ಬೆನ್ ವಿಜೇತಾಳಿಗೆ ಪ್ರೀತಿಸುತ್ತಾನೆ

ಗಿರಿಧಾಮಗಳು  : ಪರ್ವತಗಳ ಹಾಗೂ ಬೆಟ್ಟಗಳ ನೆತ್ತಿಯಲ್ಲೋ ಸಾನು ಪ್ರದೇಶಗಳಲ್ಲೋ ವಿಶ್ರಾಂತಿ, ವಿಹಾರಗಳಿಗಾಗಿ ಗೊತ್ತು ಮಾಡಿರುವ ಸ್ಥಳಗಳು (ಹಿಲ್ ಸ್ಟೇಷನ್ಸ್). ರೋಗದಿಂದ ಆಗತಾನೆ ಚೇತರಿಸಿಕೊಳ್ಳತ್ತಿರುವ ಜನರೂ ದಣಿದು ವಿಶ್ರಾಂತಿ ಬಯಸುವ ಇತರರೂ ಅನೇಕ ವೇಳೆ ವಿಹಾರಾಕಾಂಕ್ಷಿಗಳೂ ಇಲ್ಲಿಗೆ ಬಂದು ಕೆಲಕಾಲ ತಂಗಿದ್ದು ಚೇತರಿಸಿಕೊಂಡು ಹಿಂದಿರುಗುತ್ತಾರೆ. ಧಗೆಯಿಂದ ಪಾರಾಗಲು ಬೇಸಗೆಯಲ್ಲಿ ಜನ ಈ ಸ್ಥಳಗಳಿಗೆ ಬರುವುದು ಹೆಚ್ಚು.

ಹಿಂದಿನ ಕಾಲದಲ್ಲಿ ಬದಲಾಯಿಸಿ

ಇಂದಿನ ಗಿರಿಧಾಮಗಳ ಕಲ್ಪನೆ ಲೌಕಿಕವಾದದು. ಹಿಂದಾದರೋ ಧರ್ಮದ ಹೆಸರಿನಲ್ಲಿ, ದೇವರ ಹೆಸರಿನಲ್ಲಿ ಇಂಥ ಸ್ಥಳಗಳನ್ನು ನಿರ್ಮಿಸುತ್ತಿದ್ದರು. ಜನವಸತಿಯಿದ್ದು ಸುತ್ತಲೂ ಅರಣ್ಯವಿರುವ ಬೆಟ್ಟಗಳ ನೆತ್ತಿಯಲ್ಲಿ ದೇವಾಲಯಗಳನ್ನು ಕಟ್ಟುವ ಪದ್ಧತಿ ಗ್ರೀಕರ ಕಾಲದಿಂದಲೂ ನಡೆದುಬಂದಿದೆ. ಒಂದು ದೇವಾಲಯ, ಅದಕ್ಕೆ ಹೊಂದಿದಂತೆ ಒಂದು ಪುಷ್ಕರಣಿ, ಒಂದು ಅನ್ನಛತ್ರ-ಇಷ್ಟನ್ನು ಎಲ್ಲ ಯಾತ್ರಸ್ಥಳಗಳಲ್ಲೂ ಕಾಣಬಹುದು. ಮಧ್ಯಯುಗದ ಕಾಲದಲ್ಲಿ ಮಧ್ಯ ಯುರೋಪಿನ ಅನೇಕ ಬೆಟ್ಟಗಳಲ್ಲಿ ಚರ್ಚುಗಳನ್ನು ಕಟ್ಟಿದ್ದಾರೆ. ಭಾರತದಲ್ಲಿ ಪವಿತ್ರ ಯಾತ್ರಾಸ್ಥಳಗಳಾದ ತಿರುಪತಿ,ದೇವರಾಯನದುರ್ಗ, ಆಲ್ಮೋರ,ಅಬು ಮೊದಲಾದವು ಗಿರಿಧಾಮಗಳಾಗಿರುವುದಲ್ಲದೆ ಭಕ್ತಾದಿಗಳನ್ನೂ ತಮ್ಮತ್ತ ಸೆಳೆಯುತ್ತಿವೆ.

ಆಧುನಿಕ ಕಾಲದಲ್ಲಿ ಬದಲಾಯಿಸಿ

ಹಳ್ಳಿಗಳೇ ಹೆಚ್ಚಾಗಿದ್ದು ಪಟ್ಟಣಗಳಲ್ಲಿನ ಜನಸಂಖ್ಯೆ ಅಷ್ಟು ನಿಬಿಡವಾಗಿಲ್ಲದಾಗ ಗಿರಿಧಾಮಗಳ ಅಗತ್ಯ ಕಂಡುಬರುತ್ತಿರಲಿಲ್ಲ. ಕ್ರಮೇಣ ದೊಡ್ಡ ದೊಡ್ಡ ಪಟ್ಟಣಗಳ ಬೆಳೆವಣಿಗೆಯಿಂದಾಗಿ ಜನಕ್ಕೆ ಏಕಾಂತ, ವಿರಾಮ, ವಿಶ್ರಾಂತಿ, ಶುದ್ಧವಾದ ಗಾಳಿ, ಬೆಳಕು, ಸುಂದರವಾದ ಪ್ರಾಕೃತಿಕ ಸನ್ನಿವೇಶ-ಇವು ಸಿಗದಂತಾದವು. ಈ ಕೊರೆಯನ್ನು ತುಂಬಲು ಸರ್ಕಾರಗಳು ರಾಷ್ಟ್ರೀಯ ಉದ್ಯಾನಗಳನ್ನೂ ಅಭಯಾರಣ್ಯಗಳನ್ನೂ, ಗಿರಿಧಾಮಗಳನ್ನೂ, ಅಭಿವೃದ್ಧಿಪಡಿಸತೊಡಗಿದರು. ಭಾರತದಲ್ಲಿ ಬ್ರಿಟಿಷರೂ ರಾಜ ಮಹಾರಾಜರುಗಳೂ ಈ ಕೆಲಸವನ್ನು ತುಂಬ ಆಸಕ್ತಿಯಿಂದ ಮಾಡಿದರು. ಕೆಮ್ಮಣ್ಣು ಗುಂಡಿಯನ್ನು (ಕೃಷ್ಣರಾಜೇಂದ್ರ ಗಿರಿಧಾಮ) ಗುರುತಿಸಿ ಬೆಳೆಸಿದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರದು. ಸ್ವತಂತ್ರ ಭಾರತದಲ್ಲಿ, ಪ್ರವಾಸೋದ್ಯಮ ಬೆಳೆದಂತೆಲ್ಲ, ಗಿರಿಧಾಮಗಳಲ್ಲಿನ ಸೌಕರ್ಯಗಳು ಹೆಚ್ಚುತ್ತಿವೆ. ಈಗ ಪ್ರಸಿದ್ಧವಾದ ಗಿರಿಧಾಮಗಳಿಗೆ ಸರಾಗವಾಗಿ ಹೋಗಿಬರಲು ರಸ್ತೆಗಳಿವೆ. ವಾಹನ ಸೌಕರ್ಯವಿದೆ, ಸಿಮ್ಲ, ಶ್ರೀನಗರ, ಡಾರ್ಜಲಿಂಗ್ ಮೊದಲಾದ ಪ್ರಮುಖ ಗಿರಿಧಾಮಗಳಿಗೆ ವಿಮಾನ ಸೌಕರ್ಯವೂ ಉಂಟು. ಈಚೆಗೆ ಅಲ್ಲೆಲ್ಲ ಉತ್ತಮ ಉದ್ಯಾನಗಳನ್ನು ಬೆಳೆಸಿದ್ದಾರೆ. ಉದಾಹರಣೆಗೆ ಸಿಮ್ಲ ಮತ್ತು ಶ್ರೀನಗರಗಳನ್ನು ನೋಡಬಹುದು. ಕೆಲವು ಕಡೆ ಸಸ್ಯವೈಜ್ಞಾನಿಕ ಉದ್ಯಾನಗಳನ್ನು ಎಬ್ಬಿಸಿರುವುದೂ ಉಂಟು. ಒಂದೊಂದು ಗಿರಿಧಾಮದಲ್ಲಿ ಒಂದೊಂದು ಬಗೆಯ ಕ್ರೀಡೆಗೆ ಅವಕಾಶ ಉಂಟು. ಈಜುಕೊಳ, ದೋಣಿ ಸೌಕರ್ಯ, ಮೀನು ಹಿಡಿಯಲು ತಕ್ಕ ಸ್ಥಳಗಳು, ಬೇಟೆಯ ಸೌಲಭ್ಯ, ಸ್ಕೇಟಿಂಗ್, ಸ್ಕೀಯಿಂಗ್, ಮೊದಲಾದವುಗಳಿಗೆ ಏರ್ಪಾಟು, ಸುತ್ತಣ ಪ್ರೇಕ್ಷಣೀಯ ಸ್ಥಳಗಳಿಗೆ ಹೋಗಿಬರಲು ಮಾಡಿರುವ ವ್ಯವಸ್ಥೆ- ಇವುಗಳಿಂದಾಗಿ ಅನೇಕ ಗಿರಿಧಾಮಗಳು ಜನಪ್ರಿಯವಾಗಿವೆ.

ಭಾರತದಲ್ಲಿನ ಗಿರಿಧಾಮಗಳು ಬದಲಾಯಿಸಿ

ಭಾರತದಲ್ಲಿ ಪ್ರಸಿದ್ಧ ಗಿರಿಧಾಮಗಳಾದ ಸಿಮ್ಲ, ಷಿಲ್ಲಾಂಗ್,ಶ್ರೀನಗರ, ಅಬು ಮೊದಲಾದವು ಆಯಾ ರಾಜ್ಯಗಳ ರಾಜಧಾನಿಗಳಾಗಿವೆ. ಭಾರತದ ಸ್ವಿಟ್ಜರ್ಲೆಂಡ್ ಎಂದು ಖ್ಯಾತಿ ಪಡೆದ ಉದಕಮಂಡಲ, ಲ್ಯಾಂಡ್ ಆಫ್ ದಿ ಹ್ವೈಟ್ ಆರ್ಕಿಡ್ಸ್ ಎಂದು ಪ್ರಸಿದ್ಧವಿರುವ ಕುರ್ಸಿಯಾಂಗ್, ಪೂರ್ವದ ಸ್ಕಾಟ್ಲೆಂಡ್ ಎಂಬ ಹೆಸರಿಗೆ ತಕ್ಕುದಾದ ಷಿಲ್ಲಾಂಗ್, ಭೂಸ್ವರ್ಗವೆನಿಸಿಕೊಂಡಿರುವ ಶ್ರೀನಗರ, ಜವಹರಲಾಲ್ ನೆಹರು ಅವರ ಪ್ರಿಯ ವಿಶ್ರಾಂತಿ ಸ್ಥಳವಾದ ಕುಲು-ಈ ಮೊದಲಾದವು ಭಾರತದಲ್ಲಿನ ಪ್ರಸಿದ್ದ ಗಿರಿಧಾಮಗಳು. ಇವಲ್ಲದೆ ನಂದಿ, ಕೂನೂರು, ಕೋಟಗಿರಿ, ಕೊಡೈಕ್ಕಾನಲ್, ಎರ್ಕಾಡ್, ಮಹಾಬಲೇಶ್ವರ, ಪಂಚಗನಿ, ಕಾಲಂಪಾಂಗ್, ರಾಂಚಿ, ಹಜಾರಿಬಾಗ್, ಮುಸ್ಸೋರಿ ಮತ್ತು ನೈನಿತಾಲ್-ಮೊದಲಾದ ಅನೇಕ ಸುಂದರ ಗಿರಿಧಾಮಗಳು ಇವೆ.

"https://kn.wikipedia.org/w/index.php?title=ಗಿರಿಧಾಮ&oldid=1202414" ಇಂದ ಪಡೆಯಲ್ಪಟ್ಟಿದೆ