ಬಡ್ಡಿ
ಬಡ್ಡಿ ಎಂದರೆ ಒಬ್ಬರು ಇನ್ನೊಬ್ಬರ ಹಣವನ್ನು ಉಪಯೊಗಿಸಿದ್ದುದಕ್ಕಾಗಿ ನೀಡುವ ಶುಲ್ಕವೆನ್ನಬಹುದು. ಬಡ್ಡಿಯು ಇಂದಿನ ಆರ್ಥಿಕ ಜಗತ್ತಿನಲ್ಲಿ ಬಹು ಮುಖ್ಯ ಸ್ಥಾನವನ್ನು ಪಡೆದಿದೆ. ನಿತ್ಯ ವ್ಯಾಪಾರ ವ್ಯವಹಾರ, ವಹಿವಾಟುಗಳಲ್ಲಿ ಬಡ್ಡಿ ಎಂಬುದು ಬೆರೆತು ಹೋಗಿದೆ. ಪ್ಲೇಟೋ, ಅರಿಸ್ಟಾಟಲ್, ಸಿಸೆರೊ, ಕೌಟಿಲ್ಯ ಮೊದಲಾದವರು ಅಧಿಕ ದರದ ಬಡ್ಡಿಯ ವಸೂಲಿಯನ್ನು ಖಂಡಿಸಿದ್ದಾರೆ. ಇವರೆಲ್ಲರು ಕುಸೀದ (ಯುಸೂರಿ) ಪದ್ಧತಿಯ ವಿರೋಧಿಗಳು. ಆದರೆ ಮೋಸಸ್‍ನ ಸಿದ್ಧಾಂತವು ಬಡ್ಡಿಯನ್ನು ತೆಗೆದುಕೊಳ್ಳುವ ಪದ್ಧತಿಯನ್ನೇ ಖಂಡಿಸಿದೆ. ಹಿಂದೂ ಧರ್ಮ ಶಾಸ್ತ್ರವು ಅತ್ಯಧಿಕ ಬಡ್ಡಿಯನ್ನು ತೆಗೆದುಕೊಳ್ಳುವ ಪರಿಪಾಠವನ್ನು ನಿಷೇಧಿಸಿದೆ. ವಿವಿಧ ವಿದ್ವಾಂಸರು ಈ ಬಡ್ಡಿಯನ್ನು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ.
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
- ಸೆಲಿಗ್‍ಮನ್ : ಬಡ್ಡಿಯು ಬಂಡವಾಳಕ್ಕೆ ಪ್ರತಿಫಲವಾಗಿದೆ.
- ಟಿ.ಎನ್.ಕಾರ್ವರ್ : ಬಡ್ಡಿಯು ಬಂಡವಾಳದ ಮಾಲಿಕರಿಗೆ ಹೋಗುವ ಲಾಭವಾಗಿದೆ.
- ನಟ್ ವಿಕ್ಸೆಲ್ : ಬಂಡವಾಳದ ಉತ್ಪಾದಕತ್ವಕ್ಕಾಗಿ ಅದನ್ನು ಸಾಲವಾಗಿ ಪಡೆದವನು ಅದನ್ನು ತನಗೆ ಬಿಟ್ಟುಕೊಟ್ಟ ಮಾಲಿಕನಿಗೆ ನೀಡುವ ಬಹುಮಾನವಾಗಿದೆ.
- ಮಾರ್ಷಲ್ : ಯಾವುದೇ ಮಾರುಕಟ್ಟೆಯಲ್ಲಿ ಬಂಡವಾಳವನ್ನು ಉಪಯೋಗಿಸಿದ್ದಕ್ಕಾಗೆ ನೀಡುವ ಬೆಲೆಯೇ ಬಡ್ಡಿ.
- ಜೆ.ಎಂ.ಕೀನ್ಸ್ : ಸುಮ್ಮನೆ ಮುಚ್ಚಿಟ್ಟಿರುವುದಕ್ಕಿಂತ ತಮ್ಮ ಸಂಪತ್ತನ್ನು ಹೊರತೆಗೆದು ಉಪಯೋಗಿಸುವುದನ್ನು ಪ್ರೋತ್ಸಾಹಿಸುವುದಕ್ಕಾಗಿ ಜನರಿಗೆ ನೀಡುವ ಹೆಚ್ಚಿನ ಹಣವೇ ಬಡ್ಡಿಯಾಗಿದೆ.
ಒಂದು ಗೊತ್ತಾದ ಕಾಲಾವದಿಯಲ್ಲಿ ಹಣವನ್ನು ಬಳಸಿಕೊಂಡದ್ದಕ್ಕಾಗಿ ಪಾವತಿ ಮಾಡಲಾಗುವ ಬೆಲೆ (ಇಂಟರೆಸ್ಟ್). ಇದನ್ನು ಸಾಮಾನ್ಯವಾಗಿ ಶೇಕಡಾ ದರವಾಗಿ ಅಭಿವ್ಯಕ್ತಿಸಲಾಗುತ್ತದೆ. ಆಧುನಿಕ ಆರ್ಥಿಕ ವ್ಯವಸ್ಥೆಯಲ್ಲಿ ಬಡ್ಡಿಯಸ್ಥಾನ ಮಹತ್ತ್ವದ್ದು. ಬಡ್ಡಿಯನ್ನು ವಿಧಿಸುವುದು ಪಾಪದ ಕಾರ್ಯವೆಂದು ಭಾವಿಸಿದ್ದ ಕಾಲವೊಂದಿತ್ತು. ಆದರೆ ಇಂದಿನ ಬಂಡವಾಳವಾದಿ ಉತ್ಪಾದನ ಹಣದ ಉಬ್ಬರ ಮತ್ತು ಮುಗ್ಗಟ್ಟೇ ಮೊದಲಾದ ಸಮಸ್ಯೆಗಳ ನಿವಾರಣೆ-ಇವಕ್ಕೆ ಬಡ್ಡಿ ಒಂದು ಪ್ರಮುಖ ಸಾಧನವಾಗಿ ಬಳಕೆಯಾಗುತ್ತಿದೆ.
ಸೆಲಿಗ್ಮನ್ನನ ಪ್ರಕಾರ ಬಡ್ಡಿ ಬಂಡವಾಳಕ್ಕೆ ದೊರಕುವ ಪ್ರತಿಫಲ. ಆದರೆ ಬಂಡವಾಳದ ಸ್ವರೂಪ ಎಷ್ಟೊಂದು ಸಂಕೀರ್ಣವಾಗಿದೆಯೆಂದರೆ ಇತರ ಉತ್ಪಾದನಾಂಗಗಳಿಗೆ ದೊರಕುವ ಪ್ರತಿಫಲದಿಂದ ಪ್ರತ್ಯೇಕವಾಗಿ ಇದನ್ನು ಗುರುತಿಸುವುದು ಬಲು ಕಷ್ಟ. ಬಂಡವಾಳವೆಂದು ಯಾವುದನ್ನು ನಾವು ಪರಿಗಣಿಸುತ್ತೇವೆಂಬುದರ ಮೇಲೆ ಇದನ್ನು ನಿರ್ಧರಿಸಬೇಕಾಗುತ್ತದೆ. ಕೇರ್ನಕ್ರಾಸ್ ಮತ್ತು ಚೆನ್ಹ್ಯಮ್ ಹೇಳಿರುವಂತೆ, ಸಾಲಕ್ಕೆ ತೆರುವ ಬೆಲೆಯೇ ಬಡ್ಡಿ. ಸಾಲದ ನಿಧಿಗಳ ಉಪಯೋಗಕ್ಕಾಗಿ ತೆರುವ ಬೆಲೆಯನ್ನು ಬಡ್ಡಿ ಶುದ್ಧ ಹಣಕ್ಕೆ ಸಂಬಂಧಪಟ್ಟ ವಿಷಯ. ನಗದು ಹಣದ ಬಲವನ್ನು ಒಂದು ಗೊತ್ತಾದ ಕಾಲದವರೆಗೆ ವರ್ಜಿ ಸಿದ್ಧಕ್ಕಾಗಿ ಕೊಡುವ ಪರಿಹಾರವೇ ಬಡ್ಡಿ ಕೇನ್ಸನ ಮತ. ನಟ್ ವಿಕ್ಸೆಲ್ಲನ ಪ್ರಕಾರ ಅದನ್ನು ಒದಗಿಸಿದವನಿಗೆ ಸಲ್ಲಿಸುವ ಹಣವನ್ನು ಬಡ್ಡಿಯೆನ್ನಬೇಕು.
ಸಾಲದಾತನಿಗೆ ಸಾಲಗಾರನಿಂದ ಸಲ್ಲುವ ಒಟ್ಟು ಮೊಬಲಗು ಸ್ಥೂಲ ಬಡ್ಡಿ. ಇದರಲ್ಲಿ ಶುದ್ಧ ಬಡ್ಡಿ ಅಥವಾ ನಿವ್ವಳ ಬಡ್ಡಿ ಒಂದು ಅಂಶ ಮಾತ್ರ. ಬಂಡವಾಳದಿಂದ ದೊರಕುವ ಸೇವೆಗಳಿಗಾಗಿ ಅಥವಾ ಹಣವನ್ನು ಎರವಲು ಪಡೆದದ್ದಕ್ಕಾಗಿ ಪಾವತಿ ಮಾಡುವುದು ಶುದ್ಧ ಬಡ್ಡಿ ಅಥವಾ ನಿವ್ವಳ ಬಡ್ಡಿ.
- ನಷ್ಟ ಹೊಣೆಗಾರಿಕೆಗಾಗಿ ರಕ್ಷಣೆ: ಸಾಲಗಾರರಲ್ಲಿ ಕೆಲವರು ಸಕಾಲದಲ್ಲಿ ಹಿಂದಿರುಗಿಸದಿರಬಹುದು ಮತ್ತೆ ಕೆಲವರು ಹಿಂದಿರುಗಿಸದೆಯೇ ಇರಬಹುದು. ಈ ರೀತಿಯಲ್ಲಿ ಉಂಟಾಗಬಹುದಾದ ನಷ್ಟವನ್ನು ತುಂಬಿಕೊಳ್ಳಲು ಸಾಲಿಗ ಅದನ್ನು ಇತರ ಸಾಲಗಾರರ ಮೇಲೆ ಹಾಕುತ್ತಾನೆ. ಸಾಲದ ವ್ಯವಹಾರಗಳಲ್ಲಿ ನಂಬಿಕಸ್ತ ಸಾಲಗಾರರು ಹಿಂದಿರುಗಿಸದ ಸಾಲದ ಪಾಲನ್ನೂ ಹೊರಬೇಕಾಗುತ್ತದೆ. ಹೀಗೆ ಒಟ್ಟು ಬಡ್ಡಿಯಲ್ಲಿ ಸಾಲಿಗನ ನಷ್ಟ ಹೊಣೆಗಾರಿಕೆಯ ಸಂಭಾವನೆಯೂ ಸೇರಿರುತ್ತದೆ. ನಷ್ಟಸಂಭವ ಹೆಚ್ಚಾಗಿದ್ದಷ್ಟೂ ಬಡ್ಡಿಯ ದರ ಹೆಚ್ಚಾಗಿರುತ್ತದೆ.
- ನಿರ್ವಹಣೆಗಾಗಿ ಸಂಭಾವನೆ: ಸಾಲದಾತನು ತಾನು ಕೊಟ್ಟ ಸಾಲಗಳಿಗೆ ಲೆಕ್ಕಪತ್ರಗಳನ್ನು ಇಡಬೇಕಾಗುತ್ತದೆ. ವಾಯಿದೆಯ ಪ್ರಕಾರ ಅಸಲು-ಬಡ್ಡಿಗಳನ್ನು ವಸೂಲಿ ಮಾಡಲು ಸಿಬ್ಬಂದಿಯನ್ನು ನೇಮಿಸಿಕೊಳ್ಳಬೇಕಾಗುತ್ತದೆ. ಬಾಕಿ ತೀರಿಸದೆ ಹೋದ ಸಾಲಗಾರರ ಮೇಲೆ ಕಾನೂನಿನ ಪ್ರಕಾರ ಕ್ರಮ ಜರುಗಿಸಬೇಕಾಗುತ್ತದೆ. ಇದಕ್ಕೆಲ್ಲ ತಗಲುವ ವೆಚ್ಚಗಳನ್ನು ಸಾಲಿಗ ಬಡ್ಡಿಯಲ್ಲಿ ಸೇರಿಸುವುದರ ಮೂಲಕ ಸರಿದೂಗಿಸಿಕೊಳ್ಳುತ್ತಾನೆ. ಆದ್ದರಿಂದ ಒಟ್ಟು ಬಡ್ಡಿಯಲ್ಲಿ ಇದೂ ಸೇರಿರುತ್ತದೆ.
- ಅನನುಕೂಲತೆಗಾಗಿ ಸಂಭಾವನೆ: ಒಬ್ಬ ವ್ಯಕ್ತಿ ಹಣವನ್ನು ಸಾಲವಾಗಿ ನೀಡಿದಾಗ ಅದರ ಮೇಲೆ ತನ್ನ ಹತೋಟಿಯನ್ನು ಸ್ವಲ್ಪ ಕಾಲ ಕಳೆದುಕೊಳ್ಳುತ್ತಾನೆ. ಅದನ್ನು ಉಪಯೋಗಿಸಿಕೊಳ್ಳುವ ಸದವಕಾಶ ಅವನಿಗೆ ಕಳೆದುಹೋಗಬಹುದು. ಅವನಿಗೆ ಬೇಕಾದಾಗ ಆ ಹಣ ಅವನಿಗೆ ದೊರಕದ್ದು ಒಂದು ಅನನುಕೂಲತೆ. ಅಗತ್ಯವಾದಾಗ ಅವನ್ನು ಇತರರಿಂದ ಬಡ್ಡಿಯ ಮೇಲೆ ಸಾಲ ತೆಗೆದು ಕೊಳ್ಳಬೇಕಾಗಬಹುದು. ಅವನ್ನು ಕೊಟ್ಟ ಸಾಲದ ಹಣ ವಾಪಸ್ಸು ಬಂದಾಗ ಅದನ್ನು ಉಪಯುಕ್ತವಾಗಿ ವಿನಿಯೋಗಿಸುವ ಅವಕಾಶ ಇರದೆ ಹೋಗಬಹುದು. ಹಣ ನಿರುಪಯೋಗಿಯಾಗಿ ಉಳಿದು ಅವನಿಗೆ ಅದರಿಂದ ಬಡ್ಡಿ ಬಾರದೆ ಹೋಗಬಹುದು. ಈ ಎರಡು ಬಗೆಯ ಅನನುಕೂಲತೆಗಳಿಗಾಗಿ ಅವನು ಪರಿಹಾರವನ್ನು ಬಯಸುವುದು ಸಹಜ.
ಸ್ಥೂಲ ಬಡ್ಡಿಯಿಂದ ಮೇಲ್ಕಂಡ ಸಂಭಾವನೆಗಳನ್ನು ಕಳೆದರೆ ಉಳಿಯುವುದು ನಿವ್ವಳ ಬಡ್ಡಿ. ಇದನ್ನು ಶುದ್ಧ ಅಥವಾ ಆರ್ಥಿಕ ಬಡ್ಡಿ ಎಂದೂ ಕರೆಯುತ್ತಾರೆ. ಅರ್ಥಶಾಸ್ತ್ರದಲ್ಲಿ ಸ್ಥೂಲ ಬಡ್ಡಿಯನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಬಂಡವಾಳದ ಉಪಯೋಗಕ್ಕಾಗಿ ಕೊಡುವ ನಿವ್ವಳ ಬಡ್ಡಿಯನ್ನು ಮಾತ್ರ ಪರಿಗಣಿಸಲಾಗುತ್ತದೆ. ಲೇವಾದೇವಿಗಾರರು ವಿಧಿಸುವ ಬಡ್ಡಿ ಸಾಮಾನ್ಯವಾಗಿ ಸ್ಥೂಲ ಬಡ್ಡಿಯಾಗಿರುತ್ತದೆ. ಸರ್ಕಾರಿ ಸಾಲಪತ್ರಗಳು ಅಥವಾ ಖಜಾನೆ ಬಾಂಡುಗಳ ಮೇಲೆ ಪಡೆಯುವ ಸಾಲಗಳಿಗೆ ನೀಡುವುದು ಶುದ್ಧ ಬಡ್ಡಿಯಾಗಿರುತ್ತದೆ. ಬಂಡವಾಳದ ಚಲನೆಗೆ ಅಡಚಣೆಗಳಿಲ್ಲದಿದ್ದಲ್ಲಿ ಶುದ್ಧ ಬಡ್ಡಿಯಾಗಿರುತ್ತದೆ. ಆದರೆ ಸ್ಥೂಲ ಬಡ್ಡಿಯ ದರ ಸಾಲ ಪಡೆಯುವವನ ನಂಬಿಕೆ, ಅವನು ಇಡುವ ಅಡವುಗಳ ಮೌಲ್ಯ, ಸಾಲದ ಅವಧಿ, ಉದ್ಯಮದ ಸ್ವರೂಪ, ಬಂಡವಾಳದ ಬೇಡಿಕೆ ಪೂರೈಕೆಗಳು ಮತ್ತು ದೇಶದ ಆರ್ಥಿಕ ಸ್ಥಿತಿಗತಿಗಳನ್ನು ಅವಲಂಬಿಸಿದ್ದು, ವ್ಯಕ್ತಿಯಿಂದ ವ್ಯಕ್ತಿಗೆ, ಸ್ಥಳದಿಂದ ಸ್ಥಳಕ್ಕೆ ಹಾಗೂ ಕಾಲದಿಂದ ಕಾಲಕ್ಕೆ ವ್ಯತ್ಯಾಸವಾಗುತ್ತಿರುತ್ತದೆ.
ಬಡ್ಡಿಯ ಸಿದ್ಧಾಂತಗಳು
ಬದಲಾಯಿಸಿಬಡ್ಡಿಯ ಬಗ್ಗೆ ಅನೇಕ ಸಿದ್ಧಾಂತಗಳಿವೆ. ಈ ಸಿದ್ಧಾಂತಗಳಲ್ಲಿ ಕೆಲವು ಬಡ್ಡಿ ಕೊಡುವುದನ್ನು ಏಕೆ ಎಂಬುದನ್ನು ವಿವೇಚಿಸಿದರೆ, ಮತ್ತೆ ಕೆಲವು ಬಡ್ಡಿಯ ದರ ಹೇಗೆ ನಿರ್ಣಯವಾಗುತ್ತದೆ ಎಂಬುದನ್ನು ವಿವೇಚಿಸಿ ವಿವರಿಸುತ್ತವೆ. ಬಡ್ಡಿ ಕೊಡುವುದು ಏಕೆ ಎಂಬುದನ್ನು ವಿವರಿಸುವ ಸಿದ್ಧಾಂತಗಳಲ್ಲಿ ಮುಖ್ಯವಾದವೆಂದರೆ, 1 ಉತ್ಪಾದಕತೆಯ ಸಿದ್ಧಾಂತ, 2 ಕಾಯುವಿಕೆ ಅಥವಾ ಭೋಗವರ್ಜನೆಯ ಸಿದ್ಧಾಂತ 3 ವಟ್ಟ ಸಿದಾಂತ 4 ಕಾಲಾಧಿಮಾನತೆಯ ಸಿದ್ಧಾಂತ ಮತ್ತು 5 ದ್ರವತ್ವಾಧಿಮಾನ ಸಿದ್ಧಾಂತ. ಬಡ್ಡಿ ದರದ ನಿರ್ಧಾರವನ್ನು ವಿವರಿಸುವ ಸಿದ್ಧಾಂತಗಳು ಇವು: 1 ಅಭಿಜಾತ ಸಿದ್ಧಾಂತ, 2 ನವ ಅಭಿಜಾತ ಶದ್ಧಾಂತ, 3 ಕೇನ್ಸೀಯ ಸಿದ್ಧಾಂತ. 4 ಆಧುನಿಕ ಸಿದ್ಧಾಂತ.
ಬಡ್ಡಿ ಕೊಡುವುದು ಏಕೆ ಎಂಬುದನ್ನು ಕುರಿತ ಸಿದ್ಧಾಂತಗಳು
ಬದಲಾಯಿಸಿ- ಉತ್ಪಾದಕತೆಯ ಸಿದ್ಧಾಂತ: ಭೂಮಿಯಿಂದ ಬೆಳೆಯ ಉತ್ಪಾದನೆಯಾಗುವಂತೆ ಬಂಡವಾಳದಿಂದ ಸರಕು ಉತ್ಪಾದನೆಯಾಗುವುದೆಂದು ಕೆಲವು ಹಳೆಯ ಅರ್ಥ ಶಾಸ್ತ್ರಜ್ಞರ ಭಾವನೆಯಾಗಿತ್ತು. ಬಂಡವಾಳವಿಲ್ಲದಿದ್ದರೆ ಆಗುವ ಉತ್ಪಾದನೆಗಿಂತ ಬಂಡವಾಳವಿದ್ದರೆ ಆಗುವ ಉತ್ಪಾದನೆ ಅಧಿಕವೆಂಬುದು ಅವರ ಭಾವನೆಯಾಗಿತ್ತು. ಬಂಡವಾಳ ಉತ್ಪಾದಕವೆಂಬುದೇನೋ ನಿಜ. ಆದರೆ ಭೂಮಿಯಂತೆ, ಆಕಳಿನಂತೆ ಅದರ ಉತ್ಪಾದಕತೆ ನೇರವಲ್ಲ. ಬಂಡವಾಳದ ನೆರವಿನಿಂದ ದುಡಿಮೆಗೆ ಹೆಚ್ಚು ಪ್ರತಿಫಲ ದೊರಕುತ್ತದೆ. ಅದರ ನೆರವಿಲ್ಲದಿದ್ದರೆ ಉತ್ಪಾದನೆ ಕಡಿಮೆ. ಬಲೆಯಿದ್ದರೆ ಮೀನುಗಾರ ಹೆಚ್ಚು ಮೀನು ಹಿಡಿಯಬಲ್ಲ. ಆದರೆ ಬಂಡವಾಳಸರಕುಗಳ ಉತ್ಪಾದಕತೆಯಿಂದಲೇ ನೇರವಾಗಿ ಬಡ್ಡಿ ಬರುವುದೆಂದು ಹೇಳಲಾಗದು. ಬಂಡವಾಲರ್ಖಖೇ ಬಡ್ಡಿ ಇಲ್ಲದಿದ್ದರೆ ಅದರ ಪೂರೈಕೆಗಿಂತಲೂ ಬೇಡಿಕೆ ಅಧಿಕವಾಗುತ್ತದೆ. ಆದ್ದರಿಂದ ಪೂರೈಕೆ ಬೇಡಿಕೆಗಳ ಸಮತೋಲ ಸ್ಥಾಪನೆಗೆ ಬಡ್ಡಿಯ ಉದ್ಭವವಾಗುತ್ತದೆ. ಆದ್ದರಿಂದ ಬಂಡವಾಳದ ಉತ್ಪಾದಕತೆಗಿಂತ ಅದರ ವಿರಳತೆಯೇ ಬಡ್ಡಿಯ ಉದ್ಭವಕ್ಕೆ ಕಾರಣವೆನ್ನಬಹುದು.
- ಭೋಗವರ್ಜನೆಯ ಅಥವಾ ಕಾಯುವಿಕೆಯ ಸಿದ್ಧಾಂತ: ಉತ್ಪಾದಕತೆಯ ಸಿದ್ಧಾಂತದಲ್ಲಿ ಬಡ್ಡಿಯನ್ನು ಬಂಡವಾಳದ ಬೇಡಿಕೆಯ ದೃಷ್ಟಿಯಿಂದ ವಿವೇಚಿಸಲಾಗುತ್ತದೆ. ಪೂರೈಕೆಯ ಕಡೆಯಿಂದ ಈ ಸಮಸ್ಯೆಯನ್ನು ನೋಡುವುದೇ ತ್ಯಾಗ ಅಥವಾ ಕಾಯುವಿಕೆಯ ಸಿದ್ಧಾಂತ. ಆದಕಾರಣ ಉಳಿತಾಯ ಮತ್ತು ಸಾಲ ಕೊಡುವ ಕಾರ್ಯದ ಹಿಂದಿನ ತ್ಯಾಗಕ್ಕೆ ಅಥವಾ ಕಾಯುವಿಕೆಗೆ ಅಥವಾ ಕಾಲದ ಒಲವಿನ ತ್ಯಾಗಕ್ಕೆ ತೆರುವ ಬೆಲೆಯೇ ಬಡ್ಡಿ ಎಂದು ವಿವರಿಸಲಾಗಿದೆ. ನಾಸಾಸೀನ್ಯರನ ಪ್ರಕಾರ ವ್ಯಕ್ತಿಯೊಬ್ಬ ಹಣವನ್ನು ಉಳಿಸಿ ಇತರರಿಗೆ ಹೂಡಲು ಸಾಲಕೊಡಬೇಕಾದರೆ ತನ್ನ ಸದ್ಯದ ಅನುಭೋಗವನ್ನು ವರ್ಜಿಸಬೇಕು. ಏನಾದರೂ ಪರಿಹಾರ ದೊರಕದಿರುವಲ್ಲಿ ಯಾರೊಬ್ಬರೂ ಇಂಥ ತ್ಯಾಗಕ್ಕೆ ಇಳಿಯುವುದಿಲ್ಲ. ಆದ್ದರಿಂದ ಉಳಿತಾಯ ಮಾಡುವವನ ಅನುಭೋಗದ ವರ್ಜನೆಗೆ ಪರಿಹಾರವಾಗಿ ಬಡ್ಡಿಯನ್ನು ಕೊಡಬೇಕು. ಇದನ್ನು ಭೋಗ ವರ್ಜನೆಯ (ಆಬ್‍ಸ್ಟಿನೆನ್ಸ್) ಬಡ್ಡಿಸಿದ್ಧಾಂತ ಎಂದು ಕರೆಯಲಾಗಿದೆ. ಆದರೆ ವಾಸ್ತವವಾಗಿ ಬಡವರಿಗೆ ಉಳಿತಾಯ ಸಾಧ್ಯವಿಲ್ಲ. ಶ್ರೀಮಂತರ ಉಳಿತಾಯದಲ್ಲಿ ಯಾವುದರ ವರ್ಜನೆಯೂ ಇರುವುದಿಲ್ಲ. ಅಂದ ಮೇಲೆ ಬಡ್ಡಿಯನ್ನು ಕೊಡುವುದು ಯಾರು ಯಾವುದರ ವರ್ಜನೆಗಾಗಿ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಹೀಗೆ ಬಡ್ಡಿಯನ್ನು ತೆರುವುದು ಅನುಭೋಗದ ವರ್ಜನೆಗಾಗಿ ಅಲ್ಲ ಎಂಬುದನ್ನು ಮನಗಂಡ ಮಾರ್ಷಲ್ ವರ್ಜನೆಯ ಪರಿಕಲ್ಪನೆಗೆ ಬದಲಾಗಿ ಕಾಯುವುದಕ್ಕಾಗಿ ಎಂಬ ಪರಿಕಲ್ಪನೆಯನ್ನು ಬಳಸಿಕೊಂಡು ಕಾಯುವಿಕೆಯ ಬಡ್ಡಿಯ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾನೆ. ಸಾಲ ಕೊಟ್ಟವನು ಸ್ವಂತಕ್ಕೆ ಹಣಬೇಕಾದಲ್ಲಿ ಸಾಲಗಾರ ಅದನ್ನು ಹಿಂದಿರುಗಿಸುವವರೆಗೂ ಕಾಯಬೇಕಾಗುತ್ತದೆ. ಸದ್ಯದ ವೆಚ್ಚಕ್ಕೆ ಆ ಹಣ ದೊರಕದು. ಯಾವುದೇ ರೀತಿಯ ಪ್ರತಿಫಲವಿಲ್ಲದೆ ಯಾವ ವ್ಯಕ್ತಿಯೂ ವೃಥಾ ಕಾಯಲಾರ. ಆದ್ದರಿಂದ ಬಡ್ಡಿ ಕಾಯುವುದಕ್ಕಾಗಿ ಕೊಡುವ ಸಂಭಾವನೆಯಾಗಿದೆ ಎಂಬುದು ಮಾರ್ಷಲನ ವಾದ. ಬಡ್ಡಿ ಕೇವಲ ಬಂಡವಾಳದ ಪೂರೈಕೆಯನ್ನು ಅವಲಂಬಿಸಿರದೆ ಅದಕ್ಕಿರುವ ಬೇಡಿಕೆಯನ್ನೂ ಅವಲಂಬಿಸಿರುತ್ತದೆ. ಬಂಡವಾಳವನ್ನು ಕೇಳುವವರೇ ಇಲ್ಲದಿದ್ದಲ್ಲಿ ಬಡ್ಡಿಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಹೀಗೆ ಬಂಡವಾಳದ ಪೂರೈಕೆಯ ಪರಿಣಾಮಕ್ಕೆ ಒತ್ತು ಕೊಟ್ಟು ಬೇಡಿಕೆಯ ಪರಿಣಾಮವನ್ನು ವಿವರಿಸದೆ ಇರುವುದು ಈ ಸಿದ್ಧಾಂತದ ಒಂದು ಮುಖ್ಯ ದೋಷವಾಗಿದೆ.
- ಆಸ್ಟ್ರಿಯನ್ ಅಥವಾ ವಟ್ಟದ ಸಿದ್ಧಾಂತ: ಇದರ ಮೂಲಪ್ರತಿಪಾದಕ ಜಾನ್ ರೇ. ಆದರೆ ಇದನ್ನು ಪರಿಪೂರ್ಣವಾಗಿ ವಿವರಿಸಿದವನು ಆಸ್ಟ್ರಿಯನ್ ಅರ್ಥ ಶಾಸ್ತ್ರಜ್ಷರ ಪಂಥಕ್ಕೆ ಸೇರಿದ ಬಮ್ ಬಾವೆಕ. ಜನರಿಗೆ ಭವಿಷ್ಯಕ್ಕಿಂತ ವರ್ತಮಾನ ಮಹತ್ತ್ವದ್ದು. ಅಂದರೆ ಭವಿಷ್ಯದ ಬಯಕೆಗಳಿಗಿಂತ ವರ್ತಮಾನದ ಬಯಕೆಗಳಿಗೆ ಆದ್ಯತೆ ಸಲ್ಲುತ್ತದೆ. ಬಂಡವಾಳ ಹೂಡುವವರಿಗೆ ಸಾಲ ಕೊಡುವ ಉದ್ದೇಶದಿಂದ ಉಳಿತಾಯ ಮಾಡಬೇಕಾದರೆ ಅಂಥವರು ತಮ್ಮ ಬಯಕೆಗಳನ್ನು ಮುಂದೂಡಬೇಕು. ಹೀಗೆ ಬಯಕೆಗಳನ್ನು ಮುಂದೂಡುವಂತೆ ಜನರನ್ನು ಪ್ರೇರೇಪಿಸಲು ಏನಾದರೂ ಪ್ರತಿಫಲ ಕೊಡಬೇಕಾಗುತ್ತದೆ. ಈ ಪ್ರೇರಕ ಪ್ರತಿಫಲವನ್ನು ಬಡ್ಡಿ ಎಂದು ಕರೆಯಲಾಗಿದೆ. ಈ ಸಿದ್ಧಾಂತ ವೈಯಕ್ತಿಕತೆಗೆ ಪ್ರಾಧಾನ್ಯ ನೀಡುತ್ತದೆ. ಸಮಾಜದಲ್ಲಿ ಇಂದು ಇಂದಿಗೆ ಮತ್ತು ನಾಳೆ ನಾಳೆಗೆ ಎನ್ನುವವರಿರುವಂತೆ, ಭವಿಷ್ಯದ ಒಳಿತಿಗಾಗಿ ಸದ್ಯದ ಬಯಕೆಗಳನ್ನು ಮುಂದೂಡುವವರೂ ಇದ್ದಾರೆ. ಆದ್ದರಿಂದ ಬಾವೆರ್ಕ ಗ್ರಹಿಸಿರುವಂತೆ ಜನರು ಯಾವಾಗಲೂ ಸದ್ಯದ ಬಯಕೆಗಳ ಸಂತೃಪ್ತಿಗೆ ಹೆಚ್ಚು ಗಮನ ಕೊಡುತ್ತಾರೆ ಎಂಬುದು ನಿಜವಲ್ಲ.
- ಕಾಲಾಧಿಮಾನತೆಯ ಸಿದ್ಧಾಂತ: ಮೇಲಿನ ಸಿದ್ಧಾಂತವನ್ನು ಮುಂದೆ ಅಮೆರಿಕನ್ ಅರ್ಥಶಾಸ್ತ್ರಜ್ಞ ಅರ್ವಿಂಗ್ ಫಿಷರ್ ವೃದ್ಧಿಗೊಳಿಸಿ, ಕಾಲಾಧಿಮಾನತೆಯ ಬಡ್ಡಿಯ ಸಿದ್ಧಾಂತವೆಂದು ಕರೆದ. ಜನರು ಭವಿಷ್ಯತ್ಕಾಲದ ಬಯಕೆಗಳಿಗಿಂತ ಬಡ್ಡಿಯ ಸಿದ್ಧಾಂತವೆಂದು ಕರೆದ. ಜನರು ಭವಿಷ್ಯತ್ಕಾಲದ ಬಯಕೆಗಳಿಗಿಂತ ಹೆಚ್ಚಾಗಿ ವರ್ತಮಾನಕಾಲದ ಬಯಕೆಗಳನ್ನು ಈಡೇರಿಸಿಕೊಳ್ಳ ಬಯಸುತ್ತಾರೆ. ಲಭ್ಯವಿರುವ ವರಮಾನವನ್ನು ಸದ್ಯದಲ್ಲಿ ಸಿಗುವ ಪದಾರ್ಥಗಳ ಮೇಲೆ ಖರ್ಚು ಲಭ್ಯವಿರುವ ವರಮಾನವನ್ನು ಸದ್ಯದಲ್ಲಿ ಸಿಗುವ ಪದಾರ್ಥಗಳ ಮೇಲೆ ಖರ್ಚು ಮಾಡಲು ಕಾತರತೆಯನ್ನು ಕಾಲಾವಧಿ ಆದ್ಯತೆ (ಟೈಮ್ ಪ್ರಿಫರೆನ್ಸ್) ಅಥವಾ ಒಲವು ಎಂದು ಫಿಷರ್ ಕರೆದಿದ್ದಾನೆ. ಜನರ ಕಾಲಾವಧಿಯ ಆದ್ಯತೆಯ ಮಟ್ಟ (ದರ) ಅವರವರ ವರಮಾನದ ಗಾತ್ರ, ಹಂಚಿಕೆ, ಮುಂದೆ ಅದನ್ನು ಅನುಭವಿಸಲು ಇರುವ ಸಾಧ್ಯತೆ ಮತ್ತು ಸ್ವಭಾವ-ಇವುಗಳಿಂದ ನಿರ್ಧಾರವಾಗುತ್ತದೆ. ಈ ರೀತಿಯಲ್ಲಿ ನಿರ್ಧಾರವಾಗುವ ಕಾಲದ ಅಧಿಮಾನತೆಯ ಮಟ್ಟ ಬಡ್ಡಿಯ ದರಕ್ಕೆ ಸಮವಾಗಿರುತ್ತದೆ. ಒಂದು ಪಕ್ಷ ಕಾಲದ ಅಧಿಮಾನತೆಯ ಮಟ್ಟ ಬಡ್ಡಿಯ ದರಕ್ಕಿಂತ ಹೆಚ್ಚಾಗಿದ್ದರೆ ಜನರು ಸಾಲ ಪಡೆದು ಸದ್ಯದ ಬಯಕೆಗಳನ್ನು ಸಂತೃಪ್ತಿಪಡಿಸಿಕೊಳ್ಳಲು ಬಯಸುತ್ತಾರೆ. ಸಾಲ ಒದಗಿಸಬೇಕಾಗಿ ಬಂದರೆ ಕಾಲದ ಅಧಿಮಾನತೆಯ ತ್ಯಾಗದ ಪ್ರಮಾಣ ಹೆಚ್ಚಾಗಿರುವುದರಿಂದ ಪರಿಹಾರವಾಗಿ ಬಡ್ಡಿಯ ದರವೂ ಹೆಚ್ಚಾಗಿರುತ್ತದೆ. ಕಾಲದ ಅಧಿಮಾನತೆಯ ಮಟ್ಟ ಬಡ್ಡಿಯ ದರಕ್ಕಿಂತ ಕಡಿಮೆ ಇದ್ದರೆ ಜನರು ತಮಲ್ಲಿರುವ ಹಣವನ್ನು ಸಾಲಕೊಡಬಯಸುತ್ತಾರೆ. ಕಾಲದ ಅಧಿಮಾನತೆಯ ತ್ಯಾಗದ ಪ್ರಮಾಣ ಕಡಿಮೆ ಆದಾಗ ಬಡ್ಡಿಯ ದರವೂ ಕಡಿಮೆ ಆಗಿರುತ್ತದೆ. ಬಂಡವಾಳದ ಬೇಡಿಕೆಯನ್ನು ಕಡೆಗಣಿಸಿ ಪೂರೈಕೆಯ ಬೆಲೆಯೊಂದಕ್ಕೆ ಪ್ರಾಶಸ್ತ್ಯಕೊಟ್ಟಿರುವ ಈ ಸಿದ್ಧಾಂತಕ್ಕೆ ಸಾರ್ವತ್ರಿಕ ಒಪ್ಪಿಗೆ ದೊರಕಿಲ್ಲ. ಅಲ್ಲದೆ ಬಮ್-ಬಾವೆರ್ಕ್ ಗ್ರಹಿಸಿರುವಂತೆ ಹಣದ ಕೊಳ್ಳುವ ಶಕ್ತಿ ಮತ್ತು ಉಳಿತಾಯದ ಸ್ಥಿತಿಗತಿಗಳು ವರ್ತಮಾನ ಭವಿಷ್ಯಗಳಲ್ಲಿ ಒಂದೇ ಸಮನಾಗಿರುವುದಿಲ್ಲ.
ಬಡ್ಡಿಯ ದರ ನಿರ್ಧಾರ ಕುರಿತ ಸಿದ್ಧಾಂತಗಳು
ಬದಲಾಯಿಸಿಬಡ್ಡಿಯ ಸ್ವರೂಪ ಬಡ್ಡಿಯನ್ನು ಕೊಡುವುದರ ಅವಶ್ಯಕತೆ ಇವನ್ನು ಕುರಿತ ಸಿದ್ಧಾಂತಗಳೂ ಇವೆ. ಅವನ್ನು ಮುಂದೆ ವಿವೇಚಿಸಲಾಗಿದೆ.
1) ಅಭಿಜಾತ ಸಿದ್ಧಾಂತ: ಅಭಿಜಾತ ಪಂಥದ ಬಡ್ಡಿ ಸಿದ್ಧಾಂತವನ್ನು ಬೇಡಿಕೆ ಮತ್ತು ಪೂರೈಕೆಯ ಬಡ್ಡಿ ಸಿದ್ಧಾಂತವೆಂದೂ ಉಳಿತಾಯ ಮತ್ತು ಹೂಡಿಕೆಯ (ಇನ್‍ವೆಸ್ಟ್‍ಮೆಂಟ್) ಬಡ್ಡಿ ಸಿದ್ಧಾಂತವೆಂದೂ ಕರೆಯುವುದುಂಟು. ಇದರ ಪ್ರತಿಪಾದಕರು ಪ್ರಾಚೀನ ಅಭಿಜಾತ ಅರ್ಥಶಾಸ್ತ್ರಜ್ಞರು. ಆಮೇಲೆ ಮಾರ್ಷಲ್, ಪಿಗುಕ್ಯಾಸೆಲ್, ವಾಲ್ರಾ, ಟೌಸಿಗ್ ಮೊದಲಾದವರು ಇದನ್ನು ಪರಿಷ್ಕರಿಸಿದರು. ಪರಿಪೂರ್ಣ ಪೈಪೋಟಿಯ ಸನ್ನಿವೇಶದಲ್ಲಿ ಬಡ್ಡಿಯ ದರ ಬಂಡವಾಳದ ಬೇಡಿಕೆ ಮತ್ತು ಪೂರೈಕೆಯಿಂದ ನಿರ್ಧಾರವಾಗುತ್ತದೆ. ವಿನಿಯೋಜನೆಯಿಂದ ಬಂಡವಾಳದ ಬೇಡಿಕೆಯೂ ಉಳಿತಾಯದಿಂದ ಬಂಡವಾಳದ ಪೂರೈಕೆಯೂ ನಿರ್ಧಾರವಾಗುತ್ತವೆಯಾದ್ದರಿಂದ ವಿನಿಯೋಜನೆ ಮತ್ತು ಉಳಿತಾಯಗಳಿಂದ ಬಡ್ಡಿಯ ದರದ ನಿರ್ಧಾರವಾಗುತ್ತದೆ ಎನ್ನಬಹುದು. ಬಂಡವಾಳದ ಬೇಡಿಕೆ ಮತ್ತು ಪೂರೈಕೆಗಳನ್ನು ಸಮತೋಲದಲ್ಲಿಡುವ ಸಾಧನ ಬಡ್ಡಿಯ ದರ ಎಂದು ನಂಬಲಾಗಿದೆ. ಈ ಸಿದ್ಧಾಂತ ವಾಸ್ತವಿಕ ಉಳಿತಾಯ ಮತ್ತು ವಾಸ್ತವಿಕ ವಿನಿಯೋಜನೆಗಳಿಗೆ ಸಂಬಂಧಿಸಿರುವುದರಿಂದ ಇದನ್ನು ವಾಸ್ತವಿಕ ಬಡ್ಡಿ ಸಿದ್ಧಾಂತ ಎಂದು ಕರೆಯಲಾಗಿದೆ. ಅನುಭೋಗಕ್ಕೆ ಬದಲಾಗಿ ಉತ್ಪಾದನೆಯಲ್ಲಿ ತೊಡಗಿಸಿರುವ ಉಳಿತಾಯವನ್ನು ವಾಸ್ತವಿಕ ಉಳಿತಾಯವೆಂದೂ ಹೊಸದಾಗಿ ಬಂಡವಾಳ ಸರಕುಗಳನ್ನು ಉತ್ಪಾದಿಸುವುದನ್ನು ವಾಸ್ತವಿಕ ವಿನಿಯೋಜನೆಯೆಂದೂ ಕರೆಯಲಾಗಿದೆ. ಹಣಕಾಸಿನ ವಿನಿಯೋಜನೆಗಳಾದ ಸ್ಟಾಕು ಮತ್ತು ಷೇರುಗಳು ವಾಸ್ತವಿಕ ವಿನಿಯೋಜನೆಗಳಲ್ಲ. ಈ ಸಿದ್ಧಾಂತದ ಪ್ರಕಾರ ಬಡ್ಡಿಯ ನಿರ್ಧಾರದಲ್ಲಿ ಹಣ ಪ್ರತ್ಯಕ್ಷವಾಗಿ ಯಾವ ಪಾತ್ರವನ್ನೂ ನಿರ್ವಹಿಸುವುದಿಲ್ಲ.
ಬಂಡವಾಳಕ್ಕೆ ಬೇಡಿಕೆ ಉದ್ಭವಿಸುವುದು ಅದಕ್ಕೆ ಉತ್ಪಾದನಸಾಮಥ್ರ್ಯ ಇರುವುದರಿಂದ. ಆದರೆ ಹೆಚ್ಚು ಹೆಚ್ಚು ಬಂಡವಾಳವನ್ನು ಹಾಕುತ್ತ ಹೋದಂತೆ ಅದರ ಸೀಮಾಂತ ಉತ್ಪಾದಕತೆ ಇಳಿಮುಖವಾಗುತ್ತದೆ. ಇದು ಇಳಿಮುಖ ಸೀಮಾಂತ ಪ್ರತಿಫಲ ನಿಯಮಕ್ಕೆ ಒಳಗಾಗಿರುತ್ತದೆ. ಆದ್ದರಿಂದ ಬಂಡವಾಳದ ಸೀಮಾಂತ ಉತ್ಪಾದಕತೆ ಮತ್ತು ಪೇಟೆಯ ಬಡ್ಡಿಯ ದರಗಳನ್ನು ಪರಸ್ಪರ ಹೋಲಿಸಿ ನೋಡುವುದರ ಮೂಲಕ ಒಂದು ಉದ್ಯಮಸಂಸ್ಥೆ ತನ್ನ ವಿನಿಯೋಜನೆಯ ಗಾತ್ರವನ್ನು ನಿರ್ಧರಿಸುತ್ತದೆ. ಪರಿಪೂರ್ಣ ಪೈಪೋಟಿಯ ಸನ್ನಿವೇಶದಲ್ಲಿ ಬಂಡವಾಳದ ಸೀಮಾಂತ ಉತ್ಪಾದಕತೆ ಮತ್ತು ಪೇಟೆಯ ಬಡ್ಡಿಯ ದರಗಳು ಪರಸ್ಪರ ಸಮವಾಗಿರುವ ಮಟ್ಟದಲ್ಲಿ ಬಂಡವಾಳವನ್ನು ಹೂಡುತ್ತದೆ. ಬಂಡವಾಳದ ಸೀಮಾಂತ ಉತ್ಪಾದಕತೆಗಿಂತ ಬಡ್ಡಿಯ ದರ ಹೆಚ್ಚಾದರೆ ವಿನಿಯೋಜನೆ ತಗ್ಗುವುದರಿಂದ ಬಂಡವಾಳದ ಬೇಡಿಕೆಯೂ ಕಡಿಮೆಯಾಗುತ್ತದೆ. ಬಂಡವಾಳದ ಸೀಮಾಂತ ಉತ್ಪಾದಕತೆಗಿಂತ ಬಡ್ಡಿಯ ದರ ಕಡಿಮೆಯಾದರೆ ವಿನಿಯೋಜನೆ ಹೆಚ್ಚುವುದರಿಂದ ಬಂಡವಾಳದ ಬೇಡಿಕೆಯೂ ಹೆಚ್ಚಾಗುತ್ತದೆ.
ಸಮಾಜದಲ್ಲಿ ಬಂಡವಾಳದ ಪೂರೈಕೆ ಅಥವಾ ಉಳಿತಾಯದ ಗಾತ್ರ ಜನರ ವರಮಾನ, ಜೀವನಮಟ್ಟ, ಕುಟುಂಬದ ಮೋಹ ಮತ್ತು ಶಾಂತಿಯುತ ಆರ್ಥಿಕ ಹಾಗೂ ರಾಜಕೀಯ ಸ್ಥಿತಿಗತಿಗಳು ಇವೇ ಮೊದಲಾದ ಅಂಶಗಳಿಂದ ನಿರ್ಧಾರವಾಗುತ್ತದೆ. ಈ ಎಲ್ಲ ಅಂಶಗಳು ಒಂದೇ ಸಮನಾಗಿರುತ್ತವೆಂದು ಭಾವಿಸಿಕೊಂಡರೆ ಯಾವುದೇ ಒಂದು ಗೊತ್ತಾದ ಅವಧಿಯಲ್ಲಿ ಬಂಡವಾಳದ ಪೂರೈಕೆ ಅರ್ಥಾತ್ ಉಳಿತಾಯದ ಗಾತ್ರದ ಹೆಚ್ಚುತ್ತದೆ. ಬಡ್ಡಿಯ ದರ ಕಡಿಮೆಯಾದರೆ ಉಳಿತಾಯ ಕಡಿಮೆಯಾಗುತ್ತದೆ.
ಮೇಲೆ ಸೂಚಿಸಿದಂತೆ ಬಡ್ಡಿಯ ದರ ಬಂಡವಾಳದ ಬೇಡಿಕೆ ಅಥವಾ ವಿನಿಯೋಜನೆ ಮತ್ತು ಪೂರೈಕೆ ಅಥವಾ ಉಳಿತಾಯ ಇವುಗಳ ಸಮತೋಲದಿಂದ ನಿರ್ಧಾರವಾಗುತ್ತದೆ.
ಅಭಿಜಾತ ಪಂಥದ ಬಡ್ಡಿಯ ಸಿದ್ಧಾಂತ (ನೋಬಲ್ ಥೀಯರಿ ಆಫ್ó ಇಂಟರೆಸ್ಟ್) ದಲ್ಲಿಯ ಅನೇಕ ದೋಷಗಳನ್ನು ಕೇನ್ಸ್ ಗುರುತಿಸಿದ್ದಾನೆ. ಅಭಿಜಾತ ಪಂಥದವರು ಗ್ರಹಿಸಿರುವಂತೆ ಬಡ್ಡಿ ಕೇವಲ ಉಳಿತಾಯಕ್ಕಾಗಿ ಕೊಡುವ ಪ್ರತಿಫಲವಲ್ಲ. ಪಿತ್ರಾರ್ಜಿತ ಹಣವನ್ನು ಸಾಲ ಕೊಟ್ಟಲ್ಲಿ ಮಾತ್ರ ಬಡ್ಡಿಯನ್ನು ಗಳಿಸಬಹುದು ಎಂಬುದು ಕೇನ್ಸನವದ. ಅಭಿಜಾತ ಪಂಥದ ಬಡ್ಡಿ ಸಿದ್ಧಾಂತದಲ್ಲಿ ಬಡ್ಡಿಯ ನಿರ್ಣಯ ಅಸಷ್ಟವಾಗಿದೆ. ಈ ಸಿದ್ಧಾಂತದ ಪ್ರಕಾರ ಉಳಿತಾಯ ಮತ್ತು ವಿನಿಯೋಜನೆ ಇವು ಬೇರೆ ಬೇರೆ ಅಂಶಗಳು. ಆದರೆ ವಾಸ್ತವವಾಗಿ ಇವು ಪರಸ್ಪರಾವಲಂಬಿಗಳು. ಒಂದನ್ನು ಬದಲಾಯಿಸದೆ ಮತ್ತೊಂದನ್ನು ಬದಲಾಯಿಸಲು ಸಾಧ್ಯವಿಲ್ಲ. ವಿನಿಯೋಜನೆಯ ಪರಿಮಾಣ ಕಡಿಮೆಯಾದೊಡನೆ ವರಮಾನದ ಗಾತ್ರ ಕಡಿಮೆಯಾಗುತ್ತದೆ. ಇದರಿಂದಾಗಿ ಉಳಿತಾಯವೂ ಕಡಿಮೆಯಾಗಲೇಬೇಕು. ಏಕೆಂದರೆ ಉಳಿತಾಯ ಒಂದು ಕಡೆ ಬಡ್ಡಿಯ ದರವನ್ನು ಅವಲಂಬಿಸಿದ್ದರೆ, ಅದಕ್ಕಿಂತಲೂ ಹೆಚ್ಚಾಗಿ ವರಮಾನವನ್ನು ಬಡ್ಡಿಯ ದರವನ್ನು ಅವಲಂಬಿಸಿದ್ದರೆ, ಅದಕ್ಕಿಂತಲೂ ಹೆಚ್ಚಾಗಿ ವರಮಾನವನ್ನು ಅವಲಂಬಿಸಿರುತ್ತದೆ. ಉಳಿತಾಯ ಮತ್ತು ವಿನಿಯೋಜನೆಗಳನ್ನು ಸಮತೋಲದಲ್ಲಿಡುವ ಸಾಧನ ಬಡ್ಡಿ ಎಂಬ ಸಂಪ್ರದಾಯವಾದಿ ಪಂಥದ ಹೇಳಿಕೆ ನಿಜವಲ್ಲ. ಕೇನ್ಸನ ಮೇರೆಗೆ ಬಡ್ಡಿಗೆ ಬದಲಾಗಿ ವರಮಾನ ಆ ಕಾರ್ಯ ಮಾಡುತ್ತದೆ. ಏಕೆಂದರೆ ವಿನಿಯೋಜನೆ ಬಡ್ಡಿಗಿಂತ ಮಿಗಿಲಾಗಿ ಮುಂದೆ ದೊರಕಬಹುದಾದ ವರಮಾನವನ್ನು ಅವಲಂಬಿಸಿರುತ್ತದೆ ಎಂಬುದು ಕೇನ್ಸಸವಾದ.
2) ಸಾಲದೇಯ ನಿಧಿಯ ಸಿದ್ಧಾಂತ(ಲೋನಬಲ್ ಫಂಡ್ಸ್ ಸಿದ್ಧಾಂತ) ಅಥವಾ ನವ ಅಭಿಜಾತ ಸಿದ್ಧಾಂತ: (ನವ ನೋಬಲ್ ಥೀಯರಿ ಆಫ಼್ ಇಂಟರೆಸ್ಟ್) ಈ ಸಿದ್ಧಾಂತದ ಮೂಲ ಪ್ರತಿಪಾದಕ ಸ್ವೀಡಿಷ್ ಅರ್ಥಶಾಸ್ತ್ರಜ್ಞ ನಟ್ ವಿಕ್‍ಸೆಲ್. ಅನಂತರ ಇದನ್ನು ಯೋಗ್ಯ ರೀತಿಯಲ್ಲಿ ಪರಿಷ್ಕರಿಸಿ ಪರಿಪೂರ್ಣಗೊಳಿಸಿದವರಲ್ಲಿ ಮುಖ್ಯರಾದವರು ಬರ್ಟಿಲ್ ಬಹ್‍ಲಿನ್, ಗುನ್ನಾರ್ ಮಿರ್ಡಾಲ್, ಎರಿಕ್ಲಿಡಾಲ್ ಮತ್ತು ಇಂಗ್ಲೆಂಡಿನ ಡಿ. ಎಚ್. ರಾಬರ್ಟ್‍ಸನ್.
ಇದು ಅಭಿಜಾತ ಪಂಥದ ಸಿದ್ಧಾಂತಕ್ಕಿಂತ ವ್ಯಾಪಕವಾದ್ದು. ಹಣದ ಅಂಶ, ವಾಸ್ತವಿಕ ಅಂಶ ಇವರಡನ್ನೂ ಈ ಸಿದ್ಧಾಂತದಲ್ಲಿ ಅಳವಡಿಸಲಾಗಿದೆ. ಅಭಿಜಾತ ಪಂಥ ಸಿದ್ಧಾಂತ ಕೇವಲ ವಾಸ್ತವಿಕ ಅಂಶಗಳಾದ ಉಳಿತಾಯ ಮತ್ತು ವಿನಿಯೋಜನೆಗಳ ಆಧಾರದ ಮೇಲೆ ಬಡ್ಡಿಯ ದರವನ್ನು ಪರಿಶೀಲಿಸುತ್ತದೆ. ಹಣದ ಅಂಶಗಳನ್ನು ಅದರಲ್ಲೂ ಬ್ಯಾಂಕು ಹಣದ ಪ್ರಭಾವವನ್ನು ಗಣನೆಗೆ ತೆಗೆದುಕೊಂಡಿಲ್ಲ. ಬಂಡವಾಳದ ಬೇಡಿಕೆಯನ್ನು ಕೇವಲ ವಿನಿಯೋಜನೆಗಳ ಮೂಲಕ ವಿವರಿಸಲಾಗಿದೆ. ಜನರು ಕೂಡಿಡುವುದಕ್ಕೂ ಹಣವನ್ನು ಅಪೇಕ್ಷಿಸುತ್ತಾರೆ ಎಂಬ ಅಂಶವನ್ನು ಅಭಿಜಾತ ಸಿದ್ಧಾಂತ ಮರೆತು ಬಿಟ್ಟಿದೆ. ಬಡ್ಡಿಯ ದರ, ಉಳಿತಾಯ ಮತ್ತು ವಿನಿಯೋಜನೆಗಳ ನಡುವೆ ಕಾರ್ಯಭಾರಾತ್ಮಕ ಸಂಬಂಧ ಇದೆ ಎಂದು ಸಿದ್ಧಾಂತ ಭಾವಿಸುತ್ತದೆ. ಸಾಲದೇಯ ನಿಧಿಯ ಸಿದ್ಧಾಂತದ ಪ್ರಕಾರ ಬಡ್ಡಿಯ ದರ ನಾಲ್ಕು ಅಂಶಗಳಿಂದ ನಿರ್ಧಾರವಾಗುತ್ತದೆ. 1 ಉಳಿತಾಯ 2 ವಿನಿಯೋಜನೆ 3 ಹಣ ಕೂಡಿಡುವ ಆಸೆ ಮತ್ತು 4 ಹಣದ ಪರಿಮಾಣ.
ಈ ಸಿದ್ಧಾಂತದಲ್ಲಿ ಕಾಣಲಾಗಿರುವ ಕೆಲವು ನ್ಯೂನತೆಗಳು ಇವು: 1 ಉಳಿತಾಯ ಬಡ್ಡಿಯ ದರದ ಉಳಿತಾಯದ ಬಡ್ಡಿಯ ದರದ ಪ್ರಭಾವಕ್ಕೆ ಒಳಗಾಗಿದೆ ಎಂಬ ಹೇಳಿಕೆಯಲ್ಲಿ ಉತ್ಪ್ರೇಕ್ಷೆ ಇದೆ. ಈ ಸಿದ್ಧಾಂತ ಸೂಚಿಸುವಷ್ಟರ ಮಟ್ಟಿಗೆ ಬಡ್ಡಿಯ ದರ ಉಳಿತಾಯದ ಪರಿಮಾಣದ ಮೇಲೆ ಪ್ರಭಾವ ಬೀರುವುದಿಲ್ಲ. ಬಡ್ಡಿಯ ದರ ಎಷ್ಟೇ ಇರಲಿ, ಕೆಲವರು ಉಳಿತಾಯ ಮಾಡುವುದನ್ನು ನಿಲ್ಲಿಸುವುದಿಲ್ಲ. 2 ಅಭಿಜಾತ ಬಡ್ಡಿ ಸಿದ್ಧಾಂತದಂತೆ ಈ ಸಿದ್ಧಾಂತವೂ ಸಮಾಜದ ವರಮಾನದ ಪರಿಮಾಣ ಒಂದೇ ಸಮನಾಗಿರುವುದೆಂದೂ ಹೂಡಿಕೆಗಳಿಂದ (ವಿನಿಯೋಜನೆಯಿಂದ) ಅದು ಬದಲಾಯಿಸುವುದಿಲ್ಲವೆಂದೂ ಭಾವಿಸುತ್ತದೆ. ಈ ಭಾವನೆ ವಾಸ್ತವಿಕವಾದ್ದಲ್ಲ. 3 ಹಣಕಾಸಿನ ಅಂಶಗಳನ್ನು ವಾಸ್ತವಿಕ ಅಂಶಗಳೂಡನೆ ಸಂಯೋಜಿಸಿರುವ ರೀತಿ ಕೆಲವು ಅರ್ಥಶಾಸ್ತ್ರಜ್ಞರ ಟೀಕೆಗೆ ಒಳಗಾಗಿದೆ.
3) ಕೇನ್ಸೀಯ ಸಿದ್ಧಾಂತ: ಒಂದು ನಿಗದಿತ ಅವಧಿಗೆ ದ್ರವತ್ವದ ಅಥವಾ ಹಣದ ಒಲವಿನ ವರ್ಜನೆಗಾಗಿ ನೀಡುವ ಪ್ರತಿಫಲವೇ ಬಡ್ಡಿ. ಜನರು ಸುಲಭವಾಗಿ ನಗದಾಗಿ ಪರಿವರ್ತಿಸಬಹುದಾದ ಆಸ್ತಿಗಳನ್ನು ಹೊಂದಿರಲು ಬಯಸುವುದರಿಂದ ಹಣಕ್ಕೆ ಬೇಡಿಕೆ ಉದ್ಭವಿಸುತ್ತದೆ. ಇತರ ಆಸ್ತಿಗಳಿಗಿಂತ ಹಣಕ್ಕೆ ದ್ರವತ್ವ ಹೆಚ್ಚು. ಅದನ್ನು ಸುಲಭವಾಗಿ ಯಾವ ರೂಪಕ್ಕಾದರೂ ಪರಿವರ್ತಿಸಿಕೊಳ್ಳಬಹುದು. ಆದ್ದರಿಂದ ಜನರು ಹಣವನ್ನು ನಗದಾಗಿಯಾಗಲಿ ಬ್ಯಾಂಕಿನಲ್ಲಿ ಚಾಲ್ತಿ ಠೇವಣಿಯ ರೂಪದಲ್ಲಾಗಲಿ ಇಟ್ಟುಕೊಳ್ಳ ಬಯಸುತ್ತಾರೆ. ಜನರ ಈ ಬಯಕೆಯನ್ನು ಕೇನ್ಸ್‍ನ ದೃಷ್ಟಿಯಲ್ಲಿ ದ್ರವತ್ವ ಅಧಿಮಾನತೆ (ಲಿಕ್ವಿಡಿಟಿ ಪ್ರೆಫರನ್ಸ್) ಅಥವಾ ನಗದು ಹಣದೊಲವು. ಜನರು ನಗದು ರೂಪದಲ್ಲಿ ಹಣವನ್ನು ಇಟ್ಟುಕೊಳ್ಳಲು ಮೂರು ಉದ್ದೇಶಗಳಿರುತ್ತವೆ: 1 ವಹಿವಾಟಿನ ಉದ್ದೇಶ: ಜನರಿಗೆ ನಿತ್ಯವೂ ವರಮಾನ ಬರುವುದಿಲ್ಲ. ಕೆಲವರಿಗೆ ವರ್ಷಕ್ಕೊಮ್ಮೆ ವರಮಾನ ಬರುತ್ತದೆ. ಆದರೆ ದೈನಂದಿನ ವ್ಯವಹಾರಗಳಿಗೆ ನಿತ್ಯವೂ ಹಣ ಬೇಕಾಗುತ್ತದೆ. ಆದ್ದರಿಂದ ಜನರು ಯಾವಾಗಲೂ ನಗದು ಹಣವನ್ನು ಹೊಂದಿರಬೇಕಾಗುತ್ತದೆ. ವ್ಯಾಪಾರಸ್ಥರು ಮತ್ತು ಕೈಗಾರಿಕೋದ್ಯಮಿಗಳ ವಿಚಾರವೂ ಹೀಗೆಯೇ, ಈ ಉದ್ದೇಶಕ್ಕಾಗಿ ಬೇಕಾಗುವ ಹಣ ಎಷ್ಟು ಎಂಬುದು ಜನರ ವರಮಾನ, ವರಮಾನಗಳ ಕಾಲದ ಅಂತರ. ಇವುಗಳೊಂದಿಗೆ ನಿರ್ಧಾರವಾಗುತ್ತದೆ. 2 ಮುಂಜಾಗ್ರತೆಯ ಉದ್ದೇಶ: ಅನಾರೋಗ್ಯ, ಅಪಘಾತ ಮೊದಲಾದ, ಮುಂದೆ ಸಂಭವಿಸಬಹುದಾದ, ಅನಿರೀಕ್ಷಿತ ಘಟನೆಗಳನ್ನು ಎದುರಿಸಲು ಜನರು ನಗದು ಹಣವನ್ನು ಹೊಂದಿಸಬಯಸುತ್ತಾರೆ. ಈ ದೃಷ್ಟಿಯಿಂದ ಬೇಕಾಗುವ ಹಣ ಎಷ್ಟೆಂಬುದು ಜನರ ಮಾನಸಿಕ ಧೋರಣೆ, ಕೌಣುಂಬಿಕ ವ್ಯಾಮೋಹ. ವರಮಾನ ಇವುಗಳಿಂದ ನಿರ್ಣಯವಾಗುತ್ತದೆ. 3 ಸಟ್ಟಾಉದ್ದೇಶ: ವ್ಯಾಪಾರಸ್ಥರು ಮತ್ತು ಇತರರು ಸರಕು ಮತ್ತು ಸಾಲಪತ್ರಗಳ ಬೆಲೆಗಳು ಇಳಿದಾಗ ಅವನ್ನು ಕೊಳ್ಳಲು ನಗದು ಹಣವನ್ನು ಹೊಂದಿರಲಿಚ್ಚಿಸುತ್ತಾರೆ. ಈ ಮೂರು ಉದೇಶಗಳಲ್ಲಿ ಸಟ್ಟಾ ಉದ್ದೇಶ ಬಡ್ಡಿಯ ದರವನ್ನು ನಿರ್ಣಯಿಸುವುದರಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ ಎಂದು ಕೇನ್ಸ್ ಸೂಚಿಸಿದ್ದಾನೆ. ವಹಿವಾಟಿನ ಮತ್ತು ಮುಂಜಾಗ್ರತೆಯ ಉದ್ದೇಶಗಳಿಗಾಗಿ ಇಟ್ಟುಕೊಳ್ಳುವ ನಗದಿನ ಪರಿಮಾಣ ಮತ್ತು ಮುಂಜಾಗ್ರತೆಯ ಉದ್ದೇಶಗಳಿಗಾಗಿ ಇಟ್ಟುಕೊಳ್ಳುವ ನಗದಿನ ಪರಿಮಾಣ ಸಾಮಾನ್ಯವಾಗಿ ಒಂದೇ ಸಮನಾಗಿರುತ್ತದೆ. ಅದು ಬಡ್ಡಿಯ ದರದ ಪ್ರಭಾವಕ್ಕೆ ಒಳಗಾಗುವುದಿಲ್ಲ. ಆದರೆ ಸಟ್ಟಾ ಉದ್ದೇಶದಿಂದ ಇಟ್ಟುಕೊಳ್ಳುವ ನಗದಿನ ಪರಿಮಾಣ ಬಡ್ಡಿಯ ದರಕ್ಕೆ ಅನುಗುಣವಾಗಿ ವ್ಯತ್ಯಾಸ ಹೊಂದುತ್ತದೆ.
ಸಾಲ ಕೊಡುವುದರಿಂದ ನಗದು ಕೈಬಿಟ್ಟು ಹೋಗುತ್ತದೆ. ಜನರು ನಗದಿನ ಮೇಲಿರುವ ಒಲವನ್ನು ತಾತ್ಕಾಲಿಕವಾಗಿ ಬಿಟ್ಟುಕೊಡಬೇಕಾರೆ ಸಾಲಗಾರರಿಂದ ಪರಿಹಾರವನ್ನು ಅಪೇಕ್ಷಿಸುತ್ತಾರೆ. ಈ ಪರಿಹಾರವನ್ನು ಕೇನ್ಸ್ ಬಡ್ಡಿ ಎಂದು ಹೆಸರಿಸಿದ್ದಾನೆ. ಬಡ್ಡಿಯ ದರ ಹೆಚ್ಚಾಗಿದ್ದರೆ ಜನರು ಹೊಂದಿರುವ ನಗದಿನ ಪರಿಮಾಣ ಕಡಿಮೆಯಾಗುತ್ತದೆ. ಬಡ್ಡಿಯ ದರ ಕಡಿಮೆಯಾದರೆ ನಗದಿನ ಪರಿಮಾಣ ಹೆಚ್ಚಾಗುತ್ತದೆ.
ಹಣದ ಪೂರೈಕೆ ಸರಕುಗಳ ಪೂರೈಕೆಗಿಂತ ಭಿನ್ನವಾದ್ದು. ಸರಕುಗಳ ಪೂರೈಕೆ ಪ್ರವಹಿಸುವುದಾಗಿದ್ದರೆ ಹಣದ ಪೂರೈಕೆ ಜಡವಾದ್ದು. ಏಕೆಂದರೆ ಅದು ಸಂಪೂರ್ಣವಾಗಿ ಸರ್ಕಾರಕ್ಕೆ ಅಥವಾ ಕೇಂದ್ರೀಯ ಬ್ಯಾಂಕಿನ ವಶದಲ್ಲಿರುತ್ತದೆ. ಸಮಾಜದಲ್ಲಿ ಹಣದ ಬೇಡಿಕೆಯ ಮೇಲೆ ಸರ್ಕಾರಕ್ಕೆ ಯಾವುದೇ ರೀತಿಯ ಹತೋಟಿ ಇರುವುದಿಲ್ಲ. ಆದರೆ ಹಣದ ಪೂರೈಕೆಯ ಮೇಲೆ ಪೂರ್ಣ ನಿಯಂತ್ರಣ ಇರುತ್ತದೆ. ಇದರಿಂದಾಗಿ ಬಡ್ಡಿಯಲ್ಲಿ ಏನೇ ಏರುಪೇರುಗಳಾದರೂ ಹಣದ ಪೂರೈಕೆಯಲ್ಲಿ ವ್ಯತ್ಯಾಸ ಕಂಡುಬರುವುದಿಲ್ಲ. ಬಡ್ಡಿಯ ದರ ಹಣದ ಬೇಡಿಕೆ ಪೂರೈಕೆಗಳಿಂದ ನಿರ್ಧಾರವಾಗುತ್ತದೆ, ನಿಜ. ಆದರೆ ಕೇನ್ಸನ ಸಿದ್ಧಾಂತದಲ್ಲಿ ಹಣದ ಪೂರೈಕೆ ನಿಗದಿಯಾದ ಮಟ್ಟದಲ್ಲಿರುತ್ತದೆ. ಆದ್ದರಿಂದ ಹಣದ ಬೇಡಿಕೆ, ಅದರಲ್ಲೂ ಸಟ್ಟಾ ಬೇಡಿಕೆ, ಬಡ್ಡಿಯ ದರವನ್ನು ನಿರ್ಧರಿಸುವ ಮುಖ್ಯವಾದ ಅಂಶವೆಂಬುದು ಕೇನ್ಸ್ ಸಿದ್ಧಾಂತದ ಸಾರಾಂಶವಾಗಿದೆ.
ಕೇನ್ಸನ ಸಿದ್ಧಾಂತ ಹಣದ ಬೇಡಿಕೆ ಮತ್ತು ಬಡ್ಡಿಯ ದರದ ಮೇಲೆ ಪ್ರಭಾವ ಬೀರುವ ವಿವಿಧ ಅಂಶಗಳಿಗೆ ಅನ್ವಯಿಸಿದಂತೆ ಸಮಾಜದ ಒಂದು ನೈಜ ಚಿತ್ರವನ್ನು ಒಳಗೊಂಡಿದ್ದು. ಹಿಂದಿನ ಸಿದ್ಧಾಂತಗಳಿಗಿಂತ ಉತ್ತಮವಾದುದಾಗಿದ್ದರೂ ದೋಷರಹಿತವಾಗಿಲ್ಲ. 1 ಅಭಿಜಾತ ಸಿದ್ಧಾಂತದಲ್ಲಿ ಇರುವಂತೆ ಕೇನ್ಸನ ಮೇರೆಗೆ ಬಡ್ಡಿಯ ದರ ಹಣದ ಬೇಡಿಕೆ ಮತ್ತು ಪೂರೈಕೆಗಳಿಂದ ನಿರ್ಧಾರವಾಗುತ್ತದೆ. ಆದರೆ ಹಣದ ಬೇಡಿಕೆಯೇ ವರಮಾನದ ಪರಿಮಾಣವನ್ನು ಅವಲಂಬಿಸಿರುವಾಗ, ವರಮಾನದ ಪರಿಮಾಣ ಎಷ್ಟೆಂಬುದನ್ನು ಕಂಡುಕೊಳ್ಳುವವರೆಗೂ ದ್ರವ್ಯದ ಪರಿಮಾಣ ಎಷ್ಟು ಎಂದು ಹೇಳಲು ಸಾಧ್ಯವಿಲ್ಲ. ಸನ್ನಿವೇಶ ಹೀಗಿರುವಾಗ ಬಡ್ಡಿಯ ನಿರ್ಣಯ ಅನಿಶ್ಚಿತ. 2 ಕೇನ್ಸ್ ವಾಸ್ತದ ಅಂಶಗಳಾದ ಉತ್ಪಾದನೆ ಮತ್ತು ಕಾಲಾವಧಿಗಳನ್ನು ಸಂಪೂರ್ಣವಾಗಿ ಕೈಬಿಟ್ಟು ಕೇವಲ ಹಣದ ವಿಷಯಕ್ಕೆ ಪ್ರಾಮುಖ್ಯ ಕೊಟ್ಟಿರುವುದರಿಂದ ಅವನ ಸಿದ್ಧಾಂತ ಅಪೂರ್ಣ. 3 ಈ ಸಿದ್ಧಾಂತ ಬಡ್ಡಿಯ ದರ ಹಾಗೂ ಉಳಿತಾಯದ ನಡುವೆ ಇರುವ ಸಂಬಂಧವನ್ನು ನಿರಾಕರಿಸಿದೆ. ಆದರೆ ಉಳಿತಾಯ ಮಾಡದೆ ನಗದು ಹಣವನ್ನು ಸಾಲಕೊಡಲು ಸಾಧ್ಯವಿಲ್ಲ. 4 ಆಧುನಿಕ ಬಡ್ಡಿ ಸಿದ್ಧಾಂತ: ಈಚೆಗೆ ಹಿಕ್ಸ್, ಲರ್ನರ್, ಹ್ಯಾನ್ಸನ್ ಮೊದಲಾದವರು ಅಭಿಜಾತ ಮತ್ತು ಕೇನ್ಸೀಯ ಸಿದ್ಧಾಂತಗಳಲ್ಲಿ ಕಂಡುಬರುವ ಮುಖ್ಯಾಂಶಗಳನ್ನು ಸಮನ್ವಯಗೊಳಿಸಿ ಹೊಸದೊಂದು ಸಿದ್ಧಾಂತವನ್ನು ರೂಪಿಸಿದ್ದಾರೆ. ಇದನ್ನು ನಿರ್ದಿಷ್ಟ ಬಡ್ಡಿಯ ಸಿದ್ಧಾಂತವೆಂದೂ ಕರೆಯುತ್ತಾರೆ.
ಆಧುನಿಕ ಅರ್ಥಶಾಸ್ತ್ರಜ್ಞರ ಪ್ರಕಾರ ಬಡ್ಡಿಯ ನಿರ್ಣಾಯಕಗಳು ನಾಲ್ಕು: 1 ಉಳಿತಾಯ ಕ್ರಿಯೆ 2 ವಿನಿಯೋಜನೆ ಕ್ರಿಯೆ 3 ದ್ರವತ್ವ ಅಧಿಮಾನತೆಯ ಅಥವಾ ನಗದು ಹಣದೊಲವಿನ ಕ್ರಿಯೆ ಮತ್ತು 4 ಹಣದ ಪೂರೈಕೆ. ಅಭಿಜಾತ ಪಂಥದವರ ಉಳಿತಾಯ ಮತ್ತು ವಿನಿಯೋಜನೆ ಹಾಗೂ ಕೇನ್ಸನ ನಗದು ಹಣದೊಲವು ಮತ್ತು ಹಣದ ಪೂರೈಕೆ ಇವನ್ನು ವರಮಾನದೊಂದಿಗೆ ಕ್ರೊಡೀಕರಿಸುವುದರಿಂದ ಬಡ್ಡಿಯ ದರ ನಿರ್ಣಯದ ಬಗ್ಗೆ ಸಮರ್ಪಕವಾದ ವಿವರಣೆ ದೊರಕುತ್ತದೆ. ಈ ಉದ್ದೇಶಸಾಧನೆಗಾಗಿ ಆಧುನಿಕ ಅರ್ಥಶಾಸ್ತ್ರಜ್ಞರು ಎರಡು ಸಂಯೋಜಿತ ರೇಖೆಗಳನ್ನು ಸೃಷ್ಟಿಸಿಕೊಂಡಿದ್ದಾರೆ.
ವಿವಿಧ ವರಮಾನ ಮಟ್ಟಗಳಲ್ಲಿ ಉಂಟಾಗುವ ಉಳಿತಾಯ ಮತ್ತು ವಿನಿಯೋಜನೆಗಳ ಸಮತೋಲ ಬಿಂದುಗಳು ಸೂಚಿಸುವ ವಿವಿಧ ಬಡ್ಡಿಯ ದರಗಳನ್ನು ಸೇರಿರುವ ರೇಖೆ 18 ಉಳಿತಾಯ ಮತ್ತು ವಿನಿಯೋಜನೆಗಳ ನಡುವಣ ಸಮತೋಲವನ್ನು ಈ ರೇಖೆ ಸೂಚಿಸುತ್ತದೆ. ಹಣದ ಬೇಡಿಕೆ ಮತ್ತು ಪೂರೈಕೆಗಳ ವಿವಿಧ ಸಮತೋಲ ಬಿಂದುಗಳು ಸೂಚಿಸುವ ವಿವಿಧ ಬಡ್ಡಿ ದರಡಳಿಗೆ ಅನ್ವಯಿಸಿದಂತೆ ಇರುವ ವಿವಿಧ ವರಮಾನದ ಮಟ್ಟುಗಳನ್ನು ಸೇರಿಸುವ ರೇಖೆ ಐಒ. ಈ ರೇಖೆ ನಗದು ಹಣದೊಲವು ಮತ್ತು ಹಣದ ನೀಡಿಕೆಗಳ ನಡುವಣ ಸಮತೋಲವನ್ನು ಸೂಚಿಸುತ್ತದೆ. IS ಮತ್ತು ಐಒ ರೇಖೆಗಳು ಪರಸ್ಪರ ಛೇದಿಸುವ ಬಿಂದುವಿನಲ್ಲಿ ಸಮತೋಲ ಬಡ್ಡಿದರ ನಿರ್ಣಯವಾಗುತ್ತದೆ. ಇದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಕಿ ಬಿಂದುವಿನಲ್ಲಿ IS ಮತ್ತು ಐಒ ರೇಖೆಗಳು ಪರಸ್ಪರ ಛೇದಿಸಿರುವುದರಿಂದ ಒಕಿ ಅಥವಾ ಔಓ ಬಡ್ಡಿಯ ದರ ನಿರ್ಧಾರವಾಗಿದೆ. ಈ ಬಡ್ಡಿಯ ದರದಲ್ಲಿ ಉಳಿತಾಯ ಮತ್ತು ವಿನಿಯೋಜನೆಗಳೆರಡೂ ಸಮತೋಲ ಸ್ಥಿತಿಯಲ್ಲಿವೆ. ಅಲ್ಲದೆ ಹಣದ ಪೂರೈಕೆ ಮತ್ತು ಬೇಡಿಕೆಗಳೂ ಸಮತೋಲ ಸ್ಥಿತಿಯಲ್ಲಿವೆ. ಅಲ್ಲದೆ ಹಣದ ಪೂರೈಕೆ ಮತ್ತು ಬೇಡಿಕೆಗಳೂ ಸಮತೋಲ ಸ್ಥಿತಿಯಲ್ಲಿವೆ. ಎಂದರೆ ಕಿ ಬಿಂದು ಎರಡು ವಿಧವಾದ ಸಮತೋಲ ಸ್ಥಿತಿಗಳನ್ನು ಪ್ರತಿನಿಧಿಸುತ್ತದೆ. ವರಮಾನದ ಮಟ್ಟ ಔಒ ಇರುವಾಗ ಈ ಸ್ಥಿತಿಗಳು ಏರ್ಪಟ್ಟಿರುತ್ತವೆ. ಅರ್ಥಶಾಸ್ತ್ರವು ಬಡ್ಡಿಯನ್ನು ಒಟ್ಟು ಬಡ್ಡಿ ಹಾಗು ನಿವ್ವಳ ಬಡ್ಡಿಯೆಂದು ಎರಡು ವಿಧವಾಗಿ ವರ್ಗೀಕರಿಸುತ್ತದೆ. ಈ ಒಟ್ಟು ಬಡ್ಡಿಯು ನಿವ್ವಳ ಬಡ್ಡಿಯನ್ನಷ್ಟೇ ಅಲ್ಲದೆ ವ್ಯಯಕ್ತಿಕ ವೆಚ್ಚ, ವ್ಯಾಪಾರದಲ್ಲಿನ ಹಾನಿ-ನಷ್ಟಗಳನ್ನೆದುರಿಸಿದ್ದಕ್ಕಾಗಿ ಒಂದಿಷ್ಟು ವೆಚ್ಚ, ನಿರ್ವಹಣಾ ವೆಚ್ಚ ಮೊದಲಾದವುಗಳನ್ನು ಒಳಗೊಂಡಿರುತ್ತದೆ.
ಹಿಂದಿನ ಕಾಲದ ಅರ್ಥಶಾಸ್ತ್ರಜ್ಞರು ನಿಷೇದಾತ್ಮಕವಾದ ಬಡ್ಡಿದರದ ಅಸ್ತಿತ್ವವನ್ನು ನಂಬಿದ್ದರು. ಫಾಕ್ಸೆಲ್‍ನು ಈ ಸಿದ್ಧಾಂತವನ್ನು ಹುಟ್ಟುಹಾಕಿದನು. ಮಾರ್ಷಲ್ ಸಹ ತನ್ನ `ಸಿದ್ಧಾಂತಗಳು (ಪ್ರಿನ್ಸಿಪಲ್ಸ್) ಗ್ರಂಥದಲ್ಲೂ ಇದನ್ನು ಪ್ರಸ್ತಾಪಿಸಿದ್ದಾನೆ. ಐರ್ವಿಂಗ್ ಫಿಷರ್ ಸಹ ಈ ಸಾಧ್ಯತೆಯನ್ನು ಪ್ರತಿಪಾದಿಸಿದ್ದನು. ಆದರೆ ಮುಂದೆ ಬಂದ ಅರ್ಥಶಾಸ್ತ್ರಜ್ಞರು ಇದನ್ನು ಅಂಗೀಕರಿಸಲಿಲ್ಲ. ಜೆ.ಎಂ.ಮೆಹತಾ ಮೊದಲಾದವರು ಇದನ್ನು ಅಸಾಧ್ಯವೆಂದು ಪ್ರತಿಪಾದಿಸಿದರು. ಉತ್ಪಾದನೆಯ ಒಂದು ಪ್ರಮುಖ ಘಟಕವಾದ ಬಂಡವಾಳವಾಗಿರುವುದರಿಂದ ಅದರ ಬಳಕೆಯಿಂದ ಬರುವುದೆಂದಿಗೂ ನಿಷೇಧಾತ್ಮಕವಾಗಿರುವುದಿಲ್ಲ ಅದು ಯಾವಾಗಲು ಸಕಾರಾತ್ಮಕವಾಗಿಯೇ ಇರುತ್ತದೆ ಎಂದು ಪ್ರತಿಪಾದಿಸಿದರು. ಬಂಡವಾಳದಿಂದ ಬರುವ ಬಡ್ಡಿಯು ಯಾವಾಗಲೂ ನಿಷೇಧಾತ್ಮಕವಾಗುವುದಿಲ್ಲವೆಂದು ಪ್ರತಿಪಾದಿಸಿದರು.
ಇದೇ ರೀತಿಯಲ್ಲಿಯೇ ಪ್ರಾಚೀನ ಅರ್ಥಶಾಸ್ತ್ರಜ್ಞರು ಸಹಜವಾದ ಬಡ್ಡಿದರ ಹಾಗು ಮಾರುಕಟ್ಟೆಯ ಬಡ್ಡಿದರಗಳು ಒಂದೇ ಎಂದು ಭಾವಿಸಿದ್ದರು. ಆದರೆ ನಟ್ ವಿಕ್‍ಸೆಲ್ (1851-1926) ನು ಈ ಸಿದ್ಧಾಂತವನ್ನು ಖಂಡಿಸಿದನು. ಬ್ಯಾಂಕ್ ಸಾಲ ಮೊದಲಾದವುಗಳು ಈ ಎರಡರಲ್ಲಿ ವಿಭಿನ್ನತೆಗೆ ತನ್ನ ಪ್ರಭಾವವನ್ನು ಬೀರುತ್ತವೆ ಎಂಬುದನ್ನು ಪ್ರಮಾಣೀಕರಿಸಿ ಪ್ರತಿಪಾದಿಸಿದನು. ಈ ವಿಭಿನ್ನತೆಯು ಅಸಂಕಲ್ಪಿತವೋ ಅಸಂಗತವೋ ಅಲ್ಲವೆಂದೂ ಇದು ಬ್ಯಾಂಕ್‍ನಂಥ ಸಂಸ್ಥೆಗಳ ಸಂಶೋಧನೆಯೇ ಕಾರಣವೆಂದೂ ವಾದಿಸಿದನು.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- White Paper: More than Math, The Lost Art of Interest calculation
- Mortgages made clear Financial Services Authority (UK)
- OECD interest rate statistics Archived 2014-10-06 ವೇಬ್ಯಾಕ್ ಮೆಷಿನ್ ನಲ್ಲಿ.
- You can see a list of current interest rates at these sites:
- World Interest Rates
- Forex Motion
- "Which way to pay" Archived 2011-04-19 ವೇಬ್ಯಾಕ್ ಮೆಷಿನ್ ನಲ್ಲಿ.
- Deposit Rates in European Countries