ಶ್ರೀ ರಾಮ ಕ್ಷೇತ್ರ ಕನ್ಯಾಡಿ

ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರದಲ್ಲಿ ನೆಲೆ ನಿಂತಿರುವ, ದಕ್ಷಿಣ ಭಾರತದ ಅಯೋಧ್ಯೆಯೆಂದೇ ಪ್ರಖ್ಯಾತಿಯನ್ನು ಪಡೆದಿರುವ ಶ್ರೀ ರಾಮ ಕ್ಷೇತ್ರ ಈಗ ಭಕ್ತರ ಜನಾಕರ್ಷಣೆಯ ಪ್ರಮುಖ ಶ್ರದ್ಧಾ ಕೇಂದ್ರ. ಕ್ಷೇತ್ರವು ಧರ್ಮಸ್ಥಳ ಮಂಗಳೂರು ಹೆದ್ದಾರಿಯಲ್ಲಿ ಧರ್ಮಸ್ಥಳದಿಂದ ೪ ಕಿ.ಮೀ ದೂರದಲ್ಲಿದ್ದರೆ, ಕರಾವಳಿಯ ನಗರ ಮಂಗಳೂರಿನಿಂದ ಕೇವಲ ೬೭ ಕಿ.ಮೀ ದೂರದಲ್ಲಿದೆ. ಪವಿತ್ರ ನದಿ ನೇತ್ರಾವತಿಗೆ ತೀರಾ ಸಮೀಪದಲ್ಲಿರುವುದು ಇದರ ವಿಶೇಷತೆಗಳಲ್ಲೊಂದು. ದಕ್ಷಿಣೋತ್ತರ ಶಿಲ್ಪಕಲಾ ಶೈಲಿಯಯಲ್ಲಿ ಕಂಗೊಳಿಸುತ್ತಿರುವ ಶ್ರೀ ರಾಮ ಕ್ಷೇತ್ರಕ್ಕೆ ಇಂದು ದೇಶ – ವಿದೇಶಗಳಿಂದ ಲಕ್ಷಾಂತರ ಮಂದಿ ಭಕ್ತರು ಬಂದು ‘ಶ್ರೀ ರಾಮ’ನ ದರ್ಶನವನ್ನು ಪಡೆದು ಪುನೀತರಾಗುತ್ತಿದ್ದಾರೆ.

ಇತಿಹಾಸ

ಬದಲಾಯಿಸಿ

ಶ್ರೀ ಶ್ರೀ ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರು ಈ ದೇವಸ್ಥಾನ ಸಂಕೀರ್ಣದ ನಿರ್ಮಾತೃ. ಅವರು ಶ್ರೀ ನಿತ್ಯಾನಂದ ಸ್ವಾಮೀಜಿಯವರ ಶಿಷ್ಯರಾಗಿದ್ದರು. ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿ ಮುಂಬೈನ ‘ಥಾಣೆಯ ಗಣೇಶ್‍ ಪುರಿ’ಯಲ್ಲಿ ತಮ್ಮ ಪಾಠವನ್ನು ೧೯೩೭ ರಿಂದ ೧೯೬೧ರ ಮಧ್ಯೆ ಅಭ್ಯಸಿಸಿದರು(ಶ್ರೀ ನಿತ್ಯಾನಂದ ಸ್ವಾಮೀಜಿಗಳ ಸಮಾಧಿಯವರೆಗೆ). ಅಭ್ಯಾಸದ ಸಂದರ್ಭದಲ್ಲಿ ಅವರ ಗುರುಗಳಾದ ಶ್ರೀ ನಿತ್ಯಾನಂದ ಸ್ವಾಮೀಜಿಯವರು ಧರ್ಮಸ್ಥಳ ಗ್ರಾಮದಲ್ಲಿ ರಾಮನ ದೇವಸ್ಥಾನದ ರಚನೆ ಮಾಡಬೇಕೆಂಬ ತಮ್ಮ ಬಯಕೆಯನ್ನು ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರಿಗೆ ತಿಳಿಸಿದರು. ವಿಶೇಷವಾದ ಪವಾಡ ಶಕ್ತಿಯನ್ನು ಹೊಂದಿದ್ದ ಶ್ರೀ ನಿತ್ಯಾನಂದ ಸ್ವಾಮಿಗಳು ತಮ್ಮ ಧರ್ಮಸ್ಥಳ ಯಾತ್ರೆಯ ಸಂದರ್ಭದಲ್ಲಿ ಒಂದು ದಿನ ಇಲ್ಲಿ ತಂಗಿದ್ದರು, ಅವರಿಗೆ ಆ ಸಂದರ್ಭದಲ್ಲಿ ಈ ಸ್ಥಳದಲ್ಲಿ ದೇವ ಶ್ರೀ ರಾಮನ ಮಂದಿರವನ್ನು ನಿರ್ಮಾಣ ಮಾಡಬೇಕೆಂಬ ಯೋಚನೆ ಬಂದಿತು. ಅದರ ಅನ್ವಯ ತಮ್ಮ ಗುರುಗಳ ಬಯಕೆಯಂತೆ ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರು ಧರ್ಮಸ್ಥಳ ಗ್ರಾಮಕ್ಕೆ ೧೯೬೯ರಲ್ಲಿ ಬಂದು, ತಮ್ಮ ಗುರುಗಳ ಬಯಕೆಯನ್ನು ಈಡೇರಿಸಲು ಪ್ರಯತ್ನಪಟ್ಟರು. ಅವರು ಶ್ರೀ ರಾಮ ಕ್ಷೇತ್ರದ ಸ್ಥಳವನ್ನು ೧೯೭೧ರಲ್ಲಿ ಶ್ರೀ ಧರ್ಮಸ್ಥಳ ಕ್ಷೇತ್ರದ ಶಾನುಭಾಗರಾಗಿದ್ದ (ಗ್ರಾಮ ಲೆಕ್ಕಿಗ) ಸೂರ್ಯ ನಾರಾಯಣ ರಾವ್ ದೊಂಡೋಲೆ ಇವರಿಂದ ಬಳುವಳಿಯಾಗಿ ಪಡೆದರು. ಅವರು ಹುಲ್ಲು ಛಾವಣಿಯಿಂದ ನಿರ್ಮಿತ ಕಟ್ಟಡ ಪಡೆದು ಅದರಲ್ಲಿ “ಭಗವಾನ್ ಶ್ರೀ ನಿತ್ಯಾನಂದ ಮಂದಿರ”ವನ್ನು ಆರಂಭಿಸಿದರು. ತಕ್ಷಣ ಭಕ್ತರು ಅಲ್ಲಿ ಸೇರಲು ಆರಂಭಿಸಿದರು. ನಂತರ ಪ್ರತಿವರ್ಷ “ರಾಮ ನವಮಿ”ಯ ಹಬ್ಬದ ಸಂದರ್ಭದಲ್ಲಿ ಇಲ್ಲಿ ಏಳು ದಿನಗಳ “ರಾಮ ಭಜನಾ ಸಪ್ತಾಹ”ವನ್ನು ಆರಂಭಿಸಲಾಯಿತು. ಸ್ಥಳೀಯ ಹಾಗೂ ದೂರದ ಊರಿನಿಂದ ಸಾವಿರಾರು ಶ್ರೀ ರಾಮನ ಭಕ್ತರು ಬಂದು ಸೇರಿ ”ನಂದಾ ದೀಪ”ದ ಸುತ್ತಲೂ ಕುಣಿಯುತ್ತಾ ರಾಮ ತಾರಕ ಮಂತ್ರದ ಜಪ ಮಾಡಲು ಆರಂಭಿಸಿದರು.

ಇಂದು ಪವಿತ್ರ ಕ್ಷೇತ್ರವೆಂದು ಕರೆದುಕೊಳ್ಳುವ ಶ್ರೀ ರಾಮ ಕ್ಷೇತ್ರದಲ್ಲಿ ೧೯೭೮ರವರೆಗೆ ಸಣ್ಣ ನಿತ್ಯಾನಂದ ಮಂದಿರವನ್ನು ಬಿಟ್ಟರೆ ಬೇರೇನೂ ಇರಲಿಲ್ಲ. ಪ್ರಸ್ತುತ ಶ್ರೀ ರಾಮ ದೇವಸ್ಥಾನಕ್ಕೆ ೧೯೭೮ರಲ್ಲಿ ಬೆಂಗಳೂರಿನ ಶ್ರೀ ಶ್ರೀ ಶಿವ ಬಾಲಯೋಗಿ ಮಹರಾಜರು ಭೂಮಿಪೂಜೆ ನೆರವೇರಿಸಿದರು. ನಂತರ ಎರಡು ಎಕ್ರೆಯಲ್ಲಿನ ರಾಮ ಮಂದಿರದ ರಚನೆಯನ್ನು ಶ್ರೀ ಆತ್ಮಾನಂದ ಸ್ವಾಮೀಜಿಗಳು ನಿರ್ದೇಶಿಸಿದರು. ಅಲ್ಲಿಂದ ದೇವಾಲಯದ ನಿರ್ಮಾಣ ಕಾರ್ಯ ಭರದಿಂದ ಸಾಗಿತು. ೨೦೦೭ರಲ್ಲಿ ಈ ಕ್ಷೇತ್ರದ ‘ಪ್ರತಿಷ್ಠಾ ಬ್ರಹ್ಮಕಲಶೋತ್ಸವ’ವನ್ನು ಅದ್ದೂರಿಯಾಗಿ ೫೪ ದಿನಗಳ ಕಾಲ ನಡೆಯಿತು. ಇದೇ ಸಂದರ್ಭದಲ್ಲಿ ಎಲ್ಲಾ ೩೬ ದೇವರ ಗರ್ಭಗುಡಿಗಳು ಹಾಗೂ ರಾಮ ದೇವರ ‘ಪೂಜಾ ಸ್ಥಳ’ವನ್ನು ಏಕಕಾಲದಲ್ಲಿ ವಿಧ್ಯುಕ್ತವಾಗಿ ಆರಂಭಿಸಲಾಯಿತು.[] ಶ್ರೀ ರಾಮ ಇಲ್ಲಿನ ಮುಖ್ಯ ದೇವರಾಗಿದ್ದು, ಒಂದೇ ಸೂರಿನಡಿಯಲ್ಲಿ ಇತರ ೩೬ ದೇವರುಗಳ ಗರ್ಭಗುಡಿಗಳಿವೆ. ೩೦ ವರ್ಷಗಳ ಹಿಂದೆ ದೇವಸ್ಥಾನ ಇಷ್ಟೊಂದು ಜನಪ್ರಿಯವಾಗುತ್ತದೆಂದು ಯಾರೊಬ್ಬರೂ ಎಣಿಸಿರಲಾರರು, ಅಷ್ಟರ ಮಟ್ಟಿಗೆ ಇಂದು ಜನಪ್ರಿಯವಾಗಿದೆ.[]

ಪೌರಾಣಿಕ ಉಲ್ಲೇಖ

ಬದಲಾಯಿಸಿ

ಸೀತಾನ್ವೇಷಣೆಯ ಸಂದರ್ಭದಲ್ಲಿ ಕೆಲವು ಕಾಲ ಶ್ರೀ ರಾಮಚಂದ್ರ ಈ ಸ್ಥಳದಲ್ಲಿ ತಂಗಿದ್ದ ಎಂಬ ಪ್ರತೀತಿಯೂ ಇದೆ.[]

ವಿನ್ಯಾಸ

ಬದಲಾಯಿಸಿ

ದೇವಾಲಯದ ವಿನ್ಯಾಸ ಕಲಾತ್ಮಕ ಸೌಂದರ್ಯದೊಂದಿಗೆ ಆಕರ್ಷಕವಾಗಿದ್ದು ತಮಿಳುನಾಡಿನ ವಾಸ್ತು ಶೈಲಿಯನ್ನು ಹೊಂದಿದ್ದು, ರಾಜಸ್ಥಾನದ ಉತ್ತಮ ಗುಣಮಟ್ಟದ ಗ್ರಾನೈಟ್ ಕಲ್ಲುಗಳನ್ನು ಬಳಸಲಾಗಿದೆ. ಆಂಧ್ರ ಪ್ರದೇಶ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ಮತ್ತು ರಾಜಸ್ಥಾನದ ಕುಶಲ ಕರ್ಮಿ(ಶಿಲ್ಪಿ)ಗಳು ಇದರ ಕೆತ್ತನೆ ಕೆಲಸಗಳನ್ನು ಮಾಡಿದ್ದಾರೆ. ೩ ಮಹಡಿಗಳ ರಚನೆಯನ್ನು ಹೊಂದಿರುವ ದೇವಾಲಯದಲ್ಲಿ ತಳ ಮಹಡಿಯನ್ನು ಸಮಾರಂಭ ಮತ್ತು ಭಜನೆಗಳಿಗಾಗಿ ಉಪಯೋಗಿಸಿದರೆ. ಎರಡನೇ ಮಹಡಿಯಲ್ಲಿ ಪವಿತ್ರ ಗರ್ಭಗೃಹಗಳಿವೆ ಮತ್ತು ಮೂರನೇ ಮಹಡಿಯಲ್ಲಿ ಪಟ್ಟಾಭಿರಾಮ ಸನ್ನಿಧಿಯಿದೆ.

ಅದೇ ರೀತಿಯಾಗಿ ಈ ಸುಂದರ ದೇಗುಲದಲ್ಲಿ ಹನುಮಂತ, ನವದುರ್ಗೆಯರು ಮತ್ತು ನವಗ್ರಹಗಳು ಪೂಜಿಸಲ್ಪಡುತ್ತವೆ. ೨೦೦೭ರಲ್ಲಿ ಮೂರು ರಥಗಳನ್ನು ನಿರ್ಮಿಸಲಾಗಿದ್ದು ಕ್ಷೇತ್ರದ ವಿಶೇಷ ಆಕರ್ಷಣೆಗಳಾಗಿವೆ. ಶಿಲ್ಪಿಗಳು ರಾಮ ದೇವರಿಗಾಗಿ ೭೨ ಅಡಿ ಎತ್ತರದ ಬ್ರಹ್ಮರಥವನ್ನು ಕೆತ್ತಿದ್ದಾರೆ. ೩೬ ಅಡಿ ಎತ್ತರದ ಇನ್ನೊಂದು ರಥವನ್ನು ಆಂಜನೇಯನಿಗೆ ಅರ್ಪಿಸಲಾಗಿದೆ. ಕ್ಷೇತ್ರದಲ್ಲಿ ೧೮ ಅಡಿಗಳ ಬೆಳ್ಳಿಯ ರಥವೂ ಇದೆ. ಕಾರಂಜಿಯಿಂದ ಕೂಡಿದ ಹೂದೋಟ ಹಾಗೂ ವಿವಿಧ ವರ್ಣಗಳ ಬೆಳಕು ಭಕ್ತರನ್ನು ಕೈ ಬೀಸಿ ಕರೆಯುತ್ತಿವೆ.

ವೈಶಿಷ್ಠ್ಯಗಳು

ಬದಲಾಯಿಸಿ

ಈ ಕ್ಷೇತ್ರದ ಪ್ರಮುಖ ಆಕರ್ಷಣೆ ಹಾಗೂ ವಿಶೇಷ ಎಂದರೆ ಇಡೀ ರಾಷ್ಟ್ರದ ವಿವಿಧ ದೇವಸ್ಥಾನಗಳಲ್ಲಿ ಆರಾಧನೆಗೊಳ್ಳುವ ದೇವರ ದರ್ಶನವನ್ನು ಪಡೆದು ಧನ್ಯತೆಯನ್ನು ಪಡೆಯಲು ೩೬ ದೇವರ ಗುಡಿಗಳು, ನವದುರ್ಗೆಯರು, ಶಿರ್ಡಿ ಸಾಯಿ ಬಾಬಾ, ಶ್ರೀ ನಿತ್ಯಾನಂದ ಸ್ವಾಮಿ, ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ, ನವಗ್ರಹ, ನಾಗಕ್ಷೇತ್ರ, ಅತೀ ಎತ್ತರದ ಬ್ರಹ್ಮರಥ, ಬೆಳ್ಳಿರಥ ಸೇರಿದಂತೆ 5 ರಥಗಳು ಮುಂತಾದವು ಈ ಕ್ಷೇತ್ರದ ವೈಶಿಷ್ಠ್ಯಗಳು.

ಕ್ಷೇತ್ರದಲ್ಲಿ ಪ್ರತಿವರ್ಷ ರಾಮ ನವಮಿಯ ಸಂದರ್ಭದಲ್ಲಿ ರಾಮ ಭಗವಾನ್ ನಿತ್ಯಾನಂದ ಮಂದಿರದಲ್ಲಿ ಶ್ರೀ ರಾಮ ನಾಮ ಸಪ್ತಾಹ, ಶ್ರೀ ರಾಮ ಕ್ಷೇತ್ರದ ಪ್ರತಿಷ್ಠಾ ಜಾತ್ರಾ ಮಹೋತ್ಸವ ಮತ್ತು ಮಹಾ ಬ್ರಹ್ಮ ರಥೋತ್ಸವ ಹಾಗೂ ಶ್ರೀ ದೇವಲಿಂಗೇಶ್ವರ ದೇವಸ್ಥಾನದ ಮಹೋತ್ಸವವು ವಿಜೃಂಭಣೆಯಿಂದ ನಡೆಯುತ್ತದೆ.

ಸಾಮಾಜಿಕ ಧ್ಯೇಯ

ಬದಲಾಯಿಸಿ

ದೇವಸ್ಥಾನದ ಆಡಳಿತವು ಮಠಾಧೀಶ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ೧೦ ಧರ್ಮದರ್ಶಿಗಳನ್ನು(ಟ್ರಸ್ಟೀಸ್) ಒಳಗೊಂಡ ವಿಶ್ವಸ್ಥ ಮಂಡಳಿ ಮತ್ತು ಭಕ್ತರನ್ನು ಒಳಗೊಂಡು ನಡೆಯುತ್ತಿದೆ. ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟ ಶಿಷ್ಯರಾಗಿರುವ ಜ್ಞಾನಯೋಗಿ ಶಿಕ್ಷಣ ತಜ್ಞರು, ವಿದ್ವಾಂಸರೂ ಆಗಿರುವ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಕ್ಷೇತ್ರವನ್ನು ಸಮಾಜಮುಖಿಯಾಗಿ ಮುನ್ನಡೆಸುತ್ತಿದ್ದಾರೆ. ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿ ಕನ್ಯಾಡಿಯಿಂದ ನಾಲ್ಕು ಕಿಲೋಮೀಟರ್ ದೂರದ ಕಲ್ಮಂಜ ಗ್ರಾಮ(ಈಗ ಧರ್ಮಸ್ಥಳ)ದ ದೇವರಗುಡ್ಡೆಯಲ್ಲಿ ಜಾಗವನ್ನು ಖರೀದಿಸಿ ‘ಗುರುದೇವ ಆಶ್ರಮ’ ಹೆಸರಿನ ಆಶ್ರಮವನ್ನು ಕಟ್ಟಿದರು. ಆ ನಂತರ ಆಶ್ರಮನ್ನು ಮಠವಾಗಿ ಪರಿವರ್ತಿಸಲಾಯಿತು ಮತ್ತು ಮಕ್ಕಳಿಗೆ ಶಿಕ್ಷಣದ ಜೊತೆಗೆ ಊಟ ಮತ್ತು ವಸತಿಯನ್ನು ನೀಡುವ ‘ಆತ್ಮಾನಂದ ಸರಸ್ವತಿ ವಿದ್ಯಾಲಯ’ವನ್ನು ಆರಂಭಿಸಲಾಯಿತು. ಇಲ್ಲಿ ಕ್ಷೇತ್ರದ ಆಶ್ರಯದಲ್ಲಿ ಶೈಕ್ಷಣಿಕ ಕೊಡುಗೆಗಾಳಾಗಿ ಒಂದನೇ ತರಗತಿಯಿಂದ ಆಂಗ್ಲಮಾಧ್ಯಮ ಶಾಲೆ ಕಾರ್ಯಚರಿಸುತ್ತಿದ್ದು, ೪೦೦ ಮಕ್ಕಳಿಗೆ ಗುರುಕುಲ ಮಾದರಿಯ ಶಿಕ್ಷಣವನ್ನು ವಸತಿ ಸೌಲಭ್ಯದೊಂದಿಗೆ ಉಚಿತವಾಗಿ ನೀಡಲಾಗುತ್ತಿದೆ. ಇಲ್ಲಿ ಸಾಮಾನ್ಯ ಶಿಕ್ಷಣದೊಂದಿಗೆ ಯಜುರ್ವೇದ, ವಾಸ್ತು, ಜ್ಯೋತಿಷ್ಯ ಶಿಕ್ಷಣವನ್ನೂ ನೀಡಲಾಗುತ್ತಿದೆ. ಇದೇ ರೀತಿಯಲ್ಲಿ ದೇವಸ್ಥಾನದ ಟ್ರಸ್ಟ್ ‘ಶ್ರೀ ಸದ್ಗುರು ನಿತ್ಯಾನಂದ ಮಕ್ಕಳ ಅನಾಥಾಶ್ರಮ'ವನ್ನೂ ನಡೆಸುತ್ತಿದೆ. ‘ವೇದ ಪಾಠ ಶಾಲೆ’ಯಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ವೇದ ಶಿಕ್ಷಣವನ್ನೂ ನೀಡಲಾಗುತ್ತಿದೆ.

ಕ್ಷೇತ್ರದ ಮುಂದಿನ ಯೋಜನೆಯಾಗಿ ಒಂಭತ್ತು ಶಾಖಾ ಮಠಗಳನ್ನು ಸ್ಥಾಪಿಸುವ ಕನಸನ್ನು ಹೊಂದಿದೆ. ಈ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯ ಬಾರ್ಕೂರಿನ ಬಿಲ್ಲಾಡಿಯಲ್ಲಿ ೧೫ ಎಕ್ರೆ ಜಾಗದಲ್ಲಿ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಫಿಟ್ಟರ್ ಶಿಕ್ಷಣದೊಂದಿಗೆ ಶ್ರೀ ಆತ್ಮಾನಂದ ಸರಸ್ವತಿ ಐಟಿಐ ಪ್ರಾರಂಭವಾಗಿದೆ. ಇದರಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ಟ್ರಸ್ಟ್‌ನ ಸದಸ್ಯರು ಹಾಗೂ ಭಕ್ತಾದಿಗಳ ಸಹಾಯದಿಂದ ನೀಡಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ೮೦೦ ವರ್ಷಗಳ ಇತಿಹಾಸವಿರುವ ಮಠದಲ್ಲಿ ಶಾಖಾ ಮಠ ನಡೆಯುತ್ತಾ ಇದೆ. ಇದೇ ಉತ್ತರ ಕನ್ನಡದ ಹೊನ್ನಾವರದ ಕರ್ಕಿ ಎಂಬಲ್ಲಿ ೨ ಎಕ್ರೆ ಜಾಗದಲ್ಲಿ ಮಠದ ನಿರ್ಮಾಣ ನಡೆಯುತ್ತಿದ್ದರೆ, ರಾಜಸ್ಥಾನ ರಾಜ್ಯದ ರಾಜಸಮಂಡ್ ನಾಗೂರು ಎಂಬಲ್ಲಿ ಭಕ್ತರೋರ್ವರಿಂದ ಮಠದ ನಿರ್ಮಾಣ ಕಾರ್ಯ ಆರಂಭವಾಗಿದೆ. ಈ ರೀತಿಯಾಗಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಈಗಿನ ಸ್ವಾಮೀಜಿಯವರು ಮುನ್ನಡೆಸುತ್ತಿದ್ದಾರೆ.

ಭಕ್ತಾದಿಗಳಿಗೆ ಪ್ರತಿ ಮಧ್ಯಾಹ್ನ ಉಚಿತ ಊಟ ನೀಡುವ ಉದ್ದೇಶದಿಂದ ನಾಲ್ಕು ಮಹಡಿಗಳ ಅನ್ನಪೂರ್ಣೇಶ್ವರಿ ಅನ್ನಛತ್ರವನ್ನು ದೇವಸ್ಥಾನದ ಮುಂಭಾಗದಲ್ಲಿ ನಿರ್ಮಿಸಲಾಗಿದೆ. ಇದೇ ರೀತಿಯಲ್ಲಿ ಭಕ್ತರ ವಿಶ್ರಾಂತಿಗಾಗಿ ದೇವಸ್ಥಾನದ ಪಕ್ಕದಲ್ಲಿ ಒಂದು ವಸತಿ ಗೃಹವನ್ನೂ ನಿರ್ಮಿಸಲಾಗಿದೆ.[]

ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿ

ಬದಲಾಯಿಸಿ

ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರು ಈ ಕ್ಷೇತ್ರದ ನಿರ್ಮಾತೃ. ಅವರು ಶ್ರೀ ನಿತ್ಯಾನಂದ ಸ್ವಾಮೀಜಿಯವರ ಶಿಶ್ಯರಾಗಿದ್ದರು. ಶ್ರೀ ನಿತ್ಯಾನಂದ ಸ್ವಾಮೀಜಿಗಳು ಕೇರಳದಲ್ಲಿ ಜನಿಸಿದರು. ದೇಶದಾದ್ಯಂತ ಲಕ್ಷಾಂತರ ಜನರು ಪೂಜ್ಯ ಭಾವನೆಯಿಂದ ನೋಡುತ್ತಿದ್ದ ವಿಶಿಷ್ಠ ಸಾಧು ಅವರಾಗಿದ್ದರು. ಅವರು ಏಳು ವರ್ಷದವರಾಗಿದ್ದಾಲೇ ಬಹಳ ಸಣ್ಣ ವಯಸ್ಸಿನಲ್ಲಿ ಆಧ್ಯಾತ್ಮದ ಕಡೆಗೆ ಆಕರ್ಷಿತರಾದರು ಮತ್ತು ಆರಂಭಿಕ ವಯಸ್ಸಿನಲ್ಲೇ ಧ್ಯಾನವನ್ನು ಆರಂಭಿಸಿದರು. ಹಲವು ವರ್ಷಗಳ ತನಕ ಕೇರಳದ ಉತ್ತರ ಕರಾವಳಿಯ ನೀಲೇಶ್ವರ ಸಮೀಪದ ಗುರುವನ ಗುಹೆಯಲ್ಲಿ ಜೀವಿಸುತ್ತಿದ್ದರು ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಪಡೆಯಲು ತಮ್ಮ ಧ್ಯಾನವನ್ನು ಮುಂದುವರಿಸಿದರು, ಅದನ್ನೇ ಅಷ್ಟಸಿದ್ಧಿ ಎಂದು ಕರೆಯಲಾಗುತ್ತದೆ. ಇಂಥ ಅಲೌಕಿಕ ಶಕ್ತಿಯನ್ನೇ ಅವರು ಸಮಸ್ತರ ಕಲ್ಯಾಣಕ್ಕಾಗಿ ಬಳಸಿದರು. ಅವರ ಬಗ್ಗೆ ಅನೇಕ ದಂತಕಥೆಗಳು ಇವತ್ತಿಗೂ ಚಾಲನೆಯಲ್ಲಿವೆ.

ಶ್ರೀ ನಿತ್ಯಾನಂದ ಸ್ವಾಮಿಗಳು ತಮ್ಮ ಧರ್ಮಸ್ಥಳ ಯಾತ್ರೆಯ ಸಂದರ್ಭದಲ್ಲಿ ಇದೇ ಶ್ರೀ ರಾಮ ಕ್ಷೇತ್ರದ ಸ್ಥಳದಲ್ಲಿ ಒಂದು ದಿನ ತಂಗಿದ್ದರು, ಆ ಸಂದರ್ಭದಲ್ಲಿ ಭಕ್ತರು ಅವರನ್ನು ಭೇಟಿಯಾಗಿ ಅವರಿಂದ ಆಶೀರ್ವಾದ ಪಡೆದರು.ಅವರು ಈ ಸ್ಥಳದಲ್ಲಿ ದೇವ ಶ್ರೀ ರಾಮನ ಮಂದಿರವನ್ನು ನಿರ್ಮಾಣ ಮಾಡಬೇಕೆಂಬ ಯೋಚನೆ ಮಾಡಿದರು.

ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿ ಮುಂಬೈನ ‘ಥಾಣೆಯ ಗಣೇಶ್‍ಪುರಿ’ಯಲ್ಲಿ ತಮ್ಮ ಪಾಠವನ್ನು ೧೯೩೭ರಿಂದ ೧೯೬೧ರ ಮಧ್ಯೆ ಅಭ್ಯಸಿಸಿದರು. (ಶ್ರೀ ನಿತ್ಯಾನಂದ ಸ್ವಾಮೀಜಿಗಳ ಸಮಾಧಿಯವರೆಗೆ). ಅಭ್ಯಾಸದ ಸಂದರ್ಭದಲ್ಲಿ ಅವರ ಗುರುಗಳು, ಧರ್ಮಸ್ಥಳ ಗ್ರಾಮದಲ್ಲಿ ರಾಮನ ದೇವಸ್ಥಾನದ ರಚನೆ ಮಾಡಬೇಕೆಂಬ ತಮ್ಮ ಬಯಕೆಯನ್ನು ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರಿಗೆ ತಿಳಿಸಿದರು. ಅದರ ಅನ್ವಯ ತಮ್ಮ ಗುರುಗಳ ಬಯಕೆಯಂತೆ ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರು ಧರ್ಮಸ್ಥಳ ಗ್ರಾಮಕ್ಕೆ ೧೯೬೯ರಲ್ಲಿ ಬಂದು, ತಮ್ಮ ಗುರುಗಳ ಬಯಕೆಯನ್ನು ಈಡೇರಿಸಲು ಪ್ರಯತ್ನಪಟ್ಟರು. ಅವರು ಶ್ರೀ ರಾಮ ಕ್ಷೇತ್ರದ ಸ್ಥಳವನ್ನು ೧೯೭೧ರಲ್ಲಿ ಶ್ರೀ ಧರ್ಮಸ್ಥಳ ಕ್ಷೇತ್ರದ ಶಾನುಭಾಗರಾಗಿದ್ದ (ಗ್ರಾಮ ಲೆಕ್ಕಿಗ) ಸೂರ್ಯ ನಾರಾಯಣ ರಾವ್ ದೊಂಡೋಲೆ ಇವರಿಂದ ಬಳುವಳಿಯಾಗಿ ಪಡೆದರು. ಅವರು ಹುಲ್ಲು ಛಾವಣಿಯಿಂದ ನಿರ್ಮಿತ ಕಟ್ಟಡ ಪಡೆದು ಅದರಲ್ಲಿ “ಭಗವಾನ್ ಶ್ರೀ ನಿತ್ಯಾನಂದ ಮಂದಿರ”ವನ್ನು ಆರಂಭಿಸಿದರು. ತಕ್ಷಣ ಭಕ್ತರು ಅಲ್ಲಿ ಸೇರಲು ಆರಂಭಿಸಿದರು. ನಂತರ ಪ್ರತಿ “ರಾಮ ನವಮಿ”ಯ ಹಬ್ಬದ ಸಂದರ್ಭದಲ್ಲಿ ಇಲ್ಲಿ ಪ್ರತಿವರ್ಷ ಏಳು ದಿನಗಳ “ರಾಮ ಭಜನಾ ಸಪ್ತಾಹ”ವನ್ನು ಆರಂಭಿಸಲಾಯಿತು. ಸ್ಥಳೀಯ ಹಾಗೂ ದೂರದ ಊರಿನಿಂದ ಸಾವಿರಾರು ಶ್ರೀ ರಾಮನ ಭಕ್ತರು ಬಂದು ಸೇರಿ ”ನಂದಾ ದೀಪ”ದ ಸುತ್ತಲೂ ಕುಣಿಯುತ್ತಾ ರಾಮ ತಾರಕ ಮಂತ್ರದ ಜಪ ಮಾಡಲು ಆರಂಭಿಸಿದರು.

ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಗಳು ಭಾರತದಾದ್ಯಂತ ಮಠದ ೯ ಶಾಖೆಗಳನ್ನು ಆರಂಭಿಸಲು ಉದ್ಧೇಶಿಸಿದ್ದರು. ಆದರೆ ಅವರಿಗೆ ಜೀವಿತಾವಧಿಯಲ್ಲಿ ತಮ್ಮ ಇಚ್ಛೆಯನ್ನು ಪೂರೈಸಲಾಗಲಿಲ್ಲ. ಅವರ ಸಮಾಧಿಯ ನಂತರ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳು ತಮ್ಮ ಗುರುಗಳ ಇಚ್ಛೆಯನ್ನು ಪೂರೈಸುವ ನಿರ್ಧಾರ ಕೈಗೊಂಡರು.

ಸಮಾಜದ ಎಲ್ಲಾ ಜಾತಿ ಮತ್ತು ಧರ್ಮದ ಜನರಿಗೂ ಮೌಲಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ವೈದಿಕ ಜ್ಞಾನವನ್ನು ನೀಡುವುದೇ ಈ ಎಲ್ಲಾ ಕೇಂದ್ರಗಳ ಉದ್ಧೇಶವಾಗಿದೆ.[]

ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

ಬದಲಾಯಿಸಿ

ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರನ್ನು ಶ್ರೀ ರಾಮ ಕ್ಷೇತ್ರದ ಗುರು ಪೀಠಕ್ಕೆ ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರ ಉತ್ತರಾಧಿಕಾರಿಯಾಗಿ ಆಯ್ಕೆಮಾಡಲಾಯಿತು.

  • ಆರಂಭಿಕ ಜೀವನ

ಬೆಂಗಳೂರಿನಲ್ಲಿ ರಾಜ್ಯ ಕೃಷಿ ನಿರ್ದೇಶಕರಾಗಿ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಸಮುದಾಯ ಅಭಿವೃದ್ಧಿ ಅಧಿಕಾರಿಯಾಗಿ ಎಮ್.ಆರ್.ಪಿ.ಎಲ್ ಮಂಗಳೂರಿನಲ್ಲಿ, ಹಾಗೂ ಕಾನೂನು ಅಭ್ಯಾಸಕರಾಗಿ ಪ್ರಸಿದ್ಧ ವಕೀಲ ಪುರುಷೋತ್ತಮ ಪೂಜಾರಿ ಮಂಗಳೂರು ಇವರಲ್ಲಿ ಹತ್ತು ವರ್ಷಗಳ ಕಾಲ ಕೆಲಸ ಮಾಡಿದರು. ಸ್ವಾಮೀಜಿಗಳು ತಮ್ಮ ೧೬ನೇ ವಯಸ್ಸಿನಲ್ಲೇ ತಮ್ಮ ತಂದೆಯವರಿಂದ ಧಾರ್ಮಿಕ ನಿರ್ದೇಶನಗಳನ್ನು ಹಾಗೂ ಓಂಕಾರ ದೀಕ್ಷೆಯನ್ನು ಪಡೆದರು.

ಆಧ್ಯಾತ್ಮ ದೀಕ್ಷೆಯನ್ನು ಅವಧೂತ ನಿತ್ಯಾನಂದ ಸ್ವಾಮೀಜಿಗಳ ಉತ್ತರಾಧಿಕಾರಿಗಳಾದ ಅವಧೂತ ಗೋವಿಂದ ಸ್ವಾಮೀಜಿಗಳಿಂದಲೂ ಆಧ್ಯಾತ್ಮಾನುಭವವನ್ನು ‘ಶ್ರೀ ವಿಜಯಾನಂದ ಸ್ವಾಮೀಜಿ ಬೆಳಗಾವಿ’ ಇವರಿಂದಲೂ ಪಡೆದರು. ಸ್ವಾಮೀಜಿಗಳು ಉತ್ತರ ಮತ್ತು ದಕ್ಷಿಣ ಭಾರತದಾದ್ಯಂತ ಸಂಚರಿಸಿದ್ದು, ಪವಿತ್ರ ಸ್ಥಳಗಳಾದ ಶಿಮ್ಲಾದ ವ್ಯಾಸ ಗುಹೆ, ವೈಷ್ಣೋ ದೇವಿ, ಅಮರನಾಥ, ಹರಿದ್ವಾರ, ಹೃಶಿಕೇಶ, ಕೇದಾರ, ಬದರಿ, ಗಂಗೋತ್ರಿ, ಯಮುನೋತ್ರಿ, ಕುರುಕ್ಷೇತ್ರ ಮತ್ತು ದ್ವಾದಶ ಜ್ಯೋತಿರ್ಲಿಂಗಗಳಿಗೆ ಭೀಟಿ ನೀಡಿದ್ದಾರೆ, ಅಲ್ಲದೆ ಸಾಧುಗಳಿಂದ ಆಶೀರ್ವಾದವನ್ನೂ ಪಡೆದುಕೊಂಡಿದ್ದಾರೆ. ಇದಲ್ಲದೆ ಮಾನಸ ಸರೋವರ, ಚೀನಾಕೈಲಾಸ ಪರ್ವತ ಮತ್ತು ನೇಪಾಳಪಶುಪತಿನಾಥ ದೇವಾಲಯಕ್ಕೂ ಭೇಟಿ ನೀಡಿದ್ದಾರೆ.

ಸ್ವಾಮೀಜಿಗಳ ಶಿಷ್ಯತ್ವ ಸ್ವೀಕಾರ ಕಾರ್ಯಕ್ರಮವು ೧೧ನೇ ಜನವರಿ ೨೦೦೯ರಲ್ಲಿ ನಡೆಯಿತು. ಪಟ್ಟಾಭೀಷೇಕ ಕಾರ್ಯಕ್ರಮ ೩ನೇ ಸೆಪ್ಟೆಂಬರ್ ೨೦೦೯ರಲ್ಲಿ ನೆರವೇರಿತು.[]

ಸಂಪರ್ಕ

ಬದಲಾಯಿಸಿ

ಮಂಗಳೂರಿನ ಕಂಕನಾಡಿ ಹತ್ತಿರದ ರೈಲ್ವೇ ನಿಲ್ದಾಣವಾಗಿದ್ದು, ಮಂಗಳೂರು ಹತ್ತಿರದ ವಿಮಾನ ನಿಲ್ದಾಣವೂ ಆಗಿದೆ. ಮಂಗಳೂರಿನಿಂದ ಸಾಕಷ್ಟು ಬಸ್ ಹಾಗೂ ಬಾಡಿಗೆ ವಾಹನಗಳ ಸೌಕರ್ಯವಿದ್ದು ಪುಣ್ಯ ಶ್ರೀ ರಾಮ ಕ್ಷೇತ್ರದ ದರ್ಶನಕ್ಕೆ ಅನುಕೂಲಕರವಾಗಿವೆ.

ವಿಳಾಸಗಳು

ಬದಲಾಯಿಸಿ
  • ಶ್ರೀ ರಾಮ ಕ್ಷೇತ್ರ, ನಿತ್ಯಾನಂದ ನಗರ, ಕನ್ಯಾಡಿ, ಧರ್ಮಸ್ಥಳ ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ, ಕರ್ನಾಟಕ-೫೭೪೨೧೬
  • ಶ್ರೀ ಗುರುದೇವ ಮಠ, ದೇವರ ಗುಡ್ಡೆ, ಧರ್ಮಸ್ಥಳ ಅಂಚೆ ಮತ್ತು ಗ್ರಾಮ, ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ, ಕರ್ನಾಟಕ-೫೭೪೨೧೬
  • ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಶ್ರೀ ರಾಮ ಕ್ಷೇತ್ರ, ನಿತ್ಯಾನಂದ ನಗರ, ಕನ್ಯಾಡಿ, ಧರ್ಮಸ್ಥಳ ಅಂಚೆ ಮತ್ತು ಗ್ರಾಮ, ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ, ಕರ್ನಾಟಕ-೫೭೪೨೧೬

ದೂರವಾಣಿ:೦೮೨೫೬-೨೭೭೧೬೨(o),೨೭೬೦೦(o),೨೭೭೧೬೧(ಆಶ್ರಮ) ಇ-ಮೇಲ್:swamijishreeramakshetra@gmail.com[]

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ http://www.deccanherald.com/content/205676/F
  2. ೨.೦ ೨.೧ ೨.೨ ೨.೩ ೨.೪ "ಆರ್ಕೈವ್ ನಕಲು". Archived from the original on 2020-09-22. Retrieved 2014-04-16.

ಬಾಹ್ಯ ಸಂಪರ್ಕಗಳು

ಬದಲಾಯಿಸಿ