ಗೆದ್ದಲು

(ಗೆದ್ದಲು ಹುಳು ಇಂದ ಪುನರ್ನಿರ್ದೇಶಿತ)
ಗೆದ್ದಲು
Temporal range: 228–0 Ma Late Triassic - Recent
Formosan subterranean termite soldiers (red colored heads) and workers (pale colored heads).
Scientific classification
ಸಾಮ್ರಾಜ್ಯ:
ವಿಭಾಗ:
ವರ್ಗ:
Subclass:
ಕೆಳವರ್ಗ:
ಮೇಲ್ಗಣ:
ಗಣ:
ಕೆಳಗಣ:
Families

Cratomastotermitidae
Mastotermitidae
Termopsidae
Archotermopsidae
Hodotermitidae
Stolotermitidae
Kalotermitidae
Archeorhinotermitidae
Stylotermitidae
Rhinotermitidae
Serritermitidae
Termitidae

ಗೆದ್ದಲುಒಂದು ಜಾತಿಯ ಇರುವೆಯನ್ನು ಹೋಲುವ ಜೀವಿ.ಇದು ಸತ್ತ ಸಸ್ಯಜನ್ಯ ವಸ್ತುಗಳನ್ನು ತಿಂದು ಜೀವಿಸುತ್ತವೆ.ಸುಮಾರು ೪೦೦೦ ಪ್ರಭೇದಗಳ ಗೆದ್ದಲುಗಳನ್ನು ಗುರುತಿಸಲಾಗಿದೆ.ಇವುಗಳು ಹುತ್ತ ಎಂಬ ಒಂದು ರೀತಿಯ ಮಣ್ಣಿನ ಗೋಪುರಗಳನ್ನು ನಿರ್ಮಿಸುತ್ತವೆ. ಪುರಾತನ ಕಾಲದಿಂದಲೂ ಗೆದ್ದಲು ಮಾನವನು ಬೆಳೆಯುವ ಆಹಾರ ಬೆಳೆಗಳು ಮತ್ತು ವಸ್ತು ಸಾಮಗ್ರಿಗಳನ್ನು ತಿಂದು ನಷ್ಟ ಮಾಡುತ್ತಿವೆ. ಗೆದ್ದಲನ್ನು ಸಂಸ್ಕೃತದಲ್ಲಿ ಕಾಷ್ಟ ಹರಿಕ ವೆಂದು ಕರೆಯುತ್ತಾರೆ. ಅಂದರೆ ಒಣಮರ ಅಥವಾ ಕಟ್ಟಿಗೆ ತಿನ್ನುವ ಹುಳುಗಳು ಎಂದರ್ಥ. ವಾಲ್ಮೀಕಿ ಮಹರ್ಷಿ ತಪಸ್ಸಿನಲ್ಲಿದ್ದಾಗ ಅವರ ಮೈಮೇಲೆ ಗೆದ್ದಲು ಹುತ್ತ ಕಟ್ಟಿದ್ದುದರಿಂದ ಅವರಿಗೆ ವಾಲ್ಮೀಕಿ ಎಂದು ಹೆಸರು ಬಂದಿತೆಂಬುದು ಸರ್ವವಿದಿತ.

ಪ್ರಾಚೀನತೆ

ಬದಲಾಯಿಸಿ

ಪುರ್ವಜ ಗೆದ್ದಲುಗಳು ಸುಮಾರು 200 ದಶಲಕ್ಷ ವರ್ಷಗಳ ಹಿಂದೆಯೇ ಉದ್ಭವಿಸಿದುವು. ಆದರೆ 17ನೆಯ ಶತಮಾನದಿಂದ ಇತ್ತೀಚೆಗೆ ಗೆದ್ದಲುಗಳು ಪ್ರಕೃತಿಯಲ್ಲಿ ಪ್ರಧಾನವಾಗಿ ಕಾಣಿಸಿಕೊಂಡಿವೆ. ಗೆದ್ದಲು ಸಂಘಜೀವಿಗಳು. ಆಂಗ್ಲ ಭಾಷೆಯಲ್ಲಿ ಟರ್ಮೈಟ್ಸ್‌ ಎಂದು ಕರೆಯುತ್ತಾರೆ. ಇದರ ಮತ್ತೊಂದು ಸಾಮಾನ್ಯ ಹೆಸರು “ವೈಟ್ ಆಂಟ್ಸ್‌”. ಅಂದರೆ ಬಿಳಿ ಇರುವೆಗಳು. ಆದರೆ ಈ ಹೆಸರು ಗೆದ್ದಲುಗಳಿಗೆ ಅನ್ವಯಿಸುವುದಿಲ್ಲ. ಕಾರಣ ಇವು ಮಾಸಲು ಬಿಳುಪಿನಿಂದ ಹಳದಿ ಕಂದು ಬಣ್ಣದ ವರೆಗಿರುತ್ತವೆ ಮತ್ತು ಇರುವೆ ಗುಂಪಿಗೆ ಸೇರುವುದಿಲ್ಲ. ಗೂಡಿನಲ್ಲಿ ಬೆಳೆಯುತ್ತಿರುವ ಗೆದ್ದಲಿನ ಮರಿಗಳು ಮತ್ತು ಅಪ್ಸರೆಗಳು ಮಾತ್ರ ಬಿಳುಪಾಗಿರುತ್ತವೆ. ಕೀಟಗಳ ಸಾಮಾನ್ಯ ವಿಕಾಸದಲ್ಲಿ ಗೆದ್ದಲುಗಳ ಸ್ಥಾನ ಇರುವೆಗಳಿಗಿಂತ ಪೂರ್ವದ್ದು, ತಮ್ಮ ಜೀವನದ ಬೆಳೆವಣಿಗೆ ಹಂತಗಳಲ್ಲಿ ಅಪೂರ್ಣ ರೂಪಾಂತರವುಳ್ಳ ಆದಿಕಾಲದ “ಐಸಾಪ್ಟೆರಾ” (ಸಮಪಕ್ಷೀಯ) ಗಣಕ್ಕೆ ಸೇರಿವೆ. ಗೆದ್ದಲಿನ ಹತ್ತಿರದ ಸಂಬಂಧಿ ಜಿರಳೆಗಳು.

ಸಾಮಾನ್ಯವಾಗಿ ಗೆದ್ದಲಿಗೆ ಒಣಮರಗಳೆಂದರೆ ಅಚ್ಚುಮೆಚ್ಚು. ಅದರಿಂದ ಒಣಮರ, ಗಿಡ, ಬಳ್ಳಿ, ಒಣೆಲೆ, ಹುಲ್ಲು ಮುಂತಾದ ಆಹಾರದ ಮೇಲೆ ಮಣ್ಣಿನ ಪೊರೆಯಿಂದ ಮುಚ್ಚಿ ಹೆಚ್ಚಿನ ಸಂಖ್ಯೆಯಲ್ಲಿ ಮುತ್ತಿ ತಿನ್ನುವುದರಿಂದ ಎಲ್ಲಕ್ಕೂ ಗೆದ್ದಲು ಹಿಡಿದಿದೆ ಎನ್ನುವ ವಾಡಿಕೆ.

ಗೆದ್ದಲು ಜಿರಳೆಗಳಂತೆ ನಿಶಾಜೀವಿಗಳು. ಏಕೆಂದರೆ ಇವು ಸೂರ್ಯನ ಜಳವನ್ನು ತಡೆಯುವುದಿಲ್ಲ. ಮಳೆ ನೀರು ಇವುಗಳ ಮೇಲೆ ಬೀಳದಂತೆ ಗೂಡುಗಳಲ್ಲಿದ್ದು ರಕ್ಷಣೆ ಪಡೆಯುತ್ತವೆ. ಉಸಿರಾಟದಿಂದ ಹೊರ ಹೊಮ್ಮುವ ಗಾಳಿ ಇಂಗಾಲದ ಡೈ ಆಕ್ಸೈಡ್ನಿಂದ ಕೂಡಿರುತ್ತದೆ. ಇದರಿಂದಾಗಿ ಶರೀರ ಸೂಕ್ಷ್ಮವಾಗಿದ್ದು ಬಿಸಿಲಿಗೆ ಬಿಟ್ಟಾಗ ಬದುಕಲಾರವು. ಆದುದರಿಂದ ತಾವು ಓಡಾಡುವಲ್ಲಿ ಮಣ್ಣಿನ ಪೊರೆಯನ್ನು ಕಟ್ಟಿಕೊಂಡು ರಕ್ಷಣೆ ಪಡೆಯುತ್ತವೆ.

ಪ್ರಬೇಧಗಳು

ಬದಲಾಯಿಸಿ

ಗೆದ್ದಲು ಉಷ್ಣ ಮತ್ತು ಸಮಶೀತೋಷ್ಣ ವಲಯದಲ್ಲಿ ಜೀವಿಸುವ ಕೀಟಗಳು. ಗೆದ್ದಲಿನ ಅನೇಕ ಪ್ರಭೇದಗಳು ಉಷ್ಣವಲಯದ ಮಳೆ ಆಶ್ರಿತ ಅರಣ್ಯಪ್ರದೇಶಗಳಲ್ಲಿ ವ್ಯಾಪಿಸಿವೆ. ಆಫ್ರಿಕಖಂಡದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಲಿನ ಪ್ರಬೇಧಗಳನ್ನು ಗುರ್ತಿಸಿದ್ದಾರೆ. ಇದೇ ಬಗೆಯ ವಿಸ್ತಾರವನ್ನು ದಕ್ಷಿಣ ಅಮೆರಿಕದ ಅಮೆಜಾ಼ನ್ ನದಿ ತೀರಪ್ರದೇಶದ ಕಾಡುಗಳಲ್ಲಿ ಕಾಣಬಹುದಾಗಿದೆ. ಆಸ್ಟ್ರೇಲಿಯ ಮತ್ತು ಏಷ್ಯಾಖಂಡಗಳಲ್ಲಿಯೂ ಹೆಚ್ಚಿನ ಪ್ರಬೇಧಗಳನ್ನು ಗುರುತಿಸಲಾಗಿದೆ. ಆಫ್ರಿಕ ಮತ್ತು ಏಷ್ಯದ ಉಷ್ಣವಲಯಗಳಲ್ಲಿ ಹುತ್ತಗಳನ್ನು ಕಟ್ಟುವ ಮತ್ತು ಶಿಲೀಂದ್ರವನ್ನು ಬೆಳೆಸುವ ಗೆದ್ದಲಿನ ಪ್ರಬೇಧಗಳಿವೆ.

ಈವರೆಗೆ 2,600ಕ್ಕೂ ಹೆಚ್ಚು ಗೆದ್ದಲಿನ ಪ್ರಬೇಧಗಳನ್ನು ಗುರುತಿಸಲಾಗಿದ್ದು. ಇವುಗಳನ್ನು 6 ಕುಟುಂಬಗಳಾಗಿ ವಿಂಗಡಿಸಲಾಗಿದೆ.

  1. ಮ್ಯಾಸ್ಟ್ರೊಟರ್ಮೈಟಿಡಿ,
  2. ಕ್ಯಾಲೊಟರ್ಮೈಟಿಡಿ,
  3. ಟರ್ಮೊಪ್ಸಿಡಿ,
  4. ಹೊಡೊಟರ್ಮೈಟಿಡಿ
  5. ರೈನೊ ಟರ್ಮೈಟಿಡಿ

೩ಟರ್ಮೈಟಿಡಿ. ಗೆದ್ದಲಿನ ಸಾಮಾನ್ಯವಿಕಾಸದಲ್ಲಿ ಮೊದಲ ಐದು ಕುಟುಂಬಗಳನ್ನು ಆದಿಕಾಲದ, ಕೆಳದರ್ಜೆಯ ಸಣ್ಣ ಸಣ್ಣ ಗೂಡುಗಳಲ್ಲಿ ವಾಸಿಸುವ ಗೆದ್ದಲು ಕುಟುಂಬಗಳೆಂದು ಪರಿಗಣಿಸಲಾಗಿದೆ. ಇವುಗಳು ತಿಂದ ಸೆಲ್ಯೂಲೋಸ್ ಆಹಾರವನ್ನು ಜೀರ್ಣಿಸಲು ಸಹಜೀವಿಗಳಾದ ಟ್ರೈಕೊಮೊನಾಡ್, ಆಕ್ಸಿಮೊನಾಡ್, ಹೈಪರ್ಮ್ಯಾಸ್ಟ್ರಿಗೊ ಟ್ರೈಕೊನಿಂಫ್ ಜಾತಿಯ ‘ಪ್ರೊಟೊಜೋವ’ ಗುಂಪಿನ ಕಶಾಂಗ ಏಕಾಣು ಜೀವಿಗಳು ಸಾಮಾನ್ಯವಾಗಿ ಕರುಳಿನಲ್ಲಿ ನೆಲೆಸಿರುತ್ತವೆ.

ಟರ್ಮೈಟಿಡಿ ಕುಟುಂಬಗಳ ಪ್ರಬೇಧಗಳು ಮೇಲ್ದರ್ಜೆಯ ಗೆದ್ದಲುಗಳಾಗಿದ್ದು ಎಲ್ಲಾ ಬಗೆಯ ಗಿಡ ಮರ ಸಾವಯವ ವಸ್ತುಗಳನ್ನು ತಿಂದು ಜೀವಿಸಿ ಬದುಕುವ ವೈವಿಧ್ಯತೆಯನ್ನು ಪಡೆದಿವೆ. ಗೂಡುಗಳನ್ನು ಭೂಮಿಯೊಳಗೆ ಮತ್ತು ಮರಗಳಲ್ಲಿ ಅನೇಕ ವಿನ್ಯಾಸಗಳಲ್ಲಿ ಕಟ್ಟುತ್ತವೆ. ಇವುಗಳು ತಿಂದ ಆಹಾರವನ್ನು ಜೀರ್ಣಿಸಲು ಸಹಜೀವಿಗಳಾಗಿ ಬ್ಯಾಕ್ಟೀರಿಯ ಶಿಲೀಂದ್ರ ಮತ್ತು ಸೈರೋಕೀಟ್ಸ್‌ ಸೂಕ್ಷ್ಮಾಣುಗಳನ್ನು ಅವಲಂಬಿಸಿರುತ್ತವೆ.

ಗೆದ್ದಲುಗಳ ಆಹಾರ ಸೇವನೆಯಲ್ಲಿ ಎರಡು ವಿಧಗಳಿವೆ. ಕೆಲಸಗಾರ ಗೆದ್ದಲೇ ಗಿಡಮರಗಳ ತೊಗಟೆಯನ್ನು ಕೆರೆದು ತಂದು ಸ್ವತಃ ತಿನ್ನುವುದೇ ಅಲ್ಲದೇ ಗೂಡಿನಲ್ಲಿರುವ ಇತರ ಕೆಲಸಗಾರ ಗೆದ್ದಲಿಗೆ ಒದಗಿಸುತ್ತವೆ. ಮರಿಹುಳು, ಅಪ್ಸರೆಗಳು, ಸೈನಿಕಗೆದ್ದಲು ಮತ್ತು ಸಂತಾನೋತ್ಪಾದಕರುಗಳಿಗೆ ಆಹಾರವನ್ನು ಸ್ವತಃ ದೊರಕಿಸಿಕೊಂಡು ತಿನ್ನುವ ಚೈತನ್ಯವಿರುವುದಿಲ್ಲ. ಆದ್ದರಿಂದ ಕೆಲಸಗಾರ ಗೆದ್ದಲು ತಾನು ತಿಂದ ಆಹಾರವನ್ನು ಜಠರದಲ್ಲಿ ಅರೆದು ನಂತರ ದ್ರವರೂಪದಲ್ಲಿ ಇವುಗಳಿಗೆ ಒದಗಿಸುತ್ತವೆ. ಇದರಿಂದಾಗಿ ಕಶಾಣು ಏಕಾಣು ಜೀವಿಗಳು ಗೆದ್ದಲಿನ ಅನ್ನನಾಳವನ್ನು ಸೇರಿ ಸೆಲ್ಯೂಲೋಸ್ ಆಹಾರವನ್ನು ಜೀರ್ಣಿಸಲು ನೆರವಾಗುತ್ತವೆ.

ಜೀವನಕ್ರಮ

ಬದಲಾಯಿಸಿ

ಗೆದ್ದಲಿನ ಸಾಮಾಜಿಕ ಜೀವನ ವೈಶಿಷ್ಟ್ಯ ಪುರ್ಣವಾದುದು. ಗೂಡುಗಳ ವಿನ್ಯಾಸ, ರೆಕ್ಕೆಹುಳುಗಳ ಹಾರಾಟ, ವಸಾಹತುಗಳ ಸ್ಥಾಪನೆ, ಸಂಘಜೀವನ, ಕೆಲಸದ ಹಂಚಿಕೆ, ಆಹಾರ ಶೇಖರಣೆ, ಜೀರ್ಣಕ್ರಿಯೆಗಾಗಿ ಸಹಜೀವಿಗಳ ಅವಲಂಬನೆ, ಶಿಲೀಂದ್ರ ತೋಟಗಳನ್ನು ಬೆಳೆಸುವಿಕೆ, ಸಹಕಾರ ಬಾಳ್ವೆ ಮತ್ತು ಶಿಸ್ತು ಮುಂತಾದ ಅಂಶಗಳನ್ನು ಸಾಮಾಜಿಕ ಕೀಟಗಳಲ್ಲಿ ಗೆದ್ದಲಿನ ವಸಾಹತುವಿನಲ್ಲಿ ಮಾತ್ರ ಸ್ಪಷ್ಟವಾಗಿ ಕಾಣಬಹುದು. ಗೆದ್ದಲು ಸಂಘ ಜೀವಿ. ತನ್ನದೇ ಆದ ವಸಾಹತುವಿನಲ್ಲಿ ಮಾನವ ಸಮಾಜಕ್ಕಿಂತಲೂ ಅತ್ಯಂತ ಸುವ್ಯವಸ್ಥಿತವಾದ ಕುಟುಂಬ ಜೀವನ ನಡೆಸುವ ಕೀಟ. ಗಟ್ಟಿಮಣ್ಣಿನಿಂದ ನಿರ್ಮಿಸಿರುವ ಗೂಡುಗಳೇ ಇವುಗಳ ವಾಸಸ್ಥಾನ. ಗೆದ್ದಲಿನ ಗೂಡು ಅಭೇದ್ಯ ಕೋಟೆ.

ಗೆದ್ದಲಿನ ವಸಾಹತುವಿನಲ್ಲಿ ಪ್ರಧಾನವಾಗಿ ಎರಡು ಬಗೆಯ ಗೆದ್ದಲಿನ ಜಾತಿಗಳಿರುತ್ತವೆ. ರೆಕ್ಕೆಗಳಿರುವ ಸಂತಾನೋತ್ಪಾದಕರು (ಗಂಡು ಮತ್ತು ಹೆಣ್ಣು ಸಮಸಂಖ್ಯೆಯಲ್ಲಿ) ಮತ್ತು ರೆಕ್ಕೆಗಳಿಲ್ಲದ ಬರಡು ಗೆದ್ದಲುಗಳು (ಕೆಲಸಗಾರ ಮತ್ತು ಸೈನಿಕರು). ಒಟ್ಟಾರೆ ಗೆದ್ದಲಿನ ವಸಾಹತುವಿನಲ್ಲಿ ರಾಜ, ರಾಣಿ, ಕೆಲಸಗಾರ ಮತ್ತು ಸೈನಿಕರೆಂದು ನಾಲ್ಕು ಪ್ರಕಾರಗಳನ್ನು ಸ್ಪಷ್ಟವಾಗಿ ನೋಡಬಹುದು. ಇವು ಭಿನ್ನ ಭಿನ್ನ ಕೆಲಸಗಳನ್ನು ನಿರ್ವಹಿಸುತ್ತವೆ. ಕಾರ್ಯಸ್ವರೂಪಕ್ಕನುಗುಣವಾಗಿ ಅವುಗಳ ಶರೀರ ರಚನೆಗೊಂಡಿದೆ. ಗೆದ್ದಲಿನ ವಸಾಹತುವಿನಲ್ಲಿ ಸಾಮಾನ್ಯವಾಗಿ ಒಂದೇ ರಾಜ ಮತ್ತು ರಾಣಿಗಳಿದ್ದು ಕೆಲಸಗಾರರು ಶೇ. 80 ರಷ್ಟು ಸಂಖ್ಯೆ ಇರುತ್ತವೆ. ವಸಾಹತುವಿನ ರಕ್ಷಣೆಗೆ ಬೇಕಾಗುವಷ್ಟು ಸುಮಾರು ಶೇ. 12-15ರಷ್ಟು ಸಂಖ್ಯೆ ಮಾತ್ರವಿರುತ್ತವೆ. ಪ್ರತಿಯೊಂದು ಗೆದ್ದಲೂ ವಸಾಹತುವಿನಲ್ಲಿ ತನ್ನ ಜವಾಬ್ದಾರಿಯನ್ನು ಅರಿತು ಶಿಸ್ತಿನಿಂದ ತನ್ನ ಕೆಲಸವನ್ನು ನಿರ್ವಹಿಸುತ್ತದೆ.

ಸಂತಾನೋತ್ಪತ್ತಿ

ಬದಲಾಯಿಸಿ

ಸಂತಾನೋತ್ಪಾದಕ ರೆಕ್ಕೆಯುಳ್ಳ ಗೆದ್ದಲುಗಳಲ್ಲಿ ಪ್ರಬಲವಾದ 2 ಸಂಯುಕ್ತ ಕಣ್ಣುಗಳಿಂದ ಕೂಡಿ ಎರಡು ಜೊತೆ ಸರಳ ಕಣ್ಣುಗಳಿರುತ್ತವೆ. ಮಾಸಲು ಹಳದಿಯಿಂದ ಕಂದು ಬಣ್ಣವಿರುತ್ತವೆ. ಎರಡು ಜೊತೆ ಸಾಮಾನ್ಯ ನರಗಳುಳ್ಳ ಶರೀರದಿಂದ ಬೇಗ ಕಳಚುವಂತಹ ಪಾರದರ್ಶಕ ರೆಕ್ಕೆಗಳಿವೆ. ಸಂತಾನೋತ್ಪಾದಕರು ರೆಕ್ಕೆಹುಳುಗಳಾಗಿ ವರ್ಷಕ್ಕೊಂದಾವರ್ತಿ ಮಳೆಗಾಲದ ಮುಸ್ಸಂಜೆಯಲ್ಲಿ ಗೂಡುಗಳಿಂದ ಹಿಂಡು ಹಿಂಡಾಗಿ ಹೊರಬಂದು ಬೆಳಕಿನಲ್ಲಿ ಹಾರಾಡಿ ಗಂಡು ಮತ್ತು ಹೆಣ್ಣು ಜೊತೆಗೂಡಿ ನಂತರ ರೆಕ್ಕೆಗಳನ್ನು ಕಳಚಿ ಸೂಕ್ತ ಸ್ಥಳವನ್ನು ಗುರ್ತಿಸಿ ಭೂಮಿಯಲ್ಲಿ ಸಣ್ಣಗೂಡನ್ನು ಕಟ್ಟಲು ಪ್ರಾರಂಭಿಸುತ್ತವೆ. ರೆಕ್ಕೆಹುಳುಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಳಕಿನಲ್ಲಿ ಹಾರಾಡುವುದರಿಂದ ಇವುಗಳನ್ನು “ರೆಕ್ಕೆಹುಳು” ಅಥವ “ಈಚಲುಗಳು” ಎಂದು ಕರೆಯುವ ವಾಡಿಕೆ. ಇವುಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾರಾಡುವುದರಿಂದ ಅನೇಕ ಶತೃಪ್ರಾಣಿಗಳಾದ ಕಪ್ಪೆ, ಓತಿಕ್ಯಾತ, ಪಕ್ಷಿಗಳು, ಕೀಟಗಳು ಆಕರ್ಷಿತವಾಗಿ ರೆಕ್ಕೆಹುಳುಗಳು ಹಾರಾಡಿ ಕೆಳಗೆ ಬಿದ್ದ ತಕ್ಷಣ ಹಿಡಿದು ತಿನ್ನುತ್ತವೆ. ಹೆಚ್ಚಿನ ಸಂಖ್ಯೆಯಲ್ಲಿ ರೆಕ್ಕೆಹುಳುಗಳು ಅನೇಕ ಪ್ರಾಣಿಗಳಿಗೆ ಪ್ರಿಯವಾದ ಆಹಾರವಾಗುತ್ತವೆ.

ಗಂಡು ಹೆಣ್ಣುಗಳು ಜೊತೆಗೂಡಿ ಸಣ್ಣ ಗೂಡನ್ನು ತೋಡಿ ನಂತರ ಗಂಡು ಹೆಣ್ಣಿನೊಡನೆ ಸಂಭೋಗ ನಡೆಸಿದ ಕೆಲವು ದಿನಗಳಲ್ಲಿ ಮೊಟ್ಟೆ ಇಡಲು ಪ್ರಾರಂಭಿಸುತ್ತವೆ. ರಾಣಿ ಮೊದಮೊದಲು ಕೇವಲ 20-25 ಮೊಟ್ಟೆಗಳನ್ನಿಡುತ್ತದೆ. ಈ ಮೊಟ್ಟೆಗಳಿಂದ ಮೊದಲ ಕುಟುಂಬದ ಬೆಳೆವಣಿಗೆಗಾಗಿ ಬರಡು ಗೆದ್ದಲು ಮಾತ್ರ ಹುಟ್ಟುತ್ತವೆ. ನಂತರ ರಾಣಿ ಗರ್ಭ ಧರಿಸಿ, ಅಂಡಾಶಯ ಬೆಳೆದು ಹೊಟ್ಟೆ ಅಸಂಖ್ಯಾತ ಮೊಟ್ಟೆಗಳಿಂದ ತುಂಬಿ ಜೀವಮಾನವೆಲ್ಲ ಮೊಟ್ಟೆ ಇಡುವುದೇ ಇದರ ಕೆಲಸವಾಗಿ ಗೆದ್ದಲನ್ನು ಉತ್ಪಾದಿಸುವ ಯಂತ್ರವಾಗುತ್ತದೆ. ರಾಣಿಗೆದ್ದಲು ಸುಮಾರು 9-10 ಸೆಂ.ಮೀ. ಉದ್ದವಿರುತ್ತದೆ. ಚಲಿಸಲಾಗುವುದಿಲ್ಲ. ಒಂದು ದಿವಸಕ್ಕೆ ಸುಮಾರು 15,000-20,000 ಮೊಟ್ಟೆಗಳನ್ನಿಡುತ್ತದೆ. ರಾಣಿಗೆದ್ದಲನ್ನು ತಾಯಿ ಈಚಲು ಅಥವಾ ತುಪ್ಪದ ಹುಳು ಎಂದು ಕರೆಯುತ್ತಾರೆ. ರಾಜನಲ್ಲಿ ಜನನೇಂದ್ರಿಯ ಅಭಿವೃದ್ಧಿಯಾಗಿರುವುದರಿಂದ ರಾಣಿಯ ಸುತ್ತ ಓಡಾಡಿಕೊಂಡು, ರಾಣಿಯನ್ನು ಕ್ಷಣ ಮಾತ್ರವೂ ಬಿಟ್ಟಿರಲಾರ. ಆಗಾಗ ರಾಣಿಯೊಡನೆ ಸಂಭೋಗ ನಡೆಸಿ ಗರ್ಭವತಿ ಮಾಡುತ್ತಿರುತ್ತದೆ. ರಾಜನ ಗಾತ್ರದಲ್ಲಿ ಯಾವ ಬದಲಾವಣೆಯಾಗುವುದಿಲ್ಲ. ರಾಜ ಮತ್ತು ರಾಣಿ ಗಟ್ಟಿ ಜೋಡಣೆಯಿಂದ ನಿರ್ಮಿತವಾಗಿರುವ ವಿಶೇಷ ಕೊಠಡಿಯೇ ಅರಮನೆಯಾಗಿ ವಸಾಹತುವಿನ ಬೆಳೆವಣಿಗಾಗಿ ರಾಣಿಯು ಸ್ರವಿಸುವ ಮೋಹಕ ದ್ರವದ ಮೂಲಕ ಎಲ್ಲಾ ಜಾತಿಯ ಕಾರ್ಯಚಟುವಟಿಕೆಗಳಿಗೆ ಸೂಕ್ತ ಮಾರ್ಗದರ್ಶನ ನೀಡುವುದರ ಜೊತೆಗೆ ವಸಾಹತುವಿನಲ್ಲಿ ಬೆಳೆಯುವ ಮರಿಗಳು ನಂತರ ವಿವಿಧ ಜಾತಿಗಳಾಗಿ ವಿಂಗಡಿಸಲು ಸಹಾಯವಾಗುತ್ತದೆ. ಭಾರತದಲ್ಲಿರುವ ಹುತ್ತ ಕಟ್ಟುವ ಒಡೊಂಟೊ ಟರ್ಮಿಸ್ ಗೆದ್ದಲಿನ ಜಾತಿಗಳು ಸುಮಾರು 25 ರಿಂದ 30 ವರ್ಷಗಳು ಬದುಕಿರುತ್ತವೆಂದು ತಿಳಿದುಬಂದಿದೆ.

ಕೆಲಸಗಾರ ಗೆದ್ದಲು

ಬದಲಾಯಿಸಿ
 
Worker termite

ಕೆಲಸಗಾರ ಗೆದ್ದಲು ಸಣ್ಣ 3 - 5 ಮಿ.ಮೀ. ಉದ್ದ, 2 - 3 ಮಿ.ಮೀ. ಅಗಲ, ಮಾಸಲು ಬಣ್ಣ ಕಂದು ಬಣ್ಣದ ತಲೆ ಸಂಯುಕ್ತ ಕಣ್ಣುಗಳಲ್ಲಿ, ಕುಡಿಮೀಸೆ ಮಣಿಯಂತೆ, ಸಸ್ಯಗಳನ್ನು ಕಚ್ಚಲು ಬಾಯಿ ಭಾಗಗಳು ಮಾರ್ಪಾಟಾಗಿವೆ. ಇವು ಬಂಜೆಗಳು, ವೃಷಣ ಮತ್ತು ಅಂಡಾಶಯಗಳಿರುವುದಿಲ್ಲ. ವಸಾಹತುವಿನಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿರುತ್ತವೆ. ಇವುಗಳಿಗೆ ಕೆಲಸದೊಂದೇ ಚಿಂತೆ. ಸೈನಿಕಗೆದ್ದಲು ಗಾತ್ರದಲ್ಲಿ ಕೆಲಸಗಾರರಿಗೆ ಹೋಲಿಕೆ ಇದ್ದರೂ ತಲೆ ದಪ್ಪ, ಬಲಿಷ್ಠ ದವಡೆ ಹಲ್ಲುಗಳು ದೊಡ್ಡದಾಗಿ ಮೊನಚಾಗಿವೆ. ಬಂಜೆಗಳು, ವೃಷಣ ಮತ್ತು ಅಂಡಾಶಯಗಳಿರುವುದಿಲ್ಲ. ವಸಾಹತುವಿಗೆ ಯಾವುದಾದರೂ ಶತೃ ಪ್ರಾಣಿಗಳು ಪ್ರವೇಶಿಸಿದರೆ ತಕ್ಷಣ ಕುಡಿಮೀಸೆ ಮತ್ತು ತಲೆಯನ್ನು ಮೇಲಕ್ಕೆತ್ತಿ ಭಯಾನಕ ಭಂಗಿಯನ್ನು ತಾಳಿ ಗೂಡಿನೊಳಗೆ ಬರುವಂತಹ ಶತೃಗಳನ್ನು ತಮ್ಮ ದವಡೆ ಹಲ್ಲುಗಳಿಂದ ಕಚ್ಚಿ ಹಿಡಿಯುತ್ತವೆ. ನಾಸುಟಿ ಟರ್ಮೈಟಿಸಿ ಉಪಕುಟುಂಬದ ಗೆದ್ದಲಿನ ಪ್ರಬೇಧಗಳಲ್ಲಿ ಸೈನಿಕರಲ್ಲಿ ಕವಡೆ ಹಲ್ಲುಗಳಿಗೆ ಬದಲು ತಲೆಯ ತುದಿ ಮುಂದಕ್ಕೆ ಚಾಚಿರುವ ಕೊಳವೆಯಂತಹ ಮೂತಿಯಿಂದ ಒಂದು ಬಗೆಯ ತೀಕ್ಷ್ಣವಾದ ದ್ರವವನ್ನು ಹೊರಸೂಸಿ ಶತೃಗಳನ್ನು ಹಿಮ್ಮೆಟ್ಟಿಸುತ್ತವೆ.


ಸೈನಿಕ ಗೆದ್ದಲು

ಬದಲಾಯಿಸಿ
 
A soldier termite (Macrotermitinae) with an enlarged jaw in the Okavango Delta, Botswana

ಸೈನಿಕ ಗೆದ್ದಲಿಗೆ ತಮ್ಮ ವಸಾಹತುವಿನ ಕಾವಲಿನದೊಂದೇ ಚಿಂತೆ.ಕೆಲಸಗಾರ ಗೆದ್ದಲು ಅತ್ಯಂತ ಶಿಸ್ತು ಮತ್ತು ಜವಾಬ್ದಾರಿಯಿಂದ ವಸಾಹತುವಿನ ಏಳಿಗೆಗಾಗಿ ದುಡಿಯುತ್ತವೆ. ಇವು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಅನೇಕ ಕೆಲಸಗಳನ್ನು ಮೊಟ್ಟೆ ಮರಿಗಳನ್ನು ವಿಶೇಷವಾದ ಗೂಡುಗಳಲ್ಲಿಟ್ಟು ಸಾಕುವುದು ರಾಜ, ರಾಣಿ ಮತ್ತು ಮರಿಗಳಿಗೆ ಆಹಾರವನ್ನು ತಿನ್ನಿಸುವುದು. ಗೂಡುಗಳ ನಿರ್ಮಾಣ, ರಿಪೇರಿ ಮತ್ತು ಸ್ವಚ್ಛತೆ ಗೂಡುಗಳಲ್ಲಿ ಸಹಜೀವಿ ಶಿಲೀಂದ್ರ ತೋಟಗಳನ್ನು ಬೆಳೆಸುವುದು. ಗೂಡಿನಿಂದ ಸುರಂಗಗಳನ್ನು ತೋಡಿ ಆಹಾರವನ್ನು ಗುರ್ತಿಸಿ ನಂತರ ಸಾಗಿಸುವುದು. ಸಾಮಾನ್ಯವಾಗಿ ಆಹಾರವನ್ನು ಸತತವಾಗಿ ಸಾಗಿಸುವ ಸಲುವಾಗಿ ತೆಳುವಾದ ಮಣ್ಣಿನ ಪೊರೆಯನ್ನು ಆಹಾರದ ಮೇಲೆ ಕಟ್ಟಿ ನಂತರ ಸಾಗಿಸುತ್ತವೆ. ಮಳೆಗಾಲ ಕಳೆದ ನಂತರ ಮರಗಳ ಮೇಲೆ, ಹುಲ್ಲಿನ ಮೇಲೆ, ಗಿಡಗಳಲ್ಲಿ, ತರಗೆಲೆ, ಸಗಣಿ ಮುಂತಾದ ಸಾವಯವ ವಸ್ತುಗಳ ಮೇಲೆ ಗೆದ್ದಲಿನಿಂದ ಕೂಡಿರುವ ಮಣ್ಣಿನ ಪೊರೆಯನ್ನು ನೋಡಬಹುದು.

ಗೂಡುಗಳನ್ನು ಕಟ್ಟುವಾಗ, ರಿಪೇರಿ ಮಾಡುವಾಗ ಆಹಾರವನ್ನು ಹುಡುಕಿ ಸಾಗಿಸುವಾಗ, ರೆಕ್ಕೆಹುಳು ಗೂಡಿನಿಂದ ಹೊರಗೆ ಬರುವಾಗ ಒಂದು ನಿರ್ದಿಷ್ಟ ಅಂತರದ ದೂರದಲ್ಲಿ ಸೈನಿಕರಂತೆ ಕಾವಲಿದ್ದು ಗೆದ್ದಲನ್ನು ಶತ್ರುಗಳಿಂದ ರಕ್ಷಿಸುತ್ತವೆ. ಗೂಡಿನ ಪ್ರತಿಭಾಗದಲ್ಲಿ ನಿಂತು ಪಹರೆ ತಿರುಗುತ್ತಾ ಶತ್ರುಗಳು ಗೂಡಿನೊಳಗೆ ನುಗ್ಗದಂತೆ ತಡೆಯುತ್ತವೆ.

ಅನೇಕ ವೈವಿಧ್ಯತೆಯನ್ನೊಳಗೊಂಡಿರುವ ಟರ್ಮೈಟಿಡಿ ಕುಟುಂಬದ ಮ್ಯಾಕ್ರೊಟರ್ಮೈಟಿನಿ ಮತ್ತು ನಾಸುಟಿ ಟರ್ಮೈಟಿನಿ ಉಪಕುಟುಂಬದ ಪ್ರಭೇದಗಳು ಅನೇಕ ವಿಶೇಷ ಬಗೆಯಲ್ಲಿ ತಮ್ಮದೇ ಆದ ವಿನ್ಯಾಸದಲ್ಲಿ ಗೂಡುಗಳನ್ನು ಕಟ್ಟುತ್ತವೆ. ಸಾಮಾನ್ಯವಾಗಿ ಅರಣ್ಯಪ್ರದೇಶಗಳಲ್ಲಿ ಬೃಹದಾಕಾರವಾಗಿ ಹುತ್ತಗಳನ್ನು ನಿರ್ಮಿಸುತ್ತವೆ. ಆಫ್ರಿಕಾ, ಆಸ್ಟ್ರೇಲಿಯ, ಉತ್ತರ ಅಮೆರಿಕಾ, ಭಾರತ ಪ್ರಾಂತ್ಯಗಳಲ್ಲಿ ಪ್ರವಾಸಿಗಳನ್ನು ವಿಶೇಷವಾಗಿ ಆಕರ್ಷಿಸುವಂತಹ ಹುತ್ತಗಳನ್ನು ಕಟ್ಟುತ್ತವೆ. ಗೂಡುಗಳ ಒಳಗೆ ಮತ್ತು ಹೊರಗೆ ಅತ್ಯುನ್ನತ ಮಟ್ಟದಲ್ಲಿ ಶಿಲ್ಪಕಲೆಯನ್ನು ಅಳವಡಿಸಿ ಹುತ್ತಗಳನ್ನು ನಿರ್ಮಿಸುತ್ತವೆ.

ಗೆದ್ದಲು- ಹುತ್ತ

ಬದಲಾಯಿಸಿ

ಮ್ಯಾಕ್ರೊಟರ್ಮೈಟಿನಿ ಉಪಕುಟುಂಬದಲ್ಲಿರುವ ಒಡೊಂಟೊಟರ್ಮಿಸ ಮಿಕ್ರೊಟರ್ಮಿಸ ಮತ್ತು ಮ್ಯಾಕ್ರೊಟರ್ಮಿಸ ಜಾತಿಯ ಗೆದ್ದಲಿನ ಪ್ರಬೇಧಗಳು ಗೂಡುಗಳಲ್ಲಿ ಶಿಲೀಂದ್ರ ತೋಟಗಳನ್ನು ಸಹಜೀವಿಗಳಾಗಿ ಬೆಳೆಸುತ್ತವೆ. ಗೆದ್ದಲಿನ ಹಿಕ್ಕೆಗಳನ್ನು ಗೂಡುಗಳಲ್ಲಿ ಸಂಗ್ರಹಿಸಿ ಅವುಗಳ ಮೇಲೆ ಶಿಲೀಂದ್ರ ತಂತುಜಾಲವನ್ನು ಬೆಳೆಸಿ ತಮ್ಮ ಲಾಲಾರಸದಿಂದ ಸ್ಪಂಜಿನಂತಹ ಮೆತ್ತನೆಯ ಶಿಲೀಂದ್ರ ತೋಟಗಳನ್ನು ನಿರ್ಮಿಸುತ್ತವೆ. ಇವುಗಳನ್ನೇ “ಗುಗ್ಗೆ”ಗಳೆಂದು ಕರೆಯುವ ವಾಡಿಕೆ. ಶಿಲೀಂದ್ರ ತೋಟಗಳ ಮೇಲೆ ಬಿಳುಪಾದ ಶಿಲೀಂದ್ರ ಬಿಜಾಣು ಸೂಕ್ಷ್ಮಜೀವಿಗಳು ಬೆಳೆಯುತ್ತವೆ. ಇದನ್ನು ಗೆದ್ದಲು ಆಹಾರವಾಗಿ ಉಪಯೋಗಿಸುತ್ತದೆ.

ಈ ಸಹಜೀವಿ ಶಿಲೀಂದ್ರತೋಟಗಳಿಂದ ಗೆದ್ದಲು ಅನೇಕ ಅನುಕೂಲಗಳನ್ನು ಪಡೆಯುತ್ತದೆ.

ವಸಾಹತುವಿನ ಗೆದ್ದಲಿನ ಬೆಳೆವಣಿಗೆಗೆ ಬೇಕಾದ ಜೀವಸತ್ವಗಳು ಮತ್ತು ಪೋಷಕಾಂಶಗಳು ಶಿಲೀಂದ್ರ ತೋಟಗಳಲ್ಲಿರುವುದರಿಂದ ಮರಿಗಳ ಆಹಾರವಾಗಿ ಉಪಯೋಗಿಸುತ್ತವೆ. ಮೊಟ್ಟೆಗಳ ಕಾವಿಗೆ ಹಾಗೂ ಮರಿಗಳನ್ನು ಶಿಲೀಂದ್ರ ತೋಟದ ಸಣ್ಣ ಸಣ್ಣ ಗುಣಗಳಲ್ಲಿಟ್ಟು ಸಾಕಲು ಸಹಾಯಕವಾಗಿವೆ. ಶಿಲೀಂದ್ರ ತೋಟಗಳು ಸ್ಪಂಜಿನಂತಿರುವುದರಿಂದ ಗೂಡಿನಲ್ಲಿ ತೇವಾಂಶವನ್ನು ಹಿಡಿದಿಟ್ಟುಗೊಂಡಿದ್ದು ಹೆಚ್ಚಿನ ಸಂಖ್ಯೆಯ ಉಸಿರಾಟದಿಂದಾಗಿ ಇಂಗಾಲದ ಡೈ ಆಕ್ಸೈಡ್ ನಿರ್ಮಾಣಗೊಂಡು ವಸಾಹತುವಿಗೆ ಬೇಕಾಗಿರುವ ಒಂದು ನಿರ್ದಿಷ್ಟ ಉಷ್ಣಾಂಶ ಮತ್ತು ಶೈತ್ಯಾಂಶದ ಹವಾನಿಯಂತ್ರಣದ ವ್ಯವಸ್ಥೆಯಾಗುತ್ತದೆ.

ಕೆಲವು ಶಿಲೀಂದ್ರಗಳನ್ನು ಬೆಳೆಸದೇ ಇರುವ ಹುತ್ತಗಳನ್ನು ನಿರ್ಮಾಣ ಮಾಡುವ ಗೆದ್ದಲುಗಳು ಆಹಾರದ ಚೂರುಗಳನ್ನೇ ಗೂಡುಗಳಲ್ಲಿಟ್ಟು ಅನೇಕ ಅನುಕೂಲಗಳನ್ನು ಪಡೆಯುತ್ತವೆ. ನಾಸುಟಿಟರ್ಮೈಟಿನಿ ಉಪಕುಟುಂಬಕ್ಕೆ ಸೇರಿರುವ ಗೆದ್ದಲಿನ ಪ್ರಬೇಧಗಳೂ ಸಹ ಭೂಮಿಯೊಳಗೆ ಮತ್ತು ಮರಗಳ ಮೇಲೆ ವಿಶೇಷವಾದ ಗೂಡುಗಳನ್ನು ಕಟ್ಟುತ್ತವೆ. ಆಫ್ರಿಕಾದಲ್ಲಿ ಟ್ರೈನರ್ವಿ ಟರ್ಮಿಸ ಜಾತಿಯ ಪ್ರಬೇಧಗಳು ಸಣ್ಣ ಸಣ್ಣ ಹುತ್ತಗಳನ್ನು ನಿರ್ಮಿಸಿ ಗೂಡುಗಳಲ್ಲಿ ಹುಲ್ಲನ್ನು ಶೇಖರಿಸಿ ವಸಾಹತುವಿಗೆ ಬೇಕಾಗಿರುವ ಎಲ್ಲಾ ಅನುಕೂಲತೆಗಳನ್ನು ಪಡೆಯುತ್ತದೆ. ಭಾರತದಲ್ಲಿರುವ ನಾಸುಟಿಟರ್ಮಿಸ ಜಾತಿಯ ಪ್ರಬೇಧಗಳು ತಮ್ಮ ಹಿಕ್ಕೆಗಳನ್ನು ಸಂಗ್ರಹಿಸಿ ಲಾಲಾರಸವನ್ನು ಬೆರೆಸಿ ಎಲ್ಲಾ ಗೆದ್ದಲುಗಳಿಗೆ ಸ್ಥಳಾವಕಾಶವನ್ನು ಒದಗಿಸುವಂತಹ ಗೋಳಾಕಾರದ ಸಾಮಾನ್ಯ ಗಾತ್ರದ ಗೂಡುಗಳನ್ನು ಕಾಡುಮರಗಳ ಮೇಲೆ ಕಟ್ಟಿ ಕೊಳವೆಯಂತಹ ಸುರಂಗಮಾರ್ಗಗಳನ್ನು ಮಾಡಿ ಆಹಾರವನ್ನು ಸತತವಾಗಿ ಗೂಡಿಗೆ ಸಾಗಿಸುತ್ತವೆ.


ವಿಶ್ವದಲ್ಲಿ ವಿಸ್ತಾರವಾಗಿರುವ ಅನೇಕ ಗೆದ್ದಲಿನ ಜಾತಿಗಳಲ್ಲಿ ಭಾರತದ ಒಡೊಂಟೊ ಟರ್ಮಿಸ್, ಆಫ್ರಿಕಾದ ಮ್ಯಾಕ್ರೊಟರ್ಮಿಸ್, ಟ್ರೈನರ್ವಿಟರ್ಮಿಸ್, ಕ್ಯೂಬಿಟರ್ಮಿಸ್ ಮತ್ತು ಏಪಿಕೊಟರ್ಮಿಸ್, ಆಸ್ಟ್ರೇಲಿಯಾದ ಏಮಿಟರ್ಮಿಸ್ ನಾಸುಟಿ ಟರ್ಮಿಸ್ ಮತ್ತು ಕೋಪ್ಟೊ ಟರ್ಮಿಸ್ ಮತ್ತು ದಕ್ಷಿಣ ಅಮೆರಿಕಾದ ಅನೊಪ್ಲೊಟರ್ಮಿಸ್ ಮತ್ತು ಸೈನಟರ್ಮಿಸ್ ಮುಖ್ಯವಾದವು.

ಗೆದ್ದಲಿನ ಹಾನಿಯಿಂದ ಪ್ರತಿವರ್ಷ ಭಾರತದಲ್ಲಿ 280 ದಶಲಕ್ಷ ರೂಪಾಯಿಗಳು ನಷ್ಟವಾಗುತ್ತದೆಂದು ಹಿಂದಿನ ಶತಮಾನ ಆದಿಭಾಗದಲ್ಲಿಯೇ ಅಂದಾಜುಮಾಡಲಾಗಿತ್ತು. ಈ ಅಂದಾಜಿನ ನಷ್ಟದ 10 ಪಟ್ಟಾದರೂ ಇಂದು ಭಾರತದಲ್ಲಿ ನಷ್ಟವಾಗುತ್ತದೆಂದು ತಿಳಿಯಬಹುದು. ಇತರೇ ರಾಷ್ಟ್ರಗಳಿಂದಲೂ ಸಾವಿರಾರು ದಶಲಕ್ಷ ರೂಪಾಯಿಗಳ ನಷ್ಟವಾಗುತ್ತದೆಂದು ತಿಳಿಸಿದ್ದಾರೆ. ಭಾರತದಲ್ಲಿ ಗುರ್ತಿಸಿರುವ ಒಟ್ಟು 300 ಗೆದ್ದಲಿನ ಪ್ರಬೇಧಗಳಲ್ಲಿ 50 ಪ್ರಬೇಧಗಳನ್ನು ಬೆಳೆಗಳಲ್ಲಿ ಕಟ್ಟಡಗಳಲ್ಲಿ ನಷ್ಟಪಡಿಸುವ ಪೀಡೆಗಳೆಂದು ಗುರ್ತಿಸಿದ್ದಾರೆ.

ಸತತ ನೀರಾವರಿ ಬೆಳೆಗಳಲ್ಲಿ ಗೆದ್ದಲಿನ ಹಾವಳಿ ಇರುವುದಿಲ್ಲ. ಆದರೆ ಒಣಬೇಸಾಯದಲ್ಲಿ ಬೆಳೆಯುವ ಎಲ್ಲಾ ಬೆಳೆಗಳಲ್ಲಿ ಸಸಿಗಳಿಂದ ಬೆಳೆಯುವ ಎಲ್ಲಾ ಹಂತಗಳಲ್ಲಿ ಗೆದ್ದಲಿನ ಹಾವಳಿ ಇರುತ್ತದೆ. ಆಳವಾದ ಕಪ್ಪುಮಣ್ಣಿನಲ್ಲಿ ಗೆದ್ದಲಿನ ಹಾವಳಿ ಇರುವುದಿಲ್ಲ. ಕೆಂಪು, ಮರಳು ಮಿಶ್ರಿತ ಗೋಡು, ಜೆಂಬಿಟ್ಟಿಗೆ ಮಣ್ಣುಗಳಲ್ಲಿ ಗೆದ್ದಲಿನ ಹಾವಳಿ ಅಧಿಕವೆಂದು ಸಂಶೋಧನೆಯಿಂದ ತಿಳಿಯಲ್ಪಟ್ಟಿದೆ. ಧಾನ್ಯ ಬೆಳೆಗಳಲ್ಲಿ ಗೋದಿ, ಬತ್ತ, ಮುಸುಕಿನ ಜೋಳ, ಬಾರ್ಲಿ, ಸಜ್ಜೆ ನವಣೆ ಮುಂತಾದುವು, ಎಲ್ಲಾ ಬಗೆಯ ದ್ವಿದಳ ಧಾನ್ಯಗಳು, ಎಣ್ಣೆ ಕಾಳುಗಳು, ತರಕಾರಿ, ಹಣ್ಣಿನ ಬೆಳೆಗಳು ಇವುಗಳಲ್ಲದೆ ಅನೇಕ ವಾಣಿಜ್ಯ ಬೆಳೆಗಳಾದ ಕಬ್ಬು, ಹತ್ತಿ, ತೆಂಗು, ಅಡಿಕೆ, ರಬ್ಬರ್, ಟೀ, ಕಾಫಿ, ಕೊಕೊ, ಏಲಕ್ಕಿ ಮುಂತಾದುವು. ಎಲ್ಲಾ ಬಗೆಯ ಅರಣ್ಯ ಮರಗಳು, ಹುಲ್ಲಿನ ಜಾತಿಯ ಬೆಳೆಗಳು ಉಗ್ರಾಣದಲ್ಲಿ ಶೇಖರಿಸಿರುವ ಮರಮುಟ್ಟು, ಪುಸ್ತಕ, ಬಟ್ಟೆ, ಕಟ್ಟಡಗಳಲ್ಲಿನ ಮರದ ಸಾಮಾನುಗಳು, ಅಡ್ಡೆ ತರಾಯಿ, ಬಾಗಿಲು, ಕಿಟಕಿ, ಪೀಠೋಪಕರಣಗಳು, ಸಾವಯವ ಗೊಬ್ಬರ, ಸಗಣಿ, ತರಗೆಲೆ, ಬೇರಿನ ಕೊಳೆ, ಒಣಹುಲ್ಲು, ಗರಿ ಮುಂತಾದುವು ಗೆದ್ದಲಿನ ಹಾವಳಿಗೆ ತುತ್ತಾಗುತ್ತವೆ.

ಛಾಯಾಂಕಣ

ಬದಲಾಯಿಸಿ

ಬಾಹ್ಯ ಸಂಪರ್ಕಗಳು

ಬದಲಾಯಿಸಿ

On the UF / IFAS Featured Creatures Web site

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಗೆದ್ದಲು&oldid=1171183" ಇಂದ ಪಡೆಯಲ್ಪಟ್ಟಿದೆ