ಪಚ್ಮರ್ಹಿ
ಪಚ್ಮರ್ಹಿ (ಹಿಂದಿ:पचमड़ी) ಇಂಡಿಯಾ ದೇಶದ ನಡುಭಾಗದಲ್ಲಿರುವ ಮಧ್ಯಪ್ರದೇಶ ರಾಜ್ಯದ ನರ್ಮದಾಪುರಂ ಜಿಲ್ಲೆಯಲ್ಲಿರುವ ಒಂದು ಬೆಟ್ಟದಾಣ. ಬ್ರಿಟಿಷರ ಕಾಲದಿಂದಲೂ ಈ ತಾಣವು ಒಂದು ಸೇನಾನೆಲೆಯಾಗಿದೆ.[೧]
ಪಚ್ಮರ್ಹಿ
Pachmarhi | |
---|---|
town |
ನರ್ಮದಾಪುರಂ ಜಿಲ್ಲೆಯ ಬೆಟ್ಟಸಾಲಿನ ಕಣಿವೆಯಲ್ಲಿ ೧೦೬೭ಮೀ ಎತ್ತರದಲ್ಲಿರುವ ಪಚ್ಮಡಿಯು ಸತ್ಪುರ ಕಿ ರಾನಿ ("ಸತ್ಪುರದ ರಾಣಿ") ಎಂದೂ ಹೆಸರುವಾಸಿಯಾಗಿದೆ. ಮಧ್ಯಪ್ರದೇಶದ ಅತಿ ಎತ್ತರದ ಧೂಪ್‌ಗರ್ ಗಿರಿಶಿಖರವು (ಎತ್ತರ ೧೩೫೨ಮೀ) ಇದೇ ಬೆಟ್ಟಸಾಲಿನಲ್ಲಿದೆ. ಇದು ಸತ್ಪುರ ಜೀವವೈವಿಧ್ಯಗಳ ಕಾಪುದಾಣವೂ ಹೌದು. ಅಲ್ಲದೆ ಸತ್ಪುರ ನ್ಯಾಷನಲ್ ಪಾರ್ಕ್, ಸತ್ಪುರ ಹುಲಿ ಕಾಪುದಾಣ ಹಾಗೂ ಶಿವ ಮತ್ತು ಪಾಂಡವರ ಕಾರಣದಿಂದಲೂ ಹೆಸರುವಾಸಿಯಾಗಿದೆ.
ಇತಿಹಾಸ
ಬದಲಾಯಿಸಿಬಹುಶಃ ಹಿಂದೀ ನುಡಿಯ ”ಪಂಚ್” (ಐದು) ಮತ್ತು ”ಮಡಿ” (ಗುಹೆ)ಯ ರೂಪವೇ ಪಚ್ಮಡಿ ಎನಿಸುತ್ತದೆ. ಜಾನಪದ ನಂಬುಗೆಯ ಪ್ರಕಾದ ಮಹಾಭಾರತದ ಪಾಂಡವರು ವನವಾಸದಲ್ಲಿದ್ದಾಗ ಇಲ್ಲಿನ ಐದು ಗುಹೆಗಳನ್ನು ಕಟ್ಟಿದರಂತೆ. ಸುಮಾರು ಹದಿನೆಂಟನೇ ಶತಮಾನದಲ್ಲಿ ಮಹಾರಾಜ ರಘುಜೀ ಭೋಂಸ್ಲೆ-೧ ಆಳ್ವಿಕೆಯೊಂದಿಗೆ ಪಚ್ಮಡಿಯು ಮರಾಠರ ಕೈಕೆಳಗೆ ಬಂದಿತಾದರೂ ಬ್ರಿಟಿಷರ ಕೈವಶವಾಗುವ ಮೊದಲು ಈ ಪ್ರದೇಶವನ್ನು ಸ್ಥಳೀಯ ಗೊಂಡ ರಾಜ ಭಗವತ್ ಸಿಂಗನು ಆಳುತ್ತಿದ್ದ. ಆಗಿನ್ನೂ ಪಚ್ಮಡಿ ಒಂದು ಸಣ್ಣ ಗ್ರಾಮವಾಗಿತ್ತು. ೧೮೫೭ರಲ್ಲಿ ಬ್ರಿಟಿಷ್ ಸೇನೆಯ ಕ್ಯಾಪ್ಟನ್ ಜೇಮ್ಸ್ ಫೋರ್ಸಿತ್, ಸುಭೇದಾರ್ ನಾಥೂರಾಮ್‌ಜಿ ಪವಾರ್ ಜೊತೆಗೂಡಿ ತನ್ನ ತುಕಡಿಯನ್ನು ಜಾನ್ಸಿಯತ್ತ ಮುನ್ನಡೆಸುತ್ತಿದ್ದಾಗ ಈ ಪಚ್ಮಡಿ ಪ್ರಸ್ಥಭೂಮಿಯನ್ನು ಪತ್ತೆಹಚ್ಚಿದ. ಕೆಲವೇ ದಿನಗಳಲ್ಲಿ ಪಚ್ಮಡಿಯು ಬೆಟ್ಟದಾಣವಾಯಿತು ಹಾಗೂ ಬ್ರಿಟಿಷ್ ಸೇನೆಯ ಸೋಂಕುರೋಗ ಆಸ್ಪತ್ರೆ ಇಲ್ಲಿ ತಲೆಯೆತ್ತಿತು. ಮದ್ದುಗುಂಡು ಕೋಠಿಯ ಮೇಲ್ವಿಚಾರಣೆಯನ್ನು ನಾಥೂರಾಮ್‌ಜಿ ಪವಾರನಿಗೆ ಒಪ್ಪಿಸಲಾಯಿತು.[೨]. ೧೯೦೧ರಲ್ಲಿ ಇಲ್ಲಿನ ಜನಸಂಖ್ಯೆ ೩೦೨೦ ಇತ್ತಾದರೂ ಬೇಸಿಗೆ ಕಾಲದಲ್ಲಿ ಅದು ದುಪ್ಪಟ್ಟಾಗುತ್ತಿತ್ತು. ಪಚ್ಮಡಿಯು ಆ ಭಾಗದ ಬೇಸಿಗೆ ರಾಜಧಾನಿಯಾಗಿಯೂ ಕೆಲಸ ನಿರ್ವಹಿಸಿತ್ತು. ಪಚ್ಮಡಿ ಅರಣ್ಯವು ಹಲವು ವೈವಿಧ್ಯಮಯ ಸಸ್ಯಗಳಿಗೂ ನೆಲೆಯಾಗಿದೆ, ಆದ್ದರಿಂದ ೨೦೦೯ರ ಮೇ ತಿಂಗಳಿಂದೀಚೆಗೆ ಇದನ್ನು ಜೀವವೈವಿಧ್ಯ ಕಾಪುಗಾಡು ಎಂದು ಯುನೆಸ್ಕೊ ಘೋಷಿಸಿದೆ.
ಸುಮಾರು ೪೯೮೧.೭೨ km2 ಹರಡಿರುವ ಪಚ್ಮಡಿ ಜೀವವೈವಿಧ್ಯ ಕಾಪುಗಾಡು ೨೨° ೧೧’ ಮತ್ತು ೨೨° ೫೦’ ಉತ್ತರ ರೇಖಾಂಶ ಹಾಗೂ ೭೭° ೪೭’ ಮತ್ತು ೭೮° ೫೨’ ಪೂರ್ವ ಅಕ್ಷಾಂಶದಲ್ಲಿದೆ. ಈ ಪ್ರದೇಶವು ಮೂರು ಜಿಲ್ಲೆಗಳಲ್ಲಿ ಹರಡಿದೆ. ಅವು ನರ್ಮದಾಪುರಂ (೫೯.೫೫%), ಚಿಂದ್ವಾರ (೨೯.೧೯%) ಮತ್ತು ಬೇತುಲ್ (೧೧.೨೬%). ಇದರೊಳಗೆ ಮೂರು ಕಾಪುಗಾಡುಗಳಿದ್ದು ಬೋರಿ ಕಾಪುಗಾಡು (೪೮೫.೭೨ km2), ಸತ್ಪುರ ರಾಷ್ಟ್ರೀಯ ಅರಣ್ಯ (೫೨೪.೩೭ km2) ಹಾಗೂ ಪಚ್ಮಡಿ ಕಾಪುಗಾಡು (೪೯೧.೬೩ km2).[೩][೪]
ಪಟ್ಟಣ
ಬದಲಾಯಿಸಿಇದೇನೂ ಅಷ್ಟು ದೊಡ್ಡದಾದ ಪಟ್ಟಣವಲ್ಲ, ಇದರ ಬಹುತೇಕ ಜಾಗವು ಪಚ್ಮಡಿ ದಂಡುಪ್ರದೇಶ ಮಂಡಲಿಯ ಅಧೀನದಲ್ಲಿದೆ. ಇದು ಸೇನಾ ಶಿಕ್ಷಣಪಡೆಯ ಕೇಂದ್ರವೆನಿಸಿದೆ. ೨೦೧೧ರ ಜನಗಣತಿಯ ಪ್ರಕಾರ ಪಚ್ಮಡಿಯ ಜನಸಂಖ್ಯೆ ಸುಮಾರು ೧೨,೦೬೨, ಇದರಲ್ಲಿ ಹೆಚ್ಚಿನವರು ಭೂಸೇನೆ, ಪ್ರವಾಸೋದ್ಯಮ ಮತ್ತು ಅರಣ್ಯ ಇಲಾಖೆಗಳ ಸಿಬ್ಬಂದಿಯಾಗಿದ್ದಾರೆ.
ಧೂಪ್‌ಗರ್ ದಾರಿಯಲ್ಲಿ ಒಂದು ವಿಮಾನನಿಲ್ದಾಣವೂ ಇದೆ. ಯಾವಾಗಲೋ ಒಮ್ಮೆ ಬಳಸುವುದರಿಂದ ಇದರ ಓಡುಹಾದಿಯ ಮೇಲೆಲ್ಲ ಹುಲ್ಲು ಬೆಳೆದಿದೆ. ಆಗಿಂದಾಗ್ಗೆ ಹುಲಿ ಮತ್ತು ಕಾಡೆಮ್ಮೆಗಳು ಕಾಣಸಿಗುತ್ತವೆ. ಹೆಲಿಕಾಪ್ಟರ್ ಇಳಿದಾಣವೂ ಇಲ್ಲಿದೆ. ದಂಡುಪ್ರದೇಶದ ಅಂಚಿನಲ್ಲಿ ಚಿರತೆಗಳು ಸರ್ವೇಸಾಮಾನ್ಯವಾಗಿ ಕಂಡುಬರುತ್ತವೆ.
ಹವಾಗುಣ
ಬದಲಾಯಿಸಿಇಲ್ಲಿನ ಹವಾಗುಣ ಹಿತವಾಗಿದೆ, ಬೆಚ್ಚನೆಯ ತಾಪವು ಕ್ರಮೇಣ ತಂಪಾಗುತ್ತಾ ಹೋಗುತ್ತದೆ, ಮಳೆಗಾಲಕ್ಕಿಂತಲೂ ಬೇಸಿಗೆಯಲ್ಲೇ ಮಳೆ ಹೆಚ್ಚು, ಸರಾಸರಿ ೨೦೧೨ ಮಿ.ಮೀ. ಮಳೆಯಾಗುತ್ತದೆ. ಈ ಪ್ರದೇಶವನ್ನು ಕಪ್ಪೆನ್ ಮತ್ತು ಜಿಗರ್ ಅವರು ಸಿಡಬ್ಲ್ಯುಎ ಎಂದು ವರ್ಗೀಕರಿಸಿದ್ದಾರೆ. ಇಲ್ಲಿನ ಸರಾಸರಿ ತಾಪಮಾನ ೨೧.೭° ಸೆಲ್ಸಿಯಸ್. ಅತಿಹೆಚ್ಚು ಬಿಸಿಲು (ಸರಾಸರಿ ೩೦.೩° ಸೆಲ್ಸಿಯಸ್) ಮೇ ತಿಂಗಳಲ್ಲಿರುತ್ತದೆ, ಅದೇ ರೀತಿ ಅತಿಹೆಚ್ಚು ಚಳಿ (ಸರಾಸರಿ ೧೫.೫° ಸೆಲ್ಸಿಯಸ್) ಮೇ ತಿಂಗಳಲ್ಲಿರುತ್ತದೆ,[೫]
ಪಚ್ಮಡಿದ ಹವಾಮಾನ ದತ್ತಾಂಶ | |||||||||||||
---|---|---|---|---|---|---|---|---|---|---|---|---|---|
ತಿಂಗಳು | ಜ | ಫೆ | ಮಾ | ಏ | ಮೇ | ಜೂ | ಜು | ಆ | ಸೆ | ಆಕ್ಟೋ | ನ | ಡಿ | ವರ್ಷ |
Source: Climate data[೫][೬] |
ಪ್ರವಾಸೋದ್ಯಮ
ಬದಲಾಯಿಸಿಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ.(May 2017) |
ಪಚ್ಮಡಿಯು ಒಂದು ಪ್ರವಾಸತಾಣವಾಗಿದ್ದು ವರ್ಷವಿಡೀ ಪ್ರವಾಸಿಗರನ್ನು ಸೆಳೆಯುತ್ತದೆ. ಇಲ್ಲಿ ಬೇಕಾದಷ್ಟು ಹೋಟೆಲುಗಳಿದ್ದು, ಅವುಗಳಲ್ಲಿ ಬಹುತೇಕ ಮಾರುಕಟ್ಟೆಯ ಸುತ್ತಮುತ್ತ ಇವೆ. ಕೆಲವೇ ಹೋಟೆಲುಗಳು, ತಂಗುದಾಣಗಳು, ವಸತಿಕೇಂದ್ರಗಳು, ಮತ್ತು ಮಧ್ಯಪ್ರದೇಶ ಪ್ರವಾಸೋದ್ಯಮ ಹೋಟೆಲುಗಳು ಬಸ್ ನಿಲ್ದಾಣದಿಂದ ಎರಡುಮೂರು ಕಿಲೋಮೀಟರು ದೂರದಲ್ಲಿ ಪಚ್ಮಡಿ ಪ್ರದೇಶದಲ್ಲಿವೆ.[೭]
ಪಚ್ಮಡಿ ಅರಣ್ಯಗಳಲ್ಲಿ ಎಷ್ಟೋ ಗುಹಾಂತರ ಚಿತ್ತಾರಗಳನ್ನು ನೋಡಬಹುದು. ಅವುಗಳಲ್ಲಿ ಕೆಲವಂತೂ ೧೦,೦೦೦ ವರ್ಷಗಳಿಗೂ ಹಿಂದಿನವು.[೮] ಪಾಂಡವರ ಗುಹೆಯ ಕೆಳಗಿನ ತೋಟವನ್ನು ಚಿತ್ರದಲ್ಲಿ ತೋರಿಸಲಾಗಿದೆ. ಈ ಗುಹೆಗಳು ಬೌದ್ಧಶೈಲಿಯಲ್ಲಿದ್ದರೂ ಅದೇಕೋ ಪಾಂಡವರದೆನ್ನುತ್ತಾರೆ. ಈ ಪ್ರದೇಶದಲ್ಲಿ ಅಪಾರ ತೇಗ ಸಂಪತ್ತಿದ್ದರೂ ಇದು ಕಾಪುಗಾಡು ಆಗಿರುವುದರಿಂದ ಮರಗಳ ಕಟಾವು ಮತ್ತು ಯಾವುದೇ ನಿರ್ಮಾಣಕ್ಕೆ ಆಸ್ಪದವಿಲ್ಲ. ಪಚ್ಮಡಿಯು ವೈವಿಧ್ಯಮಯ ಮತ್ತು ಅಪರೂಪದ ಸಸ್ಯಸಂಪತ್ತಿನ ಆಗರವಾಗಿರುವುದರಿಂದ ಪಟ್ಟಣದಿಂದ ಹೊರಗೆ ಯಾವುದೇ ಹೊಸ ನಿರ್ಮಾಣಕ್ಕೆ ರಾಜ್ಯ ಮತ್ತು ಒಕ್ಕೂಟ ಸರ್ಕಾರಗಳ ಅನುಮತಿ ಬೇಕಾಗುತ್ತದೆ.
ನೋಡಲೇಬೇಕಾದ ಇತರ ತಾಣಗಳು:
- ರಜತ್ ಪ್ರಪಾತ (ದೊಡ್ಡ ನೀರ್ಬೀಳು)
- ದುಂಬಿ ನೀರ್ಬೀಳು
- ದೊಡ್ಡ ಮಹಾದೇವ
- ಗುಪ್ತ ಮಹಾದೇವ
- ಚೌರಾಗರ್ (ಮಹಾಶಿವರಾತ್ರಿಯಂದು ದೊಡ್ಡ ಜಾತ್ರೆ ಸೇರುತ್ತದೆ)
- ಧೂಪ್‌ಗರ್ (ಮಧ್ಯಪ್ರದೇಶದ ಎತ್ತರದ ಶಿಖರ)
- ಹಂದೀ ಕೋಹ್ (ಆಳಕಣಿವೆ)
- ಅಪ್ಸರಾ ನೀರ್ಬೀಳು (ಕಿನ್ನರ ಕೊಳ)
- ಜಟಾಶಂಕರ (ಗವಿಯ ಚಾವಣಿಯಿಂದಿಳಿದ ಮಂಜಿನ ದಾರಗಳು)
- ದೊರೆಸಾನಿಯ ನೀರ್ಬೀಳು
- ಪಚ್ಮಡಿ ಬೆಟ್ಟ (ಇಡೀ ಪಚ್ಮಡಿ ಪಟ್ಟಣವನ್ನು ನೋಡಬಹುದು)
- ಪಾನ್ಸೀ ಕೊಳ
- ತೊರೆಗಳ ಸಂಗಮ
- ಪಿಕಾಡಿಲ್ಲಿ ಚೌಕ
- ಕಲ್ಲುಮಂಟಪ
- ಸಿಡಿಬಂಡೆ ಚಾಚುಗಲ್ಲು
- ರಾಬರ್ಟ್ಸನ್ ದೊರೆಸಾನಿಯ ನೋಟದಾಣ
- ಕೊಲೆಟಿನ್ ಚಾಚುಗಲ್ಲು
- ರೋಜಾಬೆಟ್ಟ
- ರೀಚಗರ್
- ರಾಜೇಂದ್ರಗಿರಿ (ನಿಸರ್ಗನಿರ್ಮಿತ ಹೂಬನ)
- ಬನಶ್ರೀ ವಿಹಾರ
- ಕಿರು ನೀರ್ಬೀಳು
- ನಾಗದ್ವಾರಿ
- ದ್ರೌಪದಿಕುಂಡ
- ಟ್ವೈನ್‌ಹ್ಯಾಮ್ ಕೊಳ
- ಚೋಟಾ ಮಹಾದೇವ
- ನಂದಿಗಾಡು
ಪಚ್ಮಡಿಯು ಸೊಬಗಿನ ತಾಣವಾಗಿದ್ದು ಕೆರೆಯ ಮೇಲಿನ ದೋಣಿಯಾಟ, ಬಾನಲ್ಲಿ ತೇಲುವುದು, ಹಸಿರು, ನೀರ್ಬೀಳು, ಒರತೆಗಳು, ನೋಟಗಳು ಮತ್ತು ಕಾಡುಪ್ರಾಣಿಗಳು ಮನಸೆಳೆಯುತ್ತವೆ. ಇಲ್ಲಿನ ರಾಷ್ಟ್ರೀಯ ಸಾಹಸ ಸಂಸ್ಥೆಯು ತರಹೇವಾರಿ ಸಾಹಸ ಶಿಬಿರಗಳನ್ನು ಆಯೋಜಿಸುತ್ತದೆ. ಸ್ಕೌಟ್ ಮತ್ತು ಗೈಡುಗಳ ಶಿಬಿರಗಳೂ ನಡೆಯುತ್ತವೆ.
ಕಾಡುಪ್ರಾಣಿಗಳು
ಬದಲಾಯಿಸಿಸತ್ಪುರ ಹುಲಿ ಕಾಪುಗಾಡಿನಲ್ಲಿ ಹುಲಿ, ಚಿರತೆ, ಕಾಡುಹಂದಿ, ಕಾಡುಗೂಳಿ, ಚುಕ್ಕೆಜಿಂಕೆ, ಬೊಗಳುವ ಜಿಂಕೆ, ಕಡವೆ ಹಾಗೂ ಗಿಡ್ಡಬಾಲದ ಕೋತಿಗಳನ್ನು ನೋಡಬಹುದು. ಇವಲ್ಲದೆ ಪಚ್ಮಡಿಯಲ್ಲಿ ಮಾತ್ರವೇ ಕಾಣಸಿಗುವ ಚಿಂಕಾರ, ನೀಲಗಾಯ್, ಕಾಡುನಾಯಿ, ತೋಳ, ಕಾಡೆಮ್ಮೆ, ಗಡವ ಅಳಿಲು ಮತ್ತು ಹಾರುವ ಅಳಿಲು ಮುಂತಾದ ಪ್ರಾಣಿಗಳನ್ನೂ ನೋಡಬಹುದು.
ಹಣ್ಣುಹಂಪಲು
ಬದಲಾಯಿಸಿಪಚ್ಮಡಿ ಅರಣ್ಯದ ಬೇಸಿಗೆಯ ದಿನಗಳಲ್ಲಿ ಹಲವಾರು ಹಣ್ಣುಗಳನ್ನು ಕಾಣಬಹುದು. ಅವು ಮಾವು, ನೇರಳೆ, ಸೀತಾಫಲ ಅಲ್ಲದೆ ಇಲ್ಲಿ ಮಾತ್ರವೇ ದೊರೆಯುವ ಕಟುವಾ, ಟೆಂಡು, ಚುನ್ನ, ಕಿನ್ನಿ ಮತ್ತು ಚಾರ್ ಎಂಬ ರುಚಿಕರ ಹಣ್ಣುಗಳನ್ನೂ ಕಾಣಬಹುದು. ಮರಗಳಲ್ಲಿ ಓಕ್ ಮತ್ತು ಸೂಜಿಯೆಲೆ ಮರಗಳೂ ಬಹುಸಂಖ್ಯೆಯಲ್ಲಿವೆ. ಅಲ್ಲದೆ ಅನೇಕ ಮದ್ದಿನ ಗಿಡ ಮತ್ತು ಬಳ್ಳಿಗಳೂ ಇಲ್ಲಿ ಬೆಳೆಯುತ್ತವೆ.
ಧೂಪ್‌ಗರ್
ಬದಲಾಯಿಸಿಧೂಪ್ಗರ್ವು ಸತ್ಪುರ ಬೆಟ್ಟಸಾಲಿನ ಅತಿ ಎತ್ತರದ ಗಿರಿಶಿಖರ (೧,೩೫೨ಮೀ.). ಇದರ ಮೇಲಿನಿಂದ ಸೂರ್ಯೋದಯ ಸೂರ್ಯಾಸ್ತಗಳನ್ನು ವೀಕ್ಷಿಸುವುದೇ ಅತ್ಯಂತ ಆಕರ್ಷಣೀಯ. ಅಲ್ಲದೆ ಕಣಿವೆಗಳ ಮೇಲ ಹಬ್ಬಿರುವ ಹಸಿರರಾಶಿಯನ್ನು ನೋಡುವುದೂ ಕಣ್ಣಿಗೆ ತಂಪು. ಶಿಖರವನ್ನು ತಲಪಲು ರಸ್ತೆಯಿದೆ, ಕಾಲ್ನಡೆಯಲ್ಲೂ ಸಾಗಬಹುದು.
ಚೌರಾಗರ್
ಬದಲಾಯಿಸಿಚೌರಾಗರ್ ಶಿಖರವು ಸತ್ಪುರ ಬೆಟ್ಟಸಾಲಿನ ಮೂರನೇ ಎತ್ತರದ ಗಿರಿಶಿಖರ. ಇಲ್ಲಿ ಶಿವನ ಗುಡಿಯಿದ್ದು ಭಕ್ತರನ್ನು ಸೆಳೆಯುತ್ತದೆ. ಸಂಗ್ರಾಮ್ ಶಾಹನು ಕಟ್ಟಿಸಿದ ಚೌರಾಗರ್ ಕೋಟೆ ಇಲ್ಲಿದೆ. Gond dynasty. ನಾಗಪುರದ ಜಾನೋಜಿ ಮಹಾರಾಜ-೧ ಹಮ್ಮಿಕೊಂಡ ನಾಗಪುರ ಚೌರಾಗರ್ ತೀರ್ಥಯಾತ್ರೆಯು ಇಂದಿಗೂ ನಿರಂತರವಾಗಿ ನಡೆಯುತ್ತಿದೆ. ನಾಗಪಂಚಮಿ ಮತ್ತು ಶಿವರಾತ್ರಿಯಂದು ಭಕ್ತಾದಿಗಳು ಅಪಾರ ಸಂಖ್ಯೆಯಲ್ಲಿ ಸೇರಿ ಗುಡಿಯ ಮುಂದೆ ಮತ್ತು ದಾರಿಯಲ್ಲಿ ತ್ರಿಶೂಲಗಳನ್ನು ಇಟ್ಟುಹೋಗುತ್ತಾರೆ. ಕೆಲವೊಮ್ಮೆ ಅವುಗಳ ಸಂಖ್ಯೆ ಎರಡು ಲಕ್ಷ ಆಗಿದ್ದೂ ಉಂಟು.
ದುಂಬಿ ಬೆಟ್ಟ ಮತ್ತು ದುಂಬಿ ನೀರ್ಬೀಳು
ಬದಲಾಯಿಸಿದೂರದಿಂದ ನೋಡುವಾಗ ಈ ನೀರ್ಬೀಳುವಿನಿಂದ ದುಂಬಿ ಹಾಡುವ ಶಬ್ಬದ ಕೇಳಿಬರುತ್ತದೆ. ಅಲ್ಲದೆ ಈ ಸ್ಥಳವು ಜೇನುಹುಳುಗಳ ತಾಣವೂ ಆಗಿದೆ.
ದೊರೆಸಾನಿಯ ನೀರ್ಬೀಳು
ಬದಲಾಯಿಸಿಈ ನೀರ್ಬೀಳು ನಿಲುಕಲಾಗದಷ್ಟು ದೂರದಲ್ಲಿದೆ. ನೀರ್ಬೀಳು ತಟದಲ್ಲಿನ ಕೊಳದಲ್ಲಿ ಶುಶ್ರೂಷಕ ಮೀನುಗಳಿವೆ. ಈ ನೀರ್ಬೀಳುವಿಗೆ ಹೋಗುವ ರಸ್ತೆ ಅತ್ಯಂತ ಅಂಕುಡೊಂಕಾಗಿದ್ದು ತೀರಾ ಇಳಿಜಾರುಗಳಿಂದ ಕೂಡಿದೆ. ಹತ್ತಿರದ ಚಾರಣದಾರಿಯೂ ಇದೆ ೧ km.
ಪನಾರ್ ಪಾನಿ
ಬದಲಾಯಿಸಿಪನಾರ್ ಪಾನಿಯು ಅರಣ್ಯದ ನಡುವೆ ನೈಸರ್ಗಿಕವಾಗಿ ಉಂಟಾದ ಸಿಹಿನೀರಿನ ಸರೋವರ.
ಸಂಗಮ
ಬದಲಾಯಿಸಿಧೂಪ್ಗರ್ದಿಂದ ಹರಿದಬರುವ ಹಲವಾರು ಒರತೆಗಳು ಕೂಡುವ ತಾಣವಿದು. ಇಲ್ಲಿನ ನೀರು ಮಳೆಗಾಲ ಹೊರತುಪಡಿಸಿದರೆ ಇನ್ನೆಲ್ಲಾ ವೇಳೆಯಲ್ಲಿ ಸ್ಫಟಿಕಸ್ಪಷ್ಟವಾಗಿರುತ್ತದೆ.
ಜಟಾಶಂಕರ ಮತ್ತು ಮಹಾದೇವ ಗುಡಿಗಳು
ಬದಲಾಯಿಸಿಈ ಎಲ್ಲ ಗುಹೆಗಳ ಚಾವಣಿಯಲ್ಲಿ ಬೆಟ್ಟದ ನೀರು ತೊಟ್ಟಿಕ್ಕುತ್ತದೆ. ಮಳೆಗಾಲದಲ್ಲಿ ಶೇಖರವಾಗುವ ನೀರು ಸದಾಕಾಲ ಇಲ್ಲಿ ಜಿನುಗುವುದರಿಂದ ಒರತೆಗಳಲ್ಲಿ ಸದಾ ಕಾಲ ನೀರಿರುತ್ತದೆ. ಅಲ್ಲದೆ ಈ ಗುಹೆಗಳಲ್ಲಿ ಶಿವನ ಪೂಜೆ ನಡೆಯುತ್ತದೆ.
ಬೆಳ್ಳಿ ನೀರ್ಬೀಳು
ಬದಲಾಯಿಸಿರಜತಪ್ರಪಾತ ಅಥವಾ ದೊಡ್ಡ ನೀರ್ಬೀಳು ಎಂದೂ ಕರೆಯಲಾಗುವ ಇಲ್ಲಿ ನೀರು ೨೮೦೦ ಅಡಿಗಳ ಮೇಲಿನಿಂದ ಧುಮ್ಮಿಕ್ಕುತ್ತದೆ. ಹಾಗೆ ಬೀಳುವಾಗ ಬೆಳ್ಳಿಗೆರೆಯಂತೆ ತೋರುವುದರಿಂದ ಈ ಹೆಸರು ಬಂದಿದೆ.
ಅಪ್ಸರಾ ವಿಹಾರ್
ಬದಲಾಯಿಸಿಇದು ಬೆಟ್ಟದಿಂದ ಹರಿದುಬರುವ ಝರಿಯಾಗಿದ್ದು ನೀರ್ಬೀಳುವನ್ನೂ, ತಳದಲ್ಲಿ ಕೊಳವನ್ನೂ ಸೃಷ್ಟಿಸಿದೆ.
ಇತರ ಚಟುವಟಿಕೆಗಳು
ಬದಲಾಯಿಸಿಪ್ರತಿವರ್ಷ ಡಿಸೆಂಬರ್ ೨೫ ರಿಂದ ೩೧ರವರೆಗೆ ಮಧ್ಯಪ್ರದೇಶ ಸರ್ಕಾರವು ನಡೆಸುವ ಪಚ್ಮಡಿ ಉತ್ಸವದಲ್ಲಿ ತರಹೇವಾರಿ ಆಟೋಟಗಳು ನಡೆಯುತ್ತವೆ. ಕೊನೆಯ ದಿನ ಅಂದರೆ ಡಿಸೆಂಬರ್ ೩೧ರಂದು ಸ್ಥಳೀಯ ಸಂಘಟನೆಯಾದ “ಪಚ್ಮಡಿ ಪರ್ಯಟನ ಮಿತ್ರ”ದವರು ಕಾರ್ಯಕ್ರಮ ನಡೆಸಿಕೊಡುತ್ತಾರೆ.
ಚಲನಚಿತ್ರ ತಾಣಗಳು
ಬದಲಾಯಿಸಿ- ಮ್ಯಾಸ್ಸೇ ಸಾಹಿಬ್ (1985), ರಘುವೀರ ಯಾದವ್, ಬ್ಯಾರಿಜಾನ್, ಅರುಂಧತಿ ರಾಯ್
- ತಾರ್ಕಿಯೆಬ್ (2000), ನಾನಾ ಪಾಟೇಕರ್, ತಬು, ರಘುವೀರ ಯಾದವ್, ಶಿಲ್ಪಾ ಶೆಟ್ಟಿ, ಮಿಲಿಂದ್ ಸೋಮನ್
- ಅಶೋಕ (2001), ಶಾರುಕ್ ಖಾನ್, ಕರೀನಾ ಕಪೂರ್ ಖಾನ್
- ಚಕ್ರವ್ಯೂಹ್ (2012), ಅರ್ಜುನ್ ರಾಂಪಾಲ್, ಅಭಯ ದೇವಲ್, ಮನೋಜ್ ಬಾಜಪೈ, ಓಂಪುರಿ, ಈಶಾಗುಪ್ತಾ
- ತ್ರಿನೇತ್ರ (1991), ಮಿಥುನ್ ಚಕ್ರವರ್ತಿ, ಅಮರೀಶ್ ಪುರಿ
ತಲಪುವುದು ಹೇಗೆ
ಬದಲಾಯಿಸಿಪಚ್ಮಡಿಯನ್ನು ಬಲು ಸುಲಭವಾಗಿ ನರ್ಮದಾಪುರಂ, ಭೋಪಾಲ್, ಇಟಾರ್ಸಿ, ಚಿಂದ್ವಾರಾ, ಗಡವಾರಾ, ನರಸಿಂಗಪುರ, ಇಂದೋರ್ ಮತ್ತು ಜಬಲ್‌ಪುರ ಗಳಿಂದ ತಲಪಬಹುದು. ಭೋಪಾಲ್ ದಲ್ಲಿರುವ ರಾಣಿ ಕಮಲಪಾಟಿ ಐಎಸ್‌ಬಿಟಿ ಯಿಂದ ಇದು ಐದಾರು ಗಂಟೆಗಳ ಪ್ರಯಾಣ.ಇಂದೋರಿನಿಂದ ಭೋಪಾಲ್ ಮಾರ್ಗವಾಗಿ ಹತ್ತು ಹನ್ನೊಂದು ಗಂಟೆಗಳ ಪ್ರಯಾಣ. ರಾಜ್ಯ ಹೆದ್ದಾರಿ ೧೯, ನರ್ಮದಾಪುರಂ, ಚಿಂದ್ವಾರಾ, ಮಕಾನ್ ನಗರ್, ಸೊಹಾಗ್ ಪುರ, ಪಿಪಾಡಿಯಾ ಮೂಲಕ ಹಾದು ಹೋಗುತ್ತದೆ. ಮತ್ಕುಳಿಯಲ್ಲಿ ರಾಜ್ಯ ಹೆದ್ದಾರಿ ೧೯ಎ ಆಗಿ ಬದಲಾಗುವ ಈ ರಸ್ತೆಯು ರೈಲುಹಳಿಯನ್ನೂ ಸಂಪರ್ಕಿಸುತ್ತದೆ. ಮಧ್ಯಪ್ರದೇಶ ಪ್ರವಾಸೋದ್ಯಮ ನಿಗಮದ ಹವಾನಿಯಂತ್ರಿತ ಬಸ್ಸುಗಳು ಇಂದೋರ್, ಭೋಪಾಲ್ ಗಳಿಂದ ಸಂಚರಿಸುತ್ತವೆ.
ಇತರ ಸಾರಿಗೆ
ಬದಲಾಯಿಸಿಪಚ್ಮಡಿಗೆ ಹತ್ತಿರದ ವಿಮಾನನಿಲ್ದಾಣ ಭೋಪಾಲ್.
ಹತ್ತಿರದ ರೈಲುನಿಲ್ದಾಣ ಪಿಪಾಡಿಯಾ.
ಸಸ್ಯ ಮತ್ತು ಜೀವ ವೈವಿದ್ಯ
ಬದಲಾಯಿಸಿಆ ದಟ್ಟವಾದ ಕಾಡು ಮತ್ತು ಕಲ್ಲುಬಂಡೆ ಪ್ರಪಾತಗಳಿಂದ ಕೂಡಿದ ಈ ಅಪರೂಪದ ಜಾಗವು ಅನೇಕ ವಿಶೇಷ ಗಿಡಮರಗಳಿಗೆ ತಾಣವಾಗಿದೆ. ಅಲ್ಲದೇ ಇಲ್ಲಿ ಹುಲಿ, ಚಿರತೆ, ಕಾಡುಹಂದಿ, ನವಿಲು ಮತ್ತು ಕೋತಿಗಳು ಈ ಕಂಡು ಬರುತ್ತದೆ. ಇದು ರಾಷ್ಟ್ರೀಯ ವನದ ಒಂದು ಭಾಗವಾಗಿದೆ.ಸಾತ್ಪುರ ರಾಷ್ಟ್ರೀಯ ವನ ಮತ್ತು ಎರಡು ಅರಣ್ಯ ಧಾಮ (ಬೊರಿ, ಪಚ್ಮರ್ಹಿ) ಇದರೊಳಗಿವೆ.
ಆಕರಗಳು
ಬದಲಾಯಿಸಿ- ↑ "Pachmarhi, Jewel in the crown of Central India". Times of India. Archived from the original on 13 December 2013. Retrieved 2021-12-25.
- ↑ Pachmarhi Travel Guide. Goodearth Publications. 2009. p. 6. ISBN 978-81-87780-95-3. Archived from the original on 14 February 2017. Retrieved 5 October 2016.
- ↑ "Three Indian sites added to UNESCO list of biosphere reserves". Sify. 27 May 2009. Archived from the original on 28 October 2014. Retrieved 2009-05-30.
- ↑ "UNESCO Designates 22 New Biosphere Reserves". Environment News Service. 27 May 2009. Archived from the original on 3 March 2016. Retrieved 2009-05-30.
- ↑ ೫.೦ ೫.೧ "Pachmarhi climate: Average Temperature, weather by month, Pachmarhi weather averages - Climate-Data.org". en.climate-data.org. Archived from the original on 22 June 2019. Retrieved 2021-12-25.
- ↑ "Archived copy" (PDF). Archived from the original (PDF) on 2014-03-16. Retrieved 2014-01-25.
{{cite web}}
: CS1 maint: archived copy as title (link) - ↑ "How to Reach | Pachmari Tour" (in ಅಮೆರಿಕನ್ ಇಂಗ್ಲಿಷ್). Retrieved 2022-02-18.
- ↑ "International attention for Pachmarhi rock art". Hindustan Times (in ಇಂಗ್ಲಿಷ್). 2012-09-12. Retrieved 2022-04-04.
ಬಾಹ್ಯ ಕೊಂಡಿಗಳು
ಬದಲಾಯಿಸಿ- ಎಮ್ಪಿ ಪ್ರವಾಸೋದ್ಯಮದಲ್ಲಿ ಪಚ್ಮರ್ಹಿ
- ಪಚ್ಮಡಿ ಪ್ರವಾಸ ಏಜೆಂಟು Archived 2023-06-02 ವೇಬ್ಯಾಕ್ ಮೆಷಿನ್ ನಲ್ಲಿ.
- . Encyclopædia Britannica (11th ed.). 1911.
{{cite encyclopedia}}
: Cite has empty unknown parameters:|separator=
and|HIDE_PARAMETER=
(help) - ಪಚ್ಮಡಿ ಮತ್ತು ಅದರ ಇತಿಹಾಸ