ತ್ರ್ಯಂಬಕೇಶ್ವರವು ( ಮರಾಠಿಯಲ್ಲಿ ತ್ರಿಂಬಕೇಶ್ವರ್ ) ಮಹಾರಾಷ್ಟ್ರನಾಶಿಕ್ ಜಿಲ್ಲೆಯ ತ್ರಿಂಬಕ್ ಪಟ್ಟಣದಲ್ಲಿನ ಒಂದು ಪ್ರಾಚೀನ ಹಿಂದೂ ದೇವಾಲಯ. ಇದು ನಾಶಿಕ್ ನಗರದಿಂದ ೨೮ ಕಿ.ಮೀ. ದೂರದಲ್ಲಿ ಗೋದಾವರಿ ನದಿಯ ಉಗಮಸ್ಥಾನದ ಬಳಿಯಲ್ಲಿದೆ. ಶಿವದೇವಾಲಯವಿರುವ ಈ ಕ್ಷೇತ್ರವು ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದು. ಸಮೀಪದಲ್ಲಿನ ಬ್ರಹ್ಮಗಿರಿ ಬೆಟ್ಟದಸಾಲಿನಲ್ಲಿ ಉದ್ಬವಿಸುವ ಗೋದಾವರಿ ನದಿಯು ಭಾರತ ಜಂಬೂದ್ವೀಪದ ಅತಿ ಉದ್ದದ ನದಿಯಾಗಿದೆ. ತ್ರ್ಯಂಬಕೇಶ್ವರದ ಕುಶಾವರ್ತ ಎಂಬ ಕುಂಡದಿಂದ ಮುಂದೆ ಗೋದಾವರಿಯ ಹರಿವು ಸ್ಪಷ್ಟವಾಗುವುದರಿಂದ ಈ ಸ್ಥಾನವನ್ನು ಹಿಂದೂ ಶ್ರದ್ಧಾಳುಗಳು ಪವಿತ್ರವೆಂದು ಭಾವಿಸಿ ಪುಣ್ಯಸ್ನಾನ ಕೈಗೊಳ್ಳುವರು. ತ್ರ್ಯಂಬಕೇಶ್ವರದದ ವೈಶಿಷ್ಟ್ಯವೆಂದರೆ ಇಲ್ಲಿನ ಜ್ಯೋತಿರ್ಲಿಂಗವು ಮೂರು ಮುಖಗಳನ್ನು ಹೊಂದಿದ್ದು ಈ ಮುಖಗಳು ಬ್ರಹ್ಮ, ವಿಷ್ಣು ಮತ್ತು ಶಿವನ ಪ್ರತೀಕವಾಗಿವೆ. ಭಾರತದ ಉಳಿದ ಹನ್ನೊಂದು ಜ್ಯೋತಿರ್ಲಿಂಗಗಳೆಲ್ಲವೂ ಶಿವಪ್ರಧಾನವಾಗಿವೆ. ಬ್ರಹ್ಮಗಿರಿ ಬೆಟ್ಟಗಳ ತಪ್ಪಲಿನಲ್ಲಿರುವ ತ್ರ್ಯಂಬಕೇಶ್ವರ ದೇವಾಲಯವು ಕರಿಕಲ್ಲಿನಿಂದ ಕಟ್ಟಲ್ಪಟ್ಟಿದ್ದು ಸುಂದರ ವಾಸ್ತುಶಿಲ್ಪಕ್ಕೆ ಹೆಸರಾಗಿದೆ. ಇಲ್ಲಿಂದ ೭ ಕಿ.ಮೀ. ದೂರದಲ್ಲಿರುವ ಅಂಜನೇರಿ ಪರ್ವತವು ಹನುಮಂತನ ಜನ್ಮಸ್ಥಾನವೆಂದು ಹೇಳಲ್ಪಡುವುದು.

ತ್ರ್ಯಂಬಕೇಶ್ವರ ಮಂದಿರ

ಹೆಸರು: ತ್ರ್ಯಂಬಕೇಶ್ವರ ಮಂದಿರ
ಪ್ರಮುಖ ದೇವತೆ: ಶಿವ
ವಾಸ್ತುಶಿಲ್ಪ: ಮೇಮದಪಂದಿ
ತ್ರಿಂಬಕೇಶ್ವರ ಮಂದಿರ,ನಾಸಿಕ್
ಗೋಪುರ ಸಮೀಪ ನೋಟ,ತ್ರಿಂಬಕೇಶ್ವರ ಮಂದಿರ
ಮಹಾದ್ವಾರ ಪ್ರವೇಶ ಮಾರ್ಗ,ತ್ರಂಬಕೇಶ್ವರ ಮಂದಿರ
ಕುಶವರ್ತ

ಸ್ಥಳ ಶ್ರೀ ತ್ರ್ಯಂಭಕೇಶ್ವರ ಜ್ಯೋತಿರ್ಲಿಂಗವು ಮಹಾರಾಷ್ಟ್ರದ ನಾಸಿಕ ನಗರದಿಂದ ೨೮ ಕಿ.ಮೀಟರ್ ದೂರದಲ್ಲಿದೆ. ಅದು ಗೋದಾವರಿನದಿಯ ಉಗಮದ ಹತ್ತಿರವಿದೆ.[]

  • ಗೋದಾವರಿನದಿಯಲ್ಲಿ ಮಿಂದು (ಸ್ನಾನಮಾಡಿ) ಶಿವನ ಪೂಜೆಗೆ ಹೋಗಬೇಕು. ಪೂಜೆಗೆ ಬೇಕಾದ ಆರತಿ , ದೀಪ, ಉಡುಗೆ ಹಾಕಲು ತೆಂಗಿನಕಾಯಿ , ಎಲ್ಲಾ ಮಂಗಳದ್ರವ್ಯಗಳನ್ನು ನದಿಯ ಸೋಪಾನದ ಮೇಲೆ ಮಾರಲು ಇಟ್ಟಿರುತ್ತಾರೆ. ಪೂಜೆಮಾಡಿ ದೀಪಹಚ್ಚಿ ನದಿಯಲ್ಲಿ ತೇಲಿಬಿಡಬೇಕು. ಆ ದೃಶ್ಯ ನೋಡಲು ಬಹಳ ಚಂದ. ಗೋರಾರಾಮ, ಕಾಲಾರಾಮ , ಆಂಜನೇಯ , ದುರ್ಗಾ ಮೊದಲಾದ ಅನೇಕ ಪುರಾತನ ಸುಂದರ ದೇವಾಲಯಗಳಿವೆ . ಅವುಗಳನ್ನೆಲ್ಲಾ ದರ್ಶನ ಮಾಡಿಕೊಂಡು ಪಂಚವಟಿಗೆ ಹೋಗಬೇಕು. ಸೀತಾಮಾತೆ ನೆಲಸಿದ ಪಂಚ ವಟ ವೃಕ್ಷಗಳ ದರ್ಶನ ಮಾಡಿಕೊಂಡು ರಾಮಾಯಣ ಕಾಲಕ್ಕೆ ಹೋಗಿಬರಬಹುದು.

ಶ್ರೀ ತ್ರ್ಯಂಭಕೇಶ್ವರ ಜ್ಯೋತಿರ್ಲಿಂಗ ದೇವಾಲಯ

ಬದಲಾಯಿಸಿ
  • ಶ್ರೀ ತ್ರ್ಯಂಭಕೇಶ್ವರ ಜ್ಯೋತಿರ್ಲಿಂಗ ದೇವಾಲಯದ ಪ್ರಾಂಗಣ ಬಹಳ ವಿಶಾಲವಾಗಿದೆ. ದೊಡ್ಡ ಸಂಖ್ಯೆಯಲ್ಲಿ ಭಕ್ತರು ಬರುವುದರಿಂದ ಸರತಿ ಸಾಲಿನಲ್ಲಿ ಶಿವನ ದರ್ಶನಕ್ಕೆ ಹೋಗಬೇಕಾಗುವುದು. ವಿಶೇಷ ಪೂಜೆಯ ಬಗ್ಗೆ ವಿಚಾರಿಸುತ್ತಾರೆ. ಹಾಗೆ ವಿಶೇಷ ಪೂಜೆ ಅಭಿಷೇಕ ಮಾಡಿಸಿದರೆ ಬೇಗ ದೇವರ ದರ್ಶನ ಮಾಡಬಹುದು. ಸರತಿಸಾಲಿನಲ್ಲಿ ಸಾಗಿದರೆ ವಿಶಾಲ ಹೊರ ಹೆಚ್ಚು ಬೆಳಕಿಲ್ಲದ ಆವರಣಕ್ಕೆ ಬರುತ್ತದೆ. ಅಲ್ಲಿ ಸದಾ ನಾನಾ ಹೋಮ ಹವನಗಳು ನಡೆಯುತ್ತಿರುತ್ತವೆ. ಅಲ್ಲಿಂದ ಗರ್ಭಗುಡಿಯ ಬಳಿ ಬಂದರೆ ಶ್ರೀ ತ್ರ್ಯಂಭಕೇಶ್ವರ ಜ್ಯೋತಿರ್ಲಿಂಗದ ದರ್ಶನವಾಗುತ್ತದೆ. ದೇವರಿಗೆ ಅರ್ಚಕರೇ ಪೂಜೆ ಮಾಡುತ್ತಾರೆ. ದೇವಾಲಯದ ಮುಂಭಾಗದ ಅಂಗಡಿಗಳಿಂದ ಪೂಜಾಸಾಮಗ್ರಿಗಳನ್ನು ತಂದುಕೊಡಬೇಕು. ಮಂಗಳಾರತಿ ಮಾಡುವಾಗ ಮಾತ್ರ ಶ್ರೀ ಜ್ಯೋತಿರ್ಲಿಂಗ ಸ್ಪಷ್ಟವಾಗಿ ಕಾಣುತ್ತದೆ. ಒಂದೇ ಪೀಠದ ಮೇಲೆ ಮೂರು ಸಣ್ಣ ಸಣ್ಣ ಲಿಂಗಗಳಿವೆ. ಅವನ್ನು ಬ್ರಹ್ಮ ವಿಷ್ಣು ಮಹೇಶ್ವರ ರೂಪವೆಂದು ಹೇಳುತ್ತಾರೆ. ದರ್ಶನವಾದ ಮೇಲೆ, ತೀರ್ಥ, ಪ್ರಸಾದ, ಮಂಗಳಾರತಿ ತೆಗೆದುಕೊಂಡು ಬೇಗ ಹೊರಡಬೇಕು. ಸರತಿ ಸಾಲು ಇರುವುದರಿಂದ ಹೆಚ್ಚು ನಿಲ್ಲುವಂತಿಲ್ಲ. ಗರ್ಭಗುಡಿಯೆದುರು ಗಣಪತಿಯ ಹಾಗೂ ಇತರೆ ವಿಗ್ರಹಗಳಿವೆ. ಮುಂದಿನ ಮಂಟಪದಲ್ಲಿ ಭವ್ಯವಾದ ನಂದಿಯ ದೊಡ್ಡ ವಿಗ್ರಹವಿದೆ. ಇಲ್ಲಿ ಶ್ರಾವಣ ಮಾಸ ಹಾಗೂ ಸೋಮವಾರದಂದು ವಿಶೇಷ ಪೂಜೆ ಇರುತ್ತವೆ.
  • ಶ್ರೀ ತ್ರ್ಯಂಭಕೇಶ್ವರ ಜ್ಯೋತಿರ್ಲಿಂಗ ದರ್ಶನದಿಂದ ಸಕಲ ಪಾಪಗಳೂ ನಾಶವಾಗಿ ಸುಖ ಶಂತಿ ದೊರೆಯುವುದೆಂದು ಭಕ್ತರ ನಂಬುಗೆ. ಈಗಿನ ಈ ದೇವಾಲಯವನ್ನು ಪೇಶ್ವೆ ಬಾಲಾಜಿ ಬಾಜಿರಾವ್ (ನಾನಾ ಸಾಹೇಬ್) ಕಟ್ಟಿಸಿದನೆಂದು ಇತಿಹಾಸ ಹೇಳುತ್ತದೆ.

ದೇವಾಲಯದ ಆವರಣದಲ್ಲಿ ಸುಂದರವಾದ ಅಮೃತಕುಂಡವಿದೆ. ನಾಸಿಕದಲ್ಲಿ ೧೨ ವರ್ಷಕ್ಕೊಮ್ಮೆ ಕುಂಭ ಮೇಳ ನೆಡೆಯುತ್ತದೆ. ಲಕ್ಷಾಂತರಜನ ಸೇರುತ್ತಾರೆ. ಇಲ್ಲಿಯ ನದಿಯ ಸ್ನಾನ ಘಟ್ಟಗಳು ವಿಶಾಲವಾಗಿ ಸುಂದರವಾಗಿವೆ.

ಶ್ರೀ ತ್ರ್ಯಂಭಕೇಶ್ವರ ಜ್ಯೋತಿರ್ಲಿಂಗದ ಸ್ಥಳ ಪುರಾಣ

ಬದಲಾಯಿಸಿ
  • ಇದು ಇತರೆ ಜ್ಯೋತಿಲಿಂಗಗಳ ಸ್ಥಳಪುರಾಣದಂತೆಯೇ ಇದೆ. ಈ ಜ್ಯೋತಿಲಿ೯ಂಗಗಳು ಶಿವನ ಜ್ಯೋತಿಯ ಅಂಶಗಳನ್ನು ಹೊಂದಿವೆ ಎಂದು ಹೇಳುತ್ತಾರೆ. ಬ್ರಹ್ಮ ಮತ್ತು ವಿಷ್ಣು ಇವರಲ್ಲಿ ಯಾರು ಮೇಲೆಂದು ಚರ್ಚೆಯಾದಾಗ, ಅವರು ಯಾರು ಮೇಲೆಂದು ಶಿವನನ್ನು ಕೇಳುವರು. ಶಿವನು ಮೂರು ಜ್ಯೋತಿಗಳ (ಬೆಳಕಿನ) ಕಂಬಗಳನ್ನು ಸೃಷ್ಠಿಸಿದನು (ಜ್ಯೋತಿರ್ಲಿಂಗ). ವಿಷ್ಣು ಮತ್ತು ಬ್ರಹ್ಮರಿಗೆ ಅದರ ಮೇಲಿನ ಮತ್ತು ಕೆಳಗಿನ ತುದಿಯನ್ನು ಕಂಡುಹಿಡಿಯಲು ತಿಳಿಸಿದನು. ವಿಷ್ಣುವು ಅದರ (ಮೇಲಿನ) ತುದಿಯನ್ನು ಕಾಣದೇ ಹಿಂತುರುಗಿ ಬಂದು ತನಗೆ ಆ ಲಿಂಗದ ತುದಿ ಸಿಗದಿರುವ ವಿಷಯ ತಿಳಿಸಿದನು. ಆದರೆ ಬ್ರಹ್ಮನು ತಾನು ನೋಡಿರುವದಾಗಿ ಹೇಳಿದನು. ಈಶ್ವರನು ಎರಡನೇ ಜ್ಯೋತಿಸ್ಥಂಬವಾಗಿದ್ದು ಬ್ರಹ್ಮನು ಸುಳ್ಳು ಹೇಳಿದನೆಂದು ತಿಳಿದು ಅವನಿಗೆ ಪೂಜೆಯಿಲ್ಲದಿರಲಿ ಎಂದು ಶಪಿಸಿದನು .ಅದರೆ ಸತ್ಯ ಹೇಳಿದ ವಿಷ್ಣು ವು ಪೂಜೆಗೆ ಅರ್ಹನೆಂದು ಹೇಳಿದನು ಆ ಜ್ಯೋತಿಯೇ ಈ ಜ್ಯೋತಿರ್ ಲಿಂಗವಾಗಿದೆ ಎಂದು ಶಿವ ಪುರಾಣ ಹೇಳುತ್ತದೆ.

ಗೋದಾವರಿ ನದಿಯಯ ಉಗಮದ ಕಥೆ[]

ಬದಲಾಯಿಸಿ
  • ಗಂಗೆಯನ್ನು ಬ್ರಹ್ಮನು ಪೂಜಿಸಿದಾಗ ತ್ರಿವಿಕ್ರಮನ ಪಾದದಿಂದ ಹೊರಟ ಗಂಗೆಯು ಶಿವನ ಜಟೆಯಲ್ಲಿ ಬಂಧಿಸಲ್ಪಟ್ಟಳು. ಭೂಮಿಯಲ್ಲಿ ೨೪ ವರ್ಷಗಳಕಾಲ ಮಳೆ ಇಲ್ಲದೆ ಬರಗಾಲ ಬಂದಿತು . ಗೌತಮ ಮುನಿಯು ತ್ರ್ಯಂಬಕೇಶ್ವರದಲ್ಲಿದ್ದ ಅವನ ಆಶ್ರಮದಲ್ಲಿದ್ದನು. ಅವನು ನೀರಿಗಾಗಿ ತಪಸ್ಸು ಮಾಡಿದನು. ವರುಣನು ಅವನ ತಪಸ್ಸಿಗೆ ಮೆಚ್ಚಿ ಅವನ ಆಶ್ರಮ ಪ್ರದೇಶಕ್ಕೆ ಮಾತ್ರ ಮಳೆ ಸುರಿಸಿದನು. ಗೌತಮನು ಬೆಳಿಗ್ಗೆ ಬೀಜ ಬಿತ್ತಿ - ಸಂಜೆ ಫಸಲು ಕೊಯಿದು ಎಲ್ಲರಿಗೂ ಉಣಬಡಿಸುತ್ತಿದ್ದನು. ಋಷಿ ಸಮೂಹವೆಲ್ಲಾ ಅವನ ಆಶ್ರಮದಲ್ಲಿ ಆಶ್ರಯ ಪಡೆದರು. ಆ ಋಷಿಗಳ ಆಶೀರ್ವಾದ ಬಲದಿಂದ ಗೌತಮನ ಪುಣ್ಯ ಹೆಚ್ಚಿ ಇಂದ್ರನ ಪದವಿಗೆ ಆಪತ್ತು ಬಂದಿತು. ಇಂದ್ರನು ಮೋಡಗಳಿಗೆ ದೇಶಾದ್ಯಂತ ಮಳೆ ಸುರಿಸಲು ಆಜ್ಞೆಮಾಡಿದನು . ಅದರಿಂದ ಋಷಿಗಳೆಲ್ಲಾ ಅವರವರ ಆಶ್ರಮಗಳಿಗೆ ಹಿಂತಿರುಗಿ, ಗೌತಮನ ಪ್ರಾಮುಖ್ಯತೆ ಕಡಿಮೆಯಾಗಿ ಅವನ ಪುಣ್ಯ ಫಲವೂ ಕಡಿಮೆಯಾಗಲಿ ಎಂದು ಇಂದ್ರನು ಯೋಚಿಸಿದನು. ಆದರ ಗೌತಮನು ಋಷಿಗಳಿಗೆ ತನ್ನಲ್ಲಿಯೇ ಇರಲು ಒತ್ತಾಯಮಾಡಿದನು. ಒಂದುದಿನ ತನ್ನ ಹೊಲದಲ್ಲಿ ದನಗಳು ಮೇಯುತ್ತಿರುವುದನ್ನು ಕಂಡು ಒಂದು ಹಸುವಿಗೆ ಒಂದು ದರ್ಭೆಯಿಂದ ಹೊಡೆದನು. ಆ ಹಸು ಅದಕ್ಕೇ ಸತ್ತುಹೋಯಿತು. ಅದು ಪಾರ್ವತೀದೇವಿಯ ಗೆಳತಿ ಜಯಾ - ಗೋವಿನ ರೂಪದಿಂದ ಬಂದಿದ್ದಳು. ಋಷಿಗಳು ಗೋಹತ್ಯೆ ಯನ್ನು ನೋಡಿ ಅವನ ಆಶ್ರಮ ಬಿಟ್ಟು ಹೊರಟರು ಗೌತಮನು ಚಿಂತಿತನಾಗಿ ಗೋಹತ್ಯೆ ಯ ದೋಷಹೋಗಲು ಏನು ಮಾಡಬೇಕೆಂದು ಕೇಳಿದನು. ಅದಕ್ಕೆ ಅವರು ಗಂಗಾ ಜಲದಲ್ಲಿ ಸ್ನಾನ ಮಾಡಿದರೆ ಗೋಹತ್ಯೆಯ ದೋಷ ಪರಿಹಾರವಾಗುವುದೆಂದು ಹೇಳಿದರು
  • ಗಂಗೆಯು ಶಿವನ ಜಟೆಯಲ್ಲಿ ಬಂಧಿತಳಾಗಿದ್ದಳು. ಗೌತಮನು ಶಿವನನ್ನು ಕುರಿತು ತಪಸ್ಸುಮಾಡಿ ಭೂಮಿಗೆ ನೀರ ಹರಿಸಲು ಕೇಳಿದನು. ಶಿವನು ಗಂಗೆಗೆ ಹೇಳಿದರೂ ಅವಳು ಶಿವನನ್ನು ಬಿಟ್ಟು ಬರಲು ಇಷ್ಟಪಡಲಿಲ್ಲ. ಆಗ ಶಿವನು ಬ್ರಹ್ಮಗಿರಿ ಬೆಟ್ಟದ ಮೇಲೆ ತಾಂಡವ ನೃತ್ಯಮಾಡಿ ತನ್ನ ಜಟೆಯನ್ನು ಕೊಡಹಿದನು. ಗಂಗೆ ಅಲ್ಲೊಂದು ಕಡೆ ಇಲ್ಲೊಂದು ಕಡೆ ಬಿದ್ದು ಹರಿದು ಹೋಗಿ ಗೌತಮನ ಸ್ನಾನಕ್ಕೆ ಸಿಗಲಿಲ್ಲ. ಆಗ ಗೌತಮನು ದರ್ಭೆಯನ್ನು ಮಂತ್ರಿಸಿ ಅದರ ಕಟ್ಟೆ ಮಾಡಿ ಅದರಲ್ಲಿ ಶಿವನ ಜಟೆಯ ನೀರು ಬೀಳುವಂತೆ ಮಾಡಿದನು ಆಗ ಗಂಗಾಜಲ ಸಾಕಷ್ಟು ಸಂಗ್ರಹವಾಗಿ ಗೌತಮನು ಅದರಲ್ಲಿ ಸ್ನಾನ ಮಾಡಿ ಗೋಹತ್ಯೆಯ ದೋಷವನ್ನು ಕಳೆದುಕೊಂಡನು. ಆ ಗಂಗೆಯ ಕೊಳಕ್ಕೆ ಕುಶಾವರ್ತಎಂದು ಹೆಸರು ಬಂದಿತು. ಅಲ್ಲಿಂದಲೇ ಬ್ರಹ್ಮಗಿರಿ ಬೆಟ್ಟದಲ್ಲಿ ಗೋದಾವರೀ ನದಿಯು ಹುಟ್ಟಿ ಆಂಧ್ರದ ರಾಜಮುಂಡ್ರಿಯಲ್ಲಿ ಸಮುದ್ರ ಸೇರುವದು.
  • ತ್ರ್ಯಂಬಕೇಶ್ವರದಲ್ಲಿ ನಾನಾ ಬಗೆಯ ಧಾರ್ಮಿಕ ವಿಧಿಗಳನ್ನು ಮಾಡುತ್ತಾರೆ. ನಾರಾಯಣ ಬಲಿ, ತ್ರಿಪಿಂಡಿವಿಧಿ, ಕಾಳಸರ್ಪ ಶಾಂತಿ ಇತ್ಯಾದಿ.

ಮೂರನೇ ಮರಾಠಾ ಯುದ್ಧದ ನಂತರ ಬ್ರಿಟಿಷರು ಈ ದೇವಾಲಯಕ್ಕೆ ಸೇರಿದ ಪ್ರಸಿದ್ಧವಾದ ನಸ್ಸಕ ವೆಂಬ ವಜ್ರವನ್ನು ಕೊಂಡೊಯ್ದರು. ಈ ವಜ್ರವು ಈಗ ಅಮೇರಿಕಾ ಸಂಯುಕ್ತ ಸಂಸ್ಥಾನದ ಕನೆಕ್ಟಿಕಟ್ ಗ್ರೀನಿಚ್ ನಲ್ಲಿರುವ ಎಡ್ವರ್ಡ ಜೆ ಹ್ಯಾಂಡ್ ಎಂಬುವವರ ಹತ್ತಿರ ಇದೆ ಎಂದು ಹೇಳಲಾಗಿದೆ.

  • ಆಂಜನೇಯ ಸ್ವಾಮಿಯ ಜನನ ಸ್ಥಳವೆಂದು ಹೇಳುವ ಅಂಜನೇರಿ (ಅಂಜನಗಿರಿ) ಬೆಟ್ಟವು ತ್ರ್ಯಂಬಕೇಶ್ವರದಿಂದ ೭ ಕಿ.ಮೀ. ದೂರದಲ್ಲಿದೆ. ಸಾಕಷ್ಟು ಮಳೆ ಬೀಳುವ ಪ್ರದೇಶವಾದ್ದರಿಂದ ಸುತ್ತಮುತ್ತಲ ಪ್ರದೇಶ ಹಸಿರು ಸಸ್ಯಗಳಿಂದ ತುಂಬಿ ನಯನ ಮನೋಹರವಾಗಿದೆ.

ಇತರೆ ದೇವಾಲಯಗಳು ಮತ್ತು ವಿದ್ಯಾ ಕೇಂದ್ರ

ಬದಲಾಯಿಸಿ
  • ಇಲ್ಲಿ ನೀಲ ಪರ್ವತದ ಮೇಲೆ ನೀಲಾಂಬ, ಮನ್ನಾಂಬಾ, ರೇಣುಕಾ ದೇವಿಯರು , ಪರಶುರಾಮನು ತಪಸ್ಸು ಮಾಡುವುದನ್ನು ನೋಡಲು ಬಂದಿರುವುದಾಗಿ ಹೇಳುತ್ತಾರೆ. ಪರಶುರಾಮನು ಅವರಿಗೆ ಅಲ್ಲಿಯೇ ನೆಲೆಸಲು ಕೋರಿಕೊಂಡನು -ಅವರು ಅಲ್ಲಿಯೇ ನೆಲಸಿದರು ಅವರೆಲ್ಲರ ದೇವಾಲಯಗಳು ಅಲ್ಲಿವೆ. ಹಾಗೆಯೇ ದತ್ತಾತ್ರೇಯ ಮುನಿಯೂ (ಶ್ರೀಪಾದ ಶ್ರೀವಲ್ಲಭರು) ಅಲ್ಲಿಗೆ ಭೇಟಿ ನೀಡಿ ಅಲ್ಲಿ ಕೆಲವುಕಾಲ ನೆಲಸಿದರು . ಅಲ್ಲಿ ಶ್ರೀ ದತ್ತಾತ್ರೇಯ ದೇವಾಲಯವೂ ಇದೆ ಇವಲ್ಲದೆ ಇದರ ಹತ್ತಿರವೇ ಪುರಾತನ ನೀಲಕಂಠೇಶ್ವರ ದೇವಾಲಯ, ನೀಲಕಂಠೇಶ್ವರ ಆಶ್ರಮ, ಖಂಡೋಬಾ ಮಂದಿರ, ರೇಣುಕಾದೇವೀ ಮಂದಿರಗಳು ನೀಲ ಪರ್ವತದ ತಪ್ಪಲಲ್ಲಿ ಇವೆ.

ಅಖಿಲ ಭಾರತೀಯ ಸಮರ್ಥ ಗುರುಪೀಠ, ಸಮರ್ಥ ಮಹಾರಾಜರ ತ್ರ್ಯಂಬೇಕೇಶ್ವರ ಮಂದಿರಗಳು ಸುಮಾರು ೧ ಕಿ ಮೀ.ದೂರದಲ್ಲಿವೆ . ಇಲ್ಲಿ, ತ್ರ್ಯಂಬಕೇಶ್ವರ ನಗರದಲ್ಲಿ ತುಂಬಾ ಬ್ರಾಹ್ಮಣ ಕುಟುಂಬಗಳು ಇವೆ. ವೇದ ಪಾಠಶಾಲೆಗಳೂ ಗುರುಕುಲಗಳೂ ಇವೆ ವೇದ ವಿದ್ಯೆಯ ಕೇಂದ್ರವಾಗಿದೆ. ಅಷ್ಟಾಂಗ ಯೋಗ ಬೋಧಿಸುವ ಕೇಂದ್ರವೂ ಆಗಿದೆ.

ಇವನ್ನೂ ನೋಡಿ

ಬದಲಾಯಿಸಿ
  • ೧ ಇಂಗ್ಲಿಷ್ ವಿಕಿಪೀಡಿಯಾ: ಶ್ರೀ ತ್ರ್ಯಂಭಕೇಶ್ವರ ಜ್ಯೋತಿರ್ಲಿಂಗ *https://en.wikipedia.org/wiki/Trimbakeshwar_Shiva_Temple
  • ೨.ದ್ವಾದಶ ಜ್ಯೋತಿರ್ಲಿಂಗಗಳು ಕೈ ಹೊತ್ತಿಗೆ- ಪ್ರವಾಸ ಲೇಖನ ಗ್ರಂಥ_ ಬರೆದವರು ಶ್ರೀಮತಿ ಚೂಡಾಮಣಿ ರಾಮಚಂದ್ರ ಸಾಗರ ಶಿವಮೊಗ್ಗ ಜಿಲ್ಲೆ

ಬಾಹ್ಯ ಸಂಪರ್ಕಕೊಂಡಿಗಳು

ಬದಲಾಯಿಸಿ

ಉಲ್ಲೇಖ

ಬದಲಾಯಿಸಿ
  1. http://trimbakeshwar.in/
  2. "ಆರ್ಕೈವ್ ನಕಲು". Archived from the original on 2014-01-18. Retrieved 2013-10-07.