ಮಂಗಮಾನವ ಎಂದರೆ ಆಧುನಿಕ ಮಾನವನಿಗೂ ಬಾಲವಿಲ್ಲದ ಮಂಗಗಳಿಗೂ ನಡುವಣ ಹಂತದ ಲಕ್ಷಣಗಳಿರುವ ಪ್ರಾಣಿ (ಏಪ್ ಮ್ಯಾನ್). ಪ್ರೈಮೇಟ್ ಗಣದ ಆಂತ್ರಪಾಯ್ಡಿಯ ಗುಂಪಿಗೆ ಸೇರಿದ ಇದನ್ನು ಮಂಗ (ವಾನರ), ಮಾನವನಾಗಿ ಪರಿವರ್ತನೆಹೊಂದುವ ಹಂತಕ್ಕೆ ಸೇರಿಸಲಾಗಿದೆ. ಆಯುಧಗಳ ನಿರ್ಮಾಣ ಮತ್ತು ಬಳಕೆ ಗೊತ್ತಿದ್ದು ನೇರವಾದ ನಿಲವುಳ್ಳ ಲಕ್ಷಣಗಳಿದ್ದರೂ ಈತನ ಕಪಾಲ ಒಳಪಿಡಿ (ಕ್ರೇನಿಯಲ್ ಕೆಪಾಸಿಟಿ) ಕಿರಿದಾಗಿದ್ದುದರಿಂದ (ಸುಮಾರು 900 ಸಿ ಸಿ), ಈತ ಮಾನವ ವರ್ಗಕ್ಕೆ ಸೇರುವುದಿಲ್ಲವೆಂದು ಹಲವರ ವಾದ. 1891ರಲ್ಲಿ ಮೊತ್ತ ಮೊದಲಿಗೆ ಜಾವದ ಟ್ರೆನಿಲ್ ಎಂಬಲ್ಲಿ ಈ ಮಾನವನ ಅವಶೇಷಗಳು (ಪಿತಿಕ್ಯಾಂತ್ರೊಪಸ್ ಇರೆಕ್ಟಸ್ ಮತ್ತು ಪಿ. ರೊಬಸ್ಟಸ್) ದೊರಕಿದುವು. ಅನಂತರ ಚೀನಾದ ಪೀಕಿಂಗ್ ಬಳಿಯ ಚೌಕೊಟಿಯನ್ ಗುಹೆಗಳಲ್ಲಿ 1000 ಸಿಸಿಗಳಷ್ಟು ಹಿರಿದಾದ ಕಪಾಲವಿದ್ದ ಮತ್ತು ಉಂಡೆಕಲ್ಲಿನ ಆಯುಧಗಳನ್ನೂ ಬೆಂಕಿಯನ್ನೂ ಉಪಯೋಗಿಸುತ್ತಿದ್ದ ಮಾನವನ ಅವಶೇಷಗಳು (ಪೀಕಿಂಗ್ ಮ್ಯಾನ್) ದೊರಕಿ ಈ ವಾದ ಕೊನೆಗೊಂಡು ಇವನನ್ನು ನೇರ ನಿಲವುಳ್ಳ ಮಂಗಮಾನವನೆಂದು ಹೆಸರಿಸಲಾಯಿತು.

ದೈಹಿಕ ಲಕ್ಷಣಗಳು ಬದಲಾಯಿಸಿ

ಮಂಗಮಾನವನ ಮುಖ ಚಪ್ಪಟೆಯಾಗಿದ್ದು ಮೇಲ್ಭಾಗ ಹಿಂಚಾಚಿಕೊಂಡಿದೆ. ಹುಬ್ಬಿನ ಮೂಳೆ ಮುಂಚಾಚಿದೆ. ಸಾಮಾನ್ಯವಾಗಿ ಮಂಗನ ಮುಖವನ್ನೇ ಹೋಲುತ್ತಿದ್ದರೂ ಹಲ್ಲುಗಳ ರಚನಾಕ್ರಮ ಆಧುನಿಕ ಮಾನವನ ರೀತಿಯದಾಗಿದೆ. ಈತ ಸಾಧಾರಣವಾಗಿ 170 ಸೆಂಮೀ ಎತ್ತರವಿದ್ದು ನಡಿಗೆಯ ರೀತಿಯಲ್ಲಿ ಆಧುನಿಕ ಮಾನವನನ್ನು ಹೋಲುತ್ತಿದ್ದ. ಚೀನದ ಮಂಗಮಾನವ ಜಾವದ ಮಂಗಮಾನವನಿಗಿಂತ ಮುಂದುವರಿದ ಹಂತಕ್ಕೆ ಸೇರಿದ್ದು. ದಪ್ಪ ಹುಬ್ಬು, ಎದ್ದು ಕಾಣುವ ಮೂಳೆಗಳನ್ನು ಪಡೆದಿದ್ದ.

ಆಹಾರ, ಸಾಮಾಜಿಕ ಜೀವನ ಬದಲಾಯಿಸಿ

ಜಾವದಲ್ಲಿ ಈ ಅವಶೇಷಗಳೊಂದಿಗೆ ಕಲ್ಲಿನ ಆಯುಧಗಳು ದೊರೆತಿರಲಿಲ್ಲ. ಚೀನದಲ್ಲಿ ಆಯುಧಗಳಲ್ಲದೆ ಇತರ ಪ್ರಾಣಿಗಳೂ ಬೂದಿ, ಇದ್ದಿಲು ಮುಂತಾದ ಬೆಂಕಿಯ ಕುರುಹುಗಳೂ ದೊರೆತಿದ್ದು ಇವು ಈ ಮಾನವನ ಸಾಂಸ್ಕೃತಿಕ ಲಕ್ಷಣಗಳನ್ನು ಸ್ಪಷ್ಟಪಡಿಸುತ್ತವೆ. ದೊಡ್ಡ ಪ್ರಾಣಿಗಳನ್ನು ಬೇಟೆಯಾಡಿ ಅವುಗಳ ಮಾಂಸಭಕ್ಷಣೆ ಮಾಡುತ್ತಿದ್ದ ಇವರಲ್ಲಿ ಸಾಮೂಹಿಕ ಸಹಕಾರೀ ಜೀವನ ಬೆಳೆದಿತ್ತೆಂದು ತಿಳಿಯುತ್ತದೆ. ಕೆಲಬಾರಿ ಸ್ವಜಾತಿಯವರನ್ನೇ ಚೀನ ಮಂಗಮಾನವ ಭಕ್ಷಿಸುತ್ತಿದ್ದನೆಂಬುದಕ್ಕೆ ಆಧಾರಗಳಿವೆ. ಅಲ್ಲದೆ ಕಾಡುಗಳಲ್ಲಿ ದೊರಕುತ್ತಿದ್ದ ಗೆಡ್ಡೆಗೆಣಸು, ಹಣ್ಣುಕಾಯಿಗಳನ್ನೂ ತಿನ್ನುತ್ತಿದ್ದ. ಈ ಮಂಗಮಾನವನ ಅವಶೇಷಗಳು ಮಧ್ಯ ಪ್ಲೈಸ್ಟೊಸೀನ್ ಯುಗಕ್ಕೆ ಸೇರಿವೆಯೆನ್ನಲಾಗಿದೆ.

ಏಷ್ಯಾದ ಹೊರಗೆ ಮಂಗಮಾನವ ಬದಲಾಯಿಸಿ

ಏಷ್ಯದಿಂದ ಹೊರಗೆ ಮಂಗಮಾನವ ಸಂತತಿ ನೆಲಸಿದ್ದಿತೇ ಎಂಬುದು ವಿವಾದಾತ್ಮಕವಾಗಿದ್ದರೂ 1907ರಲ್ಲಿ ಜರ್ಮನಿಯ ಹೈಡಲ್‌ಬರ್ಗ್ ಬಳಿ ಇತರ ಪ್ರಾಣಿಗಳ ಅವಶೇಷಗಳೊಂದಿಗೂ, 1954ರಲ್ಲಿ ಆಲ್ಜೀರಿಯದಲ್ಲಿ ಅಷ್ಯೂಲಿಯನ್‌ರಲ್ಲಿ ಕೈಗೊಡಲಿಗಳೊಂದಿಗೂ, 1960 ಟಾಂಗನೀಕದ ಓಲ್ಡುವೈ ಕೊಳ್ಳದಲ್ಲೂ, 1921ರಲ್ಲಿ ದಕ್ಷಿಣ ಆಫ್ರಿಕದ ರೊಡೀಸಿಯದಲ್ಲೂ, 1953ರಲ್ಲಿ ಸಾಲ್ಡಾನಾ ಬೇ ಎಂಬಲ್ಲೂ ದೊರಕಿದ ಅವಶೇಷಗಳನ್ನೂ ಈ ಗುಂಪಿಗೆ ಸೇರಿಸಬೇಕೆಂಬುದು ಬಹುಮಂದಿ ವಿದ್ವಾಂಸರ ಅಭಿಪ್ರಾಯ. ಆದ್ದರಿಂದ ಏಷ್ಯದ ಮಂಗಮಾನವ ಯೂರೊಪ್, ಆಫ್ರಿಕಗಳಿಗೂ ಪಸರಿಸಿದ್ದಂತೆ ಕಾಣುತ್ತದೆ. ಮಂಗಮಾನವ ಅನಂತರದ ಆಧುನಿಕ ಮಾನವಸಂತತಿಯ ಮೂಲಪುರುಷನಾಗಿರಬಹುದು.

ಹೆಚ್ಚಿನ ಓದಿಗೆ ಬದಲಾಯಿಸಿ

  • John de Vos, lecture The Dubois collection: a new look at an old collection. In Winkler Prins, C.F. & Donovan, S.K. (eds.), VII International Symposium ‘Cultural Heritage in Geosciences, Mining and Metallurgy: Libraries - Archives - Museums’: “Museums and their collections”, Leiden (The Netherlands), 19–23 May 2003. Scripta Geologic, Special Issue, 4: 267-285, 9 figs.; Leiden, August 2004.

ಹೊರಗಿನ ಕೊಂಡಿಗಳು ಬದಲಾಯಿಸಿ

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಮಂಗಮಾನವ&oldid=1192023" ಇಂದ ಪಡೆಯಲ್ಪಟ್ಟಿದೆ