗು ಎಲ್ಲಿ ಅನುಕೂಲವೊ," ಅಲ್ಲಿ ಉಪ್ಪನ್ನು ತಯಾರಿಸಲು ಉಪದೇಶಿಸಿದರು.

ಚಳುವಳಿಯ ಪರಿಣಾಮಗಳು

ಬದಲಾಯಿಸಿ
 
ಉಪ್ಪಿನ ಸತ್ಯಾಗ್ರಹದ ವೇಳೆ ಜನಸಮೂಹವನ್ನು ಉದ್ದೇಶಿಸಿ ಮಹಾತ್ಮಾ ಗಾಂಧಿಯವರ ಭಾಷಣ

ಚಳುವಳಿಯ ಪರಿಣಾಮ ದೇಶದಾದ್ಯಂತ ವ್ಯಾಪಿಸಿತು. ಗಾಂಧೀಜಿಯವರಿಂದ ಪ್ರೇರಿತರಾಗಿ ಸಾವಿರಾರು ಜನರು ಸ್ವತ: ಉಪ್ಪನ್ನು ತಯಾರಿಸಿದರು ಹಾಗು ಕಾನೂನು ಬಾಹಿರವಾಗಿ ಉಪ್ಪನ್ನು ಕೊಂಡರು. ಇದರೊಂದಿಗೆ ಇತರ ಬ್ರಿಟಿಷ್ ಸರಕುಗಳನ್ನೂ ಭಾರತೀಯರು ಕೊಳ್ಳುವುದನ್ನು ನಿಲ್ಲಿಸಿದರು. ಕಾನೂನು ಬಾಹಿರವಾಗಿ ಉಪ್ಪನ್ನು ಮಾರಿದ ಹಾಗು ಕೊಂಡ ಸಹಸ್ರಾರು ಜನರನ್ನು ಬ್ರಿಟಿಷ್ ಸರ್ಕಾರವು ಬಂಧಿಸಿತು. ಭಾರತದ ಇತರೆಡೆಯೆಲ್ಲ ಈ ಸತ್ಯಾಗ್ರಹ ಹರಡಿತು. ಪೇಶಾವರದಲ್ಲಿ ಗಾಂಧೀಜಿಯವರ ಅನುಯಾಯಿಯಾದ ಗಫರ್ ಖಾನ್ರವರ ನೇತೃತ್ವದಲ್ಲಿ "ಕುದಾಯ್ ಕಿತ್ಮತ್ಗಾರ್" ಎಂಬ ಸತ್ಯಾಗ್ರಹಿಗಳ ಗಂಪು ಈ ಆಂದೋಲನವನ್ನು ನಡೆಸುತ್ತಿತ್ತು. ಏಪ್ರಿಲ್ ೨೩ರಂದು ಗಫರ್ ಖಾನರ ಬಂಧನವಾದಾಗ ಇದನ್ನು ವಿರೋಧಿಸಿ ನಡೆಸಿದ ಅಹಿಂಸಾತ್ಮಕ ಪ್ರತಿಭಟನೆಯ ಮೇಲೆ ಬ್ರಿಟಿಷ್ ಸೇನೆ ಗುಂಡು ಹಾರಿಸಿತು. ಈ ಘಟನೆಯಲ್ಲಿ ಹಲವು ಸತ್ಯಾಗ್ರಹಿಗಳು ಮೃತರಾದರು. ಕಡೆಗೆ ಮಹಾತ್ಮ ಗಾಂಧಿಯವರನ್ನೂ ಬಂಧಿಸುವಂತೆ ಅಂದಿನ ಭಾರತದ ವೈಸರಾಯ್‌ರು ಆದೇಶಿಸಿದರು. ಮೇ ೪ರಂದು ದಾಂಡಿಯ ಬಳಿಯ ಒಂದು ಊರಿನಲ್ಲಿ ಮಧ್ಯರಾತ್ರಿಯಲ್ಲಿ ೩೦ ಪೇದೆಗಳ ಪ್ರಬಲ ಪಡೆಯೊಂದಿಗೆ ಬಂದ ಜಿಲ್ಲಾ ನ್ಯಾಯಾಧೀಶರು ನಿದ್ರಾಮಗ್ನರಾಗಿದ್ದ ಗಾಂಧೀಜಿಯವರನ್ನು ಬಂಧಿಸಿದರು. ಭಾರತದಾದ್ಯಂತ ಉಪ್ಪಿನ ಸತ್ಯಾಗ್ರಹವು ಸಹಸ್ರಾರು ಜನರನ್ನು ತನ್ನೆಡೆಗೆ ಸೆಳೆಯಿತು ಹಾಗು ತನ್ಮೂಲಕ ವಿಶ್ವದ ಗಮನವನ್ನು ಭಾರತದಲ್ಲಿ ನಡೆಯುತ್ತಿದ್ದ ಸತ್ಯಾಗ್ರಹ ಚಳುವಳಿಯತ್ತ ಸೆಳೆಯುವುದರಲ್ಲಿ ಯಶಸ್ವಿಯಾಯಿತು. ಇದಾದ ನಂತರ ಮಹಾತ್ಮಾ ಗಾಂಧಿಯವರನ್ನು ಬಿಡುಗಡೆ ಮಾಡಲಾಯಿತು ಹಾಗು ಅವರು ಭಾರತದ ಸ್ವಾತ್ರಂತ್ರ್ಯ ಸಂಗ್ರಾಮದ ಮುಂದಾಳತ್ವವನ್ನು ಮುಂದುವರೆಸಿದರು. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದಾಂಡಿ ಸತ್ಯಾಗ್ರಹವು ಒಂದು ಮಹತ್ವಪೂರ್ಣ ಘಟನೆಯಾಗಿತ್ತು.

೨೦೦೫ರ ಯಾತ್ರೆಯ ಪುನರಾವೃತ್ತಿ

ಬದಲಾಯಿಸಿ

ಉಪ್ಪಿನ ಸತ್ಯಾಗ್ರಹದ ೭೫ನೇ ಜಯಂತಿಯ ಅಂಗವಾಗಿ, ೨೦೦೫ರಲ್ಲಿ ಮಹಾತ್ಮ ಗಾಂಧಿ ಪ್ರತಿಷ್ಠಾನ ದಂಡಿ ಯಾತ್ರೆಯ ಪುನರಾವೃತ್ತಿಯನ್ನು ಆಯೋಜಿಸಿತು. ಇದನ್ನು "ಶಾಂತಿ, ನ್ಯಾಯ ಮತ್ತು ಸ್ವಾತಂತ್ರ್ಯಕ್ಕಾಗಿ ಅಂತರರಾಷ್ಟ್ರೀಯ ನಡೆ" ಎಂದು ಕರೆಯಲಾಯಿತು. ಗಾಂಧೀಜಿಯವರ ಮೊಮ್ಮಗ ತುಷಾರ್ ಗಾಂಧಿ ಮತ್ತು ಹಲವು ಸಂಗಡಿಗರು ಗಾಂಧೀಜಿಯವರು ಹೋದ ಮಾರ್ಗದಲ್ಲೆ ಪುನಃ ಅನುಸರಿಸಿದರು. ಯಾತ್ರೆಯು ಮಾರ್ಚ್ ೧೨, ೨೦೦೫ರಂದು ಪ್ರಾರಂಭವಾಯಿತು. ಅಂದಿನ ರಾಷ್ಟ್ರೀಯ ಸಲಹಾ ಸಮಿತಿಯ ಅಧ್ಯಕ್ಷೆ ಸೋನಿಯ ಗಾಂಧಿ ಮತ್ತು ಹಲವು ಕೇಂದ್ರ ಸರ್ಕಾರದ ಸಂಪುಟ ಸದಸ್ಯರು ಮೊದಲ ಕೆಲವು ಕಿಲೋಮಿಟರ್‍ಗಳಷ್ಟು ನಡೆದರು. ಈ ಗುಂಪು ಏಪ್ರಿಲ್ ೫ರಂದು ದಾಂಡಿ ತಲುಪಿತು. ಈ ಜಯಂತಿಯ ಅಂಗವಾಗಿ ಏಪ್ರಿಲ್ ೭ರವರೆಗೆ ಉತ್ಸವಗಳು ನಡೆದವು.

ಇವನ್ನೂ ನೋಡಿ

ಬದಲಾಯಿಸಿ

ಹೊರಗಿನ ಸಂಪರ್ಕಗಳು

ಬದಲಾಯಿಸಿ


              ಭಾರತದ ಸ್ವಾತಂತ್ರ್ಯ                   
ಚರಿತ್ರೆ: ವಸಾಹತುಶಾಹಿ - ಈಸ್ಟ್ ಇಂಡಿಯಾ ಕಂಪನಿ - ಪ್ಲಾಸೀ ಕದನ - ಬಕ್ಸರ್ ಕದನ
ತತ್ವಗಳು: ರಾಷ್ಟ್ರೀಯತೆ - ಸ್ವರಾಜ್ - ಗಾಂಧಿವಾದ - ಸತ್ಯಾಗ್ರಹ - ಹಿಂದೂ ರಾಷ್ಟ್ರೀಯತೆ - ಸ್ವದೇಶಿ - ಸಮಾಜವಾದ
ಘಟನೆ-ಚಳುವಳಿಗಳು: ೧೮೫೭ರ ದಂಗೆ - ಬಂಗಾಳದ ವಿಭಜನೆ - ಕ್ರಾಂತಿಕಾರಿಗಳು - ಚಂಪಾರಣ ಮತ್ತು ಖೇಡಾ - ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡ - ಅಸಹಕಾರ - ಸೈಮನ್ ಆಯೋಗ - ನೆಹರು ವರದಿ - ಉಪ್ಪಿನ ಸತ್ಯಾಗ್ರಹ - ೧೯೩೫ರ ಭಾರತ ಸರ್ಕಾರ ಕಾಯ್ದೆ - ಕ್ರಿಪ್ ಆಯೋಗ - ಭಾರತ ಬಿಟ್ಟು ತೊಲಗಿ - ಮುಂಬೈ ದಂಗೆ
ಸಂಘಟನೆಗಳು: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ - ಗದರ್ - ಹೋಂ ರೂಲ್ ಚಳುವಳಿ - ಭಾರತೀಯ ರಾಷ್ಟ್ರೀಯ ಸೇನೆ - ಆಜಾದ್ ಹಿಂದ್ - ಅನುಶೀಲನ ಸಮಿತಿ
ನಾಯಕರು: ಮಂಗಲ ಪಾಂಡೆ - ಝಾನ್ಸಿ ರಾಣಿ ಲಕ್ಷ್ಮೀಬಾಯಿ - ಬಾಲ ಗಂಗಾಧರ ತಿಲಕ್ - ಗೋಪಾಲ ಕೃಷ್ಣ ಗೋಖಲೆ - ಮಹಾತ್ಮಾ ಗಾಂಧಿ - ಸರ್ದಾರ್ ಪಟೇಲ್ - ಸುಭಾಷ್ ಚಂದ್ರ ಬೋಸ್ - ಜವಾಹರಲಾಲ್ ನೆಹರು - ಮೌಲಾನಾ ಆಜಾದ್ - ಚಂದ್ರಶೇಖರ್ ಆಜಾದ್ - ರಾಜಾಜಿ - ಭಗತ್ ಸಿಂಗ್
ಬ್ರಿಟಿಷ್ ಆಡಳಿತ: ರಾಬರ್ಟ್ ಕ್ಲೈವ್ - ಲೂಯಿ ಮೌಂಟ್‌ಬ್ಯಾಟನ್
ಸ್ವಾತಂತ್ರ್ಯ: ಕ್ಯಾಬಿನೆಟ್ ಆಯೋಗ - ಭಾರತದ ಸ್ವಾತಂತ್ರ್ಯ ಕಾಯ್ದೆ - ಭಾರತದ ವಿಭಜನೆ - ಭಾರತದ ರಾಜಕೀಯ ಒಗ್ಗೂಡುವಿಕೆ - ಭಾರತದ ಸಂವಿಧಾನ