ಜ್ಯೇಷ್ಠ ಮಾಸ
ಹಿಂದೂ ಧರ್ಮದ ಚಾಂದ್ರಮಾನ ಪಂಚಾಂಗದ ಮೂರನೇ ಮಾಸ.
ವೇದದಲ್ಲಿ ಇದನ್ನು ಶುಚಿಮಾಸ ಎಂದು ಕರೆಯಲಾಗಿದೆ. ಗ್ರೀಷ್ಮಋತು ಈ ಮಾಸಾದಿಯಿಂದ ಪ್ರಾರಂಭವಾಗುತ್ತದೆ. ಸೂರ್ಯ ವೃಷಭರಾಶಿಯಲ್ಲಿರುವಾಗ ಶುಕ್ಲಪಕ್ಷ ಪ್ರಥಮಾ ತಿಥಿಯ ದಿನ ಈ ಮಾಸ ಪ್ರಾರಂಭವಾಗಿ ಸೂರ್ಯ ಮಿಥುನ ರಾಶಿಯಲ್ಲಿರುವಾಗ ಬರುವ ಅಮಾವಾಸ್ಯೆಯ ದಿವಸ ಮುಗಿಯುತ್ತದೆ. ಪ್ರಾಯಶಃ ಈ ಮಾಸದ ಹುಣ್ಣಿಮೆಯ ದಿನ ಜ್ಯೇಷ್ಠಾನಕ್ಷತ್ರ ಸೇರುವುದರಿಂದ ಈ ತಿಂಗಳಿಗೆ ಜ್ಯೇಷ್ಠ ಎಂಬ ಹೆಸರು ಬಂದಿದೆ. ಈ ತಿಂಗಳ ಹುಣ್ಣಿಮೆಯ ದಿವಸ ಅನುರಾಧಾ ಹಾಗೂ ಮೂಲಾನಕ್ಷತ್ರಗಳೂ ಬರುವುದುಂಟು. ಕೆಲವು ವರ್ಷಗಳಿಗೊಮ್ಮೆ ಸೂರ್ಯ ವೃಷಭ ಮಾಸದ ಮೊದಲಿನಲ್ಲಿ ಒಂದು ಅಮಾವಾಸ್ಯೆಯೂ ಕೊನೆಯಲ್ಲಿ ಮತ್ತೊಂದು ಅಮಾವಾಸ್ಯೆಯೂ ಬಂದಾಗ ಎರಡನೆಯ ಅಮಾವಾಸ್ಯೆಯನ್ನೊಳಗೊಂಡ ಚಾಂದ್ರಮಾನ ಮಾಸವನ್ನು ಅಧಿಕ ಜ್ಯೇಷ್ಠಮಾಸವೆಂದು ಪರಿಗಣಿಸಿದ್ದಾರೆ. ಇದರ ಮುಂದಿನ ಚಾಂದ್ರಮಾನ ಮಾಸ ನಿಜ ಜ್ಯೇಷ್ಠಮಾಸ.
ಈ ಮಾಸದ ಶುಕ್ಲಪ್ರಥಮಾ ತಿಥಿ ಸೂರ್ಯೋದಯ ಕಾಲದಲ್ಲಿರುವ ದಿವಸ ಪುನ್ನಾಗ ಗೌರೀವ್ರತವನ್ನೂ ಶುಕ್ಲತೃತೀಯಾ ತಿಥಿ ಉದಯಕಾಲದಲ್ಲಿರುವ ದಿವಸ ಕದಳೀಗೌರೀವ್ರತವನ್ನೂ ಆಚರಿಸುತ್ತಾರೆ. ಜ್ಯೇಷ್ಠ ಅಧಿಕ ಬಂದ ವರ್ಷದಲ್ಲಿ ನಿಜ ಜ್ಯೇಷ್ಠ ಮಾಸದಲ್ಲೇ ಈ ವ್ರತಗಳನ್ನು ಮಾಡಬೇಕು.
ಜ್ಯೇಷ್ಠಮಾಸದ ಶುಕ್ಲದಶಮೀ ದಿವಸ ದಶಹರದಶಮೀವ್ರತವನ್ನು ಆಚರಿಸುತ್ತಾರೆ. ಜ್ಯೇಷ್ಠ ಅಧಿಕ ಬಂದ ವರ್ಷದಲ್ಲಿ ಈ ವ್ರತವನ್ನು ಅಧಿಕಮಾಸದಲ್ಲೇ ಮಾಡಬೇಕು. ಜ್ಯೇಷ್ಠ ಮಾಸೇ ಸಿತೇಪಕ್ಷೇ ದಶಮ್ಯಾಂ ಬುಧಹಸ್ತಯೋಃ ವ್ಯತಿಪಾತೇಗರಾನಂದೇ ಕನ್ಯಾ ಚಂದ್ರೇವೃಷೇರವಾ ಎಂಬ ಈ ಹತ್ತು ಸೇರುವುದೇ ದಶಹರಯೋಗ. ಈ ದಿವಸ ವ್ರತವನ್ನು ಮಾಡುವುದರಿಂದ ಅದತ್ತಾನಾಮುಪಾದಾನಂ ಹಿಂಸಾ ಚೈವ ವಿಧಾನತಃ ಪರದಾರೋಪಸೇವಾ ಚ ಕಾಮಿತಂ ತ್ರಿವಿಧ ಸ್ಮøತಂ" ಪೌರುಷ್ಯಮಾನೃತಂ ಚೈವ ಪೈಶುನ್ಯಂಚಾಪಿ ಸರ್ವಶಃ 1 ಅಸಂಬದ್ಧಪ್ರಲಾಪಶ್ಚ ವಾಙ್ಮಯಂ ಸ್ಯಾಚ್ಚತುರ್ವಿಧಂ || ಪರದ್ರವ್ಯೇಷ್ವಭಿದ್ಯಾನಂ ಮನಸಾನಿಷ್ಟಚಿಂತನಂ ವಿಕಥಾಭಿನಿವೇಶಶ್ಚ ಮಾನಸೊಕ್ತಿವಿಧಾಂ ಸ್ಮøತಂ | ವಿತಾನಿ ದಶಪಾಪಾನಿ ಹರತ್ಯ ಮಮ ಜಾಹ್ನವಿ ದಶಪಾಪಹರಾ ಯಸ್ಮಾತ್ತಸ್ಮಾದಶಹರಾಸ್ಮøತಾ || ಎಂದಿರುವಂತೆ ಈ ವ್ರತಾಚರಣೆಯಿಂದ ಕಾಮಿತ, ವಾಚಿಕ, ಮಾನಸ ರೂಪದ ಹತ್ತು ವಿಧ ಪಾಪಗಳು ನಾಶವಾಗುತ್ತವೆ.
ಜ್ಯೇಷ್ಠ ಮಾಸ ಶುಕ್ಲದಶಮೀ ಬುಧವಾರ ಹಸ್ತ ನಕ್ಷತ್ರದಲ್ಲಿ ಸ್ವರ್ಗದಿಂದ ಗಂಗೆ ಭೂಮಿಗೆ ಇಳಿದು ಬಂದ ದಿನ. ಈ ದಶಮಿಯ ದಿವಸ ಯಾವ ನದಿಯಲ್ಲೇ ಆಗಲಿ ಸ್ನಾನಮಾಡಿ ತಿಲೋದಕ ಆಘ್ರ್ಯಪ್ರಧಾನ ಮಾಡಿದರೆ ಮಹಪಾತಕಗಳು ನಾಶವಾಗುತ್ತವೆ. ಈ ದಿವಸ ಗಂಗಾಪ್ರತಿಮೆಯ ದಾನ ಮತ್ತು ಗಂಗಾನದಿಯ ಸ್ನಾನ ವಿಶೇಷ ಫಲಪ್ರದ. ಜ್ಯೇಷ್ಠ ಶುಕ್ಲ ಏಕಾದಶಿಯ ದಿವಸ ನಿರ್ಜಲ ಉಪವಾಸವಿದ್ದು ಜಲಕುಂಭದಾನ ಮಾಡುವುದರಿಂದ ವಿಷ್ಣುಸಾನ್ನಿಧ್ಯ ಲಭಿಸುತ್ತದೆ.
ಜ್ಯೆಷ್ಠ ಶುಕ್ಲ ಪೂರ್ಣಿಮಾ ದಿವಸ ವಟವೃಕ್ಷ ಮೂಲದಲ್ಲಿ ಸಾವಿತ್ರೀವ್ರತವನ್ನು ಮಾಡುವುದರಿಂದ ಸ್ತ್ರೀಯರಿಗೆ ವೈಧವ್ಯ ಪ್ರಾಪ್ತಿ ಇರುವುದಿಲ್ಲ. ಈ ದಿವಸ ಎಳ್ಳು, ಉದಕುಂಭ, ಬೀಸಣಿಗೆಗಳ ದಾನ ವಿಶೆಷ ಫಲಪ್ರದ. ಈ ಹುಣ್ಣಿಮೆಯ ದಿವಸ ಜ್ಯೆಷ್ಠಾ ನಕ್ಷತ್ರದಲ್ಲಿ ಚಂದ್ರ ಗುರುಗಳೂ ರೋಹಿಣಿ ನಕ್ಷತ್ರದಲ್ಲಿ ಸೂರ್ಯನೂ ಇದ್ದರೆ ಮಹಾಜ್ಯೇಷ್ಠೇ ಯೋಗವಾಗುತ್ತದೆ. ಈ ಯೋಗವಿಷಯದಲ್ಲಿ ಸ್ನಾನದಾನ ಮೊದಲಾದವು ಪುಣ್ಯಪ್ರದ.
ಜ್ಯೇಷ್ಠ ಪೂರ್ಣಿಮಾ ದಿನ ಭೌತ್ಯಮನು ಪ್ರಾರಂಭವಾದ ದಿನ. ತನ್ನಿಮಿತ್ತ ಪಿಂಡರಹಿತ ಶ್ರಾದ್ಧ ವಿಹಿತವಾಗಿದೆ.
ಈ ಮಾಸದಲ್ಲಿ ಹುಟ್ಟಿದವ ಕ್ಷಮೆಯುಳ್ಳವನೂ ಚಪಲಚಿತ್ತನೂ ವಿದೇಶಪ್ರವಾಸಾಭಿರುಚಿಯುಳ್ಳವನೂ ವಿಚಿತ್ರಬುದ್ಧಿಯುಳ್ಳವನೂ ತೀವ್ರಸ್ವಭಾವದವನೂ ಆಗುತ್ತಾನೆ.
ಜ್ಯೇಷ್ಠ ಮಾಸದಲ್ಲಿ ಗ್ರಹಣವಾದಾಗ ರಾಜರು ದ್ವಿಜರು ರಾಜಪತ್ನಿಯರು ಸಸ್ಯಗಳು ಮಳೆ ಇವುಗಳ ನಾಶವೂ ದೊಡ್ಡಗುಂಪು, ಸಾಲ್ವದೇಶದ ಜನ, ಬೇಡರ ಗುಂಪು-ಇವುಗಳಿಗೆ ತೊಂದರೆಯೂ ಉಂಟಾಗುತ್ತದೆ.
ಜ್ಯೆಷ್ಠಶುಕ್ಲ ತೃತೀಯಾ ರಾಣಾ ಪ್ರತಾಪ್‍ಸಿಂಗ್ ಹುಟ್ಟಿದ ದಿವಸ.
ಈ ಮಾಸದ ಪ್ರಮುಖ ಹಬ್ಬಗಳು
ಬದಲಾಯಿಸಿ- ನಿರ್ಜಲಾ ಏಕಾದಶಿ (ಶುಕ್ಲ ಏಕಾದಶಿ)
- ವಟ ಸಾವಿತ್ರಿ ವ್ರತ (ಹುಣ್ಣಿಮೆ)
- ಯೋಗಿನೀ ಏಕಾದಶಿ (ಕೃಷ್ಣ ಏಕಾದಶಿ)
ಚಾಂದ್ರಮಾನ ಮಾಸಗಳು |
---|
ಚೈತ್ರ • ವೈಶಾಖ • ಜ್ಯೇಷ್ಠ • ಆಷಾಢ • ಶ್ರಾವಣ • ಭಾದ್ರಪದ • ಆಶ್ವಯುಜ • ಕಾರ್ತಿಕ • ಮಾರ್ಗಶಿರ • ಪುಷ್ಯ • ಮಾಘ • ಫಾಲ್ಗುಣ |