ಶ್ರೀವಿಜಯ ಕನ್ನಡದ ಮೊಟ್ಟ ಮೊದಲ ಆಧಾರಗ್ರಂಥವಾಗಿರುವ 'ಕವಿರಾಜಮಾರ್ಗ'ದ ಕರ್ತೃ. ಕವಿರಾಜಮಾರ್ಗವು 'ದಂಡಿಯ'ಕಾವ್ಯಾದರ್ಶದ' ಅನುವಾದವಾಗಿದೆ. ಶ್ರೀವಿಜಯನು ಕವಿರಾಜಮಾರ್ಗದಲ್ಲಿ ಕನ್ನಡ ನಾಡು-ನುಡಿ ವರ್ಣನೆಯಿದೆ. ಕನ್ನಡ ನಾಡು ಕಾವೇರಿಯಿಂದ ಗೋದಾವರಿಯ ವರೆವಿಗೆ ಹರಡಿತ್ತು ಎಂಬ ಉಲ್ಲೇಖವಿದೆ. ಕನ್ನಡಿಗರ ಗುಣ ಸ್ವಭಾವ ಕುರಿತು ಹೇಳುತ್ತಾ, ಕವಿರಾಜಮಾರ್ಗಕಾರನು ತನ್ನ ಕಾಲದ ಭಾಷಾ ಸಾಹಿತ್ಯಗಳನ್ನು ಕುರಿತು ಅಮೂಲ್ಯವಾದ ವಿಷಯಗಳನ್ನು ತಿಳಿಸುತ್ತಾನೆ. ಕನ್ನಡದಲ್ಲಿ 'ಚತ್ತಾಣ', 'ಬೆದಂಡೆ' ಎಂಬ ಎರಡು ಕಾವ್ಯ ರೂಪಗಳನ್ನು ಹೆಸರಿಸಿ, ಇತರ ಸಾಹಿತ್ಯ ಪ್ರಕಾರಗಳನ್ನು ತಿಳಿಸುತ್ತಾನೆ.

ಸು. 850. ಪಂಪಪೂರ್ವಯುಗದ ಕವಿ. ಕವಿರಾಜ ಮಾರ್ಗ ಎಂಬ ಗ್ರಂಥದ ಕರ್ತೃ. ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ಹಲವು ಕಡೆ ಈ ಕವಿಯ ಹೆಸರು ಕಾಣಿಸಿಕೊಂಡಿದೆ. ಅನೇಕ ಪ್ರಮಾಣಗಳ ಆಧಾರದ ಮೇಲೆ ಕವಿರಾಜಮಾರ್ಗವನ್ನು ಬರೆದವನು ಶ್ರಿವಿಜಯ ಎಂದು ಅನೇಕ ವಿದ್ವಾಂಸರು ತರ್ಕಿಸಿದ್ದಾರೆ.

ಕವಿರಾಜಮಾರ್ಗ ಕಾವ್ಯ ಹಿನ್ನೆಲೆ

ಬದಲಾಯಿಸಿ

ನೃಪತುಂಗಸಭಾಸದನಾದ ಶ್ರೀವಿಜಯನ ವ್ಯಕ್ತಿತ್ವದ ಚಿತ್ರಣ ಕವಿರಾಜ ಮಾರ್ಗದಲ್ಲಿ ತಕ್ಕಮಟ್ಟಿಗೆ ವಿವರಪೂರ್ಣವಾಗಿ ಬಂದಿದೆ (3ನೆಯ ಪರಿಚ್ಛೇದ, ಪದ್ಯ 218-30). ಇವನು ವ್ಯಾಕರಣ ಕಾವ್ಯ ನಾಟಕ ಲೋಕಕಲೆಗಳಲ್ಲಿ ನಿಷ್ಣಾತ ; ಕವಿವೃಷಭರ ಪ್ರಯೋಗಗಳಲ್ಲಿ ಕೃತಪರಿಚಯ ಬಲನಾಗಿದ್ದ; ಲಕ್ಷ್ಯಲಕ್ಷಣಗಳಲ್ಲಿ ಅಭಿಜ್ಞ; ಸಮಸ್ತಭಾಷಾವಿಶೇಷ ವಿಷಯಕುಶಲಿ; ಪರಮಕಾರುಣಿಕ; ಅಸೂಯೆಯಿಲ್ಲದವನು; ಅನೇಕಗುಣ ಸಮನ್ವಿತನಾದ ಇವನು ಪುರುಷವ್ರತನಿಶ್ಚಿತ (ಎಂದರೆ ಆಜೀವಪರ್ಯಂತ ಬ್ರಹ್ಮಚಾರಿ; ಜೈನಧರ್ಮಾನುಯಾಯಿಗೆ ಮಾತ್ರ ಬಳಸಲಾಗುತ್ತಿದ್ದ ವಿಶಿಷ್ಟ ಪಾರಿಭಾಷಿಕ ಪದ ಇದು). ಕವಿರಾಜಮಾರ್ಗದ ರಚನೆಯ ಕಾಲದಲ್ಲಿ (ಸು. 815-77) ವೈದಿಕಮತಾನುಯಾಯಿಯಾಗಿದ್ದ ನೃಪತುಂಗನೇ ಗ್ರಂಥಕರ್ತನಾಗಿದ್ದರೆ, ಜೈನನಾದ ಸಭಾಸದನೊಬ್ಬನ ವರ್ಣನೆ ಕೃತಿಯಲ್ಲಿ ಬರುವುದು ಅಸಂಭವ ಹಾಗೂ ಅಪ್ರಸಕ್ತ. ಶ್ರೀವಿಜಯನೇ ಕವಿರಾಜಮಾರ್ಗದ ಕರ್ತೃ ಎಂದು ಕೆಲವು ವಿದ್ವಾಂಸರು ಬಹು ಹಿಂದಿನಿಂದಲೂ ಮಾಡಿಕೊಂಡು ಬರುತ್ತಿರುವ ವಾದಕ್ಕೆ ಈ ಆಂತರಿಕಪ್ರಮಾಣ ತೀರ್ಮಾನದ ಸ್ವರೂಪವನ್ನು ಕೊಡಬಲ್ಲದ್ದಾಗಿದೆ.

ಕವಿಕಾಲ ಹಿನ್ನೆಲೆ

ಬದಲಾಯಿಸಿ
  1. 3ನೆಯ ಮಂಗರಸ (ಸು. 1508) ತನ್ನ ನೇಮಿಜಿನೇಶ ಸಂಗತಿಯಲ್ಲಿಯೂ ದೊಡ್ಡಯ್ಯ (ಸು. 1550) ತನ್ನ ಚಂದ್ರಪ್ರಭಚರಿತೆಯಲ್ಲಿಯೂ ಚಂದ್ರಪ್ರಭ ಪುರಾಣವನ್ನು ಬರೆದ ಒಬ್ಬ ಶ್ರೀವಿಜಯನನ್ನು ಹೊಗಳಿದ್ದಾರೆ. ಈ ಕಾವ್ಯ ದೊರೆತಿಲ್ಲ. ಕವಿರಾಜಮಾರ್ಗದಲ್ಲಿ ಹೆಸರಿಸಿರುವ ಪರಮಶ್ರೀವಿ ಜಯಕವೀಶ್ವರನೇ ಪುರಾಣಕರ್ತನೆಂದೂ ಈ ಪುರಾಣಕರ್ತನೂ ಕವಿರಾಜ ಮಾರ್ಗಕಾರನೂ ಒಬ್ಬನೇ ವ್ಯಕ್ತಿಯೆಂದೂ ಊಹಿಸಲಾಗಿದೆ. ಆದರೆ ಹೀಗೆಂದು ಖಂಡಿತವಾಗಿ ಹೇಳಲು ಯಾವ ಆಧಾರವೂ ಇಲ್ಲ.
  2. ಜೀವಂಧರಚರಿತೆಯ ಭಾಸ್ಕರ ಕವಿ (ಸು. 1424) ವಿಜಯನ ಭಾವನನ್ನು ಸ್ಮರಿಸಿದ್ದಾನೆ. ದೇವಪ್ಪ ಕವಿ (ಸು. 1540) ಜೈನಪುರಾಣಕರ್ತರ ಸಾಲಿನಲ್ಲಿ ವಿಜಯನನ್ನು ಹೆಸರಿಸಿದ್ದಾನೆ. ಈ ವಿಜಯನು ಚಂದ್ರಪ್ರಭಪುರಾಣದ ಕರ್ತೃ ಶ್ರೀವಿಜಯನಾಗಿರಬಹುದು.

ಶಾಸನಗಳಲ್ಲಿ ಶ್ರೀವಿಜಯನ ಉಲ್ಲೇಖ

ಬದಲಾಯಿಸಿ

ಶ್ರವಣಬೆಳಗೊಳದ ಶಾಸನವೊಂದರಲ್ಲಿ (ಸು. 977. ಜೈನಆಚಾರ್ಯ ಮಲ್ಲಿಷೇಣನ ಪ್ರಶಸ್ತಿಯನ್ನು ಕುರಿತದ್ದು) ಒಬ್ಬ ಶ್ರೀವಿಜಯನ ಉಲ್ಲೇಖವಿದೆ. ಈತ ಯಾರೋ ತಿಳಿಯದು.

ರಾಜಾಶ‍್ರಯ ಹಿನ್ನೆಲೆ

ಬದಲಾಯಿಸಿ

ರಾಷ್ಟ್ರಕೂಟ 3ನೆಯ ಇಂದ್ರನ (914-29) ದಂಡನಾಯಕ ಶ್ರೀವಿಜಯನ ಪ್ರಶಸ್ತಿಯುಳ್ಳ ಶಾಸನವೊಂದು ಕಡಪ ಜಿಲ್ಲೆಯ ದಾನವುಲಪಾಡು ಎಂಬ ಸ್ಥಳದಲ್ಲಿ ದೊರೆತಿದೆ. ಶಾಸನದಲ್ಲಿ ಈತನಿಗೆ ಅನುಪಮ ಕವಿ, ಅಱಿವಿಂಗೋಜ ಎಂಬ ವಿಶೇಷಣಗಳಿವೆ; ಈತ ಸಂನ್ಯಾಸವನ್ನು ಕೈಗೊಂಡು ಮೋಕ್ಷಪದವಿಯನ್ನು ಹೊಂದಿದನೆಂದು ಹೇಳಿದೆ. ಇಲ್ಲಿನ ವಿಶೇಷಣಗಳು ನೃಪತುಂಗ ಸಭಾಸದನವರ್ಣನೆಯನ್ನು ನೆನಪಿಗೆ ತರುತ್ತವೆ. ನೃಪತುಂಗ ಸಭಾಸದ ಕವಿರಾಜಮಾರ್ಗಕಾರ ಶ್ರೀವಿಜಯನೂ ಈ ಶಾಸನದ ಶ್ರೀವಿಜಯನೂ ಒಬ್ಬನೇ ಇರಬಹುದು ಎಂಬ ಸಂದೇಹಕ್ಕೂ ಅವಕಾಶವಿದೆ. ನೃಪತುಂಗಸಭಾಸದ ಪೂರ್ವವಯಸ್ಸಿ ನವನಾಗಿದ್ದು ಇಂದ್ರನ ಕಾಲಕ್ಕೆ ವೃದ್ಧನಾಗಿ, ಸಂನ್ಯಾಸಿಯಾಗಿ ಸಮಾಧಿ ಮರಣವನ್ನು ಹೊಂದಿರಬಹುದು.[]

ಉಲ್ಲೇಖ

ಬದಲಾಯಿಸಿ
  1. ಶ್ರೀವಿಜಯ ವಿರಚಿತ ಕವಿರಾಜಮಾರ್ಗಂ ಮೂಲ ಕೃತಿ


 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: