ಖೀವ
ಖೀವ ಉಜ಼್‍ಬೇಕಿಸ್ತಾನ್‍ನ ಖೊರಾಜ಼್‍ಮ್ ಪ್ರದೇಶದಲ್ಲಿ, ಸುಮಾರು ೯೩,೦೦೦ ಜನರಿರುವ ಜಿಲ್ಲಾ ಮಟ್ಟದ ಒಂದು ನಗರವಾಗಿದೆ.[೧] ಹಿಂದೆ, ಸೋವಿಯತ್ ದೇಶದ ಉಜ಼್‍ಬೇಕ್ ಸೋವಿಯತ್ ಸಮಾಜವಾದಿ ಗಣರಾಜ್ಯದ ಖೊರೆಜ಼್‍ಮ್ ಅಬ್ಲಾಸ್ಟ್‌ನ (ಆಡಳಿತ ವಿಭಾಗ) ಒಂದು ಪಟ್ಟಣವಾಗಿತ್ತು. ಆಮೂ ದಾರ್ಯ ನದಿಗೆ ಪಶ್ಚಿಮಕ್ಕೆ ಕರಾ-ಕುಂ ಮರುಭೂಮಿಯ ಬಳಿಯ ಓಯಸಿಸ್ ಒಂದರ ಮೇಲಿದೆ. ಹಳೆಯ ಪಟ್ಟಣ ಪ್ರಾಚೀನವಾದದ್ದು. 10ನೆಯ ಶತಮಾನದ ಅರಬ್ ಭೂಗೋಳಶಾಸ್ತ್ರಜ್ಞರಾದ ಅಲ್-ಇಸ್ತಖ್ರಿ ಮತ್ತು ಅಲ್-ಮಕ್‌ದೀಸಿ ಇದರ ಬಗ್ಗೆ ಉಲ್ಲೇಖಿಸಿದ್ದಾರೆ. ಇದರ ಸುತ್ತಣ ಪ್ರದೇಶ ಖಾನರ ಆಡಳಿತಕ್ಕೊಳಪಟ್ಟಿದ್ದಾಗ (1920ರ ವರೆಗೆ) ಖೀವ ಅದರ ರಾಜಧಾನಿಯಾಗಿತ್ತು.[೨] ಇಲ್ಲಿಯ ಪ್ರಾಚೀನ ಅವಶೇಷಗಳು ತುಂಬ ಕುತೂಹಲಕಾರಿಯಾಗಿವೆ. ಹಳೆಯ ನಗರ ಕೋನಾ ಆರ್ಕ್ (ಹಳೆಯ ದುರ್ಗ) ದೀರ್ಘಚತುರಸ್ರಾಕಾರವಾದ ಗೋಡೆಯಿಂದ ಆವೃತವಾಗಿತ್ತು. ಇದಕ್ಕೆ ನಾಲ್ಕೂ ಕಡೆಗಳಲ್ಲೂ ನಾಲ್ಕು ದ್ವಾರಗಳಿದ್ದುವು. 19ನೆಯ ಶತಮಾನದ ನಡುಗಾಲದಲ್ಲಿ ಇದರ ಸುತ್ತಣ ಉಪನಗರಗಳನ್ನೂ ಸೇರಿಸಿ, 10 ದ್ವಾರಗಳುಳ್ಳ ಹೊರಗೋಡೆಗಳನ್ನು ನಿರ್ಮಿಸಲಾಯಿತು. ಆಗ ಹಳೆಯ ನಗರಕ್ಕೆ ಇಷಾನ್ ಕಾಲೆಹ್ (ಹಳೆಯ ಭಾಗ) ಎಂಬ ಹೆಸರು ಬಂತು. ಈಗ ಈ ಭಾಗವನ್ನು ಪುರಾತನ ಸ್ಮಾರಕವೆಂದು ಸಂರಕ್ಷಿಸಲಾಗಿದೆ.
ಖೀವ ನಗರದಲ್ಲಿ ಯಾಂತ್ರೀಕೃತ ಕೃಷಿಯ ಶಾಲೆ, ಕೃಷಿ ಕಾಲೇಜ್, ರೈಲ್ವೆ ಸಂಸ್ಥೆ, ಪುರುಷರ ಮತ್ತು ಮಹಿಳೆಯರ ಬೋಧಕ ಶಿಕ್ಷಣ ಶಾಲೆಗಳು ಮುಂತಾದ ಸಂಸ್ಥೆಗಳಿವೆ. ಹಿಂದಣ ಖಾನರ ಅರಮನೆ ಇದ್ದಲ್ಲಿ ಈಗ ಇತಿಹಾಸ-ಕ್ರಾಂತಿ ವಸ್ತುಸಂಗ್ರಹಾಲಯವುಂಟು. ಹತ್ತಿ ನೂಲುವಿಕೆ, ಇಟ್ಟಿಗೆ ತಯಾರಿಕೆ, ಜಮಖಾನ ತಯಾರಿಕೆ, ಕಸೂತಿ, ಮರಚಿತ್ರಗಾರಿಕೆ ಮುಂತಾದವು ಇಲ್ಲಿಯ ದೊಡ್ಡ ಸಣ್ಣ ಕೈಗಾರಿಕೆಗಳು.
ಉಲ್ಲೇಖಗಳು
ಬದಲಾಯಿಸಿ- ↑ "Classification system of territorial units of the Republic of Uzbekistan" (in ಉಜ್ಬೇಕ್ and ರಷ್ಯನ್). The State Committee of the Republic of Uzbekistan on statistics. July 2020. Archived from the original on 2022-07-02. Retrieved 2022-02-15.
- ↑ "Khiva". Encyclopædia Britannica. May 16, 2018. Archived from the original on August 2, 2020. Retrieved June 20, 2020.
ಹೊರಗಿನ ಕೊಂಡಿಗಳು
ಬದಲಾಯಿಸಿ