ಖಾಫೀ ಖಾನ್
ಖಾಫೀ ಖಾನ್ ಮೊಗಲರ ಕಾಲದಲ್ಲಿದ್ದ ಒಬ್ಬ ಇತಿಹಾಸಕಾರ. ಮುಹಮ್ಮದ್ ಹಷೀಂ ಅಥವಾ ಹಾಷಿಂ ಅಲೀಖಾನ್ ಇವನ ನಿಜವಾದ ಹೆಸರು. ಈತ ಬರೆದ ಮುಂತಖದ್-ಅಲ್-ಲುಬಬ್ ಅಥವಾ ತಾರಿಖ್ ಇ ಖಾಫೀಖಾನ್[೧] ಔರಂಗ್‌ಜ಼ೇಬನ ಕಾಲದ ಇತಿಹಾಸ ತಿಳಿಯಲು ನೆರವಾಗುವ ಪ್ರಮುಖ ಆಧಾರ ಗ್ರಂಥ.[೨][೩]
ಜೀವನ ಚರಿತ್ರೆ
ಬದಲಾಯಿಸಿದೆಹಲಿಯ ಪ್ರತಿಷ್ಠಿತ ಮನೆತನವೊಂದರಲ್ಲಿ ಜನಿಸಿದ ಖಾಫೀ ಖಾನನ ತಂದೆ ಖ್ವಾಜಾ ಮೀರ್ ಕೂಡ ಒಬ್ಬ ಇತಿಹಾಸಕಾರನಾಗಿದ್ದ. ಆರಂಭದಲ್ಲಿ ಆತ ಶಾಹ ಜಹಾನನ ಮಗ ಮುರಾದ್ ಬಕ್ಷನ ಕೈಕೆಳಗೆ ಉನ್ನತ ಹುದ್ದೆಯಲ್ಲಿದ್ದು ಅನಂತರ ಔರಂಗಜ಼ೇಬನ ಅಡಿಯಲ್ಲಿ ನೌಕರನಾಗಿದ್ದ. ಅವನ ಮಗನಾದ ಖಾಫೀ ಖಾನ್ ಕೂಡ ಔರಂಗಜ಼ೇಬನ ಕೈಕೆಳಗೆ ರಾಜಕೀಯ ಮತ್ತು ಸೈನಿಕ ಹುದ್ದೆಗಳಲ್ಲಿದ್ದ.[೪] ಔರಂಗ್‌ಜ಼ೇಬನ ಮರಣಾನಂತರವೂ ಮೊಗಲ್ ಆಡಳಿತದಲ್ಲಿ ಅಧಿಕಾರಿಯಾಗಿದ್ದ. ಔರಂಗ್‌ಜ಼ೇಬನ ಕಾಲದಲ್ಲಿ ಗುಜರಾತಿನ ಮೊಗಲ್ ಸುಬೇದಾರ್ ಖಾಫೀ ಖಾನನನ್ನು ಮುಂಬಯಿ ದ್ವೀಪದಲ್ಲಿದ್ದ ಬ್ರಿಟಿಷರಲ್ಲಿಗೆ ದೂತನಾಗಿ ಕಳುಹಿಸಿದ್ದ. ಆ ಸಮಯದಲ್ಲಿ ಅವರ ನಡವಳಿಕೆಯನ್ನು ಈತ ಗಮನಿಸಿದ. ಅವರು ವಿನಾಕಾರಣ, ರಾಜಕೀಯ ಘನತೆಗೆ ಕುಂದು ಬರುವ ರೀತಿಯಲ್ಲಿ, ನಗುತ್ತಿದ್ದರೆಂದು ಈತ ಬರೆದಿಟ್ಟಿದ್ದಾನೆ. ದಖನಿನ ಮೇಲೆ ಔರಂಗ್‌ಜ಼ೇಬ್ ಕೈಗೊಂಡ ಸುದೀರ್ಘ ದಂಡಯಾತ್ರೆಯ ಕಾಲದಲ್ಲಿ ಆತನ ಜೊತೆಯಲ್ಲಿದ್ದ ಖಾಫೀ ಖಾನ್ ಮರಾಠರ ಚಟುವಟಿಕೆಗಳ ಬಗ್ಗೆಯೂ ಅನೇಕ ವಿವರಗಳನ್ನು ನೀಡಿದ್ದಾನೆ.
ಪುಸ್ತಕದಲ್ಲಿರುವ ವಿಷಯಗಳು
ಬದಲಾಯಿಸಿಖಾಫೀ ಖಾನ್ ಬರೆದಿರುವ ಇತಿಹಾಸ ಬಾಬರನ ಆಳ್ವಿಕೆಯಿಂದ ಆರಂಭವಾಗುತ್ತದೆ. ಅದಕ್ಕೆ ಮೊದಲು ನೊಆದಿಂದ ಬಾಬರನವರೆಗಿನ ಮೊಗಲರ ಹಾಗೂ ಟಾರ್ಟರರ ಇತಿಹಾಸದ ಸೂಕ್ಷ್ಮ ಪರಿಚಯವನ್ನು ಮಾಡಿಕೊಡಲಾಗಿದೆ. ಅಕ್ಬರನ ಮರಣದವರೆಗಿನ ಇತಿಹಾಸ ಸಂಕ್ಷಿಪ್ತವಾಗಿದ್ದು ಅನಂತರ 130 ವರ್ಷಗಳ ಇತಿಹಾಸ ಸುದೀರ್ಘವಾಗಿದೆ. ಇದರಲ್ಲಿ ಕೊನೆಯ 53 ವರ್ಷಗಳಲ್ಲಿ ನಡೆದ ಘಟನೆಗಳಿಗೆ ಈತ ಪ್ರತ್ಯಕ್ಷದರ್ಶಿಯಾಗಿದ್ದ ಕಾರಣ ಇದು ಸಮಕಾಲೀನ ಇತಿಹಾಸ. ಈ ಗ್ರಂಥದ ರಚನೆಯ ಕಾಲದಲ್ಲಿ ಇದರ ಕೆಲವು ಭಾಗಗಳನ್ನು ಅವಲೋಕಿಸಿದ ಔರಂಗ್‌ಜ಼ೇಬ್ ಈ ಗ್ರಂಥವನ್ನು ಬರೆಯಕೂಡದೆಂದು ನಿಷೇಧಿಸಿದ. ಆದರೆ ಗ್ರಂಥಕರ್ತ ಮಾತ್ರ ಇದರಿಂದ ವಿಚಲಿತನಾಗದೆ ತನ್ನ ಕಾರ್ಯವನ್ನು ಗುಪ್ತವಾಗಿ ಮುಂದುವರಿಸಿದ. ಔರಂಗ್‌ಜ಼ೇಬನ ಅನಂತರದ ಮೊಗಲ್ ಅರಸನಾದ ಮುಹಮ್ಮದ್ ಷಹ ಇದನ್ನು ಕಂಡು ಮೆಚ್ಚಿ, ಗುಪ್ತರೀತಿಯಲ್ಲಿ ಬರೆದ ಕಾರಣ ಗ್ರಂಥಕರ್ತನಿಗೆ ಖಾಫೀ ಖಾನ್ ಎಂದು ಬಿರುದನ್ನು ನೀಡಿದನೆಂಬ ಒಂದು ಕಥೆ ಪ್ರಚಲಿತವಾಗಿದೆ. ಆದರೆ ಇಲಿಯಟ್ ಇದನ್ನು ಒಪ್ಪಿಲ್ಲ. ಇವನ ಪಿತೃಗಳ ಮೂಲ ನಿವಾಸವಾದ ಖಾಫ್ ಎಂಬುದು ಖುರಸಾನ್‌ಗೆ ಸೇರಿದ ಒಂದು ಜಿಲ್ಲೆಯ ಹೆಸರೆಂದೂ, ಖ್ವಾಫಿ ಎಂಬುದು ಮನೆತನದ ಹೆಸರೆಂದೂ ಸೂಚಿಸಿದ್ದಾನೆ. ಇವನ ತಂದೆಯ ಹೆಸರು ಖ್ವಾಜಾ ಮೀರ್ ಖ್ವಾಫಿ ಅಥವಾ ಮೀರ್ ಖ್ವಾಫಿ ಎಂಬುದನ್ನು ಇಲ್ಲಿ ಗಮನಿಸಬೇಕು. ತೈಮೂರನ ಮನೆತನದ ದೊರೆಗಳಲ್ಲಿ ಮಾತ್ರವೇ ಅಲ್ಲದೆ, ದೆಹಲಿಯ ದೊರೆಗಳಲ್ಲಿಯೇ ಸಿಕಂದರ್ ಲೋದಿಯ ಕಾಲದಿಂದಲೂ ಶ್ರದ್ಧೆ ಸರಳತೆ ನ್ಯಾಯಪರತೆಗಳಲ್ಲಿ ಔರಂಗ್‌ಜ಼ೇಬನಷ್ಟು ಪ್ರಸಿದ್ಧಿ ಪಡೆದವರು ಬೇರೆ ಯಾರೂ ಇರಲಿಲ್ಲ. ಧೈರ್ಯದಲ್ಲಿ, ದೀರ್ಘಕಾಲದ ಕಷ್ಟವನ್ನು ಅನುಭವಿಸುವುದರಲ್ಲಿ, ತರ್ಕಬದ್ಧವಾದ ನಿರ್ಣಯಗಳನ್ನು ನೀಡುವುದರಲ್ಲಿ ಈತ ಅದ್ವಿತೀಯನಾಗಿದ್ದ. ಪರಸ್ಪರ ಸ್ಪರ್ಧೆಗಳ ಫಲವಾಗಿ ಇವನ ಅಧೀನದಲ್ಲಿದ್ದ ಶ್ರೀಮಂತ ವರ್ಗಗಳಲ್ಲಿ ಒಡಕುಗಳುಂಟಾಗಿ, ಇವನ ಪ್ರತಿಯೊಂದು ಯೋಜನೆಯೂ ವ್ಯರ್ಥವಾಯಿತು. ಪ್ರತಿಯೊಂದೂ ವಿಳಂಬದ ಹಾದಿ ಹಿಡಿದು ತನ್ನ ಧ್ಯೇಯವನ್ನು ಸಾಧಿಸಲಾರದೆ ಹೋಯಿತು. ಮಾನವ ಸಹಜವಾದ ಅನೇಕ ಸುಖೋಪಭೋಗಳನ್ನು ಆತ ಸ್ವತಃ ನಿರಾಕರಿಸಿದ-ಎಂದು ಔರಂಗ್‌ಜ಼ೇಬನ ವಿಚಾರವಾಗಿ ಖಾಫೀ ಖಾನ್ ಹೇಳಿದ್ದಾನೆ. ತನ್ನ ಸ್ವಾಮಿಯ ಶತ್ರುವಾದ ಶಿವಾಜಿಯ ವಿಚಾರವಾಗಿ ಬರೆಯುತ್ತ, ತನ್ನ ಪ್ರದೇಶದಲ್ಲಿಯ ಜನರ ಮಾನರಕ್ಷಣೆಗಾಗಿ ಶಿವಾಜಿ ಸದಾ ಶ್ರಮಿಸುತ್ತಿದ್ದ; ಮಹಮ್ಮದೀಯ ಸ್ತ್ರೀಯರು ಮತ್ತು ಮಕ್ಕಳು ತನಗೆ ಸೆರೆ ಸಿಕ್ಕಲ್ಲಿ ಅವರ ಗೌರವವನ್ನು ಕಾಪಾಡಲು ಆತ ಎಚ್ಚರ ವಹಿಸುತ್ತಿದ್ದ, ಎಂದು ಈತ ಹೇಳಿರುವುದು ಇವನ ನಿರಪೇಕ್ಷ ಬರವಣಿಗೆಗೆ ಉದಾಹರಣೆ. ನೂರಾರು ಪುಟಗಳ ಈ ಸುದೀರ್ಘ ಕಥನ ಸಮ್ರಾಟ್ ಮಹಮ್ಮದ್ ಷಹನ ಹದಿನಾಲ್ಕನೆಯ ವರ್ಷದವರೆಗೆ ಮುಂದುವರಿದಿದೆ.
ಉಲ್ಲೇಖಗಳು
ಬದಲಾಯಿಸಿ- ↑ B. Sheikh Ali (1978). History, Its Theory and Method. Macmillan. p. 396.
- ↑ H. Beveridge (1993). "K̲h̲wāfī K̲h̲ān". In M. Th. Houtsma (ed.). E. J. Brill's First Encyclopaedia of Islam, 1913-1936. BRILL. pp. 868–869. ISBN 90-04-09790-2.
- ↑ Ali, M. Athar (1995). "The Use of Sources in Mughal Historiography". Journal of the Royal Asiatic Society. 5 (3). Cambridge University Press: 361–363. doi:10.1017/S1356186300006623. JSTOR 25183062.
- ↑ Harbans Singh, ed. (1992). The Encyclopaedia of Sikhism: M-R. Punjabi University. p. 148. ISBN 978-81-7380-349-9.