ವಟ್ಟಗಳು ಮತ್ತು ರಿಯಾಯಿತಿಗಳು

(ರಿಯಾಯಿತಿ ಇಂದ ಪುನರ್ನಿರ್ದೇಶಿತ)

ವಟ್ಟಗಳು ಮತ್ತು ರಿಯಾಯಿತಿಗಳು ಎಂದರೆ ಸರಕುಗಳು ಮತ್ತು ಸೇವೆಗಳ ಮೂಲ ಬೆಲೆಯಲ್ಲಿ ಕಡಿತಗಳು. ಇವು ವಿತರಣಾ ಮಾಧ್ಯಮದಲ್ಲಿ ಎಲ್ಲಿಯಾದರೂ ಆಗಬಹುದು, ಮತ್ತು (ತಯಾರಕರು ನಿರ್ಧರಿಸಿದ ಮತ್ತು ಹಲವುವೇಳೆ ಪ್ಯಾಕೇಜ್ ಮೇಲೆ ಮುದ್ರಿಸಿದ) ತಯಾರಕರ ಪಟ್ಟಿಬೆಲೆ, (ಚಿಲ್ಲರೆ ವ್ಯಾಪಾರಿಯು ನಿಗದಿಪಡಿಸಿದ ಮತ್ತು ಹಲವುವೇಳೆ ಉತ್ಪನ್ನಕ್ಕೆ ಅಂಟುಚೀಟಿಯೊಂದಿಗೆ ಲಗತ್ತಿಸಲಾದ) ಚಿಲ್ಲರೆ ಬೆಲೆ, ಅಥವಾ (ಸಾಮಾನ್ಯವಾಗಿ ಲಿಖಿತ ರೂಪದಲ್ಲಿ ಸಂಭಾವ್ಯ ಖರೀದಿದಾರನಿಗೆ ಉಲ್ಲೇಖಿಸಲಾದ) ಪಟ್ಟಿಬೆಲೆಯನ್ನು ಮಾರ್ಪಡಿಸಬಹುದು. ರಿಯಾಯಿತಿ ನೀಡಿಕೆಯ ಅನೇಕ ಉದ್ದೇಶಗಳಿವೆ. ಇವುಗಳಲ್ಲಿ ಅಲ್ಪಕಾಲದ ಮಾರಾಟಗಳನ್ನು ಹೆಚ್ಚಿಸುವುದು, ಹಳೆಯದಾದ ಸಾಮಾನುಗಳನ್ನು ಸಾಗಿಸುವುದು, ಮಹತ್ವದ ಗ್ರಾಹಕರಿಗೆ ಪ್ರತಿಫಲ ನೀಡುವುದು, ವಿತರಣಾ ಮಾಧ್ಯಮದ ಸದಸ್ಯರಿಗೆ ಒಂದು ಕಾರ್ಯ ನಿರ್ವಹಿಸಲು ಪ್ರೋತ್ಸಾಹಿಸುವುದು, ಅಥವಾ ಅನ್ಯಥಾ ರಿಯಾಯಿತಿ ನೀಡುವವನಿಗೆ ಪ್ರಯೋಜನವಾಗುವ ವರ್ತನೆಗಳನ್ನು ನೀಡುವುದು ಸೇರಿವೆ. ಕೆಲವು ವಟ್ಟಗಳು ಮತ್ತು ರಿಯಾಯಿತಿಗಳು ವ್ಯಾಪಾರವರ್ಧನೆಯ ರೂಪಗಳಾಗಿರುತ್ತವೆ. ಅನೇಕ ರಿಯಾಯಿತಿಗಳು ಮಾರಾಟಗಾರರಿಗೆ ಗ್ರಾಹಕ ಹೆಚ್ಚುವರಿಯ ಸ್ವಲ್ಪ ಭಾಗವನ್ನು ಸೆರೆಹಿಡಿಯಲು ಅನುಮತಿಸುವ ಬೆಲೆ ತಾರತಮ್ಯದ ವಿಧಾನಗಳಾಗಿರುತ್ತವೆ.

ಅತ್ಯಂತ ಸಾಮಾನ್ಯ ಪ್ರಕಾರಗಳ ವಟ್ಟಗಳು ಮತ್ತು ರಿಯಾಯಿತಿಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.

ವ್ಯಾಪಾರ ರಿಯಾಯಿತಿಗಳೆಂದರೆ ಸಗಟು ವ್ಯಾಪಾರಿ ಅಥವಾ ತಯಾರಕನು ಚಿಲ್ಲರೆ ವ್ಯಾಪಾರಿಗೆ ಪಟ್ಟಿಬೆಲೆಯಲ್ಲಿ ನೀಡುವ ಬೆಲೆಯಲ್ಲಿನ ಕಡಿತಗಳು. ನಗದು ರಿಯಾಯಿತಿಗಳೆಂದರೆ ಸಾಲಗ್ರಾಹಿಗೆ ನೀಡಲಾಗುವ ಬೆಲೆಯಲ್ಲಿನ ಕಡಿತಗಳು. ನಿರ್ದಿಷ್ಟ ಸಮಯದೊಳಗೆ ಪಾವತಿ ಮಾಡುವಂತೆ ಸಾಲಗ್ರಾಹಿಯನ್ನು ಪ್ರೋತ್ಸಾಹಿಸಲು ಇವನ್ನು ನೀಡಲಾಗುತ್ತದೆ. ಸಂದಾಯವನ್ನು ವೇಗಗೊಳಿಸಲು ಮತ್ತು ಹೀಗೆ ಸಂಸ್ಥೆಗೆ ನಗದು ಹರಿವನ್ನು ಒದಗಿಸಲು ಈ ರಿಯಾಯಿತಿಗಳು ಉದ್ದೇಶಿತವಾಗಿರುತ್ತವೆ. ಕೆಲವೊಮ್ಮೆ ಇವನ್ನು ಪ್ರಚಾರ ಸಾಧನವಾಗಿ ಬಳಸಲಾಗುತ್ತದೆ. ಉದಾಹರಣೆಗೆ ೨/೧೦ ಒಟ್ಟು ೩೦ - ಇದರರ್ಥ ಖರೀದಿದಾರನು ಸರಕುಪಟ್ಟಿ ದಿನಾಂಕದ ೩೦ ದಿನಗಳೊಳಗೆ ಪಾವತಿ ಮಾಡಬೇಕು, ಆದರೆ ಅವರು ಸರಕುಪಟ್ಟಿ ದಿನಾಂಕದ ೧೦ ದಿನಗಳೊಳಗೆ ಪಾವತಿ ಮಾಡಿದರೆ ಶೇಕಡ ೨ರಷ್ಟು ರಿಯಾಯಿತಿ ಪಡೆಯುವರು.

ಕೆಲವು ಚಿಲ್ಲರೆ ವ್ಯಾಪಾರಿಗಳು (ವಿಶೇಷವಾಗಿ ಕಡಿಮೆ ಲಾಭ ಗಳಿಸುವ ಸಣ್ಣ ವ್ಯಾಪಾರಿಗಳು) ನಗದಿನಲ್ಲಿ ಪಾವತಿ ಮಾಡುವ ಗ್ರಾಹಕರಿಗೆ ರಿಯಾಯಿತಿಗಳನ್ನು ನೀಡುತ್ತಾರೆ. ಇದರಿಂದ ಕ್ರೆಡಿಟ್ ಕಾರ್ಡ್ ವಹಿವಾಟುಗಳ ಮೇಲಿನ ಶುಲ್ಕ ಪಾವತಿಯನ್ನು ತಪ್ಪಿಸಬಹುದು.

ಭಾಗಶಃ ಸಂದಾಯದ ರಿಯಾಯಿತಿ - ಇದು ವ್ಯಾಪಾರ ರಿಯಾಯಿತಿಯನ್ನು ಹೋಲುತ್ತದೆ. ಮಾರಾಟಗಾರನು ನಗದು ಹರಿವು ಅಥವಾ ದ್ರವತೆಯನ್ನು ಸುಧಾರಿಸಲು ಬಯಸಿದಾಗ, ಆದರೆ ಖರೀದಿದಾರನು ಸಾಮಾನ್ಯವಾಗಿ ಅಪೇಕ್ಷಿತ ರಿಯಾಯಿತಿ ಗಡುವನ್ನು ಪೂರೈಸಲು ಸಾಧ್ಯವಿಲ್ಲ ಎಂದು ಕಂಡುಕೊಂಡಾಗ ಇದನ್ನು ಬಳಸಲಾಗುತ್ತದೆ. ಖರೀದಿದಾರನು ಸಾಧ್ಯವಾದಷ್ಟು ಮಾಡುವ ಸಂದಾಯಕ್ಕೆ ಭಾಗಶಃ ರಿಯಾಯಿತಿಯು ಮಾರಾಟಗಾರನ ನಗದು ಹರಿವಿಗೆ ಭಾಗಶಃ ನೆರವಾಗುತ್ತದೆ.