ಚೀನಾದ ಶೆಂಝೌ ಪ್ರೋಗ್ರಾಂನ, ‘ಶೆಂಝೌ–11’ ಬಾಹ್ಯಾಕಾಶ ನೌಕೆಯು ಜಿಯೊಕ್ವಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ 17 ಅಕ್ಟೋಬರ್ 2016 (16 ಅಕ್ಟೋಬರ್ (Uಖಿಅ) ರಂದು ಉಢವಣೆಯಾಯಿತು. ಇದು ಒಂದು ಬಾಹ್ಯಾಕಾಶ ಮಾನವಚಾಲಿತ ನೌಕೆ. ಇದು ಚೀನಾದ ಆರನೇ ಸಿಬ್ಬಂದಿ ಆಧಾರಿತ ಬಾಹ್ಯಾಕಾಶ ಯೋಜನೆಯಾಗಿದೆ. ಇದು ಸುಮಾರು ಎರಡು ದಿನಗಳಲ್ಲಿ, ಸೆಪ್ಟೆಂಬರ್ 15, 2016 ರಂದು ಬಿಡುಗಡೆ ಮಾಡಿದ ತಿಯಾಂಗಂಗ್ -2 ಬಾಹ್ಯಾಕಾಶ ಪ್ರಯೋಗಾಲಯದಲ್ಲಿ ಇಳಿಯುವಂತೆ/ ಸೇರುವಂತೆ ಯೋಜಿಸಲಾಗಿದೆ.
2022ರ ವೇಳೆಗೆ ಶಾಶ್ವತ ಬಾಹ್ಯಾಕಾಶ ನಿಲ್ದಾಣ ಹೊಂದುವ ಗುರಿಯೊಂದಿಗೆ ಚೀನಾವು ಮಾನವ ಸಹಿತ ಬಾಹ್ಯಾಕಾಶ ನೌಕೆಯನ್ನು ಅಂತರಿಕ್ಷಕ್ಕೆ ಕಳುಹಿಸಿದೆ. ಇಬ್ಬರು ಗಗನಯಾತ್ರಿಗಳನ್ನು ಹೊತ್ತ ಬಾಹ್ಯಾಕಾಶ ನೌಕೆಯನ್ನು ಸೋಮವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.
ಜಿಂಗ್ ಹೈಪೆಂಗ್ (50), ಚೆಂಗ್ ಡಾಂಗ್ (37) ಅವರನ್ನು ಒಳಗೊಂಡ ‘ಶೆಂಝೌ–11’ ಬಾಹ್ಯಾಕಾಶ ನೌಕೆ ಉತ್ತರ ಚೀನಾದ ಜಿಯುಖ್ವಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಸ್ಥಳೀಯ ಕಾಲಮಾನ ಬೆಳಿಗ್ಗೆ 7.30ಕ್ಕೆ ಅಂತರಿಕ್ಷಯಾನ ಕೈಗೊಂಡಿತು. ಇದನ್ನು ಲಾಂಗ್ ಮಾರ್ಚ್–2ಎಫ್ ರಾಕೆಟ್ ಮೂಲಕ ಉಡಾವಣೆ ಮಾಡಲಾಯಿತು. ಬಾಹ್ಯಾಕಾಶ ನೌಕೆ ಉಡಾವಣೆಯನ್ನು ಚೀನಾದ ಸರ್ಕಾರಿ ಮಾಧ್ಯಮ ನೇರ ಪ್ರಸಾರ ಮಾಡಿದೆ. ಉಡಾವಣೆ ಯಶಸ್ವಿಯಾಗಿದೆ ಎಂದು ಯೋಜನೆಯ ಮುಖ್ಯ ಕಮಾಂಡರ್ ಘೋಷಿಸಿದ್ದಾರೆ.
‘ಇಬ್ಬರೂ ಗಗನಯಾತ್ರಿಗಳು ಟಿಯಾಂಗಾಂಗ್-2 ಬಾಹ್ಯಾಕಾಶ ಪ್ರಯೋಗಾಲಯದಲ್ಲಿ 30 ದಿನ ಇರಲಿದ್ದಾರೆ. ಇಷ್ಟೊಂದು ದೀರ್ಘ ಅವಧಿಗೆ ದೇಶದ ಗಗನಯಾತ್ರಿಗಳು ಬಾಹ್ಯಾಕಾಶ ಪ್ರಯೋಗಾಲಯದಲ್ಲಿ ತಂಗಲಿರುವುದು ಇದೇ ಮೊದಲು’ ಎಂದು ಚೀನಾದ ಮಾನವ ಸಹಿತ ಬಾಹ್ಯಾಕಾಶ ಎಂಜಿನಿಯರಿಂಗ್ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಚಂದ್ರ ಮತ್ತು ಮಂಗಳ ಗ್ರಹಕ್ಕೆ ಬಾಹ್ಯಾಕಾಶ ನೌಕೆಗಳನ್ನು ಕಳುಹಿಸುವ ನಿಟ್ಟಿನಲ್ಲಿಯೂ ಈ ಪ್ರಯೋಗ ಮಹತ್ವದ್ದಾಗಲಿದೆ ಎನ್ನಲಾಗಿದೆ. ಪ್ರಯೋಗಾಲಯದಲ್ಲಿ ಗಗನಯಾತ್ರಿಗಳು ಬಾಹ್ಯಾಕಾಶ ತಂತ್ರಜ್ಞಾನ, ವಿಜ್ಞಾನ ಮತ್ತು ಎಂಜಿನಿಯರಿಂಗ್ ಪ್ರಯೋಗಗಳನ್ನು ನಡೆಸಲಿದ್ದಾರೆ.
ಗಗನಯಾತ್ರಿಗಳನ್ನು ಕಳುಹಿಸುವ ಸಲುವಾಗಿ ಬಾಹ್ಯಾಕಾಶ ಪ್ರಯೋಗಾಲಯವನ್ನು ಚೀನಾ ಕಳೆದ ತಿಂಗಳು ಉಡಾವಣೆ ಮಾಡಿತ್ತು. ಸದ್ಯ ಅಮೆರಿಕ, ರಷ್ಯಾ ಮತ್ತು ಐರೋಪ್ಯ ಬಾಹ್ಯಾಕಾಶ ಸಂಸ್ಥೆಗಳು ಜಂಟಿಯಾಗಿ ಬಾಹ್ಯಾಕಾಶ ನಿಲ್ದಾಣ ಹೊಂದಿವೆ. ಇದಕ್ಕೆ ಪೈಪೋಟಿ ನೀಡುವುದು ಚೀನಾದ ಉದ್ದೇಶವಾಗಿದೆ. ಸದ್ಯ ಅಸ್ತಿತ್ವದಲ್ಲಿರುವ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಕಾಲಾವಧಿ 2024ಕ್ಕೆ ಕೊನೆಗೊಳ್ಳಲಿದೆ. ಹೀಗಾಗಿ, ಚೀನಾದ ಪ್ರಯತ್ನ ಯಶಸ್ವಿಯಾದಲ್ಲಿ 2024ರ ನಂತರ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಹೊಂದಿರುವ ಏಕೈಕ ರಾಷ್ಟ್ರ ಎಬ ಹೆಗ್ಗಳಿಕೆ ಆ ರಾಷ್ಟ್ರದ್ದಾಗಲಿದೆ.
ಬಾಹ್ಯಾಕಾಶ ನಿಲ್ದಾಣ ನಿರ್ಮಿಸುವ ಸಲುವಾಗಿ ಚೀನಾ ಕಳುಹಿಸಿರುವ ಇಬ್ಬರು ಗಗನಯಾತ್ರಿಗಳು ಬಾಹ್ಯಾಕಾಶ ಪ್ರಯೋಗಾಲಯ ತಲುಪಿದ್ದಾರೆ. ಅವರು 33 ದಿನ ಅಲ್ಲಿ ತಂಗಲಿದ್ದಾರೆ. ಭಾರತೀಯ ಕಾಲಮಾನ ಪ್ರಕಾರ ಮಂಗಳವಾರ ತಡರಾತ್ರಿ ಒಂದು ಗಂಟೆಗೆ ಇಬ್ಬರೂ ಬಾಹ್ಯಾಕಾಶ ಪ್ರಯೋಗಾಲಯ ಪ್ರವೇಶಿಸಿದ್ದಾರೆ.[೪]
ಇಬ್ಬರು ಗಗನಯಾತ್ರಿಗಳನ್ನು ಹೊತ್ತು ಅಂತರಿಕ್ಷಕ್ಕೆ ಪ್ರಯಾಣ ಬೆಳೆಸಿದ್ದ ‘ಶೆಂಝೌ–11’ ಬಾಹ್ಯಾಕಾಶ ನೌಕೆ ಹಿಂತಿರುಗಿದ್ದು, ಶುಕ್ರವಾರ ಮಂಗೋಲಿಯಾದ ಉತ್ತರ ಭಾಗದಲ್ಲಿ ಸುರಕ್ಷಿತವಾಗಿ ಧರೆಗಿಳಿದಿದೆ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಮಾಧ್ಯಮ ತಿಳಿಸಿದೆ. ‘ಡಿವೈನ್ ವೆಸಲ್ (ದಿವ್ಯ ನೌಕೆ)’ ಹೆಸರಿನ ಈ ನೌಕೆ ಇಳಿಯುವ ಕ್ಷಣದ ಛಾಯಾಚಿತ್ರಗಳನ್ನು ಚೀನಾದ ಸುದ್ದಿ ವಾಹಿನಿ ಬಿತ್ತರಿಸಿದೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ನೌಕೆ ಸುರಕ್ಷಿತವಾಗಿ ಧರೆಗಿಳಿದಿದೆ ಎಂದು ಕ್ಸಿನ್‌ಹುವಾ ಸುದ್ದಿಸಂಸ್ಥೆ ತಿಳಿಸಿದೆ. ಗಗನಯಾತ್ರಿಗಳಾದ ಜಿಂಗ್ ಹೈಪೆಂಗ್ ಮತ್ತು ಚೆಂಗ್ ಡಾಂಗ್ ಅವರು ಟಿಯಾಂಗಾಂಗ್-2 ಬಾಹ್ಯಾಕಾಶ ಪ್ರಯೋಗಾಲಯದಲ್ಲಿ 30 ದಿನಗಳನ್ನು ಕಳೆದು ಮರಳಿದ್ದಾರೆ.
2022ರವೇಳೆಗೆ ಶಾಶ್ವತ ಬಾಹ್ಯಾಕಾಶ ನಿಲ್ದಾಣ ಹೊಂದುವ ಗುರಿಯನ್ನು ಚೀನಾ ಹೊಂದಿದ್ದು, ಅದಕ್ಕಾಗಿ ಟಿಯಾಂಗಾಂಗ್-2ರಲ್ಲಿ ಪ್ರಯೋಗಗಳನ್ನು ಕೈಗೊಂಡಿದೆ. ಸುರಕ್ಷಿತವಾಗಿ ಧರೆಗಿಳಿದ ಗಗನಯಾತ್ರಿಗಳು ತಕ್ಷಣವೇ ನೌಕೆಯಿಂದ ಹೊರಬರಲಿಲ್ಲ ಎಂದು ಸುದ್ದಿ ಸಂಸ್ಥೆ ಹೇಳಿದೆ. ‘ಗಗನಯಾತ್ರಿಗಳು ಸುರಕ್ಷಿತವಾಗಿದ್ದಾರೆ’ ಎಂದು ಯೋಜನೆಯ ಕಮಾಂಡರ್ ಝಾಂಗ್ ಯೊಕ್ಷಿಯಾ ಹೇಳಿದ್ದಾರೆ. ಟಿಯಾಂಗಾಂಗ್–2 ಬಾಹ್ಯಾಕಾದಲ್ಲೇ ಇರಲಿದೆ. ಬರುವ ಏಪ್ರಿಲ್‌ನಲ್ಲಿ ಚೀನಾ ತನ್ನ ಪ್ರಥಮ ಸರಕು ಬಾಹ್ಯಾಕಾಶ ನೌಕೆ ‘ಟಿಯಾಂಝೌ–1’ ಅನ್ನು ಅಂತರಿಕ್ಷಕ್ಕೆ ಕಳುಹಿಸಲಿದೆ ಎಂದು ಸರ್ಕಾರಿ ಮಾಧ್ಯಮ ತಿಳಿಸಿದೆ.[೫]