ಗುಗ್ಗುಳ ಧೂಪ

(ಶಲ್ಲಕ ಇಂದ ಪುನರ್ನಿರ್ದೇಶಿತ)
ಗುಗ್ಗುಳ ಧೂಪ
in Kinnerasani Wildlife Sanctuary, ಆಂಧ್ರ ಪ್ರದೇಶ, India.
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
B. serrata
Binomial name
Boswellia serrata

ಗುಗ್ಗುಳ ಧೂಪ ಒಂದು ಮಧ್ಯಮ ಪ್ರಮಾಣದ ಪರ್ಣಪಾತಿ ಮರ. ಕರ್ನಾಟಕದ ಶುಷ್ಕ ವಾತಾವರಣದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಬರ್ಸೆರೇಸೀ ಕುಟುಂಬಕ್ಕೆ ಸೇರಿದ ಇದು ಬಾಸ್ವೆಲಿಯ ಸೆರ್ರೇಟ ಎಂಬ ವೈಜ್ಞಾನಿಕ ಹೆಸರುಳ್ಳ ಒಂದು ಮರ.[][] ಮಡ್ಡಿಮರ, ಶಲ್ಲಕ ಇದರ ಪರ್ಯಾಯ ಹೆಸರುಗಳು. ಭಾರತದಲ್ಲಿ ಬಿಹಾರ, ಒಡಿಶಾ, ರಾಜಸ್ಥಾನ, ಗುಜರಾತ್ ಮತ್ತು ಪೂರ್ವ ಪ್ರಾಂತ್ಯಗಳ ಒಣ ಹವೆಯಿರುವ ಬೆಟ್ಟಗಾಡುಗಳಲ್ಲಿ ಸಾಮಾನ್ಯವಾಗಿ ಬೆಳೆಯುತ್ತದೆ.

ಸಸ್ಯ ಗುಣಲಕ್ಷಣಗಳು

ಬದಲಾಯಿಸಿ

ಸುಮಾರು 7-9 ಮೀ ಎತ್ತರಕ್ಕೆ ಬೆಳೆಯುವ ಮರ ಇದು. ಮುಖ್ಯ ಕಾಂಡವೇ ಸಾಮಾನ್ಯವಾಗಿ 4-5 ಮೀ ಉದ್ದ ಇರುತ್ತದೆ. ಎಲೆಗಳು ಸಂಯುಕ್ತ ಮಾದರಿಯವು. ಎಲೆಗಳ ಮೇಲೆಲ್ಲ ತುಪ್ಪಳದಂಥ ಕೂದಲುಗಳ ಹೊದಿಕೆ ಉಂಟು. ಎಲೆಗಳ ಅಂಚು ಗರಗಸದಂತೆ ಇದೆ. ತೆಳು ಹಂದರ. ತೊಗಟೆ ಎಳೆ ಹಸಿರು ಅಥವಾ ಬೂದು ಬಣ್ಣವಿದ್ದು, ನಯವಾದ ಹೊಪ್ಪಳಿಕೆ ಬರುವುದು. ದಾರುವು ಸಾದಾರಣ ಗಡಸು.

ಗುಗ್ಗುಳದ ಮರದ ವಿಶೇಷತೆ

ಬದಲಾಯಿಸಿ
  • ಗುಗ್ಗುಳದ ಮರದ ಕಾಂಡದಿಂದ ಪಾರದರ್ಶಕವಾದ ಅಂಟುದ್ರವ ಸ್ರವಿಸುತ್ತದೆ. ಇದನ್ನು 'ಗುಗ್ಗುಳ' ಎಂದು ಕರೆಯುತ್ತಾರೆ. ಇದನ್ನು ಮಡ್ಡಿಧೂಪ ಅಥವಾ ಹಾಲುಮಡ್ಡಿ (ಇಂಡಿಯನ್ ಓಲಿಬ್ಯಾನಮ್) ಎಂದೂ, ಕೆಲವೊಮ್ಮೆ ಇದನ್ನು ಸಾಂಬ್ರಾಣಿ, ಧೂಪ ಮುಂತಾದ ಹೆಸರುಗಳಿಂದ ಕರೆಯುವುದು ಉಂಟು. ಸುವಾಸನೆಯುಳ್ಳ ಈ ದ್ರವ ತೆಳುಹಳದಿ ಬಣ್ಣದ್ದು. ಗಾಳಿಯ ಸಂಪರ್ಕಕ್ಕೆ ಬಂದಾಗ ನಿಧಾನವಾಗಿ ಗಟ್ಟಿಯಾಗಿ ಬಂಗಾರದ ಬಣ್ಣಕ್ಕೆ ತಿರುಗುತ್ತದೆ. ಒಂದು ಮರದಿಂದ ವರ್ಷಕ್ಕೆ ಸುಮಾರು ಎರಡು ಪೌಂಡುಗಳಷ್ಟು ಗುಗ್ಗುಳ ದೊರೆಯುತ್ತದೆ. ಸಾಮಾನ್ಯವಾಗಿ 75 ಸೆಂ.ಮೀ ಮತ್ತು ಅದಕ್ಕಿಂತ ಹೆಚ್ಚು ದಪ್ಪದ ಕಾಂಡಗಳಿರುವ ಮರಗಳಿಂದ ಗುಗ್ಗುಳವನ್ನು ತೆಗೆಯುತ್ತಾರೆ.
  • ಗುಗ್ಗುಳವನ್ನು ತೆಗೆಯಲು ಸುಮಾರು 30 ಸೆಂಮೀ ಗಳಷ್ಟು ಅಗಲದ ತೊಗಟೆಯನ್ನು ಮರದ ಬುಡದಿಂದ 60-75 ಸೆಂಮೀ ಗಳ ಎತ್ತರದಲ್ಲಿ ಕೆತ್ತುತ್ತಾರೆ. ಇದರಿಂದ ಸ್ರವಿಸುವ ಅಂಟು ದ್ರವವನ್ನು ಶೇಖರಿಸುತ್ತಾರೆ. ಅಂಟನ್ನು ತೆಗೆಯುವ ಕಾಲ ನವೆಂಬರಿನಿಂದ ಜುಲೈವರೆಗೆ. ಬೆಂಕಿಗೆ ಒಡ್ಡಿದಲ್ಲಿ ಸುಲಭವಾಗಿ ಉರಿಯುವ ಇದು ಪರಿಮಳಯುಕ್ತ ಧೂಮವನ್ನು ಹೊರಸೂಸುತ್ತದೆ. ಎಂದೇ ಇದು ಧೂಪವಾಗಿ ಉಪಯುಕ್ತ. ಇದನ್ನು ಧೂಪ ಹಾಕಲು ಬಳಸುತ್ತಾರೆ. ಗುಗ್ಗುಳದಲ್ಲಿ ಶೇ. 10-11ರಷ್ಟು ತೇವಾಂಶ. ಶೇ. 8-9ರಷ್ಟು ಚಂಚಲ ತೈಲ, ಶೇ. 55-57ರಷ್ಟು ರಾಳ ಮತ್ತು ಶೇ. 4-5ರಷ್ಟು ಕರಗದಿರುವ ವಸ್ತುಗಳಿವೆ. ಈ ಮಡ್ಡಿಯಿಂದ ಅದರ ಘಟಕ ಸಾಮಗ್ರಿಗಳಾದ ಎಣ್ಣೆ, ಗೋಂದು, ಶುದ್ಧರಾಳಗಳನ್ನು ಬೇರ್ಪಡಿಸಬಹುದು. ಎಣ್ಣೆ ಟರ್ಪೆಂಟೈನ್ ಎಣ್ಣೆಯನ್ನು ಹೋಲುತ್ತದೆ. ಎಣ್ಣೆಯನ್ನೂ ಶುದ್ಧರಾಳವನ್ನೂ ಮೆರುಗೆಣ್ಣೆ ಮತ್ತು ಬಣ್ಣಗಳ ತಯಾರಿಕೆಯಲ್ಲಿ ಬಳಸಬಹುದಾದರೂ ದೊಡ್ಡ ಪ್ರಮಾಣದಲ್ಲಿ ಈ ಕಾರ್ಯ ನಡೆಯುತ್ತಿಲ್ಲ.

ಉಪಯೋಗಗಳು

ಬದಲಾಯಿಸಿ

ಗುಗ್ಗುಳದಲ್ಲಿ ಕೆಲವು ಉಪಯುಕ್ತ ಸಾರತೈಲಗಳಿರುವುದರಿಂದ ಇದನ್ನು ಸಂಧಿವಾತ ಮತ್ತು ನರದೌರ್ಬಲ್ಯಗಳನ್ನು ಗುಣಪಡಿಸಲು ಆಯುರ್ವೇದ ಚಿಕಿತ್ಸೆಗಳಲ್ಲಿ ಉಪಯೋಗಿಸುತ್ತಾರೆ. ಉತ್ತೇಜಕ, ಕಫಹಾರಿ ಮೂತ್ರೋತ್ತೇಜಕ, ಬಂಧಕ ಮುಂತಾಗಿ ಇದು ಪ್ರಸಿದ್ಧವಾಗಿದೆ. ಇದನ್ನು ಮುಲಾಮುಗಳಲ್ಲಿ ಬಳಸುತ್ತಾರೆ. ಪುಪ್ಪುಸ ಬೇನೆಗಳು, ಕೀಲುನೋವು, ನರಗಳ ರೋಗಗಳು, ಅತಿಸಾರ, ಆಮಶಂಕೆ, ಅಜೀರ್ಣ, ಮೇಹರೋಗಗಳು, ಯಕೃತ್ ಕಾಯಿಲೆಗಳು, ಮೂಲವ್ಯಾಧಿ ಇತ್ಯಾದಿಗಳ ಚಿಕಿತ್ಸೆಯಲ್ಲಿ ಇದನ್ನು ಬಳಸುವುದಿದೆ. ಗಜಕರ್ಣ, ಕುರು, ಹುಣ್ಣು, ಉಳುಕು ಮುಂತಾದ ಬೇನೆಗಳಿಗೆ ಮಡ್ಡಿಯನ್ನು ಕೊಬ್ಬರಿ ಎಣ್ಣೆ ಅಥವಾ ನಿಂಬೆಯ ರಸದೊಂದಿಗೆ ಸೇರಿಸಿ ಲೇಪಿಸಲಾಗುತ್ತದೆ. ಗಂಟಲು ರೋಗ, ಜ್ವರಗಳಲ್ಲಿ ಇದರ ಧೂಪವನ್ನು ಊಡುವುದುಂಟು. ಗುಗ್ಗುಳದ ಮರದ ಚೌಬೀನೆ ಮೃದುವಾಗಿಯೂ ಸಾಕಷ್ಟು ಗಟ್ಟಿಯಾಗಿಯೂ ಇರುವುದರಿಂದ ಹಲಗೆ, ಸಾಧಾರಣ ದರ್ಜೆಯ ಪೀಠೋಪಕರಣಗಳು (ಕುರ್ಚಿ, ಮೇಜು), ಪೆಟ್ಟಿಗೆಗಳು, ಎರಡನೆಯ ದರ್ಜೆಯ ಪ್ಲೈವುಡ್, ಬೆಂಕಿಕಡ್ಡಿ ಮುಂತಾದವನ್ನು ತಯಾರಿಸಲು ಬಳಸುತ್ತಾರೆ. ಕಟ್ಟಿಗೆ ಉರುವಲಾಗಿಯೂ ಬಳಕೆಯಾಗುತ್ತದೆ. ರೋಸಿನ್ ಅಂಶವನ್ನು ವಾರ್ನಿಷ್‍ಗಳಲ್ಲಿ ಬಳಸುತ್ತಾರೆ.

ಛಾಯಾಂಕಣ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "Boswellia ." Gale Encyclopedia of Alternative Medicine. . Encyclopedia.com. 13 Apr. 2023 <https://www.encyclopedia.com>.
  2. https://eol.org/pages/483516

ಆಧಾರ ಗ್ರಂಥಗಳು

ಬದಲಾಯಿಸಿ

೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: