ಬೆದಂಡೆ ಒಂದು ಬಗೆಯ ಕಾವ್ಯ. ಕನ್ನಡ ಭಾಷೆಯಲ್ಲಿ ಹಿಂದೆ ಪ್ರಯೋಗದಲ್ಲಿದ್ದ ದೇಶೀಕಾವ್ಯಪದ್ಧತಿ. ನಾಗವರ್ಮನ ಕಾವ್ಯಾವಲೋಕನ, ನೃಪತುಂಗನ ಕವಿರಾಜಮಾರ್ಗ, ಕೇಶಿರಾಜಶಬ್ದಮಣಿದರ್ಪಣ ಗ್ರಂಥದಲ್ಲಿ ಬೆದಂಡೆ ಕುರಿತ ಪ್ರಸ್ತಾಪವಿದೆ. ಆ ಎಲ್ಲ ಉಲ್ಲೇಖಗಳನ್ನು ಸಮಾಲೋಚಿಸಿದಲ್ಲಿ ಹಾಡಿನ ರೂಪದ ಅಲಂಕಾರ ರಸಭರಿತವಾದ ಯಾವುದಾದರೊಂದು ಕಥಾನಕವನ್ನು ಒಳಗೊಂಡ ಕನ್ನಡದ ಕಂದಪದ್ಯ. ಮಾತ್ರಾವೃತ್ತಗಳಿಂದ ಕೂಡಿದ ಖಂಡಕಾವ್ಯದಂಥ ಹಾಡು ಗಬ್ಬವೇ ಬೆದಂಡೆ ಎಂದು ತಿಳಿದುಬರುತ್ತದೆ. ಇಂದು ಅಂಥ ಬೆದಂಡೆಗಬ್ಬಗಳು ಯಾವುವೂ ಉಪಲಬ್ಧವಿಲ್ಲ. ಹೀಗಾಗಿ ಕೇವಲ ಈಚಿನ ಆಕರಗಳಲ್ಲಿ ದೊರಕುವ ಉಲ್ಲೇಖಗಳನ್ನು ಆಶ್ರಯಿಸಿ ಊಹಿಸಬೇಕಾಗಿದೆ.

 
ಸಂದಿಸಿರೆ ಕಂದಮುಂ ಪೆಱ
ತೊಂದಱಕೆಯ ವೃತ್ತ ಜಾತಿಯುಂ, ಪದಮವು ತ
ಳ್ತೊಂದಿರೆ ಪನ್ನೆರಡುವರಂ -
ಸಂದುದು ಮೆಲ್ವಾಡೆನಿಕ್ಕುಮದು ಕನ್ನಡದೊಳ್ (952)
ಪದಿನಯ್ದುಮಿರ್ಪತಯ್ದುಂ
ಪದಂ ಯಥಾಸಂಭವಂ ಪ್ರಬಂಧದ ಮೆಯ್ಯೊಳ್
ಪುದಿದೊದವಿ ನೆಗೞ್ವೊಡಂತದು
ಸದಲಂಕಾರಂ ರಸಾಸ್ಪದಂ ಪಾಡಕ್ಕುಂ (953)
ಪಾಡುಗಳಿಂದಂ ತಱಸಲೆ
ಮಾಡಿದುದಂ ಪಾಡುಗಬ್ಬಮೆಂದು ಬುಧರ್ ಕೊಂ
ಡಾಡುವರಿನ್ನದು ದಲ್ ಮೆ
ಲ್ವಾಡುಂ ರೂಢಿಯ ಬೆದಂಡೆಗಬ್ಬಮುಮಕ್ಕುಂ (954)

ಕಂದವೂ ಬೇರೊಂದು ವೃತ್ತಜಾತಿಯೂ ಸೇರಿಕೊಂಡಿರುವುದು ಪದ, ಆ ಪದ, ಹನ್ನೆರಡು ಪರ್ಯಂತ ಸೇರಿ ಕೊಂಡಿರುವ ಕೃತಿ ಮೇಲ್ಪಾಡು, ಹದಿನೈದರಿಂದ ಇಪ್ಪತ್ತೈದರವರೆಗೂ ಪದಗಳು ಸೇರಿಕೊಂಡಿದ್ದ ರಸಾಲಂಕಾರ ಭರಿತವಾಗಿವುದು ಪಾಡುಗಬ್ಬ_ಆ ಪಾಡುಗಬ್ಬದಿಂದ ಮೇಲ್ಪಾಡೂ ಬೆದಂಡೆಗಬ್ಬವೂ ಆಗುವುವೆಂದು ನಾಗವರ್ಮ ನಿರೂಪಿಸುತ್ತಾನೆ. ಪದ, ಮೇಲ್ಪಾಡುಗಳಿಗೆ ಕಂದ ವೃತ್ತಜಾತಿಗಳ ಸಂಖ್ಯೆ ಮಾತ್ರ ಹೇಳಿ, ಆ ಮೇಲಿನ ಪಾಡು ಎಂಬುದಕ್ಕೆ ಅವು ಮಾತ್ರವಲ್ಲದೆ ರಸಾಲಂಕಾರಗಳಲ್ಲೂ ಕೂಡಿರುವಿಕೆಯನ್ನು ಲಕ್ಷಣದಲ್ಲಿ ನಿರೂಪಿಸಿದ್ದರಿಂದ ಪಾಡು ಯಾವುದಾದರೂ ಕಥೆಗೆ ಸಂಬಂಧಿಸಿದ ಕಾವ್ಯ ಪ್ರಕಾರವೆಂದು ತಿಳಿಯಬೇಕಾಗಿದೆ. ಅದೇ ಬೆಳೆದು ಪಾಡುಗಬ್ಬವಾಗುವುದೆಂದೂ ಅದರಿಂದ ಮೇಲ್ಪಾಡೂ ಬೆದಂಡೆಯೂ ಆಗುವುವೆಂದೂ ಹೇಳಿದ ಕಾರಣ ಬೆದಂಡೆ ಕಥಾ ರೂಪಕ ಖಂಡಕಾವ್ಯಮಾದರಿಯ ಒಂದು ಕಾವ್ಯ ಪ್ರಕಾರವೆಂದು ತಿಳಿಯಲು ಆಸ್ಪದವಾಗಿದೆ.

ನಾಗವರ್ಮ ಬೆದಂಡೆಗಬ್ಬದ ಸ್ವರೂಪಲಕ್ಷಣಗಳನ್ನು ಸ್ಪಷ್ಟವಾಗಿ ತಿಳಿಸದೆ ಇದ್ದರೂ ಅವನಿಗಿಂತಲೂ ಪ್ರಾಚೀನನಾದ ಕವಿರಾಜಮಾರ್ಗಕಾರ ಕಂದವೂ ವೃತ್ತವೂ ಒಂದೊಂದಾಗಿಯೂ ಇವುಗಳ ನಡುವೆ ಜಾತಿಪದ್ಯಗಳೂ ಸುಂದರವಾಗಿ ಸೇರಿ ಮನೋಹರವಾಗಿದ್ದರೆ ಬೆದಂಡೆಗಬ್ಬವೆಂದು ನಿರೂಪಿಸುತ್ತಾನೆ. ಕನ್ನಡ ಛಂದಸ್ಸುಗಳಾದ ಕಂದ ಮಾತ್ರಾವೃತ್ತಗಳನ್ನು ಒಳಗೊಂಡಿರಬೇಕೆಂಬ ನಾಗವರ್ಮನ ನಿರೂಪಕ್ಕೆ ಈ ಹೇಳಿಕೆ ಹೊಂದಿಕೆಯಾಗಿಯೇ ಇದೆ; ಅಲ್ಲದೆ ಮನೋಹರವಾಗಿರಬೇಕೆಂಬುದರಿಂದ ರಸಾಲಂಕಾರಭರಿತವಾಗಿರತಕ್ಕದ್ದೆಂದೂ ಅರ್ಥಮಾಡಬಹುದಾಗಿದೆ.

ಕವಿರಾಜಮಾರ್ಗಕಾರ ಹೇಳುವುದನ್ನು ಗಮನಿಸಿದಾಗ ಬೆದಂಡೆಯೆಂಬ ಕಾವ್ಯ ಪದ್ಧತಿ ಆ ಕಾಲದಲ್ಲಿ ಪ್ರಖ್ಯಾತವಾಗಿತ್ತೆಂದು ತಿಳಿಯಬಹುದು. ಶಬ್ದಮಣಿದರ್ಪಣದ ಶಬ್ಧಾರ್ಥ ನಿರ್ಣಯ ಪ್ರಕರಣದಲ್ಲಿ, ಬೆದಂಡೆಗೆ ವೈದಂಡಿಕಂ ಎಂಬ ಶಬ್ದಾರ್ಥಕೊಟ್ಟಿದೆ. ಕಿಟ್ಟಲ್ ನಿಘಂಟುಕಾರ ಬೆದಂಡೆ ವೈದಂಡಿಕದ ತದ್ಭವವೆಂದು ತಿಳಿಸುತ್ತಾನೆ. ದಂಡಿಕಾ, ದಂಡಿಗೆ ಎನ್ನುವುದು ವೀಣೆಯ ದಂಡಕ್ಕೆ, ವಿಗತ ದಂಡ, ಡಂಡ ಇಲ್ಲದ್ದು ಎಂದರೆ ವೀಣೆಯ ಹಿಮ್ಮೇಳವಿಲ್ಲದೆ, ಇತರ ದೇಸೇವಾದ್ಯಗಳಿಂದ ಕೂಡಿ ಹಾಡುವ ಒಂದು ಹಾಡುಗಬ್ಬದ ಪ್ರಭೇದವೇ ಬೆದಂಡೆಯೆಂದು ಊಹಿಸಬಹುದು. ಆದರೂ ಈ ಕಾವ್ಯದ ಒಂದೆರಡಾದರೂ ಮಾದರಿಗಳು ದೊರಕುವ ತನಕವೂ ಮೇಲಿನ ಲಕ್ಷಣಗಳನ್ನು ನಿರ್ಣಯವೆಂಬಂತೆ ಭಾವಿಸಲಾಗದು.

ಇದನ್ನೂ ನೋಡಿಸಂಪಾದಿಸಿ

ಚತ್ತಾಣ

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಬೆದಂಡೆ&oldid=780241" ಇಂದ ಪಡೆಯಲ್ಪಟ್ಟಿದೆ