ಜೇಮ್ಸ್‌ ಕ್ಲರ್ಕ್‌ ಮ್ಯಾಕ್ಸ್‌ವೆಲ್

ಗಣಿತಜ್ಞ

ಜೇಮ್ಸ್‌ ಕ್ಲರ್ಕ್‌ ಮ್ಯಾಕ್ಸ್‌ವೆಲ್ (1831-79) ಸ್ಕಾಟ್ಲೆಂಡಿನ ಪ್ರಸಿದ್ಧ ಸೈದ್ಧಾಂತಿಕ ಭೌತವಿಜ್ಞಾನಿ ಮತ್ತು ಖಗೋಳ ವಿಜ್ಞಾನಿ. ಇವರು ಭೌತ ಹಾಗೂ ಖಗೋಳ ವಿಜ್ಞಾನಕ್ಕೆ ನೀಡಿದ ಕೊಡುಗೆ ಅಪಾರ.[]

ಜೇಮ್ಸ್‌ ಕ್ಲರ್ಕ್‌ ಮ್ಯಾಕ್ಸ್‌ವೆಲ್

ಅನೇಕ ಮೂಲಭೂತ ಸ್ವರೂಪದ ಭೌತವಿಚಾರಗಳನ್ನು ಮಂಡಿಸಿ ಭೌತವಿಜ್ಞಾನ ಪ್ರಗತಿಗೆ ಕಾರಣರಾದ ಪ್ರತಿಭಾನ್ವಿತ ವಿಜ್ಞಾನಿಗಳ ಪಂಕ್ತಿಯಲ್ಲಿ ನ್ಯೂಟನ್ ತರುವಾಯದ ಸ್ಥಾನ ಪಡೆದಿದ್ದಾನೆ. ಜನನ ಎಡಿನ್‍ಬರೋದಲ್ಲಿ 1831 ನವಂಬರ್ 13 ರಂದು.[] ಇವನ ತಂದೆ ಜಮೀನ್ದಾರನಾದ ವಕೀಲ. ಗ್ರಾಮೀಣ ಪರಿಸರದಲ್ಲಿ ಬೆಳೆದ ಮ್ಯಾಕ್ಸ್‌ವೆಲ್ ಎಡಿನ್‌ಬರೋ ಅಕಾಡೆಮಿಯಲ್ಲಿ[] ಶಾಲೆ ಸೇರಿದಾಗ ಇವನ ಹಳ್ಳಿಯ ಉಡುಪು ಮತ್ತು ನಡತೆಯಿಂದಾಗಿ ಸಹಪಾಠಿಗಳು ಇವನನ್ನು ಚುಡಾಯಿಸಿ ಅಡ್ಡ ಹೆಸರಿನಿಂದ ಕರೆದು ಲೇವಡಿ ಮಾಡುತ್ತಿದ್ದುದಿತ್ತು. ಆಜನ್ಮ ಮಹಾಗಣಿತಮತಿಯಾದ ಈತ ದೀರ್ಘವೃತ್ತವನ್ನು (ಎಲಿಪ್ಸ್) ಎಳೆಯುವ ವಿಧಾನವನ್ನು ಹದಿನಾಲ್ಕರ ಹರೆಯದಲ್ಲಿ ಸೂಚಿಸಿದ. ಈ ಶೋಧನೆ ಈತನಿಗೆ ಅಕಾಡೆಮಿಯ ಪದಕ ತಂದುಕೊಟ್ಟಿತು. ಮರುವರ್ಷವೇ (ಪ್ರಾಯ ಹದಿನೈದು) ಈತ ರಾಯಲ್ ಸೊಸೈಟಿಗೆ ಲೇಖನಗಳನ್ನು ಒಪ್ಪಿಸಿದ. ಹದಿನಾರರಲ್ಲಿ ಎಡಿನ್‌ಬರೋ ವಿಶ್ವವಿದ್ಯಾಲಯ ಸೇರಿದ.[] ಮುಂದೆ ಟ್ರಿನಿಟಿ ಕಾಲೇಜಿಗೆ ದಾಖಲಾದ. 1854 ರಲ್ಲಿ ಗಣಿತ ಪದವಿ ಪಡೆದ.

ಪದವಿ ಪಡೆದ ಅನಂತರ ಈತ ನಡೆಸಿದ ಮೊದಲ ಸಂಶೋಧನೆ ಬಣ್ಣಗಳ ಗ್ರಹಿಕೆಗೆ ಸಂಬಂಧಿಸಿದ್ದು. ಕೆಂಪು, ಹಸಿರು, ನೀಲಿ ಬಣ್ಣಗಳಿದ್ದರೆ ಅವುಗಳ ಮಿಶ್ರಣದಿಂದ ಯಾವುದೇ ಇತರ ಬಣ್ಣ ಪಡೆಯಬಹುದೆಂಬುದನ್ನು ಶೋಧಿಸಿದ.[] ಈ ಸಂಶೋಧನೆಯ ಹಿರಿಮೆ ಗಮನಿಸಿದ ರಾಯಲ್ ಸೊಸೈಟಿ ಈತನಿಗೆ ಪದಕ ಪ್ರದಾನಿಸಿ ಗೌರವಿಸಿತು. ಶನಿಗ್ರಹವನ್ನು ಆವರಿಸಿರುವ ಬಳೆಗಳು ಅಂದಿನ ವಿಶೇಷ ಆಕರ್ಷಣೆಗಳು, ಮಿಗಿಲಾಗಿ ಸವಾಲುಗಳು ಕೂಡ. ಅವು ಕಣ್ಣಿಗೆ ಕಾಣುವ ರೀತಿಯ ದೃಢತಟ್ಟೆಗಳು ಎಂದು ವಿಜ್ಞಾನಿಗಳು ಭಾವಿಸಿದ್ದರು.  ಮ್ಯಾಕ್ಸ್‌ವೆಲ್ ಅವನ್ನು ನೋಡದೆಯೂ ಕೇವಲ ಗಣಿತಗಣನೆಗಳ ಆಧಾರದಿಂದ ಅವು ಚಲಿಸುತ್ತಿರುವ ಅಸಂಖ್ಯ ವಿವಿಕ್ತಕಣಗಳ ಸಮೂಹ ಎಂದು ಸಾಧಿಸಿದ[]-ಮಂಗಳ ಹಾಗೂ ಗುರು ಕಕ್ಷೆಗಳ ನಡುವೆ ಇರುವ ಕ್ಷುದ್ರಗ್ರಹಗಳ ಹೊನಲಿನ ತೆರದಲ್ಲಿ. ತನ್ನ ಸಂಶೋಧನೆಯನ್ನು ಶನಿಗ್ರಹದ ಉಂಗುರಗಳ ಚಲನೆಯ ಸ್ಥಿರತೆ ಎಂಬ ಲೇಖನದಲ್ಲಿ ಪ್ರಕಟಿಸಿದ (1856). ಇದಕ್ಕೆ ಕೇಂಬ್ರಿಜಿನಲ್ಲಿ ಆಡಮ್ಸ್ ಬಹುಮಾನ ದೊರೆಯಿತು.[] ಇದರಿಂದ ಪ್ರಭಾವಿತನಾದ ಮ್ಯಾಕ್ಸ್‌ವೆಲ್ ಅನಿಲಗಳ ಚಲನ ಸಿದ್ಧಾಂತದತ್ತ ಗಮನ ಹರಿಸಿದ. ಅನಿಲಗಳಲ್ಲಿರುವ ಚಲಿಸುವ ಅಣುಗಳು ಎಲ್ಲ ದಿಕ್ಕುಗಳಲ್ಲೂ ಎಲ್ಲ ಜವಗಳಲ್ಲೂ ಧಾವಿಸುತ್ತವೆ ಎಂದು ಸಾಧಿಸಿದ. ಬೇರೆ ಬೇರೆ ಅಣುಗಳಲ್ಲಿ ವೇಗಗಳು ಹೇಗೆ ಹಂಚಿಹೋಗುತ್ತವೆ ಎಂಬುದನ್ನು ನಿರೂಪಿಸಿದ. ಅನಿಲಗಳ ಸರಾಸರಿ ಮುಕ್ತ ಪಥವನ್ನು (ಮೀನ್ ಫ್ರೀ ಪಾತ) ಶೋಧಿಸಿದ. ಅನಿಲಗಳ ಶ್ಯಾನತ್ವದ (ವಿಸ್ಕಾಸಿಟಿ) ಬಗ್ಗೆ  ಪ್ರಯೋಗ ನಡೆಸಿ ತನ್ನ ತೀರ್ಮಾನಗಳು ಸರಿಯೇ ಎಂಬುದನ್ನು ಪರಿಶೀಲಿಸಿದ. ಈ ವಿಷಯಗಳನ್ನೊಳಗೊಂಡ ಇವನ ಲೇಖನ 1860 ರಲ್ಲಿ ಪ್ರಕಟವಾಯಿತು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮುಂದೆ ಬರೆದ ಅನೇಕ ಲೇಖನಗಳನ್ನೊಳಗೊಂಡ ಉಷ್ಣ ಸಿದ್ಧಾಂತ ಎಂಬ ಗ್ರಂಥ 1877 ರಲ್ಲಿ ಪ್ರಕಟವಾಯಿತು.

ಮ್ಯಾಕ್ಸ್‌ವೆಲ್ ವರ್ಣ ಅಂಧತೆಯ ಕುರಿತು ಆಳವಾದ ಅಭ್ಯಾಸಮಾಡಿ, ಮ್ಯಾಕ್ಸ್‌ವೆಲ್ ಬಿಲ್ಲೆಯನ್ನು ಕಂಡುಹಿಡಿದರು.[]

ವಿದ್ಯುತ್ಕಾಂತ ಸಿದ್ಧಾಂತ (ಎಲೆಕ್ಟ್ರೋಮ್ಯಾಗ್ನೆಟಿಕ್ ತಿಯೋರಿ) ವಿಜ್ಞಾನಕ್ಷೇತ್ರಕ್ಕೆ ಇವನ ಅಮೂಲ್ಯ ಕೊಡುಗೆ. ಇದಕ್ಕೆ ಸಂಬಂಧಿಸಿದ ಇವನ ಅಭ್ಯಾಸಗಳು ಕೇಂಬ್ರಿಜ್‌ನಲ್ಲೇ ಆರಂಭವಾಗಿದ್ದವು. ಫ್ಯಾರಡೆಯ ಬಲರೇಖೆಗಳು ಎಂಬ ಲೇಖನ[] ಎರಡು ಭಾಗಗಳಲ್ಲಿ 1855 ಮತ್ತು 1856 ರಲ್ಲಿಯೂ ಭೌತ ಬಲರೇಖೆಗಳು ಎಂಬ ಎರಡನೆಯ ಲೇಖನ 1861 ರಲ್ಲಿಯೂ ಪ್ರಕಟವಾದುವು.[೧೦] ಇದರ ವಿವರಗಳನ್ನೊಳಗೊಂಡ ವಿದ್ಯುತ್ಕಾಂತ ಕ್ಷೇತ್ರದ ಕ್ರಿಯಾತ್ಮಕ ಸಿದ್ಧಾಂತ ಎಂಬ ಲೇಖನವನ್ನು ಈತ 1864 ರಲ್ಲಿ ರಾಯಲ್ ಸೊಸೈಟಿಗೆ ಒಪ್ಪಿಸಿದ. ಈ ವಿಷಯಗಳ ಅತ್ಯುತ್ತಮ ರೀತಿಯ ವಿವರಣೆ ಈತ ಬರೆದ ವಿದ್ಯುತ್ ಮತ್ತು ಕಾಂತ ಪ್ರಬಂಧದಲ್ಲಿದೆ.

ಬೆಳಕು ಮತ್ತು ವಿದ್ಯುತ್ ಕ್ಷೇತ್ರಗಳ ನಡುವೆ ಏನಾದರೂ ಸಂಬಂಧವಿದೆಯೇ ಎಂದು ತಿಳಿಯಲು ಮೈಕಲ್ ಫ್ಯಾರಡೆ ಪ್ರಯೋಗ ನಡೆಸಿ ದೊರೆತ ವಿವರಗಳನ್ನು ಉಪಮೆಗಳ ಸಹಾಯದಿಂದ ನಿರೂಪಿಸಿದ್ದ. ಇವುಗಳಿಗೆ ಯುಕ್ತ ಗಣಿತ ಪರಿಭಾಷೆ ತೊಡಿಸಿ ಭದ್ರವಾಗಿ ನಿಲ್ಲಿಸಿದಾತ ಮ್ಯಕ್‌ವೆಲ್. ಬೆಳಕಿನ ವಿದ್ಯುತ್ಕಾಂತ ಸಿದ್ಧಾಂತದಲ್ಲಿ ಫ್ಯಾರಡೆಗೆ ತಾನು ಸಲ್ಲಿಸತಕ್ಕ ಋಣವನ್ನು ಮ್ಯಾಕ್ಸ್‌ವೆಲ್ ಸ್ಮರಿಸಿದ್ದಾನೆ. ಆಕಾಶವೆಲ್ಲವೂ ವಿದ್ಯುತ್ತಿನಿಂದ ಧ್ರುವೀಕರಣವಾಗಬಲ್ಲ ಈತರಿನಿಂದ ತುಂಬಿದೆ ಎಂದು ಭಾವಿಸಿದ[೧೧] ಮ್ಯಾಕ್ಸ್‌ವೆಲ್ ವಿಚಲನೆಗೊಳ್ಳುವ ವಿದ್ಯುತ್‌ಕ್ಷೇತ ಈತರಿನಲ್ಲಿ ವಿಸ್ಥಾಪಿತ ವಿದ್ಯುತ್‌ಪ್ರವಾಹವನ್ನು (ಡಿಸ್ಪ್ಲೇಸ್ಡ್ ಎಲೆಕ್ಟ್ರಿಕ್ ಕರೆಂಟ್) ಉಂಟುಮಾಡುವುದೆಂದು ತರ್ಕಿಸಿದ. ಅಂದರೆ ವಾಹಕಗಳಲ್ಲಿಯೇ ಅಲ್ಲದೆ ಅವಾಹಕಗಳಲ್ಲಿ ಹಾಗೂ ಶೂನ್ಯಾಕಾಶದಲ್ಲಿ ಕೂಡ ವಿದ್ಯುತ್ ಪ್ರವಾಹವಿರುವುದು ಸಾಧ್ಯ ಎಂದು ಇದರರ್ಥ. ಈ ಭಾವನೆಯಿಂದ ವಿದ್ಯುತ್ಕಾಂತ ಸಿದ್ಧಾಂತ ಸಾಧ್ಯವಾಯಿತು. ಆಂದೋಲಿತ ವಿದ್ಯುತ್ ಕ್ಷೇತ್ರದೊಂದಿಗೆ ಕಾಂತಕ್ಷೇತ್ರವೂ ಆಂದೋಲಿತವಾಗುತ್ತದೆ ಎಂದು ಮ್ಯಾಕ್ಸ್‌ವೆಲ್ ಸಾಧಿಸಿದ. ವಿದ್ಯುದಾವೇಶದ ಆಂದೋಲನದಿಂದ ವಿದ್ಯುತ್ಕಾಂತ ತರಂಗ ಹೊರಹೊಮ್ಮಿ ಪ್ರಸಾರವಾಗುತ್ತದೆ. ಕಾಂತಕ್ಷೇತ್ರ ಮತ್ತು ವಿದ್ಯುತ್‌ಕ್ಷೇತ್ರಗಳ ದಿಕ್ಕುಗಳು ಮತ್ತು ವಿದ್ಯುತ್ಕಾಂತ ತರಂಗಗಳು ಪ್ರಸಾರವಾಗುವ ದಿಕ್ಕು ಪರಸ್ಪರ ಲಂಬವಾಗಿವೆ ಎಂದು ಸೈದ್ಧಾಂತಿಕವಾಗಿ ನಿರೂಪಿಸಿದ. ಈ ತರಂಗಗಳ ವೇಗ ಸೆಕೆಂಡಿಗೆ ಮೂರು ಲಕ್ಷ ಕಿಲೋಮೀಟರ್ ಎಂದು ಗಣಿಸಿದ. ಬೆಳಕಿನ ವೇಗವೂ ಇಷ್ಟೆ ಎಂದು ಪ್ರಯೋಗಗಳಿಂದ ತಿಳಿಯಿತು. ಬೆಳಕು ವಿದ್ಯುತ್ಕಾಂತ ತರಂಗವಾದರೆ ಮಾತ್ರ ಇದು ಸಾಧ್ಯ ಎಂದು ಮ್ಯಾಕ್ಸ್‌ವೆಲ್ ಊಹಿಸಿದ. ಇದು ನಿಜವೆಂದು ರುಜುವಾತಾಯಿತು. ಜರ್ಮನ್ ವಿಜ್ಞಾನಿ ಹರ್ಟ್ಸ್ 1888 ರಲ್ಲಿ ಪ್ರಾಯೋಗಿಕವಾಗಿ ವಿದ್ಯುತ್ಕಾಂತ ತರಂಗಗಳನ್ನು ಉತ್ಪನ್ನಮಾಡಿ ಅವುಗಳ ವೇಗ ಸರಿಸುಮಾರು ಬೆಳಕಿನ ವೇಗದಷ್ಟೇ ಇದೆ ಎಂದು ತೋರಿಸಿದ. ಇದರಿಂದ ಮ್ಯಾಕ್ಸ್‌ವೆಲ್‌ನ ಸಿದ್ಧಾಂತ ಸಮರ್ಥನೆಗಳು ದೊರೆತವು. ಮ್ಯಾಕ್ಸ್‌ವೆಲ್, ಪ್ರಹರಿಸುತ್ತಿರುವ ವಿದ್ಯುತ್ ಮತ್ತು ಕಾಂತೀಯ ತರಂಗಗಳ ನಡುವಿನ ಅಂತರವರ್ತನೆಗಳ ಕುರಿತಂತೆ ಗಣಿತ ಶಾಸ್ತ್ರೀಯ ಸೂತ್ರಗಳನ್ನು ನಿರೂಪಿಸಿದರು. ಇವರು ಬೆಳಕು ಒಂದು ರೂಪದ ವಿದ್ಯುತ್ ಕಾಂತೀಯ ವಿಕಿರಣ ಎಂದು ಪ್ರತಿಪಾದಿಸಿದರು.[೧೨] ಈ ಮಹತ್ವದ ಸಂಶೋಧನೆ ಹೈನ್ರಿಕ್ ಹರ್ಟ್ಝ್ ರೇಡಿಯೋ ತರಂಗಗಳನ್ನು ಸಂಶೋಧಿಸಲು ನಾಂದಿಯಾಯಿತು.[೧೩] ಮ್ಯಾಕ್ಸ್‌ವೆಲ್ಲನ ನಾಲ್ಕು ಪುಟ್ಟ ಸಮೀಕರಣಗಳಲ್ಲಿ ವಿದ್ಯುತ್ಕಾಂತ ತರಂಗಗಳನ್ನ ಮಹಾಸಾಮ್ರಾಜ್ಯದ-ಅಂದರೆ ರೇಡಿಯೋ ತರಂಗ, ಉಷ್ಣ, ಬೆಳಕು, ಅತಿನೇರಿಳೆ ತರಂಗ, ಎಕ್ಸ್ ಕಿರಣ, ಗ್ಯಾಮ ಕಿರಣ ಇವೆಲ್ಲದರ-ಗುಣಲಕ್ಷಣಗಳು ಅಡಕವಾಗಿವೆ. ಗಣಿತವಿದರ ಪ್ರಕಾರ ಭೌತ ವಿಜ್ಞಾನವೆಲ್ಲ ಐದಾರು ಅವಕಲ ಸಮೀಕರಣಗಳ ವಿಸ್ತೃತ ವ್ಯಾಖ್ಯಾನ. ಇವುಗಳಲ್ಲಿ ಮ್ಯಾಕ್ಸ್‌ವೆಲ್ಲನ ಸಮೀಕರಣಗಳಿಗೆ ಅಗ್ರಮಾನ್ಯ ಸ್ಥಾನ. ಇವುಗಳಿಗೆ ನೀಡಿರುವ ನಿಷ್ಕೃಷ್ಟತೆಯಿಂದ ಎಲ್ಲ ಕ್ಷೇತ್ರ ಸಿದ್ದಾಂತಗಳಿಗೂ ಇವು ಮಾದರಿಯಾಗಿವೆ. ಮ್ಯಾಕ್ಸ್‌ವೆಲ್ಲನ ಕೊಡುಗೆ ಇಲ್ಲದಿದ್ದರೆ ಕ್ಷೇತ್ರ ಸಿದ್ಧಾಂತ ಇಷ್ಟು ಖಚಿತವಾದ ಸಿದ್ಧಾಂತವಾಗದೇ ಅಪ್ರಯೋಜಕವಾಗಿರುತ್ತಿತ್ತು.

ಮ್ಯಾಕ್ಸ್‌ವೆಲ್ 1860 ರಲ್ಲಿ ಲಂಡನ್ನಿನ ಕಿಂಗ್ಸ್ ಕಾಲೇಜನ್ನು ಪ್ರಾಧ್ಯಾಪಕನಾಗಿ ಸೇರಿದ. 1865 ರಲ್ಲಿ ಆ ವೃತ್ತಿ ತೊರೆದು ತನ್ನ ಜಮೀನಿನ ಮನೆಯಲ್ಲಿ, ಹಳ್ಳಿಯ ವಾತಾವರಣದಲ್ಲಿ ವಿದ್ಯುತ್ಕಾಂತ ಸಿದ್ಧಾಂತವನ್ನು ಪರಿಪೂರ್ಣಗೊಳಿಸುವುದರಲ್ಲಿ ಹೆಚ್ಚು ಕಾಲ ಕಳೆದ. ಕೇಂಬ್ರಿಜಿಗೆ ನಿಯತಕಾಲಿಕ ಭೇಟಿಗಳನ್ನು ನೀಡುತ್ತಿದ್ದ. ಅಲ್ಲಿ ಗಣಿತವಿಜ್ಞಾನದ ಪರೀಕ್ಷಕನಾಗಿರುತ್ತಿದ್ದ. ಮುಂದೆ 1871 ರಲ್ಲಿ ಈತ ಕೇಂಬ್ರಿಜಿನ ಪ್ರಾಯೋಗಿಕ ಭೌತವಿಜ್ಞಾನದ ಮೊದಲ ಪ್ರಾಧ್ಯಾಪಕ ಹುದ್ದೆಯನ್ನು ಅಷ್ಟೇನೂ ಒಲವಿಲ್ಲದೇ ಒಪ್ಪಿಕೊಂಡ. ರಸಾಯನವಿಜ್ಞಾನಿ ಹೆನ್ರಿ ಕ್ಯಾವೆಂಡಿಷನ ಜ್ಞಾಪಕಾರ್ಥ ಪ್ರಯೋಗಶಾಲೆ ನಿರ್ಮಿಸಲು ನಿರ್ದೇಶಕನಾಗಿ ಶ್ರಮಿಸಿದ್ದ.[೧೪] ಕ್ಯಾವೆಂಡಿಷನ ಸಂಶೋಧನೆಗಳನ್ನು ಸಂಪಾದಿಸಿ ಪ್ರಕಟಿಸಿದ. ಆ ಪ್ರಯೋಗಶಾಲೆಯ ಹಿರಿಮೆಗೆ ಮ್ಯಾಕ್ಸ್‌ವೆಲ್‌ನ ಪ್ರತಿಭೆಯೇ ಕಾರಣ. ಈತ 1879 ರ ನವೆಂಬರ್ 5 ರಂದು ಕಾಲವಶನಾದ.

ಉಲ್ಲೇಖಗಳು

ಬದಲಾಯಿಸಿ
  1. http://www.britannica.com/EBchecked/topic/370621/James-Clerk-Maxwell
  2. "Early day motion 2048". UK Parliament. Archived from the original on 30 May 2013. Retrieved 22 April 2013.
  3. Campbell 1882, pp. 19–21
  4. Harman 2004, p. 662
  5. Mahon 2003, p. 51
  6. Harman 2004, p. 508
  7. "On the stability of the motion of Saturn's rings". Archived from the original on 16 June 2015. Retrieved 24 March 2014.
  8. http://www.clerkmaxwellfoundation.org/
  9. Maxwell, James Clerk (1855). "On Faraday's Lines of Force". Transactions of the Cambridge Philosophical Society. 10 (1): 27–83. Archived from the original on 17 March 2014. Retrieved 27 March 2013 – via blazelabs.com.
  10. "1861: James Clerk Maxwell's greatest year". King's College London. 18 April 2011. Archived from the original on 22 June 2013. Retrieved 28 March 2013.
  11. Johnson, Kevin (May 2002). "The Electromagnetic Field". University of St Andrews. Archived from the original on 27 August 2011. Retrieved 30 June 2013.
  12. Maxwell, James Clerk (1865). "A dynamical theory of the electromagnetic field" (PDF). Philosophical Transactions of the Royal Society of London. 155: 459–512. Bibcode:1865RSPT..155..459C. doi:10.1098/rstl.1865.0008. S2CID 186207827. Archived (PDF) from the original on 28 July 2011. (This article accompanied an 8 December 1864 presentation by Maxwell to the Royal Society. His statement that "light and magnetism are affections of the same substance" is at page 499.)
  13. Edwards, Steven A. (October 12, 2012). "Heinrich Hertz and electromagnetic radiation". American Association for the Advancement of Science.
  14. Moralee, Dennis. "The Old Cavendish – "The First Ten Years"". University of Cambridge Department of Physics. Archived from the original on 15 September 2013. Retrieved 30 June 2013.

ಹೊರಗಿನ ಕೊಂಡಿಗಳು

ಬದಲಾಯಿಸಿ