ಇದು ಹಲಸಿನ ಕುಟುಂಬಕ್ಕೆ ಸೇರಿದ (ಮೋರೇಸೀ ಕುಟುಂಬ), ಬೃಹತ್ತಾಗಿ ಬೆಳೆಯುವ ವೃಕ್ಷವಾಗಿದ್ದು ಮೊದಲಿಗೆ ಎಪಿಫೈಟಿಕ್ ಆಗಿ ಜನ್ಮ ತಾಳುತ್ತದೆ. ಎಪಿಫೈಟಿಕ್ ಅಂದರೆ ಬೇರೊಂದು ಮರದ ಮೇಲೆ ಬಿದ್ದ ಬೀಜ ಹುಟ್ಟಿ ಅಲ್ಲಿಂದ ತನ್ನ ಜೀವನ ಚಕ್ರ ಆರಂಭಿಸುತ್ತದೆ. ಇದು ನಮ್ಮ ದೇಶದ ರಾಷ್ಟ್ರೀಯ ವೃಕ್ಷವಾಗಿದೆ. ಅಶ್ವತ್ಥ ವೃಕ್ಷವೂ ಇದೇ ಜಾತಿಯದ್ದಾಗಿದೆ.

ಆಲದ ಮರ
  • ಆಲದ ಮರ ಒಮ್ಮೆ ನೆಲದ ಮೇಲೆ ಬೇರು ಬಿಟ್ಟರೆ, ಅದು ನೂರಾರು ವರ್ಷಗಳ ಕಾಲ ಬೆಳೆದು ಬದುಕ ಬಲ್ಲದು. ಆಲದ ಮರ ಬೆಳೆದಂತೆ ಅನೇಕ ಬಿಳಲುಗಳನ್ನು ಹೊಂದಿ ವಿಸ್ತಾರವಾಗುತ್ತಾ, ಸುಮಾರು ಒಂದು ಎಕರೆಯಷ್ಟು ಸ್ಥಳವನ್ನು ಅದು ಆಕ್ರಮಿಸಿಕೊಂಡು ಬಿಡುತ್ತದೆ.
  • ಮನುಷ್ಯನ ಜೀವನಕ್ಕೂ ಆಲದ ಮರಕ್ಕೂ ಅವಿನಾಭಾವ ಸಂಬಂಧವಿದೆ. ಸಾಮಾನ್ಯವಾಗಿ ತಂದೆಯನ್ನು ಆಲದ ಮರಕ್ಕೆ ಹೋಲಿಸುವರು. ಏಕೆಂದರೆ ಇದು ಬಹುಪಯೋಗಿ ಮರ. ಹಾಗಾಗಿ ಮನುಷ್ಯರ ವಂಶಾವಳಿಯನ್ನು ಆಲದ ಮರಕ್ಕೆ ಹೋಲಿಸುತ್ತಾರೆ. 'ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಂಡಂತೆ' ಎಂಬ ನುಡಿಗಟ್ಟು ಪ್ರಚಲಿತದಲ್ಲಿದೆ.
  • ಇದು ಸು. 100' ಎತ್ತರ ಬೆಳೆದು ಒಳ್ಳೆ ಹರವಾಗಿ ಹಬ್ಬುತ್ತದೆ. ಮರದ ಟೊಂಗೆಗಳಿಂದ ಜೋತುಬಿದ್ದ ಬಿಳಲುಗಳು ಅಥವಾ ಜಡೆ ಬೇರುಗಳು ಟೊಂಗೆಗಳಿಗೆ ಕಂಬಗಳಂತೆ ಆಧಾರ ಕೊಟ್ಟು ಅದರ ಹಬ್ಬುವಿಕೆಗೆ ಸಹಾಯ ಮಾಡುತ್ತವೆ. ಈ ಮರಗಳನ್ನು ದಾರಿಯುದ್ದಕ್ಕೂ ನೆರಳಿಗಾಗಿ ಬಳಸುತ್ತಾರೆ.
  • ಇದರ ಎಲೆ ಆಡು, ಕುರಿ, ದನಕರುಗಳಿಗೆ ಒಳ್ಳೆಯ ಆಹಾರ. ಕಾಗದ ತಯಾರಿಕೆಗೆ ಬೇಕಾಗುವ ಪಲ್ಪನ್ನು ತಯಾರಿಸಲು ಇದರ ಕಟ್ಟಿಗೆಯನ್ನು ಬಳಸುವರು. ಈ ಮರ ಸೌದೆಗೆ ಉಪಯೋಗವಾಗುತ್ತದೆ. ಆಲದ ಮರದ ಹಾಲನ್ನು ಹಲ್ಲುನೋವಿನ ಶಮನಕ್ಕೂ ಗಂಟುಕಟ್ಟಿದ ಹುಣ್ಣುಗಳಿಗೆ, ಬೆಚ್ಚಾರದಂತೆ ಬಾವು ಬಂದ ಭಾಗಕ್ಕೆ ಲೇಪವಾಗಿಯೂ ಉಪಯೋಗಿಸುವುದುಂಟು.
  • ಚಿಗುರಿನ ಕಷಾಯವನ್ನು ಭೇದಿಗೆ ಔಷಧವಾಗಿ ಕೊಡುತ್ತಾರೆ. ಹಾಲನ್ನು ಸಂಧಿವಾತಕ್ಕೆ ಉಪಯೋಗಿಸುತ್ತಾರೆ. ಆಲದ ಹಣ್ಣು ಅಳಿಲುಗಳಿಗೆ ತುಂಬಾ ಪ್ರಿಯವಾದ ಆಹಾರ. ಆಲದ ಗಿಡವನ್ನು ಕುಬ್ಜವಾಗಿಸಿ (ಬೋನ್ಸಾಯ್) ಅಲಂಕಾರಿಕ ಗಿಡವಾಗಿಯೂ ಬಳಸುತ್ತಾರೆ.
"https://kn.wikipedia.org/w/index.php?title=ಆಲದ_ಮರ&oldid=846194" ಇಂದ ಪಡೆಯಲ್ಪಟ್ಟಿದೆ