ಗಾಜಿನ ಬಟ್ಟೆ ಎಂದರೆ ಗಾಜಿನ ದಾರದಿಂದ ನೇಯ್ದ ಬಟ್ಟೆ. ಬಿಸಿಗಾಜನ್ನು ದಾರದಂತೆ ಎಳೆಯಲು ಸಾಧ್ಯ. ಇದು ಸಸ್ಯಜನ್ಯ ಇಲ್ಲವೇ ಪ್ರಾಣಿಜನ್ಯ ನಾರಿನ ರೂಪವನ್ನೇ ಪಡೆದಿರುತ್ತದೆ.

ಬಿಸಿ ಗಾಳಿಯ ಬಲೂನ್: ಕೆಳಗಿನ ಭಾಗವನ್ನು ಗಾಜಿನ ಬಟ್ಟೆಯನ್ನು ಬಳಸಿ ಉಷ್ಣದಿಂದ ರಕ್ಷಿಸಲಾಗುತ್ತದೆ.

ಗಾಜಿನ ಬಟ್ಟೆಯ ಉದ್ಯಮ ವ್ಯಾಪಕವಾಗಿ ಪ್ರಾರಂಭವಾದದ್ದು ಎರಡನೆಯ ಮಹಾಯುದ್ಧಕ್ಕಿಂತ ಸ್ವಲ್ಪ ಮುಂಚೆ. 1931 ಮತ್ತು 1938 ರಲ್ಲಿ ಓವನ್ಸ್ - ಇಲ್ಲಿನಾಯ್ಸ್ ಕಂಪೆನಿಯವರು ಭಾರಿ ಗಾತ್ರದಲ್ಲಿ ಗಾಜಿನ ದಾರವನ್ನು ತಯಾರಿಸುವ ರೀತಿಗಳನ್ನು ಪರೀಕ್ಷಿಸಿದರು. ಇದರ ಫಲವಾಗಿ ಎರಡು ಪ್ರಮುಖ ದರ್ಜೆಯ ಗಾಜಿನ ದಾರಗಳನ್ನು ವಿಂಗಡಿಸಲಾಯಿತು; ಅಖಂಡದಾರ ಮತ್ತು ತಂತುದಾರ (ಸ್ಟೇಪಲ್).

ಗಾಜಿನ ದಾರದ ತಯಾರಿಕೆ

ಬದಲಾಯಿಸಿ

ಬಿಸಿಮಾಡಿ ನಯವಾದ ನಾರುಗಳಾಗಿ ಗಾಜನ್ನು ಎಳೆಯುವ ತಂತ್ರ ಸಹಸ್ರಮಾನಗಳಿಂದ ತಿಳಿದಿದೆ. ಇದನ್ನು ಈಜಿಪ್ಟ್ ಮತ್ತು ವೆನಿಸ್‍ನಲ್ಲಿ ಅಭ್ಯಸಿಸಲಾಗುತ್ತಿತ್ತು.[]

ಗಾಜಿನ ದಾರದ ವ್ಯಾಸ ಒಂದೇ ಸಮವಾಗಿರಬೇಕು. ತೂತು ಕೊರೆದ ಬಳೆಯ ಮುಖಾಂತರ ಗಾಜನ್ನು ಹೊರಕ್ಕೆ ನೂಕುವಾಗ ಗಾಜಿನ ಆಳ ಒತ್ತಡವನ್ನು ಕುಂದಿಸುತ್ತದೆ; ಇದರಿಂದ ದಾರದ ವ್ಯಾಸ ಬದಲಾಗಬಹುದು. ಆದ್ದರಿಂದ ಗಾಜನ್ನು ಸಣ್ಣಗೋಲಿಗಳ ರೂಪದಲ್ಲಿ ತೂತುಕೊರೆದ ಬಳೆಯನ್ನು ತಯಾರಿಸಿ ಅದನ್ನು ವಿದ್ಯುಚ್ಛಕ್ತಿಯಿಂದ ಕಾಯಿಸುತ್ತಾರೆ. ಈ ದಾರದಿಂದ ತಯಾರಾದ ನೂತ ಗಾಜು (ಸ್ಪನ್‌ಗ್ಲಾಸ್) ಅಖಂಡ ದಾರದಿಂದ ಇಲ್ಲವೇ ತಂತು ದಾರದಿಂದ ತಯಾರಾಗಿರಬಹುದು.

ಗಾಜಿನ ದಾರದ ಹೊರರೂಪದ ಗುಣಗಳಿಗೆ ಪ್ರಾಮುಖ್ಯ ಉಂಟು. ಹವೆಯಿಂದ ವಿದ್ಯುನ್ನಿರೋಧಕ ದಾರದ ಮೇಲೆ ಏನೂ ಪರಿಣಾಮವಾಗದಂತೆ ತಡೆಯಲು ಆ ದಾರದ ರಚನೆಯಲ್ಲಿ 55% ಸಿಲಿಕ, 10% ಬೋರಿಕ್ ಆಮ್ಲ, 14% ಅಲ್ಯುಮಿನ, 17% ಸುಣ್ಣ ಮತ್ತು ಮ್ಯಾಗ್ನೀಷಿಯವನ್ನು ಬಳಸುತ್ತಾರೆ. ಕರಗಿದ ಗಾಜು ರಂಧ್ರದ ಮೂಲಕ ಹಾದು ಒಂದೇ ಎಳೆ ದಾರದಂತೆ ಹೊರಗೆ ಬರುತ್ತದೆ. ಇದು ರಭಸದಿಂದ ಸುತ್ತುತ್ತಿರುವ ಗಾಲಿಯಲ್ಲಿ ಸೇರಿಕೊಳ್ಳುತ್ತದೆ. ಕುಲುಮೆಯಿಂದ ಹರಿಯುವ ಗಾಜಿನ ವೇಗಕ್ಕಿಂತ ಈ ಗಾಲಿಯ ವೇಗ ಹೆಚ್ಚಾಗಿರುತ್ತದೆ. ಸುತ್ತುವುದು ಸುಮಾರು ೧ ಕಿ.ಮಿ/ನಿಮಿಷ ವೇಗದಲ್ಲಿ ನಡೆಯುತ್ತದೆ.[] ಇದರ ಎಳೆತದಿಂದ ಗಾಜು ಕರಗಿದ ಅವಸ್ಥೆಯಿಂದಲೇ ಅತ್ಯಂತ ತೆಳುವಾದ ದಾರದ ರೂಪ ತಳೆಯುತ್ತದೆ. ಈ ದಾರವನ್ನು ನೇಯ್ಗೆಯಂತ್ರದಲ್ಲಿ ಬಳಸಿ ಗಾಜಿನ ಬಟ್ಟೆಯನ್ನು ತಯಾರಿಸುವರು. ಇಂಥ ಬಟ್ಟೆಯ ದಪ್ಪ ಸುಮಾರು 0.003" - 0.023".

ಉಪಯೋಗಗಳು

ಬದಲಾಯಿಸಿ

ಗಾಜಿನ ದಾರ ಸುಲಭವಾಗಿ ಬಗ್ಗುತ್ತದೆ. ಇದು ಕೂದಲಿಗಿಂತ ತೆಳುವಾಗಿರುತ್ತದೆ. ಇಂಥ ದಾರದಿಂದ ತಯಾರಾದ ಬಟ್ಟೆಯ ಮೂಲಕ ನೀರು ಇಳಿಯದು; ಕ್ರಿಮಿಗಳಿಗೆ ಇದು ಅಭೇದ್ಯ; ಉಷ್ಣ ಮತ್ತು ಬೆಂಕಿಗೆ ಸಗ್ಗದು. ವಿದ್ಯುನ್ನಿರೋಧಕ ವಸ್ತುವಾಗಿ ಕೂಡ ಇದರ ಉಪಯೋಗ ಉಂಟು.

ಗಾಜಿನ ದಾರದಿಂದ ತಯಾರಾದ ನಯವಿಲ್ಲದ ಚಾಪೆಯನ್ನು ಗಾಳಿ ಸೋಸುವ ಸಲಕರಣೆಗಳಲ್ಲಿ, ಶುದ್ಧಿಗೊಳಿಸುವ ಯಂತ್ರಗಳಲ್ಲಿ ಮತ್ತು ಬಟ್ಟಿಯಿಳಿಸುವ ಯಂತ್ರೋಪಕರಣದ ಸಮಕಾರಕ ಗೋಪುರಗಳಲ್ಲಿ ಬಳಸುತ್ತಾರೆ. ಗಾಜಿನ ಬಟ್ಟೆಯನ್ನು ಸುಲಭವಾಗಿ ಶುಭ್ರಮಾಡಬಹುದು. ಇವುಗಳಿಗೆ ಬೆಂಕಿ ತಗಲುವುದಿಲ್ಲ. ಅಲಂಕಾರದ ಈ ಬಟ್ಟೆಗಳನ್ನು ಚಿತ್ರಮಂದಿರಗಳಲ್ಲಿ ಮತ್ತು ಹಡಗುಗಳಲ್ಲಿ ಬೆಂಕಿಯ ಅಪಾಯವನ್ನು ಎದುರಿಸಲು ಉಪಯೋಗಿಸುತ್ತಾರೆ. ಈ ಬಟ್ಟೆಗಳು ನೀರನ್ನು ಹೀರಿಕೊಳ್ಳುವುದಿಲ್ಲವಾದ್ದರಿಂದ ಅಲ್ಪಕಾಲದ ಮಳೆಯ ಸುರಿತವನ್ನು ತಡೆಗಟ್ಟಲು ಈ ಬಟ್ಟೆಯ ಪರದೆಯನ್ನು ಬಳಸುತ್ತಾರೆ. ಬೆಂಕಿಗೆ ಸಗ್ಗದ ಅಂಟನ್ನು ಗಾಜಿನಬಟ್ಟೆಗೆ ಸೇರಿಸಿ ಅತಿ ಸಾಮರ್ಥ್ಯಯುತವಾದ ಅಟ್ಟವನ್ನು ಕಟ್ಟಬಹುದು. ವಿಮಾನೋದ್ಯಮದಲ್ಲಿ ಇಂಥ ಬಟ್ಟೆಗೆ ವಿಶೇಷ ಉಪಯುಕ್ತತೆ ಉಂಟು. ಗಾಜಿನ ದಾರಕ್ಕೆ ಪ್ಲಾಸ್ಟಿಕ್ ಸೇರಿಸಿ ತಯಾರಿಸಿದಾಗ ಲಭಿಸುವ ವಸ್ತು ಅತ್ಯಂತ ಸಾಮರ್ಥ್ಯಯುತವಾದದ್ದು. ಕ್ರೀಡಾಕಾರುಗಳನ್ನೂ ಹಡಗಿನ ಕಟ್ಟಡಗಳನ್ನೂ ಇದರಿಂದ ತಯಾರಿಸುತ್ತಾರೆ.

ಅದರ ದ್ವಿದಿಶಾತ್ಮಕ ಬಲದ ಕಾರಣ ಗಾಜಿನ ಬಟ್ಟೆಯು ಕೆಲವು ನಾರುಗಾಜಿನಿಂದ ಬಲಪಡಿಸಿದ ಪ್ಲಾಸ್ಟಿಕ್‍ಗಳಿಗೆ ಉಪಯುಕ್ತವಾಗಿದೆ.[]

ಉಲ್ಲೇಖಗಳು

ಬದಲಾಯಿಸಿ
  1. Inorganic and Composite Fibers. Elsevier. 2018. doi:10.1016/C2016-0-04634-X. ISBN 978-0-08-102228-3.[page needed]
  2. Gupta, V.B.; V.K. Kothari (1997). Manufactured Fibre Technology. London: Chapman and Hall. pp. 544–546. ISBN 978-0-412-54030-1.
  3. Shindo, Y (2001). "Double Cantilever Beam Measurement and Finite Element Analysis of Cryogenic Mode I Interlaminar Fracture Toughness of Glass-Cloth/Epoxy Laminates". Journal of Engineering Materials and Technology. 123 (2): 191–197. CiteSeerX 10.1.1.1064.8944. doi:10.1115/1.1345527.
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: