ಜಾತ್ರೆ
ದೇವರ ಜಾತ್ರೆಗಳು, ಗ್ರಾಮಗಳ ಒಂದು ಪ್ರಮುಖ ಪರಂಪರೆ. ಸಾಮಾನ್ಯವಾಗಿ ಒಂದು ಸಾರ್ವಜನಿಕ ಉದ್ದೇಶಕ್ಕಾಗಿ ಒಂದುಗೂಡುವಿಕೆಯನ್ನು ಜಾತ್ರೆ ಎಂದು ಪರಿಗಣಿಸಲಾಗುತ್ತದೆ.
ಪ್ರತಿ ಎರಡು ವರ್ಷಗಳಿಗೊಮ್ಮೆ ಸರ್ವತ್ರ ಸುಭಿಕ್ಷಾರ್ಥವಾಗಿ ಧಾರ್ಮಿಕ ಪರಂಪರೆಯಂತೆ ಪೂಜಾ-ಉತ್ಸವಗಳಿಂದೊಡಗೂಡಿದ ಶ್ರೀ ಮಾರಿಕಾಂಬಾ ಜಾತ್ರೆಯನ್ನು ಅತೀ ವಿಜ್ರಂಭಣೆಯಿಂದ ನಡೆಸಲಾಗುತ್ತದೆ. ಇದು ಭಾರತದಲ್ಲಿಯೇ ಅತೀದೊಡ್ಡ ಜಾತ್ರೆ, ಈ ಜಾತ್ರೆಗೆ ದೇಶದ ಮೂಲೆ ಮೂಲೆಗಳಿಂದ ಭಕ್ತಸಾಗರ ಹರಿದು ಬರುತ್ತದೆ. ಅನೇಕಾನೇಕ ಮನರಂಜನಾ ಕಾರ್ಯಕ್ರಮಗಳು ಜಾನಪದ ಕಲೆಗಳ ಪ್ರದರ್ಶನಗಳು, ರಸ್ತೆಯ ಬದಿಗಳಲ್ಲಿ ಬಗೆ ಬಗೆಯ ಅಂಗಡಿ ಮುಗ್ಗಟ್ಟುಗಳು, ಝಗ ಝಗಿಸುವ ದೀಪದ ಅಲಂಕಾರಗಳು ಜಾತ್ರೆಯ ಸೊಬಗನ್ನು ಹೆಚ್ಚಿಸುತ್ತವೆ.[೧]
Sirsi Fair ಸಿರ್ಸಿ ಜಾತ್ರೆ | |
---|---|
ಸ್ಥಿತಿ | ಸಕ್ರಿಯ |
ಪ್ರಕಾರ | ಜಾತ್ರೆ |
ಆವರ್ತನ | ಪ್ರತಿ 2 ವರ್ಷಕ್ಕೊಮ್ಮೆ |
ಸ್ಥಳ | ಸಿರ್ಸಿ |
ಸಕ್ರಿಯ ವರ್ಷಗಳು | 335–336 |
ಉದ್ಘಾಟನೆ | 1688 |
Founder | ಸಿರ್ಸಿ ಗ್ರಾಮಸ್ಥರು |
ಇತ್ತೀಚಿನ | 2022 |
ಹಿಂದಿನ | 2020 |
ಮುಂದಿನ | 2024 |
Organised by | ಸಿರ್ಸಿ ಮಾರಿಕಾಂಬಾ ದೇವಸ್ಥಾನ |
2022 | |
ಭಾರತದ ಅತಿದೊಡ್ಡ ಜಾತ್ರೆ |
ಸಿರ್ಸಿ ಶ್ರೀ ಮಾರಿಕಾಂಬಾ ದೇವಿ | |
---|---|
ಜಗದಂಬೆ ಶಕ್ತಿದೇವತೆ, ಮಾತೃದೇವತೆ, ಮಳೆದೇವತೆ. | |
ಇತರ ಹೆಸರುಗಳು | ಸಿರ್ಸಿ ಅಮ್ಮ ಮಾರಿಅಮ್ಮ ದುರ್ಗಾದೇವಿ |
ಸಂಲಗ್ನತೆ | ಪಾರ್ವತಿ |
ನೆಲೆ | ಸಿರ್ಸಿ |
ಮಂತ್ರ | ಓಂ ಶ್ರೀ ಸಿರ್ಸಿ ಮಾರಿಕಾಂಬೆಯೆ ನಮಃ |
ಸಂಗಾತಿ | ಶಿವ |
ವಾಹನ | ಸಿಂಹ |
ಗ್ರಂಥಗಳು | ಜಾನಪದ |
ಪ್ರದೇಶ | ಮಲೆನಾಡು |
ಹಬ್ಬಗಳು | ಸಿರ್ಸಿ ಜಾತ್ರೆ, ಹೊಳಿ, ಯುಗಾದಿ, ನವರಾತ್ರಿ, ವಿಜಯದಶಮಿ, ದುರ್ಗಾಪೂಜೆ, |
ಜನ್ಮಸ್ಥಳ | ಹಾನಗಲ್ |
- ವಿಧಿ ವಿಧಾನಗಳು
ಸಿರ್ಸಿಯ ಜಾತ್ರೆ ೯ ದಿನಗಳ ಕಾಲ ಜರುಗುವ ಅದ್ದೂರಿ ಜಾತ್ರೆ ಇಲ್ಲಿ ಜಾತ್ರೆ ಪ್ರಾರಂಭ ಆಗುವ ಎರಡು ತಿಂಗಳು ಮೊದಲಿನಿಂದಲೆ ಜಾತ್ರೆಯ ವಿಧಿ ವಿಧಾನಗಳು ಪ್ರಾರಂಭವಾಗುತ್ತವೆ. ಜಾತ್ರೆಯ ಮುಹೂರ್ತ ನಿಶ್ಚಯಿಸಲು ಪುಷ್ಯ ಮಾಸದ ಒಂದು ದಿನ ವಿಶೇಷ ಸಭೆ ಕರೆಯಲಾಗುತ್ತದೆ. ಈ ಸಭೆಯಲ್ಲಿ ಊರಿನ ಗಣ್ಯರು, ಸಾರ್ವಜನಿಕರು,ಬಾಬುದಾರರು, ಧರ್ಮದತ್ತಿ ಗಳು ಭಾಗವಹಿಸಿರುತ್ತಾರೆ. ಜಾತ್ರೆಯ ದಿನ ನಿಗದಿಯಾದ ನಂತರ ಸಂಪ್ರದಾಯದಂತೆ ಜಾತ್ರೆಯ ಪೂರ್ವದ ಮೂರು ಮಂಗಳವಾರ ಎರಡು ಶುಕ್ರವಾರದ ದಿನಗಳಂದು ಐದು ಹೊರಬೀಡುಗಳು ಆಗುತ್ತವೆ.
ಹೊರಬೀಡು ಎಂದರೆ ರಾತ್ರಿ ಗಡಿ ಗದ್ದುಗೆಗಳಿಗೆ ಹೋಗಿ ಜಗನ್ಮಾತೆಯ ಸೇವೆಗೆ ಉಪಯೋಗಿಸುವ ಆಯುಧಗಳು ವಾದ್ಯಗಳು, ಕಹಳೆ, ಹಲಗೆ, ದೀವಟಿಗೆ ಮೊದಲಾದವುಗಳನ್ನು ದೇವಿಯ ಎದುರಿಟ್ಟು ಪೂಜಿಸಿ ಪ್ರಾರ್ಥಿಸುವುದು. ಐದು ಹೊರಬೀಡಿನಲ್ಲಿ ಮೂರು ಮಂಗಳವಾರಗಳಂದು ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ಮೆರವಣಿಗೆಯೊಂದಿಗೆ ಪೂರ್ವ ದಿಕ್ಕಿನ ಕಡೆಗೆ ಹೋದರೆ, ಉಳಿದೆರಡು ಶುಕ್ರವಾರ ಪಡಲಿಗೆಯು ಉತ್ತರ ದಿಕ್ಕಿನ ಗಡಿಯ ನಿಶ್ಚಿತ ಗದ್ದುಗೆಗೆ ಹೋಗುತ್ತದೆ. ಎಲ್ಲ ಹೊರಬೀಡಿನಲ್ಲಿ ರಾತ್ರಿ ಮೆರವಣಿಗೆಗಳು ಶ್ರೀ ದೇವಿಗೆ ಉಡಿ ತುಂಬಿದ ನಂತರ ಮರ್ಕಿ ದುರ್ಗಿ ದೇವಸ್ಥಾನಕ್ಕೆ ಹೊಗುವವು ಅಲ್ಲಿ ದೇವತೆಗಳಿಗೆ ಉಡಿ ಸಮರ್ಪಣೆಯಾದ ನಂತರ ಜಾತ್ರೆಯ ಗದ್ದುಗೆಗೆ ಹೋಗಿ ಅಲ್ಲಿ ಹೊರಬೀಡಿನನುಗುಣವಾಗಿ ಉತ್ಸವ ಮೂರ್ತಿಯನ್ನು ಪಡಲಿಗೆಯನ್ನು ಇಟ್ಟು ಪೂಜಿಸುತ್ತಾರೆ. ಮಂಗಳವಾರದ ಹೋರಬೀಡುಗಳಲ್ಲಿ ಪಲ್ಲಕ್ಕಿಯು ಪುರ್ವ ದಿಕ್ಕಿನ ಕೊನೆಯ ಗದ್ದುಗೆಗೆ ಬರುತ್ತದೆ. ನಂತರ ಮೆರವಣಿಗೆಯು ಪೂನಃ ಮರ್ಕಿ ದುರ್ಗಿ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ ಮಾರಿಗುಡಿಗೆ ಹೋಗಿ ಪೂಜೆ ನೆರವೇರಿಸಿ ವಿಸರ್ಜನೆಯಾಗುತ್ತದೆ.
ಈ ಜಾತ್ರೆಯಲ್ಲಿ ಅಮ್ಮನವರು ಸವಾರಿ ಮಾಡುವ ರಥವನ್ನು ಕಟ್ಟುವುದು ತುಂಬಾ ವಿಶೇಷ. ನಾಲ್ಕನೆ ಹೊರಬೀಡಿನ ಮರುದಿನ ಮಂಗಳವಾದ್ಯದೊಂದಿಗೆ ಕಾಡಿಗೆ ಹೋಗಿ ಮೊದಲೆ ನಿಶ್ಚಯಿಸಿದ 'ತಾರಿ' ಮರವನ್ನು ಕಡಿಯುತ್ತಾರೆ. ನಂತರ ಐದನೇ ಹೊರಬೀಡಿನ ದಿನ ಮುಂಜಾನೆ ರಷ್ಮಿ ಮೂಡವ ಸಮಯದಲ್ಲಿ ಮಂಗಳವಾದ್ಯದೊಂದಿಗೆ ಮೆರವಣಿಗೆಯ ಮುಕಾಂತರ ಮರವನ್ನು ತಂದು ದೇವಾಲಯದ ಎದರು ಪೂಜೆ ಸಲ್ಲಿಸಲಾಗುತ್ತದೆ. ಜಾತ್ರೆ ಪ್ರಾರಂಭವಾಗುವ ಏಳು ದಿನಗಳ ಮೊದಲೆ ರಥ ಕಟ್ಟಲು ಪ್ರಾರಂಭಿಸುತ್ತಾರೆ ಬಾಬುದಾರರು ಬಡಿಗೆರರು ಆಚಾರಿಗಳು ಉಪ್ಪಾರರು ರಥ ಕಟ್ಟುವ ಕಾರ್ಯ ಮಾಡುತ್ತಾರೆ.
ಹೊರಬೀಡಿನ ನಂತರ ಮಾರಿ ಕೋಣವನ್ನು ಮೆರೆವಣಿಗೆ ಮುಖಾಂತರ ಮರ್ಕಿ ದುರ್ಗಿ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ, ನಂತರ ಅಲ್ಲಿಂದ ಗದ್ದುಗೆಯತ್ತ ಸಾಗುತ್ತದೆ ಅಲ್ಲಿ ಅಸಾದಿಯರು ಮತ್ತು ಮೇತ್ರಿಯರು ರಂಗವಿಧಾನ ನೆರೆವೆರಿಸಿ ಪಟ್ಟದ ಕೋಣಕ್ಕೆ ಕಂಕಣ ಧಾರಣೆ ಮಾಡುತ್ತಾರೆ ಇದನ್ನು ಅಂಕೆ ಹಾಕುವುದು ಎನ್ನುತ್ತಾರೆ. ಅಂಕೆ ಹಾಕಿದ ದಿನ ಅಮ್ಮನವರ ವಿಗ್ರಹ ವಿಸರ್ಜನೆ ಮಾಡಿ ಬಣ್ಣಕ್ಕೆ ಕಳುಹಿಸುವ ಸಂಪ್ರದಾಯ ಇರುತ್ತದೆ.
ಜಾತ್ರೆಯ ಗದ್ದುಗೆಯಲ್ಲಿ ನಾಡಿಗ ಬಾಬುದಾರರಿಂದ ಮಂಗಳಾರತಿ ನಡೆಯುತ್ತದೆ ಈ ಮಂಗಳಾರಾತಿಯಿಂದ ಒಂದು ವಿಶೇಷ ಹಣತೆ ಹಚ್ಚುತ್ತಾರೆ ಈ ಹಣತೆಯನ್ನು ಜಾತ್ರೆ ಮುಗಿಯುವವರೆಗೆ ಶಾಂತವಾಗದಂತೆ ಕಾಯಬೇಕು ಮೇಟಿಯವರು ದೀಪ ಆರದಂತೆ ಕಾಯುವ ಕೆಲಸ ಮಾಡುತ್ತಾರೆ. ಇದನ್ನು ಮೇಟ ದೀಪ ಎನ್ನುತ್ತಾರೆ
ಅಂಕೆ ಹಾಕಿದ ನಂತರ ಬರುವ ಮೊದಲ ಮಂಗಳವಾರ ಶ್ರೀದೇವಿಗೆ ಕಲ್ಯಾಣ ಮಹೋತ್ಸವ ಮಾಡಲಾಗುತ್ತದೆ. ಅದೆ ದಿನ ರಥಕ್ಕೆ ಕಳಸಾರೋಹಣ ನೆರವೇರುತ್ತದೆ. ಶ್ರೀ ದೇವಿಯ ಮದುವೆಯ ಸಮಾರಂಭದಲ್ಲಿ ವಿಶೆಷವಾಗಿ ನಾಡಿಗರು, ಬಾಬುದಾರರು ಊರ ಗಣ್ಯರು ಸಕಲ ಭಕ್ತಾದಿಗಳು ಪಾಲ್ಗೊಳ್ಳುತ್ತಾರೆ ಶ್ರೀದೇವಿಯು ಸರ್ವಾಲಂಕಾರ ಭುಷಿತಳಾಗಿ ರಾರಜಿಸುತ್ತಿರುತ್ತಾಳೆ. ಶ್ರೀ ದೇವಿಯ ಮದುವೆಯ ಸಂಪ್ರದಾಯಂದತೆ ಶ್ರೀ ದೇವಿಗೆ ಮಂಗಳ ಸೂತ್ರ ಧಾರಣೆ, ಗುಡಿಗಾರರ ದ್ರಷ್ಟಿ ಪೂಜೆ, ನಾಡಿಗರ ಪೂಜೆ , ಚಕ್ರಸಾಲಿ ಪೂಜೆ ,ಕೇದಾರಿಮನೆತನದ ಪೂಜೆ ಹಾಗು ಪೂಜಾರರ ಪೂಜೆಗಳು ನೆರವೇರುತ್ತವೆ. ಈ ಕಲ್ಯಾಣೊತ್ಸವದಲ್ಲಿ ಘಟ್ಟದ ಕೆಳಗಿನ ಜನರು ಹಾಗು ಬಯಲು ಸೀಮೆಯ ಲಂಬಾಣಿ ಜನಾಗಂದ ಜನರು ವಿಶೇಷವಾಗಿ ಮಹಿಳೆಯರು ತಮ್ಮ ಸಂಪ್ರದಾಯ ಉಡುಗೆ ಧರಿಸಿ ನೃತ್ಯ ಮಾಡುವುದುದು ಮತ್ತು ಸಂಗೀತ ವಾದ್ಯಗಳನ್ನು ನುಡಿಸುವುದು ಮದುವೆಯ ಸಂಭ್ರಮಕ್ಕೆ ಮತ್ತಷ್ಟು ಮೆರಗು ತಂದು ಕೊಡುತ್ತದೆ.
ಬುಧವಾರ ಮುಂಜಾನೆ ಶ್ರೀದೇವಿಯನ್ನು ರಥದ ಮೆಲೆ ಪ್ರತಿಷ್ಠಾಪನೆ ಮಾಡುವ ಮೊದಲು ದೇವಾಲಯದ ಮುಂಭಾಗದ ಭೂತರಾಜನಿಗೆ ಸಾತ್ವಿಕ ಬಲಿ ಸಮರ್ಪಣೆ ಮಾಡಲಾಗುತ್ತದೆ. ರಥೋತ್ಸವದೊಂದಿಗೆ ಶ್ರೀದೇವಿಯ ಶೋಭಾಯಾತ್ರೆ ಅದ್ದೂರಿಯಾಗಿ ಮಾರಿಗುಡಿಯಿಂದ ಊರ ಮದ್ಯದ ಬಿಡಕಿ ಬೈಲಿನ ಜಾತ್ರಾ ಗದ್ದುಗೆಗೆ ಬಂದು ತಲುಪುತ್ತದೆ. ಶ್ರೀ ದೇವಿಯ ಉ ಶೋಭಾಯಾತ್ರೆಯಲ್ಲಿ ಬರುವಾಗ ಭಕ್ತರ ಭಕ್ತಿಯ ಪರಾಕಾಷ್ಠೆಯ ತುತ್ತತುದಿಯಲ್ಲಿರುತ್ತದೆ ಜೋಗತಿಯರು ನೃತ್ಯ ಮಾಡುತ್ತಿರುತ್ತಿದ್ದರೆ ಅಸಾದಿಯರ ಕೋಲಾಟ, ಡೊಳ್ಳು ಕುಣಿತ, ವಾಲಗ ಕಹಳೆಯ ನಿನಾದ ಝೇಂಕರಿಸುತ್ತಿರುತ್ತದೆ.
ಇತರ ಭಕ್ತರು ರಥಕ್ಕೆ ಬಾಳೆಹಣ್ಣನ್ನು ಹಾಕುತಿದ್ದರೆ ಇನ್ನೂ ಕೆಲ ಭಕ್ತರು ಹಾರುಗೋಳಿ ಅಂದರೆ ಕೋಳಿಯನ್ನು ಹಾರಿ ಬಿಡುತ್ತರೆ. ಶೋಭಾಯಾತ್ರೆ ಮುಗಿದ ಮೇಲೆ ಅಮ್ಮನವರನ್ನು ಜಾತ್ರಾ ಗದ್ದುಗೆಯಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ೮ ದಿನಗಳ ಕಾಲ ಜಗನ್ಮಾತೆ ಸಕಲ ಸರ್ವಾಲಂಕಾರ ಭುಷಿತಳಾಗಿ ನಗರ ಮದ್ಯಭಾಗದಲ್ಲಿನ ಗದ್ದುಗೆಯ ಮೇಲೆ ಕುಳಿತು ಜನರಿಗೆ ದರ್ಶನ ಭಾಗ್ಯ ಕರುಣಿಸುತ್ತಾಳೆ. ಶ್ರೀದೇವಿಗೆ ಭಕ್ತರು ಸಲ್ಲಿಸಬೇಕಾದ ಸೇವೆಗಳೆಲ್ಲವು ಮರುದಿನ ಗುರುವಾರದಿಂದ ಪ್ರಾರಂಭವಾಗುತ್ತದೆ. ೮ ದಿನಗಳ ಕಾಲ ಅದ್ದೂರಿಯಾಗಿ ನಡೆಯುವ ಜಾತ್ರೆಗೆ ಪ್ರತಿನಿತ್ಯವು ಲಕ್ಷಾಂತರ ಜನ ಬರುತ್ತಾರೆ.
ಜಾತ್ರೆ ಪ್ರಾರಂಭವಾದ ೮ ದಿನಗಳ ನಂತರ ಬುಧವಾರ ಜಾತ್ರಾ ವಿಸರ್ಜನಾ ವಿಧಿವಿಧಾನಗಳು ನೆರವೇರುತ್ತವೆ ನಾಡಿಗ ಬಾಬುದಾರರಿಂದ ಕೊನೆಯ ಮಂಗಳಾರತಿ, ಶ್ರೀದೇವಿಯನ್ನು ಗದ್ದುಗೆಯಿಂದ ಇಳಿಸಿ ಮಂಟಪದ ಮಧ್ಯಭಾಗದಲ್ಲಿ ಕುಡಿಸಿದಾಗ ಅಸಾದಿಯರು ಹುಲುಸು ಪ್ರಸಾದವನ್ನು ಪೂಜಿಸಿ ರೈತರಿಗೆ ವಿತರಿಸುತ್ತಾರೆ ರೈತರು ಅದನ್ನು ತಮ್ಮ ಹೊಲದಲ್ಲಿ ಬಿತ್ತುತ್ತಾರೆ. ಶ್ರೀ ದೇವಿಯು ಜಾತ್ರೆಯ ಮಂಟಪದಿಂದ ರಥದಲ್ಲಿ ಮರಳುವುದಿಲ್ಲ ಬದಲಾಗಿ ವಿಶೆಷವಾಗಿ ಸಿದ್ದಗೊಳಿಸಿದ ಅಟ್ಟಲಿನಲ್ಲಿ ಮರಳುತ್ತಾಳೆ. ಜಾತ್ರೆ ಕೊನೆಯ ವಿಧಾನಗಳಲ್ಲಿ ಮಾತಂಗಿ ಚಪ್ಪರ ಸುಡುವುದು ಒಂದು, ದೇವಿ ಗದ್ದುಗೆಯಿಂದ ಮೆರವಣಿಗೆಯಲ್ಲಿ ಹೋಗುವಾಗ ದೃಷ್ಠ ಸಂಹಾರ ಸಂಕೇತವಾಗಿ ಮಾತಂಗಿ ಚಪ್ಪರ ಸುಡುತ್ತಾರೆ. ಜಾತ್ರೆಯ ಕಟ್ಟಕಡೆಯ ವಿಧಾನ ಪೂರ್ವ ದಿಕ್ಕಿನ ಗಡಿಯ ಗದ್ದುಗೆಗೆ ಹೋಗಿ ಮುಕ್ತಾಯದ ವಿಧಿ ನೆರೆವೆರಿಸಲಾಗುತ್ತದೆ ಅಲ್ಲಿ ಶ್ರೀದೇವಿಯ ಮೂರ್ತಿಯನ್ನು ವಿಸರ್ಜಿಸಲಾಗುತ್ತದೆ. ಹೀಗೆ ಜಾತ್ರೆ ಸಂಪನ್ನಗೊಳ್ಳುತ್ತದೆ.
ಈ ಜಾತ್ರೆಯಲ್ಲಿ ಜನರಿಗೆ ಮನರಂಜನೆಗೆನು ಕೊರತೆ ಇಲ್ಲ ಮಕ್ಕಳು ಯುವಕರಿಂದ ಹಿಡಿದು ವೃದ್ದರಿಗೆಲ್ಲರಿಗು ಇಲ್ಲಿ ಮನರಂಜನೆಯ ಮಹಾಪೂರವೆ ಇರುತ್ತದೆ. ಕಲಾಸಕ್ತರಿಗೆ ವಿವಿಧ ನಾಟಕ ಕಂಪನಿಗಳಿಂದ ನಾಟಕ, ಯಕ್ಷಗಾನ, ಸರ್ಕಸ್ಸುಗಳು ಇರುತ್ತವೆ , ದೈತ್ಯ ತೊಟ್ಟಿಲು ಜೋಕಾಲಿಗಳು ಮತ್ತು ವಿವಿಧ ಆಟಿಕೆಗಳು , ಜಾದು ಚಮತ್ಕಾರಗಳು, ಶ್ವಾನ ಪ್ರದರ್ಶನ , ಪುಸ್ತಕ ಪ್ರಿಯರಿಗೆ ಪುಸ್ತಕ ಪ್ರದರ್ಶನ, ಕೆರೆಯಲ್ಲಿ ಬೋಟಿಂಗ್ , ತಿಂಡಿ ಪ್ರಿಯರಿಗೆ ವಿವಿಧ ಭಗೆಯ ತಿನುಸುಗಳು, ಮಹಿಳೆಯರ ಪ್ರಿಯ ಸೌಂದರ್ಯ ವರ್ಧಕ ಆಭರಣ ಬೆಳೆಗಳ ಮಳಿಗೆಗಳು, ಬಟ್ಟೆ ಬ್ಯಾಗು ಮಕ್ಕಳ ಆಟಿಕೆಗಳ ಮಳಿಗೆಗಳು, ಮಹಿಳಿಯರಿಗೆ ಗೃಹೊಪಕರಣಗಳ ಮಳಿಗೆಗಳು ಹೀಗೆ ಸಕಲ ರೀತಿಯ ಮನರಂಜನೆ ಈ ಜಾತ್ರೆಯಲ್ಲಿ ಇರುತ್ತದೆ.
ವಿಶೆಷವಾಗಿ ಈ ಜಾತ್ರೆಯಲ್ಲಿ ಎಲ್ಲೂ ಪ್ರಾಣಿ ಹಿಂಸೆ ಇಲ್ಲ ,ಬಹುಶಃ ಒಂದು ಗ್ರಾಮ ದೇವತೆ ಈಗ ಇಡಿ ನಾಡಿಗೆ ಅಧಿದೇವತೆ ಆಗಿರೋದನ್ನ ನಾವು ಸಿರ್ಸಿ ಯಲ್ಲಿ ಮಾತ್ರ ಕಾಣಬಹುದು.
ಸಿರ್ಸಿಗೆ ಪರ ಊರಿನಿಂದ ಬರುವ ಭಕ್ತಾದಿಗಳಿಗೆ ಕರ್ನಾಟಕ ರಾಜ್ಯ ಸಾರಿಗೆಯ ಸಂಸ್ಥೆಯು ಕುಂದಾಪುರ, ಬೈಂದೂರು, ಕಾರವಾರ, ಶಿವಮೊಗ್ಗ, ಸಾಗರ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಹಾವೇರಿ ದಾವಣಗೆರೆಗಳಿಂದ ಹೆಚ್ಚಿನ ಬಸ್ ಕಲ್ಪಿಸಿರುತ್ತದೆ, ಬಂದ ಭಕ್ತಾದಿಗಳಿಗೆ ದೇವಸ್ಥಾನದಲ್ಲಿ ಊಟದ ವ್ಯವಸ್ಥೆ ಇರುತ್ತದೆ , ಮತ್ತು ನಗರದ ಅಲ್ಲಲ್ಲಿ ಭಕ್ತರಿಂದ ಉಚಿತ ಮಜ್ಜಿಗೆ ಪಾನಕಗಳು ಮತ್ತು ದಾಸೋಹ ಸೇವೆಗಳು ಇರುತ್ತವೆ.
ಉಲ್ಲೇಖಗಳು
ಬದಲಾಯಿಸಿ- ↑ "ಮಾರಿಕಾಂಬಾ ಜಾತ್ರೆ". Archived from the original on 2022-11-14. Retrieved 2022-11-14.
- ↑ "ಮಾರಿಕಾಂಬಾ ಜಾತ್ರೆ".