ಮುತ್ತಿನ ಮೀನು ಕರಾಪಿಡೀ (ಫಿಯರ್ಸೆಫಿರಿಡೀ) ಕುಟುಂಬಕ್ಕೆ ಸೇರಿದ ಕಡಲ ಮೀನು (ಪರ್ಲ್ ಫಿಶ್). ಹೆಚ್ಚಾಗಿ ಉಷ್ಣವಲಯದ ಸಾಗರಗಳಲ್ಲಿ ಕಂಡುಬಂದರೂ ಅಟ್ಲಾಂಟಿಕ್ ಸಾಗರದಲ್ಲಿ ಕೂಡ ಅಲ್ಲಲ್ಲಿ ಕಂಡುಬರುತ್ತದೆ. ಕರಾಪಸ್ ಎಕ್ಯುಸ್, ಕರಾಪಸ್ ಹೋಮಿ ಇತ್ಯಾದಿ ಅನೇಕ ಪ್ರಭೇದಗಳು ಇವೆ.

ಮುತ್ತಿನ ಮೀನು
ಎಕಿಯೊಡಾನ್ ರೆಂಡಾಲಿ
Scientific classification e
ಕ್ಷೇತ್ರ: ಯೂಕ್ಯಾರ್ಯೋಟಾ
ಸಾಮ್ರಾಜ್ಯ: ಅನಿಮೇಲಿಯ
ವಿಭಾಗ: ಕಾರ್ಡೇಟಾ
ವರ್ಗ: ಆ್ಯಕ್ಟಿನೋಟೆರಿಜೀ
ಗಣ: ಓಫ಼ಿಡಿಯಿಫ಼ಾರ್ಮೀಸ್
ಉಪಗಣ: ಒಫ಼ಿಡೈಯಾಯ್ಡೇಯಿ
ಕುಟುಂಬ: ಕ್ಯಾರಾಪಿಡೀ
Poey, 1867[೧]
ಉಪಕುಟುಂಬಗಳು ಮತ್ತು ಜಾತಿಗಳು
  • ಕ್ಯಾರಾಪಿನೀ
    • ಕ್ಯಾರಾಪಸ್
    • ಎಕಿಯೊಡಾನ್
    • ಎನ್‍ಚೆಲಿಯೋಫ಼ಿಸ್
    • ಆನಕ್ಸೊಡಾನ್
  • ಪೈರಾಮೊಡಾಂಟಿನೀ
    • ಯೂರಿಪ್ಲ್ಯೂರಾನ್
    • ಪೈರಾಮೊಡಾನ್
    • ಸ್ನೈಡರಿಡಿಯಾ
  • ಟೆಟ್ರಾಗೊಂಡಾಕ್ನಿನೀ
    • ಟೆಟ್ರಾಗೊಂಡ್ಯಾಕ್ನಸ್

ದೇಹರಚನೆ ಬದಲಾಯಿಸಿ

ಇವು ಸುಮಾರು 20 ಸೆಂಮೀ ಉದ್ದಕ್ಕೆ ಬೆಳೆಯುತ್ತವೆ. ಎಲ್ಲವೂ ಉದ್ದನೆಯ ನಾಜೂಕಾದ ಚಾಕುವಿನಂಥ ದೇಹವುಳ್ಳವು. ಹುರುಪೆ, ವರ್ಣಕಗಳಾಗಲೀ ಭುಜದ ರೆಕ್ಕೆಗಳಾಗಲೀ ಇಲ್ಲ. ಗುದದ್ವಾರ ಗಂಟಲ ಭಾಗದಲ್ಲಿದೆ. ಒಂಟಿ ಈಜುರೆಕ್ಕೆಗಳು ಹಿಂಬದಿಯಲ್ಲಿ ಒಂದುಗೂಡಿ ಮೊನಚಾದ ತುದಿಯಲ್ಲಿ ಕೊನೆಗೊಳ್ಳುತ್ತವೆ.

ವೈಶಿಷ್ಟ್ಯಗಳು ಬದಲಾಯಿಸಿ

ಇವಕ್ಕೆ ಮುತ್ತಿನ ಮೀನು ಎಂಬ ಹೆಸರು ಬರಲು ಕಾರಣ ಕಲವು ಪ್ರಭೇದಗಳು ಮುತ್ತಿನ ಚಿಪ್ಪುಗಳಲ್ಲಿ ಪರತಂತ್ರ ಜೀವಿಗಳಾಗಿ ಆಶ್ರಯ ಪಡೆದಿರುತ್ತವೆ. ಕೆಲವೊಮ್ಮೆ ಆ ಚಿಪ್ಪುಗಳಲ್ಲಿ ಸಿಕ್ಕಿಕೊಂಡು ಮುತ್ತುಗಳಾಗಿರುವ ನಿದರ್ಶನಗಳಿವೆ. ಈ ಮೀನುಗಳು ಸಮುದ್ರಸೌತೆ ಪ್ರಾಣಿಯ ದೇಹದೊಳಗೆ ಪರತಂತ್ರಜೀವಿಯಾಗಿ ಜೀವಿಸುತ್ತವೆ.[೨] ಕೆಲವೊಮ್ಮೆ ಇವನ್ನು ಸೌತೆ ಮೀನು ಎಂದು ಕರೆಯುವುದುಂಟು. ಎಳೆಯ ಮೀನು ತನ್ನ ತಲೆಯನ್ನೂ, ಬೆಳೆದ ಮೀನು ತನ್ನ ಬಾಲವನ್ನೂ ಮೊದಲು ಸಮುದ್ರಸೌತೆಯ ವಿಸರ್ಜನದ್ವಾರದ ಮೂಲಕ ತುರುಕಿಸಿ ಆತಿಥೇಯದ ದೇಹದೊಳಗೆ ನುಸುಳಿಕೊಳ್ಳುತ್ತದೆ. ಆತಿಥೇಯ ಪ್ರಾಣಿಯ ಉಸಿರಾಟದ ಅಂಗದ ಭಿತ್ತಿಯನ್ನು ಕೊರೆದು ದೇಹಾಂತರಾವಕಾಶವನ್ನು ಸೇರುತ್ತದೆ. ಇಲ್ಲಿ ಆತಿಥೇಯದ ದೇಹದ ಉಸಿರಾಟದ ಅಂಗ, ಪ್ರಜನನಾಂಗ ಇತ್ಯಾದಿ ಅಂಗಾಂಶಗಳನ್ನು ತಿಂದು ಬದುಕುತ್ತದೆ. ಆತಿಥೇಯ ಪ್ರಾಣಿಗೆ ಅತ್ಯಧಿಕ ಪುನರುತ್ಪಾದನಾ ಸಾಮರ್ಥ್ಯವಿರುವುದರಿಂದ ಪರತಂತ್ರಜೀವಿ ತಿಂದರೂ ಅದು ತನ್ನ ಅಂಗಾಂಶಗಳನ್ನು ಉತ್ಪಾದಿಸಿಕೊಳ್ಳುತ್ತದೆ. ಕೆಲವು ಪ್ರಭೇದಗಳು ಆಹಾರಕ್ಕಾಗಿಯೊ ಪುನರುತ್ಪಾದನೆಗಾಗಿಯೊ ಆತಿಥೇಯ ಪ್ರಾಣಿಯ ದೇಹದಿಂದ ಹೊರಬರುತ್ತವೆ. ಕೆಲವು ಮಾತ್ರ ಮತ್ತೆ ಅದೇ ಆತಿಥೇಯವನ್ನು ಪ್ರವೇಶಿಸಿದರೂ ಇನ್ನು ಕೆಲವು ಪ್ರಭೇದಗಳು ಬೇರೆ ಯಾವುದಾದರೂ ಚಿಪ್ಪು ಅಥವಾ ಸಮುದ್ರಸೌತೆಯನ್ನು ಪ್ರವೇಶಿಸುತ್ತವೆ. ಮುತ್ತಿನ ಮೀನಿನ ಡಿಂಬ ಪ್ರೌಢಮೀನಿಗಿಂತ ಭಿನ್ನವಾಗಿದ್ದು ನೀರಲ್ಲಿ ತೇಲಾಡುತ್ತಿರುತ್ತದೆ. ಡಿಂಬದ ತಲೆಯಲ್ಲಿ ಉದ್ದವಾದ ನೂಲಿನಾಕಾರದ ರಚನೆಯುಂಟು.

ಉಲ್ಲೇಖಗಳು ಬದಲಾಯಿಸಿ

  1. Richard van der Laan; William N. Eschmeyer & Ronald Fricke (2014). "Family-group names of Recent fishes". Zootaxa. 3882 (2): 001–230. doi:10.11646/zootaxa.3882.1.1. PMID 25543675.
  2. "Pearlfish from a Sea Cucumber | Smithsonian Ocean". ocean.si.edu (in ಇಂಗ್ಲಿಷ್). Retrieved 2023-12-16.
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: