ಕುರ್ದ್ ಜನಾಂಗ
ಕುರ್ದಿಸ್ತಾನವೆಂದು ಹೆಸರಿಸಲಾಗಿರುವ ಭೂಭಾಗದಲ್ಲಿನ ನಿವಾಸಿಗಳು. ಇವರಿಂದಲೇ ನಾಡಿಗೆ ಆ ಹೆಸರು. ಸುಮಾರು ಏಳನೆಯ ಶತಮಾನದಿಂದ ಪಶ್ಚಿಮ ಇರಾನಿಯರಿಗೆ ಮತ್ತು ಜಾಗ್ರೋಸ್ ವಲಯದಲ್ಲಿರುವ ಇರಾನೀಕೃತ ಬೆಟ್ಟಗಾಡಿನ ಜನಗಳಿಗೆ ಈ ಹೆಸರನ್ನು ಬಳಸಲಾಗುತ್ತಿದೆ. ಆದರೆ ಇವರ ಇತಿಹಾಸ ಇನ್ನೂ ಪ್ರಾಚೀನವೆಂದು ನಂಬಲು ಸಾಕಷ್ಟು ಆಧಾರಗಳಿವೆ. ಪಾಲಿಬಿಯಸ್ (ಕ್ರಿ.ಪೂ.ಸು. 200ರಿಂದ120), ಸ್ಟ್ರಾಬೊ (ಕ್ರಿ.ಪೂ. 64ರಿಂದ 20) ಮತ್ತಿತರರು ಹೆಸರಿಸಿರುವ ಕುರ್ತಿಯೋಯಿ ಡಕಾಯಿತ ತಂಡವೂ ಕಾರ್ದೂಚ್ಚೀ ತಂಡವೂ ಇದೇ ಜನಾಂಗದವರಾಗಿದ್ದಿರಬೇಕೆಂದು ನಂಬಲಾಗಿದೆ. ಶರಾಫ್‍ನಾಮಾ ಕುರ್ದ್ ಜನಾಂಗದ ಅತ್ಯಂತ ಪ್ರಾಚೀನ ಇತಿಹಾಸ ಗ್ರಂಥ (1596). ಈ ಗ್ರಂಥದಲ್ಲಿ ಶಿಯಾ ಮತ್ತು ಅಲ್ ಇಲಾಹಿ ಪಂಥಕ್ಕೆ ಸೇರಿದ ಲಕ್ ಮತ್ತು ಲೂರ್ ಪಂಗಡಗಳನ್ನು ಕುರ್ದ್ ಜನಾಂಗದ ಒಂದು ಭಾಗವೆಂದು ಹೇಳಲಾಗಿದೆಯಾದರೂ ಕುರ್ದ್ ಜನಾಂಗವೆಂದಾಗ ಸಾಮಾನ್ಯವಾಗಿ ಈ ಎರಡು ಪಂಗಡಗಳನ್ನು ಸೇರಿಸಿಕೊಳ್ಳುವುದಿಲ್ಲ. ಪೂರ್ವ ತುರ್ಕಿಸ್ತಾನ, ಈಶಾನ್ಯ ಇರಾಕ್, ವಾಯವ್ಯ ಪರ್ಷಿಂiÀi ಹಾಗೂ ಸೋವಿಯತ್ ಟ್ರಾನ್ಸ್ ಕಾಕೇಸಿಯ ಮತ್ತು ಸಿರಿಯಾದ ಮೇರೆಯೊಳಗಿನ ಪ್ರಾಂತ್ಯಗಳಿಂದ ಆವೃತವಾಗಿರುವ ಕೆಲವು ಪ್ರದೇಶಗಳಲ್ಲಿ ಈಗ ಕುರ್ದ್ ಜನಾಂಗ ವಾಸಿಸುತ್ತಿದೆ. ಡಮಾಸ್ಕಸ್ (ಸಿರಿಯ), ಅಲೆಪ್ಪೊ (ಸಿರಿಯ), ಕಜಂವೀನ್, ಕರಸಾನ್ ಮತ್ತು ಕೇರ್‍ಮಾನ್ (ಇರಾನ್), ಮತ್ತು ಅಂಕಾರದಂಥ (ತುರ್ಕಿಸ್ತಾನ) ದೂರದ ನಗರಗಳಲ್ಲಿಯೂ ಈ ಜನರಿರುವುದು ಕಂಡುಬಂದಿದೆ. ಈಚಿನ ವರದಿಗಳ ಪ್ರಕಾರ ಇವರ ಜನಸಂಖ್ಯೆ ಒಂದು ಕೋಟಿಗಿಂತಲೂ ಹೆಚ್ಚಾಗಿದೆ ಎಂದು ಹೇಳಲಾಗಿದ್ದರೂ ಈ ಸಂಖ್ಯೆ ಪ್ರಶ್ನಾತೀತವಾಗಿಲ್ಲ. ಕೆಲವು ವರದಿಗಳ ಪ್ರಕಾರ ಈ ಸಂಖ್ಯೆ ಅರುವತ್ತು ಲಕ್ಷಕ್ಕಿಂತ ಹೆಚ್ಚಾಗಿಲ್ಲ.[೧]
ಒಟ್ಟು ಜನಸಂಖ್ಯೆ | |
---|---|
c. 30–32 million | |
ಜನಸಂಖ್ಯಾ ಬಾಹುಳ್ಯದ ಪ್ರದೇಶಗಳು | |
ಟರ್ಕಿ | estimates from 12 to 22.5 million 15.7–25% |
ಇರಾನ್ | estimates from 3.35 million to 8 million, 5–10% |
ಇರಾಕ್ | estimates from 4 to 6.5 million, 15–23% |
ಸಿರಿಯಾ | estimates from 2 to 2.5 million, 10–15% |
ಅರ್ಮೇನಿಯ | 37,500 |
ಜಾರ್ಜಿಯ | 13,861 (as of 2015) |
ಅಜೆರ್ಬೈಜಾನ್ | 6,100 |
Diaspora | c. 2 million |
Germany | 800,000 |
France | 150,000 |
ಇಸ್ರೇಲ್ | 100,000–200,000 |
Sweden | 83,600 |
Belgium | 80,000 |
ನೆದರ್ಲ್ಯಾಂಡ್ಸ್ | 70,000 |
Russia | 63,800 |
ಯುನೈಟೆಡ್ ಕಿಂಗ್ಡಂ | 50,000 |
ಕಜಾಕಸ್ಥಾನ್ | 42,300 |
ಸ್ವಿಟ್ಜರ್ಲ್ಯಾಂಡ್ | 35,000 |
ಡೆನ್ಮಾರ್ಕ್ | 30,000 |
ಜಾರ್ಡನ್ | 30,000 |
Austria | 23,000 |
Greece | 22,000 |
ಅಮೇರಿಕ ಸಂಯುಕ್ತ ಸಂಸ್ಥಾನ | 15,400 |
Kyrgyzstan | 13,200 |
ಕೆನಡಾ | 11,685 |
Finland | 10,700 |
ಆಸ್ಟ್ರೇಲಿಯಾ | 7,000 |
ಧರ್ಮ | |
majority Islam since 7th century (Sunni Muslim, but also Shia Muslim and Sufism) with minorities of deism, agnosticism, Yazdânism, Zoroastrianism, Christianity and Judaism | |
ಸಂಬಂಧಿತ ಜನಾಂಗೀಯ ಗುಂಪುಗಳು | |
other Iranian peoples |
ಕ್ರಿ.ಪೂ. 2400ರಿಂದ 2300ರ ನಡುವಣ ಅವಧಿಯಲ್ಲಿ ಈ ಪ್ರದೇಶದಲ್ಲಿ ವಾಸವಾಗಿದ್ದ ಗುತಿ ಅಥವಾ ಕುರ್ತಿ ಜನಾಂಗವೇ ಕುರ್ದ್ ಜನಾಂಗಕ್ಕೆ ಮೂಲವೆಂದು ಹೇಳಲಾಗಿದೆ. ಈ ಪ್ರದೇಶದಲ್ಲಿದ್ದ ಮೂಲನಿವಾಸಿಗಳು ಬಹುಮಟ್ಟಿಗೆ ತಮ್ಮ ಸುತ್ತ ಮುತ್ತ ಇದ್ದ ತುರ್ಕರು, ಆರ್ಮೇನಿಯನ್ನರು, ಸೆಮೈಟ್‍ಗಳು ಮತ್ತು ಇರಾನಿಯ ರೊಂದಿಗೆ ಬೆರೆತುಹೋಗಿದ್ದಾರೆ. ಇಂದು ನಮಗೆ ಕಾಣಸಿಗುವುದು ಮಿಶ್ರಜನಾಂಗ ಮಾತ್ರ. ಸುಮಾರು ಏಳನೆಯ ಶತಮಾನದಲ್ಲಿ (ಕ್ರಿ.ಶ. 636) ಅರಬರು ಕುರ್ದಿಗಳ ಮೇಲೆ ಜಯಗಳಿಸಿ, ಅವರನ್ನು ಇಸ್ಲಾಮ್ ಧರ್ಮಕ್ಕೆ ಪರಿವರ್ತಿಸಿದರು. ಹೀಗಾಗಿ ಈ ಜನಾಂಗದ ಬಹುಭಾಗಸುನ್ನೀ ಸಂಪ್ರದಾಯದ ಮುಸ್ಲಿಮರಾಗಿದ್ದಾರೆ. ದರ್‍ವೇಶ್ ಅನುಭಾವ ಪಂಥದ ಅನುಯಾಯಿಗಳು ಅದರಲ್ಲೂ ಖಾದಿರಿ ಮತ್ತು ನಕ್ಷ್ ಬಂದಿ ಪಂಥದವರು ಕುರ್ದಿಸ್ತಾನದ ಎಲ್ಲ ಜಿಲ್ಲೆಗಳಲ್ಲೂ ಇದ್ದಾರೆ. ಭಿನ್ನಧರ್ಮೀಯರಾದ ಬೇಕ್‍ತಶೀಖಿ, ಜಿಲ್‍ಬಶ್, ಮತ್ತು ಅಹ್ಲ್ - ಇ - ಹಕ್ ಹಾಗೂ ಯಜೀದಿಗಳ ಸಂಖ್ಯೆ ಸುಮಾರು 40,000 ಕ್ಕೂ ಹೆಚ್ಚಾಗಿದೆ ಎಂದು ಹೇಳಲಾಗಿದೆ. ಇಷ್ಟಾದರೂ ಇವರು ಅಲ್ಪಸಂಖ್ಯಾತರು ಎಂಬುದನ್ನು ಒಪ್ಪಬೇಕು.
ಕುರ್ದಿಗಳು ಕಪ್ಪುಬಣ್ಣದವರು; ಕೂದಲು ಕಂದು ಅಥವಾ ಕಪ್ಪು. ಕಣ್ಣು ಕಂದು ಅಥವಾ ಬೂದು. ಮಧ್ಯಮ ನಿಲವಿನ, ಧೀರಸ್ವಭಾವದ ಗಟ್ಟಿಮುಟ್ಟಾಗಿರುವ ಜನರಿವರು. ಈ ಬೃಹತ್ ಜನಸಮುದಾಯದ ಬಹುಭಾಗ - ಅದರಲ್ಲಿಯೂ ಗ್ರಾಮಾಂತರ ಪ್ರದೇಶಗಳಲ್ಲಿ - ಅನೇಕ ಸಣ್ಣ ಸಣ್ಣ ಪಂಗಡಗಳಾಗಿ ಹಂಚಿಹೋಗಿದೆ. ಪ್ರತಿಯೊಂದು ಪಂಗಡಕ್ಕೂ ಅನುವಂಶಿಕವಾಗಿ ನಾಯಕತ್ವದ ಜಮೀನುದಾರ್ ಅಥವಾ ದರ್ವೇಶ್ ಶೇಕ್ ಮುಖ್ಯಸ್ಥನಾಗಿರುತ್ತಾನೆ. ಇವರು ಪರಮಾಧಿಕಾರಿಗಳಂತೆ ಅಧಿಕಾರ ಚಲಾಯಿಸುತ್ತ ಬಂದಿದ್ದಾರೆ. ಆದರೆ ಈಚೆಗೆ ಕೇಂದ್ರ ಆಡಳಿತ ವ್ಯವಸ್ಥೆಯಲ್ಲಿ ಸಂಘಟನೆ ಹೆಚ್ಚುತ್ತ ಬಂದಂತೆ ಈ ಹಳೆಯ ಸಾಮಾಜಿಕ ವ್ಯವಸ್ಥೆ ಕಣ್ಮರೆಯಾಗುತ್ತ ನಡೆದಿದೆ.
ಕುರ್ದಿಸ್ತಾನದಲ್ಲಿ ವಾಯವ್ಯ ಇರಾನೀ ಭಾಷೆಯ ಪ್ರಭೇದವಾದ ಕುರ್ದಿಭಾಷೆ ಬಳಕೆಯಲ್ಲಿದೆ. ಇದರ ಉಪಭಾಷೆಗಳು, ಪರಸ್ಪರ ಅರಿವು ಅಸಾಧ್ಯವಾಗುವಷ್ಟರ ಮಟ್ಟಿಗೆ ತೀರ ಭಿನ್ನವಾಗಿವೆ. ಕಣಿವೆಯಿಂದ ಕಣಿವೆಗೆ ಉಪಭಾಷೆಯಲ್ಲಿ ವ್ಯತ್ಯಾಸಗಳು ಕಂಡುಬರುತ್ತವೆಯಾದರೂ ಇವುಗಳಲ್ಲಿ ಕಾಣಬರುವ ಕೆಲವು ವಿಶಿಷ್ಟ ಲಕ್ಷಣಗಳು ಇವೆಲ್ಲ ಒಂದೇ ಮೂಲದಿಂದ ಉತ್ಪನ್ನವಾಗಿರುವ ಉಪಭಾಷೆಗಳು ಎಂಬುದನ್ನು ಸ್ಪಷ್ಟಪಡಿಸುತ್ತವೆ. ಬಹುಶಃ ಮೀಡಿಯನ್ ಎಂಬುದು ಆ ಮೂಲಭಾಷೆಯಾಗಿದ್ದಿರಬೇಕೆಂದು ವಿದ್ವಾಂಸರ ಊಹೆ. ಕುರ್ದಿ ಅದರ ವಿಕಾಸದಲ್ಲಿನ ಒಂದು ಹಂತ. ಕುರ್ದಿಯ ಉಪಭಾಷೆಗಳನ್ನು ಕಿರ್‍ಮಾಂಜಿ ಎಂದು ಕರೆಯುತ್ತಾರೆ. ಇದರಲ್ಲಿಯೂ ಉತ್ತರ, ದಕ್ಷಿಣ ಎಂದು ಎರಡು ಉಪಭಾಷೆಗಳಿವೆ. ಇವುಗಳನ್ನು ಬೇರ್ಪಡಿಸುವ ವಿಭಾಜಕ ರೇಖೆ ಉರ್ಮಿಯ ಸರೋವರದ ದಕ್ಷಿಣ ದಡದಿಂದ ಹಿಡಿದು ಗ್ರೇಟ್eóÁಬ್ ನದಿಯವರೆಗೆ ಮತ್ತು ಅಲ್ಲಿಂದ ಕೆಳಕ್ಕೆ ಟೈಗ್ರಿಸ್ ನದಿಯ ಸಂಗಮದವರೆಗೆ ಹರಿಯುತ್ತದೆ. ಇತ್ತ ಕೇರ್‍ಮಾನ್ ಶಾಹ್‍ನಿಂದ ಕರಂದ ಮೂಲಕ ಮಂದಾಲಿಯವರೆಗೆ ಹರಿಯುವ ಈ ವಿಭಾಜಕ ರೇಖೆ ದಕ್ಷಿಣ ಜಾಗ್ರೋಸ್ ಭಾಷೆಯ ಲಕ್ಕಿ ಮತ್ತು ಲೂರಿ ಉಪಭಾಷಾವಲಯದಲ್ಲಿ ಲೀನವಾಗುತ್ತದೆ. ಈ ಜನಾಂಗ ನೆರೆಯ ಇತರ ರಾಷ್ಟ್ರಗಳಲ್ಲಿ ಹಂಚಿಹೋಗಿರುವುದರಿಂದ ಅನೇಕರು ಆಯಾ ರಾಷ್ಟ್ರಗಳ ರಾಷ್ಟ್ರಭಾಷೆಯನ್ನು ಉಪಯೋಗಿಸಬಲ್ಲವರಾಗಿದ್ದಾರೆ. ಸಾಕ್ಷರತಾ ಪ್ರಮಾಣ ಶೇಕಡ 10ರಷ್ಟು ಮಾತ್ರವಿದೆಯಾದರೂ ಅನೇಕರು ತುರ್ಕಿ, ಪಾರಸಿ, ಅರಬ್ಬಿ, ರಷ್ಯನ್ ಮತ್ತು ಇಂಗ್ಲಿಷ್ ಭಾಷೆಗಳನ್ನು ಬಳಸಬಲ್ಲವರಾಗಿದ್ದಾರೆ. ಸಿರಿಯದ ಬುದ್ದಿಜೀವಿಗಳ ಒಂದು ಗುಂಪು ಕುರ್ದಿಭಾಷೆಗೆ ರೋಮನ್ ಲಿಪಿಯನ್ನು ಬಳಸುವ ಬಗ್ಗೆ ಕೆಲವು ಕುತೂಹಲಕರವಾದ ಪ್ರಯೋಗಗಳನ್ನು ನಡೆಸಿರುವುದಾಗಿಯೂ ವರದಿಯಾಗಿದೆ. ಸೋವಿಯತ್ ಟ್ರಾನ್ಸ್‍ಕಾಕೇಸಿಯದಲ್ಲಿ ರೋಮನ್ ಮತ್ತು ಸುಧಾರಿತ ಸಿರಿಲಿಕ್ ಲಿಪಿಗಳನ್ನು ಬಳಸಲಾಗುತ್ತಿದೆ.
ಕುರ್ದಿಭಾಷೆಯಲ್ಲಿ ಪತ್ರಿಕೋದ್ಯಮ ಚಟುವಟಿಕೆಗಳು ಸತತವಾಗಿ ನಡೆಯುತ್ತ ಬಂದಿವೆ. ಮೊಟ್ಟಮೊದಲ ಕುರ್ದಿ ವಾರ್ತಾಪತ್ರಿಕೆ ಪ್ರಕಟವಾದದ್ದು 1897ರಲ್ಲಿ ಇರಾನಿನಲ್ಲೂ 1943 ಮತ್ತು 1946ರ ನಡುವಣ ಅವಧಿಯಲ್ಲಿ ಕುರ್ದಿಪತ್ರಿಕೆಯನ್ನು ಪ್ರಾರಂಭಿಸಲಾಯಿತು. ಟೆಹರಾನಿನಿಂದ 1959ರಲ್ಲಿ ಅಧಿಕೃತ ವಾರಪತ್ರಿಕೆಯೊಂದನ್ನು ಆರಂಭಿಸಲಾಯಿತು. ಸಿರಿಯದಲ್ಲಿ 1932ರ ಅನಂತರ ಕೆಲವು ವರ್ಷಗಳವರೆಗೆ ಮಾಸಪತ್ರಿಕೆಯೊಂದನ್ನು ನಡೆಸಲಾಯಿತು. ಪುಸ್ತಕಗಳನ್ನು ಅರಬ್ಬೀ ಮತ್ತು ರೋಮನ್ ಲಿಪಿಗಳಲ್ಲಿ ಮುದ್ರಿಸಲಾಯಿತು. ಕುರ್ದಿ ಸಾಹಿತ್ಯವೂ ಸಾಕಷ್ಟಿದೆ. ಈಚೆಗಂತೂ ಧಾರ್ಮಿಕ ಗ್ರಂಥಗಳು, ಇತಿಹಾಸ ಗ್ರಂಥಗಳು, ಸಮಗ್ರ ಸಾಹಿತ್ಯಗ್ರಂಥಗಳು, ಸಮಕಾಲೀನ ಕಾವ್ಯ ಮತ್ತು ಸಾಹಿತ್ಯವನ್ನು ಕುರಿತ ಗ್ರಂಥಗಳು ಹೊರಬರುತ್ತಿವೆ.
ಕುರ್ದ್ ಜನಾಂಗದ ಸೇಕಡ 55ಕ್ಕೂ ಹೆಚ್ಚು ಭಾಗ ಅರ್ಧ ಅಲೆಮಾರಿ ಜೀವನವನ್ನು ನಡೆಸುತ್ತಿದೆ. ಋತುಮಾನವನ್ನು ನಡೆಸುತ್ತಿದೆ. ಋತುಮಾನವನ್ನು ಅನುಸರಿಸಿ ಪರ್ವತಶಿಖರಗಳಿಂದ ಕಣೆವೆಗಳತ್ತ ತಮ್ಮ ಹಸು-ಕರು, ಕುರಿ, ಮೇಕೆ ಮತ್ತು ಕತ್ತೆಗಳ ಮಂದೆಯೊಡೆನೆ ವಲಸೆ ಬರುವುದೂ ಉಂಟು. ಉಳಿದವರು ಹಳ್ಳಿಗಳಲ್ಲಿ ವಾಸಮಾಡುತ್ತಾರೆ. ಚಳಿಗಾಲದಲ್ಲಿ ಅವರು ಕಂಬಳಿ ನೇಯುವ ಕಾರ್ಯದಲ್ಲಿ ನಿರತರಾಗಿರುತ್ತಾರೆ. ಪರ್ವತಶ್ರೇಣಿಗಳಿಂದಾಗಿ ಭೂಪ್ರದೇಶಗಳು ಬಹುಮಟ್ಟಿಗೆ ಬೇರ್ಪಟ್ಟಿರುವುದರಿಂದ ಸಂಪರ್ಕ ಕಡಿಮೆಯಾಗಿದೆಯಾದರೂ ತಂತಮ್ಮ ಪ್ರದೇಶಗಳಿಗೆ ಹತ್ತಿರವಾಗಿರುವ ನಗರಗಳಲ್ಲಿ ಅವರು ವ್ಯಾಪಾರ ನಡೆಸುತ್ತಾರೆ. ಕಿರ್‍ಕುಕ್ ತೈಲಕ್ಷೇತ್ರ ಕುರ್ದಿಸ್ತಾನದ ನೈಋತ್ಯ ಅಂಚಿನಲ್ಲಿದೆ. ಇಷ್ಟಾದರೂ ಕುರ್ದಿಸ್ತಾನದ ಆರ್ಥಿಕತೆ ಬಹುಮಟ್ಟಿಗೆ ವ್ಯವಸಾಯಾಶ್ರಿತವಾಗಿಯೇ ಇದೆ. ಇತರ ಮುಸ್ಲಿಮ್ ರಾಷ್ಟ್ರಗಳ ಸ್ತ್ರೀಯರು ಹೆಚ್ಚಿನ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದಾರೆ. ಆಡಳಿತ ವ್ಯವಸ್ಥೆಯಲ್ಲಿ ಸ್ಥಳೀಯ ರಾಜಕೀಯ ಚಟುವಟಿಕೆಗಳಲ್ಲಿ, ರಾಷ್ಟ್ರೀಯ ಆಂದೋಳನಗಳಲ್ಲಿ ಮತ್ತು ಯುದ್ಧಗಳಲ್ಲಿ ಅವರು ಪ್ರಮುಖ ಪಾತ್ರವಹಿಸಿರುವುದನ್ನು ಇಲ್ಲಿ ಕಾಣಬಹುದು.
ಏಳನೆಯ ಶತಮಾನದಿಂದಲೂ ಪಶ್ಚಿಮ ಏಷ್ಯದ ಇತಿಹಾಸದಲ್ಲಿ ಕುರ್ದಿಗಳು ಗಮನಾರ್ಹ ಪಾತ್ರವಹಿಸುತ್ತ ಬಂದಿದ್ದಾರೆ. ಈ ಅವಧಿಯಲ್ಲಿ ತಲೆಯೆತ್ತಿದ ಅಲ್ಪಖ್ಯಾತಕುರ್ದ್ ವಂಶಗಳಲ್ಲಿ ಶದ್ದಾದೀದ್‍ಗಳು ಮುಖ್ಯರು. ಇವರು ಟ್ರಾನ್ಸ್‍ಕಾಕೇಸಿಯದ ಅನಿ ಮತ್ತು ಗಂಜ್ ಜಿಲ್ಲೆಗಳಲ್ಲಿನ ಆರ್ಮೇನಿಯನ್ ಜನತೆಯ ಮೇಲೆ, ಆಧಿಪತ್ಯ ನಡೆಸುತ್ತಿದ್ದರು (951-1174). ಇತರ ಮುಖ್ಯವಂಶಗಳೆಂದರೆ ದಿಯಾರ್ ಬಕೀರ್‍ನ ಮರ್ವಾನಿದ್‍ಗಳು (990-1096) ಮತ್ತು ಕೇರ್‍ಮಾನ್‍ಶಾಹ್ ವಲಯದ ದಿನಾವರ್‍ನ ಹಸನ್ ವೈಹಿದ್‍ಗಳು (959-1015). ಕುರ್ದರು ತಮ್ಮ ಅಧಿಕಾರದ ಉನ್ನತಿಯನ್ನು ಕಂಡದ್ದು 12ನೆಯ ಶತಮಾನದಲ್ಲಿ. ಧರ್ಮಯುದ್ಧದಲ್ಲಿ (ಕ್ರೂಸೇಡುಗಳು) ಹೋರಾಡುವಂತೆ ಎಲ್ಲ ಮಹಮದೀಯರನ್ನೂ ಒಂದುಗೂಡಿಸಿದ ಹಿರಿಯ ನಾಯಕ ಸಲಾದೀ (1169-1250). ಈತ ಈಜಿಪ್ಟ್ ಮತ್ತು ಸಿರಿಯದ ಅಯಬೀದ್ ಸಂತತಿಯ ಸ್ಥಾಪಕ. ಮೊದಲನೆಯ ರಿಚರ್ಡ್‍ನನ್ನು ವಿರೋಧಿಸಿದ ಕೀರ್ತಿಯೂ ಈತನಿಗೆ ದೊರೆಯಿತು. ಮಂಗೋಲರ ಮತ್ತು ತುರ್ಕರ ಅಧೀನದಲ್ಲಿದ್ದ ಕುರ್ದಿಗಳ ಬಗ್ಗೆ ಹೆಚ್ಚಿನ ವಿವರಗಳೇನೂ ತಿಳಿದುಬರುವುದಿಲ್ಲ. ಮುಂದೆ ಅರ್ಧ ಸ್ವತಂತ್ರ ಪಾಳೆಯಪಟ್ಟುಗಳ ಮತ್ತು ಪರಮಾಧಿಕಾರ ವ್ಯವಸ್ಥೆಯ ವಿಕಾಸಕ್ಕೆ ಅನುಕೂಲಕರವಾದ ಪರಿಸ್ಥಿತಿ ಒದಗಿದ ಅವಧಿಯಲ್ಲಿ ಆಟೋಮನ್ನರಿಗೂ ಸಫಾವಿದರಿಗೂ ನಡೆದ ಕದನದಲ್ಲಿ ಅವರು ಮುಖ್ಯವಾಗಿ ಪರಿಣಮಿಸಿದರು. ಕಾಲಕ್ರಮದಲ್ಲಿ ಅಧಿಕಾರ ಕೇಂದ್ರೀಕರಣ ನೀತಿಯಂತೆ ಈ ಪಾಳೆಯ ಪಟ್ಟುಗಳ ಸಂಖ್ಯೆ ಕಡಿಮೆಯಾಯಿತಾದರೂ ಕೆಲವು 19ನೆಯ ಶತಮಾನದ ಪ್ರಥಮಾರ್ಧದವರೆಗೂ ಅಸ್ತಿತ್ವದಲ್ಲಿದ್ದುವು. ತುರ್ಕಿಸ್ಥಾನದ ಪ್ರದೇಶದಲ್ಲಿದ್ದ ಬೋಹ್ತಾನ್, ಹಕಾರಿ, ಬಾಹ್‍ದಿನಾನ್, ಸೋರನ್ ಮತ್ತು ಬ್ಯಾಬಿನ್ ಪಾಳೆಯಗಳೂ ಪರ್ಷಿಯದಲ್ಲಿದ್ದ ಮುಕ್ರಿ ಮತ್ತು ಅರ್ದೆಲಾನ್ ಪಾಳೆಯಗಳೂ ಈ ದೃಷ್ಟಿಯಿಂದ ಗಮನಾರ್ಹವಾಗಿವೆ.
ಈ ಜನಾಂಗದ ಸ್ವಾತಂತ್ರ್ಯಾಭೀಪ್ಸೆ ಪಾಳೆಯಗಳೂ ಅನೇಕ ರಾಷ್ಟ್ರೀಯ ಚಳವಳಿಗಳ ಅಥವಾ ಕ್ರಾಂತಿಗಳ ರೂಪದಲ್ಲಿ ಮೈದೋರಿದೆ. ಈ ಕಾರಣದಿಂದಾಗಿಯೇ ಸ್ವಾತಂತ್ರ್ಯಪ್ರೇಮಿಗಳೂ ಅಭಿಮಾನಿಗಳೂ ಕೆಚ್ಚೆದೆಯ ಹೋರಾಟಗಾರರೂ ಗೆರಿಲ್ಲ ಯುದ್ಧ ತಂತ್ರ ನಿಪುಣರೂ ಧೈರ್ಯಶಾಲಿಗಳೂ ಆಗಿರುವ ಈ ಜನಾಂಗದ ಬಗ್ಗೆ ಹಿಂಸಾಚಾರ ಪ್ರಿಯರೆಂಬ ಕುಪ್ರಥೆಯೂ ಇದೆ. 1832ರಿಂದ 1847ರ ವರೆಗೆ ಮತ್ತು 1925ರಲ್ಲಿ ತುರ್ಕರ ವಿರುದ್ಧ, 1922ರಿಂದ 1924ರ ವರಗೆ ಇರಾಕಿಗೆ ವಿರುದ್ಧ, 1946ರಲ್ಲಿ ಇರಾನಿಗೆ ವಿರುದ್ಧ ಇವರು ನಡೆಸಿದ ಹೋರಾಟಗಳು ಮತ್ತು ಈ ಬಗೆಯ ಇತರ ಸಶಸ್ತ್ರ ಯುದ್ಧಗಳು ಇವರ ಸ್ವಾತಂತ್ರ್ಯಪ್ರೇಮದ ಪ್ರತೀಕವಾಗಿವೆ. ಈ ಬಗೆಯ ರಾಷ್ಟ್ರೀಯ ಜಾಗೃತಿ ಕುರ್ದಿಗಳಿಗೆ ಹೊಸ ವಿಚಾರವೇನೂ ಆಗಿರಲಿಲ್ಲ. ಪಾಳೆಯಗಳನ್ನು ಮೆಟ್ಟಿಹಾಕುವುದಕ್ಕೆ ಮೊದಲು ಮತ್ತು ಅನಂತರ ಸರ್ಕಾರದ ವಿರುದ್ಧ ಈ ಜನಾಂಗ ಅನೇಕ ಬಾರಿ ದಂಗೆಯೆದ್ದಿರುವುದಕ್ಕೆ ಅವರ ಇತಿಹಾಸವೇ ಸಾಕ್ಷಿಯಾಗಿದೆ. ಒಂದು ರೀತಿಯಲ್ಲಿ ಅವರ ಇತಿಹಾಸ ಹೋರಾಟದ ಇತಿಹಾಸ. ಇಂಥ ಸಂದರ್ಭಗಳಲ್ಲಿ ಜಾತೀಯ ಭಾವನೆಗಳನ್ನು ಬಡಿದೆಬ್ಬಿಸಿ, ಜನರನ್ನು ಒಂದುಗೂಡಿಸಿ ಹೋರಾಟ ನಡೆಸುತ್ತಿದ್ದರು. ಉತ್ತರದ ಉಪಭಾಷೆಯಲ್ಲಿ ತನ್ನ ರಚನೆಗಳನ್ನು ಮುಂದಿರಿಸಿರುವ ಬಯಾಜಿದ್‍ನ ಅಹ್ಮದ್-ಏ-ಖನಿಯನ್ (1651-1706) ಕೃತಿಗಳಲ್ಲಿ ತೀವ್ರದೇಶಪ್ರೇಮದ ಜೀವಂತಧ್ವನಿ ಮಾರ್ಮೊಳಗಿದೆ. ಈತನ ಅನಂತರ ಬಂದ ಕವಿಗಳ, ಅಂತೆಯೇ ರಚನೆಗಳಲ್ಲೂ ಇದೇ ಸ್ವರ ಕೇಳಿಬರುತ್ತಿದೆ. ರಾಷ್ಟ್ರೀಯ ಜಾಗೃತಿಯ ಆಧುನಿಕ ಸ್ವರೂಪದ ವಿಕಾಸಕ್ಕೆ ಆಟೋಮನ್, ಅರಬ್ಬಿ ಮತ್ತು ಆರ್ಮೇನಿಯನ್ ರಾಷ್ಟ್ರಗಳಲ್ಲಿ ಅಲ್ಪಸಂಖ್ಯಾತರ ಚಳವಳಿಗಳು ನೇರವಾದ ಪ್ರೇರಣೆಯನ್ನು ನೀಡಿದುವು ಎಂದು ಹೇಳಬಹುದಾಗಿದೆ. ಒಂದನೆಯ ಮಹಾಯುದ್ಧ ಕುರ್ದ್ ಜನಾಂಗದ ಇತಿಹಾಸದಲ್ಲಿ ಒಂದು ಪ್ರಮುಖ ಘಟನೆಯಾಗಿ, ಕವಲು-ಬಿಂದುವಾಗಿ ಪರಿಣಮಿಸಿತು. ಆ ಅವಧಿಯಲ್ಲಿ ತುರ್ಕಿಸ್ತಾನಕ್ಕೂ ಸೋಲಾದುದರಿಂದ ಮತ್ತೆ ಇವರ ಆಸೆಗಳು ಚಿಗುರೊಡೆಯ ತೊಡಗಿದುವು. ಜೊತೆಗೆ ವುಡ್ರೋ ವಿಲ್ಸನ್ನನ ವಿಶ್ವಶಾಂತಿಯೋಜನೆಯ (ಜನವರಿ 1918) ಹನ್ನೆರಡನೆಯ ಕಲಮು ಇವರಿಗೆ ಮತ್ತಷ್ಟು ಸ್ಫೂರ್ತಿಯನ್ನು ನೀಡಿತು. ಇದಕ್ಕೆ ಕಾರಣ , ಆಟೊಮನ್ ಸಾಮ್ರಾಜ್ಯದಲ್ಲಿರುವ ತುರ್ಕೇತರ ರಾಷ್ಟ್ರೀಯರಿಗೆ ಸ್ವತಂತ್ರ, ಸ್ವಾಯತ್ತ ವಿಕಾಸಕ್ಕೆ ಅಗತ್ಯವಾದಂಥ ಅನಿರ್ಬಂಧಿತ ಅವಕಾಶಗಳನ್ನು ಒದಗಿಸಿಕೊಡಬೇಕೆಂಬ ಸಂಗತಿಯನ್ನು ಅದರಲ್ಲಿ ಸ್ಪಷ್ಟವಾಗಿ ಉದ್ಘೋಷಿಸಿದ್ದುದು. ಕುರ್ದ್ ಪ್ರತಿನಿಧಿಗಳು ಈ ಸಂಬಂಧವಾಗಿ ನಡೆದ ಶಾಂತಿ ಸಮ್ಮೇಳನದಲ್ಲಿ ಭಾಗವಹಿಸಿದರು. 1920ರ ಆಗಸ್ಟ್‍ನಲ್ಲಿ ಸರ್ವೆಸ್ ಒಪ್ಪಂದಕ್ಕೆ ಸಹಿ ಬಿತ್ತು . ಮೂರು ಅರಬ್ ಗಣರಾಜ್ಯಗಳ-ಅಂದರೆ ಹೆಜಾಜ್, ಸಿರಿಯ ಮತ್ತು ಇರಾಕ್ ರಾಜ್ಯಗಳ ಸ್ಥಾಪನೆ ಮತ್ತು ಮಾನ್ಯತೆಯ ವಿಚಾರವನ್ನೂ ಅದರಲ್ಲಿ ಪ್ರಸ್ತಾಪಿಸಲಾಗಿತ್ತು. ಜೊತೆಗೆ ಅಂದು ಬ್ರಿಟಿಷ್ ಆಧಿಪತ್ಯಕ್ಕೆ ಒಳಪಟ್ಟಿದ್ದ ಮೋಸುಲ್‍ವಿಲಾಯತ್‍ನಲ್ಲಿದ್ದ ಕುರ್ದಿಗಳೂ ಕುರ್ದಿಸ್ತಾನಕ್ಕೆ ಸೇರಿಕೊಳ್ಳಬಹುದೆಂಬುದನ್ನು ಸ್ಪಷ್ಟಪಡಿಸಲಾಗಿತ್ತು. ಆದರೆ ತುರ್ಕಿಯಲ್ಲಿ ಮಸ್ತಫ ಕೆಮಾಲ್ ಅಟಾಟರ್ಕನ ನೇತೃತ್ವದಲ್ಲಿ ಮತ್ತೆ ಸೈನಿಕ ಆಡಳಿತ ಸ್ಥಾಪಿತವಾದುದರ ಫಲವಾಗಿ ಈ ಒಪ್ಪಂದ ಜಾರಿಗೆ ಬರಲೇ ಇಲ್ಲ. ಅಷ್ಟೇ ಅಲ್ಲ, 1923ರಲ್ಲಿ ಮಾಡಿಕೊಂಡ ಲೌಸ್ಸೇನ್ ಒಪ್ಪಂದದಿಂದಾಗಿ ಈ ಒಪ್ಪಂದ ತಾನೇ ತಾನಾಗಿ ರದ್ದಾಯಿತು. ಲೌಸ್ಸೇನ್ ಒಪ್ಪಂದ ಆರ್ಮೇನಿಯ ಮತ್ತು ಕುರ್ದಿಸ್ತಾನ್ ರಾಜ್ಯಗಳ ವಿಚಾರವನ್ನು ಸಂಪೂರ್ಣವಾಗಿ ಕೈಬಿಟ್ಟು, ಮೂರು ಅರಬ್ಬಿ ರಾಜ್ಯಗಳ ಸ್ಥಾಪನೆಗೆ ಮಾತ್ರ ಅವಕಾಶ ಮಾಡಿಕೊಡುವ ವಿಧಿಗಳನ್ನೊಳಗೊಂಡಿತ್ತು. ಮೋಸುಲ್ ವಿಲಾಯತ್ ಪ್ರದೇಶವನ್ನು ಕುರ್ದಿಸ್ತಾನದ ವ್ಯಾಪ್ತಿಯಿಂದ ಹೊರಗಿರಿಸಿದ್ದು ಮಾತ್ರವಲ್ಲದೆ ಅದರ ಭವಿಷ್ಯದ ಬಗ್ಗೆ ತೀರ್ಮಾನವನ್ನು ಕೈಗೊಳ್ಳುವ ಹೊಣೆಯನ್ನು ಅಂದು ಅಸ್ತಿತ್ವದಲ್ಲಿದ್ದ ಲೀಗ್ ಆಫ್ ನೇಷನ್ಸ್‍ಗೆ ವರ್ಗಾಯಿಸಲಾಯಿತು. 1925ರಲ್ಲಿ ಅದು ಇರಾಕಿನ ಪರವಾಗಿ ತೀರ್ಪುಕೊಟ್ಟಿತು. 1926ರಲ್ಲಿ ಸಹಿಮಾಡಲಾದ ಅಂಕಾರ ಒಪ್ಪಂದ ಈ ತೀರ್ಪನ್ನು ಸ್ಥಿರಪಡಿಸಿತು. ಹೀಗಾಗಿ ಮೃತಶಿಶುವಾಗಿ ಜನ್ಮತಳೆದ ಸರ್ವೆಸ್ ಒಪ್ಪಂದ ಇತಿಹಾಸದ ಮತ್ತೊಂದು ಮೃತಪತ್ರ ಮಾತ್ರವಾಗಿ ಪರಿಣಮಿಸಿತು.
ಇಷ್ಟಾದರೂ ಅಂತರರಾಷ್ಟ್ರೀಯ ದಾಖಲೆಯೊಂದರಲ್ಲಿ ಸ್ವತಂತ್ರ ಕುರ್ದಿಸ್ತಾನದ ಉಲ್ಲೇಖವಾಗಿದ್ದುದನ್ನು ಕುರ್ದ್‍ಜನತೆ ಮರೆಯಲು ಸಿದ್ಧವಾಗಿರಲಿಲ್ಲ. 1922-23ರಲ್ಲಿ ಷೇಕ್ ಮಹಮೂದ್ ಸುಲೈಮಾನಿಯ ತನ್ನನ್ನು ಕುರ್ದಿಸ್ತಾನದ ರಾಜನೆಂದು ಘೋಷಿಸಿಕೊಂಡ. ತಮ್ಮ ಕನಸನ್ನು ನನಸಾಗಿಸಿಕೊಳ್ಳುವ ಪ್ರಯತ್ನದ ಅಂಗವಾಗಿ ಕುರ್ದಿಗಳು ಅನೇಕ ಬಾರಿ ಸಶಸ್ತ್ರ ಕ್ರಾಂತಿಗಳನ್ನು ನಡೆಸಿದರು. ಹೊರಗಿನ ಬೆಂಬಲ ಸಾಕಷ್ಟು ಇಲ್ಲದೆ ಹೋದುದರಿಂದ, ಆಂತರಿಕ ಸಂಘಟನೆ ಸಾಲದೆ ಇದ್ದುದರಿಂದ, ಅಧಿಕಾರಸ್ಥ ವರ್ಗಗಳ ಪ್ರಾಬಲ್ಯದಿಂದ ಈ ಕ್ರಾಂತಿಗಳು ಅಲ್ಪಾಯುಗಳಾಗಿ ಪರಿಣಮಿಸಿದುವು. ಇವುಗಳಲ್ಲೆಲ್ಲ ತುರ್ಕಿಸ್ತಾನದ ಖಾರ್‍ಪುತ್ ವಲಯದಲ್ಲಿ ಶೇಖ್‍ಸೈಯದ್ 1925ರಲ್ಲಿ ನಡೆಸಿದ ಯುದ್ಧವೇ ಅತ್ಯಂತ ತೀವ್ರವಾಗಿದ್ದುದು. ಮುಂದೆ 1930ರಲ್ಲಿ ಅರಾರತ್‍ನ ಬಳಿ ಇಂಥ ಮತ್ತೊಂದು ಯುದ್ಧ ನಡೆಯಿತು. ಇದು ಇರಾಕ್‍ನಲ್ಲಿ ತಲೆದೋರಿದ ವಿರೋಧದ ಪ್ರತೀಕವಾಗಿತ್ತು. 1931-32ರಲ್ಲಿ ಮತ್ತು 1940-45ರಲ್ಲಿ ಬಾರ್ಜಾನ್‍ನಲ್ಲಿ ನಡೆದ ತೀವ್ರ ಸ್ವರೂಪದ ಕ್ರಾಂತಿಗಳನ್ನು ಬಹಳ ಕಷ್ಟದಿಂದ ಹತ್ತಿಕ್ಕಲಾಯಿತು. 1922ರಲ್ಲಿ ಅನೇಕ ತಿಂಗಳುಗಳ ವರೆಗೆ ಮತ್ತು 1941ರಿಂದ ಎರಡನೆಯ ವಿಶ್ವಯುದ್ಧ ಮುಗಿಯುವ ವರೆಗೆ ವಾಸ್ತವವಾಗಿ ಈ ಪ್ರದೇಶದಲ್ಲಿನ ಇರಾನೀ ಆಡಳಿತ ಅರೆಜೀವದಿಂದಿತ್ತು. 1946ರ ಜನವರಿಯಲ್ಲಿ ಖಾಜಿಮೊಹಮ್ಮದನ ನೇತೃತ್ವದಲ್ಲಿ ಅದು ಕಾರ್ಯಕಲಾಪಗಳನ್ನು ಪ್ರಾರಂಭಿಸಿತು. ಆದರೂ ಈ ಅಂತರ್ಯುದ್ಧಗಳು ಕೊನೆಗೊಂಡಿಲ್ಲ. 1958ರಲ್ಲಿ, 1961ರಲ್ಲಿ, ಭುಗಿಲೆದ್ದ ಯುದ್ಧಜ್ವಾಲೆಗಳು ಹಲವಾರು ವರ್ಷ ಈ ರಾಷ್ಟ್ರವನ್ನು ದಗ್ಧಗೊಳಿಸಿವೆಯಾದರೂ ಸಮಸ್ಯೆಗಳಿಗೆ ಇನ್ನೂ ಅಂತಿಮ ತೀರ್ಮಾನ ಸಿಕ್ಕಿಲ್ಲ.
ಸರ್ವೆಸ್ ಒಪ್ಪಂದದಲ್ಲಿ ಕಾಣಿಸಲಾಗಿದ್ದ ಕೆಲವು ಆದರ್ಶಪೂರ್ಣ ವಿಚಾರಗಳು ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಪ್ರಭಾವ ಬೀರತೊಡಗಿದ್ದುವು. ಲೀಗ್ ಆಫ್ ನೇಷನ್ಸ್ ಈ ದಿಕ್ಕಿನಲ್ಲಿ ಇರಾಕಿಗೆ ಸ್ಪಷ್ಟ ಆದೇಶಗಳನ್ನು ಕೊಟ್ಟಿತು. ಕಾರ್ಯಾಂಗ, ನ್ಯಾಯಂಗ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿನ ಹುದ್ದೆಗಳಿಗೆ ಕುರ್ದಿಗಳನ್ನೇ ಅಥವಾ ಕುರ್ದಿಭಾಷೆ ಬಲ್ಲವರನ್ನೇ ನೇಮಿಸಬೇಕು ಹಾಗೂ ಆ ಪ್ರದೇಶಗಳಲ್ಲಿ ಕುರ್ದಿ ಭಾಷೆಯೇ ಅಧಿಕೃತ ಭಾಷೆಯಾಗಿರಬೇಕು ಎಂಬುದೇ ಆ ಆದೇಶಗಳು. ಮುಂದೆ 1932ರಲ್ಲಿ ಇರಾಕ್ ಈ ಜಾಗತಿಕ ಸಂಸ್ಥೆಯ ಸದಸ್ಯತ್ವಕ್ಕಾಗಿ ಅಭ್ಯರ್ಥನೆ ಪತ್ರವನ್ನು ಸಲ್ಲಿಸಿದಾಗ ಈ ಬಗ್ಗೆ ಸಂವಿಧಾನಾತ್ಮಕ ಆಶ್ವಾಸನೆಯನ್ನು ನೀಡಬೇಕೆಂದು ಕೇಳಬೇಕಾಯಿತು ಎಂಬುದನ್ನು ಗಮನಿಸಬಹುದಾಗಿದೆ. ಇಷ್ಟಾದರೂ ಅತೃಪ್ತಿ ಹೊಗೆಯಾಡುತ್ತಲೇ ಇತ್ತು. ಸರ್ಕಾರ ಈ ಆದೇಶಗಳನ್ನು ಅರೆಮನಸ್ಸಿನಿಂದ ಜಾರಿಗೆ ಕೊಡುತ್ತಿದೆ ಎಂಬ ಅಸಮಾಧಾನ ಇದ್ದೇ ಇತ್ತು. ಹೀಗಾಗಿ 1958ರ ಸೈನಿಕ ಕ್ರಾಂತಿಯ ಅನಂತರದಲ್ಲಿ ಪ್ರಕಟಪಡಿಸಿದ ತಾತ್ಕಾಲಿಕ ಸಂವಿಧಾನದಲ್ಲಿ ಕುರ್ದಿಗಳು ಮತ್ತು ಅರಬ್ಬರು ರಾಜ್ಯದ ಕಾರ್ಯನಿರ್ವಹಣೆಯಲ್ಲಿ ಸಹಭಾಗಿಗಳಾಗುತ್ತಾರೆಂದು ಘೋಷಿಸಿದುದನ್ನು ಕುರ್ದಿಗಳು ಹೃತ್ಪೂರ್ವಕವಾಗಿ ಸ್ವಾಗತಿಸಿದರು. ಆದರೆ ಅಧಿಕಾರ ವಿಕೇಂದ್ರೀಕರಣ, ಅಭಿವೃದ್ದಿ ಯೋಜನೆಗಳು ಮತ್ತು ಇತರ ಸಮಾಜಸೇವಾ ಕಾರ್ಯಗಳಲ್ಲಿ ನ್ಯಾಯೋಚಿತವಾದ ಪಾಲು ತಮಗೆ ದೊರೆಯಲಿಲ್ಲವೆಂಬ ಹಾಗೂ ತಮ್ಮ ಭಾಷೆಗೆ ಸೂಕ್ತ ಸ್ಥಾನಮಾನ ದೊರೆಯಲಿಲ್ಲವೆಂಬ ಕಾರಣಗಳಿಗಾಗಿ 1961ರಲ್ಲಿ ರಾಷ್ಟ್ರೀಯ ಸ್ವರೂಪದ ಕ್ರಾಂತಿಯೇ ನಡೆಯಿತು.
1914ರವರೆಗೂ ಕುರ್ದಿಗಳು ಕ್ರೈಸ್ತಸಮುದಾಯಗಳೊಡನೆ ಸಾಕಷ್ಟು ಚೆನ್ನಾಗಿ ಬಾಳುತ್ತಿದ್ದರು. ಆದರೆ ಹೊರಗಣ ಪ್ರಚೋದನೆಗಳಿಂದಾಗಿ ನಡೆಯುತ್ತಿದ್ದ ವಿದ್ವೇಷಕಾರಿ ಘಟನೆಗಳಿಂದಾಗಿ ಈ ಸಂಬಂಧಗಳು ಆಗಿಂದಾಗ್ಗೆ ರಕ್ತಕಲುಷಿತವಾಗ ತೊಡಗಿದುವು. ಮೊದಲ ಮಹಾಯುದ್ಧದ ತರುವಾಯ ಅನೇಕ ಕ್ರೈಸ್ತಕುಟುಂಬಗಳು ತುರ್ಕಿಸ್ತಾನದಿಂದ ಬಂದ ಹಲವರೂ ಇರಾಕಿನ ಅಮದಿಯಾ ಜಿಲ್ಲೆಗಳಲ್ಲಿ ನೆಲಸಿದ್ದರು. ಯಹೂದ್ಯ ನೇಕಾರರು, ಬಣ್ಣಗಾರರು ಮತ್ತು ಚರ್ಮಹದ ಮಾಡುವವರು ಕೆಲವು ನಗರಗಳಲ್ಲಿ ಮತ್ತು ಮಾರುಕಟ್ಟೆ ಸೌಲಭ್ಯವಿದ್ದ ಹಳ್ಳಿಗಳಲ್ಲಿ ಅಲ್ಪಸಂಖ್ಯೆಯಲ್ಲಿ ವಾಸವಾಗಿದ್ದರು. ಆದರೆ, ಎರಡನೆಯ ವಿಶ್ವಯುದ್ಧದ ತರುವಾಯ ಅವರೆಲ್ಲ ಇಸ್ರೇಲಿಗೆ ಸಾಮೂಹಿಕವಾಗಿ ವಲಸೆಹೋದರು.
ತುರ್ಕಿ, ಇರಾನ್ ಮತ್ತು ಇರಾಕ್ ಸರ್ಕಾರಗಳು ಕುರ್ದಿಗಳೊಂದಿಗೆ ಸ್ನೇಹ ಸಂಬಂಧಗಳನ್ನು ಸ್ಥಾಪಿಸಿಕೊಳ್ಳಲು ಪ್ರಯತ್ನಿಸುತ್ತ ಬಂದಿವೆ. ಶಾಲೆಗಳು, ಆಸ್ಪತ್ರೆಗಳು, ಆಧುನಿಕ ಶೌಚ ಸೌಲಭ್ಯಗಳು ಮುಂತಾದುವನ್ನು ಒದಗಿಸಿ ಆಧುನಿಕ ಸಮುದಾಯಗಳು ಕುರ್ದಿಸ್ತಾನದಲ್ಲಿ ನೆಲೆಯಾಗುವಂತೆ ಮಾಡುವುದರ ಮೂಲಕ, ಈ ಪ್ರದೇಶದಲ್ಲಿ ರೈಲು ಮತ್ತು ಹೆದ್ದಾರಿ ಸಂಪರ್ಕ ಮತ್ತು ಸೌಲಭ್ಯಗಳನ್ನು ಹೆಚ್ಚಿಸುವುದರ ಮೂಲಕ, ಹಾಗೂ ಬೆಳೆದ ಧಾನ್ಯ, ಚರ್ಮ, ಕಚ್ಚಾ ಉಣ್ಣೆ, ಜಾನುವಾರುಗಳು, ಕೈಯಿಂದ ನೇಯ್ದ ರತ್ನಗಂಬಳಿಗಳು ಮತ್ತು ಕಂಬಳಿಗಳು ಇವೇ ಮೊದಲಾದುವನ್ನು ಮಾರಾಟಮಾಡಲು ಅಗತ್ಯವಾದ ಮಾರುಕಟ್ಟೆ ಸೌಲಭ್ಯಗಳನ್ನು ಒದಗಿಸುವುದರ ಮೂಲಕ ಅವರನ್ನು ಒಂದು ಕಡೆ ನೆಲಸಲು ಪ್ರೋತ್ಸಾಹಿಸಲಾಗಿದೆ. ಇವುಗಳ ಜೊತೆಗೆ ಆಧುನಿಕ ಬೇಸಾಯ ಪದ್ಧತಿಗಳ-ಅದರಲ್ಲೂ ಚಳಿಗಾಲದಲ್ಲಿ ಜಾನುವಾರುಗಳಿಗೆ ಅಗತ್ಯವಾಗುವ ಉತ್ತಮವಾದ ಮೇವನ್ನು ಬೆಳೆಸುವ ಬಗ್ಗೆ-ಪರಿಚಯ ಮಾಡಿಕೊಡಲಾಗುತ್ತಿದೆ. ಈ ಎಲ್ಲ ಕಾರ್ಯಕ್ರಮಗಳ ಫಲವಾಗಿ ಕುರ್ದಿಗಳಲ್ಲಿ ವಲಸೆಯ ಪ್ತವೃತ್ತಿ ಕಡಿಮೆಯಾಗಿ ಸ್ಥಾಯೀನೆಲೆಯನ್ನು ಸ್ಥಾಪಿಸಿಕೊಳ್ಳುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇರಾಕಿನಲ್ಲಿ 1918 ರಿಂದಲೂ ಕುರ್ದುಭಾಷೆಯನ್ನು ಹೆಚ್ಚು ಹೆಚ್ಚಾಗಿ ಬಳಸಲಾಗುತ್ತಿದೆ. ಖಾಸಗಿ ವ್ಯವಹಾರದಲ್ಲಂತೂ ಇದೇ ವ್ಯಾಪಕವಾಗಿ ಬಳಕೆಯಲ್ಲಿದೆ. ಇರಾಕಿನಲ್ಲಿ ರಾಷ್ಟ್ರೀಯ ಅಲ್ಪಸಂಖ್ಯಾತವರ್ಗವೆಂದು ಕಾನೂನುಬದ್ಧವಾಗಿ ಕುರ್ದಿ ಜನಾಂಗವನ್ನು ಮಾನ್ಯ ಮಾಡಲಾಯಿತು. ಜೊತೆಗೆ ಕುರ್ದಿಪ್ರಾಬಲ್ಯದ ಜಿಲ್ಲೆಗಳನ್ನು ಗುರಿತಿಸಿ ಅಲ್ಲೆಲ್ಲ ಆಡಳಿತ, ಶಿಕ್ಷಣ ಮತ್ತು ನ್ಯಾಯಾಂಗದ ಕ್ಷೇತ್ರಗಳಲ್ಲೆಲ್ಲ ಕುರ್ದಿ ಭಾಷೆಯನ್ನು ಬಳಸಬೇಕೆಂದು ಆಜ್ಞೆ ಮಾಡಲಾಯಿತು. ಸೋವಿಯತ್ ಅರ್ಮೇನಿಯಾದಲ್ಲಿ ಕುರ್ದಿ ಅಧ್ಯಯನಗಳಿಗೆ ಇರಾನ್, ಇರಾಕ್, ಆರ್ಮೇನಿಯ, ಮತ್ತು ಈಜಿಪ್ಟ್‍ಗಳ ಬಾನುಲಿ ನಿಲಯಗಳಿಂದ ಕುರ್ದಿ ಕಾರ್ಯಕ್ರಮ ಪ್ರಸಾರಕ್ಕೂ ಅವಕಾಶಗಳನ್ನು ಕಲ್ಪಿಸಲಾಗಿದೆ.[೨]