ಯೆಹೂದ್ಯ
ಯಹೂದ್ಯರು ಮೂಲತಃ ಪಶ್ಚಿಮ ಏಷ್ಯಾದಲ್ಲಿ ಉಗಮಿಸಿದ ಒಂದು ಜನಾಂಗಕ್ಕೆ ಸೇರಿದವರು. ಮುಂದೆ ಪ್ರಪಂಚಾದ್ಯಂತ ಹರಡಿದ ಈ ಜನಾಂಗದ ಧರ್ಮವನ್ನು ಅನುಸರಿಸುವವರನ್ನೂ ಯಹೂದ್ಯರೆಂದು ಭಾವಿಸಲಾಗುತ್ತದೆ. ಜಗತ್ತಿನಲ್ಲೇ ಅತ್ಯಂತ ಬುದ್ಧಿವಂತ ಜನಾಂಗವೆನಿಸಿದ ಯೆಹೂದಿಗಳು ಯೂಫ್ರೆಟಿಸ್ ಮತ್ತು ಟೈಗ್ರಿಸ್ ನದಿಗಳ ಬಯಲಿನಲ್ಲಿ ರೂಪುಗೊಂಡ ಪ್ರಾಚೀನ ನಾಗರಿಕ ವಸಾಹತುವಿನವರು. ಸಹಸ್ರಾರು ವರ್ಷಗಳ ಹಿಂದೆಯೇ ಲಿಪಿಯನ್ನು ಅಳವಡಿಸಿಕೊಂಡು ತಮ್ಮ ದಿನನಿತ್ಯದ ಆಗುಹೋಗುಗಳನ್ನು ಬರೆದಿಡುತ್ತಾ ಬಂದರು. ಈ ಕಾರಣದಿಂದ ಯೆಹೂದ್ಯ ಸಂಸ್ಕೃತಿಯ ಇತಿಹಾಸ ಸ್ಪಟಿಕಸ್ಪಷ್ಟವಾಗಿದೆಯಲ್ಲದೆ ಅದು ಆಯಾ ಕಾಲಘಟ್ಟಗಳ ಜನಾಂಗೀಯ ಸಂಘರ್ಷ, ರಾಜವಂಶಗಳು, ದಿರಿಸುಗಳು, ಆಚಾರ ವಿಚಾರಗಳ ಕುರಿತು ಬೆಳಕು ಚೆಲ್ಲುತ್ತದೆ.
ಯೆಹೂದ್ಯ ಸಂಸ್ಕೃತಿ
ಬದಲಾಯಿಸಿಸಕಲಕ್ಕೂ ಸೃಷ್ಟಿಕರ್ತನಾದ ಸರ್ವಶಕ್ತ ದೇವರೆಂಬುವನು ಒಬ್ಬನೇ. ಆತ ಸಕಲ ಜನ ಪ್ರಾಣಿಪಕ್ಷಿ ಆಕಾಶ ಭೂಮಿಗಳೆಲ್ಲದಕ್ಕೂ ಒಡೆಯನಾಗಿದ್ದಾನೆ ಹಾಗೂ ಆತ ಆರಿಸಲ್ಪಟ್ಟ ಪ್ರವಾದಿಗಳ ಮೂಲಕ ಮಾತನಾಡುತ್ತಾನೆ. ಅವನನ್ನು ಓಲೈಸುವವರಿಗೆ ರಕ್ಷಣೆಯಿದೆ, ವಿರೋಧಿಸುವವರಿಗೆ ಆ ಕ್ಷಣವೇ ಶಿಕ್ಷೆ ಇದೆ ಎಂದು ನಂಬುವ ಯೆಹೂದ್ಯರು ಆಧುನಿಕ ವಿಚಾರವಾದದಿಂದ ಎಂದೂ ವಿಚಲಿತರಾದವರಲ್ಲ. ತೋರಾ ಎಂಬ ಧರ್ಮಸಂಹಿತೆಯಿಂದ ಬಂಧಿತರಾದ ಅವರು ಮೂರ್ತಿ ಪೂಜೆಯಿಂದ ದೂರ ಉಳಿದವರು. ಪ್ರವಾದಿ ಮೋಸೆಸನ ಮೂಲಕ ದೇವರು ದಶ ಕಟ್ಟಳೆಗಳನ್ನು ಕೊಡಮಾಡಿದರೆಂದೂ ಆ ಕಟ್ಟಳೆಗಳ ಪ್ರಕಾರ ಕೊಲೆ, ಕಳ್ಳತನ, ಸುಳ್ಳು, ವ್ಯಭಿಚಾರ ಮುಂತಾದವುಗಳು ವರ್ಜ್ಯವೆಂದೂ ಹೇಳಲಾಗಿದೆಯಲ್ಲದೆ ದೇವರನ್ನು ಮಾತ್ರ ಆರಾಧಿಸು, ದೇವರ ಹೆಸರನ್ನು ಕ್ಷುಲ್ಲಕ ಕಾರಣಗಳಿಗಾಗಿ ಬಳಸಬೇಡ, ತಂದೆ ತಾಯಿಯರನ್ನು ಗೌರವಿಸು, ಪರಸ್ತ್ರೀಯನ್ನೂ ಪರರ ವಸ್ತುಗಳನ್ನೂ ಬಯಸಬೇಡ ಎಂದೂ ತಾಕೀತು ಮಾಡಲಾಗಿದೆ. ಇದಕ್ಕೆ ವಿರುದ್ಧವಾಗಿ ನಡೆದುಕೊಂಡವನನ್ನು ಬಯಲಲ್ಲಿ ನಿಲ್ಲಿಸಿ ಸಮಾಜದ ಇತರೆಲ್ಲರೂ ಕಲ್ಲಿನಿಂದ ಹೊಡೆದು ಸಾಯಿಸಬಹುದೆಂಬ ಕಠೋರ ನೀತಿಗಳೂ ಇವರಲ್ಲಿವೆ. ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು ಎಂಬ ಹಮ್ಮುರಾಬಿಯ ನೀತಿಯೂ ಯೆಹೂದ್ಯ ನೀತಿಯಿಂದಲೇ ಪ್ರೇರಿತವಾಗಿದೆಯೆಂದರೆ ಉತ್ಪ್ರೇಕ್ಷೆಯಲ್ಲ.
ಇಂಥ ಯೆಹೂದಿ ಸಮಾಜದಲ್ಲೇ ಯೇಸುಕ್ರಿಸ್ತ ಹುಟ್ಟಿ ಬಂದು ಅವರ ಸನಾತನ ಧರ್ಮದ ಕಠೋರತೆಯನ್ನು ಧಿಕ್ಕರಿಸಿ ಕ್ರೈಸ್ತಧರ್ಮಕ್ಕೆ ನಾಂದಿ ಹಾಡಿದ್ದು; ಇದೇ ಯೆಹೂದಿ ಸಂಸ್ಕೃತಿಯಿಂದಲೇ ಮಹಮದ್ ಪೈಗಂಬರನು ಹುಟ್ಟಿ ಇಸ್ಲಾಂ ಧರ್ಮವನ್ನು ಸ್ಥಾಪಿಸಿದ್ದು. ಹಾಗೆ ನೋಡಿದರೆ ಪವಿತ್ರಬೈಬಲ್ ಮತ್ತು ಕುರಾನ್ ಗಳೆರಡರಲ್ಲೂ ಯೆಹೂದ್ಯ ಸಂಸ್ಕೃತಿಯ ಲೇಪನ ಹಾಸುಹೊಕ್ಕಾಗಿದೆ. ಅತ್ಯಂತ ಶ್ರೀಮಂತ ಸಂಸ್ಕೃತಿಯವರಾದ ಯೆಹೂದ್ಯರು ಅನಾದಿಕಾಲದಿಂದಲೂ ದೇಶವಿದೇಶಗಳೊಂದಿಗೆ ವ್ಯಾಪಾರ ವಹಿವಾಟುಗಳಲ್ಲಿ ತೊಡಗಿಕೊಂಡಿದ್ದಾರೆ. ಅವರು ಮಹಾಸಮ್ರಾಟ ಸಲೋಮನ್ನನ ಕಾಲದಲ್ಲೇ ಇಂಡಿಯಾದೊಂದಿಗೆ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಉಲ್ಲೇಖವಿದೆ.
ಇಂಡಿಯಾದಲ್ಲಿ
ಬದಲಾಯಿಸಿಇಂಡಿಯಾದಲ್ಲಿ ಯೆಹೂದ್ಯರ ನೆಲೆಗಳನ್ನು ಮುಂಬಯಿ, ಕೊಲ್ಕತ್ತ, ಕೊಚ್ಚಿ ಮುಂತಾದೆಡೆಗಳಲ್ಲಿ ಕಾಣಬಹುದು. ಮುಂಬಯಿ ಬಳಿಯ ಮಹಾರಾಷ್ಟ್ರ ಕರಾವಳಿಯಲ್ಲಿ ಸುಮಾರು ಕ್ರಿಸ್ತಶಕ ೨ನೇ ಶತಮಾನದಲ್ಲಿ ತೈಲವ್ಯಾಪಾರಿಗಳ ದೋಣಿ ಒಡೆದು ಬದುಕಿ ಉಳಿದವರು ಒಂದಷ್ಟು ಜನ ತೀರಕ್ಕೆ ಬಂದು ಬಿದ್ದರು. ಹೀಗೆ ಅಲ್ಲಿ ನೆಲೆಸಿ ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಂಡ ಅವರು ಸ್ಥಳೀಯ ಭಾಷೆಯನ್ನು ಕಲಿತು ಎಣ್ಣೆ ವ್ಯಾಪಾರವನ್ನು ಮುಂದುವರಿಸುತ್ತಾರೆ. ತಮ್ಮನ್ನು ಸ್ಥಳೀಯ ತೇಲಿ (ಎಣ್ಣೆಯವರು) ಗಳೊಂದಿಗೆ ಗುರುತಿಸಿಕೊಳ್ಳುವ ಅವರು ತಮ್ಮ ಹೆಸರಿನೊಂದಿಗೆ ತಮ್ಮ ಊರ ಹೆಸರುಗಳನ್ನೂ ಸೇರಿಸಿಕೊಂಡು ರೊಹಿಕರ್, ಅಷ್ಟಮಕರ್, ಪೆನ್ಕರ್ ಎಂದು ಕರೆಸಿಕೊಂಡಿದ್ದಾರೆ. ಸಬ್ಬತ್ ಆಚರಿಸುವ ಇವರನ್ನು ಕೆಲವೊಮ್ಮೆ ಶನಿವಾರೀ ತೇಲಿಗಳೆಂದೂ ಕರೆಯಲಾಗಿದೆ.
ಕೊಲ್ಕತ್ತದಲ್ಲಿ ನೆಲೆಗೊಂಡ ಯೆಹೂದ್ಯರದು ಬೇರೆಯೇ ಅಧ್ಯಾಯ. ವ್ಯಾಪಾರ ವಹಿವಾಟಿಗಾಗಿ ಸುಮಾರು ೧೭-೧೮ನೇ ಶತಮಾನದಲ್ಲಿ ಇಂಡಿಯಾ ದೇಶಕ್ಕೆ ಬಂದ ಯೆಹೂದ್ಯರ ದೊಡ್ಡ ವ್ಯಾಪಾರೀ ತಂಡವು ಅಹಮದಾಬಾದ್, ನವದೆಹಲಿ, ಕೊಲ್ಕತ್ತಗಳಲ್ಲಿ ವ್ಯಾಪಾರ ನಡೆಸುತ್ತಾ ಕೊಲ್ಕತ್ತದಲ್ಲಿ ಖಾಯಂ ನಿವಾಸ ಹೊಂದಿತ್ತು. ಅವರ ವ್ಯಾಪಾರ ವಹಿವಾಟು ಹಾಂಕಾಂಗ್ ಮತ್ತು ಜಪಾನ್‌ಗಳತ್ತಲೂ ಚಾಚಿತ್ತು. ಇಂಡಿಯಾಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ನಡೆದ ದೇಶದ ಇಬ್ಭಾಗ ಹಾಗೂ ಮಾರಣಹೋಮಗಳ ಸಂದರ್ಭದಲ್ಲಿ ಯೆಹೂದ್ಯರನ್ನು ಇಂಗ್ಲಿಷರೆಂದು ತಪ್ಪಾಗಿ ಭಾವಿಸಿದ ಜನರ ಆಕ್ರೋಶಕ್ಕೆ ಬೆದರಿ ಅವರು ದೇಶ ತೊರೆಯಬೇಕಾಯಿತು. ಆದರೆ ಅವರ ಎರಡು ಪ್ರಾರ್ಥನಾ ಮಂದಿರಗಳನ್ನು ಇನ್ನೂ ಸಂರಕ್ಷಿಸಿಡಲಾಗಿದೆ.
ಮುಂಬಯಿಯಲ್ಲಿ ಇನ್ನೊಂದು ವ್ಯಾಪಾರೀ ತಂಡ ಒಂದು ಶತಮಾನದ ಕಾಲ ನೆಲೆಗೊಂಡಿತ್ತಲ್ಲದೆ ಅದರ ಜನಸಂಖ್ಯೆ ಮೂರು ನಾಲ್ಕು ಸಾವಿರ ಮೀರಿತ್ತು. ಆ ಮಹಾನಗರದಲ್ಲಿ ಯಹೂದಿಗಳಿಂದ ನಡೆಯುತ್ತಿರುವ ಸುಸಾನ್ ಲೈಬ್ರರಿ ಲಕ್ಷಾಂತರ ಜನರ ಜ್ಞಾನದಾಹ ಇಂಗಿಸಿದೆ. ಮುಂಬಯಿಯ ಸಾಹಿತ್ಯಕ ವಲಯದಲ್ಲಿ ಯೆಹೂದಿ ಕವಿ ನಿಸಿಮ್ ಎಝೆಕಿಯೆಲ್‌ಅವರು ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಅಂದರೆ ೧ನೇ ಫೆಬ್ರವರಿ ೨೦೦೬ ರ ಏಷಿಯನ್ ಏಜ್ ಎಂಬ ಇಂಗ್ಲಿಷ್ ಪತ್ರಿಕೆಯಲ್ಲಿ ಪ್ರಕಟವಾದ ಒಂದು ಸುದ್ದಿಯ ಪ್ರಕಾರ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿರುವ ಕೊತ್ತರೆಡ್ಡಿಪಾಳ್ಯವೆಂಬ ಗ್ರಾಮದಲ್ಲಿ ವಾಸಿಸುತ್ತಿರುವ ಸುಮಾರು ಐವತ್ತುಮಂದಿಯ ಡಿಎನ್‌ಎ ಪರೀಕ್ಷೆ ನಡೆಸಲಾಗಿ ಅವರು ಯೆಹೂದ್ಯರೆಂದೂ ಅದರಲ್ಲೂ ಪ್ರಾಚೀನ ಎಫ್ರಾಯಿಮ್ ಕುಲದವರೆಂದೂ ತಿಳಿದುಬಂದಿದೆ.
ಕೊಚ್ಚಿಯ ಯೆಹೂದ್ಯರು
ಬದಲಾಯಿಸಿಕೊಚ್ಚಿಯ ಯೆಹೂದ್ಯರು ಸಲೋಮನ್ನನ ಕಾಲದಲ್ಲೇ ಇಲ್ಲಿಗೆ ಬಂದು ನೆಲೆಸಿರಬಹುದಾದ ಸಾಧ್ಯತೆ ಇರಬಹುದೆಂದು ಕೆಲವರು ವಾದಿಸುತ್ತಾರೆ. ಇನ್ನು ಕೆಲವರು ಕ್ರಿಸ್ತಪೂರ್ವ ೭೨೨ರ ಅಸ್ಸೀರಿಯ ಆಕ್ರಮಣದಲ್ಲಿ ಅಥವಾ ಕ್ರಿಸ್ತಪೂರ್ವ ೫೮೬ರ ಬ್ಯಾಬಿಲೋನ್ ಆಕ್ರಮಣದಲ್ಲಿ ಇಲ್ಲವೇ ಕ್ರಿಸ್ತಶಕ ೭೦ರ ಮಂದಿರ ನಾಶದ ಸಮಯದಲ್ಲಿ ಓಡಿ ಬಂದವರಿರಬೇಕೆಂದು ವಾದಿಸುತ್ತಾರೆ. ಆದರೆ ಇವುಗಳ ಬಗ್ಗೆ ಯಾವುದೇ ಖಚಿತ ಪುರಾವೆಯಿಲ್ಲ. ಕೇರಳದ ಕೋಡುಂಗಲ್ಲೂರಿನ ರಾಜ ಭಾಸ್ಕರ ರವಿವರ್ಮ ಯೆಹೂದ್ಯ ವರ್ತಕರ ಮುಖ್ಯಸ್ಥ ಜೋಸೆಫ್ ರಬ್ಬಾನ್ ಎಂಬುವನಿಗೆ ಅಂಜುವನ್ನಮ್ ಎಂಬ ಗ್ರಾಮವನ್ನು ದತ್ತಿಯಾಗಿ ಕೊಟ್ಟ ತಾಮ್ರಶಾಸನವೇ ಲಭ್ಯವಿರುವ ಏಕೈಕ ದಾಖಲೆಯಾದರೂ ಅದರ ನಿಖರ ಕಾಲ ಗೊತ್ತಿಲ್ಲ.
೧೧೬೭ರಲ್ಲಿ ಇಲ್ಲಿಗೆ ಬಂದಿದ್ದ ವಿದೇಶೀ ಪ್ರವಾಸಿ ಬೆಂಜಮಿನ್ ಎಂಬುವನು ಮಲಬಾರ್ ತೀರದಲ್ಲಿ ಒಂದು ಸಾವಿರ ಯೆಹೂದ್ಯರಿದ್ದಾರೆ, ಅವರ ಬಣ್ಣ ಇತರ ಸ್ಥಳೀಯರಂತೆ ಕಪ್ಪು, ಧರ್ಮಭೀರುಗಳಾದ ಅವರು ಮೋಸೆಸ್‌ನ ತೋರಾವನ್ನು ಅನುಸರಿಸುತ್ತಾರೆ, ಧರ್ಮಶಾಸ್ತ್ರದ ಬಗ್ಗೆ ಅಲ್ಪಸ್ವಲ್ಪ ತಿಳಿದುಕೊಂಡಿದ್ದಾರೆ ಎಂದು ದಾಖಲಿಸಿದ್ದಾನೆ.
ಸುಮಾರು ೧೫ನೇ ಶತಮಾನದಲ್ಲಿ ಯೆಹೂದ್ಯರ ಒಳಜಗಳಗಳ ಕಾರಣದಿಂದ ಸೂರ್ಯಚಂದ್ರರು ಇರುವ ತನಕ ಉಂಬಳಿಯಾಗಿದ್ದ ಅಂಜುವನ್ನಂ ಗ್ರಾಮ ಕೈಬಿಟ್ಟುಹೋಗುತ್ತದೆ. ಅವರೆಲ್ಲ ಕೊಚ್ಚಿಗೆ ಬಂದು ನೆಲೆಸಿ ಅಲ್ಲೇ ತಮ್ಮ ಮಂದಿರಗಳನ್ನು ಕಟ್ಟಿಕೊಳ್ಳುತ್ತಾರೆ. ಆದರೆ ಪೋರ್ಚುಗೀಸರ ಆಗಮನದೊಂದಿಗೆ ಇಲ್ಲಿನ ಯೆಹೂದ್ಯರಿಗೆ ಕಷ್ಟಕಾಲ ಶುರುವಾಗುತ್ತದೆ. ಆಗ ೧೫೬೫ರಲ್ಲಿ ಚೇರಮಾನ್ ಪೆರುಮಾಳ್ ಎಂಬ ರಾಜನು ಯೆಹೂದ್ಯರ ಪರ ನಿಲ್ಲುತ್ತಾನಲ್ಲದೆ ತನ್ನ ಅರಮನೆಯ ಸನಿಹದಲ್ಲೇ ಅವರ ವಾಸಕ್ಕೆ ನಿವೇಶನ ನೀಡುತ್ತಾನೆ. ಆ ಸ್ಥಳವೇ ಇಂದಿಗೂ ಕಾಣಸಿಗುವ ಜ್ಯೂ ಟೌನ್.
ಜ್ಯೂ ಟೌನ್ ಇರುವ ಕೊಚ್ಚಿಯು ಬಹು ಸಂಸ್ಕೃತಿಗಳ ಊರು. ಯೆಹೂದ್ಯರ ತಾಣ ಮಾತ್ರವಲ್ಲದೆ ಪೋರ್ಚುಗೀಸ್ ಚರ್ಚು, ಡಚ್ ಅರಮನೆ, ಬ್ರಿಟಿಷ್ ಹಳ್ಳಿಗಾಡು, ಮಸೀದಿ, ಗುಡಿ ಇವುಗಳೆಲ್ಲವುಗಳ ಸಂಮಿಲನವಾಗಿರುವ ಈ ಕೊಚ್ಚಿ ದ್ವೀಪವು ಮುಖ್ಯಭೂಮಿ ಎರಣಾಕುಲಮ್‌ನಿಂದ ಸೇತುವೆ ಸಂಪರ್ಕ ಹೊಂದಿದೆ. ನಡುವಿನ ಆಳಸಮುದ್ರವು ಹಡಗುಗಳು ನಿಲ್ಲಲು ಹೇಳಿ ಮಾಡಿಸಿದ ನೈಸರ್ಗಿಕ ಬಂದರು ಆಗಿದೆ.
ಪರದೇಸೀ ಸಿನಗಾಗ್
ಬದಲಾಯಿಸಿಕೊಚ್ಚಿ ದ್ವೀಪದ ಮಟ್ಟಾನ್‌ಚೇರಿಯೆಂಬ ಜನನಿಬಿಡ ಪ್ರದೇಶದಲ್ಲಿ ಕೊಚ್ಚಿ ರಾಜರಿಗಾಗಿ ಡಚ್ಚರು ನಿರ್ಮಿಸಿಕೊಟ್ಟ ಅರಮನೆ (ಬಂಗಲೆ?) ಬದಿಯಲ್ಲೇ ಈ ಯೆಹೂದ್ಯನಗರ ಜ್ಯೂ ಟೌನ್ ಇದೆ. ಮುಖ್ಯರಸ್ತೆಯಿಂದ ಈ ಜ್ಯೂ ಟೌನ್ ರಸ್ತೆಗೆ ಹೊರಳುತ್ತಿದ್ದಂತೆ ನಾವು ನಮ್ಮದಲ್ಲದ ಬೇರಾವುದೋ ದೇಶಕ್ಕೆ ಬಂದಂತೆನಿಸುತ್ತದೆ. ಕಲಾಕುಸುರಿಯ ವಸ್ತುಗಳನ್ನು ಪೇರಿಸಿದ ಅಂಗಡಿಗಳು, ಅಂಗಡಿಗಳ ಹೊರಗೆ ಕುರ್ಚಿಗಳಲ್ಲಿ ಕುಳಿತ ನರೆಗೂದಲಿನ ವಯೋವೃದ್ಧರು, ಹಾಸ್ಯ ಚಟಾಕಿಗಳೊಂದಿಗೆ ಮಾತನಾಡುತ್ತಿರುವ ಅವರ ಅರ್ಥವಾಗದ ಭಾಷೆ, ಕೈಯಲ್ಲಿನ ಸಿಗಾರ್, ವರ್ಣರಂಜಿತ ನೆಲಹಾಸುಗಳು, ಅತ್ಯಪೂರ್ವ ಮಣಿ-ರತ್ನ, ಹರಳು-ಹವಳ, ದೀಪ-ಧೂಪಗಳು, ಹಿತ್ತಾಳೆ ತಾಮ್ರ ಬೆಳ್ಳಿ ಗಾಜಿನ ಕರಕುಶಲ ವಸ್ತುಗಳು, ಚರ್ಮದ ಹಾಗೂ ಬಟ್ಟೆಯ ಫಲಕಗಳು ಕಣ್ಮನ ಸೆಳೆಯುತ್ತವೆ. ಅದೇ ಬೀದಿಯ ಕೊನೆಗೆ ಬಂದರೆ ಅರಮನೆಯ ಗೋಡೆಗೆ ತಾಗಿದಂತೆಯೇ ಯೆಹೂದ್ಯ ಪ್ರಾರ್ಥನಾ ಮಂದಿರವಿದೆ. ವಿಶ್ವಪರಂಪರೆಯಲ್ಲಿ ಸ್ಥಾನಗಿಟ್ಟಿಸಿರುವ ಈ ಪ್ರಾರ್ಥನಾ ಮಂದಿರದ ಹೆಸರು ’ಪರದೇಸೀ ಸಿನಗಾಗ್’. ಸಿನಗಾಗ್ (Sinagogue) ಎಂದರೆ ಪ್ರಾರ್ಥನಾ ಮಂದಿರ ಎಂದರ್ಥ.
ಇಂಡಿಯಾದಲ್ಲಿ ಬಳಕೆಯಲ್ಲಿರುವ ಸಿನಗಾಗ್‌ಗಳಲ್ಲಿ ಇದೇ ಅತಿ ಹಳೆಯದು. ಈ ಮಂದಿರದ ಮುಂಬಾಗಿಲಲ್ಲಿ ಯೆಹೂದಿ ಶಿಲಾಶಾಸನವಿದೆ. ಒಳ ಹೊಗುತ್ತಿದ್ದಂತೆ ಮಲಯಾಳಿಯಂತೆಯೇ ಕಾಣುವ ಯೆಹೂದಿಯೊಬ್ಬ ನಿಮ್ಮನ್ನು ಸ್ವಾಗತಿಸಿ ಈ ಸಿನಗಾಗ್ ಹಾಗೂ ಯೆಹೂದ್ಯರು ಇಲ್ಲಿಗೆ ಬಂದ ಪ್ರವರಗಳನ್ನು ಹೇಳತೊಡಗುತ್ತಾನೆ. ಬಲಬದಿಯ ಹಜಾರದಲ್ಲಿಯೇ ಚಿತ್ರಪಟಗಳನ್ನು ತೂಗುಹಾಕಲಾಗಿದ್ದು ಯೆಹೂದ್ಯರು ಬಂದು ನೆಲೆಗೊಂಡು ಪ್ರವರ್ಧಿಸಿದ ರೀತಿಯನ್ನು ವಿವರಿಸುತ್ತವೆ. ಪೋರ್ಚುಗೀಸರ ದಾಳಿಯಲ್ಲಿ ನಲುಗಿದ ಈ ಮಂದಿರವನ್ನು ೧೬೬೨ ರಲ್ಲಿ ಪುನರ್ ನಿರ್ಮಿಸಲಾಗಿದೆ. ಇದು ೧೯೬೮ರಲ್ಲಿ ತನ್ನ ೪೦೦ನೇ ವರ್ಧಂತಿಯನ್ನು ಆಚರಿಸಿಕೊಂಡಾಗ ಆಗಿನ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರು ಆಗಮಿಸಿದ್ದರು. ಆ ಸಂದರ್ಭದ ನೆನಪಿಗೆ ಒಂದು ಅಂಚೆಚೀಟಿಯನ್ನೂ ಹೊರತರಲಾಯಿತು. ಹೆಂಚು ಹೊದಿಸಿದ ಚಾವಣಿಯುಳ್ಳ ಈ ಮಂದಿರದಲ್ಲಿ ಹೀಬ್ರೂ ಬರಹದ ಸಮಾಧಿ ಕಲ್ಲುಗಳಿವೆ. ಎಝೆಕಿಯಲ್ ರಹಾಬಿ ಎಂಬ ಡಚ್ ಈಸ್ಟ್ ಇಂಡಿಯಾ ಕಂಪೆನಿಯ ವಣಿಕಶ್ರೇಷ್ಠನು ಗಡಿಯಾರ ಗೋಪುರವನ್ನು ಕಟ್ಟಿಸಿದ್ದಾನೆ. ಈ ಗಡಿಯಾರದ ಸಿನಗಾಗ್ ಕಡೆಗಿನ ಮುಖದಲ್ಲಿ ಹೀಬ್ರೂ ಅಂಕಿಗಳೂ, ಅರಮನೆಯತ್ತ ಇರುವ ಮುಖದಲ್ಲಿ ರೋಮನ್ ಅಂಕಿಗಳೂ, ಬಂದರಿನತ್ತ ಇರುವ ಮುಖದಲ್ಲಿ ಸಾರ್ವತ್ರಿಕ ಅಂಕಿಗಳೂ ಇವೆ. ಮಂದಿರದ ನೆಲಹಾಸಿನಲ್ಲಿರುವ ವರ್ಣರಂಜಿತ ಪಿಂಗಾಣಿ ಹಾಸುಗಲ್ಲುಗಳೂ ರಹಾಬಿಯ ಕೊಡುಗೆಯೇ. ಮಂಜೂಷದ ಮುಂದಿನ ರತ್ನಗಂಬಳಿ ಇಥಿಯೋಪಿಯಾ ಸಮ್ರಾಟನ ಕೊಡುಗೆ.
ಇನ್ನು ಒಳ ಅಂಕಣದ ತೆರೆದ ಹಜಾರದಿಂದ ಮುಂದೆ ಬಂದರೆ ಕಾಣಸಿಗುವುದೇ ಮುಖ್ಯ ಪ್ರಾರ್ಥನಾ ಮಂದಿರ. ಅಲ್ಲಿನ ದೈವೀಕಳೆಯ ಪ್ರಶಾಂತ ವಾತಾವರಣಕ್ಕೆ ಮನಸೋತು ಕೈಜೋಡಿಸಬೇಕೆನಿಸುತ್ತದೆ. ಆದರೆ ಕೈ ಜೋಡಿಸಿ ಎತ್ತ ತಿರುಗಿದರೂ ಮೂರ್ತಿಯಿಲ್ಲ ದೇವರಿಲ್ಲ, ಇದೇನು ಮಸೀದಿಯೇ? ಎಂದೂ ಅನಿಸುತ್ತದೆ. ಒಂದು ರೀತಿಯಲ್ಲಿ ಹೌದು ಎನ್ನಬಹುದೇನೋ? ಏಕೆಂದರೆ ಯೆಹೂದ್ಯರು ದೇವರಿಗೆ ಮೂರ್ತರೂಪ ಕೊಟ್ಟವರಲ್ಲ. ಆದರೆ ಅಲ್ಲೇ ಗೋಡೆಯಲ್ಲಿ ಒಂದೆಡೆ ಕಿಟಕಿಯಷ್ಟು ಜಾಗಕ್ಕೆ ರೇಷ್ಮೆಯ ಪರದೆ ಇಳಿಬಿಟ್ಟು ವಿಶೇಷವಾಗಿ ಕಾಣುವಂತೆ ಮಾಡಿದ್ದಾರೆ. ಅದರ ಹಿಂದಿರುವ ಮಂಜೂಷ (Tubernacle) ದೊಳಗೆ ಸುಮಾರು ಎರಡೂವರೆ ಅಡಿ ಉದ್ದದ ಸೇರಿನಾಕಾರದ ಐದಾರು ಹಿತ್ತಾಳೆ ಕೊಳವೆಗಳನ್ನು ಇಡಲಾಗಿದೆ. ಅವಕ್ಕೆ ಚಿನ್ನದ ಮುಚ್ಚಳಗಳಿವೆ. ಆ ಕೊಳವೆಯೊಳಗಿನ ಚರ್ಮದ ಸುರುಳಿಗಳಲ್ಲಿ ಅಳಿಸಲಾಗದ ಮಸಿಯಲ್ಲಿ ಹೀಬ್ರೂ ಬರಹವಿದೆ. ಅದು ಯೆಹೊದ್ಯರಿಗೆ ಅತಿ ಪವಿತ್ರವೆನಿಸಿದ ತೋರಾ ಎಂಬ ಧರ್ಮ ಸಂಹಿತೆ. ಸಬ್ಬತ್ ದಿನದಲ್ಲಿ ಈ ಮಂದಿರದಲ್ಲಿ ಎಲ್ಲರೂ ಸೇರಿರುವಾಗ ನಿಯೋಜಿತ ವ್ಯಕ್ತಿಯು ಮಧ್ಯದಲ್ಲಿರುವ ಕಟಾಂಜನ(Pulpit)ದಲ್ಲಿ ನಿಂತು ಈ ಧರ್ಮ ಸಂಹಿತೆಯನ್ನು ಓದಿ ವ್ಯಾಖ್ಯಾನಿಸುತ್ತಾನೆ.
ದೇಸೀಕರಣ
ಬದಲಾಯಿಸಿಮಂದಿರದೊಳಗಿನ ಎರಡು ಹಿತ್ತಾಳೆ ಕಂಬಗಳು ಹಾಗೂ ತೋರಾ ಸುರುಳಿಯ ಚಿನ್ನದ ಮುಚ್ಚಳಗಳು ಕೇರಳ ರಾಜರ ಕೊಡುಗೆಯಾಗಿವೆ. ತೋರಾ ಸುರುಳಿಗಳನ್ನು ಚಿನ್ನ ಬೆಳ್ಳಿಯ ಸರಿಗೆಗಳಿಂದ ಅಲಂಕರಿಸಲಾಗಿದೆ. ಮಂದಿರದ ಚಾವಣಿಯಿಂದ ಹಲವಾರು ವರ್ಣರಂಜಿತ ಎಣ್ಣೆದೀಪಗಳು ತೂಗಾಡುತ್ತಿವೆ. ಮಂದಿರವನ್ನು ಜನ ಬರಿಗಾಲಿನಲ್ಲಿ ಪ್ರವೇಶಿಸುತ್ತಾರೆ. ಯೆಹೂದ್ಯರ ಮದುವೆಗಳೆಲ್ಲ ಹಿರಿಯರು ನೋಡಿ ಮಾಡಿದ್ದೇ ಆಗಿವೆ. ಯೆಹೂದಿ ಸ್ತ್ರೀಯರು ಹಣೆಗೆ ಬೊಟ್ಟು ಇಡುತ್ತಾರೆ. ಇವೆಲ್ಲವೂ ನಮ್ಮ ನೆಲದ ಸಂಸ್ಕೃತಿಯ ಅಳವಡಿಕೆಯ ಫಲ ಎನ್ನಬಹುದು.
ಸಬ್ಬತ್
ಬದಲಾಯಿಸಿಸಬ್ಬತ್ ಎಂದರೆ ದೇವರ ದಿನ. ವಾರವಿಡೀ ಸತತವಾಗಿ ಸೃಷ್ಟಿಕಾರ್ಯದಲ್ಲಿ ತೊಡಗಿದ ದೇವರು ಏಳನೇ ದಿನ ಅಂದರೆ ಶನಿವಾರ ತಾನು ಮಾಡಿದ ಕೆಲಸಗಳನ್ನೆಲ್ಲಾ ನೋಡಿ ಆನಂದಿಸಿ ವಿಶ್ರಾಂತಿ ಪಡೆಯುತ್ತಾನೆ. ಆಹ್ಲಾದಕರವಾದ ಆ ದಿನವನ್ನು ತನ್ನ ದಿನವೆಂದೇ ಕರೆದು ಹರಸುತ್ತಾನೆ. ಆದ್ದರಿಂದ ಆ ದೇವರ ದಿನದಲ್ಲಿ ಯೆಹೂದ್ಯರು ಯಾವುದೇ ಕೆಲಸ ಕಾರ್ಯದಲ್ಲಿ ತೊಡಗದೇ ದೇವನ ಜಪಧ್ಯಾನ ನೇಮ ನಿಷ್ಠೆಗಳಲ್ಲಿ ಕಾಲ ಕಳೆಯುತ್ತಾರೆ. ಆ ದಿನ ಅವರು ಅಡುಗೆಯನ್ನೂ ಮಾಡುವುದಿಲ್ಲ. ಯೆಹೂದಿ ಬೇರಿಂದಲೇ ಹುಟ್ಟಿ ಬಂದ ಕ್ರೈಸ್ತ, ಇಸ್ಲಾಂ ಧರ್ಮಗಳಲ್ಲಿ ಈ ದೇವರ ದಿನವು ಭಾನುವಾರ, ಶುಕ್ರವಾರಗಳಿಗೆ ಬದಲಾಗಿದೆ.
ಮರಳಿ ತಾಯ್ನಾಡಿಗೆ
ಬದಲಾಯಿಸಿಈಗೀಗ ಬಹಳಷ್ಟು ಯಹೂದಿಗಳು ತಮ್ಮ ತಾಯ್ನಾಡಾದ ಇಸ್ರೇಲಿಗೆ ಹಿಂದಿರುಗಿ ಅದನ್ನು ಸಮೃದ್ಧಗೊಳಿಸುತ್ತಿದ್ದಾರೆ. ಈ ಕಾರಣದಿಂದ ಇಂದು ಕೊಚ್ಚಿಯಲ್ಲಿ ಯೆಹೂದಿ ಜನಸಂಖ್ಯೆ ಒಂದು ಬೀದಿಗಷ್ಟೇ ಸೀಮಿತವಾಗಿದೆ. ಉಳಿದಂತೆ ಜ್ಯೂಟೌನಿನ ಅಂಗಡಿ ಮಳಿಗೆಗಳು, ಎಣ್ಣೆಗಾಣಗಳು, ಮನೆಗಳೆಲ್ಲವೂ ಇತರ ಸಮುದಾಯದವರ ಪಾಲಾಗಿದೆ. ಸಿನಗಾಗ್‌ಗಳ ಸಂಖ್ಯೆ ಸುಮಾರು ಸುಮಾರು ಏಳೆಂಟು ಇದ್ದದ್ದು ಈಗ ಒಂದೇ ಒಂದು ಉಳಿದಿದೆ. ಅದೇ ಈ ಪರದೇಸೀ ಸಿನಗಾಗ್. ಈ ಸಿನಗಾಗ್ ಎಂದೂ ರಬ್ಬಿ(ಗುರು)ಯನ್ನು ಹೊಂದಿರಲಿಲ್ಲ. ಸಮುದಾಯದ ಹಿರಿಯನೇ ಧಾರ್ಮಿಕ ಕ್ರಿಯೆಗಳನ್ನು ನಡೆಸಿಕೊಂಡು ಬಂದಿದ್ದಾನೆ.
ಹೀಗೆ ಇಂಡಿಯಾದಂತಹ ಸಂಕೀರ್ಣ ಸಂದರ್ಭದಲ್ಲಿಯೂ ತಮ್ಮ ವಿಶಿಷ್ಟ ಸಂಸ್ಕೃತಿಯನ್ನು ಸಂರಕ್ಷಿಸಿಕೊಂಡು ಶತಮಾನಗಳ ಕಾಲ ಬಾಳಿ ಬದುಕಿದ ಈ ಒಂದು ಸಮುದಾಯ ಕ್ರಮೇಣ ಕ್ಷೀಣಿಸುತ್ತಿದೆ. ಆದರೆ ಅವರು ಇಲ್ಲಿದ್ದುದರ ಪಾರಂಪರಿಕ ಕುರುಹಾದ ಪರದೇಸೀ ಸಿನಗಾಗ್ ಇಂಡಿಯಾದ ಪರಧರ್ಮಸಹಿಷ್ಣುತೆಗೆ ಸಾಕ್ಷಿಯಾಗಿ ನಿಲ್ಲುತ್ತದೆ ಎಂಬುದರಲ್ಲಿ ಸಂಶಯವಿಲ್ಲ.