ಸದಸ್ಯ:Revathikainthaje/sandbox 23
ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ | |
---|---|
ಜನನ | ೨೧-೧೨-೧೯೩೬ |
ವೃತ್ತಿ | ತಾಳಮದ್ದಳೆ ಅರ್ಥಧಾರಿಗಳು,ಲೇಖಕರು. |
ರಾಷ್ಟ್ರೀಯತೆ | ಭಾರತೀಯ |
ವಿಷಯ | ಪುರಾಣ-ಸಾಹಿತ್ಯ |
ಯಕ್ಷಗಾನ ತಾಳಮದ್ದಳೆ ಕ್ಷೇತ್ರದಲ್ಲಿ ’ಮೂಡಂಬೈಲು’ ಎಂದೇ ಪರಿಚಿತರಾಗಿರುವ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗಳು ನಮ್ಮ ನಡುವಿನ ಓರ್ವ ಹಿರಿಯ ವಿದ್ವಾಂಸರು, ಕಲಾವಿದರು, ಪ್ರವಚನಕಾರರು, ಬರಹಗಾರರು, ನಿವೃತ್ತ ಮುಖ್ಯೋಪಾಧ್ಯಾಯರು ಹಾಗೂ ಅಂಚೆ ಪಾಲಕರು; ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ದುಡಿದವರು.[೧]
ಜನನ
ಬದಲಾಯಿಸಿದಕ್ಷಿಣ ಕನ್ನಡ ಜಿಲ್ಲೆ ಯ ಬಂಟ್ವಾಳ ತಾಲೂಕಿನ ಪುಣಚಾ ಗ್ರಾಮದ, ಕೇರಳ ದ ಗಡಿಗೆ ಹೊಂದಿಕೊಂಡಂತಿರುವ ಸಾರಡ್ಕದ ಬಳಿಯ ಮೂಡಂಬೈಲು ಚಕ್ರಕೋಡಿ ವೆಂಕಟ್ರಮಣ ಶಾಸ್ತ್ರಿ-ಪರಮೇಶ್ವರಿ ಅಮ್ಮದಂಪತಿಯರ ಪುತ್ರನಾಗಿ ೨೧-೧೨-೧೯೩೬ರಂದು ಜನಿಸಿದರು.
ವಿದ್ಯಾಭ್ಯಾಸ
ಬದಲಾಯಿಸಿಬಡತನದಿಂದ ಕೂಡಿದ್ದ ಬಾಲ್ಯ. ಪ್ರಾಥಮಿಕ ವಿದ್ಯಾಭ್ಯಾಸವನ್ನು ಪುಣಚಾ ಪಂಚಾಯತು ಶಾಲೆಯಲ್ಲಿ ಹಾಗೂ ಹೈಸ್ಕೂಲಿನ ವಿದ್ಯಾಭ್ಯಾಸವನ್ನು ಪೆರ್ಲ ಸತ್ಯನಾರಾಯಣ ಹೈಸ್ಕೂಲಿನಲ್ಲಿ ಅಭ್ಯಸಿಸಿದರು. ಎಸ್.ಎಸ್.ಎಲ್.ಸಿ.ಯಲ್ಲಿ ಗೋಲ್ಡ್ ಮೆಡಲ್ ಪಡೆದುಕೊಂಡರು. ಎಸ್.ಎಸ್.ಎಲ್.ಸಿ.ಯಾಗುವ ಮೊದಲೇ "ಹಿಂದೀ ವಿಶಾರದ" ಪರೀಕ್ಷೆಯನ್ನು ಪೂರೈಸಿಕೊಂಡರು. ಹಣಕಾಸಿನ ತೊಂದರೆಯಿಂದಾಗಿ ವಿದ್ಯಾಭ್ಯಾಸವನ್ನು ಅಲ್ಲಿಗೇ ಮೊಟಕುಗೊಳಿಸಿ, ಹಿತೈಷಿಗಳ ಒತ್ತಾಯದಿಂದಾಗಿ ಅಧ್ಯಾಪಕ ತರಬೇತಿ ಪಡೆಯಲು ಮಂಗಳೂರಿಗೆ ಹೋದರು. ಮುಂದೆ ಬಿ.ಎ., ಬಿ.ಎಡ್., 'ಹಿಂದಿ ರಾಷ್ಟ್ರಭಾಷಾ ಪ್ರವೀಣ' ಮಾಡಿಕೊಂಡರು.
ಸಂಸಾರ
ಬದಲಾಯಿಸಿಇವರ ಪೂರ್ವಜರು ಆರ್ಷೇಯ ಗ್ರಂಥಗಳಿಗೆ ವ್ಯಾಖ್ಯಾನಗಳನ್ನು ಬರೆದಿದ್ದರು. ಸಂಸ್ಕೃತ, ನ್ಯಾಯ, ತರ್ಕ, ವ್ಯಾಕರಣ, ವಾಸ್ತುಶಿಲ್ಪ, ಜ್ಯೋತಿಷ್ಯ, ಸ್ಮೃತಿ ಇತ್ಯಾದಿಗಳಲ್ಲಿ ಪ್ರಕಾಂಡ ಪಂಡಿತರಾಗಿದ್ದರು. ಕೃಷ್ಣ ಶಾಸ್ತ್ರಿ (ಇವರ ಅಜ್ಜನ ಅಜ್ಜ) ಎಂಬುವರು ಚಕ್ರಕೋಡಿ ಪಂಚಾಂಗದ ಪ್ರವರ್ತಕರು. ಇವರ ತಂದೆಯವರು ಯಕ್ಷಗಾನದ ಹಾಡುಗಳನ್ನು ಬಲ್ಲವರಾಗಿದ್ದರು. ಅಣ್ಣಂದಿರು ಹವ್ಯಾಸಿ ಭಾಗವತರಾಗಿದ್ದರು. ಅಕ್ಕ ಶಂಕರಿಯವರೂ ಯಕ್ಷಗಾನದ ಹಾಡುಗಳನ್ನು ಹಾಡುತ್ತಿದ್ದರು. ಬಾಲ್ಯದಲ್ಲಿಯೇ ಶಾಸ್ತ್ರ, ಪುರಾಣ, ಸಂಪ್ರದಾಯಗಳಿಗೂ - ಯಕ್ಷಗಾನಕ್ಕೂ ಅನುವು ದೊರೆತ ವಾತಾವರಣ ಸಿಕ್ಕಿತ್ತು.
ಪತ್ನಿ ಗೌರಿ, ಐವರು ಹೆಣ್ಣು ಮಕ್ಕಳು. ಎಲ್ಲ ಹೆಣ್ಣು ಮಕ್ಕಳೂ ಸಂಸಾರಸ್ಥರು.
ವೃತ್ತಿ-ಪ್ರವೃತ್ತಿ
ಬದಲಾಯಿಸಿಪ್ರೌಢ ವಿದ್ಯಾಭ್ಯಾಸ ಪೆರ್ಲದಲ್ಲಿ ನಡೆಯುತ್ತಿದ್ದಾಗ ಪೆರ್ಲ ಕೃಷ್ಣಭಟ್ಟರು ಗುರುಗಳಾಗಿದ್ದರು. ಮುಳಿಯ ಮಹಾಬಲ ಭಟ್ಟರು,ದೇರಾಜೆ ಸೀತಾರಾಮಯ್ಯನವರು, ಕೋರಿಕ್ಕಾರು ವಿಷ್ಣುಮೂರ್ತಿಯವರು, ಚಿಕ್ಕಪ್ಪ ರೈಗಳೇ ಮೊದಲಾದವರ ಒಡನಾಟ ಆಗ ದೊರಕಿತ್ತು. ಆ ಸಮಯದಲ್ಲಿ ಒಂದು ದಿನ ಯಕ್ಷಗಾನದಲ್ಲಿ ಇವರೂ ಒಂದುವೇಷ (ಕೃಷ್ಣನ ವೇಷ) ಮಾಡಿದ್ದರು.೧೯೫೪ರಲ್ಲಿ ಅಧ್ಯಾಪಕ ತರಬೇತಿಗಾಗಿ ಮಂಗಳೂರಿಗೆ ಸೇರಿದಂದಿನಿಂದ ತಾಳಮದ್ದಳೆಯ ಅರ್ಥಧಾರಿಗಳೊಂದಿಗೆ ಒಡನಾಡುವ ಅವಕಾಶ ದೊರಕತೊಡಗಿತು. ಹೀಗೆ ಒಂದು ದಿನ ಆಕಸ್ಮಿಕವಾಗಿ ’ಪಂಚವಟಿ ಪ್ರಸಂಗ’ ಕ್ಕೆ ಭಾಗವತರಾಗಿ ಪ್ರವೇಶ ಮಾಡುವಂತಾಯಿತು. ತದನಂತರ ಇನ್ನೂ ಕೆಲವು ತಾಳಮದ್ದಳೆಗಳಿಗೆ ಭಾಗವತರಾದರು. ಅನಂತರ ಇವರ ಅಧ್ಯಾಪಕ ತರಬೇತಿ ಶಾಲೆಯಲ್ಲಿ ನಡೆದಿದ್ದ ’ಸೌಭದ್ರ ಕಲ್ಯಾಣ’ ದಲ್ಲಿ ಕೃಷ್ಣನ ಪಾತ್ರವನ್ನು ವಹಿಸಿಕೊಂಡಿದ್ದವರು ಬರಲಾಗದಿದ್ದುದರಿಂದ ಕೃಷ್ಣನಾಗಿ ಅರ್ಥಗಾರಿಕೆಗೆ ರಂಗಪ್ರವೇಶ ಮಾಡಿದರು.
೧೯೫೬ ರಲ್ಲಿ, ಮುಖ್ಯೋಪಾಧ್ಯಾಯರಾಗಿ ಮೂಡಂಬೈಲಿನ ಪುಣಚಾ ಪಂಚಾಯತು ಶಾಲೆಗೆ ಸೇರ್ಪಡೆಗೊಂಡರು. ಆಗ ಕೇವಲ ಎರಡು ಜನ ಅಧ್ಯಾಪಕರಿದ್ದ ಶಾಲೆ ಮುಂದೆ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಪರಿವರ್ತನೆಯಾಯಿತು. ಅಲ್ಲಿ ನಾನಾ ರೀತಿಯ ಶಾಲಾಭಿವೃಧ್ಧಿ ಚಟುವಟಿಕೆಗಳನ್ನು ಪ್ರಾರಂಭಿಸಿದರು. ಶಾಲಾ ಮಕ್ಕಳ ಸಾಹಿತ್ಯಿಕ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡಿದರು. ಹೀಗಾಗಿ ಶಾಲಾ ತಪಾಸಣಾ ಸಮಯದಲ್ಲಿ "ಎ ಗುಡ್ ಸ್ಕೂಲ್ ಇನ್ ಆಲ್ ರೆಸ್ಪೆಕ್ಟ್ಸ್" ಎಂಬ ಶ್ಲಾಘ್ಹನೆಗೆ ಶಾಲೆ ಪಾತ್ರವಾಯಿತು. ೩೮ ವರ್ಷಗಳ ತನ್ನ ಪೂರ್ಣ ಸೇವೆಯನ್ನು ಒಂದೇ ಶಾಲೆಯಲ್ಲಿ ಮಾಡಿ ಸರ್ವತೋಮುಖ ಅಭಿವೃಧ್ಧಿಗೆ ನಿಜಾರ್ಥದಲ್ಲಿ ಶ್ರಮಿಸಿದರು. ಶಾಲೆಯಲ್ಲಿ ಹಲವರ ಅಪೇಕ್ಷೆಯಂತೆ ’ತಾಳಮದ್ದಳೆ ಸಂಘ’ ಪ್ರಾರಂಭಿಸಿ, ಪ್ರತೀ ಶನಿವಾರಗಳಂದು ಹಲವರನ್ನು ಸೇರಿಸಿಕೊಂಡು ರಾತ್ರೆಯಿಂದ ಬೆಳಗಿನ ತನಕ ತಾಳಮದ್ದಳೆ ನಡೆಸುತ್ತಿದ್ದರು. ಇದಕ್ಕೆ ಊರವರ ಸಹಕಾರ ನಿರಂತರವಾಗಿತ್ತು. ಕುಕ್ಕಾಜೆ ಸುಬ್ರಾಯ ಭಟ್ಟರು ಇವರನ್ನು ಯಕ್ಷಗಾನಕ್ಕೆ ಧುಮುಕುವಂತೆ ಪ್ರಚೋದಿಸಿದವರಾಗಿದ್ದರು.
ವಾರಕ್ಕೆರಡು ಬಾರಿಯಷ್ಟೇ ಅಂಚೆ ಬಟವಾಡೆಯ ಲಭ್ಯವಿದ್ದ ಈ ಊರಿಗೆ ಒಂದು ಅಂಚೆ ಕಛೇರಿಯನ್ನು ತೆರೆಯುವಲ್ಲಿ ಸಫಲರಾಗಿ ೩೮ ವರ್ಷಗಳ ಅಂಚೆಪಾಲಕರಾಗಿಯೂ ದುಡಿದರು. ಯುವಕ ಮಂಡಲವನ್ನು ಸ್ಥಾಪಿಸಿದಾಗ ಅದರ ಕಾರ್ಯದರ್ಶಿಯಾಗಿ ದುಡಿದು ಊರಜನರಿಗೆ ನೆರವಾದರು.
ರೋಗಿಗಳಿಗೆ ವೈದ್ಯರು ಸೂಚಿಸಿದ ಇಂಜೆಕ್ಷನ್ ಕೊಡುವುದು, ಊರಿನಲ್ಲಿ ಮದುವೆ ಸಮಾರಂಭಗಳಿಗೆ ಮಂಟಪ ತಯಾರಿಸಿ ಕೊಡುವುದು, ದೂರದ ಊರುಗಳಿಗೆ ಉದ್ಯೋಗದ ಸಂದರ್ಶನಕ್ಕೆ (ವಿದ್ಯಾರ್ಥಿಗಳನ್ನು) ಕರೆದುಕೊಂಡು ಹೋಗುವುದು ಮೊದಲಾದ ಸಾರ್ವಜನಿಕ ಕೆಲಸಗಳನ್ನು ಖುಷಿಯಿಂದ ನಿರ್ವಹಿಸುತ್ತಿದ್ದರು.
ಕೃಷಿಯೊಂದಿಗೆ ಜೇನುಕೃಷಿಯಲ್ಲಿಯೂ ಆಸಕ್ತರಾಗಿದ್ದರು. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅತೀ ಹೆಚ್ಚುಜೇನುಪೆಟ್ಟಿಗೆ ಇಟ್ಟವನು ಮತ್ತು ಮಾರಾಟಮಾಡಿದವನೆಂಬ ಆಧಾರದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಿಂದ ಪ್ರಶಸ್ತಿಯನ್ನು ಪಡಕೊಂಡಿದ್ದರು.
ಹವ್ಯಾಸ
ಬದಲಾಯಿಸಿತಾನು ಓದಿದ, ನೋಡಿದ ವಿಚಾರಗಳನ್ನು ನೆನಪಿನಲ್ಲಿಡಲು ಟಿಪ್ಪಣಿಮಾಡಿಕೊಳ್ಳುವುದು ಎಳವೆಯಿಂದಲೇ ಇವರ ಅಭ್ಯಾಸ. ಏಳನೆಯ ತರಗತಿಯಲ್ಲಿ ಬರೆದಿಟ್ಟುಕೊಂಡಿದ್ದದು ಈಗಲೂ ಇವರ ಬಳಿಯಿದೆ. ಅಲಂಕಾರ ಶಾಸ್ತ್ರ, ಖಗೋಳಶಾಸ್ತ್ರ, ಭಾಷಾಶಾಸ್ತ್ರ, ಸತ್ಯಾರ್ಥ ಪ್ರಕಾಶನ, ಪರಮಹಂಸರ ತತ್ವಗಳು, ಮಹರ್ಷಿಗಳ ಚರಿತ್ರೆ, ಪಂಚ ಚರಿತ್ರ, ಬಾಣಭಟ್ಟನ ಕಾದಂಬರಿ, ಪಂಪ ಭಾರತ,ಗದಾಯುಧ್ಧ, ಧರ್ಮಾಮೃತ, ಹರಿಶ್ಚಂದ್ರ ಕಾವ್ಯ, ರಾಮಾಶ್ವಮೇಧ, ಗದುಗಿನ ಭಾರತ, ಚನ್ನಬಸವ ಪುರಾಣ, ಜೈಮಿನಿ ಭಾರತ, ಹಣಪ್ರಪಂಚ.....ಇತ್ಯಾದಿ ಇನ್ನೂ ಅನೇಕ ಗ್ರಂಥಗಳಿಂದ ಮಾಡಿದ ಟಿಪ್ಪಣಿಗಳ ಸಂಗ್ರಹ ಇವರ ಬಳಿಯಿವೆ. ಅಂಚೆ ಚೀಟಿ ಸಂಗ್ರಹ, ಪತ್ರಿಕಾ ಚಿತ್ರ ಸಂಗ್ರಹ, ನಾಣ್ಯ ಸಂಗ್ರಹ, ವಿಜ್ಞಾನ ಲೇಖನ ಸಂಗ್ರಹಗಳೂ ಇವರಲ್ಲಿವೆ.
ಸಾಹಿತ್ಯ ಕ್ಷೇತ್ರ
ಬದಲಾಯಿಸಿತಾಳಮದ್ದಳೆ ಕ್ಷೇತ್ರಕ್ಕೆ ಪ್ರವೇಶ ಆಕಸ್ಮಿಕವಾಗಿಯಾದರೂ ಅದರ ಕಡೆಗೆ ಒಲವು ಜಾಸ್ತಿಯೇ. ಅವರ ಅಭಿಪ್ರಾಯದಂತೆ "ತಾಳಮದ್ದಳೆ ಒಂದು ಉಚ್ಛಮಟ್ಟದ ಕಲೆ. ವಾಚಿಕಾಭಿನಯದಲ್ಲಿ ಆಂಗಿಕವಾದ ಎಲ್ಲಾ ಭಾವನೆಗಳನ್ನು ತುಂಬಿ ಶ್ರೋತೃಗಳನ್ನು ಅಹೋರಾತ್ರಿ ತನ್ಮಯರನ್ನಾಗಿ ಮಾಡುವ ಶಕ್ತಿ ಇದರಲ್ಲಿದೆ. ಕೇವಲ ಕಲಾತ್ಮಕತೆ ಮತ್ತು ತಾತ್ಕಾಲಿಕ ಆನಂದ ಮಾತ್ರವಲ್ಲದೆ ಜ್ಞಾನದಾಹವೂ, ಪ್ರತಿಭಾ ಸಂಪನ್ನತೆಯೂ, ಪ್ರತ್ಯುತ್ಪನ್ನಮತಿತ್ವವೂ ಇದೆ. ಸಭೆಯ ಪ್ರತಿಕ್ರಿಯೆಗೆ ಬೇಕಾದಂತೆ ಸ್ಪಂದನವೂಇದೆ."
ಸಂವಾದಗಳಲ್ಲಿ ಉತ್ತರಗಳನ್ನು ಕೊಡುವಾಗ ಥಟ್ಟನೆಯ ಜಾಣ್ಮೆಯ ಉತ್ತರ ಕೊಡಬಲ್ಲವರಾದರೂ ಪೌರಾಣಿಕ ಘಟನೆ - ಪೂರ್ವಕಥೆಗಳನ್ನು ಆಧರಿಸಿ ಉತ್ತರಿಸುತ್ತಾರೆ. ವಾಲ್ಮೀಕಿ ರಾಮಾಯಣ, ತೊರವೆರಾಮಾಯಣ, ಭಾಗವತ, ಹರಿಶ್ಚಂದ್ರಕಾವ್ಯ, ಭರತೇಶ ವೈಭವ, ಭಾರತ ಕಥಾಮಂಜರಿಯೇ ಮೊದಲಾದ ಗ್ರಂಥಗಳನ್ನು ಅಧ್ಯಯನ ಮಾಡಿ ಅವುಗಳ ಸಾರವತ್ತದ ಅಂಶಗಳನ್ನು ಸಂದರ್ಭೋಚಿತವಾಗಿ ವೇದಿಕೆಯಲ್ಲಿ ಮಂಡಿಸುತ್ತಾರೆ. ಕಿರಿಯ ಅರ್ಥಧಾರಿಗಳಿಗೆ, ಆಸಕ್ತರಿಗೆ ಪುರಾಣಸಾಹಿತ್ಯದ ಬಗ್ಗೆ ತಿಳಿದುಕೊಳ್ಳಲು ಬಹಳಷ್ಟು ವಿಷಯಗಳು ಇವರ ಅರ್ಥಗಾರಿಕೆಯಲ್ಲಿ ಲಭ್ಯವಾಗುತ್ತವೆ. ಇವರಿಂದ ರಚಿಸಲ್ಪಟ್ಟ ಕೃತಿಗಳು ಈ ನಿಟ್ಟಿನಲ್ಲಿ ಉಪಯುಕ್ತವಾಗಿವೆ.
ಸಾಹಿತ್ಯರಚನೆಯನ್ನು ಮಾಡಿದ ಇವರು ಕಾವ್ಯಪ್ರವಚನವನ್ನೂ ಮಾಡಿರುತ್ತಾರೆ. ಮಹಾಕವಿ ಲಕ್ಶ್ಮೀಶ ನೆಚ್ಚಿನ ಕವಿ. ಕೈಂತಜೆ ನರಸಿಂಹ ಭಟ್ಟರು, ಅಮೈ ಈಶ್ವರ ಭಟ್ಟರು, ಪದ್ಯಾಣ ಗಣಪತಿ ಭಟ್ಟರು ಮೊದಲಾದವರ ವಾಚನಗಳಿಗೆ ಪ್ರವಚನಗಳನ್ನು ಮಾಡಿರುತ್ತಾರೆ.
೧೯೯೪ರಲ್ಲಿ ಶಾಸ್ತ್ರಿಗಳ ಬಂಧುಗಳು ಹಾಗೂ ಅಭಿಮಾನಿಗಳಿಂದ "ಮೂಡಂಬೈಲು ಗೋಪಾಲಕೃಷ್ಣಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಟಾನ" ಸ್ಥಾಪನೆಯಾಯಿತು. ಈಪ್ರತಿಷ್ಟಾನವು ಶಾಸ್ತ್ರಿಗಳಿಗೆ ಎಪ್ಪತ್ತೈದು ತುಂಬಿದ ಸಂದರ್ಭದಲ್ಲಿ (೨೦೧೨ರಲ್ಲಿ) "ಮೂಡಂಬೈಲು ಶಾಸ್ತ್ರಿ-೭೫" ಎಂಬ ಗೌರವ ಗ್ರಂಥವನ್ನು ಸಮರ್ಪಿಸಿದೆ. [೨] ಇವರ ತಾಳಮದ್ದಳೆ-ಸಾಹಿತ್ಯ ಕ್ಷೇತ್ರದ ಒಡನಾಡಿಗಳು, ಬಂಧುಗಳು, ಶಿಷ್ಯರು ಹಾಗೂ ವಿದ್ವಾಂಸರು ಇವರ ಕುರಿತು ಬರೆದ ಲೇಖನಗಳು ಈ ಪುಸ್ತಕದಲ್ಲಿವೆ.
ಲೇಖಕ, ಯಕ್ಷಗಾನ ಅರ್ಥಧಾರಿ ಶ್ರೀ ರಾಧಾಕೃಷ್ಣ ಕಲ್ಚಾರ್ ಅವರು ಶಾಸ್ತ್ರಿಗಳ ಜೀವನದ ಕುರಿತು ಬರೆದಿರುವ "ಪುರಾಣಕೋಶ ವಿಹಾರಿ-ಅರ್ಥಧಾರಿ-ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ" ಎಂಬ ಹೊತ್ತಗೆಯು ಕಾಂತಾವರ ಕನ್ನಡಸಂಘದ ’ನಾಡಿಗೆ ನಮಸ್ಕಾರ’ ಗ್ರಂಥಮಾಲೆಯಲ್ಲಿ ೨೦೧೫ ರಲ್ಲಿ ಪ್ರಕಟವಾಗಿದೆ.
ಶಾಸ್ತ್ರಿಗಳವರು ತಾಳಮದ್ದಳೆಯಲ್ಲಿ ಪುರುಷ ಹಾಗೂ ಸ್ತ್ರೀ ಪಾತ್ರಗಳೆರಡರನ್ನೂ ನಿರ್ವಹಿಸಿರುತ್ತಾರೆ. ಶ್ರೀರಾಮ, ಶ್ರೀಕೃಷ್ಣ, ಧರ್ಮರಾಯ, ಅರ್ಜುನ, ಭೀಮ ,ಹನುಮಂತ, ಕರ್ಣ, ಭೀಷ್ಮ, ತಾಮ್ರಧ್ವಜ, ಅತಿಕಾಯ, ಅಂಗದ, ಇಂದ್ರಜಿತು, ವಿಭೀಷಣ, ಸುಗ್ರೀವ....ಮೊದಲಾದ ಪುರುಷ ಪಾತ್ರಗಳನ್ನೂ ಅಂಬೆ, ಮಂಡೋದರಿ, ಕೈಕೆ, ಸೀತೆ, ದಾಕ್ಷಾಯಿಣಿ, ಪ್ರಭಾವತಿ, ದ್ರೌಪದಿ, ತಾರೆ,ಶೂರ್ಪನಖಿ, ರಾಗಮುಖಿ....ಇತ್ಯಾದಿ ವಿಭಿನ್ನ ಸ್ತ್ರೀ ಪಾತ್ರಗಳನ್ನೂ ಮಾಡಿರುತ್ತಾರೆ.
ಪ್ರಕಟಿತ ಸಾಹಿತ್ಯಕೃತಿಗಳು
ಬದಲಾಯಿಸಿ- ಮಹಾಭಾರತ ಕೋಶ
ಆರು ನೂರಕ್ಕೂ ಹೆಚ್ಚು ಪುಟಗಳನ್ನು ಹೊಂದಿದೆ. ವ್ಯಾಸ ಭಾರತದ ಮುಖ್ಯ ಪಾತ್ರಗಳ ಸೂಕ್ಷ್ಮ ಪರಿಚಯವಿದೆ. ಪೌರಾಣಿಕ ವ್ಯಕ್ತಿಗಳ ಹೆಸರುಗಳು, ಸ್ಥಳಗಳು, ಆಯುಧ ವಿಶೇಷಗಳು, ಮಹಾನದಿಗಳು, ಪರ್ವತಗಳು, ದ್ವೀಪಖಂಡಗಳು, ಯಕ್ಷ - ರಾಕ್ಷಸರು.. ಹೀಗೆ ಹೆಸರು - ಅವುಗಳ ಹಿನ್ನೆಲೆಯ ಬಗ್ಗೆ ಮಾಹಿತಿ ಇದೆ.
- ವಾಲ್ಮೀಕಿ ರಾಮಾಯಣ ಕೋಶ
ಇದು ಪಂಡಿತ ರಾಮಕುಮಾರ ಶರ್ಮರ ಹಿಂದೀಕೃತಿಯ ಅನುವಾದವೆಂದಾದರೂ ಮೂಲಕೃತಿಯಲ್ಲಿರುವ ವಿವರಗಳಿಗೆ ಮತ್ತಷ್ಟು ಮಾಹಿತಿಗಳನ್ನು ಸೇರಿಸಿದ್ದಾರೆ. ಕೆಲವೊಂದೆಡೆ ವೈಜ್ಞಾನಿಕ ಹೆಸರನ್ನೂ ನೀಡಿದ್ದಾರೆ.
- ಅರ್ಥಸಹಿತ ಕುಮಾರವಿಜಯ
ಕವಿ ಮುದ್ದಣನ ಕುಮಾರವಿಜಯ (ಶೂರ ಪದ್ಮಾಸುರ ಕಾಳಗ) ಪ್ರಸಂಗದ ಪದ್ಯಗಳು ಕ್ಲಿಷ್ಟಕರವಾಗಿದ್ದು, ಆ ಪದ್ಯಗಳಿಗೆ ಸರಳವಾದ ಭಾಷೆಯಲ್ಲಿ ಅರ್ಥವಿವರಣೆಯನ್ನು ನೀಡಿದ್ದಾರೆ. ಇದು ಎರಡನೆಯ ಮುದ್ರಣ ಕಂಡಿದೆ.
- ದಶಾವತಾರ ಉಪನ್ಯಾಸಗಳು
ಒಂದೊಂದು ಅವತಾರಗಳಿಗೂ ಇರುವ ಮಹತ್ವ, ಉದ್ದೇಶ, ಅವತಾರದ ಪರಿಣಾಮಗಳೆಲ್ಲವನ್ನು ತಿಳಿಸಿದ್ದಾರೆ.
- ಮಾತಿನ ಮಹಾಕವಿ ಶೇಣಿ ಗೋಪಾಲಕೃಷ್ಣ ಭಟ್ಟ
ಶೇಣಿಯವರ ಜೀವನ ಚರಿತ್ರೆ - ಸಂಕ್ಷಿಪ್ತವಾಗಿ. ಕಾಂತಾವರ ಕನ್ನಡ ಸಂಘದ ’ನಾಡಿಗೆ ನಮಸ್ಕಾರ’ ಗ್ರಂಥಮಾಲೆಯಲ್ಲಿ ಪ್ರಕಟಗೊಂಡ ಕೃತಿ.
- ಏಕಾಂಕ ನಾಟಕಗಳು
(೧) ಲವಕುಶ, (೨)ಪ್ರಹ್ಲಾದ, (೩) ಭಕ್ತ ಮಾರ್ಕಾಂಡೇಯ, (೪) ಮಯೂರ ಧ್ವಜ, (೫) ಕನಕದಾಸ, (೬) ಧ್ರುವ, (೭) ಪುರಂದರದಾಸ, (೮) ಚಂದ್ರಹಾಸ, (೯) ಬಲಿಚಕ್ರವರ್ತಿ (೧೦) ಧರ್ಮಪಾಲ, (೧೧) ಗುರುಭಕ್ತಿ, (೧೨) ಭದ್ರಾಂಗ, (೧೩) ಅಪರಾಧಿ ಯಾರು?. ಇವುಗಳಲ್ಲದೆ ಹಲವು ಬಿಡಿ ಲೇಖನಗಳನ್ನು ಬರೆದಿರುತ್ತಾರೆ. ಒತ್ತೆಕೋಲದ ಬಗ್ಗೆ ಬರೆದ ಸುದೀರ್ಘ ಪ್ರಬಂಧವೊಂದು ಉಡುಪಿಯ ತೋನ್ಸೆ ಮಾಧವ ಪೈಗಳವರ ಅಭಿನಂದನಾ ಗ್ರಂಥದಲ್ಲಿ ಪ್ರಕಟವಾಗಿದೆ.
ಪ್ರಶಸ್ತಿ-ಪುರಸ್ಕಾರಗಳು
ಬದಲಾಯಿಸಿ- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (ಯಕ್ಷಗಾನ-ಬಯಲಾಟ ಕ್ಷೇತ್ರದಲ್ಲಿನ ಸೇವೆಗಾಗಿ ದಕ್ಷಿಣ ಕನ್ನಡ ಜಿಲ್ಲೆಯಿಂದ ೨೦೧೫ ರಲ್ಲಿ.)[೩]
- ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ
- ಪೊಳಲಿ ಶಂಕರನಾರಾಯಣ ಪ್ರಶಸ್ತಿ
- ಮಟ್ಟಿ ಮುರಳೀಧರ ರಾವ್ ಪ್ರಶಸ್ತಿ
- ಕೀಲಾರು ಪ್ರತಿಷ್ಟಾನದ ಶೇಣಿ ಪ್ರಶಸ್ತಿ
- ಕೀರಿಕ್ಕಾಡು ಪ್ರಶಸ್ತಿ [೪]
- ವಿದ್ವಾನ್ ತಾಳ್ತಜೆ ಕೇಶವ ಭಟ್ ಪ್ರಶಸ್ತಿ
- ಕೆರೆಮನೆ ಶಂಭು ಹೆಗಡೆ ಪ್ರಶಸ್ತಿ
- ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯ ಸ್ಮಾರಕ ಗೌರವ ಪುರಸ್ಕಾರ....ಇನ್ನೂ ಇಂತಹ ಹಲವು ಪ್ರಶಸ್ತಿಗಳಲ್ಲದೇ ರಾಜ್ಯಮಟ್ಟದ ಅಂಚೆ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದ.ಕ.ಜಿಲ್ಲಾ ಸಾಹಿತ್ಯ ಸಮ್ಮೇಳನ..ಹೀಗೆ ಅನೇಕ ಸಂಘ-ಸಂಸ್ಥೆಗಳು, ಮಠಾಧಿಪತಿಗಳು ಇವರನ್ನುಸನ್ಮಾನಿಸಿವೆ. [೫]
- ದಿನಾಂಕ ೨೩, ೨೪ ರ ಫೆಬ್ರವರಿ ೨೦೧೩ ರಂದು ಕಲ್ಲಡ್ಕದಲ್ಲಿ ಜರುಗಿದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮತ್ತು ಸನ್ಮಾನ.
- ದಿನಾಂಕ ೨, ೩, ೪ ರ ಜನವರಿ ೨೦೧೫ ರಂದು ಪುತ್ತೂರಿನಲ್ಲಿ ಜರುಗಿದ ಅಖಿಲ ಭಾರತ ಯಕ್ಷಗಾನ ಸಮ್ಮೇಳನದ ಅಧ್ಯಕ್ಷತೆ.[೬]
- ದೂರದರ್ಶನದಲ್ಲಿ ಪ್ರಸಾರವಾದ ’ಶ್ರೀರಾಮ ಪರಂಧಾಮ’ ತಾಳಮದ್ದಳೆಯಲ್ಲಿ ದೂರ್ವಾಸನ ಪಾತ್ರ.
- ದೂರದರ್ಶನ ಚಂದನ ವಾಹಿನಿಯ ’ಬೆಳಗು’ ಕಾರ್ಯಕ್ರಮದಲ್ಲಿ ಸಂದರ್ಶನ.
- ಮಂಗಳೂರು ಆಕಾಶವಾಣಿಯಲ್ಲಿ ಮೂರು ಬಾರಿ ಸಂದರ್ಶನ. [೭]
- ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದ ’ಪೆರ್ಲ ಕೃಷ್ಣ ಭಟ್ ಮತ್ತು ಬಳಗ’ ದ ಕಾರ್ಯಕ್ರಮದಲ್ಲಿ ಮುಖ್ಯಕಲಾವಿದರಲ್ಲೊಬ್ಬರು.
ತನ್ನ ಪತ್ನಿಯು ೨೦೦೬ ರಲ್ಲಿ ನಿಧನರಾದನಂತರವೂ ಮೂಡಂಬೈಲಿನಲ್ಲೇ ವಾಸವಾಗಿದ್ದ ಶಾಸ್ತ್ರಿಗಳು ೨೦೧೦ ರ ಬಳಿಕ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದಲ್ಲಿ ತನ್ನ ಮಗಳ ಸಂಸಾರದೊಂದಿಗೆ ವಾಸವಾಗಿದ್ದಾರೆ. ಇವರ ತಾಳಮದ್ದಳೆಯ ಕ್ಯಾಸೆಟ್ ಮತ್ತು ಸಿ ಡಿ ಗಳು ೨೫೦ ಕ್ಕೂ ಮೇಲ್ಪಟ್ಟಿವೆ. ಎಪ್ಪತ್ತೊಂಬತ್ತರ ಹರೆಯದ ಶಾಸ್ತ್ರಿಗಳು ಈಗಲೂ ಅರ್ಥಗಾರಿಕೆ ಮಾಡುತ್ತಿದ್ದಾರೆ.
ಬಾಹ್ಯ ಸಂಪರ್ಕಗಳು
ಬದಲಾಯಿಸಿ
ಉಲ್ಲೇಖಗಳು
ಬದಲಾಯಿಸಿ- ↑ http://rangasyaksharanga.blogspot.in/2015_02_01_archive.html
- ↑ http://yakshamatu.blogspot.in/2012/05/blog-post.html
- ↑ http://epaper.udayavani.com/Display.aspx?Pg=A&Edn=MN&DispDate=2015-10-31
- ↑ http://www.bayalata.com/?1~699~%E0%B2%AE%E0%B3%82%E0%B2%A1%E0%B2%82%E0%B2%AC%E0%B3%88%E0%B2%B2%E0%B3%81%20%E0%B2%97%E0%B3%8B%E0%B2%AA%E0%B2%BE%E0%B2%B2%E0%B2%95%E0%B3%83%E0%B2%B7%E0%B3%8D%E0%B2%A3%20%E0%B2%B6%E0%B2%BE%E0%B2%B8%E0%B3%8D%E0%B2%A4%E0%B3%8D%E0%B2%B0%E0%B2%BF%E0%B2%97%E0%B3%86%20%E0%B2%95%E0%B3%80%E0%B2%B0%E0%B2%BF%E0%B2%95%E0%B3%8D%E0%B2%95%E0%B2%BE%E0%B2%A1%E0%B3%81%20%E0%B2%AA%E0%B3%8D%E0%B2%B0%E0%B2%B6%E0%B2%B8%E0%B3%8D%E0%B2%A4%E0%B2%BF%20-
- ↑ http://www.newskannada.in/featured-story/moodambailu-gopalakrishna-shastrige-sanmana/
- ↑ http://suddinews.com/puttur/2014/11/24/159135/
- ↑ http://kn.rnnlive.com/2015/01/mangalore-63/
॑॑॑॑॑॑