ಬ್ಯಾಂಕು ಮತ್ತು ಗ್ರಾಹಕ ಸಂಬಂಧ
ಯಾವುದೇ ಬ್ಯಾಂಕಾಗಲಿ, ಅದರ ಪ್ರಮುಖ ಗುರಿ ಗ್ರಾಹಕನಿಗೆ ಸೇವೆ ಸಲ್ಲಿಸುವುದೇ ಆಗಿದೆ. ಗ್ರಾಹಕನೇ ಬ್ಯಾಂಕಿನ ಬಂಡವಾಳ, ಬ್ಯಾಂಕಿನ ಗ್ರಾಹಕ ಎನಿಸಿಕೊಳ್ಳಲು ಆತ ಕೆಲವು ನಿರ್ದಿಷ್ಟ ಲಕ್ಷಣಗಳನ್ನು ಹೊಂದಿರಬೇಕು ಮತ್ತು ಅದನ್ನು ಪಾಲಿಸುವಂತವನಾಗಿರಬೇಕು. ಅವುಗಳಲ್ಲಿ ಪ್ರಮುಖವಾಗಿ ಆತ ಪಾಲಿಸಬೇಕಾಗಿರುವುದೆಂದರೆ,
ಲಕ್ಷಣಗಳು
ಬದಲಾಯಿಸಿಸಾಮಾನ್ಯವಾಗಿ ಬ್ಯಾಂಕಿನಲ್ಲಿ ಠೇವಣಿಯಿಟ್ಟು ಖಾತೆ ತೆರೆದಿರಬೇಕು. ಖಾತೆ ತೆರೆದ ನಂತರ ಆ ಮೂಲಕ ಸ್ವಲ್ಪ ಕಾಲವಾದರೂ ವ್ಯವಹಾರ ನಡೆಸಬೇಕು. ಆಗ ಆತ ಗ್ರಾಹಕನಾಗಲು ಅರ್ಹತೆಯನ್ನು ಪಡೆಯುತ್ತಾನೆ. ಖಾತೆ ತೆರೆಯದೆಯೇ ಬ್ಯಾಂಕಿನೊಡನೆ ವ್ಯವಹರಿಸಲು ಶಕ್ಯವಿದೆ. ಆದರೆ ಅಂಥ ವ್ಯಕ್ತಿಗಳನ್ನು ಬ್ಯಾಂಕಿನ ಗ್ರಾಹಕರೆಂದು ಕರೆಯಲಾಗುವುದಿಲ್ಲ. ಆದ್ದರಿಂದ ಖಾತೆ ತೆರೆಯುವುದು ಗ್ರಾಹಕನೆನಿಸಿಕೊಳ್ಳಲು ಅತ್ಯಗತ್ಯ ಅರ್ಹತೆಯಾಗಿದೆ. ಗ್ರಾಹಕನು ವ್ಯವಹರಿಸುವುದು ಮುಖ್ಯವೇ ಹೊರತು ಇಷ್ಟೇ ಅವಧಿ ವ್ಯವಹರಿಸುವುದು ಎಂಬ ನಿಯಮವಿಲ್ಲ. ಬ್ಯಾಂಕಿನ ಗ್ರಾಹಕ ಒಬ್ಬ ವ್ಯಕ್ತಿಯಾಗಿರಬಹುದು. ಒಂದು ಬ್ಯಾಂಕು ಆಗಿರಬಹುದು ಅಥವಾ ಸಹಕಾರಿ ಸಂಘ, ಕೂಡು ಬಂಡವಾಳ ಸಂಸ್ಥೆ ಇತ್ಯಾದಿ ಸ್ವರೂಪದ ಯಾವುದೇ ಸಂಸ್ಥೆಯಾಗಿರಬಹುದು.
ಬ್ಯಾಂಕು ಮತ್ತು ಗ್ರಾಹಕರ ಸಂಬಂಧಗಳು
ಬದಲಾಯಿಸಿಬ್ಯಾಂಕು ಮತ್ತು ಗ್ರಾಹಕರ ವ್ಯವಹಾರವನ್ನು ಸಾಲಗಾರ ಮತ್ತು ಸಾಹುಕಾರರ ನಡುವಿನ ವ್ಯವಹಾರ ಸಂಬಂಧಗಳಿಗೆ ಹೋಲಿಸುವುದುಂಟು. ಹಣ ಪಡೆಯುವ ಮತ್ತು ಹಣ ನೀಡುವ ವ್ಯವಹಾರವೇ ಎರಡೂ ಕಡೆಗಳಲ್ಲಿ ಕಂಡು ಬಂದರೂ, ಬ್ಯಾಂಕು ಗ್ರಾಹಕನಿಗೆ ಸಾಹುಕಾರನ ಹಾಗೆ ಪರಿಚಯ, ನಂಬಿಕೆ, ವಿಶ್ವಾಸ, ಸ್ಥಾನಮಾನಗಳನ್ನು ಅವಲಂಬಿಸಿ ಸಾಲ ನೀಡುವುದಿಲ್ಲ. ಅದಕ್ಕೆ ಬದಲಾಗಿ ಗ್ರಾಹಕ ನೀಡುವ ಠೇವಣಿಯ ಮೇಲೆ, ಅವನು ನೀಡುವ ಖಾತರಿಯ ಮೇಲೆ ಅಥವಾ ಅವನಿಡುವ ಅಡಮಾನ, ಭದ್ರತೆಗೆ ಆಧಾರದ ಮೇಲೆ, ನಿರ್ದಿಷ್ಟ ಷರತ್ತುಗಳೊಂದಿಗೆ ಹಣ ನೀಡುತ್ತದೆ.
ತನ್ನ ಹಣಕ್ಕೆ ಧರ್ಮದರ್ಶಿಯ ಹಾಗೆ ವರ್ತಿಸಿ ಸೇವೆ ಸಲ್ಲಿಸುವ ಬ್ಯಾಂಕಿಗೆ ಪ್ರತಿಫಲವಾಗಿ ಗ್ರಾಹಕ ಸೇವಾ ಶುಲ್ಕವನ್ನು ನೀಡುತ್ತಾನೆ. ಗ್ರಾಹಕನ ಹಣ ಬ್ಯಾಂಕಿನಲ್ಲಿರುವವರೆಗೆ ಬ್ಯಾಂಕು ಆತನ ಚೆಕ್ಕು, ಹುಂಡಿ, ರಶೀದಿಗಳನ್ನು ಮನ್ನಿಸುತ್ತದೆ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಗ್ರಾಹಕನ ಹಣವನ್ನು ಶಾಖೆಗಳ ಮೂಲಕ ವರ್ಗಾಯಿಸುತ್ತದೆ. ದೇಶ-ವಿದೇಶಗಳಲ್ಲಿ ವ್ಯವಹರಿಸುವ ಗ್ರಾಹಕನ ಪರವಾಗಿ ಭರವಸೆ ನೀಡುತ್ತದೆ. ಗ್ರಾಹಕನಿಗೆ ಇತರರಿಂದ ಬರಬೇಕಾದ ಹಣವನ್ನು ವಸೂಲಿ ಮಾಡಿ ಅವನ ಲೆಕ್ಕಕ್ಕೆ ಜಮ ಮಾಡುತ್ತದೆ.
ಬ್ಯಾಂಕು ಗ್ರಾಹಕನಿಗೆ ಯಾವುದೇ ರೀತಿಯ ಸೇವೆಯನ್ನು ಸಲ್ಲಿಸಿದರೂ, ಆ ಸೇವೆ ನಿಯಮ ನಿರ್ಭಂಧಗಳಿಗೆ ಒಳಪಟ್ಟಿರುತ್ತದೆ. ಬ್ಯಾಂಕು ಎಂದೂ ಖಾಸಗಿ ವ್ಯಕ್ತಿಗಳಂತೆ ವ್ಯವಹರಿಸುವುದಿಲ್ಲ. ವ್ಯಕ್ತಿ-ವ್ಯಕ್ತಿಗಳ ನಡುವಣ ವ್ಯವಹಾರದಲ್ಲಿ ಅನೇಕ ರೀತಿಯ ರಿಯಾಯಿತಿಗಳಿಗೆ, ವೈಯಕ್ತಿಕ ನಿರ್ಧಾರಗಳಿಗೆ ಅವಕಾಶವುಂಟು. ಒಂದೇ ತೆರನಾದ ನಿಯಮವನ್ನು ಪರಿಪಾಲಿಸಿಕೊಂಡು ಬರಬೇಕೆಂಬ ಕಟ್ಟುಪಾಡು ಖಾಸಗಿ ವ್ಯಕ್ತಿಗಳಿಗಿಲ್ಲ. ಉದಾಹರಣೆಗೆ, ಸಾಲಿಗನೊಬ್ಬನು ಸಾಲಗಾರನೊಬ್ಬನಿಂದ ಸಾಲದ ಹಣವನ್ನು ಮರಳಿ ಪಡೆಯುವಲ್ಲಿ ಕೆಲವು ವೇಳೆ ದಯೆತೋರಬಹುದು; ಹಳೇಬಾಕಿ ಬರದಿದ್ದರೂ ಹೊಸ ಸಾಲ ನೀಡಬಹುದು; ಬಡ್ಡಿಯನ್ನು ಮನ್ನ ಮಾಡಬಹುದು ಅಥವಾ ಕಡಿಮೆ ಮಾಡಬಹುದು. ಸಾಲಗಾರನ ಗುಣ, ವಿಶ್ವಾಸ, ನಡತೆ, ಗೌರವ, ಕಷ್ಟದ ಪರಿಸ್ಥಿತಿಗಳು, ಸಾವು-ರೋಗಗಳ ಸನ್ನಿವೇಶಗಳು ಸಾಲಿಗನ ಮೇಲೆ ಪ್ರಭಾವ ಬೀರಬಹುದು. ಆದರೆ ಈ ಬಗೆಯ ಸಂಬಂಧ ಬ್ಯಾಂಕು ಮತ್ತು ಗ್ರಾಹಕರ ನಡುವಣ ವ್ಯವಹಾರದಲ್ಲಿ ಕಂಡುಬರುವುದಿಲ್ಲ. ಗ್ರಾಹಕನಿಗೆ ಬ್ಯಾಂಕಿನಿಂದ ನಿಯಮಾನುಸಾರ ಸೌಲಭ್ಯ ಪ್ರಾಪ್ತಿಯಾಗುತ್ತದಷ್ಟೇ!
ಗ್ರಾಹಕನು ಬೇಡಿದಾಗ ಅಥವಾ ನಿರ್ದಿಷ್ಟ ಕಾಲಾವಧಿಯ ನಂತರ ಆತ ಇಟ್ಟ ಹಣವನ್ನು ಬ್ಯಾಂಕರನ್ನು ಹಿಂದಿರುಗಿಸಬೇಕಾಗುವುದು. ಖಾಸಗಿ ವ್ಯವಹಾರದಲ್ಲಿ ಸಾಲಗಾರ ಸಾಲಿಗನನ್ನು ಕೇಳದಿದ್ದರೂ ಸಾಲಿಗ ಸಾಲವನ್ನು ಹಿಂದಿರುಗಿಸಬೇಕಾಗುತ್ತದೆ. ಬ್ಯಾಂಕಿಂಗ್ ವ್ಯವಹಾರದಲ್ಲಿ ಸಾಲಿಗನಿಂದ ಗ್ರಾಹಕನು ಕೇಳುವನೊ ಹೊರತು ಸಾಲಗಾರ ಎನಿಸಿಕೊಂಡ ಬ್ಯಾಂಕರ್ ಹಣವನ್ನು ಹಿಂದಿರುಗಿಸಲಾರನು. ಆದರೆ ಗ್ರಾಹಕನು ‘ಓವರ್ ಡ್ರಾಫ್ಟ್’ (ಇಟ್ಟ ಹಣಕ್ಕಿಂಥ ಹೆಚ್ಚು ಹಣ ಪಡೆದಾಗ) ಪಡೆದಾಗ ಮರುಪಾವತಿ ಮಾಡುವವರೆಗೆ ಬ್ಯಾಂಕರ್ ಗ್ರಾಹಕರ ನಡುವಣ ಸಾಲಗಾರ-ಸಾಲಿಗ ಎಂಬ ಸಂಬಂಧ ಅದಲು ಬದಲಾಗಿರುತ್ತದೆ. ಖಾಸಗಿ ವ್ಯವಹಾರದಲ್ಲಿ ಸಾಲಿಗ ಸಾಲಗಾರನನ್ನು, ಯಾವ ಸ್ಥಳದಲ್ಲಾದರೂ ಸಾಲದ ಹಣವನ್ನು ಮರುಪಾವತಿ ಮಾಡಲು ತಿಳಿಸಬಹುದು. ಇಲ್ಲಿ, ಕೊಟ್ಟ ಹಣವನ್ನು ಹಿಂದಕ್ಕೆ ಪಡೆಯಲು ನಿರ್ದಿಷ್ಟ ವೇಳೆ-ದಿನಗಳ ನಿರ್ಭಂಧವಿಲ್ಲ, ಆದರೆ ಬ್ಯಾಂಕ್ ವ್ಯವಹಾರದಲ್ಲಿ ಗ್ರಾಹಕನು ಬ್ಯಾಂಕಿನ ಕೆಲಸದ ಅವಧಿಯಲ್ಲಿ ಮಾತ್ರ ತಾನು ಖಾತೆ ತೆರೆದ ಬ್ಯಾಂಕಿನ ಶಾಖೆಯಲ್ಲಿ ಮಾತ್ರ ಹಣವನ್ನು ಪಡೆಯಬಲ್ಲ. ಸಾಲಿಗ, ಹಣ ನೀಡಿದಾಗ ‘ಸಾಲ’ ಎನಿಸಿಕೊಂಡರೆ, ಗ್ರಾಹಕ ಬ್ಯಾಂಕಿನಲ್ಲಿಡುವ ಹಣ ಠೇವಣಿ ಎನ್ನಿಸಿಕೊಳ್ಳುತ್ತದೆ. ಹೀಗೆ ಹಲವಾರು ವಿಧಗಳಲ್ಲಿ ಬ್ಯಾಂಕು ಮತ್ತು ಗ್ರಾಹಕರ ಸಂಬಂಧ ಖಾಸಗಿ ವ್ಯವಹಾರದ ಸಾಲಿಗ-ಸಾಲಗಾರರ ಸಂಬಂಧಕ್ಕಿಂತ ಭಿನ್ನವೂ ವಿಶಿಷ್ಟವೂ ಗೌರವಾನ್ವಿತವೂ ಆದ ವ್ಯವಹಾರ ಸಂಬಂಧವಾಗಿದೆ.
ಈಚೆಗೆ ಬ್ಯಾಂಕು ಮತ್ತು ಗ್ರಾಹಕರ ಸಂಬಂಧ ಕೇವಲ ಪತ್ರ ವ್ಯವಹಾರದ ಭಾಂದವ್ಯವಾಗಿರದೆ ಪರಸ್ಪರ ಪರಿಚಯದ ಆತ್ಮೀಯ ಭಾಂದವ್ಯವಾಗಿರಬೇಕು ಎಂಬ ಪ್ರವೃತ್ತಿ ಬೆಳೆದುಬರುತ್ತಿದೆ. ಜೊತೆಗೆ ಗ್ರಾಹಕರ ಕುಂದುಕೊರತೆಗಳನ್ನು ಕುರಿತು ನೇರ ಸಂವಾದದ ಮೂಲಕ ತಿಳಿಯುವುದು, ಹೆಚ್ಚು ಪ್ರಭಾವಕಾರಿ ಎಂಬುದು ವಿದಿತವಾದ ಅಂಶವಾಗಿದೆ. ಇದರ ಫಲವಾಗಿ ಈಗ ಎಲ್ಲೆಡೆ ಬ್ಯಾಂಕುಗಳು ‘ಗ್ರಾಹಕರ ಸಮಾವೇಶ’ಗಳನ್ನು ಏರ್ಪಡಿಸುತ್ತಿರುವುದನ್ನು ಕಾಣಬಹುದು. ಕೆಲವೆಡೆ ‘ಗ್ರಾಹಕರ ದಿನ’ಗಳೆಂದು ನಿರ್ಧರಿಸಿ ಆ ದಿನವನ್ನು ಕೇವಲ ಗ್ರಾಹಕರ ಕುಂದು ಕೊರತೆಗಳ ನಿವೇದನೆ ಹಾಗೂ ಪರಿಹಾರ ಸೂಚನೆಗೆ ಮೀಸಲಾಗಿಟ್ಟಿರುವುದು ಕಂಡುಬರುತ್ತದೆ. ಈ ಬಗೆಯ ಕಾರ್ಯಕ್ರಮಗಳು, ಗ್ರಾಹಕರಲ್ಲಿರುವ ತಿಳಿವಳಿಕೆಯನ್ನು ಬ್ಯಾಂಕು ಅಗತ್ಯವಾಗಿ ಅರಿಯಬೇಕಾದ ಅಂಶವಾಗಿದೆ ಎಂಬುದನ್ನು ಸಾರುತ್ತವೆ.
ಬ್ಯಾಂಕು ಪತ್ರಗಳ ಸ್ವರೂಪ
ಬದಲಾಯಿಸಿಜನರಲ್ಲಿ ನಿಕಟ ಭಾಂದವ್ಯ ಹೊಂದಿ ನಿರಂತರವಾಗಿ ವ್ಯವಹರಿಸುವ ಸಂಸ್ಥೆಯೆಂದರೆ ಬ್ಯಾಂಕು, ಆದ ಕಾರಣ ಜನರ ದೈನಂದಿನ ವ್ಯವಹಾರದಲ್ಲಿ, ಸಾರ್ವಜನಿಕ ಜೀವನದಲ್ಲಿ, ಗ್ರಾಹಕರೊಡನೆ ನಡೆಸುವ ವಹಿವಾಟಿನಲ್ಲಿ ಮುಖತಃ ಹಾಗು ಲಿಖಿತದಲ್ಲಿ ವೈವಿಧ್ಯಮಯವಾಗಿ ವ್ಯವಹರಿಸುತ್ತದೆ. ವಿಚಾರ ವಿನಿಮಯವನ್ನು ಮೂಖತಃ ನಡೆಸಿದರೂ ಬ್ಯಾಂಕುಗಳು ತಮ್ಮ ವ್ಯವಹಾರವನ್ನು ಜನರೊಂದಿಗೆ ಬರೆಹ ರೂಪದಲ್ಲೇ ನಡೆಸುತ್ತವೆ ಎನ್ನಬಹುದು. ನಿಯಮಾನುಸಾರ ವ್ಯವಹಾರ ನಡೆಸುವುದರಿಂದಲೂ ನಾನಾ ರೀತಿಯ ವಹಿವಾಟುಗಳು ನಡೆಯುವುದರಿಂದಲೂ ಬ್ಯಾಂಕ್ ಸೇವಾಸಂಸ್ಥೆಯಾಗಿರುವುದರಿಂದಲೂ ಅದು ಇತರರೊಡನೆ ವ್ಯವಹರಿಸುವಾಗ ನಡೆಸುವ ಪತ್ರ ವ್ಯವಹಾರವು ಪ್ರಾಮಾಣಿಕವೂ ಖಚಿತವೂ ಪರಿಪೂರ್ಣವೂ ಆಗಿರಬೇಕು.
ಬ್ಯಾಂಕಿನ ಪತ್ರ ವ್ಯವಹಾರವೆಂದರೆ ಗ್ರಾಹಕ-ಬ್ಯಾಂಕಿನ ನಡುವಣ ನಿಯಮಬದ್ಧ, ಸೌಜನ್ಯಯುತ ಹಾಗೂ ಅರ್ಥ ಪೂರ್ಣವಾದ ವ್ಯವಹಾರಕ್ಕೆ ಸಾಧನವಾದ, ಲಿಖಿತ ಸಂವಾದದ ಪತ್ರಗಳು ಎನ್ನಬಹುದು. ಬ್ಯಾಂಕಿನ ಎಲ್ಲ ವ್ಯವಹಾರ ರಂಗಗಳಲ್ಲಿಯೂ ಪತ್ರ ವ್ಯವಹಾರ ಅನಿವಾರ್ಯವಾಗಿದೆ. ವಾಣಿಜ್ಯ ಬ್ಯಾಂಕುಗಳ ವ್ಯವಹಾರದಲ್ಲಂತೂ ಪತ್ರ ವ್ಯವಹಾರ ನಿತ್ಯ ವಿದ್ಯಮಾನಗಳ ಕೊಂಡಿ ಆಗಿದೆ.
ಬ್ಯಾಂಕುಗಳ ಪತ್ರ ವ್ಯವಹಾರವನ್ನು ಹಲವು ಬಗೆಯಲ್ಲಿ ವರ್ಗೀಕರಿಸುತ್ತಾರೆ
ಬದಲಾಯಿಸಿ೧. ಬ್ಯಾಂಕು-ಗ್ರಾಹಕರ ಮಧ್ಯೆ ನಡೆಯುವ ಪತ್ರ ವ್ಯವಹಾರ.
೨. ಪ್ರಧಾನ ಕಚೇರಿ-ಶಾಖಾ ಕಚೇರಿ ನಡುವಣ ವ್ಯವಹಾರ ಪತ್ರಗಳು.
೩. ಸರ್ಕಾರಿ ಕಚೇರಿಗಳೊಂದಿಗೆ ಬ್ಯಾಂಕ್ ನಡೆಸುವ ಪತ್ರ ವ್ಯವಹಾರ.
೪. ಖಾಸಗಿ ವ್ಯಕ್ತಿಗಳು ಮತ್ತು ಬ್ಯಾಂಕು ನಡುವಣ ಪತ್ರ ವ್ಯವಹಾರ.
೫. ಸಾರ್ವಜನಿಕ ಗಣ್ಯರೊಂದಿಗೆ ನಡೆಯುವ ಪತ್ರ ವ್ಯವಹಾರ.
೬. ಹಣ ಸಂಬಂಧದ ಪತ್ರ ವ್ಯವಹಾರ.
೭. ಹಣ ಸಂಬಂಧರಹಿತ ಪತ್ರ ವ್ಯವಹಾರ.
೮. ಅಚ್ಚಾರ ನಮೂನೆಗಳ ಮೂಲಕ ವ್ಯವಹಾರ.
೯. ಸ್ವಲಿಖಿತ ಪತ್ರ ವ್ಯವಹಾರ ಇತ್ಯಾದಿಯಾಗಿ ಹತ್ತಾರು ಬಗೆಗಳಲ್ಲಿ ವರ್ಗಿಕರಿಸಿ ವಿಶ್ಲೇಷಿಸುತ್ತಾರೆ.
ಬ್ಯಾಂಕಿನ ಪತ್ರ ವ್ಯವಹಾರಗಳು
ಬದಲಾಯಿಸಿಬ್ಯಾಂಕಿನ ಪತ್ರ ವ್ಯವಹಾರಗಳಲ್ಲಿ ಅಚ್ಚಾದ ನಮೂನೆಗಳನ್ನು ಬಳಸುವುದು ಈಗ ಎಲ್ಲೆಡೆ ವಾಡಿಕೆಯಾಗಿರುವ ಸಂಗತಿಯಾಗಿದೆ, ಇದರಿಂದ ಹಲವಾರು ಸೌಲಭ್ಯಗಳಿವೆ. ಪತ್ರಗಳನ್ನು ಬರೆಯುವುದಕ್ಕಿಂತ ಅಚ್ಚಾದ ಫಾರಂಗಳನ್ನು ಭರ್ತಿ ಮಾಡುವುದರಿಂದ ಸಮಯ, ಶ್ರಮ ಹಾಗು ಹಣದ ಉಳಿತಾಯವಾಗುತ್ತದೆ. ವ್ಯಕ್ತಿ-ವ್ಯಕ್ತಿಗೆ ಬರೆಹದ ಭಾಷೆ, ಲಿಪಿ, ಶೈಲಿ ಇತ್ಯಾದಿಗಳು ವ್ಯತ್ಯಾಸವಾಗಿ ಲೋಪದೋಷಗಳು ಉಂಟಾಗುವುದು ತಪ್ಪುತ್ತದೆ; ಅಚ್ಚಾದ ಫಾರಂಗಳಲ್ಲಿ ಬಹುಮಟ್ಟಿಗೆ ಎಲ್ಲಾ ಬಗೆಯ ಅಂಶಗಳೂ ನಿರೂಪಿತವಾಗಿರುತ್ತವೆ. ಸ್ವತಂತ್ರ ಆಲೋಚನೆಯಿಂದ, ವೈಯಕ್ತಿಕ ಹೊಣೆಗಾರಿಕೆಯಿಂದ ಪತ್ರ ಬರೆಯುವಾಗ ಭಿನ್ನ-ಭಿನ್ನ ಸಾಮರ್ಥ್ಯದ ಫಲವಾಗಿ ಪತ್ರಗಳನ್ನು ಭಿನ್ನತೆ ಉಂಟಾಗುವ ಸಂಭವವಿದೆ. ಅಚ್ಚಾದ ಫಾರಂಗಳನ್ನು ಭರ್ತಿಮಾಡುವುದು ಸುಲಭದ ಕೆಲಸವೂ ಹೌದು; ಖಾಲಿ ಜಾಗಗಳಲ್ಲಿ ಪದಗಳನ್ನು ಭರ್ತಿ ಮಾಡುವುದು, ಕೊಟ್ಟಿರುವ ವಿವರಗಳಲ್ಲಿ ಸಂಬಂಧಿಸಿದ್ದಕ್ಕೆ ಸರಿ ಚಿಹ್ನೆ ಹಾಕುವುದು; ಸಲ್ಲದ ಸಂಗತಿಗಳಿಗೆ ಕಾಟು ಹೊಡೆಯುವುದು ಮುಂತಾದ ಕ್ರಮಗಳು ಉತ್ತರಗಳಲ್ಲಿ ಕ್ರಮಬದ್ಧತೆಯನ್ನು ಉಂಟು ಮಾಡುವುದರ ಜೊತೆಗೆ ವರ್ಗಿಕರಣಕ್ಕೂ ಆಯ್ಕೆಗೂ ಸಹಕಾರಿಯಾಗುತ್ತದೆ.
ಅಚ್ಚಾದ ಫಾರಂಗಳು ಎಷ್ಟೇ ಉಪಯುಕ್ತವಾದರೂ ಬ್ಯಾಂಕಿನ ಎಲ್ಲ ವ್ಯವಹಾರಗಳಲ್ಲಿಯೂ ಅವನ್ನೇ ಬಳಸಲಾಗುವುದಿಲ್ಲ; ಸಮಯ ಸಂದರ್ಭಗಳಿಗೆ ತಕ್ಕಂತೆ ಅನಿವಾರ್ಯವಾಗಿ ಪತ್ರ ರಚನೆ ಮಾಡಬೇಕಾಗುತ್ತದೆ. ಪತ್ರಗಳನ್ನು ಉಕ್ತಲೇಖನ ಕೊಟ್ಟು ಬರೆಸಲಾಗುವುದು ಮತ್ತು ಟೈಪಿಸಲಾಗುವುದು; ಇಲ್ಲವೇ ಸ್ವಯಂ ಬರೆಯಲಾಗುವುದು. ಲಿಖಿತ ಪತ್ರಗಳಲ್ಲಿ ಉತ್ತಮ ವಾಣಿಜ್ಯ ಪತ್ರದ ಲಕ್ಷಣಗಳೆಲ್ಲಾ ಇರಬೇಕಾದದ್ದು ಅತ್ಯವಶ್ಯ. ಸಂಕ್ಷಿಪ್ತತೆ, ವಿನಯಪೂರ್ವಕ ನಿರೂಪಣೆ ಇತ್ಯಾದಿ ಅಂಶಗಳು ಪರಿಪಾಲನೀಯ ಸಂಗತಿಗಳಾಗಿವೆ. ವಿಚಾರಣಾಪತ್ರ, ದೂರು ಪತ್ರ, ಬಾಕಿ ವಸೂಲಿ ಪತ್ರ ಮುಂತಾದವನ್ನು ಲಿಖಿಸುವಲ್ಲಿ ಜಾಣ್ಮೆ, ತಾಳ್ಮೆ, ಚಾತುರ್ಯ, ಸೌಜನ್ಯ, ಎಚ್ಚರಿಕೆಯ ಗುಣಗಳು ಎಷ್ಟಿದ್ದರೂ ಸಾಲದು. ಸಕಾಲದಲ್ಲಿ ಸಮರ್ಪಕವಾಗಿ ಉತ್ತರಿಸುವುದು ಗ್ರಾಹಕನ ಹಿತ ದೃಷ್ಟಿಯಿಂದ ಬಹುಮುಖ್ಯ. ಬ್ಯಾಂಕು ತನ್ನ ಪತ್ರ ವ್ಯವಹಾರದಲ್ಲಿ ಗ್ರಾಹಕನ ಲೆಕ್ಕ-ಹಣದ ಬಗ್ಗೆ ಗೋಪ್ಯತೆಯನ್ನು ಕಾಪಾಡಬೇಕು. ಅಸಮಾಧಾನಗೊಂಡ ಗ್ರಾಹಕರಿಗೆ ಸಮಾಧಾನದ ಉತ್ತರಗಳನ್ನು ನೀಡಬೇಕು; ಪ್ರತಿಭಟನೆಗೆ ಮರುಪ್ರತಿಭಟನೆ ಸೂಕ್ತ ಉತ್ತರವಲ್ಲ.
ಬ್ಯಾಂಕ್ ವ್ಯವಹಾರದ ಪತ್ರಗಳನ್ನು ಠೇವಣಾತಿಗಳಿಗೆ ಸಂಬಂಧಿಸಿದ ಪತ್ರಗಳು, ಸಾಲ ವ್ಯವಹಾರದ ಪತ್ರಗಳು, ಇತರ ಸೇವೆಗಳಿಗೆ ಸಂಬಂಧಿಸಿದ ಪತ್ರಗಳು; ಚೆಕ್ಕು ವ್ಯವಹಾರ ಎಂದು ಸ್ಥೂಲವಾಗಿ ವರ್ಗಿಕರಿಸಬಹುದು.
ಬ್ಯಾಂಕಿನ ಪತ್ರ ವ್ಯವಹಾರದಲ್ಲಿ ಬ್ಯಾಂಕು ಗ್ರಾಹಕನಿಗೆ ಬರೆಯುವ ಅಥವಾ ಗ್ರಾಹಕನು ಬ್ಯಾಂಕಿಗೆ ಬರೆಯುವ ಪತ್ರಗಳಿಗೆ ಆಧ್ಯತೆಯಿದೆ. ಗ್ರಾಹಕ ಮತ್ತು ಬ್ಯಾಂಕ್ ನಡುವಣ ಪತ್ರ ವ್ಯವಹಾರದ ಮೊದಲ ಹೆಜ್ಜೆಯೆಂದರೆ ಗ್ರಾಹಕನು ಖಾತೆ ತೆರೆಯುವುದು ಎನ್ನಬಹುದು. ಈ ಸಂದರ್ಭದಲ್ಲಿ ಠೇವಣಾತಿ, ಸಾಲದ ವ್ಯವಹಾರ ಹಾಗೂ ಚೆಕ್ಕುಗಳ ಬಗ್ಗೆ ಪ್ರಸ್ತಾಪಿಸುವುದು ಅಗತ್ಯವಾಗಿದೆ.