ಮಾರೀಕುಣಿತ : ಮಾರೀ ಹಬ್ಬದ ಸಂದರ್ಭದಲ್ಲಿ ನಡೆಯುವ ಒಂದು ಬಗೆಯ ಜನಪದ ಕುಣಿತ.[] ಮಾರೀಕುಣಿತ ಎಂದೇ ಪ್ರಸಿದ್ಧವಾಗಿದೆ.[] ಮಾರೀ ದುಷ್ಟ ಶಕ್ತಿಗಳನ್ನು ದಮನಮಾಡಿದ ಸಂತೋಷಾರ್ಥವಾಗಿ ತನ್ನ ವೀರ ಮಕ್ಕಳೊಡನೆ ಕುಣಿಯುತ್ತಾ ಬಂದುದರ ಸಂಕೇತವಾಗಿ ಈ ಕುಣಿತ ರೂಪುಗೊಂಡಿದೆ, ಈ ಸಂದರ್ಭದಲ್ಲಿ ಕೆಲವು ಕಡೆ ಕೊಂಡ ಹಾಯುವ ಪದ್ಧತಿಯೂ ಇದೆ. ಈ ಕುಣಿತದ ಸಾಲಿಗೆ ವೀರ ಮಕ್ಕಳ ಕುಣಿತ, ರಂಗದ ಕುಣಿತಗಳನ್ನೂ ಸೇರಿಸಬಹುದು. ಆದರೆ ಅವು ಕಾಲ ಮತ್ತು ಪ್ರಾಂತ ಭೇದಗಳಿಗೆ ಒಳಗಾಗಿರುತ್ತದೆ. ಕೆಲವು ಕಡೆ ಯುಗಾದಿ ದಿನ ರಂಗದಲ್ಲಿ ಕರ್ಕು ಹಾಕುವ ಮೂಲಕ ಆರಂಭ ಮಾಡಿ ಅಲ್ಲಿಂದ ಒಂದು ತಿಂಗಳಿಗೆ ಹಬ್ಬ ಆರಂಭವಾಗುತ್ತದೆ.

ಮಾರಿ ಒಂದು ಶಕ್ತಿ ದೇವತೆ. ಈಕೆ ಪಾರ್ವತಿಯ ಒಂದು ರೂಪ, ಗ್ರಾಮ ರಕ್ಷಣೆ ಅವಳ ಹೊಣೆ, ಚಾಂದ್ರಮಾನ ಫಾಲ್ಗುಣ ಮಾಸ ಎಂದರೆ ಫೆಬ್ರುವರಿ-ಮಾರ್ಚ್ ತಿಂಗಳಿನಲ್ಲಿ ಇವಳ ಆರಾಧನೆಯನ್ನು ಹಬ್ಬ ಮತ್ತು ಜಾತ್ರೆಯ ರೂಪದಲ್ಲಿ ವಿಶೇಷವಾಗಿ ನಡೆಸುತ್ತಾರೆ, ಆ ಸಂದರ್ಭದಲ್ಲಿ ಇವಳ ಸ್ತುತಿರೂಪವಾದ ಬಹುಪಾಲು ತ್ರಿಪದಿಗಳಲ್ಲಿರುವ ಹಾಡುಗಳನ್ನು ಹೇಳಿಕೊಂಡು ಜನರು ಸಂಭ್ರಮದಿಂದ ಕುಣಿಯುತ್ತಾರೆ.

ಕುಣಿತದ ಹಂತ

ಬದಲಾಯಿಸಿ

ಕುಣಿತದಲ್ಲಿ ಮೂರು ಕಾಲಗಳಿವೆ. ಆರಂಭದ ಕುಣಿತವನ್ನು ಒಂದನೆಯ ಕಾಲ ಎನ್ನುವರು. ಇದರಲ್ಲಿ ಮಕ್ಕಳು ಮರಿ ಎಲ್ಲರನ್ನೂ ಕುಣಿಸುತ್ತಾರೆ. ಕುಣಿತ ತೀವ್ರವಾದಾಗ ಎರಡನೇಯ ಕಾಲ ಎನ್ನುತ್ತಾರೆ, ಮೂರನೇಯ ಹಂತ ಜಾಗರ ಎಂದರೆ ಬೆಳಗು ಪೂರ್ತಿ ಕುಣಿಯುವುದು. ಈ ಸಂದರ್ಭದಲ್ಲಿ ಕುಣಿತ ಭಕ್ತಿಯ ಪರಾಕಾಷ್ಟೆ ಮುಟ್ಟಿರುತ್ತದೆ. ಸುತ್ತಮುತ್ತಲ ಊರುಗಳಿಂದ ಗ್ರಾಮ ದೇವತೆಗಳನ್ನು ತಂದು ಕುಣಿಯುತ್ತಾರೆ. ಕೆಲವು ಕಡೆ ಏಳು ಊರುಗಳ ಕುಣಿತದವರು ಕುಣಿಯಲೇಬೇಕೆನ್ನುವ ಸಂಪ್ರದಾಯವಿದೆ. ಮೈಸೂರು, ಮಂಡ್ಯ ಮತ್ತು ಹಾಸನ ಜಿಲ್ಲೆಗಳಲ್ಲಿ ಈ ಕುಣಿತ ಹೆಚ್ಚು ಪ್ರಚಲಿತವಾಗಿದೆ. ಇದರಲ್ಲಿ ವಯೋಭೇಧವಿಲ್ಲ, ಎಷ್ಟು ಜನ ಬೇಕಾದರೂ ಕುಣಿಯಬಹುದು. ಆದರೆ ಅವರಿಗೆ ಅಭ್ಯಾಸವಿರಬೇಕು. ದೈವಾರಾಧನೆ ಮತ್ತು ಆನಂದ ಕುಣಿತದ ಗುರಿ.

ವಿಧಿ ವಿಧಾನ

ಬದಲಾಯಿಸಿ

ಮಾರಿಹಬ್ಬ ಸಾಮಾನ್ಯವಾಗಿ ಮಂಗಳವಾರ ಆರಂಭವಾಗಿ 3 ರಿಂದ 5 ದಿನಗಳ ಕಾಲ ನಡೆಯುತ್ತದೆ. ಜನರು ಸ್ನಾನ ಮಡಿ ಮಾಡಿ ನಿಷ್ಠೆಯಿಂದ, ಭಕ್ತಿ ಭಾವದಿಂದ ಹಬ್ಬವನ್ನು ಆಚರಿಸುತ್ತಾರೆ. ಊರಿನಲ್ಲಿ ಬೇರೆ-ಬೇರೆ ಕೋಮಿನವರಿಗೆ ಈ ಹಬ್ಬಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಕರ್ತವ್ಯಗಳಿರುತ್ತವೆ. ಗುಡಿಗೆ ಸುಣ್ಣ ಬಣ್ಣ ಮಾಡಿ ಚಪ್ಪರ ಹಾಕುತ್ತಾರೆ, ಮಧ್ಯಾಹ್ನದ ವೇಳೆಗೆ ಎಳನೀರು, ಮೊಸರನ್ನ, ಹಸಿ ಅಕ್ಕಿ ತಂಬಿಟ್ಟು ನೈವೇದ್ಯ ಮಾಡಿ ತಂಪು ಮಾಡುತ್ತಾರೆ. ಪ್ರಾಣಿ ಬಲಿಯನ್ನು ಕೊಡುವುದು ರೂಡಿಯಲ್ಲಿದ್ದಿತ್ತು. ಈಚೆಗೆ ಈ ಪದ್ಧತಿ ಕಡಿಮೆಯಾಗುತ್ತಿದೆ.

ತೀರ್ಥಪ್ರಸಾದ ಸೇವನೆಯ ಅನಂತರ ಸಂಜೆಯ ಸುಮಾರಿಗೆ ಮಾರೀಕುಣಿತ ಪ್ರಾರಂಭವಾಗುತ್ತದೆ. ಇದು ಇಡೀ ರಾತ್ರಿ ಮುಂದುವರಿಯುತ್ತದೆ. ಕೆಲವು ಕಡೆ ಮಾರನೇಯ ದಿನ ಸಂಜೆ ತಮ್ಮಡಿಗಳು ಕೊಂಡ ಹಾಯುತ್ತಾರೆ. ಅನಂತರವೂ ಮಾರೀಕುಣಿತ ನಡೆಯುತ್ತದೆ. ಕುಣಿಯುವಾಗ ತಲೆಗೆ ಎಲೆ ವಸ್ತ್ರ ಕಟ್ಟಿರುತ್ತಾರೆ. ಒಂದೇ ಬಗೆಯ ಅಂಗಿ ಮತ್ತು ಏರುಗಚ್ಚೆ ಹಾಕಿರುತ್ತಾರೆ. ಈಚೀಚಿಗೆ ವಯಸ್ಕರ ಶಿಕ್ಷಣ ಸಮಿತಿಯವರು ಅಥವಾ ಸಮಾಜ ಕಲ್ಯಾಣ ಇಲಾಖೆಯವರ ಸೂಚನೆಯ ಮೇರೆಗೆ ಸಮವಸ್ತ್ರ (ನಿಕ್ಕರು ಮತ್ತು ಬನೀನು) ಹಾಕಿರುತ್ತಾರೆ. ಕೈಯಲ್ಲಿ ಒಂದು ಚೌಕವಿರುತ್ತದೆ. ಕಾಲಿಗೆ ಗೆಜ್ಜೆಯನ್ನು ಕಟ್ಟಿರುತ್ತಾರೆ. ಈ ಕುಣಿತಕ್ಕೆ ವಿಶಿಷ್ಟವಾದ ಚಕ್ರ ಬಳೆಯ ಲಯ ಮತ್ತು ಗತ್ತಿಗೆ ಅನುಗುಣವಾಗಿ ಕುಣಿಯುತ್ತಾರೆ. ಕೆಲವು ಕಡೆಗಳಲ್ಲಿ ಡೋಲು, ಶೃತಿ, ಓಲಗ, ಕೈತಾಳ, ಗಿಡಿ ಮತ್ತು ಎರಡು ಮೂರು ತಮಟೆಗಳನ್ನು ಬಳಸುವುದುಂಟು.

ಕಲಾವಿದರು ಒಂದೇ ಸಾಲಿನಲ್ಲಿ, ಹಲವು ಸಾಲುಗಳಲ್ಲಿ ಅಥವಾ ವೃತ್ತಾಕಾರದಲ್ಲಿ ನಿಂತು ಕುಣಿಯುತ್ತಾರೆ. ಕಾಲಿನ ಚಲನೆ ನಿಧಾನವಾಗಿ ಆರಂಭವಾಗಿ ಕ್ರಮೇಣ ತೀವ್ರಗೊಳ್ಳುತ್ತ ಹೊಗುತ್ತದೆ. ಈ ಕುಣಿತದಲ್ಲಿ ಆಯಾಯಾ ಗತಿಗೆ ಮೀಸಲಾದ ನಿರ್ದಿಷ್ಟ ಹೆಜ್ಜೆಗಳ ಗಣನೆಯಿರುವ ನಾನಾ ಬಗೆಯ ಗತಿಗಳಿವೆ. ಇವುಗಳಲ್ಲಿ ಮಾರಮ್ಮನ ಗತಿ, ತಿರುಗಣಿಗತಿ, ನಂದಿಕಂಬದ ಗತಿ, ಕುತಾಟದ ಗತಿ, ಬಾಬಯ್ಯ ಗತಿ, ಸೈಕಲ್ ಗತಿ, ಒಳಗತಿ, ಕೀಳುಸೀಮೆಯ ಗತಿ, ಬೈಸೆಗೆಗತಿ, ಕತ್ತರಗಾಲಗತಿ, ತಮ್ಮಡಿಗತಿ, ತಟ್ಟೆಜ್ಜೆ, ದೊಡ್ಡ ಹೆಜ್ಜೆ, ಚಿಕ್ಕ ಹೆಜ್ಜೆ, ಮುಂತಾದ ಪ್ರಭೇಧಗಳಿವೆ.

ಕುಣಿತದ ಕ್ರಮ

ಬದಲಾಯಿಸಿ

ಪ್ರಾರ್ಥನಾ ಗತಿಯಾದ ಮಾರಮ್ಮನ ಗತಿಯಲ್ಲಿ 3 ಹೆಜ್ಜೆ ಹಾಕುತ್ತಾರೆ. ಎಡದಿಂದ ಬಲಕ್ಕೆ ಮತ್ತು ಬಲದಿಂದ ಎಡಕ್ಕೆ ಮೂರು ಮೂರು ಹೆಜ್ಜೆ ಹೀಗೆ ಒಟ್ಟು 6 ಹೆಜ್ಜೆ ಹಾಕಿ ತಿರುಗುವುದು ತಿರುಗಣಗತಿ, ಎಡದ ಕಾಲನ್ನು 3 ಸಾರಿ ಬಲದ ಕಾಲನ್ನು 3 ಸಾರಿ ನೆಲಕ್ಕೆ ಕುಟ್ಟುವುದು ನಂದಿಕಂಬದ ಗತಿ, ಕೂತಾಟದ ಗತಿ ಮತ್ತು ಬಾಬಯ್ಯನ ಗತಿಗಳಲ್ಲಿ ಭಿನ್ನ ವಿನ್ಯಾಸದ 5 ಹೆಜ್ಜೆ ಗತಿಗಳಿವೆ. ಕುಣಿಯುವಾಗ ಕೈಗಳನ್ನು ಸೈಕಲ್ ಪೆಡಲಿನಂತೆ ಮೇಲೆ ಕೆಳಗೆ ಆಡಿಸುವುದರಿಂದ ಸೈಕಲ್ ಗತಿ ಎನ್ನುವ ಹೆಸರು ಬಂದಿದೆ. ಎಡಗಿರಿಕ, ಬಲಗಿರಿಕ, ಎನ್ನುವ ಒಳ ಭೇದಗಳಿರುವ ಕತ್ತರಗಾಲ ಗತಿಯಿದೆ.

ಕುಣಿಯುವಾಗ ಬಲಗೈ ಸೊಂಟದ ಮೇಲಿದ್ದರೆ ಎಡಗೈ ಮುಂದೆ ಚಾಚಿರುತ್ತದೆ. ಎಡಗೈ ಸೊಂಟದ ಮೇಲಿದ್ದರೆ ಬಲಗೈ ಮುಂದೆ ಚಾಚಿರುತ್ತದೆ. ಕುಣಿತದ ಪ್ರಾರಂಭ ಒಂದನೇಯ ಕಾಲದಲ್ಲಿರುತ್ತದೆ. ಮಧ್ಯಭಾಗ ಸ್ವಲ್ಪ ತ್ವರಿತಗೊಂಡು ಎರಡನೇಯ ಕಾಲಕ್ಕೆ ಬರುತ್ತದೆ, ಮುಂದುವರಿದ ಕುಣಿತ ತನ್ನ ಪರಾಕಾಷ್ಟೆಗೆ ಬಂದು ಮೂರನೇಯ ಕಾಲಕ್ಕೆ ಬರುತ್ತದೆ. ಕುಣಿತ ಬದಲಾಗುವ ಮತ್ತು ಮುಗಿಯುವ ಸಂದರ್ಭವನ್ನು ಕಾಕುಹಾಕಿ-ಹೋ ಎನ್ನುವ ಉದ್ಗಾರದ ಮೂಲಕ ಸೂಚಿಸುತ್ತಾರೆ.

ಉಲ್ಲೇಖ

ಬದಲಾಯಿಸಿ
  1. https://m.dailyhunt.in/news/india/kannada/webduniya+kannada-epaper-kanweb/maari+habbadallina+kunita+nodidira-newsid-115120319
  2. https://kannada.webdunia.com/article/karnataka-news/who-dumped-and-dug-in-the-festival-of-mari-119043000039_1.html
 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: