ಮಿಲೊಲೋಂತಿಡೀ
ಮಿಲೊಲೋಂತಿಡೀ ಕೋಲಿಯಾಪ್ಟರ ಗಣದ ಸ್ಕಾರಬಾಯ್ಡಿಯ ಅಧಿಕುಟುಂಬಕ್ಕೆ ಸೇರಿದ ಕೀಟಕುಟುಂಬ. ಈ ಕುಟುಂಬದಲ್ಲಿ ೭೫೦ ಕ್ಕಿಂತ ಹೆಚ್ಚು ಜಾತಿಗಳಿದ್ದು ೧೧,೦೦೦ ಕ್ಕಿಂತ ಹೆಚ್ಚು ಪ್ರಭೇದಗಳಿವೆ.[೧] ಇದಕ್ಕೆ ಸೇರಿದ ಕೀಟಗಳು ಗಿಡಮರಗಳಿಗೆ ಹಾನಿಕಾರಕವಾಗಿದ್ದು ಮೇ ಬೀಟಲ್ಸ್, ಜೂನ್ ಬೀಟಲ್ಸ್ ಅಥವಾ ಕಾಕ್‌ಷೇಫರ್‌ಗಳೆಂಬ ಹೆಸರಿನಿಂದ ಪ್ರಸಿದ್ಧವಾಗಿವೆ.[೨] ಇವುಗಳ ಗಾತ್ರದಲ್ಲೂ ಮೈಬಣ್ಣದಲ್ಲೂ ಅಪಾರ ವೈವಿಧ್ಯವನ್ನು ಕಾಣಬಹುದು. ಭಾರತಾದ್ಯಂತ ಇವುಗಳ ವ್ಯಾಪ್ತಿಯುಂಟು.
ಮಿಲೊಲೋಂತಿಡೀ | |
---|---|
ಗಂಡು ಪಾಲಿಫ಼ಿಲಾ ಆಲ್ಬಾ (ಮೆಲೊಲೋಂತಿನಿ) | |
Scientific classification | |
ಕ್ಷೇತ್ರ: | Eukaryota |
ಸಾಮ್ರಾಜ್ಯ: | Animalia |
ವಿಭಾಗ: | ಆರ್ಥ್ರೊಪೋಡಾ |
ವರ್ಗ: | ಇನ್ಸೆಕ್ಟಾ |
ಗಣ: | ಕೋಲಿಯಾಪ್ಟೆರಾ |
ಕುಟುಂಬ: | ಸ್ಕಾರಬೇಯ್ಡೀ |
ಉಪಕುಟುಂಬ: | ಮಿಲೊಲೋಂತಿಡೀ Leach, 1819 |
Diversity | |
ಸುಮಾರು 20-30 ಪಂಗಡಗಳು | |
Synonyms | |
ಹಾಪ್ಲಿಯಿನೀ |
ದೇಹರಚನೆ
ಬದಲಾಯಿಸಿದೇಹದ ಗಾತ್ರ 10-15 ಮಿಮೀ. ದೃಢವಾದ ಮೈಕಟ್ಟು. ಮಣ್ಣು ತೋಡಲು ಅನುಕೂಲವಾಗಿರುವ ಗರಗಸದಂಥ ರಚನೆಗಳುಳ್ಳ ಮುಂಗಾಲುಗಳು, ಆಹಾರವನ್ನು ಕತ್ತರಿಸಲು ಸಹಾಯಕವಾಗುವಂಥ ಬಾಯಿ, ಆಂಟೆನದ ಕೊನೆಯ ಮೂರು ಖಂಡಗಳು ಎಲೆಯಾಕಾರದವಾಗಿರುವುದು. ಚಿಪ್ಪಿನಾಕಾರದ ಎಲಿಟ್ರ ಇವು ಈ ಜೀರುಂಡೆಗಳ ಲಕ್ಷಣಗಳ ಪೈಕಿ ಕೆಲವು.
ನಡವಳಿಕೆ
ಬದಲಾಯಿಸಿಇವು ಹಗಲಿನ ವೇಳೆಯನ್ನು ಭೂಮಿಯೊಳಗೆ 10-20 ಸೆಂಮೀ ಆಳದಲ್ಲಿ ಕಳೆಯುತ್ತವೆ. ರಾತ್ರಿ ಹೊತ್ತು ಮಾತ್ರ ನೆಲದಿಂದ ಹೊರಬಂದು ಗಿಡಮರಗಳನ್ನು ತಿನ್ನುವುವು.
ಸಂತಾನೋತ್ಪತ್ತಿ
ಬದಲಾಯಿಸಿಬೇಸಗೆ ಕಳೆದು ಮೇ-ಜೂನ್ ತಿಂಗಳುಗಳಲ್ಲಿ ಮಾತ್ರ ಗಂಡು ಹೆಣ್ಣು ಕೀಟಗಳು ಭೂಮಿಯ ಮೇಲಕ್ಕೆ ಬಂದು ಸಂತಾನ ಕ್ರಿಯೆಯಲ್ಲಿ ತೊಡಗುವುವು. ಆ ಸಮಯದಲ್ಲಿ ಮಾತ್ರ ಹೊರಗೆ ಕಾಣಿಸಿಕೊಳ್ಳುವುದರಿಂದ ಇವಕ್ಕೆ ಮೇ ಅಥವಾ ಜೂನ್ ಬೀಟಲ್ಸ್ ಎಂಬ ಹೆಸರು ಬಂದಿದೆ. ಸಂಭೋಗಾನಂತರ ಎರಡು ಮೂರು ವಾರಗಳಲ್ಲಿ ಹೆಣ್ಣು ನೆಲದೊಳಗೆ ಮಣ್ಣಿನ ಕುಡಿಕೆಯಂಥ ರಚನೆ ರೂಪಿಸಿ ಅದರೊಳಗೆ 30-50 ಮೊಟ್ಟಿಯಿಟ್ಟು ಸತ್ತುಹೋಗುತ್ತದೆ. 10-15 ದಿವಸಗಳ ತರುವಾಯ ಮೊಟ್ಟೆಯೊಡೆದು ಮರಿ ಹೊರಬರುತ್ತದೆ. ಸುಮಾರು 3-6 ತಿಂಗಳ ತನಕ ಮಣ್ಣಿನೊಳಗೇ ಹುದುಗಿದ್ದು ಬೇರುಗಳನ್ನು ತಿಂದು ಬೆಳೆದು ಅನಂತರ ಕೋಶಾವಸ್ಥೆ ತಲುಪುವ ಈ ಮರಿಗಳನ್ನು ಗೊಬ್ಬರದ ಹುಳು, ಗೊಣ್ಣೆ ಹುಳು ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಕೋಶಾವಸ್ಥೆಯ ಅವಧಿ 10-14 ದಿವಸಗಳು. ಇದರಿಂದ ಬರುವ ಪ್ರೌಢಕೀಟ ಮುಂದಿನ ಮುಂಗಾರು ಮಳೆಯ ತನಕ ಮಣ್ಣಿನಲ್ಲಿಯೇ ಅಡಗಿದ್ದು, ಅನಂತರ ಹೊರಬಂದು ತನ್ನ ಎಂದಿನ ಗುಪ್ತ ಜೀವನ ಆರಂಭಿಸುತ್ತದೆ.
ಭಾರತದಲ್ಲಿ
ಬದಲಾಯಿಸಿಭಾರತದಲ್ಲಿ ಕಾಣದೊರೆಯುವ ಈ ಜೀರುಂಡೆಗಳ ಹೆಸರುಗಳನ್ನೂ, ಅವು ಹಾಳುಮಾಡುವ ಬೆಳೆಗಳನ್ನೂ ಈ ಮುಂದೆ ಉಲ್ಲೇಖಿಸಿದೆ:
- ಹೊಲೊಟ್ರೈಕಿಯ ಸೆರೇಟ, ಹೋ. ಕಾನ್ಸ್ಯಾಂಗ್ವೀನಿಯ - ಕಬ್ಬು, ಸೇಂಗ, ಜೋಳ, ತರಕಾರಿ ಗಿಡಗಳು
- ಹೋ. ನೀಲಗಿರಕ - ಕಾಫಿಗಿಡ
- ಲ್ಯೂಕೊಫೋಲಿಸ್ - ತೆಂಗು, ಅಡಕೆ.
ಉಲ್ಲೇಖಗಳು
ಬದಲಾಯಿಸಿ- ↑ Cave, R.D. & Ratcliffe, B.C. (2008). Scarab beetles (Coleoptera: Scarabaeoidea). In J.F. Capinera (Ed.), Encyclopedia of Entomology (pp. 3273–3286. Heidelberg. Springer.
- ↑ Britannica, The Editors of Encyclopaedia. "chafer". Encyclopedia Britannica, 21 Aug. 2007, https://www.britannica.com/animal/chafer. Accessed 4 December 2023.