ವನ್ಯಜೀವಿ ಶಾಸ್ತ್ರ
ವನ್ಯಜೀವಿ ಶಾಸ್ತ್ರವು ವನ್ಯಜೀವಿ ಸಂರಕ್ಷಣೆಗೆ ಆಧಾರ ಕೊಡುವ ಒಂದು ಆನ್ವಯಿಕ ವಿಜ್ಞಾನ (ಅಪೈಡ್ ಸೈನ್ಸ್) ಎಂದು ಪರಿಗಣಿಗಸಬಹುದು. ವನ್ಯಜೀವಿ ಶಾಸ್ತ್ರವು ಇತರ ಮೂಲ ವಿಜ್ಞಾನ (ಬೇಸಿಕ್ ಸೈನ್ಸ್) ಗಳಾದ ಇಕಾಲಜಿ, ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ, ಭೂವಿಜ್ಞಾನಗಳು, ಸಂಖ್ಯಾಶಾಸ್ತ್ರ ಇತ್ಯಾದಿಗಳಿಂದ ಪಡೆದ ತಿಳುವಳಿಕೆಯನ್ನು ಮಾಹಿತಿಯನ್ನು ವನ್ಯಜೀವಿಗಳ ಸಂರಕ್ಷಣೆಗೆ ಅನುಕೂಲವಾಗುವಂತೆ ಅಳವಡಿಸಲು ಪ್ರಯತ್ನಪಡುತ್ತದೆ. ಈ ಕಾರ್ಯ ಇಂಜಿನಿಯರುಗಳು, ವೈದ್ಯರು ಮೊದಲಾದವರು ಮೂಲ ವಿಜ್ಞಾನಗಳಾದ ಭೌತಶಾಸ್ತ್ರ, ರಸಾಯನ ಶಾಸ್ತ್ರಗಳಿಂದ ಮಾಹಿತಿ ಪಡೆದು ತಮ್ಮ ತಮ್ಮ ಆನ್ವಯಿಕ ತಂತ್ರಜ್ಞಾನಗಳಲ್ಲಿ ಅಳವಡಿಸಿಕೊಳ್ಳುವ ವಿಧಾನಗಳನ್ನೇ ಹೋಲುತ್ತದೆ. ಕೃಷಿ ವಿಜ್ಞಾನ ಮತ್ತು ಪಶು ವಿಜ್ಞಾನಗಳಂತೇ ವನ್ಯಜೀವಿ ಶಾಸ್ತ್ರವು ಮೂಲ ಸಿದ್ಧಾಂತಗಳಿಗಿಂತ ಮಿಗಿಲಾಗಿ ಮಾನವನಿಗೆದುರಾಗುವ ಸಮಸ್ಯೆಗಳ ಪರಿಹಾರಕ್ಕೆ ಒತ್ತು ಕೊಡುತ್ತದೆ. ಇದರಿಂದಾಗಿ ವನ್ಯಜೀವಿ ವಿಜ್ಞಾನಿಗಳು ಸಂರಕ್ಷಣೆಯಲ್ಲಿ ಎದುರಾಗುವ ಸಮಸ್ಯೆಗಳ ಅಥವಾ ಪ್ರಶ್ನೆಗಳ ಸಮೀಪ ಕಾರಣಗಳ ಅವುಗಳ ಅಗತ್ಯ ಪರಿಹಾರಗಳ ಸಂಶೋಧನೆಗೇ ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆ.
ಉದಾಹರಣೆ
ಬದಲಾಯಿಸಿವನ್ಯಜೀವಿ ವಿಜ್ಞಾನಿಗೆ ಒಂದು ಕಾಡಿನಲ್ಲಿ ಜಿಂಕೆಗಳ ಸಂಖ್ಯೆ ಎಷ್ಟಿದೆ, ಇದು ಏರುತ್ತಿದೆಯೇ ಇಲ್ಲ ಇಳಿಮುಖವಾಗುತ್ತಿದೆಯೇ - ಹಾಗಿದ್ದರೆ ಕಾರಣವೇನು - ಎಂಬಿತ್ಯಾದಿ ಪ್ರಶ್ನೆಗಳು ಪ್ರಮುಖವೆನಿಸುತ್ತವೆ.[೧] ಬದಲಿಗೆ ಜೀವ ವಿಕಾಸದ ಅಧ್ಯಯನಮಾಡುವ ಜೀವವಿಜ್ಞಾನಿಗೆ ಈ ಜಿಂಕೆಗಳು ಯಾವ ಯುಗದಲ್ಲಿ ವಿಕಸನಗೊಂಡವು, ಅವುಗಳ ಮೈಮೇಲೆ ಚುಕ್ಕೆಗಳು ಏಕೆ ಇವೆ ಎಂಬಂತಹ ಮೂಲ ವಿಜ್ಞಾನದ ಪ್ರಶ್ನೆಗಳು ಹೆಚ್ಚು ಮೌಲಿಕವಾಗಿರುತ್ತವೆ. ಇವೆರೆಡಕ್ಕೂ ಸಂಬಂಧವಿದ್ದರೂ ವನ್ಯಜೀವಿ ಶಾಸ್ತ್ರದ ಧೋರಣೆ ಹೆಚ್ಚು ಆನ್ವಯಿಕವಾದದು. ಈ ಶಾಸ್ತ್ರ ಉಪಯೋಗಿಸುವ ಕಾಲಮಾನ ಇಕಾಲಜಿಯದು, ವಿಕಾಸವಾದದ್ದಲ್ಲ.
ಆದರೆ, ವನ್ಯಜೀವಿ ಶಾಸ್ತ್ರದ ವಿಧಿ ವಿಧಾನಗಳು ಇತರ ಮೂಲ ವಿಜ್ಞಾನಗಳಷ್ಟೇ ನಿಖರ ಮತ್ತು ನಿಷ್ಠೂರ ರೂಪ ತಳೆಯುತ್ತವೆ. ಇವು ಕೇವಲ ಗುಣಾತ್ಮಕ ವ್ಯಕ್ತಿನಿಷ್ಠ ವಿವರಗಳನ್ನು ಹೆಚ್ಚಾಗಿ ಅವಲಂಬಿಸದೇ ಇತರ ಗಟ್ಟಿ ವಿಜ್ಞಾನಗಳಂತೆಯೇ ಸಂಖ್ಯಾತ್ಮಕ, ವಸ್ತುನಿಷ್ಠವಾಗಿ ಬೆಳೆದುಬಂದಿದೆ.
ವಸ್ತು ವೈಜ್ಞಾನಿಕತೆಯ ಉದಾಹರಣೆ
ಬದಲಾಯಿಸಿವನ್ಯಜೀವಿ ಶಾಸ್ತ್ರದ ವಸ್ತು ವೈಜ್ಞಾನಿಕತೆಗೆ ಒಂದು ಉದಾಹರಣೆ: ಭಾರತದಲ್ಲಿ ಕೆಲ ಶತಮಾನಗಳಿಂದ ಹುಲಿಗಳ ಬಗ್ಗೆ ಬೇಟೆಗಾರರು, ನಿಸರ್ಗಾಸಕ್ತರೂ ನೂರಾರು ಪುಸ್ತಕಗಳನ್ನು ಬರೆದಿದ್ದರೂ, ಇವುಗಳಲ್ಲಿ ಹುಡುಕಿದಾಗ ಹುಲಿಯ ಜೀವನ ಕ್ರಮದ, ವರ್ತನೆಯ ಬಗ್ಗೆ ನಿಖರವಾದ ಸಂಖ್ಯಾತ್ಮಕ ಮಾಹಿತಿಗಳು ಸಿಗುವುದಿಲ್ಲ. ಹುಲಿಯೊಂದು ವರ್ಷಂಪ್ರತಿ ಎಷ್ಟು ಬಲಿ ಪ್ರಾಣಿಗಳನ್ನು ಹಿಡಿದು ತಿನ್ನುತ್ತದೆ? ಅದು ಬದುಕಬೇಕಾದಲ್ಲಿ ಕಾಡಿನಲ್ಲಿ ಬಲಿ ಪ್ರಾಣಿಗಳ ಸಂಖ್ಯೆ ಎಷ್ಟಿರಬೇಕು? ತಾಯಿ ಹುಲಿಯ ಮೇಲೆ ಮರಿಗಳ ಅವಲಂಬನೆ ಎಷ್ಟು ಕಾಲ? ಇತ್ಯಾದಿ ಪ್ರಶ್ನೆಗಳಿಗೆ ನಿಖರ ಉತ್ತರಗಳು ಖ್ಯಾತನಾಮ ಹುಲಿ ಹಂತಕ ಜಿಮ್ ಕಾರ್ಬೆಟ್‌ನ ಬರಹಗಳಲ್ಲೂ ಸಿಗುವುದಿಲ್ಲ. ಆದರೆ, ವನ್ಯಜೀವಿ ಶಾಸ್ತ್ರದ ವೈಜ್ಞಾನಿಕ ಚೌಕಟ್ಟಿನಲ್ಲಿ ಹುಲಿಗಳ ಮೊದಲ ಅಧ್ಯಯನವನ್ನು 1960ರ ದಶಕದಲ್ಲಿ ತೊಡಗಿದ ಡಾ. ಜಾರ್ಜ್ ಷಾಲರ್ ಕೇವಲ ಎರಡು ವರ್ಷದಲ್ಲಿ ಇಂಥಹ ಪ್ರಶ್ನೆಗಳಿಗೆ ವಸ್ತುನಿಷ್ಠ ಉತ್ತರ ಹುಡುಕುವುದಲ್ಲಿ ಸಫಲರಾದರು. ವನ್ಯಜೀವಿ ಶಾಸ್ತ್ರದ ಉಪಯುಕ್ತತೆಗೆ ಇದೊಂದು ಉತ್ತಮ ಪುರಾವೆ.
ವನ್ಯಜೀವಿ ಶಾಸ್ತ್ರದ ಪ್ರಧಾನ ಅಂಶಗಳು
ಬದಲಾಯಿಸಿವನ್ಯಜೀವಿ ಶಾಸ್ತ್ರದಲ್ಲಿ ಸಾಮಾನ್ಯವಾಗಿ ಸ್ತನಿ ಪ್ರಾಣಿ, ಪಕ್ಷಿ, ಉರಗ ಮುಂತಾದ ಜೀವಜಾತಿಗಳ ಸಂಖ್ಯೆ, ವರ್ತನೆ, ಜೀವನ ಕ್ರಮ, ಆವಾಸ, ವಲಸೆ ಹಾಗೂ ಇವುಗಳ ಮೇಲೆ ಮಾನವ ಚಟುವಟಿಕೆಗಳು ಬೀರುವ ಪರಿಣಾಮ ಮುಂತಾದ ವಿಚಾರಗಳಿಗೆ ಹೆಚ್ಚಿನ ಪ್ರಾಧಾನ್ಯ.[೨]
ಕಾಡೊಂದರಲ್ಲಿ ಪ್ರತಿ ಚದರ ಕಿಲೋಮೀಟರಿಗೆ ಕಡವೆಗಳ ಸಂಖ್ಯಾ ದಟ್ಟಣೆ ಏನಿದೆ? ವರ್ಷಂಪ್ರತಿ ಹುಟ್ಟುವ ಮತ್ತು ಸಾಯುವ ಜಿಂಕೆಗಳ ಪ್ರಮಾಣ ಶೇಖಡಾ ಎಷ್ಟು? ಚಿರತೆಯೊಂದರ ನಿವಾಸ ವಲಯದ ವಿಸ್ತೀರ್ಣ ಎಷ್ಟು ಚದರ ಕಿಲೋಮೀಟರ್? ಚದರ ಕಿಲೋಮೀಟರ್ ಕಾಡಲ್ಲಿ ವಿವಿಧ ಜಾತಿಯ ಪಕ್ಷಿಗಳ ಪ್ರಮಾಣ ಶೇಕಡಾ ಎಷ್ಟು? ಮುಂತಾದವು ವನ್ಯಜೀವಿ ವಿಜ್ಞಾನಿ ಕೇಳುವ ಸಾಮಾನ್ಯ ಪ್ರಶ್ನೆಗಳು. ಇವುಗಳಿಗೆ ಪಡೆಯುವ ಉತ್ತರಗಳು ವಸ್ತುನಿಷ್ಠ, ನಿಖರ ಮತ್ತು ಸಂಖ್ಯಾತ್ಮಕವಾಗಿದ್ದಷ್ಟೂ ಅವು ವನ್ಯಜೀವಿ ಸಂರಕ್ಷಣೆಯ ಕಾರ್ಯದಲ್ಲಿ ಹೆಚ್ಚು ಉಪಯುಕ್ತವಾಗುತ್ತವೆ.
ವನ್ಯಜೀವಿ ಶಾಸ್ತ್ರವು ಈ ಕಾರಣದಿಂದಾಗಿ ತನ್ನವೇ ಆದ ವಿಶಿಷ್ಟ ವಿಧಿ ವಿಧಾನಗಳನ್ನು ರೂಢಿಸಿಕೊಂಡಿದೆ. ವನ್ಯಜೀವಿ ಶಾಸ್ತ್ರದ ವಸ್ತುನಿಷ್ಠ ಸಂಖ್ಯಾತ್ಮಕ ವಿಧಾನಗಳೇ ಅದನ್ನು ಹಳೆಯ ಮಾದರಿಯ 'ಮೃಗಯಾ ವಿನೋದ' 'ನಿಸರ್ಗ ಪ್ರೇಮ'ದ ಹಿನ್ನೆಲೆಯ ವಿವರಣೆಗಳಲ್ಲಿ ಬಳಸುವ ವಕ್ತಿನಿಷ್ಠ, ಗುಣಾತ್ಮಕ ಧೋರಣೆಗಳಿಂದ ಪ್ರತ್ಯೇಕವಾಗಿ ನಿಲ್ಲಿಸಿವೆ. 1940ರ ದಶಕದಲ್ಲಿ ವನ್ಯಜೀವಿ ಶಾಸ್ತ್ರವನ್ನು ಇಂತಹ ಶಕ್ತ, ಪ್ರತ್ಯೇಕ ವಿಜ್ಞಾನವಾಗಿ ರೂಪಿಸಿದ ರೂವಾರಿ ಅಮೇರಿಕಾದ ಆಲ್ಡೋ ಲಿಯೋಪಾಲ್ಡ್ ಎಂದು ಹೇಳಬಹುದು.
ವನ್ಯಜೀವಿ ಶಾಸ್ತ್ರವೂ ವಿಜ್ಞಾನದ ಇತರ ಪ್ರಕಾರಗಳಂತೆಯೇ ಅನುಭವ, ಮೂಲ ಸಿದ್ಧಾಂತ (ಥೀಯರಿ), ಅಥವಾ ಊಹನೆ (ಹೈಪಾಥಸಿಸ್) ಗಳನ್ನು ತಾರ್ಕಿಕವಾಗಿ ಅವಲಂಬಿಸಿ ನಿರ್ದಿಷ್ಟ ಮುನ್ನೋಟ (ಪ್ರಿಡಿಕ್ಷನ್) ಗಳನ್ನು ರೂಪಿಸಿಕೊಳ್ಳುತ್ತದೆ. ಅನಂತರ ಇವುಗಳನ್ನು ವನ್ಯಲೋಕದ ನಿಜವಿಚಾರಗಳ ಒರೆಗಲ್ಲಿಗೆ ಹಚ್ಚಿ ಪರೀಕ್ಷಿಸಲು ಸೂಕ್ತವಾದ ಮಾದರಿ (ಮಾಡಲ್) ಗಳನ್ನು ರಚಿಸಿಕೊಳ್ಳುತ್ತದೆ.
ಕೊನೆಯದಾಗಿ, ಕ್ಷೇತ್ರಕಾರ್ಯದ ಮೂಲಕ ವನ್ಯಜೀವಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ವಿಶ್ಲೇಷಣೆ ಮಾಡಿ ಮುನ್ನೋಟಗಳ ತಪ್ಪು ಒಪ್ಪುಗಳನ್ನು ಗ್ರಹಿಸಿ ಪ್ರಗತಿ ಸಾಧಿಸುತ್ತದೆ. ವನ್ಯಜೀವಿ ಶಾಸ್ತ್ರವು ಕಳೆದ ಐವತ್ತು ವರ್ಷಗಳಲ್ಲಿ ಒಂದು ಸಶಕ್ತ ಆನ್ವಯಿಕ ವಿಜ್ಞಾನವಾಗಿ ಮೈದಳೆಯಲು ಅದು ಸದಾ ಬಳಸುವ, ಎಲ್ಲ ವಿಜ್ಞಾನಗಳ ಜೀವಾಳವಾದ ವಿಚಾರಶೀಲತೆ, ತರ್ಕಬದ್ಧತೆ ಹಾಗೂ ವಸ್ತುನಿಷ್ಠ ವಿಧಿ ವಿಧಾನಗಳೇ ಕಾರಣವೆಂಬುದು ನಿಸ್ಸಂಶಯ.
ಉಲ್ಲೇಖಗಳು
ಬದಲಾಯಿಸಿ- ↑ "Zoologist or Wildlife Biologist". Truity (in ಇಂಗ್ಲಿಷ್). 2013-12-26. Retrieved 2019-05-09.
- ↑ "How to Become a Wildlife Biologist | EnvironmentalScience.org" (in ಅಮೆರಿಕನ್ ಇಂಗ್ಲಿಷ್). Retrieved 2019-04-16.