ಭವಾನಿ ದಕ್ಷಿಣ ಭಾರತದ ಜನಪ್ರಿಯ ಚಲನಚಿತ್ರ ನಟಿ. ೧೯೭೦ರ ದಶಕದಲ್ಲಿ ಮಲಯಾಳಂ, ಕನ್ನಡ, ತಮಿಳು ಮತ್ತು ತೆಲುಗು ಭಾಷೆಯ ಸುಮಾರು ೭೫ ಚಿತ್ರಗಳಲ್ಲಿ ಇವರು ನಟಿಸಿದ್ದಾರೆ. ಕನ್ನಡದ ಬೂತಯ್ಯನ ಮಗ ಅಯ್ಯು(೧೯೭೪) ಮತ್ತು ಮಾಂಗಲ್ಯ ಬಂಧನ(೧೯೭೬) ಚಿತ್ರಗಳಲ್ಲಿನ ಗಮನಾರ್ಹ ಅಭಿನಯದಿಂದ ಚಿತ್ರರಸಿಕರ ಮನರಂಜಿಸಿರುವ ಭವಾನಿ ಮಲಯಾಳಂನ ಲೀಸಾ[೨](೧೯೭೮), ಅನುಪಲ್ಲವಿ[೩](೧೯೭೯) ಮತ್ತು ಸರಸ್ವತೀಯಾಮಂ(೧೯೮೦) ಚಿತ್ರಗಳಲ್ಲಿನ ಅಭಿನಯದಿಂದ ಗುರುತಿಸಿಕೊಂಡಿದ್ದಾರೆ.

ಭವಾನಿ
ಜನನ
ಉದ್ಯೋಗನಟಿ
ಸಕ್ರಿಯ ವರ್ಷಗಳು೧೯೭೪ -
ಜೀವನ ಸಂಗಾತಿರೇಘು ಕುಮಾರ್(deceased)
ಮಕ್ಕಳುಭವಿತಾ , ಭಾವನಾ

ಆರಂಭಿಕ ಜೀವನಸಂಪಾದಿಸಿ

ಭವಾನಿ ಜನಿಸಿದ್ದು ಚೆನ್ನೈನಲ್ಲಿ. ಇವರ ಅಜ್ಜಿ ಋಷ್ಯೇಂದ್ರಮಣಿ ಜನಪ್ರಿಯ ಗಾಯಕಿ, ನರ್ತಕಿ ಮತ್ತು ರಂಗಭೂಮಿ ಮತ್ತು ಚಲನಚಿತ್ರ ಅಭಿನೇತ್ರಿ. ಚಿಕ್ಕಂದಿನಲ್ಲಿ ಭರತನಾಟ್ಯವನ್ನು ಶಾಸ್ತ್ರೀಯವಾಗಿ ಅಭ್ಯಸಿಸಿದ್ದ ಭವಾನಿ ಅವರ ಚೊಚ್ಚಲ ನೃತ್ಯ ಪ್ರದರ್ಶನಕ್ಕೆ ಎಂ.ಜಿ.ಆರ್. ಮತ್ತು ಎನ್.ಟಿ.ಆರ್. ಅವರು ಬಂದು ಹರಸಿದ್ದರು. ಆ ನಂತರದಲ್ಲಿ ಅನೇಕ ನೃತ್ಯ ಪ್ರದರ್ಶನಗಳನ್ನು ನೀಡಿದ್ದಾರೆ. ಹೀಗೆ ಒಂದು ನೃತ್ಯ ಪ್ರದರ್ಶನವೊಂದರಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಕನ್ನಡದ ಮೇರು ನಿರ್ದೇಶಕ ಸಿದ್ದಲಿಂಗಯ್ಯ ಅವರು ತಮ್ಮ ಬೂತಯ್ಯನ ಮಗ ಅಯ್ಯು ಚಿತ್ರಕ್ಕಾಗಿ ಭವಾನಿಯವರನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಂಡಿದ್ದರು.

ವೃತ್ತಿಜೀವನಸಂಪಾದಿಸಿ

ಸಿದ್ದಲಿಂಗಯ್ಯ ನಿರ್ದೇಶನದ ಬೂತಯ್ಯನ ಮಗ ಅಯ್ಯು ಭವಾನಿ ಅಭಿನಯದ ಮೊದಲ ಚಿತ್ರ. ಜನಪ್ರಿಯ ನಟ ವಿಷ್ಣುವರ್ಧನ್ ಅವರಿಗೆ ನಾಯಕಿಯಾಗಿ ಶ್ಲಾಘನೀಯ ಅಭಿನಯ ನೀಡಿದ ಭವಾನಿ ಈ ಚಿತ್ರದಲ್ಲಿ ತಮ್ಮ ಅಜ್ಜಿ ಋಷ್ಯೇಂದ್ರಮಣಿ ಅವರೊಂದಿಗೆ ಬೆಳ್ಳಿತೆರೆಯನ್ನು ಹಂಚಿಕೊಂಡಿದ್ದರು. ಗಂಭೀರ ಕಥಾವಸ್ತುವನ್ನು ಹೊಂದಿದ್ದರೂ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸು ಗಳಿಸಿದ ಈ ಚಿತ್ರ ಭಾರತದ ಇತರ ಭಾಷೆಗಳಾದ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂಗಳಲ್ಲಿಯೂ ಪುನರ್ನಿರ್ಮಾಣಗೊಂಡಿತು. ಬೂತಯ್ಯನ ಮಗ ಅಯ್ಯು ಚಿತ್ರದ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದ ವಿಷ್ಣುವರ್ಧನ್ ಮತ್ತು ಭವಾನಿ ಜೋಡಿ ಕನ್ನಡ ಚಿತ್ರರಸಿಕರಿಗೆ ಮೋಡಿ ಮಾಡಿತ್ತು. ಆ ನಂತರದಲ್ಲಿ ಭವಾನಿ ನಟ ವಿಷ್ಣುವರ್ಧನ್ ಅವರೊಂದಿಗೆ ಕಳ್ಳ ಕುಳ್ಳ(೧೯೭೫), ಒಂದೇ ರೂಪ ಎರಡು ಗುಣ(೧೯೭೫), ನಾಗಕನ್ಯೆ(೧೯೭೫) ಮತ್ತು ಶನಿಪ್ರಭಾವ(೧೯೭೭) ಮುಂತಾದ ಯಶಸ್ವಿ ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿ ಗಮನ ಸೆಳೆದರು. ಮಾಂಗಲ್ಯ ಬಂಧನ ಚಿತ್ರದಲ್ಲಿ ಸ್ಮರಣೀಯ ಅಭಿನಯ ನೀಡಿದ ಭವಾನಿ ಸಹೋದರರ ಸವಾಲ್(೧೯೭೭) ಎಂಬ ಯಶಸ್ವಿ ಚಿತ್ರದಲ್ಲಿ ರಜನೀಕಾಂತ್ ಅವರಿಗೆ ನಾಯಕಿಯಾಗಿ ಅಭಿನಯಿಸಿದ್ದಾರೆ.

ಎಂ.ಜಿ.ಆರ್. ಅಭಿನಯದ ಉಳೈಕ್ಕುಮ್ ಕಾರಂಗಳ್(೧೯೭೮) ಚಿತ್ರದಲ್ಲಿ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಂಡು ಉತ್ತಮ ನಟನಾ ಮತ್ತು ನಾಟ್ಯ ಕೌಶಲ್ಯ ತೋರಿಸಿದ್ದಾರೆ. ಸಿ.ವಿ.ಶ್ರೀಧರ್ ನಿರ್ದೇಶನದ ಸೀತಾ ಗೀತಾ ದಾಟಿತೆ(೧೯೭೭) ಮತ್ತು ಎನ್.ಟಿ.ಆರ್ ನಿರ್ದೇಶನದ ಶ್ರೀಮದ್ ವಿರಾಟ್ ಪರ್ವಂ(೧೯೭೯) ಭವಾನಿ ಅಭಿನಯದ ಪ್ರಮುಖ ತೆಲುಗು ಚಿತ್ರಗಳು.

ಜನಪ್ರಿಯ ಮಲಯಾಳಂ ನಿರ್ದೇಶಕ ಶಶಿಕುಮಾರ್ ಅವರ ನಿನಕ್ಕು ‍ಞಾನುಮ್ ಎನಿಕ್ಕು ನೀಯುಮ್(೧೯೭೮) ಚಿತ್ರದ ಮೂಲಕ ಮಲಯಾಳಂ ಚಿತ್ರರಂಗ ಪ್ರವೇಶಿಸಿದ ಭವಾನಿ ೧೯೭೦ರ ದಶಕದ ಕೊನೆಯಲ್ಲಿ ಮಲಯಾಳಂನ ಅತ್ತ್ಯುತ್ತಮ ಸಂಗೀತಮಯ ಭಯಾನಕ ಚಿತ್ರಗಳಲ್ಲಿ ಒಂದು ಎಂದು ಗುರುತಿಸಲ್ಪಡುವ ಲೀಸಾ ಸೇರಿದಂತೆ ಅನೇಕ ಯಶಸ್ವಿ ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಮಲಯಾಳಂನ ಮೇರುನಟ ಪ್ರೇಮ್ ನಜೀರ್ ಅವರೊಂದಿಗೆ ನಾಯಕಿಯಾಗಿ ಅಭಿನಯಿಸಿದ ಲೀಸಾ ಚಿತ್ರದಲ್ಲಿ ಭೂತದ ಪಾತ್ರದಲ್ಲಿ ಸ್ಮರಣೀಯ ಅಭಿನಯ ನೀಡಿ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಪ್ರೇಮ್ ನಜೀರ್ ಮತ್ತು ಎಂ.ಜಿ.ಸೋಮನ್ ಅವರೊಂದಿಗೆ ಅಭಿನಯಿಸಿದ ತ್ರಿಕೋನ ಪ್ರೇಮ ಕಥೆಯುಳ್ಳ ಕಲ್ಪವೃಕ್ಷಂ(೧೯೭೮), ರವಿಕುಮಾರ್ ಅವರೊಂದಿಗೆ ಅನುಪಲ್ಲವಿ(೧೯೭೮) ಮತ್ತು ನೀಲ ತಾಮರಂ(೧೯೭೯) ಹಾಗೂ ಎಂ.ಜಿ.ಸೋಮನ್ ಅವರೊಂದಿಗೆ ಸರಸ್ವತೀಯಾಮಂ(೧೯೮೦) ಚಿತ್ರಗಳಲ್ಲಿ ಪ್ರೌಢ ಅಭಿನಯ ನೀಡಿದ್ದಾರೆ. ಜನಪ್ರಿಯ ಮಲಯಾಳಂ ನಿರ್ದೇಶಕ ಬೇಬಿ ಅವರ ಲೀಸಾ, ಸ್ತ್ರೀ ಒರು ದುಃಖಂ, ಅನುಪಲ್ಲವಿ ಮತ್ತು ಸರ್ಪಂಗಳಂತಹ ಯಶಸ್ವಿ ಚಿತ್ರಗಳಲ್ಲಿ ಅಭಿನಯಿಸಿದ ಭವಾನಿ ಅವರು ನಾಯಕಿಯಾಗಿ ಅಭಿನಯಿಸಿದ ಕೊನೆಯ ಚಿತ್ರ ಬೇಬಿ ಅವರ ನಿರ್ದೇಶನದ ಪಂಬರಂ(೧೯೭೯).

ನರೇಂದ್ರನ್ ಮಗನ್ ಜಯಕಾಂತನ್ ವಕ(೨೦೦೧) ಚಿತ್ರದ ಮೂಲಕ ಚಿತ್ರರಂಗಕ್ಕೆ ವಾಪಸ್ಸಾಗಿರುವ ಭವಾನಿ ತಾಂಡವಂ(೨೦೦೨), ಬಾಲೇಟ್ಟನ್(೨೦೦೩) ಮುಂತಾದ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಗಮನಾರ್ಹವಾಗಿ ಅಭಿನಯಿಸಿದ್ದಾರೆ. ಕಿರುತೆರೆಯನ್ನೂ ಪ್ರವೇಶಿಸಿರುವ ಭವಾನಿ ಮಳವಿಲ್ ಮನೋರಮಾ ವಾಹಿನಿಯ ಭಾಗ್ಯದೇವತಾ ಎಂಬ ತಮಿಳು ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ.

ದಕ್ಷಿಣ ಭಾರತದ ಜನಪ್ರಿಯ ನಟರಾದ ಎಂ.ಜಿ.ಆರ್, ಶಿವಾಜಿ ಗಣೇಶನ್, ಪ್ರೇಮ್ ನಜೀರ್, ಎನ್.ಟಿ.ಆರ್, ಜೈಶಂಕರ್, ಮುತ್ತುರಾಮನ್, ವಿಷ್ಣುವರ್ಧನ್, ಶ್ರೀನಾಥ್, ರಜನೀಕಾಂತ್, ಚಂದ್ರಮೋಹನ್, ಜಯನ್, ಎಂ.ಜಿ.ಸೋಮನ್, ಸುಕುಮಾರನ್ ಮತ್ತು ರವಿಕುಮಾರ್ ಮುಂತಾದವರೊಂದಿಗೆ ಅಭಿನಯಿಸಿದ್ದಾರೆ. ಸಿ.ವಿ.ಶ್ರೀಧರ್, ಸಿದ್ದಲಿಂಗಯ್ಯ, ಶಶಿಕುಮಾರ್ ಮುಂತಾದ ಸೃಜನಶೀಲ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ.

ವೈಯಕ್ತಿಕ ಜೀವನಸಂಪಾದಿಸಿ

ಪ್ರಸಿದ್ಧ ಮಲಯಾಳಂ ನಿರ್ಮಾಪಕ ಮತ್ತು ಸಂಗೀತ ನಿರ್ದೇಶಕ ರಘು ಕುಮಾರ್ ಅವರನ್ನು ೧೯೭೯ರಲ್ಲಿ ವಿವಾಹವಾದ ಭವಾನಿಯವರಿಗೆ ಭಾವನಾ ಮತ್ತು ಭವಿತಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇವರ ಪತಿ ರಘು ಕುಮಾರ್ ಫೆಬ್ರುವರಿ ೨೦, ೨೦೧೪ರಂದು ನಿಧನರಾಗಿದ್ದಾರೆ.

ಭವಾನಿ ಅಭಿನಯದ ಚಲನಚಿತ್ರಗಳ ಪಟ್ಟಿಸಂಪಾದಿಸಿ

ಮಲಯಾಳಂಸಂಪಾದಿಸಿ

ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೭೮ ಕಲ್ಪವೃಕ್ಷಂ ಶಶಿಕುಮಾರ್ ಪ್ರೇಮ್ ನಜೀರ್, ಎಂ.ಜಿ.ಸೋಮನ್
೧೯೭೮ ನಿನಕ್ಕು ‍ಞಾನುಮ್ ಎನಿಕ್ಕು ನೀಯುಮ್ ಶಶಿಕುಮಾರ್ ಪ್ರೇಮ್ ನಜೀರ್, ವಿಧುಬಾಲ
೧೯೭೮ ಪಿಚಿಪ್ಪೂ ಪಿ.ಗೋಪಿಕುಮಾರ್ ಪಿ.ಭಾಸ್ಕರನ್, ಸುಕುಮಾರಿ, ಸುಕುಮಾರನ್, ವಿಧುಬಾಲ
೧೯೭೮ ಲೀಸಾ ಬೇಬಿ ಪ್ರೇಮ್ ನಜೀರ್, ಜಯನ್, ಜಯಭಾರತಿ
೧೯೭೮ ಸ್ತ್ರೀ ಒರು ದುಃಖಂ ಬೇಬಿ ವಿಧುಬಾಲ, ಮುರಳಿಮೋಹನ್
೧೯೭೯ ಅನುಪಲ್ಲವಿ ಬೇಬಿ ಜಯನ್, ಶ್ರೀವಿದ್ಯಾ, ರವಿಕುಮಾರ್, ಸೀಮಾ
೧೯೭೯ ಚೂಲ ಶಶಿಕುಮಾರ್ ಎಂ.ಜಿ.ಸೋಮನ್
೧೯೭೯ ನೀಲ ತಾಮರಂ ಯೂಸುಫ್ ಅಲಿ ಕೆಚೇರಿ ರವಿಕುಮಾರ್, ಅಂಬಿಕಾ
೧೯೭೯ ಪಂಬರಂ ಬೇಬಿ ಪ್ರೇಮ್ ನಜೀರ್, ಶುಭಾ
೧೯೭೯ ಮಾಮಾಂಕಂ ಅಪ್ಪಚಾನ್ ಪ್ರೇಮ್ ನಜೀರ್, ಕೆ.ಆರ್.ವಿಜಯಾ, ಜಯನ್, ಅಂಬಿಕಾ
೧೯೭೯ ಮೋಚನಂ ತೊಪ್ಪಿಲ್ ಭಾಸಿ ಜಯನ್, ಜಯಭಾರತಿ, ಸುಕುಮಾರನ್, ಉನ್ನಿ ಮೇರಿ
೧೯೭೯ ವಾಲೆಡುತವನ್ ವಾಳಾಲ್ ಕೆ.ಜಿ.ರಾಜಶೇಖರನ್ ಪ್ರೇಮ್ ನಜೀರ್, ವಿಧುಬಾಲ, ಪ್ರಮೀಳಾ, ಉನ್ನಿಮೇರಿ
೧೯೭೯ ಸರ್ಪಂ ಬೇಬಿ ಪ್ರೇಮ್ ನಜೀರ್, ವಿಧುಬಾಲ, ಜಯನ್, ಸೀಮಾ, ರವಿಕುಮಾರ್
೧೯೮೦ ಮುತ್ತುಚಿಪ್ಪಿಕಳ್ ಹರಿಹರನ್ ಮಧು, ಶ್ರೀವಿದ್ಯಾ
೧೯೮೦ ಸರಸ್ವತೀಯಾಮಂ ಮೋಹನ್ ಕುಮಾರ್ ಎಂ.ಜಿ.ಸೊಮನ್

[೪]

ಕನ್ನಡಸಂಪಾದಿಸಿ

ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೭೪ ಬೂತಯ್ಯನ ಮಗ ಅಯ್ಯು ಸಿದ್ದಲಿಂಗಯ್ಯ ವಿಷ್ಣುವರ್ಧನ್, ಲೋಕೇಶ್, ಎಲ್.ವಿ.ಶಾರದಾ
೧೯೭೫ ಒಂದೇ ರೂಪ ಎರಡು ಗುಣ ಎ.ಎಂ.ಸಮೀಯುಲ್ಲಾ ವಿಷ್ಣುವರ್ಧನ್, ಚಂದ್ರಕಲಾ
೧೯೭೫ ಕಳ್ಳ ಕುಳ್ಳ ಕೆ.ಎಸ್.ಆರ್.ದಾಸ್ ವಿಷ್ಣುವರ್ಧನ್, ದ್ವಾರಕೀಶ್, ಜಯಲಕ್ಷ್ಮಿ
೧೯೭೫ ಕೂಡಿ ಬಾಳೋಣ ಎಂ.ಆರ್.ವಿಠಲ್ ವಿಷ್ಣುವರ್ಧನ್
೧೯೭೫ ನಾಗಕನ್ಯೆ ಎಸ್.ವಿ.ರಾಜೇಂದ್ರಸಿಂಗ್ ಬಾಬು ವಿಷ್ಣುವರ್ಧನ್
೧೯೭೫ ಮಂತ್ರಶಕ್ತಿ ಹುಣಸೂರು ಕೃಷ್ಣಮೂರ್ತಿ ಉದಯಕುಮಾರ್, ಕಲ್ಪನಾ, ದ್ವಾರಕೀಶ್
೧೯೭೬ ಅಪೂರ್ವ ಕನಸು ಪಿ.ಬಾಲಚಂದರ್ ಶ್ರೀನಾಥ್
೧೯೭೬ ಮಾಂಗಲ್ಯ ಬಂಧನ ವಿಜಯಸತ್ಯಂ ಜಯಂತಿ, ಬಸಂತ್ ಕುಮಾರ್ ಪಾಟಿಲ್
೧೯೭೭ ಶನಿಪ್ರಭಾವ ರತ್ನಾಕರ್-ಮಧುಸೂಧನ್ ವಿಷ್ಣುವರ್ಧನ್, ಬಿ.ಸರೋಜಾದೇವಿ
೧೯೭೭ ಸಹೋದರರ ಸವಾಲ್ ಕೆ.ಎಸ್.ಆರ್.ದಾಸ್ ವಿಷ್ಣುವರ್ಧನ್, ರಜನೀಕಾಂತ್, ಕವಿತಾ
೧೯೭೮ ವಂಶಜ್ಯೋತಿ ಎ.ಭೀಮ್ ಸಿಂಗ್ ಕಲ್ಪನಾ, ವಿಷ್ಣುವರ್ಧನ್, ಲೋಕೇಶ್

[೫]

ತಮಿಳುಸಂಪಾದಿಸಿ

ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೭೮ ಉಳೈಕ್ಕುಮ್ ಕಾರಂಗಳ್ ಕೆ.ಶಂಕರ್ ಎಂ.ಜಿ.ಆರ್, ಲತಾ
೧೯೭೬ ಭದ್ರಕಾಳಿ ಎ.ಸಿ.ತ್ರಿಲೋಗಚಂದರ್ ಶಿವಕುಮಾರ್, ರಾಣಿಚಂದ್ರ
೧೯೭೮ ಅವಳ್ ಒರು ಪಚೈ ಕುಳಂದೈ ಎಸ್.ಸಿ.ಶೇಖರ್ ವಿಜಯಕುಮಾರ್

ತೆಲುಗುಸಂಪಾದಿಸಿ

ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೭೭ ಬ್ರತುಕೆ ಒಕ ಪಂಡುಗ ಪಿ. ಚಂದ್ರಶೇಖರ್ ರೆಡ್ಡಿ ಚಂದ್ರಮೋಹನ್, ಶ್ರೀಧರ್, ಸತ್ಯಪ್ರಿಯಾ
೧೯೭೭ ಸೀತಾ ಗೀತಾ ದಾಟಿತೆ ಸಿ.ವಿ.ಶ್ರೀಧರ್ ಶ್ರೀಧರ್, ಕವಿತಾ
೧೯೭೯ ಶ್ರೀಮದ್ ವಿರಾಟ್ ಪರ್ವಂ ಉತ್ತರಾ ಎನ್.ಟಿ.ರಾಮರಾವ್ ಎನ್.ಟಿ.ರಾಮರಾವ್, ನಂದಮೂರಿ ಬಾಲಕೃಷ್ಣ

ದೂರದರ್ಶನಸಂಪಾದಿಸಿ

ಉಲ್ಲೇಖಗಳುಸಂಪಾದಿಸಿ

  1. "Bhavani (Actress) Age, Height,Net Worth & Bio". CelebrityHow. 29 March 2019. Retrieved 20 March 2020.
  2. "Lisa". Retrieved 20 March 2020.
  3. "Bhavani HD Movies". YouTube (in ಇಂಗ್ಲಿಷ್). Retrieved 20 March 2020.
  4. "ಭವಾನಿ ಅಭಿನಯದ ಮಲಯಾಳಂ ಚಲನಚಿತ್ರಗಳ ಪಟ್ಟಿ". ಮಲಯಾಳಚಲಚಿತ್ರಂ.ಕಾಮ್.
  5. "ಭವಾನಿ ಅಭಿನಯದ ಕನ್ನಡ ಚಿತ್ರಗಳ ಪಟ್ಟಿ". ಚಿಲೋಕ.ಕಾಮ್.
"https://kn.wikipedia.org/w/index.php?title=ಭವಾನಿ&oldid=981672" ಇಂದ ಪಡೆಯಲ್ಪಟ್ಟಿದೆ