ಆತ್ಮರಕ್ಷಣೆ, ಹೋರಾಟಕ್ಕೆ ಬಳಸುವ ಸಾಧನಗಳು ಮಾನವ ಜೀವನ ಸಂಕೀರ್ಣವಾದಂತೆಲ್ಲ ಆತ್ಮರಕ್ಷಣೆಯ ಮತ್ತು ಹೋರಾಟದ ಅಂಶಗಳೂ ಜಟಿಲವಾಗಿ ಅದಕ್ಕೆ ತಕ್ಕಂತೆ ಆಯುಧಗಳೂ ಮಾರ್ಪಡುತ್ತ ಬಂದಿವೆ. ಇಲ್ಲಿ ಆದಿಮಾನವನ ಮತ್ತು ಜನಪದದ ಆಯುಧಗಳ ಉಲ್ಲೇಖವಿದೆ. ಪ್ರಾಸಂಗಿಕವಾಗಿ ಕಾವ್ಯಗಳಲ್ಲಿನ ಆಯುಧಗಳ ಪ್ರಸ್ತಾಪವೂ ಬಂದಿದೆ. ಆಧುನಿಕ ಆಯುಧಗಳಿಗೆ ಮಾನವ ಜೀವನದ ಆವಶ್ಯಕತೆಗಳಲ್ಲಿ ಆಯುಧಗಳ ಪಾತ್ರ ಬಹು ದೊಡ್ಡದು. ಆದಿಮಾನವನಿಂದ ಆಧುನಿಕ ಮಾನವನವರೆಗೆ ಅವನ ಜೊತೆಯಲ್ಲಿ ಉಳಿದು ಬಂದಿರುವ ಅಗತ್ಯ ವಸ್ತುಗಳಲ್ಲಿ ಇವಕ್ಕೇ ಅಗ್ರಪ್ರಾಶಸ್ತ್ಯ. ಏಕೆಂದರೆ ಇವನಿಗೆ ಆಹಾರವನ್ನೊದಗಿಸುವ, ಶತ್ರುಬಾಧೆಯನ್ನು ನಿವಾರಿಸುವ, ಆತ್ಮರಕ್ಷಣೆಯನ್ನು ಮಾಡುವ ಸಾಧನಗಳಿವು. ಬದುಕಿನೊಡನೆ ನಿಕಟ ಸಂಬಂಧವನ್ನು ಹೊಂದಿರುವ ಆಯುಧಗಳು ಮಾನವ ಮಾತು ಕಲಿಯುವ ಪೂರ್ವದಿಂದಲೂ ಅವನ ಕೈಯಲ್ಲಿ ಉಳಿದಿವೆ. ನಾಗರಿಕತೆ ಬೆಳೆದಂತೆ, ಬದುಕು ವಿಕಾಸವಾದಂತೆ ಆಯುಧಗಳಲ್ಲಿಯೂ ಬೆಳೆವಣಿಗೆಯಾಗಿದೆ. ಆಧುನಿಕ ಮಾರಕಾಸ್ತ್ರಗಳು ಮಾನವನ ಬಹು ದೊಡ್ಡ ಸಾಧನಗಳಲ್ಲಿ ಮುಖ್ಯವಾದುವು.[೧]

ಆಯುಧಗಳ ಅಭ್ಯಾಸ

ಬದಲಾಯಿಸಿ

ಆದಿಮಾನವನಿಂದ ಅಣುಯುಗದ ಮಾನವನವರೆಗೆ ಆಯುಧಗಳ ಅಭ್ಯಾಸವೆಂದರೆ ಮಾನವ ನಾಗರಿಕತೆಯ ಅಭ್ಯಾಸವೇ ಆಗುತ್ತದೆ. ಪ್ರಾಣಿವರ್ಗದಿಂದ ಮಾನವನನ್ನು ಬೇರ್ಪಡಿಸಿ, ಸಮಸ್ತ ಜೀವಿಗಳ ಮೇಲೆ ಅವನ ಸ್ವಾಮ್ಯವನ್ನು ಇವು ಸಾಧಿಸಿ ಕೊಟ್ಟಿವೆ. ಅವನ ಪರಾಕ್ರಮ ಪ್ರದರ್ಶನಕ್ಕೆ, ಸುಖಸಂತೋಷಗಳನ್ನು ದೊರಕಿಸಿ ಕೊಡುವುದಕ್ಕೆ ಇವು ನೆರವಾಗಿವೆ. ಮೆಚ್ಚಿದ ವಧುವನ್ನು ವರಿಸಲು, ಸ್ವಯಂವರಗಳಲ್ಲಿ ಜಯಿಸಬೇಕಾಗಿದ್ದುದು ಆಯುಧ ವಿಶೇಷಗಳನ್ನೇ. ಮೃಗಯ ವಿಹಾರದ ಉತ್ಸಾಹವನ್ನೂ ಆನಚಿಧವನ್ನೂ ಶಯುಧಗಳು ತಂದೊಡ್ಡುತ್ತಿದ್ದುವು. ರಾಜ್ಯ, ಸಾಮ್ರಾಜ್ಯಗಳ ಸ್ಥಾಪನೆಗೆ, ಪತನಕ್ಕೆ ಕಾರಣವಾದ ಸಾಧನಗಳೂ ಇವೇ, ವೀರರ ಬಲಾಬಲಗಳನ್ನು ನಿರ್ಧರಿಸುವ ಮುಖ್ಯ ವಸ್ತುಗಳೂ ಆಯುಧಗಳೇ.ಹೀಗೆ ಕ್ಷತ್ರಿಯರ ಕ್ಷಾತ್ರ ವಿಜೃಂಭಿಸಲು ಪೂರಕವಾಗುತ್ತಿದ್ದ ಆಯುಧಗಳು ಸಾಮಾನ್ಯ ಜನರ ನಿತ್ಯಬಳಕೆಯ ವಸ್ತುಗಳೂ ಆಗಿ ಉಳಿದುಬಂದುವು. ರೈತನ ಆಯುಧಗಳಲ್ಲಿ ಬಹುಪಾಲು ವ್ಯವಸಾಯ ಸಾಧನಗಳೂ ಹೌದು. ಬೇಡರ, ಕಾಡುಜನರ, ಮೂಲನಿವಾಸಿಗಳ ನಿತ್ಯದ ಆಧಾರಸ್ತಂಭ ಆಯುಧಗಳು. ಬ್ರಾಹ್ಮಣ ಹಾಗೂ ವೈಶ್ಯ ವರ್ಗದವರು ಮನೆಬಳಕೆಯ ವಸ್ತುಗಳಲ್ಲಿ ಒಂದಲ್ಲ ಒಂದು ವಿಧದ ಆಯುಧ ವಿಶೇಷಗಳನ್ನು ಪಡೆದುಕೊಂಡೇ ಇದ್ದಾರೆ ಎಂದಮೇಲೆ ಸಮಸ್ತ ಮಾನವನ ಬದುಕಿನೊಡನೆ ಇವುಗಳ ನಿಕಟಸಂಬಂಧ ಏನು ಎಂಬುದು ವೇದ್ಯವಾಗುತ್ತದೆ.[೨]

ಪ್ರಥಮ ಶಿಲಾಯುಗ

ಬದಲಾಯಿಸಿ

ಮಾನವಜೀವನದ ಅರುಣೋದಯ ಕಾಲವೆನಿಸುವ ಪ್ರಥಮ ಶಿಲಾಯುಗದಲ್ಲಿಯೇ ಅನೇಕ ರೀತಿಯ ಕಲ್ಲಿನ ಆಯುಧಗಳನ್ನು ಮಾನವ ಬಳಸಿದ ನಿದರ್ಶನಗಳು ಜಗತ್ತಿನ ಎಲ್ಲ ಕಡೆಯೂ ನಡೆದ ಸಂಶೋಧನೆಗಳಿಂದ ವ್ಯಕ್ತವಾಗಿವೆ. ಆರಂಭದಲ್ಲಿ ಒರಟಾದ ಕಲ್ಲುಗಳನ್ನೇ ಆಯುಧವಾಗಿ ಬಳಸಲಾಗುತ್ತಿತ್ತು. ಒಂದು ಕಡೆ ಚೂಪಾದ ಸ್ವಾಭಾವಿಕವಾದ ಆಕಾರಗಳನ್ನು ಪಡೆದ ಶಿಲೆಗಳವು. ಪ್ರಾಣಿಗಳನ್ನು ಹೊಡೆಯಲು, ವಸ್ತುಗಳನ್ನು ಜಜ್ಜಲು, ತುಂಡರಿಸಲು ಇಂಥ ವಸ್ತುಗಳನ್ನು ಬಳಸಲಾಗುತ್ತಿತ್ತು. ಬೆಲ್ಜಿಯಂ, ಫ್ರಾನ್ಸ್, ಸ್ಪೇನ್, ಸ್ವಿಟ್ಸರ್ಲೆಂಡ್, ಜರ್ಮನಿ, ಇಂಗ್ಲೆಂಡ್. ಜಕೋಸ್ಲವೇಕಿಯ, ಪೋಲೆಂಡ್, ಮಂಗೋಲಿಯ, ಚೀನ, ಭಾರತ, ಸಿರಿಯ, ಪ್ಯಾಲೆಸ್ಟೈನ್ ಮತ್ತು ಆಫ್ರಿಕಗಳಲ್ಲಿ ನಡೆದ ಭೂಶೋಧನೆಯಿಂದ ಪ್ರಥಮಶಿಲಾಯುಗದ ಅವಶೇಷಗಳು ದೊರಕಿವೆ. ಬೇಟೆಯಾಡಿ ಬದುಕಲುಬೇಕಾದ ಈ ಯುಗದ ಮಾನವ, ಮರದ ಚೂಪಾದ ಸಾಧನಗಳನ್ನೂ ದೊಣ್ಣೆಗಳನ್ನೂ ಕಲ್ಲನ್ನೂ ವಿಶೇಷವಾಗಿ ಬಳಸಿಕೊಳ್ಳುತ್ತಿದ್ದ. ಸಾಮಾನ್ಯವಾಗಿ ಸಣ್ಣ ಸಣ್ಣ ಪ್ರಾಣಿಗಳನ್ನೇ ಈ ಸಾಧನಗಳಿಂದ ಕೊಲ್ಲುತ್ತಿದ್ದ. ದೊಡ್ಡ ಪ್ರಾಣಿಗಳು ಅಪಾಯದಲ್ಲಿದ್ದಾಗ, ನದಿ ಮುಂತಾದುವನ್ನು ದಾಟುವಾಗ, ಇತರ ಪ್ರಾಣಿಯೊಡನೆ ಹೋರಾಡಿ ಗಾಯಗೊಂಡಾಗ ಅವುಗಳ ಮೇಲೂ ಎರಗಿ ತನ್ನ ಸಾಧನಗಳನ್ನು ಬಳಸಿ ಅವನ್ನು ಕೊಲ್ಲುತ್ತಿದ್ದ. 5,00,000 ವರ್ಷಗಳ ಹಿಂದೆ ಶಿಲಾಯುಗದ ಪ್ರಾರಂಭದಲ್ಲಿಯೆ ಆಯುಧಗಳ ಬಳಕೆ ಮಾನವನಿಗೆ ಅತ್ಯಾವಶ್ಯಕವಾಗಿತ್ತು- ಎಂಬುದು ಇದರಿಂದ ವ್ಯಕ್ತವಾಗುತ್ತದೆ.[೩]

ಇತಿಹಾಸ

ಬದಲಾಯಿಸಿ

ಕ್ರಿ.ಪೂ.3,00,000-1,50,000 ವರ್ಷಗಳ ಅವಧಿಯ ಹಳೆಯ ಶಿಲಾಯುಗಕ್ಕೆ ಬಂದರೆ ಆಯುಧಗಳಲ್ಲಿ ತಕ್ಕ ಮಟ್ಟಿನ ಸುಧಾರಣೆ ಕಂಡುಬರುತ್ತದೆ. ಆರಂಭದಲ್ಲಿ ಒರಟಾಗಿ ಕೆತ್ತಿದ ಕಲ್ಲಿನ ಆಯುಧಗಳು ಕಂಡುಬಂದರೆ ಮುಂದೆ ಅವುಗಳನ್ನು ನಯಗೊಳಿಸಿಕೊಂಡು ಬಳಸಲಾಯಿತು. ಸರಿಯಾದ ಆಕಾರಕ್ಕೆ ತೆಳ್ಳಗೆ, ಚೂಪಾಗಿ ಕೆತ್ತಿಕೊಳ್ಳಲಾಯಿತು. ಕೈಗೊಡಲಿ, ಹಿಡಿಯುಳ್ಳ ಉಪಕರಣಗಳನ್ನು ಕಲ್ಲಿನಲ್ಲೇ ತಯಾರಿಸಿಕೊಳ್ಳಲಾಯಿತು. ಮುಂದೆ ಕ್ರಮೇಣ ಪ್ರಾಣಿಗಳ ಕೊಂಬುಗಳನ್ನು, ಮೂಳೆಗಳನ್ನು ಮಾನವ ಆಯುಧಗಳ ಗುಂಪಿಗೆ ಸೇರಿಸಿಕೊಂಡ ಮೀನು ಮುಂತಾದುವುಗಳ ಬೇಟೆಯಲ್ಲಿ ಇವು ಹೆಚ್ಚು ನೆರವಾಗುತ್ತಿದ್ದುವು. ಮೂಳೆಯ ಭರ್ಜಿಗಳ ಮೇಲೆ ಕೆತ್ತನೆಯ ಕೆಲಸವನ್ನು ಮಾಡಿಕೊಂಡ. 12,000 ವರ್ಷಗಳ ಈಚಿನ ಮಧ್ಯಶಿಲಾಯುಗದ ವೇಳೆಗೆ ತನ್ನ ಆಯುಧ ವಿಶೇಷಗಳಲ್ಲಿ ಹೆಚ್ಚು ಮಾರ್ಪಾಡು ಮಾಡಿಕೊಂಡ, ಆಹಾರವನ್ನು ಹುಡುಕಿಕೊಂಡು ಹೋಗುವ ಕ್ರಮವನ್ನು ಕೈಬಿಟ್ಟು ಫಲವತ್ತಾದ ನದೀತೀರದಲ್ಲಿ ನೆಲೆಸಿ ತಾನೇ ಆಹಾರವನ್ನು ತಯಾರಿಸಿಕೊಳ್ಳಲು ಅರಿತ. ಪ್ರಾಣಿಗಳನ್ನು ಸಾಕತೊಡಗಿದ. ನುಣುಪಾದ, ಹೊಳಪಾದ ಕಲ್ಲಿನ ಆಯುಧಗಳನ್ನು ಉಪಯೋಗಿಸತೊಡಗಿದ, ನೂತನ ಶಿಲಾಯುಗದ ವೇಳೆಗೆ ಅವನ ಬದುಕು ಒಂದು ವ್ಯವಸ್ಥಿತ ಕ್ರಮಕ್ಕೆ ಬರತೊಡಗಿತು.ಕ್ರಿ.ಪೂ. 400ರ ವೇಳೆಗೆ ಕ್ರಮೇಣ ಶಿಲಾಯುಗ ಲೋಹಯುಗಕ್ಕೆ ದಾರಿ ಮಾಡಿ ಕೊಟ್ಟಿತು. ಚಿನ್ನ, ಬೆಳ್ಳಿ ಮುಂತಾದ ಲೋಹಗಳು ಕಾಣಿಸಿಕೊಂಡುವು. ಶಿಲೆಯ ಉಪಕರಣಗಳ ರೀತಿಯಲ್ಲೇ ತಾಮ್ರದ ಆಯುಧಗಳು ಹುಟ್ಟಿಕೊಂಡುವು. ಕ್ರಮೇಣ ಕಂಚಿನ ಯುಗ ಕಾಲಿರಿಸಿತು. ಕಬ್ಬಿಣದ ಯುಗವೂ ಆರಂಭವಾಗಿ ಆಯುಧ ವಿಶೇಷಗಳಲ್ಲಿ ಬೇಕಾದಷ್ಟು ಬೆಳೆವಣಿಗೆಯಾಯಿತು.ಮಾನವ ಆಯುಧಗಳನ್ನು ಸೃಷ್ಟಿ ಮಾಡಿಕೊಂಡ ಹಿನ್ನಲೆಯಲ್ಲಿ ಶತ್ರುಭಯ ಪ್ರಮುಖವಾದುದು. ಕ್ರಮೇಣ ಬೆಳೆದ ಯುದ್ಧಗಳು ಆಯುಧಗಳ ತೀವ್ರಸುಧಾರಣೆಗೆ ದಾರಿ ಮಾಡಿಕೊಟ್ಟುವು. ಆತ್ಮರಕ್ಷಣೆ ಹಾಗೂ ವಿನಾಶಕಾರಕ ಆಯುಧಗಳ ಸೃಷ್ಟಿಯೂ ಆಯಿತು. ಹರಪ್ಪ ಮಹೆಂಜೊದಾರೊ ಸಂಸ್ಕøತಿಗಳಲ್ಲಿ ತಾಮ್ರದ ಆಯುಧಗಳನ್ನು ಬಳಸಿರುವುದು ಕಂಡುಬರುತ್ತದೆ. ಋಗ್ವೇದದಲ್ಲೂ ಇತಿಹಾಸಯುಗದ ಮೌರ್ಯರ, ಶಕರ, ಕುಶಾನರ ಕಾಲದಲ್ಲೂ ಯುದ್ಧಗಳಲ್ಲಿ ವಿಶಿಷ್ಟ ಆಯುಧಗಳ ಬಳಕೆಯಾಗಿರುವುದು ಕಂಡುಬರುತ್ತದೆ.

ಭಾರತೀಯ ಯುದ್ಧ ಪದ್ಧತಿ

ಬದಲಾಯಿಸಿ

ಭಾರತೀಯ ಯುದ್ಧ ಪದ್ಧತಿಯಲ್ಲಿ ಚತುರಂಗ ಬಲಗಳ ವ್ಯವಸ್ಥೆ ಕಾಣಿಸಿಕೊಂಡು, ಆಯಾ ಸೈನ್ಯಕ್ಕೆ ಉಚಿತವಾದ ಆಯುಧಗಳ ತಯಾರಿಕೆ ನಡೆಯಿತು. ನುರಿತ ಗುರುವಿನಲ್ಲಿ ಶಸ್ತ್ರಾಭ್ಯಾಸ ಮಾಡುವ ಪದ್ಧತಿ ರಾಮಾಯಣ ಮಹಾಭಾರತಗಳ ಕಾಲಕ್ಕೇ ಕಾಣಿಸಿಕೊಂಡು ಧನುರ್ವೇದವೆಂದು ಹೆಸರಾಯಿತು. ಆಯುಧಗಳ ಬಳಕೆಯಲ್ಲಿ ಶಾಸ್ತ್ರೀಯಕ್ರಮ ಬಹಳ ಹಿಂದೆಯೇ ರೂಢಿಗೆ ಬಂತು. ಬಿಲ್ಲುಬಾಣಗಳ ಪ್ರಾಚುರ್ಯ ಹೆಚ್ಚಿತು.ಮೆಗಸ್ತನೀಸ್, ಭಾರತೀಯ ಯುದ್ಧಕ್ರಮವನ್ನು ಬಣ್ಣಿಸುತ್ತ ಆನೆಯ ಮೇಲೆ ಮೂರು ಜನ ಬಿಲ್ಲುಗಾರರು ಕುಳಿತು ಬಾಣ ಪ್ರಯೋಗಮಾಡುತ್ತಿದ್ದ ಕ್ರಮವನ್ನು ವರ್ಣಿಸಿದ್ದಾನೆ. ಆರುಜನ ವೀರರು ಆನೆಯ ಮೇಲೆ ಕುಳಿತು ವಿವಿಧ ಶಸ್ತ್ರಾಸ್ತ್ರಗಳಿಂದ ಯುದ್ಧ ಮಾಡುತ್ತಿದ್ದರೆಂದು ಅಗ್ನಿಪುರಾಣ ತಿಳಿಸುತ್ತದೆ. ಈ ಆರುಜನರಲ್ಲಿ ಇಬ್ಬರು ಬಿಲ್ಲು ಹಿಡಿದು ಯುದ್ಧ ಮಾಡಿದರೆ, ಮತ್ತಿಬ್ಬರು ಲೋಹದ ಮುಳ್ಳುಗಳಿಂದ ಕೂಡಿದ ಆಯುಧಗಳೊಡನೆ ಹೋರಾಡುತ್ತಿದ್ದರು. ಉಳಿದಿಬ್ಬರು ಕತ್ತಿಗಳನ್ನು ಬಳಸುತ್ತಿದ್ದರು. ಕಲ್ಲು, ಕಠಾರಿ, ಮುಂತಾದ ಎಸೆಯುವ ಸಾಧನಗಳನ್ನೂ ಬಳಸಲಾಗುತ್ತಿತ್ತು. ಶೂಲಗಳು, ಭಲ್ಲೆಗಳು, ಕೊಡಲಿಗಳು, ಕವಣೆಗಳು ಸೇರಿಕೊಂಡುವು. ನಿತ್ಯಬಳಕೆಯ ವಸ್ತುಗಳಲ್ಲಿ ಅನೇಕವು ಕೆಲವು ಪುರಾಣ ಪುರುಷರ ಆಯುಧಗಳಾಗಿ ಆರೋಪಿಸಲ್ಪಟ್ಟವು. ಹಲಾಯುಧ, ಮುಸಲಾಯುಧಗಳು ಇದಕ್ಕೆ ಉತ್ತಮ ನಿದರ್ಶನ.ಬಿಲ್ವಿದ್ಯೆಯಲ್ಲಿ ನೈಪುಣ್ಯವನ್ನು ಸಾಧಿಸಿಕೊಂಡ ಭಾರತೀಯ ವೀರರು ಅನೇಕ ಆಕಾರದ ಬಿಲ್ಲುಗಳನ್ನು ಬಳಸುತ್ತಿದ್ದರು. ಶಾಙ್ರ್ಗರವ, ಪಿನಾಕ, ಕೋದಂಡ, ಗಾಂಡೀವ ಮೊದಲಾದ ಪುರಾಣಪ್ರಪಂಚದ ಕೆಲವು ಪ್ರಸಿದ್ಧ ಧನುಸ್ಸುಗಳನ್ನು ಗಮನಿಸಬಹುದು. ಸೀತಾಸ್ವಯಂವರದ ಶಿವಧನುಸ್ಸು ಅತ್ಯಂತ ದೊಡ್ಡ ಆಕಾರದ, ಭಾರವಾದ ಆಯುಧವಾಗಿತ್ತು. ಅರ್ರಿಯನ್ ಎಂಬುವವ ಭಾರತೀಯ ವೀರರು ಅವರೆತ್ತರದ ಬಿಲ್ಲುಗಳನ್ನು ಬಳಸುತ್ತಿದ್ದರು ಎಂದು ವರ್ಣಿಸಿದ್ದಾನೆ. ಬಿಲ್ಲಿನ ಒಂದು ತುದಿಯನ್ನು ನೆಲದಮೇಲೆ ಊರಿ, ವೀರಮಂಡಿಯ ಭಂಗಿಯಲ್ಲಿ ಕುಳಿತು, ಮೂರುಗಜದಷ್ಟು ಉದ್ದವಾದ ಬಾಣವನ್ನು ಪ್ರಯೋಗ ಮಾಡುತ್ತಿದ್ದರು - ಎಂದಿದ್ದಾನೆ. ಈ ವೀರರು ಅಗಲವಾದ ಭಾರವಾದ ಇಬ್ಬಾಯಿಯ ಖಡ್ಗಗಳನ್ನು ಬಳಸುತ್ತಿದ್ದರೆಂದು ತಿಳಿಸಿದ್ದಾನೆ. ಕತ್ತಿ, ಭರ್ಜಿ, ಗುರಾಣಿಗಳ ಬಳಕೆಯನ್ನು ಪ್ರಸ್ತಾಪಿಸಿದ್ದಾನೆ. ಅನೇಕ ಭಿತ್ತಿಚಿತ್ರಗಳಲ್ಲಿ ಇಂಥ ದೃಶ್ಯಗಳು ಹೇರಳವಾಗಿ ದೊರೆಯುತ್ತವೆ. ಮುಕ್ತ, ಅಮುಕ್ತ, ಮುಕ್ತಾಮುಕ್ತ, ಯಂತ್ರಮುಕ್ತ, ಮುಂತಾಗಿ ಭಾರತೀಯರು ಆಯುಧಗಳನ್ನು ವಿಭಜಿಸಿಕೊಂಡಿರುವುದನ್ನು ಕಾಣಬಹುದು. ಬಿಲ್ಲುಗಳನ್ನು ಲೋಹ ಹಾಗೂ ಬಿದುರಿನಿಂದ ಮಾಡಿಕೊಳ್ಳಲಾಗುತ್ತಿತ್ತು. ಬಾಣಗಳಿಗೆ ಲೋಹದ ತುದಿಗಟ್ಟುಗಳಿದ್ದವು. ಒಮ್ಮೊನೆಯ, ಇಮ್ಮೊನೆಯ, ವಿಷದ ಬಾಣಗಳಿದ್ದುವೆಂದು ಕಾವ್ಯದಲ್ಲಿ ವರ್ಣನೆಗಳಿವೆ. ಪ್ರಪಂಚದ ಎಲ್ಲಕಡೆಯೂ ಬಿಲ್ಲುಬಾಣಗಳ ಬಳಕೆ ಇತ್ತು.ಭಾರತೀಯ ಬಿಲ್ಲಿನಂತೆಯೇ ಈಜಿಪ್ಟಿನ ಬಿಲ್ಲು ಬಹಳ ಉದ್ದ. ಗ್ರೀಕರ ಬಿಲ್ಲು ಬಹಳ ಚಿಕ್ಕದು.

ಮಹಾಭಾರತದಲ್ಲಿ ಕಬ್ಬಿಣದ ಚೂರು

ಬದಲಾಯಿಸಿ

ಮಹಾಭಾರತದಲ್ಲಿ ಕಬ್ಬಿಣದ ಚೂರುಗಳನ್ನು ನಳಿಕೆಗಳೆಂಬ ಸಾಧನದಿಂದ ಹಾರಿಸುತ್ತಿದ್ದ ಪ್ರಸ್ತಾಪ ಬಂದಿದೆ. ಈಗಿನ ಬಂದೂಕಿನೊಡನೆ ಅದನ್ನು ಹೋಲಿಸಲು ಸಾಧ್ಯವಾಗದಿದ್ದರೂ ಆ ಬಗೆಯ ಒಂದು ಸಾಧನ ಇತ್ತು. ಎನ್ನುವುದಕ್ಕೆ ನಮ್ಮ ಪೆಟ್ಲು ಒಳ್ಳೆಯ ನಿದರ್ಶನವಾಗಿದೆ.ಹೀಗೆ ಭಾರತೀಯ ಪರಂಪರೆಯಲ್ಲಿ ಅಸಿ, ಪರಶು, ಶಕ್ತಿ, ಶೂಲ, ಗದೆ, ಕವಣೆ ಮೊದಲಾದ ಆಯುಧವಿಶೇಷಗಳ ಜೊತೆಗೆ ಗುರುತಿಸಲಾಗದ ಅನೇಕ ಶಸ್ತ್ರಾಸ್ತ್ರಗಳ ಹೆಸರು ಬರುತ್ತದೆ. ಮಂತ್ರಶಕ್ತಿಯ ಪ್ರಭಾವದಿಂದ ಪ್ರಯೋಗಿಸಲ್ಪಡುತ್ತಿದ್ದ ದಿವ್ಯಾಸ್ತ್ರಗಳಾದ ಪಾಶುಪತ, ಐಂದ್ರ, ವಾಯುವ್ಯ, ಆಗ್ನೇಯ, ಬ್ರಹ್ಮ, ನಾರಾಯಣ, ಸಂಮೋಹನ ಮೊದಲಾದುವುಗಳ ಪ್ರಸ್ತಾಪವನ್ನು ಕಾವ್ಯಪುರಾಣಗಳಲ್ಲಿ ಗಮನಿಸಬಹುದು.ಕುಶಲಿಗಳಾದ ಪಾಂಚಾಲರು ರಾಜನಿಂದ ನೇಮಿಸಲ್ಪಟ್ಟ ಸೇನಾನಿಯೊಬ್ಬನ ನೇತೃತ್ವದಲ್ಲಿ ಅಧಿಕೃತನೆಲೆಯೊಂದರಲ್ಲಿ ಶಸ್ತ್ರಾಸ್ತ್ರಗಳನ್ನು ತಯಾರಿಸಿ ಅದರ ಮೇಲೆ ರಾಜಮುದ್ರೆಯನ್ನು ಹಾಕುತ್ತಿದ್ದರು ಎಂದು ಕೌಟಿಲ್ಯ ಬಣ್ಣಿಸಿದ್ದಾನೆ. ಭಾರತೀಯರು ಆಯುಧಗಳ ಬಳಕೆಯಲ್ಲಿ ಎಂಥ ಉನ್ನತ ಸಾಧನೆಯನ್ನು ತೋರಿದ್ದರು ಎಂಬುದು ಈ ನಿದರ್ಶನಗಳಿಂದ ವೇದ್ಯವಾಗುತ್ತದೆ.

ಆಯುಧಗಳ ಪ್ರಯೋಗದ ಹಿನ್ನಲೆಯಲ್ಲಿ ಅವುಗಳ ವಿಭಜನೆಯನ್ನು ಮಾಡಿಕೊಳ್ಳಬಹುದು

ಬದಲಾಯಿಸಿ

1(ಅ) ಕೈಯಲ್ಲಿ ಹಿಡಿಯುವ ಆಯುಧಗಳು. i ನೈಸರ್ಗಿಕವಸ್ತುಗಳು: ಮತ್ತೊಂದು ವಸ್ತುವಿನ ಹೊಡೆತದ ತೀವ್ರತೆಯನ್ನು ಹೆಚ್ಚಿಸಲು ಹಾಗೂ ನೇರವಾಗಿ ಆ ವಸ್ತುವಿನಿಂದಲೇ ಹೊಡೆಯಲು ಈ ಸಾಧನಗಳನ್ನು ಬಳಸುವಂಥವು. ii ತಯಾರಿಸಿದ ವಸ್ತುಗಳು. iii ಆಭರಣಗಳು: ಕೆಲವು ಉಗುರುಗಳಲ್ಲಿ, ಕೈಕಟ್ಟುಗಳಲ್ಲಿ ಮೊನಚಾದ ಭಾಗವನ್ನು ಸಂದರ್ಭವೊದಗಿದಾಗ ಆಯುಧವನ್ನಾಗಿ ಬಳಸಿಕೊಳ್ಳುವುದು. 2 ದೊಣ್ಣೆಗಳು: ತುದಿಯ ಭಾಗದಲ್ಲಿ ಹೆಚ್ಚುಭಾರವಾಗಿರುವ ದೊಣ್ಣೆಗಳು ತೀವ್ರವಾದ ಪೆಟ್ಟನ್ನುಂಟುಮಾಡುತ್ತವೆ. ಕೆಲವು ದೊಣ್ಣೆಗಳಲ್ಲಿ ಮೊನಚಾದ ಭಾಗಗಳೂ ಇದ್ದು ಗಾಯಮಾಡುವ ಸಂದರ್ಭವೂ ಉಂಟು, ಕೈಯಿಂದ ಜಾರಿಕೊಳ್ಳದಂತೆ ಭದ್ರವಾದ ಹುರಿಯನ್ನು ಹಸ್ತಕ್ಕೆ ಸುತ್ತಿಕೊಳ್ಳುವಂತೆ ವ್ಯವಸ್ಥೆಮಾಡಿಕೊಂಡ ದೊಣ್ಣೆಗಳೂ ಇರುತ್ತವೆ. ಒಂದು ಕೈಯಿಂದ, ಎರಡು ಕೈಗಳಿಂದ ಬಳಸಲ್ಪಡುವ ದೊಣ್ಣೆಗಳೂ ಇರುತ್ತವೆ.

3 ಕೊಡಲಿಗಳು

ಬದಲಾಯಿಸಿ

ದೊಣ್ಣೆಗಳ ಹಿನ್ನೆಲೆಯಲ್ಲಿಯೇ ಸಿದ್ಧಗೊಂಡ ಸಾಧನವಾದರೂ ಕಾವಿನಭಾಗ, ಕೊಡಲಿಯ ಭಾಗವೆಂದು ವಿಭಾಗವಾಗಿರುವ ಸಾಧನ: ಮರದ ಕಾವು, ಲೋಹದ ಕೊಡಲಿ ಇವನ್ನೊಳಗೊಂಡು ಕತ್ತರಿಸಲು, ಸೀಳಲು ಬಳಸುವ ಆಯುಧ. ಗಂಡುಗೊಡಲಿ ಪುರಾಣಗಳಲ್ಲೇ ಪ್ರಸ್ತಾಪಿಸಲ್ಪಟ್ಟಿರುವ ಆಯುಧ ವಿಶೇಷ. ಪರಶುರಾಮ ಆ ಆಯುಧದಿಂದಲೇ ಕ್ಷತ್ರಿಯರ ಕಗ್ಗೊಲೆ ನಡೆಸಿದ ಸಂದರ್ಭವನ್ನು ಇಲ್ಲಿ ನೆನೆಯಬಹುದು. ಅರ್ಧಚಂದ್ರಾಕಾರದ ಕೊಡಲಿಯ ಭಾಗವನ್ನು ಪಡೆದ ಈ ಸಾಧನವನ್ನು ಚಂದ್ರಾಯುಧವೆಂದೂ ಕೆಲವು ಕಡೆ ಕರೆಯುತ್ತಾರೆ. ಜಾನಪದ ಕಥೆಗಳಲ್ಲಿ ವಿಶೇಷವಾಗಿ ಬಳಕೆಯಾಗಿರುವ ಚಂದ್ರಾಯುಧ ಬಹುಶಃ ವಿಶಿಷ್ಟ ರೀತಿಯ ಖಡ್ಗ.ಕೊಡಲಿಗಳಲ್ಲಿ ಕೈಗೊಡಲಿ, ಎಡಗೊಡಲಿ ಮುಖ್ಯವಾದುವು. ಕ್ಮೆಗೊಡಲಿ, ಸಣ್ಣ ಆಕಾರದ ಸಾಧನ. ಎಡಗೊಡಲಿ ಎರಡು ಕೈಯಿಂದಲೂ ದೊಡ್ಡ ವಸ್ತುಗಳನ್ನು ಕಡಿಯಲು ಬಳಸುವ ಭಾರವಾದ ಸಾಧನ. ಸುತ್ತಿಗೆಗಳೂ ಇದೇ ವರ್ಗಕ್ಕೆ ಸೇರಿದರೂ ದುಂಡಾದ ಭಾಗಗಳನ್ನು ಪಡೆದು ಗಟ್ಟಿಯಾದ ಪದಾರ್ಥಗಳನ್ನೂ ವಿಶೇಷವಾಗಿ ಕಲ್ಲು, ಲೋಹಗಳನ್ನೂ ಹೊಡೆಯಲು ಬಳಸಲಾಗುತ್ತದೆ.

4 ಭರ್ಜಿಗಳು

ಬದಲಾಯಿಸಿ

ಬೇಟೆಗಾಗಿ ಬಳಸುವ ಈ ಉದ್ದವಾದ ಸಾಧನಗಳ ತುದಿಯಲ್ಲಿ ಮೊನಚಾದ, ಚೂಪಾದ ಲೋಹದ ಭಾಗವಿರುತ್ತದೆ. ತಿವಿಯಲು ಬಳಸುವ ಭರ್ಜಿಗಳು ವಿಶೇಷವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಈಗಲೂ ಉಳಿದಿವೆ. ಹಂದಿಯ ಬೇಟೆಯಲ್ಲಿ ಬಳಸುವ ಭರ್ಜಿ, ಹಾವನ್ನು ಕೊಲ್ಲುವ ಭರ್ಜಿ, ಯುದ್ಧಗಳಲ್ಲಿ ಬಳಸುವ ಭರ್ಜಿ ಅಥವಾ ಭಲ್ಲೆಗಳು ವಿಶಿಷ್ಟ ಆಕಾರಗಳಲ್ಲಿ ಇರುತ್ತವೆ. ಎಸೆಯುವ ಭಲ್ಲೆಗಳನ್ನೂ ಕಾಣಬಹುದು. ವಿಶ್ವದಾದ್ಯಂತ ಭರ್ಜಿಗಳು ಬಳಕೆಯಲ್ಲಿವೆ. ಭರ್ಜಿಯ ಮುಡಿ ಹರಿತವಾದ ಚಪ್ಪಟೆ ಬಾಯನ್ನು ಪಡೆದಿರಬಹುದು, ಇಲ್ಲವೆ ಚಪ್ಪಟೆ ಅಥವಾ ದುಂಡಾದ ಭಾಗದೊಡನೆ ಮೊನಚಾದ ಬಾಯನ್ನು ಪಡೆದಿರಬಹುದು. ಕಾವಿನ ಭಾಗ ಒಂದು ಮಾರಿನಷ್ಟಿದ್ದು ಮರದ, ಬಿದರಿನ ಭಾಗವಾಗಿರುತ್ತದೆ. ಲೋಹದ ಕಾವುಗಳೂ ಇರಬಹುದು.

5 ಖಡ್ಗಗಳು

ಬದಲಾಯಿಸಿ

ಕತ್ತರಿಸುವ, ತಿವಿಯುವ ಅಥವಾ ಎರಡು ಉದ್ದೇಶಗಳಿಗೂ ಬಳಸುವ ಬಗೆಗಳಿರುತ್ತವೆ. ಖಡ್ಗದ ಹಿಡಿ ಕಲಾತ್ಮಕವಾಗಿದ್ದು ಕೈಯಿಂದ ಜಾರಿಕೊಳ್ಳದಂತೆ ಮಡಿಕೆಗಳನ್ನು ಪಡೆದಿರುತ್ತದೆ. ಅನೇಕ ಬಗೆಯ ಖಡ್ಗಗಳ ಪ್ರತ್ಯೇಕವಾದ ಹೆಸರುಗಳನ್ನೂ ಕಾಣಬಹುದು. ಕತ್ತಿಗಳೆಲ್ಲ ಸಾಮಾನ್ಯವಾಗಿ ಒಂದೇ ಲೋಹದಿಂದ ಮಾಡಲ್ಪಟ್ಟಿರುತ್ತವೆ. ಕಠಾರಿಗಳನ್ನು ಈ ಗುಂಪಿಗೇ ಸೇರಿಸಬಹುದು.ಕಡಿಯುವ, ಇರಿಯುವ, ಚುಚ್ಚುವ, ಬಗೆಯುವ, ಹೆರೆಯುವ, ಹರಿಯುವ ಚಿಕ್ಕ ಚಿಕ್ಕ ಸಾಧನಗಳೂ ಈ ಗುಂಪಿಗೇ ಸೇರುತ್ತವೆ. ಕ್ಷೌರಿಕನ ಕತ್ತಿ ಮರದ ಹಿಡಿಯನ್ನು ಪಡೆದಿರುತ್ತದೆ. ಕುಡುಗೋಲು, ಚಾಕು, ಚೂರಿಗಳಿಗೂ ಹಿಡಿಗಳಿರುತ್ತವೆ. ಕುಡುಗೋಲಿನಲ್ಲಿ ಹತ್ತಾರು ಬಗೆಗಳಿವೆ. ಸೊಪ್ಪಿನ ಕುಡುಲು, ಉಜ್ಜುಗರಿ, ಕೈಗುಡುಲು ಹರಿಗುಡುಲು, ಜವಣಿ ಕುಡುಲು ಮುಂತಾದುವು ಆಯಾ ಉದ್ದೇಶಕ್ಕೆ ತಕ್ಕಂತೆ ಬೇರೆಬೇರೆ ಆಕಾರದಲ್ಲಿಯೇ ಇರುತ್ತವೆ.ಕುಡುಲಿನ ಜಾತಿಗೆ ಸೇರಿದ, ಇನ್ನೂ ದೊಡ್ಡದಾದ ಮಚ್ಚು, ಬಲಿಗೆ ಪ್ರಸಿದ್ಧವಾದುದು. ಬಲಿಮಚ್ಚು ಅಥವಾ ಕಂದಲು ವಿಶಿಷ್ಟ ಉದ್ದೇಶಕ್ಕಾಗಿ ಹಬ್ಬಗಳಲ್ಲಿ ಕುರಿಯನ್ನೊ ಕೋಣವನ್ನೊ ಮಾರಿಗೆ ಬಲಿಗೊಡಲು ಮಾತ್ರ ಬಳಸುವ ಸಾಧನವಾಗಿರುತ್ತದೆ. ಎರಡು ಕಡೆಯೂ ಬಾಯುಳ್ಳ ಮಚ್ಚುಗಳು ಮನೆಬಳಕೆಯ ವಸ್ತುಗಳಾಗಿವೆ.ಚಾಕುಗಳಲ್ಲೂ ಅನೇಕ ಆಕಾರಗಳನ್ನು ಗುರುತಿಸಬಹುದು. ಹೆಂಗಸರು ಸದಾಕೊರಳಲ್ಲಿ ಧರಿಸುವ ಹಲ್ಲುಕಡ್ಡಿ, ಗುಗ್ಗೆ ಕಡ್ಡಿಗಳ ಜೊತೆಯಲ್ಲಿ ಕಿರುಬೆರಳು ಉದ್ದದ ಕುಡಲಿನಾಕಾರದ ಬೆಳ್ಳಿಯ ಚಾಕುವನ್ನು ಇಟ್ಟಿರುತ್ತಾರೆ. ಸಣ್ಣ ಸಣ್ಣ ಚಾಕುಗಳನ್ನು ಪ್ರತಿಯೊಬ್ಬ ಪುರುಷನೂ ತನ್ನ ಸೊಂಟದಲ್ಲಿ ಪಡೆದುಕೊಂಡಿರುವ ಬಗೆಯನ್ನು ಈಗಲೂ ವಿಶೇಷವಾಗಿ ಕಾಣಬಹುದು.

ಸೊಂಟದಪಟ್ಟಿಯಂತೆ ಬಳಸುವ, ಊರೆಗೋಲಿನಲ್ಲಿ ಹುದುಗಿಸಿಡುವ ಕತ್ತಿಗಳನ್ನು ಈಗಲೂ ವಸ್ತುಸಂಗ್ರಹಾಲಯಗಳಲ್ಲಿ ಕಾಣಬಹುದು

ಬದಲಾಯಿಸಿ

(ಆ) ಎಸೆಯುವ ಸಾಧನಗಳು

ಬದಲಾಯಿಸಿ

i ಎಸೆಯುವ ಸಾಧನಗಳ ಗುಂಪಿಗೆ ನೈಸರ್ಗಿಕ ವಸ್ತುಗಳೂ ತಯಾರಿಸಿದ ವಸ್ತುಗಳೂ ಸೇರುತ್ತವೆ. ದೊಣ್ಣೆಗಳು, ಭರ್ಜಿಗಳು ಈಟಿಗಳು ತಯಾರಿಸಿಕೊಂಡ ಸಾಧನಗಳಾದರೆ ಕವಣೆಗೆ ಆರಿಸಿಕೊಳ್ಳುವ ವಸ್ತುಗಳು, ಕೆಲವು ಬಗೆಯ ಕೋಲುಗಳು ಎಸೆಯುವ ನೈಸರ್ಗಿಕ ಸಾಧನಗಳು. ಬಾಣದ ಬುಡಕ್ಕೆ ದಾರವನ್ನು ಕಟ್ಟಿ ಪ್ರಯೋಗಿಸಿದ ಮೇಲೆ ಮತ್ತೆ ಹಿಂದಕ್ಕೆ ಪಡೆದುಕೊಳ್ಳುವ ಸಾಧನಗಳೂ ಈ ಗುಂಪಿನಲ್ಲೇ ಬರುತ್ತವೆ. ಬಿಲ್ಲುಬಾಣಗಳು, ಎಲ್ಲ ಬಗೆಯ ಚಿಮ್ಮುವ, ಎಸೆಯುವ, ಪ್ರಯೋಗಿಸುವ ಸಾಧನಗಳೂ ಈ ವರ್ಗಕ್ಕೆ ಸೇರುತ್ತವೆ. ಆಧುನಿಕ ಫಿರಂಗಿ, ಬಂದೂಕು ಮುಂತಾದುವನ್ನೂ ಇಲ್ಲಿಯೇ ಹೆಸರಿಸಬಹುದು. ii ಸ್ವತಂತ್ರ ಚಾಲನೆಯ ಆಯುಧಗಳು : ಪ್ರಾಣಿಗಳನ್ನೂ ಶತ್ರುಗಳನ್ನೂ ಇದ್ದಕ್ಕಿದ್ದಂತೆ ಗಾಯಗೊಳಿಸುವ, ಬಂಧಿಸುವ ಸಾಧನಗಳು ಈ ವರ್ಗಕ್ಕೆ ಸೇರುತ್ತವೆ. ಬೋನುಗಳೂ ಈ ದೃಷ್ಟಿಯಿಂದ ಆಯುಧಗಳೇ. ಆಳವಾದ ಗುಳಿಗಳನ್ನು ತೋಡಿ ಸಲಾಕೆಗಳನ್ನು ವಿಷಮುಳ್ಳುಗಳನ್ನು ನೆಟ್ಟು ಶತ್ರುಗಳನ್ನು ಗಾಯಗೊಳಿಸಿದ ಪ್ರಸಂಗಗಳು ಜನಪದ ಕಥೆಗಳಲ್ಲಿ, ಲಾವಣಿಗಳಲ್ಲಿ ವಿಶೇಷವಾಗಿ ಬರುತ್ತವೆ. iii ಆತ್ಮ ರಕ್ಷಣೆಯ ಸಾಧನಗಳು : ಎಲ್ಲ ಬಗೆಯ ಆಯುಧಗಳೂ ಒಂದಲ್ಲ ಒಂದು ರೀತಿಯಲ್ಲಿ ಆತ್ಮರಕ್ಷಣೆಯ ಸಾಧನೆಗಳೇ. ಆದರೂ ಅದಕ್ಕಾಗಿಯೇ ಮೀಸಲಾದ ಸಾಧನ ಸಲಕರಣೆಗಳೂ ಮುಖ್ಯವಾಗಿ ಗಮನಿಸಬೇಕಾದುವು. ಪ್ರಾಚೀನ ಕಾಲದಿಂದಲೂ ಬಳಸಲ್ಪಡುತ್ತಿರುವ ಗುರಾಣಿ ಇದಕ್ಕೆ ಒಳ್ಳೆಯ ಉದಾಹರಣೆ. ಕೆಲವು ಸಂದರ್ಭಗಳಲ್ಲಿ ಅದರ ಮೇಲು ಹೊದಿಕೆಯಲ್ಲಿ ಚೂಪಾದ ಭಾಗಗಳಿದ್ದು ಅದೂ ಆಯುಧವಾಗಿಯೇ ಬಳಸಲ್ಪಡಬಹುದು. ಉಕ್ಕಿನ ರಕ್ಷಾಕವಚಗಳು ಶಿರಸ್ತ್ರಾಣಗಳು, ಕೈಕಟ್ಟು, ಕಾಲ್ಕಟ್ಟುಗಳೂ ಆತ್ಮರಕ್ಷಣೆಯ ಸಾಧನಗಳು.

ಆಯುಧಗಳಲ್ಲಿ ಪವಿತ್ರವಾದ ಸಾಧನ

ಬದಲಾಯಿಸಿ

ಆಯುಧಗಳಲ್ಲಿ ಪವಿತ್ರವಾದ ಸಾಧನಗಳೂ ಕೆಲವಿವೆ. ತಮ್ಮ ಕುಲಗುರುವೊ, ಮನೆತನದ ಹಿರಿಯರೊ ಬಳಸಿದ ಆಯುಧವಿಶೇಷಗಳನ್ನು ಮನೆಗಳಲ್ಲಿಟ್ಟು ಪೂಜಿಸುವ ವಾಡಿಕೆಯಿದೆ. ಕೆಲವು ದೈವಗಳ ಆರಾಧನೆಯಲ್ಲಿ ಆ ದೈವದ ಆಯುಧ ವಿಶೇಷವನ್ನೇ ಇಟ್ಟು ಪೂಜಿಸುವ ಬಗೆಯನ್ನು ಕಾಣಬಹುದು. ಭೈರವನ ಪೂಜೆಯಲ್ಲಿ ತ್ರಿಶೂಲ, ಸಿದ್ಧಪ್ಪಾಜಿಯ ಪೂಜೆಯಲ್ಲಿ ಕಂಡಾಯ ಮುಂತಾದುವು ಮುಖ್ಯವಾದುವು. ಮಾದೇಶ್ವರನ ಭಕ್ತರು ತಮ್ಮ ಕುಲದೈವ ಹಿಡಿದ ಕೋಲನ್ನೇ ಪೂಜಿಸುತ್ತಾರೆ.ಕೆಲವು ಆಯುಧಗಳಲ್ಲಿ ವಿಷವನ್ನೂ ಲೇಪಿಸಿ ಬಳಸುವ ವಾಡಿಕೆಯಿದೆ. ಕೆಲವು ಆಯುಧ ವಿಶೇಷಗಳಲ್ಲಿ ಅನೇಕ ನಂಬಿಕೆಗಳೂ ಮನೆಮಾಡಿಕೊಂಡಿರುತ್ತವೆ. ಮದುವೆಗಳಲ್ಲಿ ವರನ ಕೈಯ್ಯಲ್ಲಿ ಬಣ್ಣದ ವಸ್ತ್ರ ಸುತ್ತಿದ ಕಠಾರಿಯನ್ನು ಕೊಡುವ ವಾಡಿಕೆ ಈಗಲೂ ನಡೆದುಬಂದಿದೆ. ಅಂಕೋಲೆದೊಣ್ಣೆಯನ್ನು ಕೈಯಲ್ಲಿ ಹಿಡಿದು ಹೊರಟರೆ, ಮನೆಗಳಲ್ಲಿ ಇರಿಸಿದರೆ, ಭೂತ ಪ್ರೇತಗಳು ಹತ್ತಿರ ಸುಳಿಯವು ಎಂದು ಕೆಲವು ಕಡೆ ನಂಬಲಾಗಿದೆ. ಭೂತಗಳನ್ನು ಬಿಡಿಸುವ ವಿಶಿಷ್ಟ ಆಕಾರದ ಬೆಳ್ಳಿಯ ಹಿಡಿಯ ಕೋಲುಗಳೂ ಇರುತ್ತವೆ. ಕಳ್ಳರು ಬಳಸುವ ಕನ್ನಗತ್ತಿಯೂ ಗಮನಿಸಬೇಕಾದ ಆಯುಧವೇ.ರೈತ ಬಳಸುವ ಸಾಧನಗಳಲ್ಲಿ ವ್ಯವಸಾಯ ಹಾಗೂ ಮನೆಬಳಕೆಯ ಸಾಧನಗಳೇ ಆಯುಧಗಳೂ ಆಗುತ್ತವೆ. ಮೂಲನಿವಾಸಿಗಳ ಆಯುಧಗಳನ್ನು ಈ ದೃಷ್ಟಿಯಿಂದಲೇ ಪರಿಗಣಿಸಬೇಕಾಗುತ್ತದೆ. ಹಾರೆ, ಗುದ್ದಲಿ, ಪಿಕಾಸಿ, ಬಾಚಿ, ಕಳೆಕೊಕ್ಕೆ, ಕುಡುಲು, ಕೊಡಲಿ ಮುಂತಾದುವು ಆಯುಧಗಳೂ ಹೌದು. ರೈತನ ಸಾಧನಗಳೂ ಹೌದು.ಆಯುಧ ಪೂಜೆ ಕರ್ನಾಟಕದಲ್ಲಿ ಒಂದು ವಿಶಿಷ್ಟ ಆಚರಣೆಯಾಗಿ ಬೆಳೆದಿದೆ. ಗ್ರಾಮಾಂತರ ಪ್ರದೇಶಗಳಲ್ಲೂ ವ್ಯಾಪಿಸಿರುವ ಈ ಪೂಜೆಯ ಸಂದರ್ಭದಲ್ಲಿ ವಾಹನಗಳನ್ನೂ ವ್ಯವಸಾಯ ಸಾಧನಗಳನ್ನೂ ಆಯುಧ ವಿಶೇಷಗಳನ್ನೂ ಇಟ್ಟು ಪೂಜಿಸಲಾಗುವುದು.

ಉಲ್ಲೇಖಗಳು

ಬದಲಾಯಿಸಿ
"https://kn.wikipedia.org/w/index.php?title=ಆಯುಧಗಳು&oldid=1111037" ಇಂದ ಪಡೆಯಲ್ಪಟ್ಟಿದೆ