ಅಲೆಕ್ಸಾಂಡರ್ ಗುಸ್ತಾವ್ ಐಫೆಲ್ (ಡಿಸೆಂಬರ್ ೧೫, ೧೮೩೨ - ಡಿಸೆಂಬರ್ ೨೭, ೧೯೨೩) ಫ್ರಾನ್ಸ್ ದೇಶದ ಸುಪ್ರಸಿದ್ಧ ವಾಸ್ತುಶಿಲ್ಪಿಯಾಗಿದ್ದರು. ಪ್ಯಾರಿಸ್ನ ಅದ್ಭುತ ಗೋಪುರವಾದ ಐಫೆಲ್ ಗೋಪುರವನ್ನು ಇವರ ನಿರ್ವಹಣೆಯಡಿಯಲ್ಲೇ ನಿರ್ಮಿಸಲಾಯಿತು.ಗುಸ್ತಾವ್ ಐಫೆಲ್ ಲೋಹನಿರ್ಮಿತ ಕಟ್ಟಡಗಳ ಉಸ್ತುವಾರಿಯಲ್ಲಿ ಅಚ್ಚರಿಯೆನಿಸುವ ಸಾಧನೆ ಮಾಡಿದವರಾಗಿದ್ದಾರೆ.

ಗುಸ್ತಾವ್ ಐಫೆಲ್

1855ರಲ್ಲಿ ಪ್ಯಾರಿಸಿನಲ್ಲೇ ಪದವೀಧರನಾಗಿ ಬೃಹತ್ ಲೋಹ ರಚನಾಕೃತಿಗಳನ್ನು ರೂಪಿಸುವುದರಲ್ಲಿ ವಿಶೇಷ ಜ್ಞಾನ ಸಂಪಾದಿಸಿ, ಈ ಕ್ಷೇತ್ರದಲ್ಲಿ ಹೆಚ್ಚಿನ ಪ್ರವರ್ಧಮಾನಕ್ಕೆ ಬಂದ. ಅಂತರ್ಜಲ ಅಡಿಪಾಯಗಳಿಗೆ ಒತ್ತರಗೊಂಡ ಗಾಳಿಯನ್ನು ಮೊದಲು ಬಳಸಿದವರಲ್ಲಿ ಈತನೂ ಒಬ್ಬ. ಫ್ರಾನ್ಸಿನಲ್ಲಲ್ಲದೆ ಹೊರನಾಡುಗಳಲ್ಲೂ ಮುಖ್ಯ ಸೇತುವೆಗಳನ್ನೂ ಸೇತುವೆಮಾರ್ಗಗಳನ್ನೂ ರೂಪಿಸಿದ ಖ್ಯಾತಿ ಇವನದು. ಹಂಗೆರಿಯ ರಾಜಧಾನಿ ಬುಡಾಪೆಸ್ಟಿನ ಮುಖ್ಯ ರೈಲುನಿಲ್ದಾಣದಲ್ಲಿ ಒಂದು ಬೃಹದ್ ಮೇಲ್ಚಾವಣಿಯನ್ನು ಈತ ರಚಿಸಿದನಲ್ಲದೆ 1878ರಲ್ಲಿ ಪ್ಯಾರಿಸ್ನಲ್ಲಿ ನಡೆದ ಒಂದು ವಸ್ತು ಪ್ರದರ್ಶನಕ್ಕೆ ಬೇರೆ ಬೇರೆ ಪ್ರದರ್ಶನ ಮಂಟಪ ನಮೂನೆಗಳನ್ನೂ ರಚಿಸಿಕೊಟ್ಟ. ಎಲ್ಲಕ್ಕಿಂತಲೂ ಮಿಗಿಲಾದ ಇವನ ದೊಡ್ಡ ಕೆಲಸವೆಂದರೆ ಪ್ಯಾರಿಸಿನ ಚಾಂಪ್ ಡಿ ಮಾರ್ಸ್ನಲ್ಲಿರುವ ಐಫಲ್ ಗೋಪುರದ ನಿರ್ಮಾಣ (1889).

ಪನಾಮ ಕಾಲುವೆಯ ನಿರ್ಮಾಣದಲ್ಲಿ ಹಡಗುಕಟ್ಟೆಗಳನ್ನು ರೂಪಿಸುವ ಕೆಲಸಕ್ಕೆ ಐಫಲ್ನನ್ನು ಕರೆಯಿಸಿಕೊಳ್ಳಲಾಯಿತು. ಇದನ್ನು ಪುರ್ಣಗೊಳಿಸಲು ತೀರ ಹೆಚ್ಚು ಕಾಲವನ್ನು ಅಂದರೆ ಮೂವತ್ತು ವರ್ಷಗಳನ್ನು ತೆಗೆದುಕೊಂಡನೆಂಬ ದೂರಿಗೆ ಈತ ಒಳಗಾಗಬೇಕಾಯಿತು. ಅನಂತರ ತನ್ನ ವೇಳೆಯನ್ನು ವಾಯುಗತಿವಿಜ್ಞಾನದ ಸಂಶೋಧನೆ ಮತ್ತು ಪ್ರಯೋಗಗಳಿಗೆ ಈತ ಮೀಸಲಾಗಿಸಿದ. ಇದರಿಂದಾಗಿ ವಾಯುಗತಿವಿಜ್ಞಾನದ ಮೊದಲ ಪ್ರಯೋಗಾಲಯವನ್ನು ಓಟಈ ಎಂಬಲ್ಲಿ 1912ರಲ್ಲಿ ಸ್ಥಾಪಿಸಿದ. 1907-19ರ ಅವಧಿಯಲ್ಲಿ ಈತ ನಡೆಸಿದ ಅಧ್ಯಯನ ಮತ್ತು ರಚಿಸಿದ ಗ್ರಂಥಗಳಿಂದಾಗಿ ವಿಮಾನ ರಚನೆಯ ಬಗ್ಗೆ ಅನೇಕ ಮೂಲಭೂತ ಅಂಶಗಳು ಬೆಳಕಿಗೆ ಬಂದುವು. ಗಾಳಿಗಿಂತ ಹಗುರವಾದ ವಾಯುಯಾನದ ಬಗ್ಗೆ ಈತನದೇ ಒಂದು ವ್ಯಾಪಕ ಸಿದ್ಧಾಂತವಿದೆ. ಯಂತ್ರಶಿಲ್ಪವಿಜ್ಞಾನದ ಅಗತ್ಯಗಳಿಗೆ ಅನುಗುಣವಾಗಿ ವಿಮಾನಗಳ ರಚನೆಯನ್ನು ಅನುಮಾಡಿಕೊಂಡು, ವಾಯು-ಸುರಂಗ ಮತ್ತು ಗಾಳಿತಡೆಯ ಮೇಲಿನ ಅಂಕಿ-ಅಂಶಗಳ ನಡುವೆ ಒಂದು ಗಮನಾರ್ಹ ಸಂಬಂಧವನ್ನು ಈತ ಸಾಧಿಸಿಕೊಟ್ಟ. ರೆಸಿಸ್ಟೆನ್ಸ್‌ ಆಫ್ ದಿ ಏರ್ ಅಂಡ್ ಏವಿಯೇಷನ್ ಎಂಬ ಈತನ ಪುಸ್ತಕ 1913ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದ ನೌಕಾಪಡೆಯ ಕಮಾಂಡರ್ ಜೆರೋಮ್ ಸಿ ಹನ್ಸಕರ್ ಎಂಬುವನಿಂದ ಇಂಗ್ಲಿಷ್ ಭಾಷೆಗೆ ಅನುವಾದಗೊಂಡಿದೆ. ತಾನು ಸ್ಥಾಪಿಸಿದ ಓಟ ಈ ಪ್ರಯೋಗ ಶಾಲೆಯನ್ನು 1920ರಲ್ಲಿ ಫ್ರೆಂಚ್ ಸರ್ಕಾರಕ್ಕೆ ಈತ ವಹಿಸಿಕೊಟ್ಟ. ಈತ ನಿಧನನಾದದ್ದು ಪ್ಯಾರಿಸಿನಲ್ಲೇ.

ಉಲ್ಲೇಖಗಳು

ಬದಲಾಯಿಸಿ