ಗಾಂಗೇಯದೇವ ಆಳ್ವಿಕೆ ೧೦೧೫-೪೧. ಚೇದಿ ವಂಶವೆಂದು ಪ್ರಸಿದ್ಧವಾದ ತ್ರಿಪುರಿ ಕಳಚುರಿ ವಂಶದ ಒಬ್ಬ ದೊರೆ. ೨ ನೆಯ ಕೊಕ್ಕಲನ ಮಗ; ಕೊಕ್ಕಲನ ಮರಣಾನಂತರ ಪಟ್ಟಕ್ಕೆ ಬಂದ. ಈಗಿನ ಜಬ್ಬಲ್ಪುರದ ಸುತ್ತಮುತ್ತ ಇರುವ ದಾಹಲ ಪ್ರದೇಶ ಮೊದಲು ಇವನ ರಾಜ್ಯವಾಗಿತ್ತು. ಇವನಿಗೆ 'ವಿಕ್ರಮಾದಿತ್ಯ', 'ಜಿತವಿಶ್ವ' ಎಂಬ ಬಿರುದುಗಳಿದ್ದವು. ಇವನ ವೈರಿಗಳು ಕೂಡ ಇವನನ್ನು ಜಿತವಿಶ್ವನೆಂದೇ ಕರೆಯುತ್ತಿದ್ದರು. ತನ್ನ ರಾಜ್ಯದ ವಿಸ್ತಾರಕ್ಕಾಗಿ ನೆರೆಹೊರೆಯ ರಾಜರೊಂದಿಗೆ ಅನೇಕ ಯುದ್ಧಗಳನ್ನು ಮಾಡಿದ.

ಗಾಂಗೇಯದೇವ
ಪ್ರರಮಭಟ್ಟಾರಕ ಮಹಾರಾಜಾಧಿರಾಜ ಪರಮೇಶ್ವರ

ದಾಹಲದ ರಾಜ
ಆಳ್ವಿಕೆ c. 1015-1041 CE
ಪೂರ್ವಾಧಿಕಾರಿ ಕೊಕ್ಕಲ II
ಉತ್ತರಾಧಿಕಾರಿ ಲಕ್ಶ್ಮೀಕರ್ಣ
ಸಂತಾನ
ಲಕ್ಶ್ಮೀಕರ್ಣ
ತಂದೆ ಕೊಕ್ಕಲ II

ಇತಿಹಾಸ ಬದಲಾಯಿಸಿ

  • ಕಲ್ಯಾಣದ ಚಾಳುಕ್ಯ ೨ ನೆಯ ಜಯಸಿಂಹನ ಕಾಲಕ್ಕೆ ಪರಮಾರ ಭೋಜ ಮತ್ತು ದಕ್ಷಿಣದ ರಾಜೇಂದ್ರ ಚೋಳ ಇವರ ಜೊತೆಗೂಡಿಕೊಂಡು ಕುಂತಲ ದೇಶಾಧಿಪತಿಯಾದ ಇಮ್ಮಡಿ ಜಯಸಿಂಹನ ಮೇಲೆ ಧಾಳಿ ಮಾಡಿದ. ಆದರೆ ಈ ಯುದ್ಧದಲ್ಲಿ ಈ ಕೂಟಕ್ಕೆ ಸೋಲುಂಟಾಯಿತೆಂದು ಜಯಸಿಂಹನ ಕುಳೇನೂರ ಶಾಸನದಿಂದ ತಿಳಿದು ಬರುತ್ತದೆ. ಭೋಜ ಮಾಲವ ದೇಶಕ್ಕೆ ಓಡಿಹೋದ. ದಕ್ಷಿಣದಲ್ಲಿ ಸೋತರೂ ಉತ್ತರದಲ್ಲಿ ಗಾಂಗೇಯ ಕೋಸಲದೇಶದ ಸೋಮವಂಶದ ಮಹಾಶಿವಗುಪ್ತನನ್ನು ಸೋಲಿಸಿದ.
  • ಸಾಮಂತ ಹಾಗೂ ಮಹಾಮಂಡಲೇಶ್ವರನಾದ ತುಮ್ಮಾನದ ಕಳಚುರಿ ವಂಶದ ಕಮಲರಾಜನ ಜೊತೆಯಲ್ಲಿ ಉತ್ಕಲವನ್ನು ಗೆದ್ದು ಪೂರ್ವ ಸಮುದ್ರದವರೆಗೆ ರಾಜ್ಯವನ್ನು ವಿಸ್ತರಿಸಿದ. ಈ ಘಟನೆಯ ತರುವಾಯ ಅವನು ತ್ರಿಕಳಿಂಗಾಧಿಪತಿ ಎಂಬ ಬಿರುದನ್ನು ತಳೆದನೆಂದು ತೋರುತ್ತದೆ. ಉತ್ತರಾಪಥದಲ್ಲಿ ಚಕ್ರಾಧಿಪತ್ಯವನ್ನು ಸ್ಥಾಪಿಸುವ ಕಾರ್ಯದಲ್ಲಿ ಸ್ನೇಹಿತನಾಗಿದ್ದ ಪರಮಾರ ಭೋಜ ಮತ್ತು ಚಂದೇಲರ ಮೇಲೆ ಈತ ಯುದ್ಧ ಮಾಡಿದ. ಅಂತ್ಯದಲ್ಲಿ ಜಯ ಇವನದಾಯಿತು. ಸು. ೧೦೩೪ ರಲ್ಲಿ ವಾರಾಣಸಿಯನ್ನು ಗೆದ್ದು ತನ್ನ ರಾಜ್ಯಕ್ಕೆ ಸೇರಿಸಿಕೊಂಡ.
  • ಇದು ಆಗ್ಗೆ ಚಂದೇಲರ ಢಂಗನ ರಾಜ್ಯಕ್ಕೆ ಸೇರಿತ್ತು. ಪೂರ್ವದಲ್ಲಿಯ ಗೌಡದೇಶದ ಪಾಲವಂಶದ 1ನೆಯ ಮಹಿಪಾಲನಿಂದ ಅಂಗದೇಶದ ಭಾಗಲ್ಪುರವನ್ನು ಗೆದ್ದು ತನ್ನ ರಾಜ್ಯಕ್ಕೆ ಸೇರಿಸಿದ. ಇವನ ಮಗನಾದ ಲಕ್ಷ್ಮೀಕರ್ಣ ಅಥವಾ ಕರ್ಣ ನೇಪಾಲದವರೆಗೆ ದಂಡೆತ್ತಿ ಹೋಗಿದ್ದ. ಬಿಹಾರದಲ್ಲಿಯ ಪಾಲವಂಶದ ನಯಪಾಲನನ್ನು ಸೋಲಿಸಿ ಮಗಧದೇಶವನ್ನು ಗೆದ್ದ. ಸರಿಸುಮಾರು ಇದೇ ಸಮಯಕ್ಕೆ ಘಜ಼್ನಿ ವಂಶದ ದೊರೆಗಳ ರಾಜ್ಯಪಾಲನಾಗಿ ಪಂಜಾಬನ್ನು ಆಳುತ್ತಿದ್ದ ಅಹಮ್ಮದ್ ನಿಯಾಲ್ತಿಗೀನ್ ಎಂಬ ಸರದಾರ ವಾರಾಣಸಿಯನ್ನು ಮುತ್ತಿ ಅದನ್ನು ಕೊಳ್ಳೆ ಹೊಡೆದು ಅಪಾರ ಸಂಪತ್ತನ್ನು ದೋಚಿಕೊಂಡು ಆ ನಗರವನ್ನು ಹಾಳು ಮಾಡಿ ಹೋದ. ಆಗ ಗಾಂಗೇಯದೇವ ಅವನ ಬೆಂಬತ್ತಿ ಹೋಗಿ ಕೀರಾದೇಶವೆಂದು ಪ್ರಸಿದ್ಧಿ ಹೊಂದಿದ್ದ ಕಾಂಗ್ರಾ ಕಣಿವೆಯನ್ನು ಗೆದ್ದುಕೊಂಡ.
  • ಅನಂತರ ಅವನು ಚಕ್ರಾಧಿಪತ್ಯಸೂಚಕವಾದ ಮಹಾರಾಜಾಧಿರಾಜ, ಪರಮೇಶ್ವರ ಎಂಬ ಬಿರುದುಗಳನ್ನು ಧರಿಸಿದ. ಕಳಚುರಿ ಶಕ ೭೮೯ ರ (೧೦೩೭-೩೮) ಅವನ ಪಿವಾನ ಶಿಲಾಲೇಖದಿಂದ ಈ ವಿಷಯ ತಿಳಿದುಬರುತ್ತದೆ. ಎರಡನೆಯ ರಾಜಧಾನಿಯೆನಿಸಿದ್ದ ಪ್ರಯಾಗದ ಮೇಲೆ ಗಾಂಗೇಯನಿಗೆ ಬಹಳ ಪ್ರೇಮವಿತ್ತು. ಅಲ್ಲಿಯ ಆಲದ ಮರದ ನೆರಳಿನಲ್ಲಿಯೇ ಅವನು ಮರಣ ಹೊಂದಿದನೆಂದೂ ಅನಂತರ ಆತನ ೧೦೦ ಜನ ಮಡದಿಯರು ಸತಿ ಹೋದರೆಂದೂ ಹೇಳಲಾಗಿದೆ.

ಭೇರಾಘಾಟದ ಶಾಸನದ ಪ್ರಕಾರ ಬದಲಾಯಿಸಿ

  • ಗಾಂಗೇಯದೇವ ಶೈವಮತನಿಷ್ಠನಾಗಿದ್ದ. ಭೇರಾಘಾಟದ ಶಾಸನದ ಪ್ರಕಾರ ಅವನು ಅಲ್ಲೊಂದು ದೊಡ್ಡ ಶಿವಾಲಯವನ್ನು ಕಟ್ಟಿಸಿದ್ದ. ಪಿವಾನಶಾಸನವೂ ಶಿವಲಿಂಗದ ಪ್ರತಿಷ್ಠಾಪನೆಯನ್ನು ಸೂಚಿಸುತ್ತದೆ. ಜಲಶಯನ (ವಿಷ್ಣು) ದೇವರಿಗೆ ಬಿಟ್ಟ ದತ್ತಿಯ ವಿಷಯ ಮುಕುಂದಪುರ ಶಾಸನದಲ್ಲಿದೆ. ಅವನು ಉತ್ತರದಿಂದ ಬರುತ್ತಿದ್ದ ಮುಸಲ್ಮಾನರ ಅನೇಕ ಧಾಳಿಗಳನ್ನು ತಡೆದ. ಅವನ ಖ್ಯಾತಿಯನ್ನು ಆಲ್ಬೆರೂನಿ ತನ್ನ ಗ್ರಂಥದಲ್ಲಿ ಹೆಚ್ಚಾಗಿ ವರ್ಣಿಸಿದ್ದಾನೆ. ಗಾಂಗೇಯ ದಕ್ಷ ಆಡಳಿತಗಾರನೂ ಅರ್ಥಶಾಸ್ತ್ರವನ್ನು ಬಲ್ಲವನೂ ಆಗಿದ್ದ.
  • ಅವನ ಕಾಲದ ಚಿನ್ನ, ಬೆಳ್ಳಿ ಮತ್ತು ತಾಮ್ರ ನಾಣ್ಯಗಳು ದೊರೆತಿವೆ. ಇವುಗಳ ಮೇಲೆ ಮುಂಬದಿಯಲ್ಲಿ ಲಕ್ಷ್ಮೀಮೂರ್ತಿಯನ್ನೂ ಹಿಂಬದಿಯಲ್ಲಿ ರಾಜನ ಸಂಪೂರ್ಣ ಹೆಸರನ್ನೂ ಮೂರು ಸಾಲಿನ ನಾಗರೀಲಿಪಿಯಲ್ಲಿ ಬರೆಯಲಾಗಿದೆ. ಈ ನಾಣ್ಯಗಳನ್ನು ದ್ರಮ್ಮ, ಅರ್ಧ ದ್ರಮ್ಮ ಮತ್ತು ಕಾಲು ದ್ರಮ್ಮ ಎಂದು ಮುಂತಾಗಿ ವಿಭಜಿಸಿ ಟಂಕಿಸಲಾಗಿದೆ. ಈತ ಬಳಕೆಗೆ ತಂದ ಲಕ್ಷ್ಮೀಮೂರ್ತಿಯನ್ನುಳ್ಳ ನಾಣ್ಯಪದ್ಧತಿ ಉತ್ತರ ಭಾರತದಲ್ಲಿ ಬಹಳ ಬೇಗ ಪ್ರಖ್ಯಾತವಾಯಿತು. ಈ ನಾಣ್ಯಗಳಲ್ಲಿಯ ರೂಪರೇಷೆಗಳನ್ನು ಚಂದೇಲರು, ಗಾಹದ್ವಾಲರು, ತೋಮರರು ಮತ್ತು ದೂರದ ಕಾಶ್ಮೀರರಾಜರು ತಮ್ಮ ನಾಣ್ಯಗಳಲ್ಲಿ ಅನುಕರಿಸಿದರು.