ಪಿ. ಸುಶೀಲ
ಪಿ. ಸುಶೀಲ (ನವೆಂಬರ್ ೧೩, ೧೯೩೫) ಚಲನಚಿತ್ರರಂಗದ, ಅದರಲ್ಲೂ ಪ್ರಧಾನವಾಗಿ ದಕ್ಷಿಣ ಭಾರತೀಯ ಚಲನಚಿತ್ರರಂಗದ ಪ್ರಸಿದ್ಧ ಹಿನ್ನೆಲೆ ಗಾಯಕಿ.
ಪಿ. ಸುಶೀಲ | |
---|---|
ಜನನ | ನವೆಂಬರ್ ೧೩, ೧೯೩೫ ವಿಜಯನಗರಂ, ಆಂಧ್ರ ಪ್ರದೇಶ |
ಇತರೆ ಹೆಸರು | ಗಂಧರ್ವ ಗಾಯಕಿ, ಗಾನ ಸರಸ್ವತಿ, ಕನ್ನಡ ಕೋಗಿಲೆ |
ಗಮನಾರ್ಹ ಕೆಲಸಗಳು | ಚಲನಚಿತ್ರ ಹಿನ್ನೆಲೆಗಾಯಕಿ |
ಜೀವನ
ಬದಲಾಯಿಸಿಪಿ.ಸುಶೀಲ ಅವರು ಆಂಧ್ರ ಪ್ರದೇಶದ ವಿಜಯ ನಗರಂ ಎಂಬಲ್ಲಿ ೧೯೩೫ ನವೆಂಬರ್ ೧೩ ರಂದು ಜನಿಸಿದರು. ತಕ್ಕ ಮಟ್ಟಿನ ಆಸ್ತಿವಂತ ಕುಟುಂಬದವರಾದ ತಂದೆ ಮುಕುಂದರಾವ್ ಪ್ರಸಿದ್ದ ಕ್ರಿಮಿನಲ್ ಲಾಯರ್. ತಾಯಿ ಶೇಷಮ್ಮನವರಿಗೆ ಸಂಗೀತದಲ್ಲಿ ವಿಶೇಷ ಆಸಕ್ತಿಯಿತ್ತು. ಇವರ ಭಾಗದಿಂದಲೇ ಪ್ರಸಿದ್ಧ ಗಾಯಕರಾದ ಘಂಟಸಾಲ ಮತ್ತು ದ್ವಾರಂ ವೆಂಕಟಸ್ವಾಮಿ ನಾಯ್ಡು ಸುಶೀಲ ಅವರ ಬಾಲ್ಯದ ಆದರ್ಶವಾಗಿದ್ದರು. ಬಾಲ್ಯದಿಂದಲೂ ಹೆತ್ತವರಿಗೆ ಮಗಳು ಎಂ.ಎಸ್.ಸುಬ್ಬುಲಕ್ಷ್ಮಿಯಂತೆ ಶಾಸ್ತ್ರೀಯ ಗಾಯಕಿಯಾಗಬೇಕು ಎಂಬ ಆಸೆಯಿತ್ತು.
ಪಿ. ಸುಶೀಲ ಅವರು ಓದಿದ್ದು ಎಂಟನೇ ತರಗತಿಯವರೆಗೆ ಮಾತ್ರ. ಮುಂದೆ ವಿಜಯನಗರಂನಲ್ಲಿನ ಸಂಗೀತ ಕಾಲೇಜಿನಲ್ಲಿ ಡಿಪ್ಲೋಮಾ ಪದವಿಯನ್ನು ಪಡೆದರು. ನಂತರದಲ್ಲಿ ಮದರಾಸಿನ ಸಂಗೀತ ಅಕಾಡೆಮಿಯಲ್ಲಿ ಸುಬ್ರಮಣಿ ಅಯ್ಯರ್ ಅವರ ಮಾರ್ಗದರ್ಶನದಲ್ಲಿ ಸಂಗೀತದಲ್ಲಿ ಪದವೀಧರೆ ಕೂಡ ಆದರು. ದ್ವಾರಂ ವೆಂಕಟಸ್ವಾಮಿ ನಾಯ್ಡು ಅವರ ಬಳಿ ಶಾಸ್ತ್ರೀಯ ಸಂಗೀತದ ಅಭ್ಯಾಸ ಮಾಡಿದರು.
ಪಿ.ಸುಶೀಲ ಅವರು ೧೯೫೧ ರಲ್ಲಿ ಮದ್ರಾಸಿನಲ್ಲಿ ಮಾತ್ರವಿದ್ದ ಸಂಗೀತ ವಿದ್ವಾನ್ ಪರೀಕ್ಷೆಗೆ ಅಧ್ಯಯನದಲ್ಲಿರುವಾಗಲೇ ಆಗಾಗ ಆಕಾಶವಾಣಿಗೆ ಕಾರ್ಯಕ್ರಮ ನೀಡುತ್ತಿದ್ದರು. ೧೯೫೧ರ ವರ್ಷದಲ್ಲಿ ಚಲನಚಿತ್ರರಂಗದಲ್ಲಿ ಪ್ರಸಿದ್ಧರಾದ ಪೆಂಡ್ಯಾಲ ನಾಗೇಶ್ವರರಾಯರು ಹೊಸ ಗಾಯಕಿಯರ ತಲಾಷೆಯಲ್ಲಿದ್ದು ಪಿ.ಸುಶೀಲ ಅವರನ್ನು ಅಂದಿನ ಪ್ರಖ್ಯಾತ ಗಾಯಕ ಎ. ರಾಜಾ ಅವರೊಡನೆ ‘ಪೆತ್ರ ತಾಯ್’ ಚಿತ್ರಕ್ಕೆ ಯುಗಳ ಗೀತೆ ಹಾಡಲು ಆಯ್ಕೆ ಮಾಡಿದರು. ಅಂದಿನಿಂದ ಇತ್ತೀಚಿನ ವರ್ಷಗಳವರೆಗೆ ಸುಶೀಲ ಅವರು ತಮ್ಮ ಜನಪ್ರಿಯತೆಯನ್ನು ಕಾಯ್ದುಕೊಂಡು ಬಂದ ಸಾಧನೆ ಅಮೋಘವಾದದ್ದು. ಪಿ. ಸುಶೀಲ ಅವರು ಚಿತ್ರರಂಗದ ಗಾಯಕಿಯಾಗಿ ಬಂದಾಗ ಪಿ. ಲೀಲಾ, ಜಿಕ್ಕಿ, ಎಂ. ಎಸ್. ರಾಜೇಶ್ವರಿ, ಜಮುನಾ ರಾಣಿ, ಎಂ. ಎಲ್. ವಸಂತಕುಮಾರಿ, ಡಿ. ಕೆ. ಪಟ್ಟಮ್ಮಾಳ್, ಟಿ. ವಿ. ರತ್ನಂ, ರಾಧಾ ಜಯಲಕ್ಷ್ಮಿ, ಸೋಲಮಂಗಲಂ ರಾಜಲಕ್ಷ್ಮಿ, ಬಾಲಸರಸ್ವತಿ ದೇವಿ, ಎ. ಪಿ. ಕೋಮಲ, ಕೆ. ರಾಣಿ ಅಂತಹ ಬಹಳಷ್ಟು ಗಾಯಕಿಯರು ಚಿತ್ರರಂಗದಲ್ಲಿದ್ದರು. ಇಂತಹ ಮಹಾನ್ ಗಾಯಕಿಯರ ಮಧ್ಯೆ ಸಹಾ ತಮ್ಮ ಗಾಯನದ ಮೂಲಕ ವಿಶೇಷ ಛಾಪನ್ನು ಮೂಡಿಸಿ ಆರು ದಶಕಗಳ ಕಾಲ ದಕ್ಷಿಣ ಭಾರತದ ಚಲನಚಿತ್ರ ಸಂಗೀತ ಲೋಕದಲ್ಲಿ ಸಾಮ್ರಾಜ್ಞಿಯಾಗಿ ಕಂಗೊಳಿಸಿದರು.
ಪಿ. ಸುಶೀಲ ಅವರು ಕನ್ನಡದಲ್ಲಿ ಮೊದಲು ಹಾಡಿದ ಚಿತ್ರ ೧೯೫೨ರಲ್ಲಿ ತೆರೆ ಕಂಡ "ಮಾಡಿದ್ದುಣ್ಣೋ ಮಾರಾಯ", ಈ ಚಿತ್ರದ ಹಾಡುಗಳು ಪ್ರಸಿದ್ಧವಾಗಲಿಲ್ಲವಾದರೂ ನಂತರದಲ್ಲಿ ಬಂದ "ರತ್ನಗಿರಿ ರಹಸ್ಯ"ದ "ಅಮರಾ ಮಧುರಾ ಪ್ರೇಮ" ಗೀತೆ ಸಾಕಷ್ಟು ಜನಪ್ರಿಯಗೊಂಡಿತು,
ಎಂ.ಎಸ್.ವಿಶ್ವನಾಥ್ ಅವರಿಂದ ಮೊದಲ್ಗೊಂಡು ಎ.ಆರ್.ರೆಹಮಾನ್ ರವರೆಗೆ ಎಲ್ಲಾ ತಲೆಮಾರಿನ ಸಂಗೀತ ನಿರ್ದೇಶಕರ ಗೀತೆಗಳನ್ನು ಹಾಡಿದ ಅನುಭವ ಈ ಮೇರು ಗಾಯಕಿಯದಾಗಿದೆ
ಪ್ರಸಿದ್ಧ ಗೀತೆಗಳು
ಬದಲಾಯಿಸಿಅಷ್ಟೊಂದು ಭಾಷೆಗಳಲ್ಲಿ ಹಾಡಿದರೂ ಅವರು ಆಯಾ ಭಾಷೆಗಳಿಗೆ ಬೇಕಾದ ಭಾವ, ಸುಸ್ಪಷ್ಟ ಉಚ್ಛಾರ ಮತ್ತು ಜೇನಿನಂತ ಸವಿ ಇಂಪು, ಅನನ್ಯ. ಇದಕ್ಕೆ ಉದಾಹರಣೆಯಾಗಿ ‘ನಿನ್ನ ಕಣ್ಣ ಕನ್ನಡಿಯಲ್ಲಿ ಏನೋ ಏನೋ ಭಾವ’, ‘ಧುಮ್ಮಿಕ್ಕಿ ಹರಿಯುವ ಜಲಧಾರೆಯಲ್ಲೂ’, ‘ಹೂವೂ ಚೆಲುವೆಲ್ಲಾ ನಂದೆಂದಿತು’, ‘ದಯವಿಲ್ಲದ ಧರ್ಮವು ಯಾವುದಯ್ಯ’, ‘ವಿರಹಾ ನೋವು ನೂರು ತರಹ’, ‘ಬಂದೇ ಬರತಾವ ಕಾಲ’ ಅಂತಹ ಅನೇಕ ಉತ್ಕೃಷ್ಟ ಗೀತೆಗಳು ಉದಾಹರಣೆಗಳಾಗಿವೆ.
ಈ ಹಾಡುಗಳಷ್ಟೇ ಅಲ್ಲದೆ ಸುಶೀಲ ಅವರು ಕನ್ನಡದಲ್ಲಿ ಹಾಡಿರುವ ಹಾಡುಗಳನ್ನು ನೆನೆಯುತ್ತಾ ಹೋದಂತೆ ಒಂದಕ್ಕಿಂತ ಒಂದು ಸೊಗಸಾದ ಹಾಡುಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ‘ಅಮರ ಮಧುರ ಪ್ರೇಮ ನೀ ಬಾ ಬೇಗ ಚಂದಮಾಮ’, ‘ಮೆಲ್ಲುಸಿರೇ ಸವಿ ಗಾನ’, ‘ಜಲಲ ಜಲಲ ಜಲ ಧಾರೆ’, ’ನುಡಿಮನ ಶಿವಗುಣ ಸಂಕೀರ್ತನ’, ‘ತನು ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯ ನೀನು’, ‘ಸುರಸುಂದರಾಂಗ ಕೃಷ್ಣ ನೀ ಬಾರೋ’, ‘ನೀನಿದ್ದರೇನು ಹತ್ತಿರ ಎಷ್ಟೊಂದು ನಡುವೆ ಅಂತರ’, ‘ಇದೇನ ಸಭ್ಯತೆ ಇದೇನ ಸಂಸ್ಕೃತಿ’, ‘ಅಂದದೂರು ಬೆಂಗಳೂರು ಆನಂದದ ತವರೂರು’, ‘ನೀ ಮುಡಿದ ಮಲ್ಲಿಗೆ ಹೂವಿನ ಮಾಲೆ’, ’ನೀರಿನಲ್ಲಿ ಅಲೆಯ ಉಂಗುರ’, ‘ನನ್ನವಳು ನನ್ನೆದೆಯ ಹೊನ್ನಾಡನಾಳುವಳು’, ‘ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ‘, ‘ಹಕ್ಕಿ ಹಾಡು ಚಿಲಿಪಿಲಿ ರಾಗ’, ‘ದೋಣಿಯೊಳಗೆ ನೀನು ಕರೆಯ ಮೇಲೆ ನಾನು’, ‘ಉಂಡಾಡಬಹುದು ಓಡಿ ಬಾ ಎನ್ನಪ್ಪ’, ‘ಫಲಿಸಿತು ಒಲವಿನ ಪೂಜಾ ಫಲ’, ‘ಒಲವೆ ಜೀವನ ಸಾಕ್ಷಾತ್ಕಾರ’, ‘ಹದಿನಾಲ್ಕು ವರ್ಷ ವನವಾಸದಿಂದ ಮರಳಿ ಬಂದಳು ಸೀತೆ’, ‘ನೀ ಬಂದು ನಿಂತಾಗ ನಿಂತು ನೀ ನಕ್ಕಾಗ ಸೋತೆ ನಾನಾಗ’, ‘ವೆಂಕಟಾಚಲವಾಸ ಹೇ ಶ್ರೀನಿವಾಸ’, ‘ತಿರುಪತಿ ಗಿರಿವಾಸ ಶ್ರೀವೆಂಕಟೇಶ’, ‘ನನ್ನ ಪುಟ್ಟ ಸಂಸಾರ ಲೋಕದಿಂದ ಬಹು ದೂರ’, ‘ಕರ್ಪೂರದ ಬೊಂಬೆ ನಾನು’, ‘ಕಥೆ ಹೇಳುವೆ ನನ್ನ ಕಥೆ ಹೇಳುವೆ’, ’ಬಾಳ ಬಂಗಾರ ನೀನು, ಹಣೆಯ ಸಿಂಗಾರ ನೀನು’, ‘ಸಂತೋಷ ಆಹಾ ಓಹೋ’, ‘ಅರೆರೆರೆ ಗಿಣಿ ರಾಮ’, ‘ಓ ನಲ್ಲನೆ ಸವಿ ಮಾತೊಂದ ನುಡಿವೆಯಾ’ ಹೀಗೆ ನೂರಾರು ಸಂಖ್ಯೆಯ ಹಾಡುಗಳು ರಸಿಕರ ನೆನಪಿನಲ್ಲಿ ಹಸುರಾಗಿವೆ.
ನಲವತ್ತು ಸಾವಿರಕ್ಕೂ ಹೆಚ್ಚು ಗೀತೆಗಳು
ಬದಲಾಯಿಸಿಒಟ್ಟಾರೆ 40,000ಕ್ಕೂ ಹೆಚ್ಚು ಗೀತೆಗಳನ್ನು ಹಾಡಿರುವ ಪಿ. ಸುಶೀಲ ಅವರು ಲತಾ ಮಂಗೇಶ್ಕರ್ ಅವರ ಅಭಿಮಾನಿ ಮತ್ತು ಗೆಳತಿ. ಪ್ರಾರಂಭದಲ್ಲಿ ಹಲವು ಹಿಂದಿ ಚಿತ್ರಗಳಲ್ಲಿ ಹಾಡಿದರೂ ನಂತರದಲ್ಲಿ ಲತಾ ಅವರು ಇರುವಾಗ ಹಿಂದಿ ಚಿತ್ರರಂಗಕ್ಕೆ ನನ್ನ ಅವಶ್ಯಕತೆ ಇಲ್ಲ ಎಂಬ ಕಾರಣದಿಂದ ಅಲ್ಲಿನ ಅವಕಾಶಗಳ ಹಿಂದೆ ಹೋಗಲಿಲ್ಲ ಎನ್ನುತ್ತಾರೆ. ಇಂದಿನ ದಿನಗಳ ಬಿರುಸಿನ ಗತಿಯ ಹಾಡುಗಳ ಬಗ್ಗೆ ಕೂಡ, ಕಾಲದ ಬದಲಾವಣೆ ಜೊತೆ ಸಂಗೀತ ಬದಲಾಗುವುದರಲ್ಲಿ ತಪ್ಪೇನಿದೆ ಎಂಬ ವಿಶಾಲ ಮನೋಭಾವನೆ ಅವರಲ್ಲಿದೆ. ಅವರ ಸೊಸೆ ಸಂಧ್ಯಾ ಅವರು ಚಲನಚಿತ್ರರಂಗದ ಪ್ರಮುಖ ಗಾಯಕಿಯಾಗಿದ್ದಾರೆ.
ಕುಟುಂಬ
ಬದಲಾಯಿಸಿಪಿ. ಸುಶೀಲ ಅವರ ಒಬ್ಬನೇ ಮಗನ ಹೆಸರು ಜಯಕೃಷ್ಣ, ಸೊಸೆ ಸಂಧ್ಯಾ ಸಂಗೀತ ಪ್ರೇಮಿ ಮತ್ತು ಸ್ವತಃ ಹಿನ್ನೆಲೆ ಗಾಯಕಿ.
ಮಾಧುರ್ಯಕ್ಕೆ ಸುಶೀಲಾ
ಬದಲಾಯಿಸಿ- ಭಾರತೀಯ ಚಿತ್ರರಂಗ ಹಲವು ಅಪ್ರತಿಮ ಗಾಯಕಿಯರನ್ನು ಕಂಡಿದೆ. ಆದರೆ, ಮಾಧುರ್ಯದ ವಿಷಯಕ್ಕೆ ಬಂದರೆ ಹೆಚ್ಚು ಆಪ್ತವಾಗುವ ಹೆಸರು ಸುಶೀಲಾ. ಅವರು ಹಾಡಲು ಶುರು ಮಾಡಿದ ಸಂದರ್ಭದಲ್ಲಿ ಚಿತ್ರರಂಗದಲ್ಲಿದ್ದ ಪೈಪೋಟಿ ಅಷ್ಟಿಷ್ಟಲ್ಲ. ಸೂಲಮಂಗಲಂ ರಾಜಲಕ್ಷ್ಮಿ, ಪಿ. ಲೀಲಾ, ಎಂ.ಎಲ್.ವಸಂತಕುಮಾರಿ, ಎ.ಪಿ.ಕೋಮಲ, ಆರ್.ಬಾಲಸರಸ್ವತಿ, ಜಿಕ್ಕಿ ಅವರಂಥ ಘಟಾನುಘಟಿಗಳ ನಡುವೆ ರಂಗಪ್ರವೇಶಿಸಿದ ಸುಶೀಲಾ, ಕೆಲವು ವರ್ಷಗಳಲ್ಲೇ ಎಲ್ಲರನ್ನೂ ಮೀರಿ ಬೆಳೆದರು.ವಿವಿಧ ಭಾಷೆಗಳಲ್ಲಿ ಹಾಡುವ ಮೂಲಕ ‘ದಕ್ಷಿಣ ಭಾರತದ ಕೋಗಿಲೆ’ ಎನ್ನಿಸಿಕೊಂಡ ಅಗ್ಗಳಿಕೆ ಅವರದು.
- ಪ್ರಸ್ತುತ, ಹನ್ನೆರಡು ಭಾಷೆಗಳಲ್ಲಿ ಪಿ.ಸುಶೀಲಾ ಅವರು ಹಾಡಿರುವ 17,695 ಗೀತೆಗಳ ಸಾಧನೆಯನ್ನು ಗಿನ್ನೆಸ್ ದಾಖಲೆ ಪುಸ್ತಕ ಗೌರವಿಸಿದೆ.ಗಿನ್ನೆಸ್ ದಾಖಲೆಯಲ್ಲಿ ಸುಶೀಲಾ ಅವರ 1960ರ ನಂತರದ ಹಾಡುಗಳನ್ನಷ್ಟೇ ಪರಿಗಣಿಸಲಾಗಿದೆ. ಕನ್ನಡದಲ್ಲಿ ಸುಮಾರು 5 ಸಾವಿರ ಗೀತೆಗಳನ್ನು ಸುಶೀಲಾ ಹಾಡಿದ್ದಾರೆ. ಚಲನಚಿತ್ರ ಸಂಗೀತದಲ್ಲಿ ಏನೆಲ್ಲ ಪ್ರಯೋಗಗಳು ನಡೆದೂ ಕೊನೆಗೆ ಮಾಧುರ್ಯವೇ ಮುನ್ನೆಲೆಗೆ ಸಲ್ಲುವುದು ಮತ್ತೆ ಮತ್ತೆ ಸಾಬೀತಾಗಿದೆ. ಈ ಸಂದರ್ಭದಲ್ಲಿ, ಸುಶೀಲಾ ಅವರ ಗೀತೆಗಳು ‘ಮಾಧುರ್ಯದ ಮಾದರಿ’ಗಳಂತೆ ಕೇಳುಗರ ಮನಸ್ಸುಗಳನ್ನು ಪ್ರಸನ್ನಗೊಳಿಸುತ್ತ ಚಿರಸ್ಥಾಯಿಯಾಗಿದೆ.[೧]
ಪ್ರಶಸ್ತಿ ಗೌರವಗಳು
ಬದಲಾಯಿಸಿಪಿ. ಸುಶೀಲ ಅವರಿಗೆ ಐದು ರಾಷ್ಟ್ರ ಪ್ರಶಸ್ತಿಗಳೂ ಸೇರಿದಂತೆ ಭಾರತ ಸರಕಾರದ ಉನ್ನತ ನಾಗರೀಕ ಗೌರವ "ಪದ್ಮಭೂಷಣ" ಗೌರವ ಸಂದಿದೆ.. ಪಿ.ಸುಶೀಲ ಅವರಿಗೆ ದೊರೆತ ಗೌರವಗಳು ಇಂತಿವೆ:
- ಪದ್ಮಭೂಷಣ ೨೦೦೮
ರಾಷ್ಟ್ರ ಪ್ರಶಸ್ತಿಗಳು ಒಟ್ಟು ೫
- ೧೯೬೯ರಲ್ಲಿ ತಮಿಳು ಭಾಷೆಯ "ಉಯಿರೆಂತ ಮಾನಿದನ್" ಚಿತ್ರದ "ಪಾಲ್ ಪಾಲುವೆ ವಾನ್ ಮೀ೦ದಿಲೇ" ಹಾಡಿಗಾಗಿ
- ೧೯೭೧ರಲ್ಲಿ ತಮಿಳು ಭಾಷೆಯ "ಸವಾಲೆ ಸಮಾಲಿ"ಚಿತ್ರದ "ಚತುಕ್ ಕುರುವೇ ಕಿನ್ನ ಕುತ್ತುಪ್ಪಾಡು" ಹಾಡಿಗಾಗಿ
- ೧೯೭೮ರಲ್ಲಿ ತೆಲುಗು ಭಾಷೆಯ "ಸಿರಿಸಿರಿ ಮುವ್ವ"ಚಿತ್ರದ "ಜಮಾಂದಿ ನಾದಂ ಸಾಯಂದಿ ಪಾದಂ"ಹಾಡಿಗಾಗಿ
- ೧೯೮೨ರಲ್ಲಿ ತೆಲುಗು ಭಾಷೆಯ "ಮೇಘ ಸಂದೇಶಂ" ಚಿತ್ರದ "ಪ್ರಿಯೆ ಚಾರು ಸೀಲೆ ಎಂಥ ಪ್ರೀತೊಂವದೆ" ಹಾಡಿಗಾಗಿ
- ೧೯೮೩ರಲ್ಲಿ ತೆಲುಗು ಭಾಷೆಯ "ಎಂ.ಎಲ್.ಎ. ಏಡುಕೊಂಡಲು"ಚಿತ್ರದ "ಗೋಪಾಲುಡು ವೇಣುಗೋಪಾಲುಡು"ಹಾಡಿಗಾಗಿ
ರಾಜ್ಯ ಪ್ರಶಸ್ತಿಗಳು
- ತಮಿಳುನಾಡು --೧೯೬೯.೧೯೭೫.೧೯೭೯.೧೯೮೯.
- ಆಂದ್ರಪ್ರದೇಶ-- ೧೯೭೭.೧೯೭೮.೧೯೮೨.೧೯೮೪.೧೯೮೭.೧೯೮೯.
- ಕೇರಳ ---೧೯೭೧.೧೯೭೫.೧೯೭೯.೧೯೮೫.
- ಮಹಾರಾಷ್ಟ್ರ—೧೯೮೪.೧೯೮೮.
ಜೀವಮಾನದ ಸಾಧನೆಗಾಗಿ
- ತಮಿಳುನಾಡು ಸರಕಾರ -ಭಾರತಿ ದರ್ಶನ ಪ್ರಶಸ್ತಿ.(1988) ಕಲೈಮಾಣಿ(1991)
- ಆಂದ್ರಪ್ರದೇಶ ಸರಕಾರ -ರಘುಪತಿ ವಾಂಗಯ್ಯಪ್ರಶಸ್ತಿ.(೨೦೦೪)
- ಕೇರಳ ಸರಕಾರ --ಕಮುಕರ ಪ್ರಶಸ್ತಿ(೨೦೦೩)
- ಮಹಾರಾಷ್ಟ್ರ ಸರಕಾರ --ಶಿವಾಜಿ ಪ್ರಶಸ್ತಿ (೨೦೦೩)
- ಕರ್ನಾಟಕ ಜನತೆ - 'ಗಾನ ಸರಸ್ವತಿ' ಬಿರುದು (೨೦೦೪)
ಇತರ ಗೌರವಗಳು ಫಿಲಂಫೇರ್ ಲೈಫ್ ಟೈಮ್ ಅವಾರ್ಡ್ ೨೦೦೬,ಸಂಗೀತ ಕಲಾ ಭಾರತಿ ಲೈಫ್ ಟೈಮ್ ಅವಾರ್ಡ್ ೧೯೭೯,ಅಂತರರಾಷ್ಟ್ರೀಯ ಚಿತ್ರೋತ್ಸವ(JAAFA) ಲೈಫ್ ಟೈಮ್ ಅವಾರ್ಡ್ ೧೯೯೩,ಎ.ವಿ.ಎಂ. ಅವಾರ್ಡ್ ೧೯೯೭, ಭಾರತ್ ಕಲಾಚಾರ್ ೨೦೦೧.ಇನೂರ ಐವತ್ತಕ್ಕೂ ಮಿಕ್ಕಿ ಸನ್ಮಾನಕ್ಕೆ ಪಾತ್ರರಾಗಿದ್ದಾರೆ.
ಆಕರಗಳು
ಬದಲಾಯಿಸಿಕನ್ನಡ ಚಿತ್ರರಂಗದ ಹಿನ್ನೆಲೆ ಗಾಯಕಿಯರು
ತ್ರಿಪುರಾಂಬ | ಕಮಲಾ ಬಾಯಿ | ಎಸ್.ಡಿ.ಸುಬ್ಬುಲಕ್ಷ್ಮಿ | ಲಕ್ಷ್ಮಿ ಬಾಯಿ | ಎಂ.ವಿ.ರಾಜಮ್ಮ | ಅಮೀರ್‍ಬಾಯಿ ಕರ್ನಾಟಕಿ | ಬಿ.ಜಯಮ್ಮ | ಪಿ. ಲೀಲಾ | ಪಿ.ಸುಶೀಲ | ಎಸ್.ಜಾನಕಿ | ಪ್ರಿಯದರ್ಶಿನಿ | ಎಲ್.ಆರ್. ಈಶ್ವರಿ | ಬಿ.ಕೆ.ಸುಮಿತ್ರಾ | ವಾಣಿ ಜಯರಾಂ | ಕಸ್ತೂರಿ ಶಂಕರ್ | ಬೆಂಗಳೂರು ಲತಾ | ಸುಲೋಚನ | ಎಸ್.ಪಿ.ಶೈಲಜಾ | ಬಿ.ಆರ್. ಛಾಯಾ | ರತ್ನಮಾಲ ಪ್ರಕಾಶ್ | ಮಂಜುಳಾ ಗುರುರಾಜ್ | ಸುಜಾತ ದತ್ | ಕವಿತಾ ಕೃಷ್ಣಮೂರ್ತಿ | ಚಿತ್ರಾ | ಚಂದ್ರಿಕಾ ಗುರುರಾಜ್ | ಲತಾ ಹಂಸಲೇಖ | ಸೌಮ್ಯ ರಾವ್ | ಅನುರಾಧ ಶ್ರೀರಾಮ್ | ನಂದಿತಾ | ಪಲ್ಲವಿ ಎಂ.ಡಿ | ಶಮಿತಾ ಮಲ್ನಾಡ್ | ಚೈತ್ರ | ಸುಮಾ ಶಾಸ್ತ್ರಿ | ಸುಪ್ರಿಯ ಆಚಾರ್ಯ | ಭವತಾರಿಣಿ
ಉಲ್ಲೇಖ
ಬದಲಾಯಿಸಿ- 4/03/2016/ಪ್ರಜಾವಾಣಿ-
- ↑ "ಆರ್ಕೈವ್ ನಕಲು". Archived from the original on 2016-04-07. Retrieved 2016-04-04.