ಬ್ಯೂನಸ್ ಐರಿಸ್

(ಬುವನಾಸ್ ಎರೀಸ್ ಇಂದ ಪುನರ್ನಿರ್ದೇಶಿತ)

ಬ್ಯೂನಸ್ ಐರಿಸ್ ಅಥವಾ ಬ್ವೇನೋಸ್ ಐರೇಸ್ ಅರ್ಜೆಂಟೀನ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಆರ್ಜೆಂಟೀನದ ಒಂದು ಪ್ರಾಂತ್ಯವೂ ಹೌದು. ಇದು ದಕ್ಷಿಣ ಅಮೇರಿಕ ಖಂಡದ ಆಗ್ನೇಯ ಭಾಗದಲ್ಲಿರುವ ಸಮುದ್ರ ತೀರದಲ್ಲಿ ಸ್ಥಿತವಾಗಿದೆ. ಬೃಹತ್ ಬ್ಯೂನಸ್ ಐರಿಸ್ ನಗರ ಪ್ರದೇಶವು ಸುಮಾರು ೧೩ ದಶಲಕ್ಷ ಜನಸಂಖ್ಯೆಯನ್ನು ಹೊಂದಿದೆ.

ಬ್ಯೂನಸ್ ಐರಿಸ್
ಮೇಲಿನಿಂದ ಕೆಳಗೆ ಮತ್ತು ಎಡದಿಂದ ಬಲಕ್ಕೆ: ಒಬೆಲಿಸ್ಕ್ ಮತ್ತು ಜುಲೈ೯ ಅವೆನ್ಯೂ; ನಗರದ ಮಧ್ಯಭಾಗದ ಆಕಾಶರೇಖೆ; ಲಾ ಬೊಕದ ಕಮಿನಿತೊ; ಪ್ಯುರ್ತೊ ಮಾದೇರೊ; ಫ್ಲೋರಾಲಿಸ್ ಜೆನೆರಿಕ
ಮೇಲಿನಿಂದ ಕೆಳಗೆ ಮತ್ತು ಎಡದಿಂದ ಬಲಕ್ಕೆ: ಒಬೆಲಿಸ್ಕ್ ಮತ್ತು ಜುಲೈ೯ ಅವೆನ್ಯೂ; ನಗರದ ಮಧ್ಯಭಾಗದ ಆಕಾಶರೇಖೆ; ಲಾ ಬೊಕಕಮಿನಿತೊ; ಪ್ಯುರ್ತೊ ಮಾದೇರೊ; ಫ್ಲೋರಾಲಿಸ್ ಜೆನೆರಿಕ
Flag of ಬ್ಯೂನಸ್ ಐರಿಸ್
Coat of arms of ಬ್ಯೂನಸ್ ಐರಿಸ್
ದೇಶಅರ್ಜೆಂಟೀನ ಅರ್ಜೆಂಟೀನ
ಸ್ಥಾಪನೆ೧೫೩೬, ೧೫೮೦
ಸರ್ಕಾರ
 • ಸರ್ಕಾರದ ಮುಖ್ಯಸ್ಥಮೊರಿಸಿಯೊ ಮಾರ್ಸಿ
 • ಸೆನೆಟರ್‌ಗಳುಮಾರಿಯ ಯುಜೆನಿಯ ಎಸ್ತೆನ್ಸ್ಸೊರೊ, ಸಾಮ್ಯುಯೆಲ್ ಕಬಾನ್ಚಿಕ್, ಡೇನಿಯಲ್ ಫಿಲ್ಮಸ್
Area
 • City೨೦೩ km (೭೮.೫ sq mi)
 • ಭೂಮಿ೨೦೩ km (೭೮.೫ sq mi)
 • ಮೆಟ್ರೋ
೪,೭೫೮ km (೧,೮೩೭ sq mi)
Population
 (೨೦೦೯ ಅಂದಾಜು.[])
 • City೩೦,೫೦,೭೨೮
 • Metro
೧,೩೩,೫೬,೭೧೫
ಸಮಯದ ವಲಯ
ಜಾಲತಾಣhttp://www.buenosaires.gov.ar/ (ಸ್ಪ್ಯಾನಿಷ್ ಭಾಷೆ)

ಬ್ವೇನೋಸ್ ಐರೇಸ್ ಪ್ರಾಂತ್ಯ

ಬದಲಾಯಿಸಿ

ಬ್ವೇನೋಸ್ ಐರೇಸ್ ಪ್ರಾಂತ್ಯ ರೀಯೋ ಪರಾನಾದ ದಕ್ಷಿಣದಲ್ಲಿ ಹಾಗೂ ಅಟ್ಲಾಂಟಿಕ್ ಸಾಗರದ ಪಶ್ಚಿಮದಲ್ಲಿ ಹಬ್ಬಿದ. ಪ್ರಾಂತ್ಯದ ದಕ್ಷಿಣದಲ್ಲಿ ಡೆಲ್ ಟಂಡಿಲ್ ಮತ್ತು ದ ಲಾ ವೆಂಟನ ಎಂಬ ತಗ್ಗಾದ ಎರಡು ಪರ್ವತ ಶ್ರೇಣಿಗಳಿವೆ. ಆರ್ಜೆಂಟೀನದ ವಿಶಾಲವಾದ ಪಾಂಪಾಸ್ ಹುಲ್ಲುಗಾವಲಿನ ಬಹುಭಾಗವನ್ನು ಆವರಿಸಿರುವ ಈ ಪ್ರಾಂತ್ಯದ ವಿಸ್ತೀರ್ಣ 3,07,804 ಚ ಕಿಮೀ. ಇದು ಅರ್ಜೆಂಟೀನದ ಅತ್ಯಂತ ಜನಸಮರ್ದ ಪ್ರದೇಶ, ಜನಸಂಖ್ಯೆ ಸುಮಾರು 87,74,529 (1970).

ಇತಿಹಾಸ

ಬದಲಾಯಿಸಿ

ಅರ್ಜೆಂಟೀನ ಸ್ಪೇನಿನ ವಸಾಹತಾಗಿದ್ದಾಗ ಈ ಪ್ರದೇಶದ ಬೆಳೆವಣಿಗೆಗೆ ಅಷ್ಟೇನೇ ಗಮನ ಸಂದಿರಲಿಲ್ಲ. ಬ್ವೇನೋಸ್ ಐರೇಸನ ವಿಶಾಲವಾದ ಮೈದಾನದಲ್ಲಿ ಸ್ವಚ್ಛಂದವಾಗಿ ಜೀವಿಸುತ್ತಿದ್ದ ಕಾಡು ಕುದುರೆಗಳನ್ನೂ ದನಗಳನ್ನೂ ಕೊಂದು ಅವುಗಳ ತೊಗಲುಗಳನ್ನು ಸಂಗ್ರಹಿಸುವುದೇ ಆಗ ಮುಖ್ಯ ಉದ್ಯೋಗವಾಗಿತ್ತು. 1810ರಲ್ಲಿ ಇದನ್ನು ಸ್ಪೇನಿನಿಂದ ವಿಮೋಚನೆಗೊಳಿಸಲು ಇಲ್ಲಿಯ ಜನ ಬೆಂಬಲನೀಡಿದರು. ಆದರೆ ಹತ್ತೊಂಬತ್ತನೆಯ ಶತಮಾನದಲ್ಲಿ ಉದ್ದಕ್ಕೂ ಅಂತಃಕಲಹಗಳು ಮುಂದುವರಿದಿದ್ದುವು. 1862ರಲ್ಲಿ ಇದಕ್ಕೆ ಪ್ರಾಂತ್ಯದ ಸ್ಥಾನಮಾನಗಳು ದೊರೆತವು. 1880ರಲ್ಲಿ ಬ್ವೇನೋಸ್ ಐರೇಸ್ ನಗರ ಆರ್ಜೆಂಟೀನ ರಾಷ್ಟ್ರದ ರಾಜಧಾನಿಯಾಯಿತು. ಪ್ರಾಂತ್ಯದ ಆಡಳಿತ ಕೇಂದ್ರವನ್ನು ಅಲ್ಲಿಂದ ಲಾ ಪ್ಲಾಟ್‍ಗೆ ವರ್ಗಾಯಿಸಲಾಯಿತು.

ಕೃಷಿ ಮತ್ತು ಕೈಗಾರಿಕೆ

ಬದಲಾಯಿಸಿ

19ನೆಯ ಶತಮಾನದ ಅಂತ್ಯಭಾಗದಿಂದ 20ನೆಯ ಶತಮಾನದ ಆದಿಭಾಗದ ತನಕ ಪಶುಪಾಲನೆ, ಗೋದಿ, ಮೆಕ್ಕೆಜೋಳ ಮತ್ತು ಆಲ್ಫಾಲ್ಫ ಹುಲ್ಲಿನ ಬೆಳೆಗೆ ಉತ್ತೇಜನ ದೊರಕಿತು. ಇವಕ್ಕೆ ಆಂತರಿಕವಾಗಿಯೂ ಯೂರೊಪಿನ ಮಾರುಕಟ್ಟೆಯಲ್ಲೂ ಒಳ್ಳೆಯ ಬೇಡಿಕೆ ಇತ್ತು. ಒಳ್ಳೆಯ ತಳಿಗಳ ದನಗಳ ಸಂಖ್ಯೆಯ ದೃಷ್ಟಿಯಿಂದ ಆರ್ಜೆಂಟೀನದಲ್ಲಿ ಈ ಪ್ರಾಂತ್ಯದ್ದು ಪ್ರಥಮ ಸ್ಥಾನ. ಇಲ್ಲಿಯ ನೆಲದಲ್ಲಿ ಅರ್ಧದಷ್ಟು ಭಾಗವನ್ನು ದನಗಳ ಮೇವಿಗಾಗಿ ಬಳಸಲಾಗುತ್ತಿದೆ. ಆದರೆ ಈಚೆಗೆ ಧಾನ್ಯಗಳ ಬೆಳೆಗೆ ಹೆಚ್ಚು ನೆಲ ಒಳಪಡುತ್ತಿದೆ. ಪ್ರಾಂತ್ಯದ ನಡುವೆ ಉತ್ತರ ದಕ್ಷಿಣವಾಗಿ ಹಬ್ಬಿರುವ ವಿಶಾಲ ಪ್ರದೇಶದಲ್ಲಿ ಗೋದಿ ಬೆಳೆಸಲಾಗುತ್ತಿದೆ. ಪ್ರಾಂತ್ಯದ ಉತ್ತರ ಭಾಗದಲ್ಲಿ ಮೆಕ್ಕೇಜೋಳ ಮುಖ್ಯ ಬೆಳೆ. ರಾಜಧಾನಿಯ ಸುತ್ತಣ ನೆಲದಲ್ಲಿ ಹಣ್ಣು ತರಕಾರಿ ಬೆಳೆಸುತ್ತಾರೆ. ಬ್ವೇನೋಸ್ ಐರೇಸ್ ನಗರದ ದಕ್ಷಿಣಕ್ಕೆ ಕರಾವಳಿಯಲ್ಲಿ ಪಶುಪಾಲನೆ ಮುಖ್ಯ ಕಸಬು. ಈ ನಗರದ ಸುತ್ತ ಹಲವು ಕೈಗಾರಿಕೆಗಳಿವೆ.

ಬಾಹಿಯ ಬ್ಲಾಂಕ, ಮಾರ್ದೆಲ್ ಪ್ಲಾಟ, ಲಪ್ಲಾಟ ಇವು ಇತರ ಮುಖ್ಯ ಕೈಗಾರಿಕಾ ಹಾಗೂ ವಾಣಿಜ್ಯ ಕೇಂದ್ರಗಳು.

ಬ್ವೇನೋಸ್ ಐರೇಸ್ ನಗರ

ಬದಲಾಯಿಸಿ

ಬ್ವೇನೋಸ್ ಐರೇಸ್ ನಗರ ರೀಯೋದ ಲ ಪ್ಲಾಟದ ಪಶ್ಚಿಮ ಕರಾವಳಿಯಲ್ಲಿ, ಅಟ್ಲಾಂಟಿಕ್ ಕಡಲ ಕಡೆಯಿಂದ ಸುಮಾರು 240ಕಿಮೀ ದೂರದಲ್ಲಿದೆ. ದಕ್ಷಿಣ ಗೋಳಾರ್ಧದಲ್ಲಿ ಇದು ಅತ್ಯಂತ ದೊಡ್ಡ ನಗರ. ಕೇಂದ್ರಾಡಳಿತದ ಜಿಲ್ಲೆಯ ವಿಸ್ತೀರ್ಣ 200ಚಕಿಮೀ. ನಗರದ ಜನಸಂಖ್ಯೆ 2,982,000 (1978). 16ನೆಯ ಶತಮಾನದಲ್ಲಿ ಸ್ಪೇನಿನ ನಾವಿಕರು ಇದನ್ನು ತಮ್ಮ ಆರಾಧನೆಯ ಸಂತಳಾದ ಮರಿಯ ದಲ್ ಬ್ವೇನ್ ಐರ್‍ಳ ಹೆಸರಿನಿಂದ ಈ ನಗರವನ್ನು ಕರೆದರು ಎಂದು ಹೇಳಲಾಗಿದೆ. ಇಂದು ಬ್ರೇನೋಸ್ ಐರೇಸಿನ ನಿವಾಸಿಗಳು ತಮ್ಮನ್ನು ಬಂದರಿನ ಜನರೆಂದು (ಪೋರ್ಟಿನೋಸ್) ವರ್ಣಿಸಿಕೊಳ್ಳುತ್ತಾರೆ.

ಬ್ವೇನೋಸ್ ಐರೇಸ್ ನಗರ ರೀಯೋ ದ ಲ ಪ್ಲಾಟಾದ ಅಳಿವೆಯ ದಂಡೆಯ ಮೇಲಿದೆ. ನಗರ 1536ರಲ್ಲಿ ಸ್ಥಾಪನೆಗೊಂಡಿತಾದರೂ ಇದು ಬಹುತೇಕ ಆಧುನಿಕ. 1853ರಲ್ಲಿ ಆರ್ಜೇಂಟೀನದ ರಾಜಧಾನಿಯಾದ ಮೇಲೆ ಇದು ವೇಗವಾಗಿ ಬೆಳೆಯತೊಡಗಿತು. ನಗರದಲ್ಲಿ ಅನೇಕ ವಿಶಾಲ ಮಾರ್ಗಗಳಿವೆ. ಅವೆನಿದ ದ ಮೇಯೋ ಮತ್ತು ಅವೆನಿದ ದ ಜುಲಿಯೊ ಇಲ್ಲಿಯ ಪ್ರಸಿದ್ಧ ದೊಡ್ಡ ಮಾರ್ಗಗಳು. ಪ್ಲಾಜದ ಮೇಯೋದಲ್ಲಿ ಕ್ರೈಸ್ತ ಆರಾಧನಾ ಮಂದಿರ, ಸರ್ಕಾರಿ ಭವನ, ಖಜಾನೆ ಮತ್ತು ನಗರ ಸಭೆ ಇವೆ. ಪ್ಲಾಜ ದೆಲ್ ಕಾಂಗ್ರೆಸೊದಲ್ಲಿ ಸಂಸತ್ ಭವನವಿದೆ. ಬ್ವೇನೋಸ್ ಐರೇಸ್ ರಾಷ್ಟ್ರೀಯ ವಿಶ್ವವಿದ್ಯಾಲಯದ ಕೇಂದ್ರ. ಈ ವಿಶ್ವವಿದ್ಯಾಲಯ 1821ರಲ್ಲಿ ಸ್ಥಾಪಿತವಾಯಿತು.

ಬ್ವೇನೋಸ್ ಐರೇಸ್‍ನಲ್ಲಿ ಅನೇಕ ಸುಂದರ ಉದ್ಯಾನಗಳುಂಟು. ಇವುಗಳ ಪೈಕಿ ಬಹಳ ಪ್ರಸಿದ್ಧವಾದ್ದು ಪಾಲೆರ್ಮೊ ಉದ್ಯಾನ. ಇದರ ವಿಸ್ತೀರ್ಣ ಸುಮಾರು 340 ಹೆಕ್ಟೇರುಗಳು.

ನಗರದ ಪ್ರಮುಖ ಕಟ್ಟಡಗಳು: 1732ರಲ್ಲಿ ನಿರ್ಮಿತವಾದ ರೋಮನ್ ಕ್ಯಾತೊಲಿಕ್ ಕತೀಡ್ರಲ್, ಸಂತ ಫೆಲಿಸಿಟಾಸ್ ಷಪೆಲ್, ಕ್ಯಾಸ ರೋಸಾದ (ಸರ್ಕಾರಿ ಭವನ), ವಿಶ್ವವಿದ್ಯಾಲಯ ಮತ್ತು ರಂಗಮಂದಿರ. ಬ್ವೇನೋಸ್ ಐರೇಸ್‍ನಲ್ಲಿ ಅನೇಕ ಭವ್ಯ ಹೋಟೆಲುಗಳಿವೆ.

ಬ್ವೇನೋಸ್‍ಐರೇಸ್ ಒಂದು ಮುಖ್ಯ ರೈಲ್ವೆ ಕೇಂದ್ರ. ಟ್ರಾಮ್‍ದೇ ಸೌಲಭ್ಯವೂ ಇದೆ. ದನಗಳನ್ನು ಕೊಂದು ಮಾಂಸವನ್ನು ಪ್ಯಾಕ್ ಮಾಡುವ ಕೈಗಾರಿಕೆ ಇಲ್ಲಿ ಪ್ರಮುಖವಾದ್ದು. ನಗರದ ಸುಂದರವಾದ ಪ್ರಮುಖ ರಸ್ತೆಗಳಿಂದಾಚೆಗೆ ಸಾವಿರಾರು ಬಡಕುಟುಂಬಗಳ ಮನೆಗಳಿಂದ ಕೂಡಿದ ಕಿರು ಬೀದಿಗಳಿವೆ. ಇತರ ನಗರಗಳಲ್ಲಿರುವ ಸಮಸ್ಯೆಗಳನ್ನೇ ಈ ನಗರವೂ ಎದುರಿಸುತ್ತಿದೆ. ನಗರದ ಸುತ್ತ ಬೆಳೆಯುತ್ತಿರುವ ಕೈಗಾರಿಕೆಗಳಿಂದ ಪರಿಸರಮಾಲಿನ್ಯವೂ ಹೆಚ್ಚುತ್ತಿದೆ.

ನಗರದ ಜನ ಮುಖ್ಯವಾಗಿ ಯೂರೊಪಿಯನ್ ಮೂಲದವರು. ಸ್ಪಾನಿಷ್ ಹಾಗೂ ಇಟಾಲಿಯನ್ ಜನರು ಪ್ರಮುಖ. ಇಂಗ್ಲಿಷ್ ಫ್ರೆಂಚ್ ಮತ್ತು ಜರ್ಮನ್ ಜನಾಂಗಗಳೂ ಉಂಟು. ಇತರ ಮೂಲಗಳವರು ಅಲ್ಪಸಂಖ್ಯೆಯಲ್ಲಿದ್ದಾರೆ.

ಸಾರಿಗೆ

ಬದಲಾಯಿಸಿ

ಪ್ರಪಂಚದ ದೊಡ್ಡ ಬಂದರುಗಳ ಪೈಕಿ ಬ್ವೇನೋಸ್ ಐರೇಸಿನದೂ ಒಂದು. ಇದರ ರೇವು ಸಂಪೂರ್ಣವಾಗಿ ಮಾನವನಿರ್ಮಿತ. ರೀಯೊ ದ ಲ ಪ್ಲಾಟಾದ ಡೊಂಕಾದ ನಾಲೆಯ ಮೂಲಕ ಹಡಗುಗಳು ಬಂದರು ಕಟ್ಟೆಯ ಬಳಿಗೆ ಬರುತ್ತವೆ. ಈ ನಾಲೆ ಬಹು ಬೇಗ ಮಣ್ಣು ಮರಳುಗಳಿಂದ ತುಂಬುವುದರಿಂದ ಆಗಾಗ ಇದನ್ನು ಆಳಮಾಡುತ್ತಿರಬೇಕಾಗುತ್ತದೆ. ಬಂದರು ಸುಮಾರು 8 ಕಿಮೀಗಳಷ್ಟು ಉದ್ದವಾಗಿದೆ. ಪ್ವೆರ್ಟೊನುವೊದಲ್ಲಿ (ಹೊಸಬಂದರು) ಆರು ತೆರೆದ ಕಟ್ಟೆಗಳಿವೆ. ಇದು ಮುಖ್ಯವಾಗಿ ಪ್ರಯಾಣಿಕ ಹಡಗುಗಳಿಗೆ ಬಳಕೆಯಾಗುತ್ತಿದೆ. ಪ್ವೆರ್ಟೊ ನುವೊಗೂ ಪ್ವೆರ್ಟೊ ಮದಿರೊಗೂ ನಡುವೆ ಇರುವದಾರ್ಸಿನ ನಾರ್ತೆ (ಉತ್ತರಕಟ್ಟೆ) ಮುಖ್ಯವಾಗಿ ಯುದ್ಧ ನೌಕೆಗಳಿಗೆ ಮೀಸಲು. ಪ್ವೆರ್ಟೊಮದಿರೊವನ್ನು ಮುಖ್ಯವಾಗಿ ನದೀ ಸಾರಿಗೆಗೆ ಬಳಸಲಾಗುತ್ತಿದೆ. ದಾರ್ಸಿನ ಸುರ್ (ದಕ್ಷಿಣ ಕಟ್ಟೆ) ತೈಲವೇ ಮುಂತಾದ ಸರಕುಗಳಿಗೆ ಮೀಸಲು. ಒಂದು ವರ್ಷದಲ್ಲಿ ಬ್ವೇನೋಸ್ ಐರೇಸ್ ಬಂದರಿಗೆ ಸುಮಾರು 3500 ಹಡಗುಗಳು ಬರುತ್ತವೆ. ಬ್ವೇನೋಸ್ ಐರೇಸ್ ಒಂದು ಮುಖ್ಯ ವಿಮಾನ ಕೇಂದ್ರಕೂಡ.

ಬ್ವೇನೋಸ್ ಐರೇಸ್ ನಗರಪಾಲಿಕೆಯ ಅಧ್ಯಕ್ಷ ಮೇಯರ್. ಈತನನನ್ನು ಆರ್ಜೆಂಟೀನ್ ಗಣರಾಜ್ಯದ ಅಧ್ಯಕ್ಷ, ಸೆನೇಟಿನ ಅನುಮೋದನೆಯೊಂದಿಗೆ ನೇಮಕ ಮಾಡುತ್ತಾನೆ. ಇವನಿಗೆ ನೆರವುನೀಡಲು ಚುನಾಯಿತರಾದ ಮೂವತ್ತು ಮಂದಿ ಸದಸ್ಯರ ಮಂಡಲಿ ಇರುತ್ತದೆ.

ಉಲ್ಲೇಖಗಳು

ಬದಲಾಯಿಸಿ

ಹೊರಗಿನ ಸಂಪರ್ಕಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: