ಬಲಿ

ಹಿಂದೂ ಪುರಾಣದಲ್ಲಿ ಬರುವ ಒಬ್ಬ ಅಸುರ ಚಕ್ರವರ್ತಿ

ಬಲಿ ಹೆಸರಿನ ಇಬ್ಬರು ಪ್ರಮುಖ ವ್ಯಕ್ತಿಗಳೆಂದರೆ:

1. ಪ್ರಹ್ಲಾದನ ಮೊಮ್ಮಗ. ವಿರೋಚನನ ಮಗ. ಈತನ ಮಗನೇ ಬಾಣಾಸುರ. ಇಂದ್ರಸೇನನೆಂಬುದು ನಾಮಾಂತರ. ಹೆಂಡತಿ ವಿಂದ್ಯಾವಳಿ. ಇಂದ್ರನಿಂದ ಸಂವೃತನಾದ ಈತ ಶುಕ್ರಾಚಾರ್ಯನ ಮೃತ ಸಂಜೀವಿನಿ ಭಾವದಿಂದ ಬದುಕಿ ವಿಶ್ವಜಿತ್ತೆಂಬ ಯಾಗ ಮಾಡಿ ಅಗ್ನಿದೇವನಿಂದ ರಥಾಶ್ವ ಧ್ವಜಗಳನ್ನೂ ಪಿತಾಮಹ ಪ್ರಹ್ಲಾದನಿಂದ ದಿವ್ಯಧನುಸ್ಸು ಅಕ್ಷಯ ತೂಣೀರಗಳನ್ನೂ ಪಡೆದು ಇಂದ್ರನ ಮೇಲೆ ಯುದ್ಧಮಾಡಿ ಸ್ವರ್ಗರಾಜ್ಯವನ್ನು ವಶಪಡಿಸಿಕೊಂಡ. ಅನಂತರ ನರ್ಮದಾ ತೀರದಲ್ಲಿ ಅಶ್ವಮೇಧಯಾಗ ಮಾಡತೊಡಗಿದ. ಇದನ್ನು ಕಂಡು ಹೆದರಿದ ಬ್ರಹ್ಮಾದಿಗಳ ಮೊರೆಯನ್ನು ಕೇಳಿ ವಿಷ್ಣು ಆದಿತಿದೇವಿಯಲ್ಲಿ ವಾಮನರೂಪದಿಂದ ಅವತರಿಸಿ ಉಪನಯನಾನಂತರ ಬಲಿಚಕ್ರವರ್ತಿಯ ಬಳಿಗೆ ಬಂದು ಬಲಿಯಿಂದ ಮೂರು ಹೆಜ್ಜೆ ಭೂಮಿಯನ್ನು ದಾನವಾಗಿ ಕೇಳಿದ. ದಾನಶೂರನಾದ ಬಲಿ ವಿಷ್ಣುವಿನ ಕಪಟವನ್ನು ತಿಳಿಯದೆ, ರಾಜಗುರು ಶುಕ್ರಾಚಾರ್ಯರ ಮಾತನ್ನು ಲೆಕ್ಕಿಸದೆ ಮೂರು ಹೆಜ್ಜೆ ಭೂಮಿಯನ್ನು ದಾನವಾಗಿ ನೀಡಲು ಒಪ್ಪಿದ. ದಾನವನ್ನು ಪಡೆದ ವಾಮನ ಭೂಮ್ಯಂತರಿಕ್ಷಗಳನ್ನು ಎರಡು ಹೆಜ್ಜೆಗಳಲ್ಲಿ ಅಳೆದು ಮತ್ತೊಂದು ಹೆಜ್ಜೆಯನ್ನು ಎಲ್ಲಿಡಲೆಂದು ಕೇಳಿದಾಗ ವಚನಭ್ರಷ್ಟನಾಗದ ಬಲಿ ತನ್ನ ತಲೆಯ ಮೇಲೆ ಇಡಬೇಕೆಂದು ಹೇಳಿದ. ಅದರಂತೆ ವಿಷ್ಣು ತನ್ನ ಮೂರನೆಯ ಹೆಜ್ಜೆಯನ್ನು ಬಲಿಯ ತಲೆಯ ಮೇಲಿಟ್ಟು ಆತನನ್ನು ಪಾತಾಳಕ್ಕೆ ತುಳಿದ.

ಹೀಗೆ ಬಲಿ ಪಾತಾಳದೊಳಕ್ಕೆ ಇಳಿಯುತ್ತಿರುವಾಗ ತನಗೆ ಮೋಕ್ಷ ಯಾವಾಗ ಎಂದು ಕೇಳಿದನೆಂದೂ ಆಗ ವಿಷ್ಣು ಭೂಮಿಯ ಮೇಲೆ ಜನರ ಸುಳಿವಿಲ್ಲದಿದ್ದಾಗ ನಿನಗೆ ಮೋಕ್ಷ ದೊರೆಯುತ್ತದೆ ಎಂದೂ ಹೇಳಿದನೆಂದು ಜನಪದ ನಂಬಿಕೆ. ಅದರಂತೆ ಬಲಿ ಪ್ರತಿವರ್ಷ ನರಕಚತುರ್ದಶಿಯ ದಿನ ಭೂಮಿಯಿಂದ ಹೊರಬಂದು ತುಂಬೆಗಿಡಕ್ಕೆ ಏಣಿ ಹಾಕಿಕೊಂಡು ಭೂಮಿಯ ಮೇಲೆ ಜನರಿರುವರೊ ಇಲ್ಲವೋ ಎಂದು ನೋಡುತ್ತಾನಂತೆ. ಜನರಿರುವುದನ್ನು ತೋರಿಸುವುದಕ್ಕಾಗಿಯೇ ಆ ದಿನ ಕೂಗುಹಾಕುತ್ತಾ ಹೊಲದ ನಾಲ್ಕು ಮೂಲೆಗಳಿಗೂ ಬೂದಿಯನ್ನು ಬಿಡುವುದು ಈಗಲೂ ಕೆಲವು ಕಡೆ ರೂಢಿಯಲ್ಲಿದೆ. ಅದರಿಂದಲೇ ಬಲಿ ಪಾಡ್ಯಮಿ ಜೊತೆಗೇ ನರಕ ಚತುದರ್ಶಿಯನ್ನೂ ಅಚರಿಸಲಾಗುತ್ತದೆ.

2. ಒಬ್ಬ ಕ್ಷತ್ರಿಯ. ಚಂದ್ರವಂಶದ ಶಿಬಿರಾಜನ ಮಗ. ದೀರ್ಘತಮ ಎಂಬ ಮುನಿಯನ್ನು ಆತನ ಹೆಂಡತಿ ಪ್ರದ್ವೇಷಿಣಿ ತನ್ನ ಮಕ್ಕಳ ಮೂಲಕ ನದಿಗೆ ತಳ್ಳಿಸಿದಾಗ ನದಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಮುನಿಯನ್ನು ಈತ ರಕ್ಷಿಸಿದ. ದೀರ್ಘತಮ ಹುಟ್ಟು ಕುರುಡನೆಂದು ತಿಳಿದ ಮೇಲೆ ಆತನನ್ನು ತನ್ನ ಅರಮನೆಗೆ ಕರೆದುಕೊಂಡು ಬಂದು ಆಶ್ರಯ ನೀಡುತ್ತಾನೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಬಲಿ&oldid=959843" ಇಂದ ಪಡೆಯಲ್ಪಟ್ಟಿದೆ