ಅಭಯಾರಣ್ಯಗಳು
ಸ್ವಾಭಾವಿಕ ಸಸ್ಯ ಮತ್ತು ಪ್ರಾಣಿಸಂಪತ್ತನ್ನು ಉಳಿಸಿಕೊಂಡು ದೇಶದ ಸೌಂದರ್ಯವನ್ನು ಕಾಪಾಡಿಕೊಳ್ಳುವುದೇ ಅಲ್ಲದೆ, ನಿಸರ್ಗದ ಸಮತೋಲ ಕದಡದಂತೆ ಇರಿಸುವ ಸಲುವಾಗಿ ಕರ್ನಾಟಕದಲ್ಲಿ ಅಭಯಾರಣ್ಯಗಳನ್ನು, ರಾಷ್ಟ್ರೀಯ ಉದ್ಯಾನಗಳನ್ನು ಸ್ಥಾಪಿಸಲಾಗಿದೆ. ಇವು ಬಹುವಾಗಿ ಅಂತಾರಾಷ್ಟ್ರೀಯ ನಿಯಮಗಳನ್ನೇ ಅನುಸರಿಸುತ್ತವೆ. ಆದರೆ ಸ್ಥಳೀಯ ಪರಿಸ್ಥಿತಿಗೆ ಹೊಂದಿಕೊಳ್ಳುವಂತೆ ಅಲ್ಪಸ್ವಲ್ಪ ಮಾರ್ಪಾಟುಗಳನ್ನು ಇವುಗಳಲ್ಲಿ ಕಾಣಬಹುದು. ಇವೆಲ್ಲವೂ ಅರಣ್ಯ ಇಲಾಖೆಯ ಅದಿsೀನಕ್ಕೆ ಒಳಪಟ್ಟಿವೆ. ಕೆಲವು ಅಭಯಾರಣ್ಯಗಳಲ್ಲಿ ಸಸ್ಯ ಹಾಗೂ ಪ್ರಾಣಿಗಳೆರಡಕ್ಕೂ ಸಂರಕ್ಷಣೆ ಒದಗಿದೆಯಾದರೆ ಇನ್ನು ಕೆಲವಲ್ಲಿ ಬರಿಯ ಪ್ರಾಣಿಗಳನ್ನು ಮಾತ್ರ ರಕ್ಷಿತಜೀವಿಗಳಾಗಿ ನೋಡಿಕೊಳ್ಳಲಾಗುತ್ತಿದೆ.
ಇತಿಹಾಸ
ಬದಲಾಯಿಸಿಅಭಯಾರಣ್ಯಗಳ ಕಲ್ಪನೆ ಇತ್ತೀಚಿನದಲ್ಲ. ಪ್ರಾಚೀನ ಕಾಲದ ಋಷ್ಯಾಶ್ರಮಗಳು ವನ್ಯಜೀವಿಗಳಿಗೆ ಅಭಯಾರಣ್ಯಗಳಾಗಿದ್ದುವು. ಇಂಥ ಅರಣ್ಯಗಳಲ್ಲಿ ಮೃಗಪಕ್ಷಿಗಳನ್ನು ಕೊಲ್ಲುವುದು ಅಪರಾಧವೆಂದು ಪರಿಗಣಿಸಲ್ಪಡುತ್ತಿತ್ತು. ಅಭಯಾರಣ್ಯದಲ್ಲಿ ವನ್ಯಮೃಗಗಳು ಭಯವಿಲ್ಲದೆ ತಿರುಗಾಡುವುದನ್ನು ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ನಮ್ಮ ಹಿರಿಯರು ಪ್ರಾಣಿಗಳ ಜೀವನವನ್ನು ಅಧ್ಯಯನ ಮಾಡಿ ಅದನ್ನು ಮಾನವನ ಬುದ್ಧಿವಿಕಾಸಕ್ಕಾಗಿ ಅಳವಡಿಸಿ ಕತೆಯ ರೂಪದಲ್ಲಿ ನಿರೂಪಿಸಿದ್ದಾರೆ ಎನ್ನುವುದಕ್ಕೆ ಪಂಚತಂತ್ರ ಮತ್ತು ಹಿತೋಪದೇಶದ ಕತೆಗಳು ಸಾಕ್ಷಿಯಾಗಿವೆ. ವೇದಕಾಲದ ಅನಂತರ ವನ್ಯಪ್ರಾಣಿಗಳ ಬಾಳು ಹದಗೆಡುತ್ತ ಬಂತು. ಅರಣ್ಯ ಪ್ರದೇಶವನ್ನು ವ್ಯವಸಾಯಕ್ಕೆ ತೆರವು ಮಾಡತೊಡಗಿದುದರ ಪರಿಣಾಮವಾಗಿ ವನ್ಯಮೃಗಗಳ ಸಂಖ್ಯೆ ಕಡಿಮೆಯಾಯಿತು. ಕ್ರಿ.ಪೂ. 3ನೆಯ ಶತಮಾನದಲ್ಲಿ ಈ ನಾಶವನ್ನು ತಡೆಯಲು ಅಶೋಕ ಚಕ್ರವರ್ತಿ ಹೊರಡಿಸಿದ ಒಂದು ಕಾಯಿದೆ ನಶಿಸುತ್ತಿದ್ದ ಅನೇಕ ಮೃಗಪಕ್ಷಿಗಳಿಗೆ ರಕ್ಷಣೆಯನ್ನು ಕೊಟ್ಟಿರಬೇಕು. ಅಶೋಕ ಚಕ್ರವರ್ತಿಯ ಈ ಕಾಯಿದೆ ಜಗತ್ತಿನಲ್ಲೇ ವನ್ಯಜೀವಿಗಳ ಸಂರಕ್ಷಣೆಗಾಗಿ ಮಾಡಿದ ಪ್ರಪ್ರಥಮ ಕಾಯಿದೆಯಾಗಿದೆ. ಜನಸಂಖ್ಯೆ ಬೆಳೆದಂತೆ ಉಳುವುದಕ್ಕಾಗಿ ಭೂಮಿ, ನೆಲೆಸುವುದಕ್ಕಾಗಿ ಹಳ್ಳಿಪಟ್ಟಣಗಳು, ವಾಹನಗಳ ಸಂಚಾರಕ್ಕಾಗಿ ಹೆದ್ದಾರಿ, ನೀರಾವರಿ-ವಿದ್ಯುಚ್ಫಕ್ತಿಗಾಗಿ ವಿಶಾಲವಾದ ಜಲಾಶಯಗಳು, ಅರಣ್ಯ ಕೈಗಾರಿಕೆಗಳಿಗೆ ನೆಲ ಇತ್ಯಾದಿಗಳ ಪೂರೈಕೆಗಾಗಿ ಮಿತಿಮೀರಿದ ಪ್ರಮಾಣದಲ್ಲಿ ಅರಣ್ಯ ನಾಶವಾಗಿ ಅವುಗಳಲ್ಲಿ ನೆಲೆಸಿದ್ದ ವನ್ಯಜೀವಿಗಳು ದಿನೇ ದಿನೇ ನಶಿಸುತ್ತಿವೆ. ಅಳಿಯುತ್ತಿರುವ ಈ ನಿಸರ್ಗ ಸಂಪತ್ತನ್ನು ಉಳಿಸಲು ಅನೇಕ ಪ್ರಯತ್ನಗಳು ನಡೆಯುತ್ತಿವೆ. 1948ರಲ್ಲಿ ಯುನೆಸ್ಕೊ ಆಶ್ರಯದಲ್ಲಿ ಫಾಂಟನ್ ಬ್ಲೂ ಎಂಬಲ್ಲಿ ಪ್ರಕೃತಿಸಂಪತ್ತನ್ನು ರಕ್ಷಿಸುವ ಅಂತಾರಾಷ್ಟ್ರೀಯ ಸಂಘ ಸ್ಥಾಪನೆಯಾಯಿತು. ಈ ಸಂಘದ ಪ್ರೇರಣೆಯಂತೆ ಭಾರತ ಸರ್ಕಾರ ಒಂದು ಪೂರ್ವಾಧಿಕಾರಿಯುಕ್ತ (ಅಡ್‍ಹಾಕ್) ಸಮಿತಿಯನ್ನು ನೇಮಿಸಿ, ಭಾರತದಲ್ಲಿ ವನ್ಯಜೀವಿಗಳ ರಕ್ಷಣೆಯ ಬಗ್ಗೆ ಯೋಜನೆಗಳನ್ನು ರೂಪಿಸಲು ಆದೇಶ ನೀಡಿತು. ಈ ಸಮಿತಿಯ ಶಿಫಾರಸುಗಳ ಮೇಲೆ 1952ರಲ್ಲಿ ಭಾರತೀಯ ವನ್ಯಪ್ರಾಣಿ ಸಂರಕ್ಷಣಾ ಸಂಸ್ಥೆ ರಚಿಸಲ್ಪಟ್ಟಿತು. ವನ್ಯಪ್ರಾಣಿ ರಕ್ಷಣೆಗೆ ತಕ್ಕ ವ್ಯವಸ್ಥೆ, ಕಾನೂನು ತಿದ್ದುಪಡಿ, ಮೃಗಬೇಟೆಗೆ ಹಲವಾರು ಆವಶ್ಯಕ ನಿಬಂಧನೆಗಳು, ಮೃಗಪಕ್ಷಿಗಳ ಚರ್ಮಕೊಂಬು ತುಪ್ಪಟ ಗರಿ ಇವುಗಳ ರಫ್ತಿಗೆ ನಿಬಂಧನೆಗಳು, ಅಭಯಾರಣ್ಯ ಹಾಗೂ ರಾಷ್ಟ್ರೀಯ ವನ್ಯಪ್ರಾಣಿ ಕ್ಷೇತ್ರ ನಿರ್ಮಾಣ ಇತ್ಯಾದಿ ವಿಷಯಗಳನ್ನು ಕೂಲಂಕಷವಾಗಿ ಪರಿಶೀಲಿಸಿ ರಾಜ್ಯ ಸರ್ಕಾರಗಳಿಗೆ ರಾಜ್ಯ ವನ್ಯಪ್ರಾಣಿ ಸಂಸ್ಥೆಗಳ ಮೂಲಕ ಸಲಹೆಗಳನ್ನು ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.[೧]
ಅಭಯಾರಣ್ಯಗಳ ಮತ್ತು ರಾಷ್ಟ್ರೀಯ ವನ್ಯಪ್ರಾಣಿ ಕ್ಷೇತ್ರಗಳು
ಬದಲಾಯಿಸಿಅಭಯಾರಣ್ಯಗಳ ಮತ್ತು ರಾಷ್ಟ್ರೀಯ ವನ್ಯಪ್ರಾಣಿ ಕ್ಷೇತ್ರಗಳ ಉಪಯುಕ್ತತೆ ಪಂಚಮುಖದ್ದಾಗಿರುತ್ತದೆ. 1. ವನ್ಯಪ್ರಾಣಿಗಳಿಗೆ ಮುಡಿಪಾಗಿಟ್ಟ ಪ್ರದೇಶಗಳ ನೈಸರ್ಗಿಕ ಸಂಪತ್ತನ್ನು ಕಾಪಾಡುವುದು. 2. ಅಲ್ಲಿನ ಸಸ್ಯ ಹಾಗೂ ಪ್ರಾಣಿವರ್ಗದ ರಕ್ಷಣೆ ಹಾಗೂ ಅಭಿವೃದ್ಧಿ. 3. ಅತ್ಯಮೂಲ್ಯವಾದ ಮೃಗಪಕ್ಷಿಗಳು ನಿರ್ನಾಮವಾಗುವುದನ್ನು ತಡೆಗಟ್ಟುವುದು. 4. ಪ್ರಕೃತಿ ವಿe್ಞÁನ ಹಾಗೂ ಮೃಗಪಕ್ಷಿಗಳ ಜೀವನ ಇತ್ಯಾದಿಗಳ ಸಂಶೋಧನೆಗೆ ಈ ಕ್ಷೇತ್ರಗಳು ಕಾರ್ಯರಂಗವಾಗುವುದು. 5. ವನ್ಯಪ್ರಾಣಿ ಕ್ಷೇತ್ರಗಳು ವಿದೇಶಿ ಹಾಗೂ ಒಳನಾಡಿನ ಪ್ರವಾಸಿಗರನ್ನು ಆಕರ್ಷಿಸಿ ನಾಡಿನ ಆರ್ಥಿಕ ಸ್ಥಿತಿ ಸುಧಾರಿಸಲು ವಿಶೇಷ ರೀತಿಯಲ್ಲಿ ಸಹಾಯವಾಗುವುದು.
ವಿವಿಧ ಸ್ಥಳದ ಅಭಯಾರಣ್ಯಗಳು
ಬದಲಾಯಿಸಿಕರ್ನಾಟಕದಲ್ಲಿ ಅನೇಕ ಅಭಯಾರಣ್ಯಗಳನ್ನೂ ರಾಷ್ಟ್ರೀಯ ವನ್ಯಪ್ರಾಣಿ ಕ್ಷೇತ್ರ ಮತ್ತು ಪಕ್ಷಿಧಾಮಗಳನ್ನೂ ಸ್ಥಾಪಿಸಲಾಗಿದೆ. ಇತ್ತೀಚಿನ ಮಾಹಿತಿಯ ಪ್ರಕಾರ (2000) ಕರ್ನಾಟಕದಲ್ಲಿ ಒಟ್ಟು 5 ರಾಷ್ಟ್ರೀಯ ಉದ್ಯಾನಗಳೂ 21 ವನ್ಯಧಾಮಗಳೂ ಇವೆ. ಇವುಗಳಲ್ಲಿ 5 ಪಕ್ಷಿಧಾಮಗಳೂ ಸೇರಿವೆ. ಅಣಶಿ, ಬಂಡೀಪುರ, ಬನ್ನೇರುಘಟ್ಟ ಕುದುರೆಮುಖ ಮತ್ತು ನಾಗರಹೊಳೆ (ರಾಜೀವ್‍ಗಾಂದಿs) - ಇವು ರಾಷ್ಟ್ರೀಯ ಉದ್ಯಾನಗಳು. ಅಭಯಾರಣ್ಯಗಳು (ವನ್ಯಧಾಮಗಳು) ಇಂತಿವೆ. ಆದಿಚುಂಚನಗಿರಿ, ಅತ್ತಿವೇರಿ, ಅರಬಿತಿಟ್ಟು, ಭದ್ರಾ, ಬಿಳಿಗಿರಿರಂಗನಬೆಟ್ಟ, ಬ್ರಹ್ಮಗಿರಿ, ಕಾವೇರಿ, ದಾಂಡೇಲಿ, ದರೋಜಿ, ಘಟಪ್ರಭಾ, ಗುಡವಿ, ಮೂಕಾಂಬಿಕ, ಮೇಲುಕೋಟೆ, ಪುಷ್ಪಗಿರಿ, ರಾಣೆಬೆನ್ನೂರು, ಶರಾವತಿ, ಶೆಟ್ಟಹಳ್ಳಿ, ಸೋಮೇಶ್ವರ ಮತ್ತು ತಲಕಾವೇರಿ.
ರಾಷ್ಟ್ರೀಯ ಉದ್ಯಾನಗಳು
ಬದಲಾಯಿಸಿ1. ಅಣಶಿ : ಉತ್ತರಕನ್ನಡ ಜಿಲ್ಲೆ ದಾಂಡೇಲಿಯಿಂದ 38ಕಿಮೀ ಮತ್ತು ಕಾರವಾರದಿಂದ 55ಕಿಮೀ ದೂರದಲ್ಲಿದೆ. ವಿಸ್ತೀರ್ಣ 250ಚ.ಕಿಮೀ. ದಾಂಡೇಲಿ ಅಭಯಾರಣ್ಯದ ಭಾಗವಾಗಿದ್ದ ಇದನ್ನು ರಾಷ್ಟ್ರೀಯ ಉದ್ಯಾನವನ್ನಾಗಿ ಮಾಡಬೇಕೆಂಬ ಪ್ರಸ್ತಾಪ 1987ರಲ್ಲಿ ಆಗಿದೆ. ಪ್ರವಾಸಿಗರ ಸೌಲಭ್ಯ ಇನ್ನೂ ಇಲ್ಲ. ಉಳವಿ ತೀರ್ಥಕ್ಷೇತ್ರ ಇದಕ್ಕೆ ಅಂಟಿಕೊಂಡಂತಿದೆ. ಅರೆನಿತ್ಯ ಹಸುರಿನ ಮತ್ತು ನಿತ್ಯಹಸುರಿನ ಅರಣ್ಯದಿಂದ ಕೂಡಿರುವ ಈ ಉದ್ಯಾನದಲ್ಲಿ ಆನೆ, ಕಾಟಿ, ಕೆಮ್ಮ, ಜಿಂಕೆ, ಕಡವೆ, ಮುಸುವ, ಕಾಡುಪಾಪ, ಹುಲಿ, ಕಪ್ಪುಚಿರತೆ, ಪುನುಗುಬೆಕ್ಕು, ಕಾಡುನಾಯಿ, ಕೇಶಳಿಲು-ಇವು ವಿಶಿಷ್ಟ ವನ್ಯಪ್ರಾಣಿಗಳು. ಮಂತುಳಿ, ವಾಟೆಹುಳಿ, ಗುಳುಮಾವು, ಹೆಬ್ಬಲಸು, ಚಕ್ಕೆ ಮುಂತಾದವು ಇಲ್ಲಿನ ಕೆಲವು ವೃಕ್ಷಗಳು. 2. ಬಂಡೀಪುರ: (ಚಾಮರಾಜನಗರ ಜಿಲ್ಲೆ) ಗುಂಡ್ಲುಪೇಟೆಯಿಂದ 15 ಕಿಮೀ ಮೈಸೂರಿನಿಂದ 80 ಕಿಮೀ ದೂರದಲ್ಲಿದೆ. ಕೇರಳದ ವೈನಾಡು, ತಮಿಳುನಾಡಿನ ಮುದುಮಲೈ ಅಭಯಾರಣ್ಯಗಳೂ ರಾಜೀವಗಾಂಧಿ (ನಾಗರಹೊಳೆ) ರಾಷ್ಟ್ರೀಯ ಉದ್ಯಾನವನಗಳೊಂದಿಗೆ ಹೊಂದಿಕೊಂಡಂತಿದೆ. ಭಾರತದ ಪ್ರಸಿದ್ಧ ಉದ್ಯಾನಗಳ ಪೈಕಿ ಇದೂ ಒಂದು. ಹುಲಿ ಯೋಜನೆಯ ಪ್ರಮುಖ ತಾಣವೂ ಹೌದು. ವಿಸ್ತೀರ್ಣ 874 ಚಕಿಮೀ.
ಇತಿಹಾಸ
ಬದಲಾಯಿಸಿ1898ರಲ್ಲಿ ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಮೀಸಲು ಅರಣ್ಯವಾಗಿದ್ದ ಇದು 1941ರಲ್ಲಿ ವನ್ಯಪ್ರಾಣಿ ಮೀಸಲು ಕ್ಷೇತ್ರವಾಯಿತು. 1974ರಲ್ಲಿ ರಾಷ್ಟ್ರೀಯ ಉದ್ಯಾನವಾಗಿ ಪರಿವರ್ತಿತವಾಯಿತು. ಇಲ್ಲಿನ ಅರಣ್ಯ ಮುಖ್ಯವಾಗಿ ಶುಷ್ಕಪರ್ಣಪಾತಿ ಬಗೆಯದು. ತೇಗ, ಮತ್ತಿ, ಹೊನ್ನೆ, ದಿಂಡಿಲು, ತಾರೆ, ಅಳಲೆ, ಬೆಟ್ಟದನೆಲ್ಲಿ, ಮುತ್ತಗ, ಕಾಡುಬೆಂಡೆ ಮುಂತಾದವು ಶುಷ್ಕ ಪ್ರದೇಶದಲ್ಲಿ ಬೆಳೆದರೆ, ತೇವಾಂಶ ಹೆಚ್ಚಿರುವ ಕಡೆ ಬೀಟೆ, ಅರಿಷಿಣತೇಗ, ಮಗ್ಗಾರೆ, ಕೋಣನಕೊಂಬು, ನವಿಲಾದಿ, ಗಂಟೆ ಮುಂತಾದವು ಕಾಣಸಿಗುತ್ತವೆ. ಬಿದಿರು, ನೇರಳೆ, ಬೂರುಗ ಇನ್ನಿತರೆ ಸಸ್ಯಗಳು. ಹುಲಿ, ಚಿರತೆ, ಕಾಡುನಾಯಿ, ಕಾಡುಬೆಕ್ಕು, ಚಿರತೆಬೆಕ್ಕು, ಮೂರು ಬಗೆಯ ಮುಂಗುಸಿ, ಕಿರುಬ ಇಲ್ಲಿನ ಮುಖ್ಯ ಮಾಂಸಾಹಾರಿ ಪ್ರಾಣಿಗಳು. ಆನೆ, ಜಿಂಕೆ, ಕಡವೆ, ಕೊಂಡಕುರಿ, ಕೆಮ್ಮ ಸಸ್ಯಾಹಾರಿ ಮೃಗಗಳು ಕರಡಿ, ಮುಸುವ, ಮಂಗ ಮೊಲ, ಕಾಡುಹಂದಿ, ಮುಳ್ಳು ಹಂದಿ, ಕೇಶಳಿಲು, ನೀರುನಾಯಿಗಳು ಹೇರಳವಾಗಿವೆ. 230ಕ್ಕೂ ಹೆಚ್ಚು ಬಗೆಯ ಪಕ್ಷಿಗಳು ಇಲ್ಲಿವೆ. ನವಿಲು, ಕಾಡುಕೋಳಿ, ಹಸುರುಪಾರಿವಾಳ, ಮರಕುಟಿಗ ಬಲುಸಾಮಾನ್ಯ. ಪ್ರವಾಸಿಗರಿಗೆ ವಸತಿಸೌಕರ್ಯ, ಪ್ರಾಣಿವೀಕ್ಷಣೆಗೆ ವಾಹನ ಸೌಲಭ್ಯ ಚೆನ್ನಾಗಿದೆ. (ನೋಡಿ- ಬಂಡೀಪುರ)
ಬನ್ನೇರುಘಟ್ಟ
ಬದಲಾಯಿಸಿ(ಬೆಂಗಳೂರು ಜಿಲ್ಲೆ) ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ 22ಕಿಮೀ ದೂರದಲ್ಲಿದೆ. 1974ರಲ್ಲೇ ರಾಷ್ಟ್ರೀಯ ಉದ್ಯಾನವನವಾಗಿ ಮಾರ್ಪಡಿಸಲಾಗಿದೆ. ವಿಸ್ತೀರ್ಣ 104ಚಕಿಮೀ. ಇಲ್ಲಿನ ಅರಣ್ಯ ಕುರುಚಲು ಮತ್ತು ಶುಷ್ಕಪರ್ಣಪಾತಿ ಬಗೆಯದು. ಇಲ್ಲಿನ ಪ್ರಾಣಿಗಳ ಪೈಕಿ ಮುಖ್ಯವಾದವು ಆನೆ, ಕಾಟಿ, ಚಿರತೆ, ಕಾಡುಹಂದಿ, ಕರಡಿ, ಕಡವೆ, ಜಿಂಕೆ, ಮುಸುವ, ಮೊಲ, ಮಂಗ ಮತ್ತು ಕಣೆಹಂದಿ. ಇಲ್ಲಿ ಉತ್ತಮವಾದ ಸಿಂಹ ಮತ್ತು ಹುಲಿ ಸಫಾರಿ ಸೌಲಭ್ಯ, ಸಣ್ಣದೊಂದು ಮೃಗಾಲಯ, ಉರಗೋದ್ಯಾನ, ಪ್ರಾಣಿ ಸಂಗ್ರಹಾಲಯಗಳೂ ಇವೆ. (ನೋಡಿ- ಬನ್ನೇರುಘಟ್ಟ)
ಕುದುರೆಮುಖ
ಬದಲಾಯಿಸಿ(ದಕ್ಷಿಣಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳು) ಕರ್ನಾಟಕದ ಇತ್ತೀಚಿನ ರಾಷ್ಟ್ರೀಯ ಉದ್ಯಾನ. ಇದನ್ನು ಉದ್ಯಾನವನ್ನಾಗಿ ರೂಪಿಸಬೇಕೆಂಬ ನಿರ್ಧಾರವನ್ನು 1987ರಲ್ಲಿ ಕೈಗೊಳ್ಳಲಾಯಿತು. ಇದರ ವಿಸ್ತೀರ್ಣ 600ಚಕಿಮೀ. ಪಶ್ಚಿಮ ಘಟ್ಟಗಳಲ್ಲಿ ಸ್ಥಿತವಾಗಿರುವ ಈ ಪ್ರದೇಶದಲ್ಲಿ ನಿತ್ಯಹಸುರಿನ, ಅರೆನಿತ್ಯಹಸುರಿನ ಹಾಗೂ ಶೋಲಾ ಅರಣ್ಯವಿದೆ. ಸುತ್ತ ಕಾಫಿ, ಟೀ ತೋಟಗಳಿವೆಯಾದರೂ ನಿಸರ್ಗ ಸೌಂದರ್ಯಕ್ಕೆ ಹೆಸರಾಗಿದೆ. ಹತ್ತಿರದ ಗಂಗಾಮೂಲದಲ್ಲಿ ನೇತ್ರಾವತಿ, ತುಂಗಾ, ಭದ್ರಾ ನದಿಗಳು ಉಗಮಿಸುತ್ತವೆ. ಹಲಸು, ಸುರಹೊನ್ನೆ, ಸಪ್ತಪರ್ಣಿ, ನೇರಳೆ, ನಾಗಸಂಪಿಗೆ, ಹೊಲಿಗೇರು, ಬಲಗಿ, ಕಿರಿಬೋಗಿ, ಹಾಲುಮಡ್ಡಿ ಮುಂತಾದವು ಇಲ್ಲಿನ ಮುಖ್ಯ ವೃಕ್ಷಜಾತಿಗಳು. ಇಲ್ಲಿನ ಪ್ರಾಣಿಸಂಪತ್ತ್ನುಹುಲಿ, ಚಿರತೆ, ಕಾಡುನಾಯಿ, ನರಿ, ಸಿಂಗಳೀಕ, ಮುಸುವ, ಕರಡಿ, ಕಾಟಿ, ಕಡವೆ, ಜಿಂಕೆ, ಕೆಮ್ಮ, ಕೊಂಡಕುರಿ, ಕೇಶಳಿಲು, ಹಾರುವ ಓತಿ, ಹಾರುವ ಅಳಿಲು, ಕಣೆಹಂದಿ ಮುಂತಾದವನ್ನೂ ಹಲವಾರು ಬಗೆಯ ಹಾವುಗಳನ್ನೂ ಒಳಗೊಂಡಿದೆ. ಹಕ್ಕಿಗಳ ಪೈಕಿ ಮಲಬಾರ್ ಟ್ರೋಗನ್, ಓಂಗಿಲೆ, ಕಗ್ಗಿಲು, ಮಲಬಾರ್ ಸಿಳ್ಳೆತ್ರಷ್ ಮುಖ್ಯವೆನಿಸಿವೆ. ಈ ಉದ್ಯಾನವನ ಹಾಸನದಿಂದ 108ಕಿಮೀ ದೂರದಲ್ಲೂ ಮಂಗಳೂರಿನಿಂದ 78ಕಿಮೀ ದೂರದಲ್ಲೂ ಇದೆ. ಶೃಂಗೇರಿ, ಆಗುಂಬೆ ಗಳಿಂದಲೂ ಇಲ್ಲಿಗೆ ರಸ್ತೆ ಸೌಕರ್ಯ ಇದೆ.
ರಾಜೀವಗಾಂಧೀರಾಷ್ಟ್ರೀಯ ಉದ್ಯಾನವನ
ಬದಲಾಯಿಸಿ(ನಾಗರಹೊಳೆ) ಕೊಡಗು ಜಿಲ್ಲೆಯ ಕೆಲವು ಅರಣ್ಯಗಳು, ಮೈಸೂರು ಜಿಲ್ಲೆಯ ಕೆಲವು ಪ್ರದೇಶಗಳನ್ನು ಒಳಗೊಂಡ ಈ ಉದ್ಯಾನ 1955ರಲ್ಲಿ ವನ್ಯಪ್ರಾಣಿ ಮೀಸಲು ಅರಣ್ಯವಾಗಿ ಪ್ರಾರಂಭವಾಯಿತು. 1975, 1983 ಮತ್ತು 1988ರಲ್ಲಿ ಹೆಚ್ಚುವರಿ ಪ್ರದೇಶ ಸೇರ್ಪಡೆಯಾಗಿ 1992ರಲ್ಲಿ ಈಗಿನ ಹೆಸರು ಪಡೆಯಿತು. ಇದರ ಈಗಿನ ವಿಸ್ತೀರ್ಣ 644ಚಕಿಮೀ.ಇಲ್ಲಿನ ಕಾಡು ಆದ್ರ್ರ ಹಾಗೂ ಶುಷ್ಕಪರ್ಣಪಾತಿ ಬಗೆಯದು. ಕೆಲವೆಡೆ ನಿತ್ಯ ಹಸುರಿನ ಅರಣ್ಯವೂ ಇದೆ. ಆನೆ, ಕಾಟಿ, ಜಿಂಕೆ, ಕೊಂಡಕುರಿ, ಕಡವೆ, ಕೆಮ್ಮ ಇಲ್ಲಿನ ಮುಖ್ಯ ಸಸ್ಯಾಹಾರಿ ಪ್ರಾಣಿಗಳು. ಹುಲಿ, ಚಿರತೆ, ಕರಡಿ, ಕಾಡುನಾಯಿ, ಕಿರುಬ, ಚಿರತೆಬೆಕ್ಕು, ಕಾಡುಬೆಕ್ಕು, ಮುಂಗುಸಿ, ಮಾಂಸಾಹಾರಿಗಳು. ನೀರುನಾಯಿ, ಕಾಡುಪಾಪ, ಕಣೆಹಂದಿ, ಚಿಪ್ಪುಹಂದಿ, ಪುನುಗುಬೆಕ್ಕು ಸಾಕಷ್ಟಿವೆ. 250ಕ್ಕೂ ಹೆಚ್ಚು ಬಗೆಯ ಪಕ್ಷಿ ಜಾತಿಗಳಿವೆ. ಈ ಉದ್ಯಾನವನ ಮೈಸೂರಿನಿಂದ 90ಕಿಮೀ ದೂರದಲ್ಲಿದೆ. ಪ್ರಾಣಿವೀಕ್ಷಣೆಗೆ ವಾಹನ ಸೌಲಭ್ಯ ಇದೆ. ವಸತಿ ಸೌಕರ್ಯ ಸು.10ಕಿಮೀ ದೂರದ ಮೂರ್ಕಲ್ಲಿನಲ್ಲಿದೆ. (ನೋಡಿ- ನಾಗರಹೊಳೆ)
ಅಭಯಾರಣ್ಯಗಳು (ವನ್ಯಧಾಮಗಳು ಹಾಗೂ ಪಕ್ಷಿಧಾಮಗಳು)
ಬದಲಾಯಿಸಿಆದಿಚುಂಚಿನಗಿರಿ ಮಯೂರ ಅಭಯಾರಣ್ಯ :
ಬದಲಾಯಿಸಿ(ಮಂಡ್ಯ ಜಿಲ್ಲೆ) ನವಿಲು ಸಂರಕ್ಷಣೆಗೆಂದು ಮೀಸಲಾಗಿರುವ ಪಕ್ಷಿಧಾಮ. 1981 ಅಕ್ಟೋಬರಿನಲ್ಲಿ ಅಸ್ತಿತ್ವಕ್ಕೆ ಬಂತು. ವಿಸ್ತೀರ್ಣ 0.88ಚಕಿಮೀ. ಇಲ್ಲಿನದು ಪ್ರಧಾನವಾಗಿ ಕುರುಚಲು ಕಾಡು. ಗೊಬ್ಬಳಿ, ಕಳ್ಳಿ, ಎಕ್ಕ, ಬೇವು ಇಲ್ಲಿನ ಮುಖ್ಯ ಸಸ್ಯಜಾತಿಗಳು. ನವಿಲು ಮಾತ್ರವಲ್ಲದೆ ಹಳದಿಕೊರಳಿನ ಪಿಕಳಾರವೂ ಇಲ್ಲಿ ಕಾಣದೊರೆಯುತ್ತದೆ. ಮಂಗ, ಬಾವಲಿ, ಕಾಡುಬೆಕ್ಕು, ಮುಂಗುಸಿ ಮತ್ತು ಮೊಲ ಇಲ್ಲಿ ಸಿಗುವ ಸಸ್ತನಿಗಳು.
ಅತ್ತಿವೇರಿ ಪಕ್ಷಿಧಾಮ
ಬದಲಾಯಿಸಿ(ಉತ್ತರಕನ್ನಡ ಜಿಲ್ಲೆ) ಮುಂಡಗೋಡಿನಿಂದ 17ಕಿಮೀ ದೂರದಲ್ಲೂ ಹುಬ್ಬಳ್ಳಿಯಿಂದ 43ಕಿಮೀ ದೂರದಲ್ಲೂ ಇದೆ. ವಿಸ್ತೀರ್ಣ 2.23ಚಕಿಮೀ. 1994ರ ಅಕ್ಟೋಬರಿನಲ್ಲಿ ಅಸ್ತಿತ್ವಕ್ಕೆ ಬಂತು. ಅತ್ತಿವೇರಿ ಗ್ರಾಮದ ಬಳಿ ಹರಿಯುವ ತಾಯವ್ವನ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಲಾದ ಅಣೆಕಟ್ಟಿನಿಂದಾಗಿ ಅತ್ತಿವೇರಿ ಜಲಾಶಯ ರೂಪುಗೊಂಡು ಪಕ್ಷಿಗಳ ಮೆಚ್ಚಿನ ತಾಣವಾಯಿತು. ಸುತ್ತ ಪರ್ಣಪಾತಿ ಕಾಡಿದೆ. ಬಾಗೆ, ಬೂರುಗ, ತಾಟಿನುಂಗು, ಹಲಸು, ಬಿಳಿಜಾಲಿ, ನೇರಳೆ, ತೇಗ, ಬೀಟೆ, ಜಾಲಿ, ಬಿದಿರು ಇಲ್ಲಿನ ಮುಖ್ಯ ಸಸ್ಯಜಾತಿಗಳು. ಇಲ್ಲಿನ ಪಕ್ಷಿಗಳಲ್ಲಿ ಮುಖ್ಯವಾಗಿ ಬಿಳಿಬೂಸ, ನೀರುಕಾಗೆ, ಚಮಚಕೊಕ್ಕು, ಬೆಳ್ಳಕ್ಕಿ, ಮೀಂಚುಳ್ಳಿ, ಓಂಗಿಲೆ ಮತ್ತು ಕವಲುತೋಕೆಗಳನ್ನು ಹೆಸರಿಸಬಹುದು.
ಅರಬಿತಿಟ್ಟು ವನ್ಯಧಾಮ
ಬದಲಾಯಿಸಿ(ಮೈಸೂರು ಜಿಲ್ಲೆ) ಮೈಸೂರಿನಿಂದ ಪಶ್ಚಿಮಕ್ಕೆ 30ಕಿಮೀ ದೂರದಲ್ಲಿ ಮೈಸೂರು ಮಂಗಳೂರು ಹೆದ್ದಾರಿಯಲ್ಲಿದೆ. ವಿಸ್ತೀರ್ಣ 13.5ಚಕಿಮೀ. 1985 ಏಪ್ರಿಲ್‍ನಲ್ಲಿ ಅಸ್ತಿತ್ವಕ್ಕೆ ಬಂತು. ಇಲ್ಲಿನ ಪ್ರಧಾನ ಸಸ್ಯವರ್ಗ ಕುರುಚಲು ಬಗೆಯದಾಗಿದ್ದು ದಿಂಡಲು, ಬೆಟ್ಟದನೆಲ್ಲಿ, ಮುಗುಳಿ, ನೀಲಗಿರಿ ಮರ, ಶ್ರೀಗಂಧವನ್ನು ಒಳಗೊಂಡಿದೆ. ಚಿರತೆ, ನರಿ, ಜಿಂಕೆ, ಕಾಡುಹಂದಿ, ಕಣೆಹಂದಿ, ಇಲ್ಲಿ ನವಿಲುಗಳ ಸಂತತಿಯು ಹೇರಳವಾಗಿದೆ ಮೊಲ ಮತ್ತು ಮುಂಗುಸಿ ಇಲ್ಲಿನ ಮುಖ್ಯ ಪ್ರಾಣಿಜಾತಿಗಳು. ಪ್ರವಾಸಿಗರಿಗೆ ಇನ್ನೂ ಪ್ರವೇಶ ಕಲ್ಪಿಸಲಾಗಿಲ್ಲ.
ಭದ್ರಾ ವನ್ಯಧಾಮ
ಬದಲಾಯಿಸಿ(ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆ) ಚಿಕ್ಕಮಗಳೂರಿನಿಂದ 30ಕಿಮೀ ದೂರದಲ್ಲಿ ಇದರ ದಕ್ಷಿಣ ಭಾಗವಾದ ಮುತ್ತೋಡಿಯೂ ತರೀಕೆರೆಯಿಂದ 22ಕಿಮೀ ದೂರದಲ್ಲಿ ಇದರ ಉತ್ತರ ಭಾಗವಾದ ಲಕ್ಕವಳ್ಳಿಯೂ ಇವೆ. 1974ರ ಸೆಪ್ಟೆಂಬರಿನಲ್ಲಿ ಅಭಯಾರಣ್ಯವಾಗಿ ಅಸ್ತಿತ್ವಕ್ಕೆ ಬಂತು. 1998ರ ನವೆಂಬರ್‍ನಲ್ಲಿ ಹುಲಿ ಮೀಸಲು ಅರಣ್ಯವಾಗಿ ಮೇಲ್ದರ್ಜೆಗೆ ಏರಿತು. ಇದರ ವಿಸ್ತೀರ್ಣ 493ಚಕಿಮೀ. ಇದರಲ್ಲಿ ಲಕ್ಕವಳ್ಳಿ, ಮುತ್ತೋಡಿ ಮತ್ತಿತರ ರಾಜ್ಯ ಅರಣ್ಯಗಳನ್ನು ಒಳಗೊಂಡ ಒಂದು ಕ್ಷೇತ್ರವೂ ಬಾಬಾಬುಡನ್‍ಗಿರಿ ಅರಣ್ಯವನ್ನು ಒಳಗೊಂಡ ಎರಡನೆಯ ಕ್ಷೇತ್ರವೂ ಇದೆ. ಉತ್ತರದಲ್ಲಿ ಭದ್ರಾ ಜಲಾಶಯ ಇದೆ. ಈ ಅಭಯಾರಣ್ಯದ ದಕ್ಷಿಣಭಾಗದಲ್ಲಿ ಆದ್ರ್ರಪರ್ಣಪಾತಿ ಬಗೆಯ ಅರಣ್ಯವೂ ಉತ್ತರಭಾಗದಲ್ಲಿ ಶುಷ್ಕಪರ್ಣಪಾತಿ ಬಗೆಯ ಅರಣ್ಯವೂ ಬಾಬಾಬುಡನ್‍ಗಿರಿ ವಲಯದಲ್ಲಿ ಶೋಲಾ ಬಗೆಯ ಅರಣ್ಯವೂ ಇವೆ. ಇಲ್ಲಿನ ಮುಖ್ಯ ಸಸ್ಯಜಾತಿಗಳೆಂದರೆ ಹೊಳೆದಾಸವಾಳ, ಅರಿಷಿಣತೇಗ, ತಡಸಲು, ಕಲ್ತೇಗ, ತೇಗ, ಹುನಗಲು, ತಾರೆ, ಮತ್ತಿ, ಬೀಟೆ, ಹೊನ್ನೆ, ಕೂಲಿ, ಅತ್ತಿ, ನಾಯಿಬೆಂಡೆ, ಚಿಪ್ಪಾಲೆ, ಜಾಲಾರಿ, ಸಗಡೆ, ದಿಂಡಲು, ದೊಳ್ಳಿ, ಜಂಬೆ, ಬಗನಿ ಮತ್ತು ಗಂಡುಬಿದಿರು ಹಾಗೂ ಹೆಬ್ಬಿದಿರು.
ಹುಲಿ, ಚಿರತೆ, ಕಾಡುಬೆಕ್ಕು, ಕಾಡುನಾಯಿ, ನರಿ, ಬೆಕ್ಕು, ಕರಡಿ, ಆನೆ, ಕಾಟಿ, ಕಡವೆ, ಜಿಂಕೆ, ಕೆಮ್ಮ, ಕೊಂಡಕುರಿ, ಕಾಡುಹಂದಿ, ಮುಸುವ, ಮಂಗ, ಕಾಡುಪಾಪ, ಪುನುಗುಬೆಕ್ಕು, ತಾಳೆಬೆಕ್ಕು, ಮುಂಗುಸಿ, ಚಿಪುŒಹಂದಿ, ಕೇಶಳಿಲು, ಕಣೆಹಂದಿ, ನೀರುನಾಯಿ, ಹಾರುವ ಓತಿ - ಇವು ಪ್ರಧಾನ ಪ್ರಾಣಿಜಾತಿಗಳು. 250ಕ್ಕೂ ಹೆಚ್ಚು ಬಗೆಯ ಹಕ್ಕಿಗಳಿವೆ. ಬ್ಲ್ಯಾಕ್‍ರ್ಡ್, ಶಾಮ, ಕೆಂಪೆದೆ ಪಿಕಳಾರ, ಕಾಜಾಣ, ಕಗ್ಗಿಲು, ಓಂಗಿಲೆಗಳು ಇಲ್ಲಿ ಕಾಣಸಿಗುವ ಪಕ್ಷಿ ಪ್ರಭೇದಗಳು. ಪ್ರವಾಸಿಗರಿಗೆ ವಸತಿ ಹಾಗೂ ವೀಕ್ಷಣೆಗೆ ವಾಹನ ಸೌಕರ್ಯ ಇವೆ.
ಬಿಳಿಗಿರಂಗನಾಥ ಸ್ವಾಮಿ ದೇವರ ಅಭಯಾರಣ್ಯ
ಬದಲಾಯಿಸಿ(ಚಾಮರಾಜನಗರ ಜಿಲ್ಲೆ) ಚಾಮರಾಜನಗರದಿಂದ 48ಕಿಮೀ ದೂರದಲ್ಲಿ ಪಶ್ಚಿಮ ಮತ್ತು ಪೂರ್ವ ಘಟ್ಟಗಳು ಸಂದಿsಸುವ ಪ್ರದೇಶದಲ್ಲಿ ಇದೆ. 1974 ಜೂನ್‍ನಲ್ಲಿ ಸ್ಥಾಪನೆಯಾದ ಇದು 1987 ಜನವರಿಯಲ್ಲಿ ವಿಸ್ತಾರಗೊಂಡಿತು. ಇದರ ವಿಸ್ತೀರ್ಣ 540ಚಕಿಮೀ ದಕ್ಷಿಣದಲ್ಲಿ ತಮಿಳುನಾಡಿಗೆ ಸೇರಿಕೊಂಡಿದೆ. ಬಿಳಿಗಿರಿರಂಗನ ಬೆಟ್ಟವನ್ನೆಲ್ಲ ಹೆಚ್ಚುಕಡಿಮೆ ಆಕ್ರಮಿಸಿರುವ ಈ ಅಭಯಾರಣ್ಯ ತಪ್ಪಲಿನಲ್ಲಿ ಕುರುಚಲು ಕಾಡನ್ನೂ ಎತ್ತರದ ಪ್ರದೇಶಗಳಲ್ಲಿ ಆದ್ರ್ರಪರ್ಣಪಾತಿ, ನಿತ್ಯಹಸುರಿನ ಅರಣ್ಯಗಳನ್ನೂ ಇನ್ನೂ ಉನ್ನತ ಪ್ರದೇಶಗಳಲ್ಲಿ ಶೋಲಾ ಅರಣ್ಯವನ್ನೂ ಪಡೆದಿದೆ. ಪರ್ಣಪಾತಿ ಅರಣ್ಯ ಪ್ರದೇಶದಲ್ಲಿ ಬೀಟೆ, ತಡಸಲು, ತಾರೆ, ಹುನಗಲು, ಪಾದರಿ, ಆನೆಬ್ಯಾಲ, ಕೊಂಡಮಾವು, ಹೊನ್ನೆ, ದಿಂಡಲು, ಕೆಂಪುದಾಳೆ, ಕೊಲಮಾವು, ನಾಯಿಬೆಂಡೆ, ಕಕ್ಕೆ, ಬೆಟ್ಟದನೆಲ್ಲಿ, ದೊಳ್ಳಿ, ಎಣ್ಣೆಮರ, ಸಗಡೆ, ಕೈತಾಳೆ, ಉಡಿ ಮುಂತಾದ ವೃಕ್ಷಗಳೂ ನಿತ್ಯಹಸುರಿನ ಪ್ರದೇಶಗಳಲ್ಲಿ ಸಟಗ, ನೀರಂಜಿ, ನೇರಳೆ ಜಾತಿಯವು, ಎಲೆಸಾಂಡೆ ಮುಂತಾದವೂ ಇವೆ. ಶೋಲಾ ಪ್ರದೇಶಗಳಲ್ಲಿ ಮಸ್ಸಿವಾರ, ಮರುಳಿ, ಲೊಡ್ಡಿ, ಕಂಪಾಲೆ ಮರಗಳೂ ಹುಲ್ಲುಪಸಲೆಗಳಲ್ಲಿ ನಿಂಬೆಹುಲ್ಲು, ಕಾಮಾಜಿಹುಲ್ಲು, ಶುಂಠಿಹುಲ್ಲು, ಗುಂಡುನಾಲೆಹುಲ್ಲು, ಕಾಚಿಹುಲ್ಲು ಮುಂತಾದವು ಹೇರಳ.ಪ್ರಾಣಿಗಳಲ್ಲಿ ಆನೆ, ಕಾಟಿ, ಕಡವೆ, ಜಿಂಕೆ, ಕೆಮ್ಮ, ನಾಲ್ಕುಕೊಂಬಿನ ಜಿಂಕೆಗಳೂ ಹುಲಿ, ಚಿರತೆ, ಕರಡಿ, ಕಾಡುನಾಯಿ, ಪುನುಗು ಬೆಕ್ಕುಗಳೂ ಮುಂಗುಸಿ, ಕಾಡುಬೆಕ್ಕು, ಕೇಶಳಿಲು, ಮುಸುವ, ಮಂಗ, ಕಾಡುಹಂದಿ, ಕಣೆಹಂದಿ, ನೀರುನಾಯಿ ಮುಂತಾದವೂ ಸಾಕಷ್ಟಿವೆ. 215ಕ್ಕೂ ಹೆಚ್ಚು ಬಗೆಯ ಪಕ್ಷಿಗಳೂ ಇಲ್ಲಿ ಕಾಣದೊರೆಯುತ್ತವೆ. ಇತ್ತಲೆ ಮಂಡಲ ಇಲ್ಲಿನ ಉಭಯಚರಿ ಪ್ರಾಣಿಗಳ ಪೈಕಿ ವಿಶೇಷವಾದ್ದು. ಇಲ್ಲಿನ ಸುಪ್ರಸಿದ್ದ ದೊಡ್ಡಸಂಪಿಗೆ ಮರ ಸೋಲಿಗರಿಗೆ ಪೂಜ್ಯವೆನಿಸಿದ್ದು, ಪ್ರೇಕ್ಷಣೀಯ ತಾಣವೂ ಆಗಿದೆ. ಪ್ರವಾಸಿಗರಿಗೆ ವಸತಿ ಸೌಕರ್ಯ ಇದೆ. (ನೋಡಿ- ಬಿಳಿಗಿರಿರಂಗನ-ಬೆಟ್ಟ)
ಬ್ರಹ್ಮಗಿರಿ ಅಭಯಾರಣ್ಯ
ಬದಲಾಯಿಸಿ(ಕೊಡಗು ಜಿಲ್ಲೆ) ಹುಣಸೂರಿನಿಂದ 58ಕಿಮೀ ದೂರದಲ್ಲೂ ಮಡಿಕೇರಿಯಿಂದ ವಿರಾಜಪೇಟೆ ಮಾರ್ಗವಾಗಿ 37ಕಿಮೀ ದೂರದಲ್ಲೂ ಇದೆ. ವಿಸ್ತೀರ್ಣ 181ಚಕಿಮೀ. ಪಶ್ಚಿಮಘಟ್ಟಗಳಲ್ಲಿ ಸ್ಥಿತವಾಗಿರುವ ಈ ವನ್ಯಧಾಮ ನಿತ್ಯಹಸುರಿನ ಹಾಗೂ ಅರೆನಿತ್ಯ ಹಸುರಿನ ಕಾಡಿನಿಂದ ಕೂಡಿದೆ. ಶೋಲ್ ಹುಲ್ಲುಗಾವಲು ಪ್ರದೇಶವೂ ಇದೆ. ಹಲಸು, ಹೆಬ್ಬಲಸು, ಚಕ್ಕೆ, ಗಂಧಗರಿಗೆ, ಕಲ್ಲುಹೊನ್ನೆ, ಸಪ್ತಪರ್ಣಿ, ಲಿಡಗ, ತೊರತಿ, ಮೈಲಾಡಿ, ಜಿಮ್ಮಿ ಮುಂತಾದವು ನಿತ್ಯ ಹಸುರಿನ ಪ್ರದೇಶದಲ್ಲಿ ಕಾಣದೊರೆತರೆ ಕೊರೆಮತ್ತಿ, ಮತ್ತಿ, ನಂದಿ, ತಾರೆ, ತೂಪ್ರ, ಆಲ, ಅತ್ತಿ, ಕಡವಳ, ಕುಂಕುಮ, ಮಗ್ಗಾರೆ, ಹೊಲೆಗಾರ, ದೂಳ್ಳಿ, ಹನಿಚೆ ಮುಂತಾದವು ಅರೆನಿತ್ಯ ಹಸುರಿನ ಪ್ರದೇಶದಲ್ಲೂ ಬೆಳೆಯುತ್ತವೆ. ಹೆಬ್ಬಿದಿರು, ಬೆತ್ತ, ಗಣಪೆಬಳ್ಳಿ, ಮರಸುತ್ತುಬಳ್ಳಿ, ಸೀಗೆ, ಕುರಿಯಾಡಿಬಳ್ಳಿ ಇತ್ಯಾದಿ ಸಸ್ಯ ಜಾತಿಗಳೂ ಇಲ್ಲಿವೆ.ಇಲ್ಲಿನ ವನ್ಯಪ್ರಾಣಿಗಳಲ್ಲಿ ಆನೆ, ಕಾಟಿ, ಕಡವೆ, ಜಿಂಕೆ, ಕೆಮ್ಮ, ಕೊಂಡಕುರಿ, ಹುಲಿ, ಚಿರತೆ, ಕಾಡುಬೆಕ್ಕು, ಪುನುಗುಬೆಕ್ಕು, ತಾಳೆಬೆಕ್ಕು, ಕರಡಿ, ಕಾಡುಹಂದಿ, ಸಿಂಗಳೀಕ, ಮುಸುವ, ಕಾಡುಪಾಪ, ಕೇಶಳಿಲು, ನೀರುನಾಯಿ, ಮಾರ್ಟಿನ್ ಮುಂಗುಸಿ, ಚಿಪ್ಪುಹಂದಿ ಮತ್ತು ಕಣೆಹಂದಿ ಮುಖ್ಯವಾದವು.ಹಾವುಗಳ ಪೈಕಿ ಕಾಳಿಂಗಸರ್ಪವೂ ಹೆಬ್ಬಾವು ಮತ್ತು ನಾಗರ ಹಾವುಗಳೂ ಇಲ್ಲಿ ವಾಸಿಸುತ್ತವೆ. ಪ್ರಕೃತಿ ಅಧ್ಯಯನಕ್ಕೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. (ನೋಡಿ- ಬ್ರಹ್ಮಗಿರಿ)
ಕಾವೇರಿ ಅಭಯಾರಣ್ಯ
ಬದಲಾಯಿಸಿ(ಮೈಸೂರು, ಮಂಡ್ಯ ಮತ್ತು ಬೆಂಗಳೂರು ಜಿಲ್ಲೆ) ಬೆಂಗಳೂರಿನಿಂದ ಕನಕಪುರ- ಹಲಗೂರು ಮಾರ್ಗವಾಗಿ 100ಕಿಮೀ ದೂರದಲ್ಲಿದೆ. ವಿಸ್ತೀರ್ಣ 527ಚಕಿಮೀ. 1987 ಜನವರಿಯಲ್ಲಿ ಸ್ಥಾಪಿತವಾಯಿತು. ಇದರ ಬಹುಭಾಗ ಕಾವೇರಿ ನದಿಯಿಂದ ಆವೃತವಾಗಿದೆ. ಈಶಾನ್ಯಕ್ಕೆ ತಮಿಳುನಾಡು ಗಡಿಯಿದೆ.ಇಲ್ಲಿನ ಅರಣ್ಯ ಶುಷ್ಕಪರ್ಣಪಾತಿ ಮತ್ತು ಕುರುಚಲು ಬಗೆಯದು. ನದಿಯ ದಂಡೆಗುಂಟ ಹೊಳೆಮತ್ತಿ ಮತ್ತು ನೇರಳೆ ಮರಗಳಿದ್ದರೆ, ಉಳಿದೆಡೆ ಹುಣಿಸೆ, ಆಸಿನಮರ, ಚುಜ್ಜಲು, ಬೇಲ, ಗೊಬ್ಬಳಿ, ಬಾಗೆ ಮುಂತಾದವು ಬೆಳೆಯುತ್ತವೆ.ಆನೆ, ಚಿರತೆ, ಕಾಡುಹಂದಿ, ಕಡವೆ, ಜಿಂಕೆ, ಕೆಮ್ಮ, ನಾಲ್ಕುಕೊಂಬಿನ ಜಿಂಕೆ, ಕೇಶಳಿಲು, ನೀರುನಾಯಿ, ಮೊಲ ಮುಂತಾದವು ಇಲ್ಲಿನ ವನ್ಯಪ್ರಾಣಿಗಳ ಪೈಕಿ ಕೆಲವು. ಪಕ್ಷಿಗಳಲ್ಲಿ ಸಿರ್‍ಕೀರ್ ಕುಕೂ, ಮಾಲ್‍ಕೋಹ, ಬಿಳಿಹುಬ್ಬಿನ ಪಿಕಳಾರ, ಕುಬ್ಜ, ಮರಕುಟಿಗ ಮುಖ್ಯವೆನಿಸಿವೆ. ಕಾವೇರಿ ನದಿಯಲ್ಲಿ ಸಿಕ್ಕುವ ಬಿಳಿಮೀನು (ಮಹಸೀರ್) ಈ ಅಭಯಾರಣ್ಯದ ಪ್ರಮುಖ ಆಕರ್ಷಣೆ. ಅಭಯಾರಣ್ಯಕ್ಕೆ ಬಲುಸಮೀಪದಲ್ಲಿ ಪ್ರೇಕ್ಷಣೀಯ ಸ್ಥಳಗಳಾದ ಹೊಗೇನಕಲ್ ಜಲಪಾತ, ಮೇಕೆದಾಟು ಮತ್ತು ಸಂಗಮಗಳಿವೆ. ಜಂಗಲ್ ಲಾಡ್ಜುಗಳು ಮತ್ತು ರಿಸಾಟ್ರ್ಸ್‍ನವರ ವಸತಿ ಸೌಕರ್ಯ ಉಂಟು.
ದಾಂಡೇಲಿ ಅಭಯಾರಣ್ಯ
ಬದಲಾಯಿಸಿ(ಉತ್ತರ ಕನ್ನಡ ಜಿಲ್ಲೆ). 1956 ಮೇ ತಿಂಗಳಿನಲ್ಲಿ ಸ್ಥಾಪನೆಗೊಂಡಿತು. ಧಾರವಾಡದಿಂದ ದಾಂಡೇಲಿ ಪಟ್ಟಣ ಮಾರ್ಗವಾಗಿ 68ಕಿಮೀ ದೂರದಲ್ಲಿದೆ. ವಿಸ್ತೀರ್ಣ 204ಚಕಿಮೀ. ಈ ವನ್ಯಧಾಮ 1994ರ ಏಪ್ರಿಲ್‍ನಲ್ಲಿ ವಿಸ್ತಾರಗೊಂಡು ಪ್ರಸಕ್ತ 475ಚಕಿಮೀ ಅರಣ್ಯವನ್ನು ಒಳಗೊಂಡಿದೆ.ಆದ್ರ್ರಪರ್ಣಪಾತಿ ಮತ್ತು ಅರೆನಿತ್ಯಹಸುರಿನ ಅರಣ್ಯದಿಂದ ಕೂಡಿದೆ. ಬೀಟೆ, ಮತ್ತಿ, ತಾರೆ, ನಂದಿ, ಹೊನ್ನೆ, ಅರಿಷಿಣತೇಗ, ತಡಸಲು, ನಾಯಿಬೆಂಡೆ, ನವಿಲಾದಿ ಇಲ್ಲಿನ ಮುಖ್ಯ ವೃಕ್ಷಜಾತಿಗಳು. ಬಿದಿರು ಕೂಡ ಹೇರಳವಾಗಿದೆ. ಉಳಿದ ಪ್ರಮುಖ ವನ್ಯಧಾಮಗಳಲ್ಲಿ ಕಾಣಸಿಕ್ಕುವ ಪ್ರಾಣಿಗಳೇ ಇಲ್ಲೂ ಉಂಟು. 200 ಬಗೆಯ ಹಕ್ಕಿಗಳಿವೆ. ಪ್ರವಾಸಿಗರಿಗೆ ವಾಹನ, ವಸತಿ ಸೌಕರ್ಯಗಳಿವೆ. 10ಕಿಮೀ ದೂರದಲ್ಲಿ ಹರಿಯುವ ಕಾಳಿನದಿಯಲ್ಲಿ ದೋಣಿವಿಹಾರ ಮತ್ತು ಕೆಲವು ಸಾಹಸಮಯ ಕ್ರೀಡೆಗಳಿಗೆ ಅವಕಾಶವಿದೆ. ಸನಿಹದಲ್ಲೇ ಉಳವಿ ಕ್ಷೇತ್ರ, ಕವಲ ಗುಹೆಗಳು, ಸೈಕ್ಸ್ ಪಾಯಿಂಟ್, ನಾಗಝರಿ ಕಣಿವೆ ವೀಕ್ಷಣ ತಾಣ ಇವೆ. (ನೋಡಿ- ದಾಂಡೇಲಿ)
ದರೋಜಿ ವನ್ಯಧಾಮ
ಬದಲಾಯಿಸಿ(ಬಳ್ಳಾರಿ ಜಿಲ್ಲೆ) ಪ್ರಧಾನವಾಗಿ ಕರಡಿಗಳನ್ನು ಸಂರಕ್ಷಿಸಲೆಂದು ಸ್ಥಾಪಿಸಲಾದ ಅಭಯಾರಣ್ಯ. 1994 ಅಕ್ಟೋಬರ್ ತಿಂಗಳಿನಲ್ಲಿ ಅಸ್ತಿತ್ವಕ್ಕೆ ಬಂತು. ಇದೊಂದು ಚಿಕ್ಕ ಅಭಯಾರಣ್ಯ. ವಿಸ್ತೀರ್ಣ 56ಚಕಿಮೀ. ಹೊಸಪೇಟೆಯಿಂದ ಕಮಲಾಪುರ ಮಾರ್ಗವಾಗಿ 30ಕಿಮೀ ದೂರದಲ್ಲಿದೆ. ಹರಿಹರದಿಂದ 132ಕಿಮೀ ದೂರದಲ್ಲಿದೆ.ಇಲ್ಲಿನ ಅರಣ್ಯ ಕುರುಚಲು ಬಗೆಯದು, ಜೊತೆಗೆ ಕಲ್ಲುಬಂಡೆಗಳಿಂದ ಕೂಡಿದ ಗುಡ್ಡಬೆಟ್ಟ, ಗುಹೆಗಳು ಇರುವುದರಿಂದ ಕರಡಿಗಳಿಗೆ ಅನುಕೂಲವಾಗಿದೆ. ಮುಳ್ಳು ಕಂಟಿಗಳಾದ ಕಬಳಿ, ಎಲಚಿ, ಪರಗಿ, ಚುಜ್ಜಲು, ಕರೀಜಾಲ್ ಮುಂತಾದವೂ ಅಲ್ಲಲ್ಲಿ ತಡಸಲು, ಆಲ, ಕುಳ್ಳುಗಾತ್ರದ ನೇರಳೆ ಇತ್ಯಾದಿ ಮರಗಳು ಬೆಳೆಯುತ್ತವೆ. ಕರಡಿ ಮಾತ್ರವಲ್ಲದೆ, ಚಿರತೆ, ತೋಳ, ನರಿ, ಕತ್ತೆಕಿರುಬ, ಮುಂಗುಸಿ, ಮಂಗ, ನವಿಲು, ಮುಂತಾದವೂ ಕಾಣದೊರೆಯುತ್ತವೆ. ಕಮಲಾಪುರದಲ್ಲಿ ಅರಣ್ಯ ವಸತಿ ಸೌಕರ್ಯ ಉಂಟು. 10. ಘಟಪ್ರಭಾ ಪಕ್ಷಿಧಾಮ: (ಬೆಳಗಾಂವಿ ಜಿಲ್ಲೆ) ಘಟಪ್ರಭಾ ನದಿಗೆ ಧೂಪಧಾಳದ ಬಳಿ ಕಟ್ಟಲಾಗಿರುವ ಜಲಾಶಯವನ್ನೂ ಒಳಗೊಂಡಂತೆ ಸು.20 ದ್ವೀಪಗಳಿಂದ ಕೂಡಿದ ಪಕ್ಷಿಧಾಮ. 1974 ಜೂನಿನಲ್ಲಿ ಅಸ್ತಿತ್ವಕ್ಕೆ ಬಂತು. ಧಾರವಾಡದಿಂದ 95ಕಿಮೀ ದೂರದಲ್ಲಿದೆ. ವಿಸ್ತೀರ್ಣ 30ಚಕಿಮೀ. ಬೆಳಗಾಂವಿ ಜಿಲ್ಲೆಯ ಗೋಕಾಕದಿಂದ ನಾಲ್ಕು ಫರ್ಲಾಂಗ್ ದೂರದಲ್ಲಿದೆ.ದೊಡ್ಡಗಾತ್ರದ ದ್ವೀಪಗಳಲ್ಲಿ ಮಾತ್ರ ಕೊಂಚ ವನರಾಶಿ ಇದೆ. ಗೊಬ್ಬಳಿ, ಬಾಗೆ, ಹಲಸು, ಕಾರಾಚ, ಎಲಚಿ, ಬಿದಿರು, ಆನೆಹುಲ್ಲು ಇಂಪರೇಟ ಮುಂತಾದವು ಇಲ್ಲಿನ ಮುಖ್ಯ ಸಸ್ಯಗಳು. ಹಕ್ಕಿಗಳಿಗೆ ಆಶ್ರಯ ಒದಗಿಸುತ್ತವೆ. ಡೆಮಾಯ್‍ಸೆಲ್ ಕೊಕ್ಕರೆ, ಬಿಳಿಬಕ, ನೀರುಕಾಗೆ, ಗೋವಕ್ಕಿ, ಬೆಳ್ಳಕ್ಕಿ ಪ್ರಭೇದಗಳು, ಚಮಚಕೊಕ್ಕು, ಬಿಳಿಬೂಸ, ನೀರುನವಿಲು, ನಾರಾಯಣೆ, ಮೀಂಚುಳ್ಳಿ ಮತ್ತು ಟಿಟ್ವಿಭಗಳು ಇಲ್ಲಿ ಕಾಣಸಿಗುತ್ತವೆ.ಗೋಕಾಕ ಧಬಧಬೆ ಇಲ್ಲಿನ ಇನ್ನೊಂದು ಆಕರ್ಷಣೆ.
ಗುಡುವಿ ಪಕ್ಷಿಧಾಮ
ಬದಲಾಯಿಸಿ(ಶಿವಮೊಗ್ಗ ಜಿಲ್ಲೆ) ಶಿವಮೊಗ್ಗದಿಂದ ಸಾಗರ ಸೊರಬ ಮಾರ್ಗವಾಗಿ 112ಕಿಮೀ ದೂರದಲ್ಲಿದೆ. 1989 ಜುಲೈನಲ್ಲಿ ಸ್ಥಾಪಿತವಾಯಿತು. 30 ಹೆಕ್ಟೇರ್ ವಿಸ್ತೀರ್ಣವುಳ್ಳ ಜಲಾಶಯ ಮತ್ತು ಅದಕ್ಕೆ ಸೇರಿಕೊಂಡಂತಿರುವ ದಟ್ಟ ಆದ್ರ್ರಪರ್ಣಪಾತಿ ಅರಣ್ಯವನ್ನು ಒಳಗೊಂಡ ತಾಣ. ವಿಸ್ತೀರ್ಣ 0.74ಚಕಿಮೀ. ತೊರೆಮತ್ತಿ, ತಾರೆ, ಅಳಲೆ, ನಂದಿ, ಬೀಟೆ, ಅರಿಷಿಣತೇಗ, ಜಂಬೆ, ಬಗನಿ, ಆಲ, ಅರಳಿ, ಮುತ್ತುಗ, ಶ್ರೀಗಂಧ, ಇಪ್ಪೆ ಮರಗಳು ಇಲ್ಲಿನ ಮುಖ್ಯ ಸಸ್ಯ ಜಾತಿಗಳು. 191 ಬಗೆಯ ಹಕ್ಕಿಗಳು ಇಲ್ಲಿ ಕಾಣದೊರೆಯುತ್ತವೆ. ಇವುಗಳ ಪೈಕಿ 63 ನೀರಹಕ್ಕಿಗಳು. ಹಲವು ಬಗೆಯ ಬೆಳ್ಳಕ್ಕಿ, ನೀರುಕಾಗೆ ಜಾತಿಗಳು, ಬಕಗಳು, ಕೊಕ್ಕರೆಗಳು, ಬಿಳಿಬೂಸಾ, ಕಪ್ಪುಬೂಸಾ, ನಾಮದಕೋಳಿ, ಮೀಂಚುಳ್ಳಿ ಬಗೆಗಳು, ಮದಗದ ಕೋಳಿ, ಬಾತುಗಳು ಹೇರಳವಾಗಿವೆ.
ಮುಕಾಂಬಿಕ ವನ್ಯಧಾಮ
ಬದಲಾಯಿಸಿ(ಉಡುಪಿ ಜಿಲ್ಲೆ) ಪಶ್ಚಿಮ ಘಟ್ಚಗಳಲ್ಲಿ ಸ್ಥಾಪಿತವಾಗಿರುವ ಇನ್ನೊಂದು ಉತ್ತಮ ಅಭಯಾರಣ್ಯ; ಶರಾವತಿ ಕಣಿವೆ ವನ್ಯಧಾಮಕ್ಕೆ ಸೇರಿಕೊಂಡಂತಿದೆ. ಈಶಾನ್ಯದಲ್ಲಿ ಕೊಡಚಾದ್ರಿ, ಮಧ್ಯದಲ್ಲಿ ಕೊಲ್ಲೂರು ಇವೆ. ಸಾಗರದಿಂದ 75ಕಿಮೀ ದೂರದಲ್ಲೂ ಮಂಗಳೂರಿ ನಿಂದ 132ಕಿಮೀ ದೂರದಲ್ಲೂ ಇದೆ. 1974ರ ಜೂನ್ ತಿಂಗಳಲ್ಲಿ ಅಸ್ತಿತ್ವಕ್ಕೆ ಬಂದಿತು. ಇದರ ಒಟ್ಟು ವಿಸ್ತೀರ್ಣ 247ಚಕಿಮೀ. ಕೊಲ್ಲೂರಿನ ಮೂಕಾಂಬಿಕೆಯ ಹೆಸರನ್ನೇ ಈ ವನ್ಯಧಾಮಕ್ಕೆ ಕೊಡಲಾಗಿದೆ.ನಿತ್ಯಹಸಿರು, ಅರೆ ನಿತ್ಯಹಸಿರು ಹಾಗೂ ಆದ್ರ್ರಪರ್ಣಪಾತಿ ಅರಣ್ಯದಿಂದ ಕೂಡಿರುವ ಈ ವನ್ಯಧಾಮದಲ್ಲಿ ಪ್ರಧಾನವಾಗಿ ಎಣ್ಣೆಮರ, ಗುಳುಮಾವು, ಕಿರಿಭೂಗಿ, ಬಲಗಿ, ಸುರಹೊನ್ನೆ, ರುದ್ರಾಕ್ಷಿ, ಸತಗ, ಗುಡ್ಡರೆಂಜೆ ಮರಗಳೂ ಹಂಡಿಬೆತ್ತ, ಹಾಲುಬೆತ್ತದ ಮೆಳೆಗಳೂ ಹಲಸು, ಬರಣಿಗೆ, ನೇರಳೆ, ದಾಲ್ಚಿನ್ನಿ ಜಾಕಾಯಿ, ಮರಗಳೂ ಕೆಳಸ್ತರದಲ್ಲಿ ಬೂರುಗ, ಮಾವು, ಬೀಟೆ, ಬೆಟ್ಟಗಣಗಿಲೆ, ಅರಿಷಿಣ, ತೇಗ ಮುಂತಾದ ಮರಗಳೂ ಇವೆ.ಅರಿಷಿಣ ಬಳ್ಳಿ ಅಥವಾ ಮರದ ಅರಿಷಿಣ ಎಂಬ ತುಂಬ ಅಪರೂಪದ ಬಳ್ಳಿ ಇಲ್ಲಿ ಕಾಣದೊರೆಯುತ್ತದೆ. ಔಷಧೀಯ ಮಹತ್ವವುಳ್ಳ ಈ ಸಸ್ಯ ಅಳಿವಿನ ಅಪಾಯದ ಅಂಚಿನಲ್ಲಿದೆ. ಬೇರೆ ದೊಡ್ಡ ವನ್ಯಧಾಮಗಳಲ್ಲಿ ಕಂಡುಬರುವ ಎಲ್ಲ ಮಾಂಸಾಹಾರಿ, ಸಸ್ಯಾಹಾರಿ ಪ್ರಾಣಿಗಳು ಇಲ್ಲಿಯೂ ಇವೆ. ಅಪರೂಪದ ಸಿಂಗಳೀಕ ಇಲ್ಲಿ ವಾಸಿಸುತ್ತದೆ.
ಮೇಲುಕೋಟೆ ವನ್ಯಧಾಮ
ಬದಲಾಯಿಸಿ(ಮಂಡ್ಯ ಜಿಲ್ಲೆ) ಮುಖ್ಯವಾಗಿ ತೋಳದ ಸಂರಕ್ಷಣೆಗೆಂದು ಸ್ಥಾಪಿತವಾದ ವನ್ಯಧಾಮ. ಮೈಸೂರಿನಿಂದ ಶ್ರೀರಂಗಪಟ್ಟಣ - ಪಾಂಡವಪುರ ಮಾರ್ಗವಾಗಿ 50ಕಿಮೀ ದೂರದಲ್ಲಿದೆ. 1974 ಜೂನಿನಲ್ಲಿ ಅಸ್ತಿತ್ವಕ್ಕೆ ಬಂತು. ವಿಸ್ತೀರ್ಣ 50ಚಕಿಮೀ. ಇಲ್ಲಿ ಅರಣ್ಯ ಪ್ರಧಾನವಾಗಿ ಒಣಪರ್ಣಪಾತಿ ಮತ್ತು ಕುರುಚಲು ಬಗೆಯದು.ಜಾಲಾರಿ ಮತ್ತು ಮುಂಡೀಚಲು (ಒಂದು ಬಗೆಯ ಅನಾವೃತ ಬೀಜ ಸಸ್ಯ, ವಿನಾಶದ ಅಂಚಿನಲ್ಲಿದೆ) ಇಲ್ಲಿನ ಮುಖ್ಯ ಬಗೆಯ ಮರಗಳು. ಕಾಡುಬೆಕ್ಕು, ತೋಳ, ಚಿರತೆ, ನರಿ ಇಲ್ಲಿನ ಮಾಂಸಾಹಾರಿಗಳಾದರೆ; ಜಿಂಕೆ, ಕೃಷ್ಣಮೃಗ, ಹಂದಿ, ಕೋತಿ ಇಲ್ಲಿನ ಸಸ್ಯಾಹಾರಿಗಳು.
ನುಗು ವನ್ಯಧಾಮ
ಬದಲಾಯಿಸಿ(ಮೈಸೂರು ಜಿಲ್ಲೆ) ನುಗು ಹೊಳೆಗೆ ಅಡ್ಡಲಾಗಿ ಕಟ್ಟಿದ ಜಲಾಶಯವನ್ನು ಒಳಗೊಂಡ ಒಂದು ಚಿಕ್ಕ ಅಭಯಾರಣ್ಯ. ಮೈಸೂರಿನಿಂದ ಸರಗೂರು ಮಾರ್ಗವಾಗಿ 76ಕಿಮೀ ದೂರದಲ್ಲಿದೆ. 1974 ಜೂನಿನಲ್ಲಿ ಸ್ಥಾಪಿತವಾಯಿತು. ವಿಸ್ತೀರ್ಣ 30ಚ.ಕಿಮೀ.ಇಲ್ಲಿನ ಬಹುಪಾಲು ಅರಣ್ಯ ಕುರುಚಲು ಕಂಟಿಗಳಿಂದ ಕೂಡಿದೆ. ದಿಂಡಿಲು, ಬೆಟ್ಟದನೆಲ್ಲಿ, ಶ್ರೀಗಂಧ, ಬಾಗೆ, ಚುಜ್ಜಲು, ಗಂಡುಬಿದಿರು ಇಲ್ಲಿನ ಮುಖ್ಯ ಸಸ್ಯವರ್ಗ. ಆನೆ, ಚಿರತೆ, ಕಾಡುಬೆಕ್ಕು, ಜಿಂಕೆ, ಕೆಮ್ಮ, ಕಾಡುಹಂದಿ, ಮುಂಗುಸಿ, ಕಡವೆ, ಪುನುಗುಬೆಕ್ಕು, ಮರಬೆಕ್ಕು ಮತ್ತಿತರ ಪ್ರಾಣಿಗಳಿವೆ.
ಪುಷ್ಪಗಿರಿ ವನ್ಯಧಾಮ
ಬದಲಾಯಿಸಿ(ಕೊಡಗು ಜಿಲ್ಲೆ) ಪಶ್ಚಿಮ ಘಟ್ಟಗಳಲ್ಲಿರುವ ಇನ್ನೊಂದು ಅಭಯಾರಣ್ಯ. 1987 ಸೆಪ್ಟೆಂಬರಿನಲ್ಲಿ ಸ್ಥಾಪಿತವಾಯಿತು. ವಿಸ್ತೀರ್ಣ 103ಚಕಿಮೀ. ಅನೇಕ ಝರಿಗಳಿಂದ ಕಿರುಅಬ್ಬಿಗಳಿಂದ ಕೂಡಿರುವ ಈ ವನ್ಯಧಾಮದಲ್ಲಿ ನಿತ್ಯ ಹಸುರಿನ, ಅರೆನಿತ್ಯಹಸುರಿನ ಮತ್ತು ಶೋಲಾ ಬಗೆಯ ಅರಣ್ಯವನ್ನು ಕಾಣಬಹುದು.ಎಣ್ಣೆಮರ, ಅಗಿಲು, ಕಿರಿಭೋಗಿ, ನಾಗಸಂಪಿಗೆ, ಧೂಪ, ತತ್ತಲೆಮರ, ಹೆಬ್ಬಲಸು, ಹಲಸು, ತೊರಟ್ಟಿ, ಹಾಲುಸಳ್ಳಿ ಮತ್ತಿತರ ನಿತ್ಯಹಸುರಿನ ಮರಗಳಲ್ಲದೆ, ವಂಟೇಮರ, ಸತಗ, ದಾಲ್ಚಿನ್ನಿ, ಗೌರಿ, ಬಾಗೆ, ಹುನಗಲು, ಮತ್ತಿ, ಅಂಡಿಪುನಾರ ಇತ್ಯಾದಿ ಅರೆನಿತ್ಯಹಸುರಿನ ಮರಗಳೂ ಬೆತ್ತ, ಬಿದಿರು, ವಾಟೆಬಿದಿರು, ಕುರಿಂಜಿ ಗಿಡಗಳೂ ಇಲ್ಲಿ ಕಾಣದೊರೆಯುತ್ತವೆ. ಪಶ್ಚಿಮ ಘಟ್ಟಗಳಲ್ಲಿ ವಾಸಿಸುವ ಎಲ್ಲ ಬಗೆಯ ಪ್ರಾಣಿಗಳೂ ಇಲ್ಲುಂಟು.ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಮತ್ತು ಹಾರಂಗಿ ಅಣೆಕಟ್ಟು ಇಲ್ಲಿಗೆ ಸಮೀಪ.
ರಾಣೆಬೆನ್ನೂರು ಕೃಷ್ಣಮೃಗ ಅಭಯಾರಣ್ಯ
ಬದಲಾಯಿಸಿ(ಧಾರವಾಡ ಜಿಲ್ಲೆ) ರಾಣೆಬೆನ್ನೂರಿಗೆ 8ಕಿಮೀ ದೂರದಲ್ಲಿದೆ. ಈ ವನ್ಯಧಾಮ ಮುಖ್ಯವಾಗಿ ಕೃಷ್ಣಮೃಗ ಮತ್ತು ಬಸ್ಟರ್ಡ್ ಹಕ್ಕಿಗಳ ಸಂರಕ್ಷಣೆಗೆಂದು 1974 ಜೂನ್‍ನಲ್ಲಿ ಸ್ಥಾಪಿತವಾಯಿತು. ವಿಸ್ತೀರ್ಣ 119ಚಕಿಮೀ. ಕುರುಚಲು ಕಾಡು - ಇಲ್ಲಿನ ಮುಖ್ಯ ಸಸ್ಯವರ್ಗ, ಬಳ್ಳಾರಿಜಾಲಿ, ಕಗ್ಗಲ್ಲಿ, ಹಂಗರಿಕೆ, ಕವಳಿ ಮುಂತಾದವು ಸಹಜವಾಗಿ ಬೆಳೆದರೆ, ಈಚೆಗೆ ನೀಲಗಿರಿ ಮರಗಳನ್ನೂ ವಿಪುಲವಾಗಿ ಬೆಳೆಸಲಾಗಿದೆ. ಜೊತೆಗೆ ಎಲಚಿ, ತಂಗಡಿ, ಕಕ್ಕೆ, ಬೇವು, ತಪಸಿ, ಇಪ್ಪೆ ಮರಗಳನ್ನೂ ಕಾಣಬಹುದು.ಕೃಷ್ಣಮೃಗ, ತೋಳಗಳಲ್ಲದೆ, ಕಾಡುಹಂದಿ, ನರಿ, ಮುಳ್ಳುಹಂದಿ, ಮುಂಗುಸಿ, ಮೊಲ, ಚಿಪ್ಪುಹಂದಿ ಹಾಗೂ ಕತ್ತೆಕಿರುಬಗಳೂ ಇಲ್ಲಿ ಕಾಣದೊರೆಯುತ್ತವೆ.
ರಂಗನತಿಟ್ಟು ಪಕ್ಷಿಧಾಮ
ಬದಲಾಯಿಸಿ(ಮಂಡ್ಯ ಜಿಲ್ಲೆ) ಕರ್ನಾಟಕದ ಸುಪ್ರಸಿದ್ಧ ಪಕ್ಷಿಧಾಮ. 1940 ಜುಲೈ ತಿಂಗಳಿನಲ್ಲಿ ಅಸ್ತಿತ್ವಕ್ಕೆ ಬಂತು. ಮೈಸೂರಿನಿಂದ 20ಕಿಮೀ ದೂರದಲ್ಲಿ, ಶ್ರೀರಂಗಪಟ್ಟಣಕ್ಕೆ 3ಕಿಮೀ ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿದೆ. ಈ ಪಕ್ಷಿಧಾಮ 6 ದೊಡ್ಡ ದ್ವೀಪಗಳನ್ನೂ 2-3 ಸಣ್ಣ ದ್ವೀಪಗಳನ್ನೂ ಹೊಂದಿದೆ. ವಿಸ್ತೀರ್ಣ 0.67ಚಮೀ. ಈ ದ್ವೀಪಗಳಲ್ಲಿ ಸ್ವಾಭಾವಿಕ ಕುರುಚಲು ಸಸ್ಯವರ್ಗ ಹಾಗೂ ಮರಗಳಿವೆ. ನದೀತೀರದ ಆಚೀಚೆ ಕೃಷಿ ಭೂಮಿಯಿದ್ದು ಸಾಕಷ್ಟು ಆಹಾರ, ಹುಳು ಹುಪ್ಪಟೆಗಳು ಸಿಗುವುದರಿಂದ ಹಕ್ಕಿಗಳಿಗೆ ಮೆಚ್ಚಿನ ತಾಣವಾಗಿದೆ. ಇಲ್ಲಿ ಸುಮಾರು 16 ಬಗೆಯ ನೀರಹಕ್ಕಿಗಳೂ ನೂರಾರು ಬಗೆಯ ವೃಕ್ಷವಾಸಿ ಹಾಗೂ ಭೂವಾಸಿ ಹಕ್ಕಿಗಳೂ ಇವೆ. ವೀಕ್ಷಕರಿಗೆ ದೋಣಿ ಸೌಲಭ್ಯವನ್ನು ಕಲ್ಪಿಸಲಾಗಿದೆ.
(ನೋಡಿ- ರಂಗನತಿಟ್ಟು-ಪಕ್ಷಿಧಾಮ)
ಶರಾವತಿ ಕಣಿವೆ ವನ್ಯಧಾಮ
ಬದಲಾಯಿಸಿ(ಶಿವಮೊಗ್ಗ ಜಿಲ್ಲೆ) ಪಶ್ಚಿಮ ಘಟ್ಟಗಳಲ್ಲಿ ಸ್ಥಿತವಾಗಿರುವ ಇನ್ನೊಂದು ಅಭಯಾರಣ್ಯ. 1972 ಏಪ್ರಿಲ್ ತಿಂಗಳಿನಲ್ಲಿ ಸ್ಥಾಪನೆಗೊಂಡಿತು. ಸಾಗರದಿಂದ 7ಕಿಮೀ ದೂರದಲ್ಲಿದೆ. ಪೂರ್ವಭಾಗದಲ್ಲಿ ಲಿಂಗನಮಕ್ಕಿ ಜಲಾಶಯವೂ ನೈಋತ್ಯದಲ್ಲಿ ಮೂಕಾಂಬಿಕಾ ವನ್ಯಧಾಮವೂ ಇವೆ. ಜಲಾಶಯವೂ ಸಣ್ಣಪುಟ್ಟ ದ್ವೀಪಗಳೂ ಸೇರಿ ಒಟ್ಟು ವಿಸ್ತೀರ್ಣ 431ಚಕಿಮೀ. ಇಲ್ಲಿನ ಅರಣ್ಯ ನಿತ್ಯಹಸುರಿನ ಹಾಗೂ ಅರೆನಿತ್ಯಹಸುರಿನ ಸಸ್ಯ ಸಂಕುಲದಿಂದ ಕೂಡಿದೆ.ಸುರಹೊನ್ನೆ, ಗುಳಮಾವು, ಬಗನಿ, ಸಳ್ಳೆ, ಎಣ್ಣೆಮರ, ಮಗ್ಗಾರೆ ಮುಂತಾದ ಮರಗಳೂ ಸೀಗೆ, ನೀಟಮ, ಗಣಪೆಬಳ್ಳಿ ಮುಂತಾದ ಬಳ್ಳಿಗಳೂ ನಂದಿ, ಬೀಟೆ, ದೊಳ್ಳಿ, ಬೆಟ್ಟದನೆಲ್ಲಿ, ಮತ್ತಿ, ನವಿಲಾದಿ ಇತ್ಯಾದಿ ಆರ್ಥಿಕ ಮಹತ್ತ್ವವುಳ್ಳ ಮರಗಳೂ ಇವೆ. ಹುಲಿ, ಚಿರತೆಗಳಲ್ಲದೆ, ಹಾರುವ ಆಳಿಲು, ಸಿಂಗಳೀಕ, ಕಾಳಿಂಗಸರ್ಪ ಮುಂತಾದ ಅಪರೂಪದ ಪ್ರಾಣಿಗಳೂ ಇಲ್ಲಿ ಕಾಣದೊರೆಯುತ್ತವೆ.ಜೋಗ ಜಲಪಾತ ಇಲ್ಲಿಗೆ ತುಂಬ ಸಮೀಪದಲ್ಲಿದೆ. ಜೋಗದಲ್ಲಿ ಹಾಗೂ ನಾಗವಳ್ಳಿಯಲ್ಲಿ ವಸತಿ ಸೌಲಭ್ಯ ಇದೆ.
ಶೆಟ್ಟಹಳ್ಳಿ ಅಭಯಾರಣ್ಯ
ಬದಲಾಯಿಸಿ(ಶಿವಮೊಗ್ಗ ಜಿಲ್ಲೆ) ಶಿವಮೊಗ್ಗ ನಗರಕ್ಕೆ ಹೊಂದಿಕೊಂಡಂತಿರುವ ಈ ವನ್ಯಧಾಮ 1974 ನವೆÀಂಬರ್‍ನಲ್ಲಿ ಅಸ್ತಿತ್ವಕ್ಕೆ ಬಂತು. ವಿಸ್ತೀರ್ಣ 396ಚಕಿಮೀ.ಅರೆನಿತ್ಯಹಸುರು ಬಗೆಯ ಮತ್ತು ಶುಷ್ಕಪರ್ಣಪಾತಿ ಅರಣ್ಯದಿಂದ ಕೂಡಿದೆ. ಮತ್ತಿ, ತಾರೆ, ತೇಗ, ದಿಂಡಿಲು, ನಂದಿ, ಬೆಪ್ಪಾಲೆ, ಕಕ್ಕೆ ಮತ್ತು ಬೆಟ್ಟದನೆಲ್ಲಿ ಮರಗಳೂ ಹೆಬ್ಬಿದಿರು, ಗಂಡು ಬಿದಿರು, ತಡಸಲು, ಅರಿಷಿಣತೇಗ, ಕಾಡುಬೆಂಡೆ, ಸಂಪಿಗೆ, ಗಂಟೆ ಮುಂತಾದ ವೃಕ್ಷಗಳೂ ಇಲ್ಲಿ ಹೇರಳ. ಇತರ ಅಭಯಾರಣ್ಯಗಳಲ್ಲಿ ಕಾಣಸಿಕ್ಕುವ ಎಲ್ಲ ರೀತಿಯ ಮಾಂಸಾಹಾರಿ ಸಸ್ಯಾಹಾರಿ ಪ್ರಾಣಿಗಳೂ ಉರಗಗಳೂ ಹಕ್ಕಿಗಳೂ ಇಲ್ಲಿವೆ.ಶಿವಮೊಗ್ಗ ನಗರಕ್ಕೆ 10ಕಿಮೀ ದೂರದಲ್ಲಿ ತ್ಯಾವರೆಕೊಪ್ಪ ಎಂಬಲ್ಲಿ ಸಿಂಹಧಾಮವೂ ಸಕ್ರೆಬೈಲು ಬಳಿ ಸಾಕಿದ ಆನೆಗಳ ಶಿಬಿರವೂ ಮಂಡಗದ್ದೆಯ ಪಕ್ಷಿಧಾಮವೂ ಇಲ್ಲಿನ ಪ್ರಮುಖ ಆಕರ್ಷಣೆಗಳು.
ಸೋಮೇಶ್ವರ ಅಭಯಾರಣ್ಯ
ಬದಲಾಯಿಸಿ(ಉಡುಪಿ ಜಿಲ್ಲೆ) ಪಶ್ಚಿಮ ಘಟ್ಟಗಳಲ್ಲಿ ನಿತ್ಯಹಸುರಿನ ಮತ್ತು ಅರೆನಿತ್ಯಹಸುರಿನ ಅರಣ್ಯದಿಂದ ಕೂಡಿದ ಮತ್ತೊಂದು ಪಕ್ಷಿಧಾಮ. 1974 ಜೂನ್ ತಿಂಗಳಿನಲ್ಲಿ ಸ್ಥಾಪನೆಗೊಂಡ ಈ ವನ್ಯಧಾಮದ ವಿಸ್ತೀರ್ಣ 88ಚಕಿಮೀ. ಇದರ ಪಕ್ಕದಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನ ಇದೆ.ಹುನಗಲು, ಗುಳುಮಾವು, ಮಾವು, ಹೆಬ್ಬಲಸು, ದಾಲ್ಚಿನ್ನಿ, ಸಟಗ, ಬೀಟೆ, ಮತ್ತಿ, ನಂದಿ, ಬೆಟ್ಟಗಣಗಿಲೆ, ದೂಳ್ಳಿ ಇತ್ಯಾದಿ ವೃಕ್ಷಗಳಿವೆ. ಪ್ರಾಣಿಗಳಲ್ಲಿ ಹುಲಿ, ಚಿರತೆ, ಕಾಡುನಾಯಿ, ಜಿಂಕೆ, ಕಡವೆ, ಸಿಂಗಳೀಕ, ಮುಸುವ, ಕೋತಿ, ಕಾಟಿ ಮುಖ್ಯವೆನಿಸಿವೆ.ಶಿಮೊಗ್ಗದಿಂದ ತೀರ್ಥಹಳ್ಳಿ - ಆಗುಂಬೆ ಮಾರ್ಗವಾಗಿ ಇಲ್ಲಿಗೆ 95ಕಿಮೀ. ಮಂಗಳೂರಿನಿಂದ ಮೂಡಬಿದ್ರಿ - ಕಾರ್ಕಳ - ಹೆಬ್ರಿ ಮಾರ್ಗವಾಗಿ ಇಲ್ಲಿಗೆ 86ಕಿಮೀ. ಆಗುಂಬೆಯ ಸೂರ್ಯಾಸ್ತ ವೀಕ್ಷಣೆ, ಒನಕೆಅಬ್ಬಿ, ಜಂಬುತೀರ್ಥ ಇಲ್ಲಿನ ಇನ್ನಿತರ ಮುಖ್ಯ ಆಕರ್ಷಣೆಗಳು.
ತಲಕಾವೇರಿ ಅಭಯಾರಣ್ಯ
ಬದಲಾಯಿಸಿ(ಕೊಡಗು ಜಿಲ್ಲೆ) ಇದು ಕೂಡ ಪಶ್ಚಿಮಘಟ್ಟಗಳಲ್ಲಿರುವ ವನ್ಯಧಾಮ. ಕಾವೇರಿ ನದಿಯ ಉಗಮಸ್ಥಾನವಾದ ತಲಕಾವೇರಿಯನ್ನು ಇದು ಒಳಗೊಂಡಿರುವುದರಿಂದ ಇದಕ್ಕೆ ಈ ಹೆಸರು. 1987 ಸೆಪ್ಟೆಂಬರಿನಲ್ಲಿ ಸ್ಥಾಪಿತವಾಯಿತು. ವಿಸ್ತೀರ್ಣ 105ಚಕಿಮೀ. ಮಡಿಕೇರಿಯಿಂದ 45ಕಿಮೀ ದೂರದಲ್ಲಿದೆ. ಇಲ್ಲಿನ ಅರಣ್ಯ ನಿತ್ಯಹಸುರಿನ ಬಗೆಯದು.
ಉಲ್ಲೇಖಗಳು
ಬದಲಾಯಿಸಿ