ಡಿಂಬ - ನಿಷೇಚನೆಗೊಂಡ ಅಂಡ ಸಾಮಾನ್ಯವಾಗಿ ಬೆಳೆದು ಪ್ರೌಢಜೀವಿಯನ್ನೇ ಹೋಲುವ ಮರಿಯಾಗಿ ಹೊರಬರುತ್ತದೆ. ಆದರೆ ಕಪ್ಪೆ, ಚಿಟ್ಟೆ ಮೊದಲಾದ ಪ್ರಾಣಿಗಳಲ್ಲಿ ನಿಷೇಚನಗೊಂಡ ಅಂಡದಿಂದ ಹೊರಬರುವ ಮರಿ ಗಾತ್ರ, ರಚನೆ, ಸ್ವಭಾವ, ಆಹಾರಸೇವನೆ ಹಾಗೂ ಚಲನೆಗಳಲ್ಲಿ ತಂದೆತಾಯಿಯರನ್ನು ಹೋಲುವುದಿಲ್ಲ. ಈ ರೀತಿ ತಂದೆ ಅಥವಾ ತಾಯಿಯನ್ನು ಹೋಲದ ಮರಿಗೆ ಡಿಂಬ (ಲಾರ್ವ) ಎಂದು ಹೆಸರು.

ಮುಂದೆ ಬೆಳೆಯುತ್ತ ಹೋದಂತೆ ಸಾಕಷ್ಟು ಬದಲಾವಣೆಗೆ ಒಳಗಾಗಿ ಡಿಂಬ ಪ್ರಬುದ್ಧಾವಸ್ಥೆಯನ್ನು ಪಡೆದು ತಂದೆತಾಯಿಯನ್ನು ಹೋಲತೊಡಗುತ್ತದೆ. ಪ್ರತಿ ಪ್ರಾಣಿಗುಂಪಿಗೂ ವಿಶಿಷ್ಟ ರೀತಿಯ ಡಿಂಬವುಂಟು. ಅಲ್ಲದೆ ಒಂದೇ ಪ್ರಾಣಿಯ ಜೀವನ ಚರಿತ್ರೆಯಲ್ಲಿ ಒಂದಕ್ಕಿಂತ ಹೆಚ್ಚಿನ ಸಂಖ್ಯೆಯ ಡಿಂಬಾವಸ್ಥೆಗಳಿರಬಹುದು.

ಬಹುತೇಕ ಜಲಜೀವಿಗಳ, ಅದರಲ್ಲೂ ಕಡಲಜೀವಿಗಳ, ಅಂಡಗಳು ಗಾತ್ರದಲ್ಲಿ ಚಿಕ್ಕವು. ಇವನ್ನು ಸೂಕ್ಷ್ಮದರ್ಶಕದ ಮೂಲಕ ಮಾತ್ರ ನೋಡಬಹುದು. ನಿಷೇಚನಗೊಂಡ ಇಂಥ ಚಿಕ್ಕ ಅಂಡಗಳಲ್ಲಿ ಬೆಳೆಯುತ್ತಿರುವ ಭ್ರೂಣಗಳಿಗೆ ಸಾಕಾಗುವಷ್ಟು ಆಹಾರವಿರುವುದಿಲ್ಲ. ಉದಾಹರಣೆಗೆ ಕಪ್ಪೆಯ ಅಂಡದಲ್ಲಿ ಬೃಹತ್ ಗಾತ್ರದ ಮರಿಕಪ್ಪೆಗೆ ಬೇಕಾಗುವಷ್ಟು ಆಹಾರವಿರುವುದಿಲ್ಲ. ಅಂತೆಯೇ ನಕ್ಷತ್ರ ಮೀನು ಹಾಗೂ ಸಿಂಪಿಯ ಅಂಡಗಳು ಕಪ್ಪೆಯ ಮೊಟ್ಟೆಗಿಂತ ಬಲು ಚಿಕ್ಕವು. ಈ ಕಾರಣದಿಂದ ಇವುಗಳಿಂದ ರೂಪುಗೊಳ್ಳುವ ಡಿಂಬಗಳು ಚಿಕ್ಕವು. ಸರಳರೀತಿಯವು ಹಾಗೂ ತಂದೆತಾಯಿಗಳಿಗಿಂತ ಬೇರೆಯಾಗಿರುವಂಥವು. ಕಪ್ಪೆಯ ಮರಿಗೆ ಗೊದ ಮೊಟ್ಟೆ ಎಂದು ಹೆಸರು. ಸಿಂಪಿ, ಕ್ಲ್ಯಾಮ್, ನಕ್ಷತ್ರಮೀನು, ಜೆಲ್ಲಿಮೀನು, ಕಪ್ಪೆ ಮೊದಲಾದವು ಚಿಕ್ಕಗಾತ್ರದ ಆದರೆ ಹೆಚ್ಚಿನ ಸಂಖ್ಯೆಯ ಅಂಡಗಳನ್ನಿಡುತ್ತವೆ. ಅಧಿಕ ಸಂಖ್ಯೆಯಿಂದಾಗಿ ಶತ್ರು ಹಾಗೂ ಪರಿಸರದ ಅಡಚಣೆಗಳನ್ನು ಎದುರಿಸಿ ಕನಿಷ್ಠ ಕೆಲವಾದರೂ ಪ್ರೌಢವಸ್ಥೆಯನ್ನು ತಲುಪುವುದಕ್ಕೆ ಅನುಕೂಲವಾಗುತ್ತವೆ. ಕಪ್ಪೆಯ ಅಂಡದ ಗಾತ್ರ 1/25" ನಷ್ಟು. ನಕ್ಷತ್ರಮೀನು, ಜೆಲ್ಲಿಮೀನು ಹಾಗೂ ಸ್ಕ್ಯಾಲಪ್‍ಗಳ ಅಂಡಗಳಾದರೋ 1/200" ನಷ್ಟಿರುತ್ತದೆ.

ಪ್ರತಿಯೊಂದು ಬಗೆಯ ಡಿಂಬವು ತನ್ನದೇ ಆದ ರೀತಿಯಲ್ಲಿ ಚಲಿಸುವುದು. ಶಿಲಕೆಗಳು ಡಿಂಬಗಳ ನಿತ್ಯ ಚಲನಾಂಗಗಳು. ಕಡಲಪೋರದಲ್ಲಿ ಚಾಚಿಕೊಂಡಿರುವ ಬಾಹುಗಳ ಮೇಲೆ ನಕ್ಷತ್ರ ಮೀನುಗಳಲ್ಲಿ ಚಾಚಿಕೊಂಡಿರುವ ಮಡಿಕೆ ಅಥವ ಏಣುಗಳ ಮೇಲೆ ಕಡಲ ಹುಳು ಮತ್ತು ಮೃದ್ವಂಗಿಗಳಲ್ಲಿ ನಡವಣ ಸುತ್ತು ಫಲಕದ ಮೇಲೆ ಜೆಲಿಮೀನಿನ ಡಿಂಬದಲ್ಲಿ ದೇಹದ ಸುತ್ತಲೂ ಶಿಲಕೆಗಳಿದೆ. ಶಿಲಕೆಗಳುಳ್ಳ ಡಿಂಬ ನೀರಿನಲ್ಲಿ ಸುಲಭವಾಗಿ ಚಲಿಸಬಲ್ಲದು. ಆಹಾರ ಜೀವಿಗಳನ್ನು ಹಿಡಿಯಲು ಸಹ ಶಿಲಕೆಗಳು ಸಹಾಯಕವಾಗುತ್ತವೆ. ಗೊದಮೊಟ್ಟೆಯಲ್ಲಿ ಈಜುರೆಕ್ಕೆ ಚಲನೆಗೆ ಸಹಕಾರಿಯಾಗುತ್ತದೆ. ಡಿಂಬಗಳ ಚಲನ ಸಾಮಥ್ರ್ಯದಿಂದಾಗಿ ಪ್ರಭೇದಗಳ ಪ್ರಸರಣ ನಡೆಯುತ್ತದೆ.

ರೂಪಪರಿವರ್ತನೆ ಮತ್ತು ಬೆಳವಣಿಗೆ

ಬದಲಾಯಿಸಿ

ಡಿಂಬ ಕ್ರಮೇಣ ರೂಪ ಪರಿವರ್ತನೆಗೊಳಗಾಗಿ ಆಕಾರದಲ್ಲಿ ತಂದೆತಾಯಿಗಳನ್ನು ಹೋಲಲಾರಂಭಿಸುತ್ತದೆ. ಉದಾಹರಣೆಗೆ ಮೀನಿನಂತಿರುವ, ಸಸ್ಯಹಾರಿಯಾದ ಹಾಗೂ ನೀರಿನಲ್ಲಿ ಕಿವಿರಿನಿಂದ ಉಸಿರಾಡುವ ಗೊದಮೊಟ್ಟೆ ಮಾಂಸಾಹಾರಿಯಾದ, ಶ್ವಾಸಕೋಶಿ ನೆಲವಾಸಿ ಕಪ್ಪೆಯಾಗಿ ಪರಿವರ್ತನೆಗೊಳ್ಳುತ್ತದೆ. ರೂಪಪರಿವರ್ತನೆಗೆ ಡಿಂಬಗಳ ದೇಹದಲ್ಲಿರುವ ಗ್ರಂಥಿಗಳು ಮತ್ತು ಸುತ್ತಲಿನ ಪರಿಸರ ಕಾರಣ. ಗೊದಮೊಟ್ಟೆ ಕಪ್ಪೆಯಾಗಿ ಪರಿವರ್ತನೆಗೊಳ್ಳಲು ಅದರಲ್ಲಿರುವ ತೈರಾಯ್ಡ್ ಗ್ರಂಥಿ ಕಾರಣ. ಈ ಗ್ರಂಥಿಯ ಸ್ರಾವ ರೂಪಪರಿವರ್ತನೆಯನ್ನು ಚುರುಕುಗೊಳಿಸುತ್ತದೆ. ಈ ಗ್ರಂಥಿಯ ಜೀವಕೋಶಗಳನ್ನು ಗೊದ ಮೊಟ್ಟೆಗೆ ಬಲವಂತವಾಗಿ ತಿನ್ನಿಸಿದಾಗ ಅದು ಬೇಗನೆ ಕಪ್ಪೆಯಾಗಿ ಬದಲಾಗುತ್ತದೆ. ಗೊದಮೊಟ್ಟೆಯ ತೈರಾಯ್ಡ್ ಗ್ರಂಥಿಯನ್ನು ತೆಗೆದುಹಾಕಿದರೆ ಅದು ಎಂದಿಗೂ ಕಪ್ಪೆಯಾಗಿ ಪರಿವರ್ತನೆಗೊಳ್ಳುವುದಿಲ್ಲ; ಬದಲಾಗಿ ದೈತ್ಯಾಕಾರದ ಗೊದಮೊಟ್ಟೆಯಾಗಿಯೇ ಉಳಿಯುತ್ತದೆ. ಕೀಟಗಳಲ್ಲಿ ಮೆದುಳಿನ ಸಮೀಪದಲ್ಲಿರುವ ಗ್ರಂಥಿಯೊಂದು ರೂಪಪರಿವರ್ತನೆಯನ್ನು ನಿಯಂತ್ರಿಸುತ್ತದೆ. ಸಿಂಪಿ ಮತ್ತು ಸಿಫಲಾಗಳ ಡಿಂಬಗಳು ಸೂಕ್ತವಾದ ಆಧಾರವಸ್ತು ದೊರೆಯುವ ವರೆಗೂ ನೀರಿನಲ್ಲಿ ಸುತ್ತುತ್ತಿರುತ್ತವೆ. ಇಂಥ ವಸ್ತು ಸಿಕ್ಕ ಅನಂತರ ಅದಕ್ಕೆ ಅಂಟಿಕೊಂಡು ರೂಪಪರಿವರ್ತನೆಗೆ ಒಳಗಾಗಿ ಪ್ರೌಢಜೀವಿಗಳಾಗಿ ಬೆಳೆಯುತ್ತವೆ. ಆಧಾರವಸ್ತುವಿನಲ್ಲಿರುವ ಅತ್ಯಲ್ಪಪ್ರಮಾಣದ ತಾಮ್ರ ರೂಪಪರಿವರ್ತನೆಗೆ ಕಾರಣವಾಗುತ್ತದೆ. ತಾಮ್ರವಿಲ್ಲದೆ ಇವುಗಳಲ್ಲಿ ರೂಪ ಪರಿವರ್ತನೆ ನಡೆಯುವುದಿಲ್ಲ.

ಸಿಕಾಡಗಳಲ್ಲಿ ಒಂದು ವಿಚಿತ್ರ ರೀತಿಯ ಬೆಳೆವಣಿಗೆಯನ್ನು ಕಾಣಬಹುದು. ಹೆಣ್ಣು ಸಿಕಾಡ ಮರಗಿಡಗಳ ತೊಗಟೆಯಲ್ಲಿ ಮೊಟ್ಟೆಯಿಡುತ್ತದೆ. ಮೊಟ್ಟೆಯೊಡೆದು ಹೊರಬರುವ ಕಂಬಳಿಹುಳು (ಗ್ರಬ್) ತೆವಳಿಕೊಂಡು ಇಳಿದು ಮರದ ಬುಡದಲ್ಲಿರುವ ಮಣ್ಣಿನೊಳಕ್ಕೆ ಸೇರಿ ಹೋಗುತ್ತದೆ. 13-17 ವರ್ಷಗಳ ಕಾಲ ಹೀಗೆ ಮಣ್ಣಿನಲ್ಲಿ ಇದ್ದು (ಕೆಲವು ಬಗೆಗಳಲ್ಲಿ 2-3 ವರ್ಷ ಹೀಗೆ ಇರುವುದುಂಟು) ನಿಧಾನವಾಗಿ ಬೆಳೆದು ಅನಂತರ ದೊಡ್ಡ ಕಂಬಳಿಹುಳುವಾಗಿ ಹೊರಕ್ಕೆ ಬರುತ್ತದೆ. ಅಲ್ಲಿಂದ ಮರದ ಕೊಂಬೆಯ ತುದಿಗೆ ಏರುತ್ತದೆ. ಇಲ್ಲಿ ಕೊನೆಯ ಬಾರಿ ಪೊರೆಯನ್ನು ಕಳಚಿ ಹಾರಾಡುವ ಕೀಟವಾಗಿ ಮಾರ್ಪಡುತ್ತದೆ. ಪೊರೆ ಕಳಚಿದ ತರುವಾಯ ಬಹುಕಾಲ ಅಂದರೆ ಬೇಸಗೆಯ ಕಾಲಾವಧಿಯ ವರೆಗೆ ಏನನ್ನೂ ತಿನ್ನಲಿಚ್ಛಿಸುವುದಿಲ್ಲ. ಆದರೆ ಈ ಕಾಲದಲ್ಲಿ ಇದಕ್ಕೆ ಸಂಭೋಗ ಸಾಮಥ್ರ್ಯವಿರುತ್ತದೆ. ಡಿಂಬಗಳ ವಿಕಾಸದ ಬಗ್ಗೆ ಜರ್ಮನಿಯ ಹೆಕಲ್ ಎಂಬಾತ ಒಂದು ಸಿದ್ಧಾಂತವನ್ನು ಮಂಡಿಸಿದ್ದ. ಅದಕ್ಕೆ ಬಯೋಜೆನೆಟಿಕ್ ನಿಯಮ ಎಂದು ಹೆಸರು. ಇದರ ಪ್ರಕಾರ ಒಂದು ಜೀವಿ ತನ್ನ ವ್ಯಕ್ತಿವೃತ್ತದಲ್ಲಿ (ಆಂಟಾಜೆನಿ) ತನ್ನ ಜಾತಿ ವೃತ್ತವನ್ನು (ಫೈಲಾಜೆನಿ) ಪ್ರದರ್ಶಿಸುತ್ತದೆ. ಅಂದರೆ ವ್ಯಕ್ತಿವೃತ್ತವು ಜಾತಿವೃತ್ತದ ಪುನರಾವರ್ತನೆ ಎಂದರ್ಥ. ಈ ಸಿದ್ಧಾಂತ ಸರಿಯಲ್ಲ ಎಂದು ಈಗ ಗೊತ್ತಾಗಿದ್ದರೂ ಇದು ಸಂಪೂರ್ಣವಾಗಿ ಸುಳ್ಳಲ್ಲ. ಉದಾಹರಣೆಗೆ ಕಪ್ಪೆಯ ಗೊದಮೊಟ್ಟೆ. ಕಪ್ಪೆ ನೆಲವಾಸಿಯಾದರೂ ಆದಿ ಮೀನುಗಳಂತೆ ಅದು ತನ್ನ ಮೊಟ್ಟೆಯನ್ನು ನೀರಿನಲ್ಲಿಯೇ ಇಡುತ್ತದೆ. ಅಂಡಗಳು ಮೊದಲು ಮೀನನ್ನು ಹೋಲುವ ಡಿಂಬಗಳಾಗಿ ಬೆಳೆದು ಅನಂತರ ಕಪ್ಪೆಗಳಾಗಿ ಪರಿವರ್ತನೆಗೊಳ್ಳುತ್ತವೆ.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: