ಚತ್ತಾಣವು ರಾಷ್ಟ್ರಕೂಟರ ಕಾಲದಲ್ಲಿ ವಾಡಿಕೆಯಲ್ಲಿದ್ದ ಕಾವ್ಯ ರಚನೆಯ ಒಂದು ಬಗೆಯ ಕಾವ್ಯ ಪ್ರಬೇಧ. ಇದರ ಹೆಸರು ಮೊದಲು ಕಣ್ಣಿಗೆ ಬೀಳುವುದು ಒಂಬತ್ತನೆಯ ಶತಮಾನದ ಕವಿರಾಜಮಾರ್ಗದಲ್ಲಿ, ಆ ಹೊತ್ತಿಗೆ ಕನ್ನಡದಲ್ಲಿ ಅಂಥ ಕಾವ್ಯಜಾತಿಗಳು ಹುಟ್ಟಿ ಪ್ರಸಿದ್ದವಾಗಿದ್ದುವೆಂದು ಕವಿರಾಜಮಾರ್ಗಕಾರ ಶ್ರೀವಿಜಯ ಹೇಳುತ್ತಾನೆ.

"ನುಡಿಗೆಲ್ಲಂ ಸಲ್ಲದ ಕ |
ನ್ನಡದೊಳ್ ಚತ್ತಾಣಮುಂ ಬೆದಂಡೆಯುಮೆಂದೀ |
ಗಡಿನ ನೆಗತಯ ಕಬ್ಬದೊ |
ಳೊಡಂಬಡಂ ಮಾಡಿದರ್ ಪುರಾತನ ಕವಿಗಳ್ ||

ಇದರ ಜೊತೆಯಲ್ಲಿ ಕಾಣಿಸಿಕೊಳ್ಳುವ ಇನ್ನೊಂದು ಕಾವ್ಯ ಪ್ರಕಾರ ಬೆದಂಡೆ-ಆದರೆ ಬೆದಂಡೆಯಾಗಲಿ, ಚತ್ತಾಣವಾಗಲಿ ನಮಗೆ ಒಂದೂ ದೊರಕಿಲ್ಲವಾದ ಕಾರಣ ಅವುಗಳ ಸ್ವರೂಪವೇನಿದ್ದಿರಬಹುದೆಂಬುದನ್ನು ಕವಿರಾಜ ಮಾರ್ಗದಲ್ಲಿ ಮತ್ತು ಈಚಿನ ಆಕರಗಳಲ್ಲಿ ದೊರಕುವ ಉಲ್ಲೇಖಗಳನ್ನು ಆಶ್ರಯಿಸಿ ಊಹಿಸಬೇಕಾಗಿದೆ.

ಹಿನ್ನೆಲೆ

ಬದಲಾಯಿಸಿ

13ನೆಯ ಶತಮಾನದ ಜನ್ನದಲ್ಲಿ ಬರುವ ಚಿತ್ರಾಯತನ ಎಂಬ ಮಾತು ಚತ್ತಾಣದ ಸಂಸ್ಕೃತ ಸಮಾನ ರೂಪವೆಂಬುದರಲ್ಲಿ ಅನುಮಾನವಿಲ್ಲ. ಆದರೆ ಯಾವುದು ಮೂಲರೂಪ, ಯಾವುದರಿಂದ ಯಾವುದು ಬಂದಿದೆ ಎಂಬುದನ್ನು ನಿರ್ಣಯಿಸುವುದು ಕಷ್ಟ. ಕವಿರಾಜಮಾರ್ಗಕಾರನ ಪ್ರಕಾರ ಚತ್ತಾಣದಲ್ಲಿ ಕಂದಪದ್ಯಗಳೇ ಹೆಚ್ಚು. ಮಧ್ಯೆ ಅಲ್ಲಲ್ಲಿ ವೃತ್ತಗಳು, ಅಕ್ಕರ ಚೌಪದಿ, ಗೀತಿಕೆ, ತ್ರಿಪದಿಗಳು ಬರಬೇಕು. ಎಂದರೆ ಚತ್ತಾಣದಲ್ಲಿ ವೃತ್ತವೈವಿಧ್ಯವಿರುತ್ತದೆ. ಎರಡನೆಯ ನಾಗವರ್ಮ ತನ್ನ ಕಾವ್ಯಾವಲೋಕನದಲ್ಲಿ ಬೆದಂಡೆಯ ಲಕ್ಷಣವನ್ನು ಹೇಳಿದ ಬಳಿಕ, ಬಾಜನೆಗಬ್ಬದ ಲಕ್ಷಣವನ್ನು ಹೇಳುತ್ತಾನೆ; ಚತ್ತಾಣದ ಹೆಸರನ್ನು ಹೇಳುವುದಿಲ್ಲ. ಬಾಜನೆಗಬ್ಬದ ಹಲವು ರೀತಿಯ ಪದ್ಯಗಳಿರಬೇಕೆಂಬ ಅವನ ಮಾತನ್ನು ನೋಡಿದರೆ (ಪಲತೆದ ಪದ್ಯದಿಂದಂ......), ಬಾಜನೆಗಬ್ಬವೂ ಚತ್ತಾಣವೂ ಒಂದೇ ಆಗಿರುವಂತೆ ತೋರುತ್ತದೆ ಎಂದು ತೀ.ನಂ.ಶ್ರೀಕಂಠಯ್ಯನವರು ಊಹಿಸಿದ್ದಾರೆ. ಬೆದಂಡೆಯ ಉಲ್ಲೇಖನಗಳನ್ನು ನೋಡಿದರೆ ಅದೊಂದು ಹಾಡುಗಬ್ಬವಾದರೆ, ಚತ್ತಾಣ ಓದುಗಬ್ಬವಾಗಿರಬೇಕೆಂಬ ಕಲ್ಪನೆ ಸಹಜವಾಗಿಯೇ ಮೂಡುತ್ತದೆ. ಚತ್ತಾಣವೂ ಬಾಜನೆಗಬ್ಬವೂ ಒಂದೇ ಎಂದು ಒಪ್ಪಿಕೊಳ್ಳುವುದಾದರೆ, ಬಾಜನೆ ಎಂಬುದು ವಾಚನದ ತದ್ಭವವಾಗಿರುವುದರಿಂದ, ಚತ್ತಾಣ ವಾಚನಕ್ಕೆ ಅರ್ಹವಾದುದು. ಅದು ಒಂದು ಓದುಗಬ್ಬ ಎಂಬ ಊಹೆ ಸಮರ್ಥನೆ ಪಡೆಯುತ್ತದೆ. ಬೆದಂಡೆ ಹ್ರಸ್ವವಾದ ಕಾವ್ಯವೆಂದು ಹೇಳಲು ಅವಕಾಶವಿದೆ. ಚತ್ತಾಣದಲ್ಲಿ (ಬಾಜನೆಗಬ್ಬದಲ್ಲಿ) ವರ್ಣನೆಗಳಿರಬೇಕೆಂಬ ಕಾವ್ಯಾವಲೋಕನದ ಮಾತನ್ನು ನೋಡಿದರೆ, ಅದು ಬೆದಂಡೆಗಿಂತ ಗಾತ್ರದಲ್ಲಿ ದೊಡ್ಡದಾದ ಕಾವ್ಯವಾಗಿದ್ದಿರಬೇಕೆಂದು ತೀ.ನಂ.ಶ್ರೀಕಂಠಯ್ಯನವರ ತೀರ್ಮಾನ.

ಪ್ರಾಚೀನ ಕಾವ್ಯ ಮಾದರಿಗಳು

ಬದಲಾಯಿಸಿ

ಚತ್ತಾಣ ಮತ್ತು ಬೆದಂಡೆ ಕಾವ್ಯಗಳ ಒಂದೆರಡಾದರೂ ಮಾದರಿಗಳು ನಮಗೆ ದೊರಕುವವರೆಗೆ ಮೇಲಿನ ಲಕ್ಷಣಗಳನ್ನು ನಿರ್ಣಯವೆಂಬಂತೆ ಭಾವಿಸಬಾರದು. ಆ ಕಾವ್ಯಭೇದಗಳ ಬಗ್ಗೆ ಚರ್ಚೆ ನಡೆಸಿರುವ ವಿದ್ವಾಂಸರೂ ಸಂದೇಹಗಳೊಡನೆಯೇ ತಮ್ಮ ವಿಚಾರಗಳನ್ನು ಮಂಡಿಸಿದ್ದಾರೆ.[]

ಉಲ್ಲೇಖ

ಬದಲಾಯಿಸಿ
  1. ಶ್ರೀ ವಿಜಯ ವಿರಚಿತ ಕವಿರಾಜಮಾರ್ಗಂ


 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಚತ್ತಾಣ&oldid=1233522" ಇಂದ ಪಡೆಯಲ್ಪಟ್ಟಿದೆ