Mahavira, The Torch-bearer of Ahimsa
Gandhi promoted the principle of Ahimsa very successfully by applying it to all spheres of life, particularly to politics.

ಅಹಿಂಸೆ ಅರ್ಥ

ಬದಲಾಯಿಸಿ

ಅಹಿಂಸೆ ಎಂದರೆ ಹಿಂಸೆ ಮಾಡದಿರುವುದು ಎಂದರ್ಥ. ಅದು ಯಾವುದೇ ರೀತಿಯ ಹಿಂಸೆಯ ಪ್ರಯೋಗವಿಲ್ಲದೆ ಜೀವನ ಸಾಗಿಸುವ ಅಥವಾ ಗುರಿಯನ್ನು ಸಾಧಿಸುವ ಒಂದು ತತ್ವ. ಆ ಗುರಿಯು ವೈಯುಕ್ತಿಕವಾಗಿರಬಹುದು, ಸಾಮಾಜಿಕ ಬದಲಾವಣೆ ಇರಬಹುದು ಅಥವಾ ಒಂದು ಧೋರಣೆಯ ವಿರುದ್ಧ ಪ್ರತಿರೋಧ ವ್ಯಕ್ತಪಡಿಸುವಿಕೆಯೂ ಇರಬಹುದು. ಗಾಂಧೀಜಿಯವರೇನು ಅಹಿಂಸಾತತ್ತ್ವದ ಜನಕರಲ್ಲ. ಏಕೆಂದರೆ ಭಾರತೀಯ ದರ್ಶನದಲ್ಲಿ ಅದರಲ್ಲಿಯೂ ಜೈನ ಮತ್ತು ಬೌದ್ಧದರ್ಶನದಲ್ಲಿ, ಅಹಿಂಸಾತತ್ತ್ವ ಮತ್ತು ಅದರ ಆಚರಣೆ ಅತ್ಯಂತ ಸಮರ್ಥರೀತಿಯಲ್ಲಿ ನಿರೂಪಿತವಾಗಿದೆ. ಆದರೂ ಗ್ರಂಥಸ್ಥವಾದ ಈ ತತ್ತ್ವ ಗಾಂಧಿಜಿಯವರ ಬದುಕಿನಲ್ಲಿ ಜೀವಂತಗೊಂಡು ನಮ್ಮ ಸಮಕಾಲೀನ ಯುಗದಲ್ಲಿ ಒಂದು ಪವಾಡವನ್ನೇ ಎಸಗಿದೆ. ಸ್ಥೂಲವಾಗಿ ನೋಡಿದಾಗ ಅಹಿಂಸೆ ಎಂದರೆ ಕೊಲ್ಲದಿರುವುದು ಅಥವಾ ಹಿಂಸಿಸದಿರುವುದು ಎಂದಾದರೂ ಇದರ ಸೂಕ್ಷ್ಮ ಹಾಗೂ ವಿಸ್ತುೃತವಾದ ಅರ್ಥವನ್ನು ಗ್ರಹಿಸಲು ಗಾಂಧೀಜಿಯವರ ಬದುಕು ಮತ್ತು ಬೋಧನೆಗಳೆರಡನ್ನೂ ಅವಲೋಕಿಸಬೇಕಾಗುತ್ತದೆ. ಸತ್ಯನಿಷ್ಠನಾದ ಹಾಗೂ ಅಹಿಂಸೆಯ ಪ್ರಯೋಗದಲ್ಲಿ ತೊಡಗಿದ ಗಾಂಧೀಜಿ ಯವರು ಇದು ಕೇವಲ ಒಂದು ಧಾರ್ಮಿಕ ನಿಯಮ ಮಾತ್ರವಲ್ಲ; ಇದು ಆರ್ಥಿಕ, ಸಾಮಾಜಿಕ, ರಾಜಕೀಯವೇ ಮುಂತಾದ ಎಲ್ಲ ರಂಗಗಳಲ್ಲಿಯೂ ಪ್ರತಿಧ್ವನಿತವಾಗುವಂಥ ವಿಶ್ವವ್ಯಾಪಿತತ್ತ್ವ. ಚರಾಚರಾತ್ಮಕವಾದ ಜಗತ್ತೆಲ್ಲವೂ ಈ ತತ್ತ್ವಕ್ಕೆ ತಲೆಬಾಗಿ ನಡೆಯುತ್ತದೆ- ಎಂಬುದನ್ನು ಕಂಡುಕೊಂಡರು. ಅಹಿಂಸೆಯ ವಿಶ್ವರೂಪದರ್ಶನ ಇವರಿಗಾದಂತೆಲ್ಲ. ಈ ಮಹತ್ತತ್ತ್ವದ ಪೂರ್ಣ ವ್ಯಾಖ್ಯಾನ ಮಾನವನಿಂದ ಸಾಧ್ಯವಾಗದು, ತಮ್ಮಿಂದಂತೂ ಸಾಧ್ಯವಾಗಿಲ್ಲ ಎಂಬುದನ್ನು ಬಹುದುಃಖದಿಂದ ಹೇಳಿಕೊಂಡರು. ಆದರೂ ಅಹಿಂಸೆಯ ಸಾಧನೆ ತಮಗೆ ಅಳವಡಿಸಲ್ಪಟ್ಟದ್ದರಿಂದಲೇ ಅದಕ್ಕಿರುವ ಅಗಾಧ ಶಕ್ತಿಯ ಅರಿವು ತಮಗಾಯಿತೆಂಬ ತೃಪ್ತಿಯೂ ಇವರಲ್ಲಿ ಕಾಣುತ್ತದೆ. ವಿನಾಶಕಾರಿ ಅಸ್ತ್ರಗಳಿಂದೊದಗುವ ಯಾವ ಶಕ್ತಿಯೂ ಈ ಅಹಿಂಸೆಯ ಶಕ್ತಿಗೆ ಸರಿಸಮನಾಗಲಾರದೆಂದು ಇವರು ಹೇಳಿದರು. ಅಹಿಂಸೆಯಿಂದ ಸಾಧಿಸಲಾರದುದು ಜಗತ್ತಿನಲ್ಲಿ ಯಾವುದೂ ಇಲ್ಲ ಎಂಬುದೇ ಇವರ ಅನುಭವ. ಆದರೆ ಅಹಿಂಸೆಯ ಸಾಧಕನಲ್ಲಿ ಅಮಿತವಾದ ಸಾಮರ್ಥ್ಯವಿರಬೇಕೆಂಬುದನ್ನು ಹೇಳಲು ಇವರು ಮರೆತಿಲ್ಲ. ಭಾರತೀಯ ಧರ್ಮಗಳಲ್ಲಿ (ಹಿಂದೂಧರ್ಮ, ಬೌದ್ಧಧರ್ಮ ಮತ್ತು ವಿಶೇಷವಾಗಿ ಜೈನಧರ್ಮ)ಈ ತತ್ವವು ಒಂದು ಪ್ರಧಾನ ಪಾತ್ರವಹಿಸುತ್ತದೆ.


ಯೇಸು, ಬುದ್ಧ, ಬಸವ, ಗಾಂಧಿ ಮತ್ತು ಅಂಬೇಡ್ಕರ್ ಮೊದಲಾದ ಸಮಾಜ ಸುಧಾರಕರು ಅಹಿಂಸೆಗೆ ಹೆಚ್ಚು ಒತ್ತುಕೊಟ್ಟಿರುವುದನ್ನು ನಾವು ಕಾಣಬಹುದಾಗಿದೆ. ಅಹಿಂಸೆಯೇ ಪರಮ ಧರ್ಮ ಎನ್ನುತ್ತದೆ ಮಾನವನ ತಿಳಿವಳಿಕೆ. ಹೇಳುವುದು ಸುಲಭ; ಹೇಳಿದಂತೆ ಬಾಳುವುದು ಕಡುಕಷ್ಟ. ಹಿಂಸೆ ಕೇವಲ ದೇಹಕ್ಕೆ ಸಂಬಂಧಿಸಿದ್ದಲ್ಲ, ಮನಸ್ಸಿಗೂ ಅನ್ವಯಿಸಿದ್ದು. ದೈಹಿಕ ಹಿಂಸೆ ಕಣ್ಣಿಗೆ ಕಾಣುವುದು. ಮಾನಸಿಕ ಹಿಂಸೆ ಕಣ್ಣಿಗೆ ಕಾಣದ್ದು. ದೈಹಿಕ ಹಿಂಸೆಯ ಕ್ರೌರ್ಯ ಶಾಬ್ದಿಕ ಅಬ್ಬರದ್ದು. ಮಾನಸಿಕ ಹಿಂಸೆಯ ನೋವು ರಣಮೌನದ್ದು. ಜಗತ್ತಿನಲ್ಲಿ ಎಲ್ಲ ಧರ್ಮಗಳು ಹಿಂಸೆಯನ್ನು ವಿರೋಧಿಸಿವೆ; ಜೀವದಯೆಯನ್ನು ಪ್ರತಿಪಾದಿಸಿವೆ.

ವಚನ ಧರ್ಮದಲ್ಲಿಯೂ ಬಸವಣ್ಣನವರು ದಯೆಯೇ ಧರ್ಮದ ಮೂಲವಯ್ಯಾ ಎಂದರು. ದಯೆಯನ್ನು ಜೀವನಧರ್ಮವಾಗಿ ಬಾಳಿದ ಶರಣ ದಸರಯ್ಯ. ದಸರಯ್ಯನೂ ಒಬ್ಬ ವಚನಕಾರ. ಅಹಿಂಸೆಯನ್ನು ಅದರ ಪರಾಕಾಷ್ಠೆಯಲ್ಲಿ ಬದುಕಿದ್ದ ಶರಣ; ತರುಲತೆ ಸ್ಥಾವರ ಜೀವಂಗಳೆಲ್ಲ ದೇವರ ಕಾರುಣ್ಯದಿಂದೊಗೆದವು ಎಂದು ಭಾವಿಸಿದ್ದವನು. ಒಮ್ಮೆ ಅವನು ಪೂಜೆಗೆ ಹೂವು ಕೀಳುತ್ತಿದ್ದಾಗ ಒಂದು ಹೂವಿನಗಿಡ ‘ನನ್ನ ಹೂವು ಕೀಳುತ್ತೀಯಲ್ಲ. ನನಗೆ ನೋವಾಗುವುದಿಲ್ಲವೆ’ ಎಂದು ಕೇಳಿದಂತಾಗುತ್ತದೆ. ಅಂದಿನಿಂದ ಅವನು ಗಿಡದಿಂದ ಹೂವು ಕಿತ್ತು ತರುವುದನ್ನು ಬಿಟ್ಟ. ಗಿಡದಿಂದ ಬಿದ್ದ ಹೂವುಗಳನ್ನು ಮಾತ್ರ ಆರಿಸಿ ತಂದು ದೇವರಿಗೆ ಅರ್ಪಿಸುತ್ತಿದ್ದ.

"https://kn.wikipedia.org/w/index.php?title=ಅಹಿಂಸೆ&oldid=1158471" ಇಂದ ಪಡೆಯಲ್ಪಟ್ಟಿದೆ