ಸಂಜಯ್ ಗಾಂಧಿ
ಸಂಜಯ್ ಗಾಂಧಿ (ಡಿಸೆಂಬರ್ ೧೪, ೧೯೪೬ - ಜೂನ್ ೨೩, ೧೯೮೦) ಒಬ್ಬ ಭಾರತೀಯ ರಾಜಕಾರಣಿಯಾಗಿದ್ದವರು. ಇವರು ಭಾರತದ ಪ್ರಧಾನ ಮಂತ್ರಿಯಾಗಿದ್ದ ಇಂದಿರಾ ಗಾಂಧಿ ಮತ್ತು ರಾಜಕಾರಣಿ ಫಿರೋಜ್ ಗಾಂಧಿಯವರ ಪುತ್ರ. ಸಂಜಯ ಗಾಂಧಿಯವರನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಾಯಕಿಯಾಗಿದ್ದ ಇಂದಿರಾ ಗಾಂಧಿಯವರ ಉತ್ತರಾಧಿಕಾರಿ ಎಂದು ಬಿಂಬಿಸಲಾಗಿತ್ತು. ಸಾಂವಿಧಾನಿಕವಾಗಿ ಯಾವುದೇ ಹುದ್ದೆಯಲ್ಲಿರಿದ್ದರೂ ಸರ್ಕಾರ ಮತ್ತು ಪಕ್ಷದಲ್ಲಿ ವಿಶೇಷವಾದ ಪ್ರಭಾವ ಹೊಂದಿದ್ದರು. ೩೩ನೇ ವಯಸ್ಸಿನಲ್ಲಿಯೇ ವಿಮಾನಾಪಘಾತಕ್ಕೆ ಈಡಾಗಿ ಮೃತಪಟ್ಟರು. ಇವರ ಪತ್ನಿ ಮನೇಕಾ ಗಾಂಧಿ ಹಾಗೂ ಪುತ್ರ ವರುಣ ಗಾಂಧಿ ವರ್ತಮಾನ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ.
ಸಂಜಯ್ ಗಾಂಧಿ | |
---|---|
ಸಂಜಯ್ ಗಾಂಧಿ | |
ಲೋಕಸಭಾ ಸದಸ್ಯರು
| |
ಅಧಿಕಾರ ಅವಧಿ 18 January 1980 – 23 June 1980 | |
ಪೂರ್ವಾಧಿಕಾರಿ | ರವೀಂದ್ರ ಪ್ರತಾಪ್ ಸಿಂಗ್ |
ಉತ್ತರಾಧಿಕಾರಿ | ರಾಜೀವ್ ಗಾಂಧಿ |
ಮತಕ್ಷೇತ್ರ | ಅಮೇಠಿ ಲೋಕಸಭಾ ಕ್ಷೇತ್ರ , ಉತ್ತರ ಪ್ರದೇಶ |
ವೈಯಕ್ತಿಕ ಮಾಹಿತಿ | |
ಜನನ | [೧] ನವ ದೆಹಲಿ | ೧೪ ಡಿಸೆಂಬರ್ ೧೯೪೬
ಮರಣ | 23 June 1980 ನವ ದೆಹಲಿ, ಭಾರತ | (aged 33)
ರಾಜಕೀಯ ಪಕ್ಷ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ |
ಸಂಗಾತಿ(ಗಳು) | ಮನೇಕಾ ಗಾಂಧಿ |
ಸಂಬಂಧಿಕರು | ರಾಜೀವ್ ಗಾಂಧಿ (ಅಣ್ಣ) |
ಮಕ್ಕಳು | ವರುಣ್ ಗಾಂಧಿ |
ತಂದೆ/ತಾಯಿ | ಫಿರೋಝ್ ಗಾಂಧಿ (ತಂದೆ) ಇಂದಿರಾ ಗಾಂಧಿ (ತಾಯಿ) |
ಆರಂಭಿಕ ದಿನಗಳು
ಬದಲಾಯಿಸಿಸಂಜಯ್ ೧೪ ಡಿಸೆಂಬರ್ ೧೯೪೬ರಂದು ನವ ದೆಹಲಿಯಲ್ಲಿ ಇಂದಿರಾ ಗಾಂಧಿ, ಫಿರೋಝ್ ಗಾಂಧಿ ದಂಪತಿಗಳ ಎರಡನೇ ಪುತ್ರನಾಗಿ ಜನಿಸಿದರು. ಹಿರಿಯಯ ಸಹೋದರ ರಾಜೀವ್ ಗಾಂಧಿಯವರಂತೆ ಇವರ ಶಿಕ್ಷಣವೂ ಸೈಂಟ್ ಕೊಲಂಬಿಯಾ ಸ್ಕೂಲ್, ದೆಹಲಿ, ಬಳಿಕ ವೆಲ್ಹಮ್ ಬಾಲಕರ ಶಾಲೆ ಹಾಗೂ ಡೂನ್ ಸ್ಕೂಲ್,ಡೆಹ್ರಾಡೂನ್‍ನಲ್ಲಿ ನಡೆಯಿತು. ಸಂಜಯ್ ಗಾಂಧಿ ಒಂದಷ್ಟು ಸಮಯ ಸ್ವಿಟ್ಜರ್ ಲ್ಯಾಂಡ್‍ನ ಎಕೋಲ್ ಡಿ ಹುಮಾನಿಟಾ ಅಂತರಾಷ್ಟ್ರೀಯ ಬೋರ್ಡಿಂಗ್ ಶಾಲೆಯಲ್ಲೂ ವಿದ್ಯಾರ್ಥಿಯಾಗಿದ್ದರು.[೨] ವಿಶ್ವವಿದ್ಯಾಲಯದ ಯಾವುದೇ ಪದವಿಗಳನ್ನು ಹೊಂದದ ಇವರು, ಆಟೋಮೋಟಿವ್ ಎಂಜಿನಿಯರಿಂಗ್‍ನಲ್ಲಿ ಆಸಕ್ತಿ ಇದ್ದ ಕಾರಣ ಮೂರು ವರ್ಷಗಳ ಕಾಲ ಇಂಗ್ಲಡ್‍ನ ರೋಲ್ಸ್ ರಾಯ್ಸ್ ಸಂಸ್ಥೆಯಲ್ಲಿ ಶಿಷ್ಯವೃತ್ತಿಯನ್ನು ನಿರ್ವಹಿಸಿದರು.[೩][೪] ಕ್ರಿಡಾ ಕಾರುಗಳಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದರು. ೧೯೭೬ರಲ್ಲಿ ಪೈಲಟ್ ಪರವಾನಗಿಯನ್ನು ಪಡೆದರು. ಆ ಹೊತ್ತಿಗಾಗಲೇ ಇವರ ಹಿರಿಯ ಸಹೋದರ ರಾಜೀವ್ ಗಾಂಧಿ, ಪೈಲಟ್ ಪರವಾನಗಿ ಪಡೆದು ಇಂಡಿಯನ್ ಏರ್ ಲೈನ್ಸ್ ನ ಬೋಯಿಂಗ್ 737-200 ಎಡಿವಿ ವಿಮಾನವನ್ನು ಹಾರಿಸುತ್ತಿದ್ದರು. ಸಂಜಯ್ ಗಾಂಧಿ ವಿವಿಧ ವಿಮಾನ ಹಾರಾಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಬಹುಮಾನಗಳನ್ನು ಗೆದ್ದಿದ್ದರು.[೫] ಸಂಜಯ್ ತನ್ನ ತಾಯಿ ಇಂದಿರಾ ಗಾಂಧಿಯವರೊಂದಿಗೆ ಕುಟುಂಬದ ಇತರ ಎಲ್ಲರಿಗಿಂತಲೂ ನಿಕಟವಾಗಿದ್ದರು ಎನ್ನಲಾಗಿದೆ.
ಮಾರುತಿ ಮೋಟಾರ್ಸ್ ಲಿಮಿಟೆಡ್ ವಿವಾದ
ಬದಲಾಯಿಸಿ೧೯೭೧ರಲ್ಲಿ, ಪ್ರಧಾನಿ ಇಂದಿರಾ ಗಾಂಧಿಯವರ ಕ್ಯಾಬಿನೆಟ್, ಮಧ್ಯಮ ವರ್ಗದ ಭಾರತೀಯರು ನಿಭಾಯಿಸಬಲ್ಲ ದಕ್ಷ ಸ್ಥಳೀಯ ಕಾರು, "ಪೀಪಲ್ಸ್ ಕಾರ್" ಅನ್ನು ಉತ್ಪಾದಿಸಲು ಪ್ರಸ್ತಾಪಿಸಿತು: ಜೂನ್ ೧೯೭೧, ಮಾರುತಿ ಮೋಟಾರ್ಸ್ ಲಿಮಿಟೆಡ್ (ಈಗ ಮಾರುತಿ ಸುಜುಕಿ) ಎಂದು ಕರೆಯಲ್ಪಡುವ ಕಂಪನಿಯನ್ನು ಕಂಪನಿಗಳ ಕಾಯ್ದೆಯಡಿ ಪ್ರಾರಂಭಿಸಲಾಯ್ತು ಮತ್ತು ಸಂಜಯ್ ಗಾಂಧಿ ಅದರ ವ್ಯವಸ್ಥಾಪಕ ನಿರ್ದೇಶಕರಾದರು.[೬] ಸಂಜಯ್‌ಗೆ ಯಾವುದೇ ಅನುಭವ, ಕಾರು ವಿನ್ಯಾಸದ ಜ್ಞಾನ ಅಥವಾ ಈ ಮಾದರಿಯ ಯಾವುದೇ ಸಂಸ್ಥೆಯೊಂದಿಗೆ ಸಂಪರ್ಕವಿಲ್ಲದಿದ್ದರೂ, ಅವರಿಗೆ ವಿಶೇಷ ಉತ್ಪಾದನಾ ಪರವಾನಗಿ ಹಾಗೂ ಕಾರು ತಯಾರಿಸುವ ಗುತ್ತಿಗೆ ನೀಡಲಾಯಿತು. ಈ ನಿರ್ಧಾರಕ್ಕೆ ಇಂದಿರಾ ಗಾಂಧಿಯವರು ತೀವ್ರವಾದ ಟೀಕೆಗಳನ್ನು ಎದುರಿಸ ಬೇಕಾಯ್ತು. ಆದರೆ ೧೯೭೧ರ ಬಾಂಗ್ಲಾದೇಶ ವಿಮೋಚನಾ ಯುದ್ಧ ಮತ್ತು ಪಾಕಿಸ್ತಾನದ ವಿರುದ್ಧದ ಗೆಲುವಿನ ಎದುರು ಈ ಟೀಕೆಯ ಧ್ವನಿಗಳು ಅಷ್ಟಾಗಿ ಪರಿಗಣನೆ ಬರಲಿಲ್ಲಿ. ಕಂಪೆನಿಯು ತನ್ನ ಪ್ರಗತಿಯನ್ನು ತೋರಿಸಲು ಪ್ರದರ್ಶಿಸಲಾದ ಪರೀಕ್ಷಾ ಮಾದರಿಯು ಕಳಪೆ ಮಟ್ಟದ್ದಾಗಿತ್ತು. ಸಾರ್ವಜನಿಕ ವಲಯದಲ್ಲಿ ಸಂಜಯ್ ವಿರುದ್ಧ ಟೀಕೆಗಳು ಹೆಚ್ಚಾದವು. ಇದಕ್ಕೆ ಪೂರಕವೆನ್ನುವಂತೆ ಸಂಜಯ್ ಗಾಂಧಿಯವರ ಜೀವಿತಾವಧಿಯಲ್ಲಿ ಮಾರುತಿ ಮೋಟಾರ್ಸ್ ಲಿಮಿಟೆಡ್ ಯಾವುದೇ ವಾಹನಗಳನ್ನು ಉತ್ಪಾದಿಸಲಿಲ್ಲ. ಅನೇಕರು ಈ ಸಂಸ್ಥೆಯಲ್ಲಿ ಭ್ರಷ್ಟಾಚರದ ಆರೋಪವನ್ನು ಹೋರಿಸಿದರು. ಈ ಹಂತದಲ್ಲಿ ಜರ್ಮನಿಯ ವೋಕ್ಸ್‌ವ್ಯಾಗನ್‌ನ ಬೀಟಲ್ ಎಂಬ ಕಾರು ವಿಶ್ವಾದ್ಯಂತ ಯಶಸ್ಸು ಪಡೆದಿತ್ತು. ಆಗ ಸಂಜಯ್ ಇದರ ಭಾರತೀಯ ಆವೃತ್ತಿಯನ್ನು ತಯಾರಿಸಲು ತಂತ್ರಜ್ಞಾನದ ವರ್ಗಾವಣೆ ಮತ್ತು ಜಂಟಿ ಉತ್ಪಾದನೆಗಾಗಿ ಪಶ್ಚಿಮ ಜರ್ಮನಿಯ ವೋಕ್ಸ್‌ವ್ಯಾಗನ್ ಎಜಿಯನ್ನು ಸಂಪರ್ಕಿಸಿದರು. ಅದಾಗಲೆ ಬಾರತದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿತ್ತು ಮತ್ತು ಸಂಜಯ್ ರಾಜಕೀಯದಲ್ಲಿ ಸಕ್ರಿಯರಾದರು. ಮಾರುತಿ ಯೋಜನೆಯು ಒಂದು ವಿಫಲ ಯೋಜನೆಯಾಗಿ ಉಳಿಯಿತು. ಪ್ರಾರಂಭದಿಂದಲೇ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳನ್ನು ಹೊತ್ತಿದ್ದ ಮಾರುತಿ ಮೋಟಾರ್ಸ್ ದಿವಾಳಿಯಾಯಿತು. ಅಂತಿಮವಾಗಿ ೧೯೭೭ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಜನತಾ ಪಕ್ಷದ ಸರ್ಕಾರವು ಮಾರುತಿ ಮೋಟಾರ್ಸ್ ಲಿಮಿಟೆಡ್ ಅನ್ನು ವಿಸರ್ಜಿಸಿತು.[೭] ಹೊಸ ಸರ್ಕಾರವು ನ್ಯಾಯಮೂರ್ತಿ ಅಲಕ್ ಚಂದ್ರ ಗುಪ್ತಾ ನೇತೃತ್ವದ ತನಿಖಾ ಆಯೋಗವನ್ನು ಸ್ಥಾಪಿಸಿತು, ಇದು ಮಾರುತಿ ಸಂಬಂಧದ ಬಗ್ಗೆ ವಿಮರ್ಶಾತ್ಮಕ ವರದಿಯನ್ನು ನೀಡಿತು.[೮] ೧೯೮೧ರಲ್ಲಿ ಸಂಜಯ್ ಗಾಂಧಿಯವರ ಮರಣದ ಒಂದು ವರ್ಷದ ನಂತರ, ಪ್ರಧಾನ ಮಂತ್ರಿಯಾಗಿ ಮತ್ತೆ ಅಧಿಕಾರ ಸ್ವೀಕರಿಸಿದ್ದ ಇಂದಿರಾ ಅವರ ಆಜ್ಞೆಯ ಮೇರೆಗೆ ಕೇಂದ್ರ ಸರ್ಕಾರವು ಮಾರುತಿ ಮೋಟಾರ್ಸ್ ಲಿಮಿಟೆಡ್ ಅನ್ನು ಮಾರುತಿ ಉದ್ಯೋಗ್ ಲಿಮಿಟೆಡ್ ಎಂಬ ಹೆಸರಿನಲ್ಲಿ ಪುನರುಜ್ಜೀವಗೊಳಿಸಿತು. ಅದೇ ವರ್ಷದಲ್ಲಿ ನೆಹರೂ ಗಾಂಧಿ ಕುಟುಂಬ ಸ್ನೇಹಿತ ಮತ್ತು ಅನುಭವಿ ಕೈಗಾರಿಕಾ ತಜ್ಞ ವಿ. ಕೃಷ್ಣಮೂರ್ತಿಯವರ ಪ್ರಯತ್ನಗಳ ಮೂಲಕ ಭಾರತದಲ್ಲಿ ತಯಾರಾಗಲಿರುವ ತಮ್ಮ ಕಾರಿನ ವಿನ್ಯಾಸ ಮತ್ತು ಕಾರ್ಯಸಾಧ್ಯತೆಯನ್ನು ಪ್ರಸ್ತುತಪಡಿಸಲು ಜಪಾನಿನ ಕಂಪನಿ ಸುಜುಕಿಯನ್ನು ಸಂಪರ್ಕಿಸಲಾಯಿತು.[೯] ಸುಜುಕಿ ಸರ್ಕಾರಕ್ಕೆ , ಈಗಾಗಲೇ ಜಪಾನ್ ಮತ್ತು ಪೂರ್ವ ಏಷ್ಯಾದ ದೇಶಗಳಲ್ಲಿ ಯಶಸ್ವಿಯಾಗಿದ್ದ 'ಮಾದರಿ 796'ರ ಕಾರ್ಯಸಾಧ್ಯ ವಿನ್ಯಾಸವನ್ನು ಒದಗಿಸಿತು. ನಂತರ ಸರ್ಕಾರದ ಒಪ್ಪಿಗೆಯ ಮೇರೆಗೆ ಇದು ಭಾರತದ ಮೊದಲ "ಪೀಪಲ್ಸ್ ಕಾರ್" ತಯಾರಾಯಿತು. ಇದು ಮಾರುತಿ 800 ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಜನಪ್ರಿಯವಾಯ್ತು.
ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ
ಬದಲಾಯಿಸಿಜೂನ್ ೨೫, ೧೯೭೫ ರಂದು ಇಂದಿರಾ ಗಾಂಧಿಯವರು ತನ್ನ ವಿರುದ್ದ ನ್ಯಾಯಾಲಯ ನೀಡಿದ್ದ ತೀರ್ಪಿನ ನಂತರ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದರು, ಚುನಾವಣೆಗಳನ್ನು ವಿಳಂಬಗೊಳಿಸಿದರು. ಪತ್ರಿಕೆಗಳನ್ನು ಸೆನ್ಸಾರ್ ಮಾಡಿದರು, ಮತ್ತು ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಕೆಲವು ಸಾಂವಿಧಾನಿಕ ಸ್ವಾತಂತ್ರ್ಯಗಳನ್ನು ಅಮಾನತುಗೊಳಿಸಿದರು. ದೇಶಾದ್ಯಂತ ಕಾಂಗ್ರೆಸ್ ಅಲ್ಲದ ಸರ್ಕಾರಗಳನ್ನು ವಜಾಗೊಳಿಸಲಾಯಿತು. ತುರ್ತು ಪರಿಸ್ಥಿತಿಗೆ ವಿರುದ್ಧವಾಗಿ ಪ್ರತಿಭಟಿಸಿದ ಜಯ ಪ್ರಕಾಶ್ ನಾರಾಯಣ್ ಮತ್ತು ಜೀವತ್ ರಾಮ್ ಕೃಪಲಾನಿ ಮುಂತಾದ ಹಿರಿಯ ಸ್ವಾಂತತ್ರ್ಯ ಹೊರಟಗಾರರು ಹಾಗೂ ದೇಶಾದ್ಯಾಂತ ಸಾವಿರಾರು ಜನರನ್ನು ಬಂಧಿಸಿ ಜೈಲಿನಲ್ಲಿಡಲಾಯಿತು.
ತುರ್ತು ಪರಿಸ್ಥಿತಿಗೆ ಸ್ವಲ್ಪ ಮುಂಚೆ ಮತ್ತು ನಂತರದ ರಾಜಕೀಯ ವಾತಾವರಣದಲ್ಲಿ, ಸಂಜಯ್ ಗಾಂಧಿ, ಇಂದಿರಾ ಗಾಂಧಿಯವರ ಸಲಹೆಗಾರರಾಗಿ ಪ್ರಾಮುಖ್ಯತೆ ಪಡೆದರು. ಇಂದಿರಾ ಗಾಂಧಿ ಮತ್ತು ಸರ್ಕಾರದ ನಿರ್ಧಾರಗಳಲ್ಲಿ ಸಂಜಯ್ ಅವರ ಪ್ರಭಾವವು ನಾಟಕೀಯವಾಗಿ ಹೆಚ್ಚಾಯಿತು, ಈ ಸಂಧರ್ಭದಲ್ಲಿ ಅವರು ಎಂದಿಗೂ ಅಧಿಕೃತ ಅಥವಾ ಚುನಾಯಿತ ಸ್ಥಾನದಲ್ಲಿರಲಿಲ್ಲ. ಮಾರ್ಕ್ ಟುಲ್ಲಿ ಅವರ ಪ್ರಕಾರ, "ಸಂಜಯ್ ಅವರ ಅನನುಭವವು ತಾಯಿ ಇಂದಿರಾ ಗಾಂಧಿ ಆಡಳಿತ, ಡ್ರಾಕೋನಿಯನ್ ಅಧಿಕಾರವನ್ನು ಬಳಸುವುದನ್ನು ತಡೆಯಲಿಲ್ಲ, ಜೊತೆಗೆ ಪೊಲೀಸ್ ರಾಜ್ಯವನ್ನು ಸ್ಥಾಪಿಸಲು ಕಾರಣವಾಯ್ತು".[೧೦]
ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ , ಭಾರತ ಸರ್ಕಾರದ ಪ್ರಮುಖ ನಿರ್ಧಾರಗಳನ್ನು ಸಂಜಯ್ ಗಾಂದಿ ತಮ್ಮ ಸ್ನೇಹಿತರೊಂದಿಗೆ, ವಿಶೇಷವಾಗಿ ಬನ್ಸಿಲಾಲ್ ಅವರೊಂದಿಗೆ ಸೇರಿ ತೆಗೆದುಕೊಳ್ಳುತ್ತಿದ್ದರು ಎಂದು ಹೇಳಲಾಗುತ್ತದೆ.[೧೧] ಸಂಜಯ್ ಗಾಂಧಿ ಅವರು ತಾಯಿಯ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದಾರೆ ಮತ್ತು ಸರ್ಕಾರವನ್ನು ಪಿಎಂಒ (ಪ್ರಧಾನ ಮಂತ್ರಿ ಕಚೇರಿ) ಗಿಂತ ಹೆಚ್ಚಾಗಿ ಪಿಎಂಹೆಚ್ (ಪ್ರಧಾನ ಮಂತ್ರಿ ಮನೆ) ನಡೆಸುತ್ತಿದೆ ಎಂದು ಹೇಳಲಾಗುತ್ತಿತ್ತು. "ಸಾವಿರಾರು ಯುವಕರನ್ನು ಪಕ್ಷಕ್ಕೆ ಸೇರಿಸಿಕೊಂಡರು, ಅವರಲ್ಲಿ ಹಲವರು ಗೂಂಡಾಗಳು ಮತ್ತು ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡವರಿದ್ದರು.ಅಪರಾಧೀ ಹಿನ್ನಲೆ ಹೊಂದಿದವರನ್ನು ಇಂದಿರಾ ಗಾಂಧಿಯವರ ಅಧಿಕಾರವನ್ನು ವಿರೋಧಿಸುವವರನ್ನು, ಪ್ರಶ್ನಿಸುವವರನ್ನು ಬೆದರಿಸಲು ಬಳಸಿದರು.[೧೨]
ಈ ಸಮಯದಲ್ಲಿ ಇಂದಿರಾಗಾಂಧಿ ದೇಶದ ಅಭಿವೃದ್ಧಿಗಾಗಿ ೨೦ ಅಂಶಗಳ ಆರ್ಥಿಕ ಯೋಜನೆಯನ್ನು ಘೋಷಿಸಿದರು. ಆಗ ಸಂಜಯ್ ಗಾಂಧಿಯವರು ಕೂಡ ತಮ್ಮದೇ ಆದ ಐದು ಅಂಶಗಳ ಕಾರ್ಯಕ್ರಮವನ್ನು ಕಾರ್ಯರೂಪಕ್ಕೆ ತಂದರು.
ಸಂಜಯ್ ಗಾಂಧಿಯವರ ಐದು ಅಂಶಗಳ ಕಾರ್ಯಕ್ರಮ
ಬದಲಾಯಿಸಿ- ಸಾಕ್ಷರತೆ
- ಕುಟುಂಬ ಯೋಜನೆ
- ಮರ ನೆಡುವುದು
- ಜಾತಿವಾದದ ನಿರ್ಮೂಲನೆ
- ವರದಕ್ಷಿಣೆ ನಿರ್ಮೂಲನೆ
ನಂತರ ಸಂಜಯ್ ಅವರ ಕಾರ್ಯಕ್ರಮವನ್ನು ಇಂದಿರಾ ಅವರ 20 ಅಂಶಗಳೊಂದಿಗೆದಿಗೆ ವಿಲೀನಗೊಳಿಸಿ ಒಟ್ಟು ಇಪ್ಪತ್ತೈದು ಅಂಶಗಳ ಕಾರ್ಯಕ್ರವನ್ನಾಗಿ ರೂಪಿಸಿದರು.[೧೩] ಈ ಐದು ಅಂಶಗಳಲ್ಲಿ, ಸಂಜಯ್ ಅವರನ್ನು ಮುಖ್ಯವಾಗಿ ಕುಟುಂಬ ಯೋಜನಾ ಕಾರ್ಯಕ್ರಮಕ್ಕಾಗಿ ಸ್ಮರಿಸಲಾಗುತ್ತದೆ, ಅದು ಹೆಚ್ಚು ಕುಖ್ಯಾತಿಯನ್ನು ಪಡೆಯಿತು ಮತ್ತು ಭಾರತದಲ್ಲಿ ಜನಸಂಖ್ಯಾ ನಿಯಂತ್ರಣಕ್ಕೆ ದೀರ್ಘಕಾಲದ ಹಾನಿಯನ್ನುಂಟುಮಾಡಿತು.[೧೪][೧೫]
ಸರ್ಕಾರ ಹಾಗೂ ರಾಜಕೀಯದಲ್ಲಿ
ಬದಲಾಯಿಸಿಸಂಜಯ್ ಗಾಂಧಿ, ಯಾವುದೇ ಸಾಂವಿಧಾನಿಕ ಹುದ್ದೆಯನ್ನು ಹೊಂದಿರದ್ದರೂ, ಕೇಂದ್ರ ಸರ್ಕಾರದ ಎಲ್ಲಾ ವಿಭಾಗ ಹಾಗೂ ಸಚಿವಾಲಯಗಳಲ್ಲಿ ತಮ್ಮ ಪ್ರಭಾವ ಹೊಂದಿದ್ದರು. ಯಾವ ವಿರೋದಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿರಲಿಲ್ಲ
.ಇಂದಿರಾ ಗಾಂಧಿಯವರ ಸಂಪುಟದಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆಯ ಸಚಿವರಾಗಿದ್ದ ಇಂದರ್ ಕುಮಾರ್ ಗುಜ್ರಾಲ್ ಅವರು, ಯಾವುದೇ ಸಾಂವಿಧಾನಿಕ ಹುದ್ದೆ ಹೊಂದಿರದ ಸಂಜಯ್ ಅವರ ಆದೇಶವೊಂದನ್ನು ಗಣನೆಗೆ ತೆಗೆದುಕೊಳ್ಳಲ್ಲಿಲ್ಲ. ಪರಿಣಾಮವಾಗಿ ಗುಜ್ರಾಲ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು. ಅವರ ಸ್ಥಾನಕ್ಕೆ ಸಂಜಯ್ ಗಾಂಧಿಯವರ ನಿಕಟ ಬಳಗದಲ್ಲಿದ್ದ ವಿದ್ಯಾಚರಣ ಶುಕ್ಲಾ ಅವರನ್ನು ಸಚಿವರಾಗಿ ನೇಮಿಸಲಾಯ್ತು.ಆ ದಿನಗಳಲ್ಲಿ ಜನಪ್ರಿಯ ಗಾಯಕರಾಗಿದ್ದ ಕಿಶೋರ್ ಕುಮಾರ್ ಅವರ ಬಾರತೀಯ ಯುವ ಕಾಂಗ್ರೆಸ್‍ನ ಸಮಾವೇಶವೊಂದರಲ್ಲಿ ಹಾಡಲು ನಿರಾಕರಿಸಿದ್ದರಿಂದ, ಆವರ ಹಾಡುಗಳನ್ನು ಆಲ್ ಇಂಡಿಯಾ ರೇಡಿಯೋದಲ್ಲಿ ಪ್ರಸಾರವಾಗುವುದರಿಂದ ನಿಷೇಧಿಸಲಾಯ್ತು [೧೬][೧೭] ಇಂಥಹ ಹಲವಾರು ಪ್ರಕರಣಗಳ ವರದಿಗಳಿವೆ.
ತುರ್ತು ಪರಿಸ್ಥಿತಿ ಹಿಂತೆಗೆದ ಬಳಿಕ ೧೭೭ರಲ್ಲಿ ನಡೆದ ರಾಷ್ಟ್ರೀಯ ಚುನಾವಣೆಗಳಲ್ಲಿ ಅಮೇಠಿ ಕ್ಷೇತ್ರದಿಂದ ಸ್ಪರ್ಧಿಸಿ ಸೋತರು. ಇದು ಅವರ ಮೊದಲ ಚುನಾವಣೆ ಆಗಿತ್ತು. ಆದರೆ ೧೯೮೦ರಲ್ಲಿ ನಡೆದ ಚುನಾವಣೆಯಲ್ಲಿ ಸಂಜಯ್ ಗಾಂಧಿ ಅಮೇಠಿ ಕ್ಷೇತ್ರದಿಂದಲೇ ಸ್ಪರ್ಧಿಸಿ ಲೋಕಸಭೆಗೆ ಆಯ್ಕೆ ಆದರು. ನಂತರ ಸಂಜಯ್ ಗಾಂಧಿಯವರನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಯ್ತು. ಈ ಹುದ್ದೆ ಸ್ವೀಕರಿಸಿದ ಒಂದೇ ತಿಂಗಳಲ್ಲಿ ಸಂಜಯ್ ಗಾಂಧಿ ವಿಮಾನಾಪಘಾತಕ್ಕೆ ಈಡಾಗಿ ಮೃತಪಟ್ಟರು.[೧೮]
ಇವರ ಮೇಲೆ ೧೯೭೭ರ ಮಾರ್ಚ್ ತಿಂಗಳಲ್ಲಿ ಹತ್ಯೆಯ ಪ್ರಯತ್ನವೂ ನಡೆದಿತ್ತು.[೧೯]
ಖಾಸಗಿ ಜೀವನ ಮತ್ತು ಮರಣ
ಬದಲಾಯಿಸಿಸಂಜಯ್ ಗಾಂಧಿ ತನಗಿಂತ ೧೦ ವರ್ಷ ಕಿರಿಯರಾಗಿದ್ದ ಮನೇಕಾ ಆನಂದ್ ಅವರನ್ನು ೧೯೭೪ರಲ್ಲಿ ವಿವಾಹವಾದರು.[೨೦] ಸಂಜಯ್ ಮರಣದ ಕಲವೇ ತಿಂಗಳುಗಳ ಮುನ್ನ ಪುತ್ರ ವರುಣ ಗಾಂಧಿಯ ಜನ್ಮವಾಯಿತು.[೧೮] ಪತ್ನಿ ಮನೇಕಾ ಗಾಂಧಿಯವರ ಪ್ರಕಾರ ಸಂಜಯ್ ಗಾಂಧಿ ತನ್ನ ತಂದೆಯ ಧರ್ಮವಾದ ಫಾರ್ಸಿ ಧರ್ಮವನ್ನೇ ಅನುಸರಿಸುತ್ತಿದ್ದರು, ಮತ್ತು ತನ್ನ ಪುತ್ರನೂ ಅದೇ ಧರ್ಮವನ್ನು ಅನುಸರಿಸಬೇಕೆಂಬ ಬಯಕೆ ಹೊಂದಿದ್ದರು.[೨೧]
೧೯೮೦ ಜೂನ್ ೨೩ರಂದು ಸಫ್ದರ್ ಗಂಜ್ ವಿಮಾನ ನಿಲ್ದಾಣದ ಬಳಿ ನಡೆದ ವಿಮಾನ ಆಪಘಾತದಲ್ಲಿ ಮೃತಪಟ್ಟರು. ಅಪಘಾತಕ್ಕೀಡಾದ ಎಸ್-೨ಎ ವಿಮಾನವನ್ನು ಸ್ವತಃ ಸಂಜಯ್ ಅವರೇ ಚಲಾಯಿಸುತ್ತಿದ್ದರು.
ಉಲ್ಲೇಖಗಳು
ಬದಲಾಯಿಸಿ- ↑ Carol Dommermuth-Costa (2002). Indira Gandhi: Daughter of India. Twenty-First Century Books. p. 60. ISBN 978-0-8225-4963-5.
- ↑ Singh, Rani (13 ಸೆಪ್ಟೆಂಬರ್ 2011). Sonia Gandhi: An Extraordinary Life, An Indian Destiny (in ಇಂಗ್ಲಿಷ್). St. Martin's Publishing Group. ISBN 978-0-230-34053-4.
- ↑ First Woman of India St. Petersburg Times, 10 January 1966.
- ↑ "Maruti and Sanjay Gandhi: The history of an illicit, extraordinary love affair". Motoroids.
- ↑ Rani Singh (2011). Sonia Gandhi: An Extraordinary Life, An Indian Destiny. St. Martin's Press. p. 6. ISBN 978-0-230-34053-4.
- ↑ https://www.motoroids.com/features/maruti-and-sanjay-gandhi-the-history-of-an-illicit-extraordinary-love-affair/
- ↑ Bhupesh Bhandari (11 ಜುಲೈ 2015). "Emergency and Sanjay Gandhi: How Maruti's origin lies in cronyism, corruption and blackmail". Business Standard.
- ↑ Sunil Sethi and Prabhu Chawla (1 ಮಾರ್ಚ್ 2014). "Maruti Commission report: no fear to remember". India Today.
- ↑ The Maruti Udyog official Website Timeline Page
- ↑ Mark Tully Amritsar: Mrs. Gandhi's Last Battle, p. 55, ISBN 81-291-0917-4
- ↑ Subodh Ghildiyal (29 ಡಿಸೆಂಬರ್ 2010). "Cong blames Sanjay Gandhi for Emergency 'excesses'". Times Of India. Archived from the original on 28 ಆಗಸ್ಟ್ 2011. Retrieved 19 ಜನವರಿ 2013.
- ↑ Paul R. Brass (2004). Gandhi, Indira Priyadarshini (1917–1984). Oxford Dictionary of National Biography.
- ↑ Emma Tarlo (2001). Unsettling memories : narratives of the emergency in Delhi. Berkeley: University of California Press. pp. 27–28. ISBN 978-0-520-23122-1.
- ↑ Eliza Ann Lehner. "Conceiving the Impact: Connecting Population Growth and Environmental Sustainability" (PDF). Harvard College. Archived from the original (PDF) on 15 ಆಗಸ್ಟ್ 2016. Retrieved 28 ಜೂನ್ 2016.
- ↑ Warren C. Robinson and John A. Ross, ed. (2007). The global family planning revolution : three decades of population policies and programs. Washington, D.C.: World Bank. pp. 311–312. ISBN 978-0-8213-6951-7.
- ↑ "Emergency 'propagandist' who banned Kishore Kumar songs". Indian Express. 11 ಜೂನ್ 2013. Retrieved 17 ಜನವರಿ 2014.
- ↑ Swapan Dasgupta (ಜುಲೈ 1985). "Book reviews". Third World Quarterly. 7 (3): 731–778. doi:10.1080/01436598508419863.
- ↑ ೧೮.೦ ೧೮.೧ Ranjan Gupta (24 ಜೂನ್ 1980). "Sanjay Gandhi dies in plane crash". Reuters via The Sydney Morning Herald. Retrieved 19 ಜನವರಿ 2013.
- ↑ "Sanjay Gandhi escapes assassination". St. Petersburg Times. 15 ಮಾರ್ಚ್ 1977. Retrieved 19 ಜನವರಿ 2013.
- ↑ "Quiet Wedding in New Delhi". The Milwaukee Journal. New Delhi. AP. 3 ಡಿಸೆಂಬರ್ 1974. Retrieved 19 ಜನವರಿ 2013.
- ↑ John Hinnells (2005), The Zoroastrian Diaspora: Religion and Migration, OUP Oxford, pp. 397–398, ISBN 978-0-19-826759-1