ವನ್ಯಜೀವಿ ಸಂರಕ್ಷಣೆ

ವನ್ಯಜೀವಿ ಸಂರಕ್ಷಣೆ ಎಂದರೆ ಮಾನವ ಇತರ ಪ್ರಾಣಿಗಳ ಬಗ್ಗೆ ತೋರುವ ಕರುಣಾಮಯ ಧೋರಣೆ ಎಂಬ ತಪ್ಪು ತಿಳುವಳಿಕೆ ತುಂಬಾ ಪ್ರಚಲಿತವಾಗಿದೆ. ಇಂತಹ ಕರುಣಾ ಧೋರಣೆಯ ತಾತ್ವಿಕ ನೆಲಗಟ್ಟಿನ ಪ್ರಕಾರ ಪ್ರತೀ ಪ್ರಾಣಿಗೂ ಮಾನವರಿಂದ ಹಿಂಸೆಗೊಳಗಾಗದೆ ಬದುಕುವ ವೈಯುಕ್ತಿಕ 'ಹಕ್ಕು' ಇರುತ್ತದೆ. ಪ್ರಾಣಿ ಹಕ್ಕುಗಳ (ಅನಿಮಲ್ ರೈಟ್ಸ್) ತಾತ್ವಿಕ ನೆಲೆಗಟ್ಟಿನ ಮೇಲೆ ನಿಂತ ಪ್ರಾಣಿಗಳ ಮೇಲಿನ "ಪ್ರೇಮ", "ಕರುಣೆ", "ಶಾಕಾಹಾರ"ಗಳನ್ನು ಬೆಂಬಲಿಸುವ ನಿಲುವುಗಳಿಗಿಂತ, "ವನ್ಯಜೀವಿ ಸಂರಕ್ಷಣೆ" ಯ ಅರ್ಥ ಹಾಗೂ ತಾತ್ವಿಕ ನೆಲೆಗಟ್ಟುಗಳು ತೀರಾ ಭಿನ್ನವಾದವು.

ವನ್ಯಜೀವಿ ಸಂರಕ್ಷಣೆಯ ತಳಹದಿ ವಿಜ್ಞಾನ. ಅದರ ವ್ಯಾಪ್ತಿಯೊಳಗೆ ಪ್ರತಿ ಪ್ರಾಣಿಯ ವೈಯುಕ್ತಿಕ ಮಟ್ಟದ ಬದುಕಿನ ಪ್ರಶ್ನೆಗಳು ಪ್ರಮುಖವಾಗಿ ಏಳುವುದಿಲ್ಲ. ಇಲ್ಲಿ ವನ್ಯಜೀವಿಗಳಿಗೆ ಪ್ರಾಶಸ್ತ್ಯವಿರುವುದು ಸಮೂಹ, ಜಾತಿ, ಸಂಕುಲಗಳ ಮಟ್ಟದಲ್ಲಿ ಮಾತ್ರ.[][]

ವನ್ಯಜೀವಿ ಸಂರಕ್ಷಣೆಗೆ ಮೂರು ಮೂಲಭೂತವಾದ ಕಾಳಜಿ ಅಥವಾ ಗುರಿಗಳಿವೆ:

  • ಮೊದಲನೆಯದು ಅಪರೂಪದ ಅಥವಾ ನಿರ್ನಾಮವಾಗುವ ಅಪಾಯದಲ್ಲಿರುವ ಪ್ರಾಣಿಜಾತಿಯನ್ನು ಉಳಿಸಿಕೊಳ್ಳುವುದು. ಹುಲಿ, ಆನೆ, ದೋರವಾಯನ ಹಕ್ಕಿ (ಗ್ರೇಟ್ ಇಂಡಿಯನ್ ಬಸ್ಟರ್ಡ್) ಮುಂತಾದ ಅಪೂರ್ವದ ಪ್ರಾಣಿಗಳನ್ನು ಅಭಯಾರಣ್ಯಗಳಲ್ಲಿ ಕಟ್ಟುನಿಟ್ಟಾಗಿ ಕಾಪಾಡುವುದು ಇದಕ್ಕೆ ಉದಾಹರಣೆ.
  • ವನ್ಯಜೀವಿ ಸಂರಕ್ಷಣೆಯ ಎರಡನೆಯ ಗುರಿಯಾಗಿ ಕೆಲವೊಮ್ಮೆ ವನ್ಯಪ್ರಾಣಿಗಳಿಂದ ಮಾನವನಿಗೆ ಉಂಟಾಗಬಹುದಾದ ಹಾನಿಯನ್ನು ತಡೆಗಟ್ಟುವುದೂ ಸೇರಿದೆ. ಬೆಳೆ ನಾಶಮಾಡಲು ಬರುವ ಕಾಡಾನೆಗಳಿಗೆ ವಿದ್ಯುತ್ ಬೇಲಿ ಕಟ್ಟಿ 'ಶಾಕ್' ಕೊಡುವುದು, ನರಭಕ್ಷಕನಾಗಿ ಮಾರ್ಪಟ್ಟ ಹುಲಿಯೊಂದರ ನಿರ್ದಾಕ್ಷಿಣ್ಯ ಬೇಟೆ, ಇಂಥವು 'ಹಾನಿ ನಿಗ್ರಹ'ದ ವನ್ಯಜೀವಿ ಸಂರಕ್ಷಣೆಯ ಉದಾಹರಣೆಗಳು. ಇಲ್ಲೂ ಈ ವನ್ಯಪ್ರಾಣಿಯ ವೈಯುಕ್ತಿಕ ಒಳಿತಿನ ಪ್ರಶ್ನೆ ಏಳುವುದಿಲ್ಲ ಎಂಬುದು ಸ್ಟಷ್ಟ.
  • ಮೂರನೆಯದಾಗಿ, ಕೆಲವೊಮ್ಮೆ ಮಾನವನ ಉಪಯೋಗಕ್ಕಾಗಿಯೇ ವನ್ಯಜೀವಿಗಳ ಸಂಹಾರ ಮತ್ತು ಬಳಕೆಯೂ 'ವನ್ಯಜೀವಿ ಸಂರಕ್ಷಣಾ' ಕಾರ್ಯದ ಗುರಿಯಾಗಿರುತ್ತದೆ. ಕೆಲ ಜಾತಿಯ ಕಾಡುಪ್ರಾಣಿಗಳ ಸಂಖ್ಯೆ ಹೇರಳವಾಗಿರುವ ಉತ್ತರ ಅಮೇರಿಕಾ, ಆಫ್ರಿಕಾ ಮತ್ತು ಆಸ್ಟ್ರೇಲಿಯಾಗಳಲ್ಲಿ ಈ ರೀತಿಯ ವನ್ಯಜೀವಿಯ ಬಳಕೆ ಸಾಕಷ್ಟು ವ್ಯಾಪಕವಾಗಿ ನಡೆಯುತ್ತಿದೆ. ಜಗತ್ತಿನ ಎಲ್ಲೆಲ್ಲೂ ಪ್ರಚಲಿತವಿರುವ ಮೀನುಗಾರಿಕೆಯಂತೂ ವನ್ಯಜೀವಿ ಬಳಕೆಯ ಅತಿ ಸ್ಪಷ್ಟ ಉದಾಹರಣೆ.

ಹೀಗೆ ಕಟ್ಟುನಿಟ್ಟಿನ ಕಾಪಾಡುವಿಕೆ, ಪ್ರಾಣಿಗೆ ಹಾನಿನಿಗ್ರಹ ಮತ್ತು ಪ್ರಾಣಿಗಳ ವ್ಯವಸ್ಥಿತ ಉಪಯೋಗ ಮೂರು ಗುರಿಗಳ ಕಡೆಗೂ ಸಂಧರ್ಭಾನುಸಾರ ವನ್ಯಜೀವಿ ಸಂರಕ್ಷಣೆ ವೈಜ್ಞಾನಿಕವಾಗಿ ಗಮನಹರಿಸುತ್ತದೆ. ಇವು ಮೂರು ಗುರಿಗಳಲ್ಲಿ ಯಾವುದನ್ನು ಉಪಯೋಗಿಸಬೇಕೆಂಬ ಸಂಧರ್ಭ ಮತ್ತು ಔಚಿತ್ಯಗಳು ವೈಜ್ಞಾನಿಕವಾಗಿ ನಿರ್ಣಯಿಸಲ್ಪಡುತ್ತವೆ.

ವನ್ಯಜೀವಿಯ ವ್ಯಾಖ್ಯಾನಗಳು

ಬದಲಾಯಿಸಿ

ಲಕ್ಷಾಂತರ ಸಂಖ್ಯೆಯಲ್ಲಿ, ಅಳಿವಿನ ಯಾವುದೇ ಅಪಾಯವಿಲ್ಲದೇ ಜಗತ್ತಿನ ಎಲ್ಲೆಡೆ ತುಂಬಿರುವ ಸಾಕುಪ್ರಾಣಿಗಳಾದ ದನ, ಮೇಕೆ, ಕುರಿ, ಕೋಳಿ, ನಾಯಿ ಮುಂತಾದವು "ವನ್ಯಜೀವಿ"ಗಳಲ್ಲ. ಇವುಗಳ ಒಳಿತು ಕೆಡುಕುಗಳು ವನ್ಯಜೀವಿ ಸಂರಕ್ಷಣೆಯ ವ್ಯಾಪ್ತಿಯಿಂದ ತೀರ ಹೊರಗೆ. ವನ್ಯಜೀವಿ ಎಂದರೆ ಯಾವುದೇ ಸಾಕಣೆಗೆ ಒಳಪಡದೆ ನೈಸರ್ಗಿಕವಾಗಿ ಬದುಕುವ ಕಶೇರುಕ ಪ್ರಾಣಿಗಳು ಮಾತ್ರ (ವರ್ಟಿಬ್ರೇಟ್ಸ್) ಎಂದೂ ಒಂದು ವ್ಯಾಖ್ಯಾನ ಇದೆ. ಇನ್ನು ಹಲವು ವ್ಯಾಖ್ಯಾನಗಳ ಪ್ರಕಾರ ಕೀಟ ಇತ್ಯಾದಿ ಅಕಶೇರುಕಗಳೂ ಸೇರಿದಂತೆ ಸಮಸ್ತ ನೈಸರ್ಗಿಕ ಜೀವ ಜಾತಿಗಳನ್ನೂ ವನ್ಯಜೀವಿಗಳೆಂದು ಪರಿಗಣಿಸಲಾಗುತ್ತದೆ. ಇದೇನಿದ್ದರೂ ವನ್ಯಜೀವಿ ಸಂರಕ್ಷಣೆಯ ಕಾರ್ಯದಲ್ಲಿ ಪ್ರಾಣಿಗಳನ್ನು ವೈಯುಕ್ತಿಕವಾಗಿ ಪರಿಗಣಿಸುವ ಬದಲು "ಪ್ರಭೇದ" (ಸ್ಪೀಶೀಸ್) ಸಮೂಹ (ಪಾಪ್ಯುಲೆಷನ್), ಆವಾಸ (ಹ್ಯಾಬಿಟಾಟ್) ಮತ್ತು ಪ್ರಭೇದ ವಿಸ್ತರಣೆಯ ಹರಹು (ಸ್ಪೀಶೀಸ್ ಡಿಸ್ಟ್ರಿಬ್ಯೂಷನ್) ಮುಂತಾದ ಮಟ್ಟಗಳಲ್ಲಿ ಪರಿಗಣಿಸುತ್ತೇವೆ.

ಮಾನದಂಡಗಳು

ಬದಲಾಯಿಸಿ

ವನ್ಯಜೀವಿ ಸಂರಕ್ಷಣೆಗಳಲ್ಲಿ ಯಾವುದೇ ಜೀವಿಗೆ ಹೆಚ್ಚಿನ ಬೆಲೆ ಮತ್ತು ಪ್ರಾಶಸ್ತ್ಯ ಕೊಡಲು ಬಳಸುವ ಸಾಮಾನ್ಯ ಮಾನದಂಡಗಳೆಂದರೆ 'ಅಪರೂಪತೆ' (ರ‍್ಯಾರಿಟಿ), ವಿಶಿಷ್ಟತೆ (ಯುನಿಕ್‌ನೆಸ್) ಮತ್ತು 'ಸ್ಥಳೀಯತೆ' (ಎಂಡೆಮಿಸಮ್) ಇತ್ಯಾದಿಗಳು. ನೀಲಿ ತಿಮಿಂಗಿಲ ಸಾಗರದಲ್ಲಿ ವಿಶಾಲ ವ್ಯಾಪ್ತಿಯುಳ್ಳ ಪ್ರಾಣಿಯಾದರೂ ಅತಿ 'ಅಪರೂಪದ್ದು' ಪ್ಲಾಟಿಪಸ್ ಎಂಬ ಮೊಟ್ಟೆಹಾಕುವ ಸ್ತನಿಪ್ರಾಣಿಗೆ ತನ್ನ ಈ ವಿಶಿಷ್ಟತೆಯಿಂದ ಬೆಲೆಯಿದೆ. ಭಾರತದಲ್ಲಿ ಕಂಡುಬರುವ 'ಕೊಂಡುಕುರಿ' (ಫೋರ್ ಹಾರ್ನ್ಡ್ ಆಂಟಿಲೋಪ್) ಎಂಬ ಎರಳೆಗೆ ಪ್ರಾಗಿತಿಹಾಸದಲ್ಲಿ ಬದುಕಿದ್ದು ಈಗ ನಿರ್ನಾಮವಾಗಿರುವ ನಾಲ್ಕು ಕೊಂಬುಗಳಿದ್ದ ಪ್ರಾಣಿಗಳಲ್ಲಿ ಈಗ ಜಗತ್ತಿನಲ್ಲೇ ಉಳಿದಿರುವ ಏಕಮಾತ್ರ ಪ್ರತಿನಿಧಿ ಎಂಬ ಹಿರಿಮೆ. ಪಶ್ಚಿಮ ಘಟ್ಟಗಳ ಮಳೆಕಾಡುಗಳಲ್ಲಿ ಸಿಂಗಲೀಕ ಮತ್ತು ಕರಿ ಮುಚ್ಚ ಎಂಬ ಕಪಿ ಜಾತಿಗಳು ವನ್ಯಜೀವಿ ಸಂರಕ್ಷಣೆಯ ಮಾನದಂಡವಾದ ಸ್ಥಳೀಯತೆಯ ಪ್ರತೀಕಗಳು.

ಇಂತಹ ಅಮೂಲ್ಯ ಜೀವಿ ಸಂಕುಲಗಳನ್ನು ಅವುಗಳ ಸುತ್ತ ಹಣೆದಿರುವ ವನ್ಯತೆಯನ್ನು ದೂರದೃಷ್ಟಿಯಿಂದ ಮಾನವನ ಒಳಿತಿಗಾಗಿಯೇ ಸಮರ್ಪಕವಾಗಿ, ಕಾರ್ಯ ಸಾಧ್ಯವಾಗುವ ರೀತಿಯಲ್ಲಿ, ಜತೆ ಜತೆಗೇ ಸಮರಕ್ಷಿಸುವ ವಸ್ತುನಿಷ್ಠ ಧೋರಣೆಯೇ ವನ್ಯಜೀವಿ ಸಂರಕ್ಷಣೆಯ ಮೂಲ ಸತ್ವ. ಇದು ಅತಿ ಭಾವುಕತೆಯನ್ನು ದೂರವಿಟ್ಟು ವಿಜ್ಞಾನದ ಭದ್ರ ತಳಹದಿಯ ಮೇಲೆ ರೂಪುಗೊಂಡಿದೆ. ಇಂತಹ ವನ್ಯಜೀವಿ ಸಂರಕ್ಷಣೆಯನ್ನು ಹಿಡಿದೆತ್ತುವ ಬಲಿಷ್ಠ ಹಂದರವೇ (ಫ್ರೇಮ್‌ವರ್ಕ್) ವನ್ಯಜೀವಿ ಶಾಸ್ತ್ರ (ವೈಲ್ಡ್‌ಲೈಫ್ ಬಯಾಲಜಿ) ವೆಂಬ ಆನ್ವಯಿಕ ವಿಜ್ಞಾನ.

ಉಲ್ಲೇಖಗಳು

ಬದಲಾಯಿಸಿ
  1. https://education.nationalgeographic.org/resource/wildlife-conservation/
  2. Kerr, Gordon R. and Arlene J. Kwasniak. "Wildlife Conservation and Management". The Canadian Encyclopedia, 04 March 2015, Historica Canada. www.thecanadianencyclopedia.ca/en/article/wildlife-conservation-and-management. Accessed 11 December 2023.

ಹೊರಗಿನ ಕೊಂಡಿಗಳು

ಬದಲಾಯಿಸಿ
  •   Ernest Ingersoll (1920). "Wild Life, Conservation of, in America" . Encyclopedia Americana. {{cite encyclopedia}}: Cite has empty unknown parameters: |HIDE_PARAMETER15=, |HIDE_PARAMETER13=, |HIDE_PARAMETER2=, |HIDE_PARAMETER21=, |HIDE_PARAMETER8=, |HIDE_PARAMETER17=, |HIDE_PARAMETER20=, |HIDE_PARAMETER5=, |HIDE_PARAMETER7=, |HIDE_PARAMETER4=, |HIDE_PARAMETER22=, |HIDE_PARAMETER16=, |HIDE_PARAMETER19=, |HIDE_PARAMETER18=, |HIDE_PARAMETER6=, |HIDE_PARAMETER10=, |HIDE_PARAMETER11=, |HIDE_PARAMETER1=, |HIDE_PARAMETER23=, |HIDE_PARAMETER14=, and |HIDE_PARAMETER12= (help)
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: