ಗೌತಮ ಬುದ್ಧ

ಬೌದ್ಧ ಧರ್ಮದ ಸ್ಥಾಪಕ. ಪ್ರಾಚೀನ ಭಾರತ
(ಸಿದ್ದಾರ್ಥ ಇಂದ ಪುನರ್ನಿರ್ದೇಶಿತ)

ಗೌತಮ ಬುದ್ಧನು (ಕ್ರಿ.ಪೂ ೫೬೩-೪೮೩) ಬೌದ್ಧಧರ್ಮದ ಸಂಸ್ಥಾಪಕ. ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ, ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದ ದಾರ್ಶನಿಕ. ಭಗವಾನ್ ಗೌತಮ ಬುದ್ಧನು ಕಂಡು ಹಿಡಿದ ವಿಪಶ್ಶನ ಧ್ಯಾನ ಮಾರ್ಗವು ದುಃಖ ಮತ್ತು ಪಾಪಕರ್ಮಗಳಿಂದ ಮುಕ್ತವಾಗಲು ಸಹಾಯ ಮಾಡುತ್ತದೆ. ಇಡೀ ಜಗತ್ತಿಗೆ ಜ್ಞಾನದ ಹಿರಿಮೆಯನ್ನು ತುಂಬಲು ಜನಿಸಿದವರು.

ಗೌತಮ ಬುದ್ಧ
ಸಾರನಾಥ, ಕ್ರಿ.ಶ. 4ನೇ ಶತಮಾನ
Bornಸು. ಕ್ರಿ.ಪೂ. 563 ರಿಂದ ಕ್ರಿ.ಪೂ. 483 ರ ನಡುವೆ[][]
ಲುಂಬಿನಿ ಪ್ರಾಚೀನ ಭಾರತ (ಇಂದಿನ ನೇಪಾಳ)[] ಅಥವಾ ಸಂಭಾವ್ಯವಾಗಿ ಬೇರೆಡೆ
Diedಸು. ಕ್ರಿ. ಪೂ. 483 (ವಯಸ್ಸು 80) ಅಥವಾ ಕ್ರಿ.ಪೂ. 411 ಮತ್ತು 400
ಕುಶೀನಗರ (ಇಂದಿನ ಉತ್ತರ ಪ್ರದೇಶ, ಭಾರತ)
Known forಬೌದ್ಧ ಧರ್ಮದ ಸಂಸ್ಥಾಪಕ
Parents
  • ಶುದ್ಧೋದನ (father)
  • ಮಾಯಾದೇವಿ (mother)
ಗೌತಮ ಸಿದ್ಧಾರ್ಥನ ಜನ್ಮದ ಬಗ್ಗೆ ಮಾಯಾಳ ಕನಸು
ಗೌತಮ ಬುದ್ಧನ ಕಾಲದಲ್ಲಿ ಭಾರತದ ಪ್ರಾಚೀನ ರಾಜ್ಯಗಳು ಮತ್ತು ನಗರಗಳು.
ಆಟ್ಗಾನ್‍ಬಾಯಾತ್ ಎರ್ಶೂ ನ ಬುದ್ಧ
ಬುದ್ಧನ ವಿಜಯ
ಪ್ರಭಾವಲಯದಿಂದ ಸುತ್ತುವರಿಯಲ್ಪಟ್ಟಿರುವ ಸಿದ್ಧಾರ್ಥ ಗೌತಮನ ಮಹಾ ನಿರ್ಗಮನ. ಗೌರವ ನೀಡಲು ಬಂದಿರುವ ಅಸಂಖ್ಯಾತ ಕಾವಲುಗಾರರು ಮತ್ತು ದೇವತೆಗಳು ಅವನ ಜೊತೆಗಿದ್ದಾರೆ; ಗಾಂಧಾರ, ಕುಶಾನ ಅವಧಿ
ರಾಜಕುಮಾರ ಸಿದ್ಧಾರ್ಥನು ತನ್ನ ಕೂದಲನ್ನು ಬೋಳಿಸಿಕೊಂಡು ಸಂನ್ಯಾಸಿಯಾಗುತ್ತಾನೆ. ಬೋರೊಬುಡುರ್, ೮ನೇ ಶತಮಾನ
ರಾಜಕುಮಾರ ಸಿದ್ಧಾರ್ಥನ ನಿರ್ಗಮನ

ಬುದ್ಧರ ಸಂದೇಶಗಳು

  • ಸಂಶೋಧನೆ, ತಿಳುವಳಿಕೆ, ಅನುಭವಿಸುವಿಕೆ ಮತ್ತು ಅದನ್ನು ಮತ್ತೆ ಮನನ ಮಾಡಿಕೊಳ್ಳುವುದು - ಇದುವೇ ಬೌದ್ಧ ಧರ್ಮ. ಅವನು ಬೋಧಿಸಿದ್ದು ದುಃಖದಿಂದ ಹೊರಬರುವ ಮಾರ್ಗವನ್ನು ಮಾತ್ರ. ಇದನ್ನೆ ಅವನು ಪಾಳಿ ಭಾಷೆಯಲ್ಲಿ "ಧಮ್ಮ" ಎಂದು ಕರೆದನು. ತಾನು ಬೋಧಿಸುತ್ತಿರುವುದರಲ್ಲಿ ಹೊಸದೇನೂ ಇಲ್ಲವೆಂದೂ ಹಾಗೂ ಈ ಸತ್ಯವನ್ನು ಕಂಡುಕೊಂಡವರಲ್ಲಿ ತಾನು ಮೊದಲನೆಯವನೂ ಅಲ್ಲ, ಕೊನೆಯವನೂ ಅಲ್ಲವೆಂದು ಸಾರಿದನು.
  • ಯಾರು ಬೇಕಾದರೂ ಈ ಮಾರ್ಗವನ್ನು ಅನುಸರಿಸಿ ದುಃಖದಿಂದ ಮುಕ್ತರಾಗಬಹುದು ಮತ್ತು ತನ್ನಂತೆ ಎಚ್ಚರದ ಸ್ಥಿತಿಯನ್ನು ಹೊಂದಬಹುದು. ಆದರೆ ಈ ಸಿದ್ಧಿಗೆ ಸ್ವಂತ ಪ್ರಯತ್ನ, ಸಾಧನೆ ಮಾತ್ರ ಕಾರಣ ಎಂದು ಹೇಳಿದ. ಸತತ ಎಚ್ಚರದ ಸ್ಥಿತಿಯನ್ನು ಸಾಧಿಸಿದ ಯಾರನ್ನು ಬೇಕಾದರೂ ಬುದ್ಧನೆಂದು ಕರೆಯಬಹುದು.
  • ತಾನು ಅಂತಹ ಅರಿವಿನ ಸ್ಥಿತಿಯಲ್ಲಿರುವುದರಿಂದ ತನ್ನನ್ನು ಬುದ್ಧನೆಂದು ಸಂಬೋಧಿಸಲು ಅವನು ತನ್ನ ಶಿಷ್ಯರಿಗೆ ಸೂಚಿಸಿದ. ಬುದ್ಧನ ಮೊದಲ ಶಿಷ್ಯ ಆನಂದ. ಬುದ್ಧ ಎಂದರೆ ನಿದ್ದೆಯಿಂದ ಎದ್ದವನು, ಜಾಗೃತನಾದವ, ಜ್ಞಾನಿ, ವಿಕಸಿತ, ಎಲ್ಲವನ್ನು ತಿಳಿದವನು ಎಂದರ್ಥ.[][] ಅವನು ಎಲ್ಲರಿಗೂ ಸಂಜೀವಿನಿಯಂಥ ಮಾಹಿತಿ ನೀಡಿದ ಮಹಾತ್ಮ. "ಆಸೆಯೇ ದುಃಖಕ್ಕೆ ಮೂಲ" ಎಂಬುದು ಅವನ ಪ್ರಸಿದ್ಧ ತತ್ವ.

ಜನನ

  • ಕಪಿಲವಸ್ತುವಿನ ಸಿಂಹಹನುವಿನ ಮಗ ಶುದ್ಧೋದನ. ಶುದ್ಧೋದನನಿಗೆ ತಂದೆ ಸಿಂಹಹನು ತನ್ನ ನೆರೆಯ ರಾಜ್ಯದ ದೊರೆ ಸುಪ್ರಬುದ್ಧನ ಮಕ್ಕಳಾದ ಪ್ರಜಾಪತಿದೇವಿ ಮತ್ತು ಮಾಯಾದೇವಿ ಎಂಬ ಇಬ್ಬರು ಹೆಣ್ಣು ಮಕ್ಕಳನ್ನು ತಂದು ಮದುವೆ ಮಾಡಿದರು. ಶುದ್ಧೋದನನ ಪಟ್ಟ ಮಹಿಷಿ ಮಾಯಾದೇವಿ. ಬುದ್ಧ ಲುಂಬಿನಿ ವನದಲ್ಲಿ, ವೈಶಾಖ ಶುದ್ಧ ಪೌರ್ಣಮಿಯಂದು ಶುದ್ಧೋದನ ಮತ್ತು ಮಾಯಾದೇವಿಯ ಮಗನಾಗಿ ಜನಿಸುತ್ತಾನೆ.[][] ಮೊದಲ ಹೆಸರು ಸಿದ್ಧಾರ್ಥ.
  • ಮಗುವಿಗೆ ಏಳು ದಿನವಾದಾಗ, ತಾಯಿ ಮಾಯಾದೇವಿ ಅಸುನೀಗಿದಳು. ತಾಯಿಯನ್ನು ಕಳೆದುಕೊಂಡ ಬುದ್ಧನನ್ನು ಎರಡನೆ ತಾಯಿ ಪ್ರಜಾಪತಿದೇವಿ (ಗೌತಮಿ) ಸಾಕುತ್ತಾಳೆ. ಆದುದರಿಂದ ಇವನು ಸಿದ್ದಾರ್ಥ 'ಗೌತಮ'ನೆಂದು ಕರೆಯಲ್ಪಡುತ್ತಾನೆ. (ಸಿದ್ದಾರ್ಥ ಕ್ರಿ.ಪೂ.೫೪೪ರಲ್ಲಿ, ಕ್ರಿ.ಪೂ.೫೫೦ರಲ್ಲಿ, ಕ್ರಿ.ಪೂ.೫೬೦ರಲ್ಲಿ ಜನಿಸಿದನೆಂದು ಭಿನ್ನಾಭಿಪ್ರಾಯಗಳಿವೆ. ಕ್ರಿ.ಪೂ.೬೨೩ನೇ ವೈಶಾಖ ಮಾಸದ ಹುಣ್ಣಿಮೆಯದಿನ ಬುದ್ಧ ಜನಿಸಿದನೆಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.)

ಹೆಸರಿನ ವಿಶೇಷತೆ

ಮೊದಲ ಹೆಸರು ಸಿದ್ಧಾರ್ಥ. ಪ್ರಜಾಪತಿದೇವಿ ಸಾಕಿದ್ದರಿಂದ ಪ್ರಜಾಪತಿ ಗೌತಮನೆಂದೂ, ಜ್ಞಾನ ಸಂಪಾದನೆಯಾದ ಮೇಲೆ ಬುದ್ಧನೆಂದು ಕರೆಯಲಾಗಿದೆ. ಬೌದ್ಧಧರ್ಮದಲ್ಲಿ ಕೋಪ, ಲೋಭ, ಮೌಢ್ಯಗಳನ್ನು ಸಂಪೂರ್ಣವಾಗಿ ಜಯಿಸಿದವನನ್ನು ಬುದ್ಧನೆಂದು ಕರೆಯುತ್ತಾರೆ. ಗೌತಮ ಬುದ್ಧನೆಂಬ ಹೆಸರು ಜನಪ್ರಿಯವಾಗಿದೆ.

ಮಹಾಪುರುಷನ ಲಕ್ಷಣ

ಸಿದ್ಧಾರ್ಥ ಜನಿಸಿದಾಗಲೇ ಅವನಲ್ಲಿ ಅಪೂರ್ವವಾದ ಮಹಾಪುರುಷನ ಲಕ್ಷಣ ಇರುವುದನ್ನು ದೈವಜ್ಞರು ಅರಿತಿದ್ದರು. ಸಿದ್ಧಾರ್ಥನಿಗೆ ೩೨ ಚಿಹ್ನೆಗಳಿದ್ದು, ನೀಳಬಾಹು, ವಿಶಾಲವಾದ ಎದೆ, ಊರ್ಧ್ವಮುಖ, ರೋಮಧಾರೆ, ದೇಹವನ್ನು ಬಾಗಿಸದೆ ಮಂಡಿ ಮುಟ್ಟುವಷ್ಟು ನೀಳವಾದ ಕೈಗಳು, ಉದ್ದವಾದ ಬೆರಳುಗಳು, ಅತೀ ಮೃದುವಾದ ಹಸ್ತ ಮತ್ತು ನವಿರಾದ ಪಾದಗಳನ್ನು ಹೊಂದಿದ್ದನೆಂದು ವಿಭೂತಿ ಪುರುಷರಲ್ಲಿ ಇರಬೇಕಾದ ಸರ್ವಲಕ್ಷಣಗಳನ್ನು ದಿಗ್ಗನಿಕಾಯ ಎಂಬ ಬೌದ್ಧಗ್ರಂಥ ತಿಳಿಸುತ್ತದೆ. ಅವರ ಮುಖವಿನ ನಗು ಕಮಲ ಅರಳಿದಂತೆ.[]

ಮಾಯಾದೇವಿಯ ಕನಸು

ಪುತ್ರೋತ್ಸವಕ್ಕೆ ಮುನ್ನ ಮಾಯಾದೇವಿ ಕನಸೊಂದನ್ನು ಕಂಡಳು. ಅದರಲ್ಲಿ ದೇವತೆಗಳು ಮಾಯಾದೇವಿಯನ್ನು ಹಿಮಾಲಯದ ಮೇಲಕ್ಕೆ ಕರೆದುಕೊಂಡು ಹೋಗಿ ಮಹಾಸರೋವರದಲ್ಲಿ ಸ್ನಾನ ಮಾಡಿಸಿ, ಬೆಳ್ಳಿ ಬೆಟ್ಟದ ಮೇಲಿದ್ದ ಬಂಗಾರದ ತೊಟ್ಟಿಲಿನಲ್ಲಿ ಅವಳನ್ನು ಮಲಗಿಸಿದರು. ಆಗ ಬಿಳಿಯ ಆನೆಯೊಂದು ತನ್ನ ಸೊಂಡಿಲಿನಿಂದ ಕಮಲ ಪುಷ್ಪವನ್ನು ಹಿಡಿದು, ಉತ್ತರ ದಿಕ್ಕಿನಿಂದ ಬಂದು ಮಾಯಾದೇವಿಯ ಬಲಪಾರ್ಶ್ವದಿಂದ ಉದರವನ್ನು ಪ್ರವೇಶಿಸಿತಂತೆ.[][೧೦]

ಜ್ಯೋತಿಷ್ಯಫಲ

ಸ್ವಪ್ನದ ಸಂಕೇತವನ್ನು ಕುರಿತು ಜ್ಯೋತಿಷ್ಕರು ಮಾಯಾದೇವಿ ಗಂಡು ಮಗುವಿಗೆ ಜನ್ಮವೀಯುವಳು. ಶಿಶುವು ರಾಜ್ಯಾಭಿಷಕ್ತನಾದರೆ ಚಕ್ರಾಧೀಶ್ವರನೂ, ಸಂಪದ್ಭರಿತನೂ ಆಗುವನು, ರಾಜ್ಯಕೋಶಗಳ ಅಧಿಕಾರ ತೊರೆದು ಯೋಗಿಯಾದರೇ, ಮಹಾಯೋಗಿಯೆನಿಸಿ ಜಗದ್ವಿಖ್ಯಾತ ವ್ಯಕ್ತಿಯಾಗುವನು ಎಂದು ತಿಳಿಸಿದರು.[೧೧][೧೨]

ಶಿಕ್ಷಣ

ಚಕ್ರವರ್ತಿಯಾಗುವ ಲಕ್ಷಣಗಳಿವೆಯೆಂದು, ರಾಜ ಶುದ್ಧೋಧನನು ಬಹಳ ವಾತ್ಸಲ್ಯದಿಂದ ಸಿದ್ದಾರ್ಥನ ಶಿಕ್ಷಣದ ಬೆಳವಣಿಗೆಯಲ್ಲಿ ಹೆಚ್ಚುಆಸಕ್ತಿ ವಹಿಸಿದನು. ಸಿದ್ದಾರ್ಥನು ಸರ್ವ ವಿದ್ಯಾಪಾರಂಗತನಾಗುವಂತೆ, ಕುಲಗುರುವಿನಲ್ಲಿ ವಿದ್ಯೆ ಕೊಡಿಸಿ ತೃಪ್ತನಾಗದೆ, ರಾಮ, ಧಜ, ಲಕ್ಖಣ, ಮಂತಿಯಣ್ಣ, ಸುಯಾಮ, ಸುಭೋಗ, ಸುದತ್ತ, ಸುಮಿತ್ರ, ಸುಲಭ ಮುಂತಾದ ವಿವಿಧ ವಿದ್ಯಾಪಾರಂಗತರಾದ ವಿದ್ವಾಂಸರಲ್ಲಿ ಶಿಕ್ಷಣ ಕೊಡಿಸಿದನು. ಸಿದ್ದಾರ್ಥನು ಬುದ್ಧಿ ಬೆಳವಣಿಗೆಗೆ ಕೊಟ್ಟ ಪ್ರಾಧಾನ್ಯವನ್ನು ಹೃದಯ ವೈಶಾಲ್ಯಕ್ಕೂ ಕೊಟ್ಟಿದ್ದನು.

ಮಾನವೀಯ ಸಾಕಾರ ಮೂರ್ತಿಯಾಗಿ

  • ಘಟನೆ ೧. ಕಪಿಲವಸ್ತುವಿನಲ್ಲಿ ಸಾಂಪ್ರದಾಯಿಕ ಸಮಾರಂಭವೊಂದು ಏರ್ಪಟ್ಟಿತು. ವ್ಯವಸಾಯದ ಕಾಲ ಪ್ರಾರಂಭವಾದಾಗ, ಕೃಷಿ ಆರಂಭೋತ್ಸವದಲ್ಲಿ ಭಾಗವಹಿಸಲು, ಸಿದ್ಧಾರ್ಥನಿಗೆ ರಾಜ ಶುದ್ಧೋದನ ಹೇಳಿದನು. ಅದರಂತೆ ಬಂಗಾರದ ನೇಗಿಲಿಗೆ, ಸುಂದರವಾದ ಶ್ವೇತವರ್ಣದ ಎತ್ತುಗಳನ್ನು ಕಟ್ಟಿ, ಮುಂದುಗಡೆಯಲ್ಲಿ ರಾಜಕುಮಾರ ಸಿದ್ಧಾರ್ಥ ನೆಲವನ್ನು ಉತ್ತನು. ನಂತರ ರಾಜಕುಮಾರ ಸಿದ್ದಾರ್ಥನ ಹಿಂದೆ ಸಾವಿರಾರು ಜನ ಉಳುಮೆ ಮಾಡುವುದರಲ್ಲಿ ಭಾಗವಹಿಸಿದರು. ಅವರೆಲ್ಲ ನೇಗಿಲಿನಿಂದ ನೆಲವನ್ನು ಬಗೆದೊಡನೆ, ನೆಲದಿಂದ ಅನೇಕ ಕ್ರಿಮಿ ಕೀಟಗಳು ಹೊರಗೆ ಬರಲಾರಂಭಿಸಿದವು. ಅವನ್ನು ಕಂಡು ಅಂತರಿಕ್ಷದಲ್ಲಿ ಹಾರಾಡುತ್ತಿದ್ದ ಪಕ್ಷಿಗಳು ಬಂದು ಅವುಗಳನ್ನು ಕೊಕ್ಕಿನಲ್ಲಿ ಕುಕ್ಕಿ ತಿನ್ನುವುದನ್ನು ಕಂಡಾಗ ರಾಜಕುಮಾರ ಸಿದ್ದಾರ್ಥನ ಮನದಲ್ಲಿ ವೇದನೆ ಉಂಟಾಯಿತು. ಆದರದನ್ನು ಅವನು ಯಾರಿಗೂ ತಿಳಿಸಲಿಲ್ಲ.
  • ಘಟನೆ ೨. ಒಂದು ದಿನ ಸೋದರ ದೇವದತ್ತನು ಉದ್ಯಾನವನದಲ್ಲಿ ಹಾರಾಡುತ್ತಿದ್ದ ಹಂಸಪಕ್ಷಿಗೆ ಬಾಣ ಪ್ರಯೋಗ ಮಾಡಿದನು. ಕೆಳಗೆ ಬಿದ್ದ ಅದು ನೋವನ್ನು ತಾಳಲಾರದೆ ವಿಲವಿಲನೆ ಒದ್ದಾಡುತ್ತಿತ್ತು. ಇದನ್ನು ಕಂಡ ಸಿದ್ಧಾರ್ಥ ಮನನೊಂದು ಅದನ್ನು ಶ್ರದ್ಧೆಯಿಂದ ಉಪಚರಿಸಿದನು. ಸಿದ್ಧಾರ್ಥನ ಔಷಧೋಪಚಾರಗಳಿಂದ ಹಂಸವು ಬದುಕಿತು.

ವಿವಾಹ

  • ರಾಜ ಶುದ್ಧೋಧನನು ಮಗನು ವಿರಕ್ತನಾಗದಂತೆ ನೋಡಿಕೊಳ್ಳಲು ಸರ್ವ ಪ್ರಯತ್ನಗಳನ್ನು ಮಾಡುತ್ತಿದ್ದನು.[೧೩] ಹರೆಯದಲ್ಲಿ ಮದುವೆ ಮಾಡಿದರೆ ಅವನು ಸಂಸಾರಸುಖದಲ್ಲಿ ಮಗ್ನನಾಗಿರುತ್ತಾನೆಂದು ಬಗೆದು, ಮಗನಿಗೊಂದು ಸ್ವಯಂವರವನ್ನೇರ್ಪಡಿಸಿದನು. ಅವನು ಒಪ್ಪುವ ಕನ್ಯೆ ಅವನಿಗೆ ಸಿಕ್ಕಲಿ ಎಂಬ ಉದ್ದೇಶವಿತ್ತು. ಒಂದು ದಿನ ಊರಿನ ಎಲ್ಲ ಕನ್ಯೆಯರೂ ಬಂದು ರಾಜಕುಮಾರನಿಂದ ಆಭರಣಗಳನ್ನು ದಾನ ಪಡೆಯುವಂತೆ ಸಮಾರಂಭ ಏರ್ಪಡಿಸಲಾಗಿತ್ತು.
  • ಅಂತೆಯೇ ಊರಿನ ಎಲ್ಲ ಕನ್ಯೆಯರು ಬಂದು ಸಿದ್ಧಾರ್ಥನ ಕೈಯಿಂದ ಆಭರಣಗಳನ್ನು ಪಡೆದರು. ಆದರೆ ಶುದ್ಧೋಧನನ ಸಚಿವನಾದ ದಂಡಪಾಣಿಯ (ಯಶೋಧರೆಯ ತಂದೆ ಮಹಾಮಾನನೆಂದು, ಸುಪ್ರಬುದ್ಧನೆಂದು ಕೆಲವು ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ.[೧೪][೧೫]) ಮಗಳು ಅಥವಾ ಯಶೋಮತಿ ಎಂಬುವವಳು ಅತೀ ಸುಂದರಳೂ, ಸುಸಂಸ್ಕೃತಳೂ ಆಗಿದ್ದು ಕಟ್ಟಕಡೆಯಲ್ಲಿ ಬಂದಳು.
  • ಆಕೆಯ ಗಾಂಭಿರ್ಯ, ಘನತೆಗಳು ಸಿದ್ಧಾರ್ಥನನ್ನು ಮಂತ್ರಮುಗ್ಧಗೊಳಿಸಿದವು. ದಾನ ಮಾಡುತ್ತಿದ್ದ ಒಡವೆಗಳೆಲ್ಲ ಮುಗಿದು ಹೋಗಿದ್ದುವು. ಆಗ ಸಿದ್ಧಾರ್ಥನು ತನ್ನ ಬೆರಳಿನಲ್ಲಿದ್ದ ಉಂಗುರವನ್ನೇ ತೆಗೆದು ಕೊಡಲು ಹೋದನು. ಆದರವಳು ನಿಮ್ಮ ವಾತ್ಸಲ್ಯಮಯ ನೋಟವೇ ನನಗೊಂದು ಆಭರಣ, ಅದೇ ಸಾಕೆಂದು ಮುಂದೆ ಸಾಗಿದಳು. ಸಿದ್ಧಾರ್ಥನಿಗೆ ಯಶೋಧರೆಯಲ್ಲಿ ಮಮಕಾರ ಉಂಟಾಗಿದೆಯೆಂಬ ಗೂಢಚಾರ ವರದಿಯನ್ನಾಧರಿಸಿ, ಯಶೋಧರೆಯನ್ನು ವರಿಸಲು ಸಮ್ಮತಿಸಿದನು.
  • ಯಶೋಧರೆಯೊಂದಿಗೆ ಗೌತಮಾ ಮತ್ತು ಮನೋವುರಾ ಎಂಬಿಬ್ಬರು ಯುವತಿಯರನ್ನು ತಂದು ಸಿದ್ಧಾರ್ಥನಿಗೆ ವಿವಾಹ ಮಾಡಿಸುತ್ತಾರೆ. (ಲಲಿತ ವಿಸ್ತರ ಎಂಬ ಕೃತಿಯಲ್ಲಿ ಸಿದ್ಧಾರ್ಥನ ಪತ್ನಿಯರ ಹೆಸರು ಮೃಗಜಾ, ಯಶೋಧರೆ ಮತ್ತು ಉತ್ಪಲಾವರ್ಣಾ ಎಂದೂ, ಚೈನಾ ಗ್ರಂಥಗಳಲ್ಲಿ ಯಶೋಧರೆ, ಗೋಪ ಮತ್ತು ಉತ್ಪಲಾವರ್ಣಾ ಎಂದು ಹೇಳಿದೆ.

ಪುತ್ರೋತ್ಸವ

ಸಿದ್ಧಾರ್ಥನಿಗೆ ಅವನ ರಾಣಿಯರ ಸಂಗದಿಂದ ಅವನ ಜ್ಞಾನದ ಮಟ್ಟದಲ್ಲಿ ಹೊಸಹೊಸ ಅನುಭವಗಳನ್ನು ತಂದುಕೊಡುತ್ತಿದ್ದವು. ಪತ್ನಿಯರ ಮನನೋಯದಂತೆ ವರ್ತಿಸುತ್ತಿದ್ದನು. ಹೀಗಿರುವಾಗ ಯಶೋಧರೆ ಗಂಡು ಮಗುವಿನ ತಾಯಿಯಾದಳು. ಪುತ್ರನಿಗೆ ಸಿದ್ಧಾರ್ಥನೇ 'ರಾಹುಲ'ನೆಂದು ನಾಮಕರಣ ಮಾಡಿದನು.[೧೬] ರಾಜ ಶುದ್ಧೋಧನ ಪುತ್ರೋತ್ಸವ ಸಮಾರಂಭವನ್ನು ಅತ್ಯಂತ ವೈಭವದೊಡನೆ ನೆರವೇರಿಸಿದನು. ಬಡಬಗ್ಗರಿಗೆ ಅಪಾರ ದಾನ ಧರ್ಮ ಮಾಡಿದನು.

ವೈರಾಗ್ಯ

ಮಗುವಿಗೆ ವರ್ಷ ತುಂಬುವುದರೊಳಗೆ ಸಿದ್ಧಾರ್ಥನಿಗೆ ದುಃಖದ 'ದಿವ್ಯದರ್ಶನ'ವಾಗುತ್ತದೆ. ಒಮ್ಮೆ ಸಿದ್ಧಾರ್ಥ ಪೂರ್ವ ಸೂಚನೆಯನ್ನೂ ಕೊಡದೆ ತನ್ನ ಸಾರಥಿ ಚೆನ್ನನೊಂದಿಗೆ ನಗರ ಸಂಚಾರಕ್ಕೆ ಹೊರಟು ಹಾದಿಯಲ್ಲಿ ಮುದುಕನನ್ನು, ರೋಗಿಯನ್ನು ಮತ್ತು ಒಂದು ಸಾವನ್ನು ಕಂಡು ವ್ಯಾಕುಲಗೊಳ್ಳುತ್ತಾನೆ.[೧೭][೧೮][೧೯][೨೦][೨೧] ಖಿನ್ನ ಮನಸ್ಕನಾಗಿ, ದುಃಖದಿಂದ ಕಂಗೆಟ್ಟು ಮನದಲ್ಲಿ ವಿರಕ್ತಿ ಹೊಂದುತ್ತಾನೆ. ಚಿಂತಾಕ್ರಾಂತನಾಗಿ ಕುಳಿತು ಆಲೋಚಿಸುವಾಗ ಅವನ ಮುಂದೆ ಸಂನ್ಯಾಸಿಯೊಬ್ಬ ಬರುತ್ತಾನೆ.

  • ಅದುವರೆವಿಗೂ ಅಂತಹವನನ್ನು ಕಾಣದಿದ್ದ ಸಿದ್ಧಾರ್ಥ ಆ ಸನ್ಯಾಸಿಯನ್ನು ಪ್ರಶ್ನಿಸಿದಾಗ ಅವನು- "ಜನನ-ಮರಣಗಳುಳ್ಳ ಪ್ರಪಂಚದಲ್ಲಿರುವ ಮಾನವನೂ ತಿಳಿದೂ ತಿಳಿದೂ ಕ್ಷಣಿಕ ಸುಖಕ್ಕಾಗಿ ಆಸೆ ಪಟ್ಟು, ಸಾಗರದಷ್ಟು ದುಃಖ ಪಡುತ್ತಿರುವುದನ್ನು ನೋಡಿ ಖೇದಗೊಂಡು ಕಾಡುಮೇಡು ಅಲೆಯುತ್ತಾ ನೆಮ್ಮದಿಯಾಗಿದ್ದೇನೆ. ನಾನು ಬಂಧು-ಬಾಂಧವರು, ಸುಖ-ಸಂಪತ್ತುಗಳೆಂಬ ಕೋಟಲೆಯಿಂದ ದೂರವಾದವನು. ನನಗೆ ಕಷ್ಟ ಬರುವುದೆಂಬ ಭಯವಿಲ್ಲ. ಸುಖ ಬೇಕೆಂಬ ಆಸೆಯಿಲ್ಲ. ಉರಿಬರಲಿ, ಸಿರಿಬರಲಿ, ಬೇಕು - ಬೇಡ ಎಂಬ ಗೊಂದಲಕ್ಕೆ ಒಳಗಾಗದವನು. ಆತ್ಮ ಸ್ವತಂತ್ರನು ನಾನು. ಭೂಮಿಯೇ ನನ್ನ ಮನೆ, ಆಕಾಶವೇ ನನಗೆ ಹೊದಿಕೆ. ಅನ್ಯರ ಹಂಗಿಲ್ಲದ ಈ ಅರಣ್ಯ ನನ್ನ ವಿಹಾರ ತಾಣ" ಎನ್ನುತ್ತಾನೆ. ಆ ಸನ್ಯಾಸಿಯ ಮಾತು ಸಿದ್ಧಾರ್ಥನ ಮನವನ್ನು ಸೂರೆಗೊಂಡವು. ಅವನ ಮನಸ್ಸು ಒಮ್ಮೆಲೇ ಶಾಂತವಾಗಿ ಒಂದು ದೃಢ ನಿರ್ಧಾರಕ್ಕೆ ಬಂದಿತು.

ಸಂಸಾರ ಪರಿತ್ಯಾಗ

  • ವೃದ್ಧ, ರೋಗಿ, ಮೃತದೇಹ ಮತ್ತು ಸನ್ಯಾಸಿಯ ದರ್ಶನದಿಂದ ಸಿದ್ದಾರ್ಥನ ಜೀವನದಲ್ಲಿ ಅಗಾಧ ಮಾರ್ಪಾಡು ಆಗುತ್ತದೆ.[೨೨] ಜರಾಮರಣಗಳಿಗೆ, ದುಃಖಗಳಿಗೆ ಕಾರಣವನ್ನು ಹುಡುಕಬೇಕೆಂಬ ಹಂಬಲ ತೀವ್ರವಾಗುತ್ತದೆ. ತನ್ನ ಸಂಕಲ್ಪಸಿದ್ಧಿಗೆ ಇದುವರೆಗೂ ನಡೆಸಿದ ಜೀವನ ಸಲ್ಲದೆಂದು ತೀರ್ಮಾನಿಸುವನು. ಈ ಬಂಧನದ ಪರಿತ್ಯಾಗ ಮಾಡಿ ಏಕಾಂಗಿಯಾಗಿ ಕಾಡಿನತ್ತ ಹೋಗುವುದೇ ಸರಿಯಾದ ಮಾರ್ಗವೆಂದು ನಿರ್ಧರಿಸಿದನು.
  • ಒಂದು ಕ್ಷಣ ಸಿದ್ಧಾರ್ಥನು ಗೊಂದಲಕ್ಕೆ ಈಡಾಗುತ್ತಾನೆ. ತನ್ನನ್ನು ನಂಬಿದವರಿಗೆ ತನ್ನ ಅಗಲುವಿಕೆಯಿಂದ ಎಷ್ಟೊಂದು ನೋವಾಗಬಹುದೆಂದು ಯೋಚಿಸಿ, ಒಡನೆಯೇ ಮನೋನಿಶ್ಚಯಕ್ಕೆ ಒಳಗಾಗುತ್ತಾನೆ. ಸಿದ್ದಾರ್ಥ ತಂದೆ ಶುದ್ಧೋದನನ ಬಳಿಗೆ ಹೋಗಿ ತಾನು ಸನ್ಯಾಸಿಯಾಗಲಿರುವ ವಿಷಯವನ್ನು ತಿಳಿಸಿ ಅನುಮತಿ ಬೇಡುತ್ತಾನೆ. ಶುದ್ಧೋದನ ಸಿದ್ದಾರ್ಥನಿಗೆ ಅನುಮತಿ ನೀಡುವುದಿಲ್ಲ.
  • ಆಗ ಸಿದ್ದಾರ್ಥ ತಂದೆ ತನಗೆ ಬೇಕಾದ ವಸ್ತುವನ್ನು ಕೊಡಿಸುವುದಾದರೆ, ತಾನು ಸಂಸಾರ ತ್ಯಾಗ ಮಾಡುವುದಿಲ್ಲವೆಂದು ಹೇಳಿ ತನ್ನ ಬೇಡಿಕೆಯನ್ನು ತಂದೆಯ ಮುಂದಿಡುತ್ತಾನೆ.
  1. ತನಗೆ ಎಂದೂ ವೃದ್ಧಾಪ್ಯ ಬಾರದಂತಿರಬೇಕು.
  2. ನಿತ್ಯವೂ ತಾನು ದುಃಖರಹಿತನಾಗಿರಬೇಕು.
  3. ತನಗೆ ಮರಣವೇ ಸಂಭವಿಸದೆ ಅಮರಜೀವಿಯಾಗಿರಬೇಕು.
  4. ಯಾವ ರೋಗ-ರುಜಿನಗಳು ತನ್ನನ್ನು ಸ್ಪರ್ಶಿಸಬಾರದು. ಇವುಗಳನ್ನು ತಂದೆ ಕರುಣಿಸುವುದಾದರೆ ತಾನು ಅರಣ್ಯಗಮನವನ್ನು ಬಯಸುವುದಿಲ್ಲ ಎಂದಾಗ, ಶುದ್ಧೋದನ ಮೂಕನಾಗುತ್ತಾನೆ.
  • ಕಡೆಗೆ ಸಿದ್ದಾರ್ಥ ತನ್ನ ಪ್ರಯಾಣದ ವಾರ್ತೆಯನ್ನು ಯಾವ ಬಂಧು ಬಾಂಧವರಿಗೂ ತಿಳಿಸಲು ಇಷ್ಟಪಡದೆ, ಮಧ್ಯರಾತ್ರಿಯಲ್ಲಿ ಎದ್ದು, ಅರಮನೆಯಿಂದ ಹೊರಡಲು ಉತ್ಸುಕನಾಗಿ, ಕೊನೆಯ ಸಲ ಒಂದೇ ಒಂದು ಬಾರಿ ತನ್ನ ಮಗನ ಮುದ್ದು ಮಖವನ್ನು ನೋಡಲು ತೆರಳುತ್ತಾನೆ. ಅಲ್ಲಿ ಸುಖ ನಿದ್ರೆಯಲ್ಲಿ ಮಲಗಿದ್ದ ಪತ್ನಿ ಮತ್ತು ಮಗನನ್ನು ಕಣ್ತುಂಬಿಕೊಂಡು ಹೊರ ನಡೆಯುತ್ತಾನೆ.[೨೩]
  • ಅರಮನೆಯಿಂದ ಹೊರಬಂದು ತನ್ನ ನೆಚ್ಚಿನ ಸೇವಕನಾದ ಚಂದಕ ಅಥವಾ ಚೆನ್ನನನ್ನು ಎಬ್ಬಿಸಿಕೊಂಡು, ಕಂಧಕವೆಂಬ ಕುದುರೆಯೊಂದಿಗೆ, ರಾಜತ್ಯಾಗ ಮಾಡಿ ಅರಣ್ಯದೆಡೆಗೆ ಪಯಣ ಬೆಳೆಸುತ್ತಾನೆ. ಕಾಡಿನ ಮಧ್ಯಭಾಗಕ್ಕೆ ಬಂದು ಕುದುರೆಯಿಂದ ಕೆಳಗಿಳಿದು, ಚಂದಕನಲ್ಲಿ ಕ್ಷಮೆ ಕೇಳಿ, ಅವನನ್ನು ಸಾಂತ್ವನಗೊಳಿಸಿ, ಸಾಧನೆಯ ಸಿದ್ಧಿಗಾಗಿ ಹೊರಡುತ್ತಾನೆ.[೨೪]

ಜ್ಞಾನಯೋಗಿಯಾಗಿ

  • ಸಿದ್ಧಾರ್ಥನು ಭಾರ್ಗವಾಶ್ರಮಕ್ಕೆ ಬಂದು, ಅಲ್ಲಿನ ಸಾಧಕರಿಂದ ತಪೋನಿಯಮಗಳನ್ನು ತಿಳಿಯಲೆತ್ನಿಸಿದನು. ನಂತರ ಮಗಧ ದೇಶದೆಡೆಗೆ ಪ್ರಯಾಣ ಆರಂಭಿಸಿದನು. ರಾಜವೈಭವವನ್ನು ಅನುಭವಿಸಿದ್ದ ಸಿದ್ಧಾರ್ಥನು ಅರಣ್ಯ ಸಂಚಾರಕ್ಕೆ ಹೆದರದೆ, ಹಸಿವು, ತೃಷೆಗಳ ಪರಿವೆ ಇಲ್ಲದೆ, ರಾಜಗೃಹಕ್ಕೆ ಬಂದು ದೀನರ ಮನೆಯಲ್ಲಿ ಭಿಕ್ಷೆ ಎತ್ತಿ, ತನ್ನ ಜೀವನದಲ್ಲಿ ಮೊದಲ ಬಾರಿಗೆ ಭಿಕ್ಷಾನ್ನವನ್ನು ಸ್ವೀಕರಿಸಿದನು. ಸ್ವಲ್ಪ ಕಾಲ ಮಗಧ ರಾಜ್ಯದ ಆರಾಡ ಕಾಲಾಮನೆಂಬ ತಪಸ್ವಿಯ ಬಳಿ ಶಿಷ್ಯನಾಗಿ ಸೇರಿದನು.[೨೫][೨೬]
  • ಸಿದ್ಧಾರ್ಥನು ತನ್ನ ರಾಜ್ಯವನ್ನು ಬಿಟ್ಟು ಬಂದಾಗ ಅವನಿಗೆ ೨೯ ವರ್ಷ ವಯಸ್ಸಾಗಿತ್ತು. 'ಉರುವೇಲ' ಅವನ ತಪಸ್ಸಾಧನೆಗೆ ಉತ್ತಮ ಸ್ಥಳವಾಯಿತು. ವಿವಿಧ ಪಂಥಗಳ ಗುರುಗಳ ಹತ್ತಿರ ಸತತವಾಗಿ ೬ವರ್ಷಗಳ ಕಾಲ ಅವರು ಹೇಳಿದಂತೆ ದೇಹ ದಂಡನೆ ಮಾಡಿದನು. ಸಿದ್ಧಾರ್ಥನು ಯಾವ ಸಾಧನೆಯಿಂದಲೂ ತೃಪ್ತನಾಗದೆ, ಕೊನೆಗೆ ನಿರಾಹಾರನಾಗಿ ತಪಸ್ಸನ್ನು ಆಚರಿಸತೊಡಗಿದನು. ನಿರಾಹಾರ ವ್ರತದಿಂದ ದೇಹ ಕೃಶವಾಗಿ, ಅವನ ಚೈತನ್ಯವೇ ಉಡುಗಿ ಹೋಗಿ ಪ್ರಜ್ಞೆ ತಪ್ಪಿತು.[೨೭] ಕಾಯಕ್ಲೇಶ, ನಿರಾಹಾರ ನಿಯಮಗಳು ಸಾಧನೆಗೆ ಸಹಾಯವಲ್ಲವೆಂದು ಅರಿತನು.[೨೮] ಇದರಿಂದ ಯಾವುದೇ ಪ್ರತಿಫಲ ಮತ್ತು ಶಾಂತಿ ಸಿಗಲಿಲ್ಲ.
  • ಸುಜಾತೆ ತಂದು ಕೊಟ್ಟ ಪಾಯಸವನ್ನು ಸೇವಿಸಿ[೨೯] ಸಮಾಧಾನ ಚಿತ್ತದಿಂದ ಬೋಧಿವೃಕ್ಷದ ಕೆಳಗೆ, ಪೂರ್ವಾಭಿಮುಖವಾಗಿ, ಪದ್ಮಾಸನ ಹಾಕಿ ಧ್ಯಾನಾಸಕ್ತನಾದನು. ಸಿದ್ಧಾರ್ಥನು ಏಳು ದಿನಗಳ ಕಾಲ ಧ್ಯಾನಾಸಕ್ತನಾಗಿ ಕುಳಿತಿದ್ದನು.[೩೦] ವೈಶಾಖ ಹುಣ್ಣಿಮೆಯ ದಿನ ಸಿದ್ಧಾರ್ಥನಿಗೆ ಸಂಕಲ್ಪ ಸಿದ್ಧಿಯಾಯಿತು. ಪರಿಪೂರ್ಣ ಜ್ಞಾನೋದಯ ಪಡೆದುಕೊಂಡನು. ಸೂರ್ಯೋದಯವಾಗುವುದರೊಳಗೆ ಸಿದ್ಧಾರ್ಥ ನಾಲ್ಕುಜಾವದ ಅನುಭವ ಪಡೆದು ಜ್ಞಾನಯೋಗಿಯಾದನು. ಆ ನಾಲ್ಕು ಜಾವದಲ್ಲಿನ ಅನುಭವಗಳೆಂದರೆ-
  1. ಜನ್ಮಾಂತರಗಳ ಅರಿಯುವಿಕೆ,
  2. ನಿತ್ಯಾನಿತ್ಯ ವಸ್ತುಗಳ ವಿವೇಕೋದಯ,
  3. ಜರಾಮರಣಗಳ ದುಃಖಕ್ಕೆ ಕ್ಷಣಿಕ ವಸ್ತುಗಳ ತೃಷೆಯೇ ಕಾರಣ,
  4. ಆಧ್ಯಾತ್ಮ ತತ್ತ್ವದ ಸಾಕ್ಷಾತ್ಕಾರ.
  • ಗೌತಮ ಬುದ್ಧರು ಮುಂದಿನ ೪೫ ವರ್ಷಗಳು ನಿರಂತರವಾಗಿ ಧಮ್ಮೋಪದೇಶಗಳನ್ನು ಜನಸಾಮಾನ್ಯರಿಗೆ ನೀಡುವ ಮೂಲಕ ಮಾನವನ ದುಃಖ ನಿವಾರಣೆಗೆ ತ್ರಿಸರಣ ಬೋಧನೆ ಮಾಡಿದರು.

ಬುದ್ಧನ ಸಂದೇಶಗಳು

ಈ ಕೆಳಗಿನ ಮೂರು ಬೌದ್ಧ ಧಮ್ಮದ ಮೂಲ ಸಂಕೇತಗಳು. ಇವುಗಳನ್ನು ಪ್ರತಿಯೊಬ್ಬರ ಜೀವನ ಧ್ಯೇಯಗಳಾಗಿ ಒಪ್ಪಿಕೊಂಡು ಸಂತೋಷವಾಗಿರುವುದು. ಅವುಗಳೆಂದರೆ,

ಬುದ್ಧಂ ಶರಣಂ ಗಚ್ಛಾಮಿ (ನಾನು ಬುದ್ಧನಿಗೆ ಶರಣಾಗುತ್ತೇನೆ.)
ಧಮ್ಮಂ ಶರಣಂ ಗಚ್ಛಾಮಿ (ನಾನು ಧಮ್ಮಕ್ಕೆ ಶರಣಾಗುತ್ತೇನೆ.)
ಸಂಘಂ ಶರಣಂ ಗಚ್ಛಾಮಿ (ನಾನು ಸಂಘಕ್ಕೆ ಶರಣಾಗುತ್ತೇನೆ.)

ಗಚ್ಛಾಮಿ ಎಂದರೆ, ಸತ್ಯದಿಂದ ಬೌದ್ಧ ಧಮ್ಮ ಸ್ವೀಕರಿಸುತ್ತೇನೆ ಎಂದು ಅರ್ಥೈಸುತ್ತದೆ. ಈ ಮೂರು ಶರಣ್ಯಗಳನ್ನು ಉಪಾಸಕರು ಮೂರು ಬಾರಿ ಉಚ್ಚರಿಸುವ ಮೂಲಕ ತಾವು ಬೌದ್ಧ ಧಮ್ಮಾಚಾರಿಗಳೆಂದು ಘೋಷಿಸುತ್ತಾರೆ.

ಮದ್ಯಮ ಮಾರ್ಗದ ಮೂಲಕ ಮೈತ್ರಿ, ಕರುಣೆ, ದಯೆ , ಸಮತೆ, ಪ್ರೀತಿ, ಅನುಕಂಪ, ಮತ್ತು ಜ್ಞಾನದೊಂದಿಗೆ ಅಷ್ಟಾಂಗ ಮಾರ್ಗಗಳನ್ನು ತೋರಿಸಿಕೊಟ್ಟರು.

ಈ ಸತ್ಯವನ್ನು ನಾವು ಪರಿಪಾಲಿಸಿದರೆ ನಮ್ಮ ಜೀವನದಲ್ಲಿ ಬುದ್ಧತ್ವವನ್ನು ಪಡೆಯಬಹುದು.

ಧಮ್ಮ

ಬುದ್ಧರು ಧಮ್ಮವನ್ನು ಜೀವನ ಮಾರ್ಗವೆಂದು ಹೇಳಿದ್ದಾರೆ. ಪರಿಶುದ್ಧವಾದ ಜೀವನ ನಡೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇದರಿಂದ ದುಃಖ ನಿವಾರಣೆ ಸಾಧ್ಯ. ಧಮ್ಮವೆಂದರೆ ಇತರೆ ಧರ್ಮಗಳಲ್ಲಿರುವಂತೆ ಅದು ತತ್ವಶಾಸ್ತ್ರವಲ್ಲ. ಇದು ಎಲ್ಲರಿಗೂ ಮುಕ್ತವಾದ ರೀತಿಯಲ್ಲಿ ಸತ್ಯದ ಬೆಳಕು ಚಲ್ಲುತ್ತದೆ. ಇದರಿಂದ ಜೀವನ ಸಾಕ್ಷಾತ್ಕಾರವನ್ನು ಪಡೆಯಬಹುದು. ಮನುಷ್ಯರು ಮನಸ್ಸಿನ ಶುದ್ಧಿ ಮತ್ತು ಅಂತರ್ ದೃಷ್ಟಿಯಿಂದ ಅಂತಿಮವಾಗಿ ನಿಬ್ಬಾಣ ಹೊಂದಬಹುದು. ಬುದ್ಧರ ಉಪದೇಶಗಳು ಜ್ಞಾನ ಮಾರ್ಗವನ್ನು ಬೋಧಿಸಿದೆ. ಧಮ್ಮ ಮಾರ್ಗವನ್ನು ಉಪಾಸಕರು ಮತ್ತು ಬೌದ್ಧ ಭಿಕ್ಕು ಇಬ್ಬರು ಅನುಸರಿಸಲು ತಿಳಿಸಲಾಗಿದೆ.ಸಂರ್ಪೂರ್ಣ ಮುಕ್ತಿ ಮಾರ್ಗ ಸಿದ್ಧಿಗೆ ಭಿಕ್ಕುಗಳ ಮತ್ತು ಸಂಘಗಳು ಜೀವನ ನಡವಳಿಕೆಗೆ ಸಂಬಂಧಿಸಿದಂತೆ ತ್ರಿಪಿಠಕಗಳನ್ನು ಬೋಧಿಸಿದ್ದಾರೆ.

ತ್ರಿಪಿಟಕಗಳು

ಅವುಗಳೆಂದರೆ:[೩೧]

  1. ವಿನಯ ಪಿಟಕ: ಭಿಕ್ಕು ಮತ್ತು ಭಿಕ್ಕು ಸಂಘಗಳ ನಡವಳಿಕೆಗಳಿಗೆ ಸಂಬಂಧಿಸಿದ ನಿಯಮಗಳನ್ನು ಕ್ರೋಢೀಕರಿಸಲಾಗಿರುವ ಗ್ರಂಥವಾಗಿದೆ.
  2. ಸುತ್ತ ಪಿಟಕ: ನಾಲ್ಕು ಆರ್ಯ ಸತ್ಯಗಳಿಗೆ ಸಂಬಂಧಿಸಿದಂತೆ ಅನೇಕ ಸಂಭಾಷಣೆಗಳು, ಗೀತೆಗಳು, ಕಥೆ, ಉಪಕಥೆಗಳು ಮುಂತಾದವುಗಳನ್ನು ಸಂಗ್ರಹಿಸಿದ ಗ್ರಂಥವಾಗಿದೆ.
  3. ಅಭಿಧಮ್ಮ ಪಿಟಕ: ಸುತ್ತ ಪಿಟಕದಲ್ಲಿನ ಬೋಧನೆಗಳನ್ನು ಮೂಲ ತತ್ವಗಳನ್ನು ವಿಶದೀಕರಿಸಿದ ಗ್ರಂಥವಾಗಿದೆ.[೩೨]

ಸಂಘ

ಬೌದ್ಧ ಸಂಘಗಳು ಬುದ್ಧನ ಕಾಲದಿಂದಲೂ ಸ್ಥಾಪಿಸಲ್ಪಟ್ಟಿದ್ದವು. ಅವುಗಳಿಗೆ ನಿಜವಾದ ಮಾರ್ಗಸೂಚಿಯನ್ನು ಭಗವಾನ್ ಬುದ್ಧರು ತಮ್ಮ ಬೋಧನೆಯ ಮಾರ್ಗದಿಂದ ತಿಳಿಸಿದರು. ಇಂತಹ ಭಿಕ್ಕು ಸಂಘಗಳು ಇಂದಿಗೂ ವಿಶ್ವದ್ಯಾಂತ ಸಂಘಟಿತವಾಗಿ ಬರ್ಮಾ, ಥೈಲ್ಯಾಂಡ್, ಶ್ರೀಲಂಕಾ, ಕಾಂಬೋಡಿಯಾ, ಲಾವೋಸ್, ಚಿತ್ತಗಾಂಗ್, ಜಪಾನ್, ಚೀನಾ, ಟಿಬೆಟ್, ಇಂದಿಗೂ ತನ್ನ ಮೂಲಸ್ವರೂಪದಲ್ಲಿ ಸಂಘಟನೆ ಇವೆ. ಬೌದ್ಧ ಭಿಕ್ಕು ಮತ್ತು ಭಿಕ್ಕಿಣಿ ಸಂಘಗಳು ಅಮೆರಿಕಾ, ರಷ್ಯ, ಕೆನಡಾ, ಫ್ರಾನ್ಸ್, ಜರ್ಮನಿ ರಾಷ್ಟ್ರಗಳಲ್ಲಿ ಧಮ್ಮದ ಉನ್ನತಿಗಾಗಿ ಸೇವೆ ಮಾಡುತ್ತಿವೆ.

ಡಾ.ಬಿ.ಆರ್. ಅಂಬೇಡ್ಕರ್ ಅವರ ದೃಷ್ಟಿಯಲ್ಲಿ ಬುದ್ಧ

  • ಡಾ.ಬಿ.ಆರ್.ಅಂಬೇಡ್ಕರ್ ಅವರ ದೃಷ್ಟಿಯಲ್ಲಿ, ಭಾರತದ ಚರಿತ್ರೆ ಎಂದರೆ-ಬೌದ್ಧಧರ್ಮ ಮತ್ತು ಬ್ರಾಹ್ಮಣ ಧರ್ಮಗಳ ನಡುವೆ ನಡೆದ ಸಂಘರ್ಷ. ಗೌತಮ ಬುದ್ಧ ಸನ್ಯಾಸಿಯಾಗಲು ಪ್ರಮುಖ ಕಾರಣವೆಂದರೆ - ಶಾಕ್ಯರಲ್ಲಿ ಸಂಘವೊಂದಿತ್ತು. ೨೦ ವರ್ಷ ತುಂಬಿದ ಶಾಕ್ಯ ಯುವಕರೆಲ್ಲ ಆ ಸಂಘಕ್ಕೆ ಕಡ್ಡಾಯವಾಗಿ ಸದಸ್ಯರಾಗಬೇಕಿತ್ತು. ಅದರಂತೆ ಸಿದ್ದಾರ್ಥನು ಆ ಸಂಘದ ಸದಸ್ಯನಾದನು.
  • ತುಸು ಕಾಲಾನಂತರ, ಶಾಕ್ಯರಾಜ್ಯದ ನೆರೆ ರಾಜ್ಯ 'ಕೊಲೀಯ'ದ ನಡುವೆ ಹರಿಯುತ್ತಿದ್ದ, ರೋಹಿಣಿ ನದಿಯ ನೀರಿನ ಹಂಚಿಕೆ ವಿಷಯದಲ್ಲಿ ಎರಡು ರಾಜ್ಯಗಳ ನಡುವೆ ಘರ್ಷಣೆಯಾಗುತ್ತದೆ. ಎರಡು ರಾಜ್ಯಗಳ ಜನರು ರೋಹಿಣಿ ನದಿ ನೀರನ್ನು ತಮ್ಮ ತಮ್ಮಲ್ಲೇ ಉಳಿಸಿಕೊಳ್ಳಲು ಯುದ್ಧ ಮಾಡಲು ಮುಂದಾಗುತ್ತಾರೆ. ಈ ವಿಷಯ ಶಾಕ್ಯಸಂಘದ ಮುಂದೆ ಬರುತ್ತದೆ.
  • ಶಾಕ್ಯಸಂಘದ ಸದಸ್ಯರು ಕೊಲೀಯಾದ ವಿರುದ್ಧ ಯುದ್ಧ ಸಾರಲು ಮುಂದಾಗುತ್ತಾರೆ. ಸಿದ್ಧಾರ್ಥ ಆ ಯುದ್ಧವನ್ನು ವಿರೋಧಿಸುತ್ತಾನೆ. ಸಂಘದ ತೀರ್ಪಿಗೆ ವಿರುದ್ಧವಾಗಿ ನಿಂತ ಸಿದ್ಧಾರ್ಥನಿಗೆ ಶಾಕ್ಯಸಂಘವು ಶಿಕ್ಷೆ ವಿಧಿಸಲು ಮುಂದಾಗಿ, ಮೂರು ವಿಧದ ಶಿಕ್ಷೆಗಳನ್ನು ವಿಧಿಸುತ್ತದೆ.
  1. ಸೈನ್ಯ ಸೇರಿ ಎಲ್ಲರಂತೆ ಯುದ್ಧ ಮಾಡುವುದು.
  2. ಗಡೀಪಾರು ಇಲ್ಲವೇ ಬಹಿಷ್ಕಾರ
  3. ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ
  • ಇವುಗಳಲ್ಲಿ ಒಂದು ಶಿಕ್ಷೆಯನ್ನು ಆಯ್ದು ಕೊಳ್ಳುವಂತೆ ಸೂಚಿಸುತ್ತದೆ. ಸಿದ್ಧಾರ್ಥ ಈ ಮೂರು ಶಿಕ್ಷೆಗಳಲ್ಲಿ ಗಡೀಪಾರಿನ ಶಿಕ್ಷೆಯನ್ನು ಒಪ್ಪಿಕೊಳ್ಳುತ್ತಾನೆ. ಆ ನಂತರ ಸಿದ್ದಾರ್ಥ ಸನ್ಯಾಸಿಯಾದನು ಎಂದು ಹೇಳುತ್ತಾ, ಇತಿಹಾಸಕಾರರು ಮೂಲಕತೆಯನ್ನು ಬಿಟ್ಟು, ಕಟ್ಟು ಕತೆಯನ್ನು ಹೆಣೆದು, ಇಡೀ ಚರಿತ್ರೆಯನ್ನೇ ತಿರುಚುವ ಪ್ರಯತ್ನ ಮಾಡಿದ್ದಾರೆ. ನಾನೊಬ್ಬ ಚರಿತ್ರಾಕಾರನಾಗಿ ಆಳವಾದ ಅಧ್ಯಯನ, ಸಂಶೋಧನೆಯಿಂದ ಈ ವಿಷಯವನ್ನು ಶ್ರುತಪಡಿಸಿದ್ದೇನೆ ಎಂದಿದ್ದಾರೆ.

ಕೃತಿ ನೆರವು

  1. ಬುದ್ಧ ಭಗವಾನ್ - Dilip.k
  2. ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳು - ವಿಮೋಚನಾ ಗ್ರಂಥ-ಸಂಪಾದಕರು-ರಾಚಪ್ಪಾಜಿ\
  3. ಭಾರತದ ಇತಿಹಾಸದಲ್ಲಿ ಬುದ್ಧ-ಪ್ರಶಾಂತ್ ಟಿ ಎಂ Dhulia Ranjith

ಉಲ್ಲೇಖಗಳು

  1. Cousins 1996, pp. 57–63.
  2. Norman 1997, p. 33.
  3. "Lumbini, the Birthplace of the Lord Buddha". UNESCO. Retrieved 7 September 2013.
  4. Gethin (1998), p. 8.
  5. Buswell & Lopez 2014, p. 398.
  6. "Lumbini, the Birthplace of the Lord Buddha". World Heritage Convention. UNESCO. Archived from the original on 31 July 2010. Retrieved 26 May 2011.
  7. "The Astamahapratiharya: Buddhist pilgrimage sites". Victoria and Albert Museum. Archived from the original on 31 October 2012. Retrieved 25 December 2012.
  8. Shaw, Sarah. Buddhist Meditation: An Anthology of Texts from the Pali Canon. 2006. p. 114
  9. Beal (1875), p. 37.
  10. Jones (1952), p. 11.
  11. Narada (1992), pp. 9–12.
  12. Strong (2001), p. 55.
  13. Gethin (1998), p. 20.
  14. Garling, Wendy (2016). Stars at Dawn: Forgotten Stories of Women in the Buddha's Life. Shambhala Publications. p. 83. ISBN 9780834840300.
  15. "Dhammapada Verse 128 Suppabuddhasakya Vatthu". Tipitaka.net.
  16. Meeks (2016), p. 139.
  17. Gethin (1998), p. 21.
  18. Strong (2001), p. 63.
  19. Conze (1959), pp. 39–40.
  20. Warder (2000), p. 322.
  21. Schumann (2003), p. 44.
  22. Wynne, Alexander (2019). "Did the Buddha exist?". JOCBS. 16: 98–148.
  23. Narada (1992), pp. 15–16.
  24. Strong (2015), The Great Departure.
  25. Schumann (2003), p. 47.
  26. Anālayo (2011), p. 175.
  27. Anālayo (2011), p. 236.
  28. Anālayo (2011), p. 240.
  29. "The Golden Bowl". Life of the Buddha. Archived from the original on 3 March 2013. Retrieved 25 December 2012 – via BuddhaNet.
  30. Ñāṇamoli Bhikkhu (1992), p. 30.
  31. "Tipitaka | Buddhist canon". Encyclopedia Britannica (in ಇಂಗ್ಲಿಷ್). Archived from the original on 2020-04-27. Retrieved 2019-03-12.
  32. "Abhidharma Pitaka." Encyclopædia Britannica. Ultimate Reference Suite. Chicago: Encyclopædia Britannica, 2008.