ಕರ್ನಾಟಕದ ಅರಣ್ಯ ಸಂಪತ್ತು

ಕರ್ನಾಟಕಅರಣ್ಯ ಸಂಪತ್ತು ಹೇರಳವಾದುದು. ಪುರಾತನ ಕಾಲದಲ್ಲಿ ಕರ್ನಾಟಕ ರಾಜ್ಯ ದಂಡಕಾರಣ್ಯದ ಒಂದು ಮುಖ್ಯ ಪ್ರದೇಶವಾಗಿದ್ದು ಮೃಗಗಳ ಬೇಟೆಯಲ್ಲಿ ಆಸಕ್ತಿಯಿದ್ದ ಅಂದಿನ ಅರಸರಿಂದ ಅನೇಕ ರೀತಿಯಲ್ಲಿ ಪೋಷಿತವಾಗಿದ್ದಿತು. ಪ್ರಸಿದ್ಧ ವೆನಿಶಿಯನ್ ಪ್ರವಾಸಿ ಮಾರ್ಕೋಪೋಲೋ ಕರ್ನಾಟಕದ ಅರಣ್ಯ ಸಂಪತ್ತನ್ನು ಸಾಕಷ್ಟು ಪ್ರಶಂಸಿಸಿದ್ದಾನೆ. ವಿಜಯನಗರಕ್ಕೆ ಭೇಟಿ ನೀಡಿದ ಅನೇಕ ವಿದೇಶೀ ಪ್ರವಾಸಿಗಳೂ ಇಲ್ಲಿನ ಕಾಡಿನ ದಟ್ಟತೆ ಮತ್ತು ಸಮೃದ್ಧತೆಯ ಬಗ್ಗೆ ವರ್ಣಿಸಿದ್ದಾರೆ. ವಿಜಯನಗರ ಸಾಮ್ರಾಜ್ಯದಲ್ಲಿ ಅರಣ್ಯಗಳಿಗೆ ತುಂಬಾ ಪ್ರಾಮುಖ್ಯ ನೀಡಲಾಗಿತ್ತು. ಅಂದು ವಿಜಯನಗರವನ್ನು ಸಂದರ್ಶಿಸಿದ ಅರೇಬಿಯದ ವ್ಯಾಪಾರಿ ಅಬ್ದುಲ್ ರಜಾಕ್ ಎಂಬಾತ ಕರ್ನಾಟಕದ ಅರಣ್ಯ ಸಂಪತ್ತು ಹಾಗೂ ಅದರ ವಾಣಿಜ್ಯ ಪ್ರಾಮುಖ್ಯತೆಯ ಬಗ್ಗೆ ಬಹುವಾಗಿ ವಿವರಿಸಿದ್ದಾನೆ. ವಿಜಯನಗರ ಸಾಮ್ರಾಜ್ಯ ಇರುವವರೆಗೂ ದಕ್ಷರೀತಿಯಿಂದ ನಡೆಯುತ್ತಿದ್ದ ಅರಣ್ಯಗಳ ಆಡಳಿತ ೧೫೬೫ರ ತಾಳೀಕೋಟೆಯ ಕದನದ ಅನಂತರ ಕುಸಿಯಿತು. ಸಾಗುವಳಿಗೆ ಸಾಕಷ್ಟು ಜಮೀನಿಲ್ಲದೆ ಜನ ಅರಣ್ಯ ಒತ್ತುವರಿ ಮಾಡಿ ವ್ಯವಸಾಯ ಮಾಡಲು ಪ್ರಾರಂಭಿಸಿದರು. ತರುವಾಯ ಹೈದರ್ ಅಲಿ ಹಾಗೂ ಟಿಪ್ಪುಸುಲ್ತಾನರ ಕಾಲದಲ್ಲಿ ಶ್ರೀಗಂಧಮರವನ್ನು ರಾಜವೃಕ್ಷ ಎಂದು ಪರಿಗಣಿಸಲಾಯಿತು. ಜೊತೆಗೆ ಬಹುಮುಖ್ಯ ಪ್ರಯೋಜನಕಾರಿ ಸಾಗುವಾನಿ ತೇಗದ ಮರಕ್ಕೂ ಸರ್ಕಾರದ ರಕ್ಷಣೆ ದೊರೆಯಿತು.

ಕಾಡುಗಳ ಆಡಳಿತ ಹಾಗೂ ಸಂರಕ್ಷಣೆಯಲ್ಲಿ ಬ್ರಿಟಿಷರ ಕೊಡುಗೆ ಅಪಾರ. ವೈಜ್ಞಾನಿಕ ವಿಧಾನದಲ್ಲಿ ಕಾಡುಗಳ ವಿಂಗಡನೆ ಹಾಗೂ ಸಂರಕ್ಷಣೆಯನ್ನು ಇಡೀ ಭಾರತದಲ್ಲಿ ಪ್ರಾರಂಭಿಸಿದವರೂ ಬ್ರಿಟಿಷರೇ. ಕರ್ನಾಟಕದ ಸ್ಥಿತಿಯೂ ಬೇರೆಯಲ್ಲ. ೧೭೯೯ರ ಅನಂತರ ಬ್ರಿಟಿಷರ ಅಧೀನಕ್ಕೊಳಪಟ್ಟ ಕರ್ನಾಟಕದ ಭಾಗದಲ್ಲಿ ಮೊದಲು ಶ್ರೀಗಂಧ ಹಾಗೂ ತೇಗದ ಮರಗಳಿಗೆ ಮಾತ್ರ ಪ್ರಾಮುಖ್ಯವಿತ್ತು. ಗವರ್ನರ್ ಜನರಲ್ ಡಾಲ್ ಹೌಸಿಯ ೧೮೫೦ರ ಆದೇಶ, ಕರ್ನಾಟಕದ ಅರಣ್ಯ ರಕ್ಷಣೆ, ಅಭಿವೃದ್ಧಿ, ಮಾರ್ಪಾಡು ಎಲ್ಲವೂ ಕಾನೂನು ಕಟ್ಟಳೆಗಳಿಗೆ ಒಳಪಟ್ಟು ವೈಜ್ಞಾನಿಕ ರೀತಿಯಲ್ಲಿ ಬೆಳೆದುಬರುವಂತೆ ಮಾಡಿತು. ಹಿಂದೆ ಅರಬ್ಬರು, ಆಫ್ರಿಕನ್ನರು ಅನಂತರ ಭಾರತಕ್ಕೆ ಬಂದ ಬ್ರಿಟಿಷರು ಹಡಗುಗಳ ನಿರ್ಮಾಣಕ್ಕೆ ಸಾಗುವಾನಿ ಮತ್ತು ಸುರಹೊನ್ನೆ ಮರಗಳನ್ನು ಕಡಿದು ಉಪಯೋಗಿಸುತ್ತಿದ್ದರು. ಇಂಗ್ಲೆಂಡಿನ ಓಕ್ ಮರ ನಶಿಸುತ್ತ ಬಂದಂತೆಲ್ಲ ಕರ್ನಾಟಕದ ಸಾಗುವಾನಿ ಮರಗಳಿಗೆ ಬೇಡಿಕೆ ಹೆಚ್ಚುತ್ತ ಬಂದಿತು. ಎರಡನೆಯ ಮಹಾಯುದ್ಧದ ಕಾಲದಲ್ಲಿ ಇಡೀ ಭಾರತದಲ್ಲಿ ಸಾಕಷ್ಟು ಪ್ರಮಾಣದ ಮರದ ದಿಮ್ಮಿ, ಕಂಬಗಳಿಗಾಗಿ ಅರಣ್ಯ ನಾಶ ಮುಂದವರಿಯಿತು. ಜೊತೆ ಜೊತೆಯಲ್ಲೇ ಅರಣ್ಯದ ಮರಮುಟ್ಟುಗಳ ವಿಚಾರವಾಗಿ ವೈಜ್ಞಾನಿಕ ಸಂಶೋಧನೆ ಪ್ರಾರಂಭವಾಯಿತು. ನೆಡುತೋಪುಗಳು, ಸಾಲುಮರಗಳು, ಗುಂಡು ತೋಪುಗಳನ್ನು ಅಲ್ಲಲ್ಲಿ ಬೆಳೆಸಿದರು. ಆದರೂ ಜನಸಂಖ್ಯೆಯ ಹೆಚ್ಚಳದಿಂದಾಗಿಯೂ ಹೆಚ್ಚು ಬೆಳೆ ಬೆಳೆಯುವ ಆಂದೋಲನದಿಂದಾಗಿಯೂ ಯೋಗ್ಯವಾದ ಕಾಡುಗಳು ನಾಶವಾಗುತ್ತ ಬಂದವು. ಕೈಗಾರಿಕೆಗಳಿಗೆ ಬೇಕಾದ ಮರಮುಟ್ಟು, ಸೌದೆ, ಇದ್ದಿಲುಗಳಿಗಾಗಿ ಪ್ರತಿವರ್ಷ ಸು. ೧ ಲಕ್ಷ ಹೆಕ್ಟೇರು ಅರಣ್ಯ ಪ್ರದೇಶ ಕಡಿಮೆಯಾಗುತ್ತಿದೆ ಎಂದು ೧೯೭೦ರ ದಶಕದ ಅಂಕಿ ಸಂಖ್ಯೆಗಳು ತಿಳಿಸುತ್ತವೆ. ಆದರೆ ಇತ್ತೀಚೆಗೆ ನೆಡುತೋಪುಗಳನ್ನು ಹೆಚ್ಚಿಸುವ, ಸಸ್ಯಗಳನ್ನು ನೆಟ್ಟು ಅರಣ್ಯಗಳನ್ನು ಅಭಿವೃದ್ಧಿಪಡಿಸುವ ಹಾಗೂ ಸಾಮಾಜಿಕ ಅರಣ್ಯ ಕಾರ್ಯಕ್ರಮಗಳಿಂದಾಗಿ ಕರ್ನಾಟಕದ ಅರಣ್ಯ ಕ್ಷೇತ್ರ ಗಣನೀಯವಾಗಿಯಲ್ಲದಿದ್ದರೂ ನಿಧಾನವಾಗಿ ವೃದ್ಧಿಯಾಗುತ್ತಿದೆ.

೧೯೬೦ರ ದಶಕದಲ್ಲಿ ಕರ್ನಾಟಕದಲ್ಲಿ ೩೫,೨೧,೦೦೦ ಹೆಕ್ಟೇರು ಅರಣ್ಯವಿದ್ದು, ಇದು ಕರ್ನಾಟಕದ ಭೂಭಾಗದ ಶೇ. ೨೩ ಭಾಗದಷ್ಟಾಗುತ್ತಿತ್ತೆಂದು ದಾಖಲೆಗಳು ತಿಳಿಸುತ್ತವೆ. ೧೯೮೫ರ ವೇಳೆಗೆ ಕರ್ನಾಟಕದ ಅರಣ್ಯ ಪ್ರದೇಶದ ವಿಸ್ತೀರ್ಣ ಸುಮಾರು ಶೇ. ೧೯.೫ಕ್ಕೆ ಕುಸಿಯಿತು. ಅಂಕಿ ಅಂಶಗಳ ಪ್ರಕಾರ ೨೦೦೨-೦೩ರಲ್ಲಿ ಕರ್ನಾಟಕದ ಅರಣ್ಯ ಪ್ರದೇಶದ ವಿಸ್ತೀರ್ಣ ೩೦,೭೦,೦೦೦ ಹೆಕ್ಟೇರು. ವಿವಿಧ ಸಂರಕ್ಷಣಾ ತಂತ್ರಗಳಿಂದಾಗಿಯೂ ಈಗ ಕರ್ನಾಟಕದ ಭೂಭಾಗ ಶೇಕಡ ೧೪.೮ ಭಾಗ ಮಾತ್ರ ಅರಣ್ಯದಿಂದ ಆವೃತವಾಗಿದೆ.

ಕರ್ನಾಟಕದಲ್ಲಿ ಇಷ್ಟು ಅರಣ್ಯ ಪ್ರದೇಶವಿದ್ದರೂ ಇದಷ್ಟೂ ಮಾನವನ ಪ್ರಯೋಜನಕ್ಕೆ ಅರ್ಹವಾದುದೆಂದು ಹೇಳಲು ಸಾಧ್ಯವಿಲ್ಲ. ಕಾರಣಾಂತರಗಳಿಂದ ಒಟ್ಟು ಅರಣ್ಯದ ಶೇ. ೨೫ರಷ್ಟು ಭಾಗ ಕ್ಷೀಣದೆಶೆಯಲ್ಲಿದೆ. ಇಂಥ ಅಪ್ರಯೋಜಕ ಪ್ರದೇಶವನ್ನು ವೈಜ್ಞಾನಿಕ ಪ್ರಯೋಗಗಳ ಮೂಲಕ ಮೇಲುದರ್ಜೆಗೆ ಏರಿಸುವುದು ಸರ್ಕಾರದ ಉದ್ದೇಶ. ಈ ದಿಶೆಯಲ್ಲಿ ಅರಣ್ಯ ಇಲಾಖೆಯ ಅನೇಕ ವರ್ಷಗಳ ಪ್ರಯತ್ನದ ಫಲವಾಗಿ ಇಂದು ಮಾನವ ನಿರ್ಮಿತ ನೆಡುತೋಪುಗಳ ವಿಸ್ತೀರ್ಣ ಸು.೧,೫೦೦ಚ.ಕಿಮೀ. ಈ ನೆಡುತೋಪುಗಳಲ್ಲಿ ಆಧುನಿಕ ಕೈಗಾರಿಕೆಗೆ ಬೇಕಾಗುವ ಯೂಕಲಿಪ್ಟಸ್, ನೀಲಗಿರಿ, ತೇಗ, ರಬ್ಬರ್, ಕೋಕೋ, ಸಂಬಾರ, ಶ್ರೀಗಂಧ, ಗೇರು, ಎಣ್ಣೆ ಗಿಡಗಳು ಮುಂತಾದವು ಹೇರಳವಾಗಿವೆ. ಇತ್ತೀಚೆಗೆ ಜಾರಿಗೆ ಬಂದಿರುವ ಅರಣ್ಯವಿಭಾಗ ಬಿಡುಗಡೆ ಕಾನೂನು ಕಾಡಿನ ನಾಶವನ್ನು ಸಾಕಷ್ಟು ಪ್ರಮಾಣದಲ್ಲಿ ತಡೆಗಟ್ಟಿದೆ. ಜನತೆಗೆ ಬೇಕಾದ ಮರಮುಟ್ಟು, ಸೌದೆ, ಹಸಿಗೊಬ್ಬರ, ವ್ಯವಸಾಯದ ಉಪಕರಣಗಳು ಮುಂತಾದವುಗಳನ್ನು ಅರಣ್ಯ ಕೃಷಿಯ ಮೂಲಕ ಸರಿತೂಗಿಸಿಕೊಳ್ಳಬೇಕಾದುದು ಅನಿವಾರ್ಯ.

ಅರಣ್ಯದ ಪ್ರಾಮುಖ್ಯ ಬದಲಾಯಿಸಿ

ಅತಿವೇಗದಿಂದ ಬೀಸುವ ಗಾಳಿ ಮತ್ತು ಬಿರುಸಾಗಿ ಬೀಳುವ ಮಳೆ ವ್ಯವಸಾಯ ಪ್ರದೇಶದ ಮೇಲ್ಮಣ್ಣನ್ನು ಕೊಚ್ಚುತ್ತದೆ. ಇದರ ಕೊಚ್ಚುವಿಕೆಯಿಂದ ಭೂಮಿ ವ್ಯವಸಾಯಕ್ಕೆ ಅನುಪಯುಕ್ತವಾಗುತ್ತದೆ. ೨.೫ಸೆಂಮೀ. ದಪ್ಪದ ಮಣ್ಣು ಭೂಮಿಯ ಮೇಲೆ ರೂಪುಗೊಳ್ಳಲು ಸು.೬೦೦ ವರ್ಷ ಬೇಕು. ಆದರೆ ಅದನ್ನು ಗಾಳಿ ಹಾಗೂ ಮಳೆಗಳು ಕೇವಲ ಒಂದು ವರ್ಷದಲ್ಲಿ ಕೊಚ್ಚಿಹಾಕಬಲ್ಲವು. ಅರಣ್ಯ ಅತಿವೇಗದ ಗಾಳಿಯ ಒತ್ತಡವನ್ನು ತಡೆದು ಅದರ ಹಾವಳಿಯನ್ನು ಕುಗ್ಗಿಸುತ್ತವೆ. ಅಂತೆಯೇ ಬಿರುಸಾಗಿ ಬೀಳುವ ಮಳೆಯ ಹನಿ ನೇರವಾಗಿ ನೆಲಕ್ಕೆ ಬೀಳದಂತೆ ಮರಗಳ ನೆತ್ತಿ, ಎಲೆ, ಕೊಂಬೆಗಳು ತಡೆದು ಮಳೆಯ ರಭಸವನ್ನು ಕುಗ್ಗಿಸುತ್ತವೆ. ಜೊತೆಗೆ ನೆಲದ ಮೇಲೆ ಬೀಳುವ ಎಲೆಗಳು, ಮೆಕ್ಕಲು ಮಣ್ಣು ಮಳೆಯ ನೀರನ್ನು ಹಿಡಿದಿಟ್ಟುಕೊಂಡು ಅದನ್ನು ಭೂಮಿ ನಿಧಾನವಾಗಿ ಹೀರಲು ಸಹಕಾರಿಯಾಗುತ್ತವೆ. ಇದರಿಂದ ಭೂಮಿಯ ಒಳಗೆ ನೀರಿನ ಮಟ್ಟ ಏರಲು ಅನುಕೂಲವಾಗುತ್ತದೆ. ಇದಲ್ಲದೆ ಅರಣ್ಯಕ್ಕೆ ಮಳೆಯನ್ನು ಆಕರ್ಷಿಸುವ ಶಕ್ತಿಯೂ ಉಂಟು. ಜೊತೆಗೆ ದಟ್ಟವಾದ ಅರಣ್ಯ, ಅತಿವೃಷ್ಟಿ ಅನಾವೃಷ್ಟಿಗಳನ್ನು ಸಮತೋಲನೆಗೊಳಿಸಿ ಅವುಗಳ ಹಾವಳಿಯನ್ನು ತಡೆಗಟ್ಟುತ್ತದೆ.

ಮನೆಕಟ್ಟಲು, ಬಟ್ಟೆ, ಸೌದೆ, ಬೆರಣಿ, ಇದ್ದಿಲು, ಕಾಗದ, ಪೆನ್ಸಿಲ್ಗಳ ತಯಾರಿಕೆಗೆ ರೈಲು, ಬಸ್ಸು, ಲಾರಿ, ಹಡಗು, ವಿಮಾನಗಳ ನಿರ್ಮಾಣಕ್ಕೆ ಕೃಷಿ ಉಪಕರಣ, ಹಸುರೆಲೆ ಗೊಬ್ಬರ ಮೊದಲಾದವುಗಳಿಗೆ ಅರಣ್ಯ ಸಂಪತ್ತು ಉಪಯುಕ್ತವಾಗುತ್ತದೆ.

ಕರ್ನಾಟಕದಲ್ಲಿ ವರ್ಷಂಪ್ರತಿ ಸು. ೭,೦೦,೦೦೦ ಟನ್ ಹಸುರೆಲೆ ಗೊಬ್ಬರವನ್ನು ೧,೮೦,೦೦೦ ಹೆಕ್ಟೇರು ಭೂಮಿಗೆ ಉಪಯೋಗಿಸಲಾಗುತ್ತದೆ. ಪ್ಲೈವುಡ್, ವಿನೀರ್, ರೆಯಾನ್, ಗಂಧ, ನೀಲಗಿರಿ ಎಣ್ಣೆ, ಪೀಠೋಪಕರಣ ಮುಂತಾದ ಹಲವಾರು ಕೈಗಾರಿಕೆಗಳಿಗೆ ಅರಣ್ಯದ ಆಸರೆ ಅನಿವಾರ್ಯ. ಮಿಗಿಲಾಗಿ ಅರಣ್ಯ ಕೈಗಾರಿಕೆಗಳು ಲಕ್ಷÁಂತರ ಜನರಿಗೆ ಉದ್ಯೋಗ ಅವಕಾಶ ಕಲ್ಪಿಸಿದೆ. ಜೊತೆಗೆ ಅರಣ್ಯ ಸಂಪತ್ತಿನ ಹಲವಾರು ಬಾಬುಗಳು ವಿದೇಶಿ ವಿನಿಮಯವನ್ನುಗಳಿಸಲು ಸಹಾಯಕವಾಗಿವೆ. ಬೀಟೆಮರ, ಸಾಗುವಾನಿ, ಬಲ್ಲಿ, ಗಂಧದಮರ, ಏಲಕ್ಕಿ, ಸಂಬಾರ, ರಬ್ಬರ್ ಮುಂತಾದ ಹಲವಾರು ಅರಣ್ಯ ಉತ್ಪನ್ನಗಳಿಗೆ ವಿದೇಶಗಳಿಂದ ವಿಶೇಷ ಬೇಡಿಕೆ ಇದೆ.

ಅರಣ್ಯದಲ್ಲಿ ವಾಸಿಸುವ ವನ್ಯಮೃಗಗಳಿಂದಲೂ ನಮಗೆ ಅನೇಕ ರೀತಿಯ ಉಪಯೋಗಗಳಿವೆ. ಅನೇಕ ವನ್ಯಪ್ರಾಣಿಗಳ ಮಾಂಸವನ್ನು ಆಹಾರಕ್ಕಾಗಿ ಬಳಸಲಾಗುತ್ತದೆ. ಸಂರಕ್ಷಣೆ ದೃಷ್ಟಿಯಿಂದ ಪ್ರಾಣಿಗಳನ್ನು ಕೊಲ್ಲುವುದನ್ನು ನಿಷೇಧಿಸಲಾಗಿದೆ. ಆದರೆ ಕೆಲವು ಮೂಲನಿವಾಸಿಗಳಿಗೆ ಹಿಂದೆ ವನ್ಯಪ್ರಾಣಿಗಳ ಮಾಂಸವಲ್ಲದೆ ಬೇರೆ ಆಹಾರವಿರಲಿಲ್ಲ. ಜೇನಂತೂ ಆಹಾರ ಹಾಗೂ ಔಷಧಿಗುಣವುಳ್ಳ ಪ್ರಾಣಿಜನ್ಯ ವಸ್ತು. ವನ್ಯಪ್ರಾಣಿಗಳ ಚರ್ಮ ಪಾದರಕ್ಷೆ ಹಾಗೂ ಇನ್ನಿತರ ಚರ್ಮದ ಪರಿಕರಗಳಿಗೆ ಉಪಯೋಗವಾಗುತ್ತವೆ. ಕೊಂಬು, ದಂತಗಳನ್ನು ಅಲಂಕರಣ ವಸ್ತುಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಅರಗು, ಅಂಟು ಹಾಗೂ ಕೆಲವು ಸುವಾಸನಾಯುಕ್ತ ವಸ್ತುಗಳು ವನ್ಯ ಪ್ರಾಣಿಗಳಿಂದ ದೊರೆಯುತ್ತವೆ.

ಅರಣ್ಯದಲ್ಲಿರುವ ನಮ್ಮ ವನ್ಯಮೃಗ-ಪಕ್ಷಿಗಳನ್ನು ನೋಡಲು ವರ್ಷಂಪ್ರತಿ ಸಾವಿರಾರು ವಿದೇಶೀಯರು ಬರುವುದರಿಂದ ಪ್ರವಾಸೋದ್ಯಮ ಬೆಳೆದು ವಿದೇಶಿ ವಿನಿಮಯ ಗಳಿಸಲು ಸಹಾಯಕವಾಗುತ್ತದೆ. ಅರಣ್ಯವಸ್ತುಗಳ ಮಾರಾಟದಿಂದ ಕೂಡ ಸರ್ಕಾರಕ್ಕೆ ಹೇರಳವಾದ ಆದಾಯವಿದೆ.

ಪ್ರಕೃತಿ ಸಂಪತ್ತು ಬದಲಾಯಿಸಿ

ಕರ್ನಾಟಕ ರಾಜ್ಯದ ವಿಸ್ತೀರ್ಣ ೧,೯೧,೭೭೩ ಚ.ಕಿಮೀ. ಇದರಲ್ಲಿ ೩೮,೭೨೩.೫೬ ಚ.ಕಿಮೀ ದಾಖಲಾದ ಸರ್ಕಾರದ ನೇರ ಆಡಳಿತಕ್ಕೆ ಒಳಪಟ್ಟ ಅರಣ್ಯ ಪ್ರದೇಶವಾಗಿದೆ. ಖಾಸಗಿ ಆಡಳಿತಕ್ಕೆ ಒಳಪಟ್ಟ ಕಾಡು ಪ್ರದೇಶವಿದ್ದರೂ ಅದು ಅತ್ಯಲ್ಪ ಪ್ರಮಾಣದ್ದು. ಒಟ್ಟು ಭೂವಿಸ್ತೀರ್ಣದಲ್ಲಿ ಶೇ.೨೦.೧೯ ಭಾಗ ದಾಖಲೆಯಾದದ್ದು ಮಾತ್ರ ಅರಣ್ಯ ಪ್ರದೇಶವಾಗಿದೆ. ಪ್ರಪಂಚದ ಅನೇಕ ದೇಶಗಳ ಅರಣ್ಯ ಸಂಪತ್ತಿನೊಡನೆ ಹೋಲಿಸಿದಲ್ಲಿ ಕರ್ನಾಟಕದ್ದು ಬಹಳ ಕಡಿಮೆ. ಉದಾಹರಣೆಗೆ ಪ್ರಪಂಚದ ವಿವಿಧ ದೇಶಗಳ ಭೂಭಾಗದ ಶೇಕಡಾವಾರು ಅರಣ್ಯ ಪ್ರದೇಶ ಈ ರೀತಿ ಇದೆ. ರಷ್ಯ ೪೦.೬, ಕೆನಡ ೪೪.೫, ಅಮೆರಿಕ ೩೧.೬, ಮಯನ್ಮಾರ್ ೬೬.೮, ಭಾರತದ ಒಟ್ಟು ವಿಸ್ತೀರ್ಣದ ಶೇಕಡವಾರು ಅರಣ್ಯ ಪ್ರದೇಶ ೨೨.೯.

ಒಂದು ದೇಶದ ಸಮಗ್ರ ಅಭಿವೃದ್ಧಿಗೆ ಆ ದೇಶದ ಒಟ್ಟು ಭೂ ವಿಸ್ತೀರ್ಣದ ಮೂರನೆಯ ಒಂದು ಭಾಗವಾದರೂ ಅರಣ್ಯ ಪ್ರದೇಶವಾಗಿರಬೇಕೆಂಬುದು ತಜ್ಞರ ಅಭಿಪ್ರಾಯ, ಕರ್ನಾಟಕದ ಅರಣ್ಯ ಪ್ರಮಾಣ ಕೇವಲ ಶೇ. ೨೦.೧೯ ಇದ್ದು, ಅದು ರಾಷ್ಟ್ರದ ಅರಣ್ಯ ಪ್ರದೇಶದ ಪ್ರಮಾಣಕ್ಕಿಂತ ಕಡಿಮೆ ಇದೆ ಎಂಬುದು ಗಮನಿಸಬೇಕಾದ ಅಂಶ.

ಅರಣ್ಯಗಳ ವರ್ಗೀಕರಣ ಬದಲಾಯಿಸಿ

ಹವಾಗುಣ, ಮಣ್ಣು, ಉಷ್ಣತೆ, ಗಾಳಿ, ಮಳೆ, ಸಮುದ್ರಮಟ್ಟದಿಂದ ಇರುವ ದೂರ ಮತ್ತು ಎತ್ತರ ಮತ್ತು ಆ ಪ್ರದೇಶದ ಸಸ್ಯ ಸಮುದಾಯಕ್ಕೆ ಹಿಂದೆ ಸಿಕ್ಕಿರುವ ಉಪಚಾರ ಇವೇ ಮೊದಲಾದ ಅಂಶಗಳ ಆಧಾರದ ಮೇಲೆ ಕರ್ನಾಟಕದ ಅರಣ್ಯಗಳನ್ನು ವಿವಿಧ ಬಗೆಗಳಾಗಿ ವಿಂಗಡಿಸಲಾಗಿದೆ. ಕರ್ನಾಟಕದ ವಿವಿಧ ಭಾಗಗಳಲ್ಲಿ ವಿವಿಧ ಪ್ರಕಾರದ ಮಣ್ಣಿದೆ. ವರ್ಷಕ್ಕೆ ೨೫೦-೮೦೦ಮೀಮೀ ಮಳೆ ಬಿದ್ದು ಉಷ್ಣತೆ ೧೫-೪೦ ಸೆಲ್ಸಿಯಸ್ ವರೆಗೆ ವ್ಯತ್ಯಾಸವಾಗುತ್ತದೆ. ನೆಲದ ಎತ್ತರ ಸಮುದ್ರ ಮಟ್ಟದಿಂದ ೧೭೦೦ಮೀ ವರೆಗೆ ವಿವಿಧ ಜಾತಿಯ ಸಸ್ಯಗಳನ್ನೊಳಗೊಂಡ ವಿವಿಧ ನೈಜ ಅರಣ್ಯಗಳಿಗೆ ಎಡೆ ಮಾಡಿ ಕೊಟ್ಟಿದೆ. ವಿವಿಧ ಸಸ್ಯಪ್ರಭೇದ ಸಮೂಹ ಮತ್ತು ವಿಸ್ತರಣೆಗಳ ಆಧಾರದ ಮೇಲೆ ಕರ್ನಾಟಕದ ಅರಣ್ಯ ಪ್ರದೇಶವನ್ನು ಈ ಕೆಳಕಂಡಂತೆ ವಿಂಗಡಿಸಬಹುದು (ಚಾಂಪಿಯನ್ ಮತ್ತು ಸೇತ್ ಎಂಬ ತಜ್ಞರ ವರ್ಗೀಕರಣದ ಪ್ರಕಾರ)

  • ೧. ದಕ್ಷಿಣಾರ್ಧದ ಉಷ್ಣವಲಯದ ತೇವಪೂರಿತ ನಿತ್ಯ ಹರಿದ್ವರ್ಣದ ಅರಣ್ಯ
  • ೨. ದಕ್ಷಿಣಾರ್ಧದ ಉಷ್ಣವಲಯದ ಆಂಶಿಕ ನಿತ್ಯ ಹರಿದ್ವರ್ಣದ ಅರಣ್ಯ
  • ೩. ದಕ್ಷಿಣ ಭಾರತದ ತೇವ ಮಿಶ್ರಿತ ಪರ್ಣಪಾತಿ ಅರಣ್ಯ
  • ೪. ದಕ್ಷಿಣಾರ್ಧದ ಉಷ್ಣವಲಯದ ಒಣ ಪರ್ಣಪಾತಿ ಅರಣ್ಯ
  • ೫. ದಕ್ಷಿಣಾರ್ಧದ ಉಷ್ಣವಲಯದ ಕುರುಚಲು ಅರಣ್ಯ

ಇದರ ಜೊತೆಗೆ ಆಯಾ ಸ್ಥಳದ ಸೂಕ್ಷ್ಮ ಹವಾಗುಣವನ್ನು ಅವಲಂಬಿಸಿ ಮಾರ್ಪಾಡಾಗಿರುವ ಸಣ್ಣ ಪುಟ್ಟ ಬಗೆಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತವೆ. ಇನ್ನೊಂದು ಮುಖ್ಯವಾದ ಅಂಶವೆಂದರೆ ಮೇಲೆ ನಮೂದಿಸಿರುವ ವರ್ಗಗಳು ಒಂದರೊಡನೊಂದು ಸೇರಿಕೊಳ್ಳುವುದು ಅಥವಾ ಒಂದು ಜಾತಿಯ ಗಿಡಮರಗಳ ಗುಂಪಿನಲ್ಲಿ ಮತ್ತೊಂದು ಬಗೆಯವು ಅಡಕವಾಗಿರುವುದು. ಜೊತೆಗೆ ದಟ್ಟ ಅರಣ್ಯದ ನಡುವೆ ಗಿಡಮರಗಳಿಲ್ಲದೆ ಕೇವಲ ಹುಲ್ಲು ಮಾತ್ರ ಬೆಳೆದಿದ್ದು ಕೆಲವು ಸಸ್ಯಾಹಾರಿ ಪ್ರಾಣಿಗಳಿಗೆ ಮೇವು ನೀಡುವ ಹುಲ್ಲುಗಾವಲುಗಳೂ ಕಂಡುಬರುತ್ತವೆ. ಜೌಗಿನಿಂದ ಕೂಡಿದ ಪ್ರದೇಶಗಳನ್ನು ‘ಹಡ್ಲು’ ಎಂದು ಕರೆಯುತ್ತಾರೆ. ಇಳಿಜಾರಿನ ಪ್ರದೇಶಗಳಲ್ಲಿ ಗಾಳಿಯ ಒತ್ತಡದಿಂದ ಗಿಡಮರಗಳು ಬೆಳೆಯದೆ ಕೇವಲ ಕಲ್ಲುಮಣ್ಣುಗಳಿಂದಾವೃತವಾದ ನಿರುಪಯುಕ್ತ ಸ್ಥಳಗಳೂ ಅರಣ್ಯದ ಮಧ್ಯದಲ್ಲಿವೆ. ಈ ಸ್ಥಳಗಳನ್ನು ಶೋಲಾಗಳೆನ್ನುತ್ತಾರೆ.

ದಕ್ಷಿಣಾರ್ಧದ ಉಷ್ಣವಲಯದ ತೇವಪೂರಿತ ನಿತ್ಯ ಹರಿದ್ವರ್ಣದ ಅರಣ್ಯ ಬದಲಾಯಿಸಿ

ಪಶ್ಚಿಮ ಕರಾವಳಿಯ ಉದ್ದಕ್ಕೂ ಬೆಳಗಾವಿಯಿಂದ ಕೊಡಗಿನವರೆಗೂ ಈ ಬಗೆಯ ಅರಣ್ಯವನ್ನು ಕಾಣಬಹುದು. ಇಲ್ಲಿ ವಾರ್ಷಿಕವಾಗಿ ಸು.೨೫೦೦-೮೦೦೦ ಮಿಮೀ ಮಳೆಯಾಗುತ್ತದೆ. ಸಮುದ್ರ ಮಟ್ಟದಿಂದ ೫೦೦-೧೦೦೦ಮೀ ಎತ್ತರದವರೆಗೂ ಈ ಅರಣ್ಯ ವಿಸ್ತರಿಸಿದೆ. ದಟ್ಟವಾಗಿ ಬೆಳೆಯುವ ಇವುಗಳಲ್ಲಿ ವಿವಿಧ ಜಾತಿಯ ಮರಗಳನ್ನು ಕಾಣಬಹುದು. ಈ ಗುಂಪಿನ ಅರಣ್ಯಗಳ ಅತಿಮುಖ್ಯ ಲಕ್ಷಣವೆಂದರೆ ಮೇಲ್ಚಾವಣಿಯಲ್ಲಿರುವ ಮರಗಳು ನೀಳವಾಗಿ ಬೆಳೆದಿರುತ್ತವೆ. ಮೊದಲನೆಯ ಕೊಂಬೆಗೂ ನೆಲಕ್ಕೂ ಸು.೩೦ಮೀ ಅಂತರವಿರುತ್ತದೆ. ಮರಗಳ ಸುತ್ತಳತೆ ಸು.೫ಮೀ ಇರುತ್ತದೆ.

ನಿತ್ಯ ಹರಿದ್ವರ್ಣದ ಅರಣ್ಯ ಸಾಮಾನ್ಯವಾಗಿ ಮೂರು ಶ್ರೇಣಿಯ ಸಸ್ಯಜಾತಿಗಳನ್ನೊಳಗೊಂಡಿವೆ. ಈ ಗುಂಪಿನ ಕಾಡುಗಳಲ್ಲಿ ಧೂಮ, ಸುರಹೊನ್ನೆ, ಕಿರಾಳಭೋಗಿ, ಮಾವು, ಗುಳಮಾವು, ಬೆನ್ನಾಟೆ, ಹೊಳೆಗಾರ, ಹೊಳೆಹೊನ್ನೆ, ಬಿಲ್ಲಿ, ನಾಗಸಂಪಿಗೆ, ಬಿಳಿದೇವದಾರು, ಪಾಲಿ, ಸಂಪಿಗೆ, ಸಾಲುಧೂಪ, ಹೆಬ್ಬಲಸು, ನೊಗ, ಬಲಂಜೆ, ಸಟ್ಟಗ, ದಾಲ್ಚಿನ್ನಿ, ಹೈಗ, ಕಾಯಿಧೂಪ, ನೀಲಿ, ಬಗನಿ, ನೇರಳೆ, ಸಾಗಡೆ, ರಂಚ, ಅರಿಶಿನಗುರಿಗೆ, ತೊರತ್ತಿ, ರಾಮನಡಿಕೆ, ಬೊಂಬು, ವಾಟೆ, ಗುರಿಗೆ, ಕೇದಗೆ, ಬೆತ್ತ ಮೊದಲಾದ ಗಿಡ ಮರಬಳ್ಳಿಗಳು ಕಂಡುಬರುತ್ತವೆ.

ಈ ಅರಣ್ಯಗಳ ಪಾತ್ರ ದೇಶದ ಹಿತದೃಷ್ಟಿಯಿಂದ ಬಹುಮುಖ್ಯವಾದುದು. ನೇರವಾಗಿ ಬೆಳೆಯುವ ಮರಗಳಿಂದ ವಿದ್ಯುಚ್ಫಕ್ತಿ ಕಂಬಗಳು, ರೈಲುಕಂಬಿಗಳ ಆಸರೆಯ ದಿಮ್ಮಿಗಳು, ಕಾಗದದ ಉತ್ಪತ್ತಿಗೆ ಬೇಕಾದ ನಾರು ತಿರುಳು, ತೆಳುಹೊದಿಕೆ ಮರದ ಹಾಳೆಗಳು ಮುಂತಾದವು ದೊರಕುವವು.

ದಕ್ಷಿಣಾರ್ಧದ ಉಷ್ಣವಲಯದ ಆಂಶಿಕ ನಿತ್ಯ ಹರಿದ್ವರ್ಣದ ಅರಣ್ಯ ಬದಲಾಯಿಸಿ

ಈ ಗುಂಪಿನ ಕಾಡುಗಳು ಪಶ್ಚಿಮ ಕರಾವಳಿಯಲ್ಲಿ ನಿತ್ಯಹರಿದ್ವರ್ಣ ಅರಣ್ಯ ಮತ್ತು ತಾತ್ಕಾಲಿಕ ಪರ್ಣಪಾತಿ ಅರಣ್ಯಗಳ ಮಧ್ಯ ಹರಡಿವೆ. ಇಲ್ಲಿ ನಿತ್ಯಹರಿದ್ವರ್ಣ ವೃಕ್ಷ ಮತ್ತು ಬೇಸಗೆಯಲ್ಲಿ ಎಲೆ ಉದುರಿಸುವ ವೃಕ್ಷಗಳ ಸಮ್ಮಿಶ್ರಣವನ್ನು ಕಾಣಬಹುದು. ಜಂಬೆಮರಗಳು ಅತಿಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ. ಆಸರೆಯ ಕಾಂಡಗಳುಳ್ಳ ಮರಗಳೂ ಇಲ್ಲಿ ಇವೆ. ಸಟ್ಟಗ, ಬೂರುಗ ಮುಂತಾದವು ಈ ಗುಂಪಿಗೆ ಸೇರುತ್ತವೆ. ಸಾಮಾನ್ಯವಾಗಿ ಮರಗಳ ತೊಗಟೆ ಸ್ವಲ್ಪ ದಪ್ಪವಾಗಿಯೂ ಗಡುಸಾಗಿಯೂ ಇರುವುದು. ಈ ಬಗೆಯ ಅರಣ್ಯವಿರುವ ಪ್ರದೇಶಗಳಲ್ಲಿ ೨೦೦೦-೨೫೦೦ಮಿಮೀ ಮಳೆಯಾಗುತ್ತದೆ. ಸಾಮಾನ್ಯವಾಗಿ ಈ ಕಾಡಿನಲ್ಲಿ ಹನಾಲು, ಕರಿಮರ, ನಂದಿ, ಹೊಳೆಗಾರ ಹೈಗ, ಬೆನ್ನಾಟೆ, ಸಂಪಿಗೆ, ದಾಲ್ಚಿನ್ನಿ, ಕಿರಾಳಭೋಗಿ, ಹೆಬ್ಬಲಸು, ಸಟ್ಟಗ, ರಂಗುಮಾಲೆ, ಗರಿಗೆ, ಹೆಬ್ಬಿದಿರು ಮೊದಲಾದವು ವಿಶೇಷವಾಗಿ ಬೆಳೆಯುವುವು.

ದಕ್ಷಿಣ ಭಾರತದ ತೇವ ಮಿಶ್ರಿತ ಪರ್ಣಪಾತಿ ಅರಣ್ಯ ಬದಲಾಯಿಸಿ

ಪಶ್ಚಿಮ ಕರಾವಳಿಯ ಪೂರ್ವಪಾಶರ್ವ್‌ದ ಉದ್ದಕ್ಕೂ ಈ ಬಗೆಯ ಅರಣ್ಯವನ್ನು ಕಾಣಬಹುದು. ಇಲ್ಲಿನ ಮಳೆಯ ಪರಿಮಾಣ ೧೫೦೦-೨೦೦೦ ಮಿಮೀ. ತೇಗ ಮತ್ತಿ, ನಂದಿ, ಹೊನ್ನೆ, ಹೇತ್ತೇಗ, ಬೀಟೆ, ಬಿಳಿಮತ್ತಿ, ತಾರೆ, ಜಂಬೆ, ಸಾಗಡೆ, ಕೌಲು, ಹಲಸು, ತಡಸಲು, ಬೂರುಗ, ನೆಲ್ಲಿ ಮುಂತಾದವು ಇಲ್ಲಿನ ಮುಖ್ಯ ಸಸ್ಯಜಾತಿಗಳು. ಜೊತೆಗೆ ನೀರಿನ ಆಸರೆಯಿರುವ ಕಡೆಗಳಲ್ಲೆಲ್ಲ ಹೆಬ್ಬಿದಿರು ಬಲು ಸಾಮಾನ್ಯವಾಗಿ ಕಂಡುಬರುತ್ತದೆ. ಕಿರಿಬಿದಿರಾದರೂ ಶುಷ್ಕ ಹವೆ ಪ್ರದೇಶಗಳಲ್ಲೆಲ್ಲಾ ಕಂಡುಬರುತ್ತದೆ. ಇಲ್ಲಿನ ಮರಗಳಿಗೆ ಒಣಹವೆಯನ್ನು ತಡೆದುಕೊಳ್ಳುವ ಶಕ್ತಿ ಇದೆ. ಈ ಕಾಡುಗಳ ಕೆಳಗಿನ ಶ್ರೇಣಿಯಲ್ಲಿ ಕೆಲವು ಸಣ್ಣ ನಿತ್ಯಹರಿದ್ವರ್ಣ ವೃಕ್ಷಗಳು ಕೂಡಾ ಕಂಡುಬರುತ್ತವೆ.

ದಕ್ಷಿಣಾರ್ಧದ ಉಷ್ಣವಲಯದ ಒಣ ಪರ್ಣಪಾತಿ ಅರಣ್ಯ ಬದಲಾಯಿಸಿ

ವರ್ಷದಲ್ಲಿ ೮೫೦ ರಿಂದ ೧೫೦೦ಮಿಮೀ ಮಳೆ ಬೀಳುವ ಪ್ರದೇಶದಲ್ಲಿ ಈ ಬಗೆಯ ಅರಣ್ಯ ಕಂಡುಬರುತ್ತದೆ. ಕೆಲವು ಸಲ ಶೀಘ್ರವಾಗಿ ಆರುವ ಒಣಮಣ್ಣು ಇರುವ ಹಾಗೂ ೧೯೦೦ಮಿಮೀ ಮಳೆ ಬೀಳುವ ಪ್ರದೇಶದಲ್ಲೂ ಕಾಣಬಹುದು. ಯಾವ ಪ್ರದೇಶದಲ್ಲಿ ಮಳೆ ೭೫೦ಮಿಮೀಗಿಂತ ಕಡಿಮೆ ಬೀಳುತ್ತದೊ ಅಲ್ಲಿ ಕುರುಚಲು ಅರಣ್ಯಕ್ಕೆ ಎಡೆಮಾಡಿಕೊಡುತ್ತದೆ. ಈ ಅರಣ್ಯಗಳು ೪೫೦-೬೦೦ಮೀ ಎತ್ತರದಲ್ಲಿದ್ದು ಸಣ್ಣಪುಟ್ಟ ಗುಡ್ಡಗಳನ್ನು ಆಕ್ರಮಿಸಿಕೊಂಡಿವೆ. ಬಹುಶಃ ಮೈದಾನ ಪ್ರದೇಶವನ್ನೆಲ್ಲಾ ವ್ಯವಸಾಯಕ್ಕೆ ಉಪಯೋಗಿಸಿರುವುದು ಇದಕ್ಕೆ ಕಾರಣವಿರಬೇಕು.

ಪರಾಕಾಷ್ಠೆಯನ್ನು ತಲಪಿರುವ ಈ ಅರಣ್ಯಗಳಲ್ಲಿ ಮೇಲಿನ ಮರಶ್ರೇಣಿ ಇಕ್ಕಟ್ಟಾಗಿರುತ್ತದೆಯಾದರೂ ದಟ್ಟವಾಗಿರುವುದಿಲ್ಲ. ಇಲ್ಲಿ ಕಂಡುಬರುವ ಬಹುಪಾಲು ವೃಕ್ಷಗಳೆಲ್ಲವೂ ಬೇಸಿಗೆಯಲ್ಲಿ ಎಲೆಯುದುರುವಂಥವು. ಇವುಗಳ ಎತ್ತರ ೧೨-೨೦ಮೀ. ಮರಗಳ ಕೆಳಗೆ ಕಿರುಬಿದಿರುಗಳು, ಅನೇಕ ಜಾತಿಯ ಹುಲ್ಲುಗಳು, ಅಡರು ಬಳ್ಳಿಗಳು ಬೆಳೆದಿರುತ್ತವೆ. ಬೆತ್ತ ಮತ್ತು ತಾಳವೃಕ್ಷಗಳು ಈ ಅರಣ್ಯಗಳಲ್ಲಿ ಕಂಡುಬರುವುದಿಲ್ಲ.

ಈ ಅರಣ್ಯಗಳಲ್ಲಿ ಕೆಲವೆಡೆ ಸಾಗುವಾನಿ ಜಾತಿಯ ಮರಗಳು ಹಾಗೂ ದಿಂಡಿಲು ಮತ್ತು ಮತ್ತಿ ಜಾತಿಯ ಮರಗಳು ಬೆಳೆಯುತ್ತವೆ. ಸಾಗುವಾನಿ ಜಾತಿಯ ಮರಗಳು ಕಂಡುಬರದ ಪ್ರದೇಶಗಳಲ್ಲಿ ದಿಂಡಿಗ, ಮತ್ತಿ, ಬೆಂಡೆ, ನಂದಿ, ಹೆತ್ತೇಗ, ಕಣಗಲು, ಹಿಪ್ಪೆ, ಬೂರುಗ, ತಡಸಲು, ಹೊನ್ನೆ, ಗಂಧ, ಹುರುಗಲು, ತಾರೆ, ಕಮರ, ಕಗ್ಗಲು, ನೂನಲು, ಬಿಲ್ವಪತ್ರೆ, ಬೇಲ, ನೆಲ್ಲಿ, ಎಲಚಿ, ಬಿಕ್ಕೆ, ಬಾಗೆ, ಬಂದರಿಕೆ, ಲಂಟಾನ, ಎಡಮುರಿ, ಮುತ್ತುಗ, ಜಗಳಗಂಟಿ, ಸಾಗಡೆ, ಕೂಳಿ, ದೊಡ್ಡ ತೊಪ್ಪೆ ಹಾಗೂ ಅನೇಕ ಜಾತಿಯ ಮುಳ್ಳಿನ ಗಿಡಗಳು ಕಂಡುಬರುತ್ತವೆ. ತೇವಮಿಶ್ರಿತ ಪರ್ಣಪಾತಿ ಅರಣ್ಯ ಹಾಗೂ ಉಷ್ಣವಲಯದ ಒಣ ಪರ್ಣಪಾತಿ ಅರಣ್ಯಗಳು ತಾತ್ಕಾಲಿಕವಾಗಿ ಎಲೆ ಉದುರುವ ಅರಣ್ಯಗಳು. ಈ ಅರಣ್ಯಗಳಲ್ಲಿ ವನ್ಯಮೃಗದ ಸಂಪತ್ತು ಹೇರಳವಾಗಿದೆ. ಇವುಗಳಲ್ಲಿ ಪ್ರಮುಖವಾದ ಪ್ರಾಣಿಗಳು ಆನೆ, ಹುಲಿ, ಕಾಡುಕೋಣ, ಚಿರತೆ, ಕಡವೆ, ಚುಕ್ಕಿ ಚಿಗರೆ, ಕಾಡುಹಂದಿ, ಕರಡಿ, ಸೀಳುನಾಯಿ ಮುಂತಾದವು. ವರ್ಣರಂಜಿತ ಪಕ್ಷಿಗಳಾದ ನವಿಲು, ಕಾಡುಕೋಳಿ, ಕೆಂಬೂತ ಇವು ಮುಖ್ಯವಾದ ಪಕ್ಷಿಗಳು.

ದಕ್ಷಿಣಾರ್ಧದ ಉಷ್ಣವಲಯದ ಕುರುಚಲು ಅರಣ್ಯ ಬದಲಾಯಿಸಿ

ಇವುಗಳಲ್ಲಿ ಮರಗಿಡಗಳ ಎಲೆಗಳು ಸಾಮಾನ್ಯವಾಗಿ ಬೇಸಗೆಯಲ್ಲಿ ಉದುರುತ್ತವೆ. ಇಲ್ಲಿನ ಮಳೆಯ ಪ್ರಮಾಣ ಸು.೨೫೦-೧೦೦೦ಮಿಮೀ. ಈ ಅರಣ್ಯಗಳಲ್ಲಿ ಮುಳ್ಳಿನ ಗಿಡಗಳ ಪ್ರಮಾಣ ಹೆಚ್ಚು. ಈ ಗುಂಪಿನ ಕಾಡುಗಳು ದೇಶದ ಆದಾಯದ ದೃಷ್ಟಿಯಿಂದ ಹೆಚ್ಚು ಉಪಯುಕ್ತವಲ್ಲ. ಪ್ರಕೃತಿಯ ವಿಕೋಪಕ್ಕಿಂತ ಹೆಚ್ಚಾಗಿ ಮಾನವ ಚಟುವಟಿಕೆಯಿಂದಾಗಿ ಈ ಬಗೆಯ ಕಾಡು ನಶಿಸಿ ಹೋಗುತ್ತಿದೆ. ಈ ಅರಣ್ಯಗಳಲ್ಲಿ ದಿಂಡಿಗ, ಗೊಬ್ಬಳಿ, ಬಿಳಿಜಾಲಿ, ಕತ್ತಾಳೆ, ಬನ್ನಿ, ಬಬ್ಬಿಲಿ, ಬಿಲ್ವಾರ, ಬಾಗೆ, ಮತ್ತಿ, ತಾರೆ, ಅಳಲೆ, ಬಿಲ್ವಪತ್ರ, ಬೇಲ, ಸಾಂಬ್ರಾಣಿ, ನವಿಲಾಡಿ, ಗಂಧ, ಹುರುಗಲು, ಬೇವು, ಕಗ್ಗಲಿ, ದೇವದಾರು, ಹಂಗರು ಮುಂತಾದ ಗಿಡಮರಗಳನ್ನು ಕಾಣಬಹುದು. ಜೊತೆಗೆ ಎಲಚಿ, ಸೀತಾಫಲ, ಈಚಲು, ಎಕ್ಕ, ಕಾರೆಗಿಡ, ಪಾಪಾಸುಕಳ್ಳಿ, ಚಂಡರಿಕೆ, ಲಂಟಾನ ಮುಂತಾದವುಗಳೂ ಕಂಡುಬರುತ್ತವೆ.

ಕರ್ನಾಟಕದಲ್ಲಿ ಈ ಎಲ್ಲ ಐದು ಬಗೆಯ ಅರಣ್ಯಗಳಿದ್ದರೂ ರಾಜ್ಯದ ಹಾಗೂ ದೇಶದ ಅಭಿವೃದ್ಧಿಗೆ ಮೊದಲ ಮೂರು ವಿಧದ ಅರಣ್ಯಗಳ ಕೊಡುಗೆ ಮಹತ್ವದ್ದು. ಈ ಬಗೆಯ ಅರಣ್ಯಗಳಲ್ಲಿ ಬೆಲೆಬಾಳುವ ಮರಗಳು ಹೆಚ್ಚು. ಅವು ಸಮೃದ್ಧವಾಗಿಯೂ ಬೆಳೆಯುತ್ತವೆ. ಆದರೆ ಈ ಬಗೆಯ ಅರಣ್ಯಗಳ ಪ್ರಮಾಣ ಕುರುಚಲು ಅರಣ್ಯಗಳಿಗಿಂತ ಕಡಿಮೆ ಇದೆ ಎಂಬುದು ಗಮನಿಸಬೇಕಾದ ಅಂಶ. ಕರ್ನಾಟಕದಲ್ಲಿರುವ ವಿವಿಧ ಬಗೆಯ ಅರಣ್ಯಗಳು, ಅವುಗಳ ಸೇಕಡಾವಾರು ಪ್ರಮಾಣ, ವಿಸ್ತೀರ್ಣ ಮುಂತಾದ ಅಂಕಿ ಸಂಖ್ಯೆಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.

ಅರಣ್ಯ -ವಿಧ ವಿಸ್ತೀರ್ಣ-ಒಟ್ಟು

ಅರಣ್ಯದ (೧೦೦೦ ಹೆಕ್ಟೇರುಗಳಲ್ಲಿ)

! ಶೇಕಡಾವಾರು
೧. ದಕ್ಷಿಣಾರ್ಧದ ಉಷ್ಣವಲಯದ

ತೇವಪೂರಿತ

ನಿತ್ಯಹರಿದ್ವರ್ಣದ ಅರಣ್ಯ

೫೮೦ ೧೫.೧೧
೨. ದಕ್ಷಿಣಾರ್ಧದ ಉಷ್ಣವಲಯದ

ಆಂಶಿಕ ನಿತ್ಯಹರಿದ್ವರ್ಣದ ಅರಣ್ಯ

೫೭೮ ೧೪.೯೬
೩. ದಕ್ಷಿಣ ಭಾರತದ

ತೇವಮಿಶ್ರಿತ ಪರ್ಣಪಾತಿ ಅರಣ್ಯ

೭೨೭ ೧೮.೬೪
೪. ದಕ್ಷಿಣಾರ್ಧದ ಉಷ್ಣವಲಯದ

ಒಣ ಪರ್ಣಪಾತಿ ಅರಣ್ಯ

೮೧೮ ೨೧.೧೧
೫. ದಕ್ಷಿಣಾರ್ಧದ ಉಷ್ಣವಲಯದ

ಕುರುಚಲು ಅರಣ್ಯ

೧೧೬೧ ೩೦.೧೮
ಒಟ್ಟು ೩೮೬೪ ೧೦೦.೦೦

ಅರಣ್ಯ ಇಲಾಖೆಯ ಆಡಳಿತ ಬದಲಾಯಿಸಿ

ಭಾರತದ ಸಂವಿಧಾನದ ವಿಧಿಗನುಗುಣವಾಗಿ ಅರಣ್ಯ ಇಲಾಖೆಯ ಆಡಳಿತ ಕರ್ನಾಟಕ ಸರ್ಕಾರದ ಅಧೀನಕ್ಕೆ ಒಳಪಟ್ಟಿದೆ. ಅರಣ್ಯ ಇಲಾಖೆಯ ಆಡಳಿತದ ಉನ್ನತ ಹುದ್ದೆಗಳಿಗೆ ಆಯ್ಕೆ, ಅರಣ್ಯ ವಿದ್ಯಾಭ್ಯಾಸ ಹಾಗೂ ವೈಜ್ಞಾನಿಕ ಸಂಶೋಧನೆಗಳ ಮೇಲ್ವಿಚಾರಣೆ ಭಾರತ ಸರ್ಕಾರಕ್ಕೆ ಸೇರಿದೆ. ಅರಣ್ಯ ಹುಟ್ಟುವಳಿಗಳ ರಫ್ತು ಆಮದುಗಳು ಕೂಡಾ ಕೇಂದ್ರ ಮೇಲ್ವಿಚಾರಣೆಯಲ್ಲಿಯೇ ನಡೆಯುತ್ತವೆ. ಕರ್ನಾಟಕದ ಅರಣ್ಯ ಇಲಾಖೆಯ ಎಲ್ಲಾ ಕಾರ್ಯ ಚಟುವಟಿಕೆಗಳೂ ಅರಣ್ಯಖಾತೆ ಮಂತ್ರಿಗಳ ನೇತೃತ್ವದಲ್ಲಿ ಅರಣ್ಯ ಕಾರ್ಯದರ್ಶಿಗಳ ಮುಖಾಂತರ ಸಾಗುತ್ತವೆ. ಅರಣ್ಯ ಇಲಾಖೆಗೆ ಸಂಬಂಧಿಸಿದ ಎಲ್ಲ ನಿಯಮಾವಳಿಗಳನ್ನು ಅನುಷ್ಠಾನಕ್ಕೆ ತರುವ ಅಧಿಕಾರ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿಗಳಿಗೆ ಸೇರಿದೆ. ಇವರ ಅಧೀನದಲ್ಲಿ ಅರಣ್ಯ ವಿಭಾಗ, ವನ್ಯಜೀವಿ ವಿಭಾಗ ಹಾಗೂ ಅರಣ್ಯ ಕಾರ್ಪೊರೇಶನ್ ಎಂಬ ಮೂರು ಮುಖ್ಯ ಘಟಕಗಳಿವೆ. ಮುಖ್ಯ ಸಂರಕ್ಷಣಾಧಿಕಾರಿಗಳು ಈ ಘಟಕಗಳ ಮುಖ್ಯಸ್ಥರು. ಇವರ ಅಧೀನದಲ್ಲಿ ವೃತ್ತ ಸಂರಕ್ಷಣಾಧಿಕಾರಿಗಳು, ವಿಭಾಗ ಸಂರಕ್ಷಣಾಧಿಕಾರಿಗಳು, ವಲಯ ಅರಣ್ಯಾಧಿಕಾರಿಗಳು, ವನಾಧಿಕಾರಿಗಳು, ಅರಣ್ಯ ರಕ್ಷಕರು ಮುಂತಾದವರಿರುತ್ತಾರೆ. ಕರ್ನಾಟಕದಲ್ಲಿ ಒಟ್ಟು ೧೪ ವೃತ್ತಗಳು, ೫೮ ವಿಭಾಗಗಳು, ೧೯೮ ವಲಯಗಳೂ ಇವೆ. ಇದರೊಂದಿಗೆ ಅಭಿವೃದ್ಧಿ ಮುಖ್ಯ ಸಂರಕ್ಷಣಾಧಿಕಾರಿ, ಅರಣ್ಯ ಕೈಗಾರಿಕೆಗಳ ಮುಖ್ಯ ಅಧಿಕಾರಿ, ಮುಖ್ಯ ವನ್ಯಪ್ರಾಣಿ ಸಂರಕ್ಷಣಾಧಿಕಾರಿ ಮುಂತಾದ ಹುದ್ದೆಗಳಿವೆ. ಬೆಂಗಳೂರಿನಲ್ಲಿ ಒಂದು ಅರಣ್ಯ ವೈಜ್ಞಾನಿಕ ಸಂಶೋಧನ ಕೇಂದ್ರವೂ ಇದೆ. ಅರಣ್ಯ ಉಸ್ತುವಾರಿಗಾಗಿ ಗ್ರಾಮ ಅರಣ್ಯ ಸಮಿತಿಗಳನ್ನು ಅನೇಕ ಕಡೆ ಅಸ್ತಿತ್ವಕ್ಕೆ ತರಲಾಗಿದೆ.

ಅರಣ್ಯ ರಕ್ಷಕರಿಗೆ ತರಬೇತಿ ನೀಡಲು ಕುಶಾಲನಗರ, ಯಲ್ಲಾಪುರ, ಹನುಮನಹಟ್ಟಿ ಮತ್ತು ಬೀದರಗಳಲ್ಲಿ ತರಬೇತಿ ಶಾಲೆಗಳಿವೆ. ವನಾಧಿಕಾರಿಗಳು ಮತ್ತು ಮೋಜಣಿದಾರರ (ಸರ್ವೇಯರ್) ತರಬೇತಿಗೆಂದು ಅಂಬಿಕಾನಗರದ ಸಮೀಪ ತರಬೇತಿಶಾಲೆ ಇದೆ. ವಲಯಾಧಿಕಾರಿಗಳಿಗೆ ತರಬೇತಿ ನೀಡಲು ಕೊಯಮತ್ತೂರಿನಲ್ಲಿಯೂ ಭಾರತೀಯ ಅರಣ್ಯ ಸೇವಾ ಅಧಿಕಾರಿಗಳಿಗೆ ತರಬೇತಿ ನೀಡಲು ಡೆಹರಾಡೂನಿನಲ್ಲಿಯೂ ಅರಣ್ಯ ಕಾಲೇಜುಗಳಿವೆ. ಅರಣ್ಯಗಳ ಬಗ್ಗೆ ಹೆಚ್ಚಿನ ವ್ಯಾಸಂಗ, ಮಾಹಿತಿ ಪಡೆಯಲು, ಮೇಲ್ದರ್ಜೆಯ ಅಧಿಕಾರಿಗಳಿಗೆ ವಿದೇಶಗಳಿಗೆ ಭೇಟಿ ನೀಡುವ ಅವಕಾಶಗಳೂ ಇವೆ. ಕರ್ನಾಟಕದಲ್ಲಿ ಅತ್ಯಂತ ಸಂಪದ್ಭರಿತ ಅರಣ್ಯಗಳಿದ್ದರೂ ಅನೇಕ ಕಾರಣಗಳಿಂದಾಗಿ ಅರಣ್ಯಪ್ರದೇಶ ದಿನೇ ದಿನೇ ಕ್ಷಿಣಿಸುತ್ತಿದೆ. ಅರಣ್ಯಪ್ರದೇಶವನ್ನು ವ್ಯವಸಾಯೋದ್ದೇಶಕ್ಕಾಗಿ ಬಳಸುತ್ತಿರುವುದು, ನೀರಾವರಿ ಮತ್ತು ವಿದ್ಯುಚ್ಫಕ್ತಿ ಉದ್ದೇಶಗಳಿಗಾಗಿ ಜಲಾಶಯಗಳನ್ನು ನಿರ್ಮಿಸುತ್ತಿರುವುದು, ನಿರ್ವಸಿತರಿಗೆ ಮರುವಸತಿ ಕಲ್ಪಿಸಲು ಕಾಡುಗಳನ್ನು ಕಡಿಯುವುದು ಅತಿಯಾಗಿ ಮೇಯಿಸುವುದು, ಕಾಡ್ಗಿಚ್ಚು, ಅತಿಕ್ರಮಣ ಚಟುವಟಿಕೆ- ಇವು ಅರಣ್ಯನಾಶಕ್ಕೆ ಮುಖ್ಯ ಕಾರಣಗಳು. ಕಳೆದ ಕೆಲವು ವರ್ಷಗಳಿಂದ ಅರಣ್ಯಾಭಿವೃದ್ಧಿಗೆ, ವನ್ಯಪ್ರಾಣಿ ಸಂರಕ್ಷಣೆಗೆ ಸಾಕಷ್ಟು ಗಮನ ಹರಿಸಲಾಗಿದೆ. ಅರಣ್ಯದ ಇಳುವರಿಯನ್ನು ಹೆಚ್ಚಿಸುವುದು, ಭೂ ಸವಕಳಿಯನ್ನು ತಪ್ಪಿಸುವುದು, ನಾಶಗೊಂಡ ಅರಣ್ಯಗಳಲ್ಲಿ ಪುನಃ ಮರಗಳನ್ನು ಬೆಳೆಸುವುದು, ಸಣ್ಣ ಪ್ರಮಾಣದ ಅರಣ್ಯೋತ್ಪನ್ನಗಳ ಅಭಿವೃದ್ಧಿ, ಅರಣ್ಯ ಸಂಪರ್ಕ ಮಾರ್ಗಗಳ ಅಭಿವೃದ್ಧಿ, ಮೃದು ಮರಗಳನ್ನು, ಬೆಂಕಿಕಡ್ಡಿ ಮರಗಳನ್ನು ಬೆಳೆಸುವುದು, ಪರರಾಷ್ಟ್ರಗಳಿಂದ ಬಂದ ಭಾರತೀಯ ನಿರಾಶ್ರಿತರ ಪುನರ್ ವಸತಿಗಾಗಿ ರಬ್ಬರ್ ತೋಟ ಬೆಳೆಸುವುದು, ಸೌದೆಗಾಗಿ ಮರಗಳನ್ನು ವೃದ್ಧಿಸುವುದು, ಕೋಕೋ ಗಿಡಗಳನ್ನು ಬೆಳೆಸುವುದು ಮುಂತಾದ ಅನೇಕ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ. ಈಗ ಪ್ರತ್ಯೇಕವಾದ ಸಾಮಾಜಿಕ ಅರಣ್ಯ ವಿಭಾಗವನ್ನೇ ಪ್ರಾರಂಭಿಸಲಾಗಿದೆ. ಕರ್ನಾಟಕ ಅರಣ್ಯ ಕೈಗಾರಿಕಾ ಮಂಡಳಿಯನ್ನು ಕೂಡಾ ಸ್ಥಾಪಿಸಲಾಗಿದೆ. ಅರಣ್ಯ ರಕ್ಷಣೆಗಾಗಿ ಬಂದೋಬಸ್ತ್‌ ನೋಡಿಕೊಳ್ಳಲು ಮತ್ತು ಅರಣ್ಯ ಉತ್ಪನ್ನಗಳನ್ನು ಸಾಗಿಸಲು ಅರಣ್ಯ ಇಲಾಖೆ ಅರಣ್ಯ ಪ್ರದೇಶದಲ್ಲಿ ೨೯೩೮ಕಿಮೀ ರಸ್ತೆ ನಿರ್ಮಾಣ ಮಾಡಿದೆ (೧೯೯೫).

ಅರಣ್ಯ ಉದ್ಯಮಗಳು ಬದಲಾಯಿಸಿ

ಕರ್ನಾಟಕದ ಅರಣ್ಯ ಪ್ರದೇಶ ವಿವಿಧ ಸಸ್ಯವರ್ಗಗಳ ತವರೂರು. ಶ್ರೀಗಂಧ, ಹೊನ್ನೆ, ನಂದಿ, ಮತ್ತಿ, ಹನಾಲು, ಕರಡಿ, ಸಾಗುವಾನಿ, ಬೀಟೆ, ಹೆತ್ತೇಗ, ತಡಸಲು, ಭೋಗಿ, ನೊಗ, ಬೂರುಗ, ಮಾಕಾಳಿ, ದೊಡ್ಡತೊಪ್ಪೆ, ಸಟ್ಟುಗ, ಬಿಲ್ವಾರ, ಗೊದ್ದ, ತಾರೆ, ದಿಂಡಿಗ, ಬೆಂಡೆ, ಜಂಬೆ, ನೇರಳೆ, ಬಲ್ಲಿ, ಹಲಸು, ಹೆಬ್ಬಲಸು, ಗುಳಮಾವು, ನಾಗ ಸಂಪಿಗೆ, ಕಿರಾಳ ಭೋಗಿ, ಬಿಳಿದೇವದಾರು, ಬೆನ್ನಾಟೆ, ಬಲಂಜಿ, ಹೊಳೆಗಾರ, ನೀಲಿ ಸಂಪಿಗೆ, ಹಾಲುಮಡ್ಡಿ, ಮದ್ದಾಲೆ, ಚುಂಗ, ಧೂಮ, ಸಾಲ್ಧೂಪ, ಕಾಯಿಧೂಪ, ಸುರಹೊನ್ನೆ, ಪಾಲಿ, ಕೊಟ್ಟಿ, ಮಾವು ಮುಂತಾದ ಪ್ರಮುಖ ವೃಕ್ಷಗಳು ಬೆಳೆಯುತ್ತವೆ. ಜೊತೆಗೆ ಬಿದಿರು, ವಾಟೆ ಮತ್ತು ಬೆತ್ತ ಅರಣ್ಯದಲ್ಲಿ ವಿಪುಲವಾಗಿವೆ. ಅರಣ್ಯ ವೈವಿಧ್ಯಮಯ ವಾಗಿರುವಂತೆ ಕರ್ನಾಟಕದ ಅರಣ್ಯ ಉದ್ಯಮಗಳೂ ವೈವಿಧ್ಯಪೂರ್ಣವಾಗಿವೆ.

ಅನಾದಿಕಾಲದಿಂದಲೂ ಮಾನವನ ಜೀವನ ಅರಣ್ಯದೊಡನೆ ಬೆರೆತುಹೋಗಿದೆ. ಆದಿಮಾನವ ದಿನಬಳಕೆಯ ಆಹಾರವಸ್ತುಗಳಾದ ಗಿಡಮೂಲಿಕೆ, ಹಣ್ಣು ಹಂಪಲು, ಮೊಟ್ಟೆ, ಮಾಂಸಗಳನ್ನು, ಮನೆಕಟ್ಟಲು ಬಳಸುವ ಸಾಮಗ್ರಿಯನ್ನೂ ಮೈ ಮುಚ್ಚುವ ಉಡುಪನ್ನೂ ಬೆಂಕಿಯನ್ನೂ ಆಯುಧ ಉಪಕರಣಗಳನ್ನೂ ಅರಣ್ಯದಿಂದಲೇ ಪಡೆಯುತ್ತಿದ್ದ. ಒಂದು ದೇಶದಲ್ಲಿ ಸೌದೆ ಮತ್ತು ಕೈಗಾರಿಕೆಗೆ ಉಪಯೋಗಿಸುತ್ತಿರುವ ಅರಣ್ಯ ಉತ್ಪನ್ನಗಳ ಬಳಕೆಯ ಮೇಲೆ ಅಲ್ಲಿನ ಕೈಗಾರಿಕಾ ಪ್ರಗತಿಯನ್ನು ನಿರ್ಧರಿಸಲಾಗುತ್ತದೆ. ಕೈಗಾರಿಕಾ ಪ್ರಗತಿಯುಳ್ಳ ದೇಶದಲ್ಲಿ ಅರಣ್ಯದ ಕಚ್ಚಾವಸ್ತುಗಳು ಕೈಗಾರಿಕೆಗಳಿಗೆ ಬಳಕೆಯಾಗುತ್ತವೆ. ಅಲ್ಪಭಾಗ ಮಾತ್ರ ಸೌದೆಗೆ ಉಪಯೋಗವಾಗುತ್ತದೆ. ಆದರೆ ನಮ್ಮಲ್ಲಿ ಕಾಡಿನ ಮರಗಳನ್ನು ಸೌದೆಗೆ ಹೆಚ್ಚು ಬಳಸುವುದು ಕಂಡುಬರುತ್ತಿದೆ ಗ್ರಾಮೀಣ ವಸತಿ ಇದಕ್ಕೆ ಮುಖ್ಯ ಕಾರಣ. ಈ ಮುಂದೆ ತಿಳಿಸಿರುವಂತೆ ಸಸ್ಯಗಳನ್ನು ವಿಶ್ವವ್ಯಾಪ್ತಿಯುಳ್ಳ ಕಚ್ಚಾವಸ್ತುಗಳನ್ನಾಗಿ ಪರಿಗಣಿಸಬಹುದು. ಏಕೆಂದರೆ ಅವನ್ನು ಮಣ್ಣು, ಲೋಹ, ಗಾಜು, ನೇಯ್ದ ವಸ್ತುಗಳ ಬದಲಾಗಿ ಬಳಸಬಹುದು.

ಕರ್ನಾಟಕದಲ್ಲಿ ವ್ಯವಸಾಯವೇ ಪ್ರಧಾನವಾದ ಕಸಬು. ವ್ಯವಸಾಯಕ್ಕೆ ಅರಣ್ಯದ ಅಗತ್ಯ ಬಹಳ ಇದೆ. ಹೆಚ್ಚು ಯಾಂತ್ರಿಕತೆ ಇಲ್ಲದ ಬೇಸಾಯಕ್ಕೆ ಅಗತ್ಯವಾದ ನೇಗಿಲು, ಕೊರಡು, ಕುಂಟೆ, ರೆಂಟೆ ಮುಂತಾದ ಉಪಕರಣಗಳನ್ನು ತಯಾರಿಸಲು ಮರದ ಅಗತ್ಯವಿದೆ. ಎಲೆಗೊಬ್ಬರವಂತೂ ವ್ಯವಸಾಯಕ್ಕೆ ಪೌಷ್ಟಿಕವೆಂದು ಪರಿಗಣಿಸಲಾಗುತ್ತದೆ. ಹಸುರೆಲೆಗಳನ್ನು ಬಳಸಿ ಕಾಂಪೋಸ್ಟ್‌ ಗೊಬ್ಬರವನ್ನೂ ತಯಾರಿಸಲಾಗುತ್ತದೆ. ದನದ ಮೇವು, ಮರದ ಸಕ್ಕರೆ, ಮಾದಕ ಪಾನೀಯ, ಶ್ರೀಗಂಧ, ನೀಲಗಿರಿ, ನಿಂಬೆಹುಲ್ಲಿನ ಎಣ್ಣೆ, ರೆಯಾನ್, ಪಾಲಿಫೈಬರ್, ಸೌದೆ, ಇದ್ದಿಲು, ಬೆಂಕಿಕಡ್ಡಿ, ವಿದ್ಯುಚ್ಫಕ್ತಿ, ಮನೆಗೆ ಮರಮುಟ್ಟು, ಪೀಠೋಪಕರಣ, ಪ್ಲೈವುಡ್ ಮತ್ತು ವಿನೀರ್, ಸ್ಲೀಪರ್ಗಳು, ರೈಲ್ವೆಬೋಗಿ, ರೈಲು ಹಾಗೂ ಬಸ್ಸಿನ ಚೌಕಟ್ಟು, ದೋಣಿ, ಹಡಗು ಮಾಡಲು, ಟೀ ಪೆಟ್ಟಿಗೆಗಳು, ಸಾಮಾನು ಸಾಗಣೆ ಪೆಟ್ಟಿಗೆಗಳು, ಕಾಗದ, ಪೆನ್ಸಿಲ್, ಚಿತ್ರೋದ್ಯಮದ ಕಾಗದ, ಪಾರದರ್ಶಕ ಅಂಟು ಮುಂತಾದವುಗಳಿಗೆಲ್ಲ ಅರಣ್ಯಗಳ ಕೊಡುಗೆ ಆಪಾರವಾದುದು. ಕಳೆದ ಎರಡು ಶತಮಾನಗಳಿಂದ ಕರ್ನಾಟಕದಲ್ಲಿ ಅರಣ್ಯ ಆಧಾರಿತವಾದ ಹಲವಾರು ಉದ್ಯಮಗಳು ಸ್ಥಾಪಿತವಾಗಿವೆ.

ಶ್ರೀಗಂಧದ ಉದ್ಯಮ ಬದಲಾಯಿಸಿ

ಶ್ರೀಗಂಧದ ಮರ ಕರ್ನಾಟಕಕ್ಕೆ ಪ್ರಕೃತಿದತ್ತ ವರ. ರಾಷ್ಟ್ರದ ಒಟ್ಟು ಉತ್ಪತ್ತಿಯ ಶೇ. ೮೦ ಭಾಗ ಕರ್ನಾಟಕದಲ್ಲಿಯೇ ದೊರೆಯುತ್ತದೆ. ಹೀಗಾಗಿ ಶ್ರೀಗಂಧದ ಬೀಡು ಎನ್ನುವ ಮಾತಿದೆ. ಶ್ರೀಗಂಧದ ತೈಲ ಅತಿ ಪರಿಮಳಯುಕ್ತ ಸುಗಂಧ ದ್ರವ್ಯಗಳಲ್ಲಿ ಒಂದು. ಇದು ಪ್ರಾಚೀನ ಕಾಲದಿಂದ ಇಂದಿನವರೆಗೂ ಪ್ರಪಂಚದಾದ್ಯಂತ ಜನಪ್ರಿಯವಾಗಿದೆ. ಮಧ್ಯಯುಗದಲ್ಲಿ ವರ್ತಕರು ಈ ಸುಗಂಧವನ್ನು ಪರ್ಷಿಯ, ಅರೇಬಿಯ, ಏಷ್ಯಮೈನರ್, ಈಜಿಪ್ಟ್‌, ಗ್ರೀಸ್ ಮತ್ತು ರೋಮ್ಗಳಿಗೆ ಸಾಗಿಸುತ್ತಿದ್ದುದರ ಬಗ್ಗೆ ಉಲ್ಲೇಖವಿದೆ.

ಕರ್ನಾಟಕದ ಶ್ರೀಗಂಧ ಸ್ಯಾಂಟಲಮ್ ಆಲ್ಬಮ್ ಪ್ರಭೇದಕ್ಕೆ ಸೇರುತ್ತದೆ. ಇದರಿಂದ ಗಂಧದೆಣ್ಣೆಯನ್ನು ತೆಗೆಯುತ್ತಾರೆ. ಆಸ್ಟ್ರೇಲಿಯದಲ್ಲಿ ಬೆಳೆಯುವ ಗಂಧದಮರ ಸ್ಯಾಂಟಲಮ್ ಸ್ಟೈಕೇಟಮ್ದಿಂದ ತೆಗೆಯುವ ತೈಲದೊಡನೆ ತೀವ್ರ ಪೈಪೋಟಿ ಇದೆಯಾದರೂ ಅದು ಕರ್ನಾಟಕದ ಎಣ್ಣೆಯಷ್ಟು ಉತ್ತಮ ದರ್ಜೆಯದಲ್ಲ. ಆದರೂ ಸುಧಾರಿತ ಭಟ್ಟಿ ಇಳಿಸುವ ವಿಧಾನ, ಸಂಯೋಜಿಸುವ ಮತ್ತು ಮಿಶ್ರಣಮಾಡುವ ವಿಧಾನ, ಉತ್ತಮ ದರ್ಜೆಯ ನಿರ್ವಹಣೆ ಮುಂತಾದವುಗಳಿಂದಾಗಿ ಆಸ್ಟ್ರೇಲಿಯದ ಗಂಧದೆಣ್ಣೆ ಕರ್ನಾಟಕದ ತೈಲದೊಡನೆ ಪೈಪೋಟಿ ನೆಡಸಲು ಸಾಧ್ಯವಾಗಿದೆ. ಇಂಡೋನೇಷ್ಯದಲ್ಲಿ ತಯಾರಿಸುವ ಗಂಧದೆಣ್ಣೆಯೂ ಸ್ವಲ್ಪಮಟ್ಟಿಗೆ ನಮ್ಮ ಶ್ರೀಗಂಧದೆಣ್ಣೆಯೊಂದಿಗೆ ಸ್ಪರ್ಧಿಸುತ್ತಿದೆ.

೧೯೧೨ರ ವರೆಗೂ ಕರ್ನಾಟಕದಿಂದ ಶ್ರೀಗಂಧದ ಚಕ್ಕೆ ಬೇರೆ ದೇಶಗಳಿಗೆ, ಅದರಲ್ಲೂ ಮುಖ್ಯವಾಗಿ ಜರ್ಮನಿಗೆ ರಫ್ತಾಗುತ್ತಿತ್ತು. ಅಲ್ಲಿ ಚಕ್ಕೆಯಿಂದ ತೈಲವನ್ನು ತೆಗೆದು ವಿವಿಧ ದೇಶಗಳಿಗೆ ಮಾರುತ್ತಿದ್ದರು. ಒಂದನೆಯ ಮಹಾಯುದ್ಧದ ಪ್ರಯುಕ್ತ ಇದರ ಮಾರಾಟ ನಿಂತುಹೋಯಿತು. ಆಗ ಮೈಸೂರಿನ ದಿವಾನರಾಗಿದ್ದ ಎಂ. ವಿಶ್ವೇಶ್ವರಯ್ಯನವರು ಮರದಿಂದ ಗಂಧದ ಎಣ್ಣೆಯನ್ನು ಹೊರತೆಗೆಯುವ ಯೋಜನೆಯನ್ನು ರೂಪಿಸಿ ೧೯೧೬ರಲ್ಲಿ ಬೆಂಗಳೂರಿನಲ್ಲಿ ಗಂಧದ ಎಣ್ಣೆಯ ಕಾರ್ಖಾನೆಯನ್ನು ಸ್ಥಾಪಿಸಿದರು. ೧೯೧೭ರಲ್ಲಿ ಈ ಕಾರ್ಖಾನೆಯನ್ನು ಮೈಸೂರಿಗೆ ಸ್ಥಳಾಂತರಿಸಲಾಯಿತು. ಮಲೆನಾಡು ಪ್ರದೇಶದಲ್ಲಿ ಮರದಿಂದ ಗಂಧವನ್ನು ಕೆತ್ತಿ ಸಾಗಿಸಿದ ಮೇಲೆ ಉಳಿದ ಚಿಲ್ವಾ ಗಂಧದ ಚಕ್ಕೆಯನ್ನು ವಿಕ್ರಯಿಸುವುದು ಸಮಸ್ಯೆಯಾಯಿತಾದ್ದರಿಂದ ಅದನ್ನು ಉಪಯೋಗಿಸಲು ಶಿವಮೊಗ್ಗದಲ್ಲಿ ಒಂದು ಪರಿವರ್ತನ ಕಾರ್ಖಾನೆಯನ್ನು ಪ್ರಾರಂಭಿಸಲಾಯಿತು. ಇದು ೧೯೬೩ರಲ್ಲಿ ಪೂರ್ಣ ಗಂಧದ ಎಣ್ಣೆ ಕಾರ್ಖಾನೆಯಾಗಿ ಪರಿವರ್ತಿತವಾಯಿತು. ವರ್ಷಂಪ್ರತಿ ೨೦೦೦ ಟನ್ ಶ್ರೀಗಂಧದ ಮರವನ್ನು ಇವೆರಡು ಕಾರ್ಖಾನೆಗಳು ಉಪಯೋಗಿಸುತ್ತಿವೆ.

ಗಂಧದ ಎಣ್ಣೆಗೆ ಯುರೋಪ್, ಅಮೆರಿಕ ಮತ್ತು ಅರಬ್ ದೇಶಗಳಿಂದ ಹೆಚ್ಚು ಬೇಡಿಕೆ ಉಂಟು. ಗಂಧದ ಎಣ್ಣೆಯನ್ನು ಸುಗಂಧ ದ್ರವ್ಯಗಳ ಹಾಗೂ ಮೈ ಸಾಬೂನು ತಯಾರಿಕೆಯಲ್ಲಿ ಬಳಸಲಾಗುತ್ತದೆ. ಗಂಧದ ಪರಿಮಳ ಮನಮೆಚ್ಚುವಂಥದು. ಜೊತೆಗೆ ಗಂಧದಿಂದ ಎಣ್ಣೆಯನ್ನು ತೆಗೆದ ಮೇಲೆ ಬರುವ ಗಂಧದ ಪುಡಿಯಿಂದ ಊದಿನ ಕಡ್ಡಿಯನ್ನು ತಯಾರುಮಾಡುತ್ತಾರೆ. ಈಗ ೮೦ ದೇಶಗಳಿಗೆ ಊದಿನಕಡ್ಡಿ ನಿರ್ಯಾತವಾಗುತ್ತಿದ್ದು ಇದರಿಂದ ಪ್ರತಿವರ್ಷ ಸು. ೧೦೦ ಕೋಟಿಗಿಂತಲೂ ಹೆಚ್ಚು ವಿದೇಶೀ ವಿನಿಮಯ ಬರುತ್ತಿದೆ. ಗಂಧದ ಮರವನ್ನು ಕೆತ್ತನೆ ಕೆಲಸಕ್ಕೂ ಉಪಯೋಗಿಸುತ್ತಾರೆ. ಮೈಸೂರು, ಬೆಂಗಳೂರು, ಸಾಗರ, ಸೊರಬ, ಕುಮಟ, ಕಾರವಾರಗಳಲ್ಲಿ ಗಂಧದ ಮರದಿಂದ ಕೆತ್ತನೆ ಕೆಲಸ ಮಾಡುವ ಗುಡಿಗಾರಿಕೆಯ ಕುಶಲ ಕೆಲಸಗಾರರರಿದ್ದಾರೆ. ಗಂಧದ ಮರಗಳನ್ನು ಕದ್ದು ಕಡಿದು ಸಾಗಿಸುವ ದಂಧೆಯಿಂದಾಗಿ ಅವುಗಳ ರಕ್ಷಣೆ ದೊಡ್ಡ ಸಮಸ್ಯೆಯಾಗಿದ್ದು ಅವುಗಳ ಲಭ್ಯತೆ ಕ್ಷೀಣಿಸಿದೆ.

ಕಾಗದದ ಕಾರ್ಖಾನೆಗಳು ಬದಲಾಯಿಸಿ

ಬೊಂಬಿನಿಂದ ಕಾಗದವನ್ನು ತಯಾರುಮಾಡುವ ಕಾರ್ಖಾನೆಗಳಾದ ಭದ್ರಾವತಿಯ ಮೈಸೂರು ಕಾಗದದ ಕಾರ್ಖಾನೆ, ದಾಂಡೇಲಿಯ ಪಶ್ಚಿಮ ಕರಾವಳಿಯ ಕಾಗದದ ಕಾರ್ಖಾನೆ (ವೆಸ್ಟ್‌ಕೋಸ್ಟ್‌ ಪೇಪರ್ ಮಿಲ್) ಇವು ಮುಖ್ಯವಾದವು. ಮೈಸೂರು ಕಾಗದದ ಕಾರ್ಖಾನೆ ವರ್ಷಂಪ್ರತಿ ಸು. ೩೦,೦೦೦ ಟನ್ ಕಾಗದವನ್ನು ತಯಾರಿಸುತ್ತಿತ್ತು. ದಾಂಡೇಲಿಯಲ್ಲಿರುವ ಪಶ್ಚಿಮ ಕರಾವಳಿಯ ಕಾಗದ ಕಾರ್ಖಾನೆ ೧೯೫೮ರಲ್ಲಿ ಕಾರ್ಯಾರಂಭ ಮಾಡಿತು. ಈ ಕಾರ್ಖಾನೆ ಪ್ರತಿವರ್ಷ ಸು. ೪೫,೦೦೦ ಟನ್ ಕಾಗದವನ್ನು ತಯಾರಿಸುತ್ತಿತ್ತು. ಇವುಗಳ ಜೊತೆಗೆ ಬೆಳಗೊಳದ ಮಂಡ್ಯ ನ್ಯಾಷನಲ್ ಕಾಗದ ಕಾರ್ಖಾನೆ ಮತ್ತು ಮುನಿರಾಬಾದ್ನ ತುಂಗಭದ್ರಾ ಕಾಗದ ಹಾಗೂ ಸ್ಟ್ರಾಬೋರ್ಡ್ ಕಾರ್ಖಾನೆಗಳು ಕಬ್ಬಿನ ಸಿಪ್ಪೆ ಹಾಗೂ ಹುಲ್ಲನ್ನು ಕಚ್ಚಾವಸ್ತುವನ್ನಾಗಿ ಉಪಯೋಗಿಸಿ ಕಾಗದ ತಯಾರಿಸುತ್ತಿದ್ದ ಕಾರ್ಖಾನೆಗಳು. ಈ ಪೈಕಿ ಮೈಸೂರಿನ ಬಳಿ ಬೆಳಗೊಳದ ಕಾರ್ಖಾನೆಯಲ್ಲಿ ಬೊಂಬನ್ನು ಕಚ್ಚಾವಸ್ತುವನ್ನಾಗಿ ಉಪಯೋಗಿಸಿ ಕಾಗದ ತಯಾರಿಕೆಯನ್ನು ಹೆಚ್ಚಿಸುವ ಪ್ರಯತ್ನ ನಡೆಯಿತಾದರೂ ಈ ಯೋಜನೆ ಕಾರ್ಯಗತವಾಗುವ ಮೊದಲೇ ಅನಿವಾರ್ಯವಾಗಿ ಈ ಕಾರ್ಖಾನೆಯನ್ನು ಮುಚ್ಚಲಾಯಿತು. ಇವುಗಳೊಂದಿಗೆ ಕಾರವಾರ ಹಾಗೂ ನಂಜನಗೂಡಿನಲ್ಲಿ ಖಾಸಗಿ ಸ್ವಾಮ್ಯದಲ್ಲಿರುವ ಕಾಗದದ ಕಾರ್ಖಾನೆಗಳೂ ಇವೆ. ಇಂದು ರಾಜ್ಯದಲ್ಲಿ ಒಟ್ಟು ೧೪ಕಕ್ಕೂ ಹೆಚ್ಚು ಕಾಗದದ ಕಾರ್ಖಾನೆಗಳಿವೆ.

ರಬ್ಬರ್ ಉದ್ಯಮ ಬದಲಾಯಿಸಿ

ರಬ್ಬರ್ ಉದ್ಯಮಕ್ಕೆ ಕೇರಳ ಹೆಚ್ಚು ಪ್ರಸಿದ್ಧಿಯಾಗಿದೆ. ಆದರೆ ೧೯೬೧ರಿಂದ ಈಚೆಗೆ ಕರ್ನಾಟಕದಲ್ಲಿ ಸಾವಿರಾರು ಹೆಕ್ಟೆರ್ ಅರಣ್ಯ ಪ್ರದೇಶದಲ್ಲಿ ರಬ್ಬರ್ ನೆಡುತೋಪುಗಳನ್ನು ಬೆಳೆಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ, ಬೆಳ್ತಂಗಡಿ, ಮೂಡುಬಿದರೆ ತಾಲ್ಲೂಕುಗಳಲ್ಲಿ ಹಾಗೂ ಕೊಡಗು ಜಿಲ್ಲೆಯ ಪಶ್ಚಿಮ ಇಳಿಜಾರು ಪ್ರದೇಶಗಳಲ್ಲಿ ಇಂಥ ನೆಡುತೋಪುಗಳಿವೆ. ಈಗ ವರ್ಷಕ್ಕೆ ಸು. ೨೦೦೦ ಟನ್ ರಬ್ಬರ್ ಉತ್ಪಾದನೆಯಾಗುತ್ತಿದೆ. ರಬ್ಬರ್ ನೆಡುತೋಪುಗಳ ಕಾರ್ಯಕ್ರಮದೊಂದಿಗೆ ಶ್ರೀಲಂಕಾದಿಂದ ಬಂದ ನಿರಾಶ್ರಿತರಿಗೆ ಪುನರ್ವಸತಿಕಲ್ಪಿಸುವ ಕಾರ್ಯಕ್ರಮವನ್ನು ಜೋಡಿಸಲಾಗಿದ್ದು, ಈ ಕಾರ್ಯಕ್ರಮದ ಅಡಿಯಲ್ಲಿ ಸು. ೧೦,೦೦೦ ಮಂದಿಗೆ ಪುನರ್ವಸತಿ ದೊರೆತಿದೆ. ರಬ್ಬರ್ ತಯಾರಿಕೆಯನ್ನು ಆಧರಿಸಿದ, ವಾಹನಗಳ ಚಕ್ರದ ಟ್ಯೂಬು ಹಾಗೂ ಟೈರುಗಳನ್ನೂ ತಯಾರಿಸುವ ಕಾರ್ಖಾನೆಗಳೂ ಈಗ ಕರ್ನಾಟಕದಲ್ಲಿ ಸ್ಥಾಪಿತವಾಗಿವೆ. ಈಗ ಪ್ರತ್ಯೇಕವಾದ ರಬ್ಬರ್ ಉದ್ಯಮ ನಿಗಮವನ್ನೂ ಕೂಡಾ ಪ್ರಾರಂಭಿಸಲಾಗಿದೆ. ಸ್ಲೇಟು ಹಾಗೂ ಫೋಟೋ ಚೌಕಟ್ಟಿನ ಉದ್ಯಮಗಳು: ಚಿಕ್ಕಮಗಳೂರು, ಸಾಗರ, ಕುಶಾಲನಗರ, ಹುಬ್ಬಳ್ಳಿ ಮುಂತಾದ ಕಡೆಗಳಲ್ಲಿ ಸ್ಲೇಟು ಹಾಗೂ ಫೋಟೋ ಚೌಕಟ್ಟಿನ ಅನೇಕ ಉದ್ಯಮಗಳಿವೆ. ಈ ಉದ್ಯಮಗಳು ಸಿಲ್ವರ್ ಓಕ್ ಮತ್ತು ಬೆನ್ನಾಟೆ ಮರಗಳನ್ನು ಉಪಯೋಗಿಸಿಕೊಳ್ಳುತ್ತವೆ. ಜೊತೆಗೆ ಆಂಧ್ರಪ್ರದೇಶದಲ್ಲಿರುವ ಕೆಲವು ಕಾರ್ಖಾನೆಗಳ ಆವಶ್ಯಕತೆಯ ಅರ್ಧಕ್ಕಿಂತ ಹೆಚ್ಚಿನ ಭಾಗವನ್ನು ಕರ್ನಾಟಕದ ಅರಣ್ಯಗಳು ಪೂರೈಸುತ್ತಿವೆ.

ಮರ ಕುಯ್ಯುವ ಕಾರ್ಖಾನೆಗಳು ಬದಲಾಯಿಸಿ

ಕರ್ನಾಟಕದಲ್ಲಿ ಸರ್ಕಾರದ ಮತ್ತು ಖಾಸಗಿ ಆಡಳಿತಕ್ಕೊಳಪಟ್ಟಿರುವ ೫೦೦ಕ್ಕೂ ಹೆಚ್ಚು ಮರ ಕೊಯ್ಯುವ ಕಾರ್ಖಾನೆಗಳಿದ್ದು ಕರ್ನಾಟಕದ ಪ್ರಮುಖ ಉದ್ಯಮವರ್ಗಗಳಲ್ಲಿ ಒಂದು ಎನಿಸಿಕೊಂಡಿದೆ.

ಕರಕುಶಲ ವಸ್ತುಗಳು ಬದಲಾಯಿಸಿ

ಕರ್ನಾಟಕ ಅನಾದಿ ಕಾಲದಿಂದಲೂ ತನ್ನ ಕರಕುಶಲ ಕಲೆಗಳಿಗೆ ಪ್ರಸಿದ್ಧಿಯಾಗಿದೆ. ಕರ್ನಾಟಕದಾದ್ಯಂತ ಕುಶಲ ಕಲೆಗಾರರಿದ್ದಾರೆ. ಮೈಸೂರು, ಚನ್ನಪಟ್ಟಣ, ಬೆಂಗಳೂರು, ಶಿವಮೊಗ್ಗ, ಸಾಗರ, ಸೊರಬ, ಸಿರ್ಸಿ, ಹೊನ್ನಾವರ, ಕುಮಟದ ಕುಶಲಕಲೆಗಾರರು ವಿಶೇಷ ಮನ್ನಣೆಯನ್ನು ಪಡೆದಿದ್ದಾರೆ. ಕೆತ್ತನೆಯ ಕೆಲಸಕ್ಕೆ ಶ್ರೀಗಂಧ, ಆನೆಯ ದಂತ, ಬೀಟೆ, ಹೆತ್ತೇಗ, ಕೂಳ, ಹಲಸು, ಕರಿಮರ ಮುಂತಾದ ಹಲವಾರು ವಸ್ತುಗಳು ಬಳಕೆಯಾಗುತ್ತವೆ.

ಪ್ರಾಣಿ ಪಕ್ಷಿಗಳ ಚರ್ಮ ಪ್ರಸಾದನ ಉದ್ಯಮಗಳು ಬದಲಾಯಿಸಿ

ಕರ್ನಾಟಕದ ಅರಣ್ಯಗಳು ವನ್ಯಪ್ರಾಣಿಗಳ ತವರುಗಳಾಗಿವೆ. ಇತ್ತೀಚಿನವರೆಗೂ ಬೇಟೆಗಾರರಿಗೆ ಅವಕಾಶವಿದ್ದುದರಿಂದ ಬೇಟೆಯಾದ ಪ್ರಾಣಿಪಕ್ಷಿಗಳ ಚರ್ಮವನ್ನು ಹದಗೊಳಿಸುವ ಹಾಗೂ ಆ ಪ್ರಾಣಿಗಳ ಸ್ಥಿರ ಆಕಾರ ನೀಡುವ ಉದ್ಯಮ ಬಹಳ ಹೆಸರುವಾಸಿಯಾಗಿತ್ತು. ಜೊತೆಗೆ ಪಾದರಕ್ಷೆಗಳು ಹಾಗೂ ಇನ್ನಿತರ ಚರ್ಮದ ವಸ್ತುಗಳನ್ನು ತಯಾರಿಸುವ ಉದ್ಯಮವೂ ಸಾಗುತ್ತಿತ್ತು. ಈಗ ಬೇಟೆಯಾಡುವುದು ನಿಷಿದ್ಧವಾದ್ದರಿಂದ ಇಂಥ ಉದ್ಯಮಗಳು ಕಡಿಮೆಯಾಗಿವೆ. ಚರ್ಮದ ಬದಲು ಪ್ಲಾಸ್ಟಿಕ್ ಅಥವಾ ಕೃತಕವಾಗಿ ತಯಾರಿಸಿದ ವಸ್ತುಗಳನ್ನು ಈ ಉದ್ಯಮಗಳಿಗೆ ಬಳಸಲಾಗುತ್ತಿದೆ.

ಪೆಟ್ಟಿಗೆ ಉದ್ಯಮಗಳು ಬದಲಾಯಿಸಿ

ಬೆಂಗಳೂರು, ಮೈಸೂರು, ಹಾಸನ, ಮಂಡ್ಯ, ಬೆಳಗಾಂವಿ, ಸುಳ್ಯ, ಚಾಮರಾಜನಗರ ಮುಂತಾದೆಡೆಗಳಲ್ಲಿ ಮರದ ಪೆಟ್ಟಿಗೆ ತಯಾರಿಕೆಯಲ್ಲಿ ನಿರತವಾದ ಅನೇಕ ಕಾರ್ಖಾನೆಗಳಿವೆ. ಪ್ಲೈವುಡ್ ಮತ್ತು ವಿನೀರ್ ಉದ್ಯಮಗಳು: ಧಾರವಾಡ, ದಾಂಡೇಲಿ, ತಾಳಗುಪ್ಪ, ಸಿದ್ಧಾಪುರ, ಸುಬ್ರಹ್ಮಣ್ಯ, ಮೈಸೂರು, ಹುಣಸೂರು, ಬೆಂಗಳೂರು, ಬಂಟ್ವಾಳ ಮತ್ತು ಹುಬ್ಬಳ್ಳಿಗಳಲ್ಲಿ ಪ್ಲೈವುಡ್ ಮತ್ತು ವಿನೀರ್ ಕಾರ್ಖಾನೆಗಳಿವೆ. ಬಲಂಜಿ, ಅರಶಿನ, ತೇಗ, ಬಿಲ್ವಾರ, ಮದ್ದಾಲೆ, ಕದಂಬ, ಹೆಬ್ಬಲಸು, ಹಲಸು, ಸುರಹೊನ್ನೆ, ಕಾಯಿಧೂಪ, ಗಂಧಗರಿಗೆ, ಬೀಟೆ, ಧೂಮ, ಬಿಳಿದೇವದಾರು, ಪಟ್ಟಗ, ನೇರಳೆ, ಕೂರಿ, ಗೊದ್ದ, ಸಿಲ್ವರ್ ಓಕ್, ದೊಡ್ಡತೊಪ್ಪಾ, ಬೆಂಡೆ, ನಂದಿ, ಬೆನ್ನಾಟೆ, ಗುಳಮಾವು, ಸಂಪಿಗೆ, ಪಾಲಿ ಬೂರುಗ, ಸಾಗುವಾನಿ, ಮತ್ತಿ ಜಾತಿಯ ಮರಗಳು, ಸಾಲುಧೂಪ ಮುಂತಾದ ವೃಕ್ಷಗಳು ಪ್ಲೈವುಡ್ ಮಾಡಲು ಬಳಕೆಯಾಗುತ್ತವೆ.

ಕರ್ನಾಟಕದ ಪ್ಲೈವುಡ್ಡಿಗೆ ಇರಾನ್, ಇರಾಕ್, ಸೌದಿ, ಕುವೈತ್, ಅರೇಬಿಯ, ಶ್ರೀಲಂಕಾ, ಸಿಂಗಪುರ, ಇಂಗ್ಲೆಂಡ್, ಕೆನಡ, ಅಮೆರಿಕ, ಜಪಾನ್, ಜರ್ಮನಿ ಮುಂತಾದ ದೇಶಗಳಿಂದ ಅಧಿಕ ಬೇಡಿಕೆಯಿದೆ. ಈ ಕಾರ್ಖಾನೆ ಅತ್ಯಂತ ಹೆಚ್ಚಿನ ಜನರಿಗೆ ಉದ್ಯೋಗವನ್ನು ಕಲ್ಪಿಸುವ ಮತ್ತು ವಿದೇಶೀ ವಿನಿಮಯವನ್ನು ಒದಗಿಸುವ ಒಂದು ಉದ್ಯಮವಾಗಿದೆ.

ಬೆಂಕಿಕಡ್ಡಿ ಕಾರ್ಖಾನೆಗಳು ಬದಲಾಯಿಸಿ

ಇವು ಮುಖ್ಯವಾಗಿ ಮೈಸೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಕೇಂದ್ರಿಕೃತವಾಗಿವೆ. ಈ ಎರಡು ಜಿಲ್ಲೆಗಳಲ್ಲಿ ೨೦ ಕಾರ್ಖಾನೆಗಳಿವೆ. ಅಲ್ಲದೆ ಧಾರವಾಡ, ಚಾಮರಾಜನಗರ, ಸಾಗರ, ಪುತ್ತೂರುಗಳಲ್ಲಿಯೂ ಸಣ್ಣ ಸಣ್ಣ ಕಾರ್ಖಾನೆಗಳಿವೆ. ಆದರೆ ಇವು ಯಾವುವೂ ಪೂರ್ಣ ಪ್ರಮಾಣದ ಕಾರ್ಖಾನೆಗಳಲ್ಲ. ಆದ್ದರಿಂದ ಈ ಕಾರ್ಖಾನೆಗಳು ಕಡ್ಡಿಗಳನ್ನು ಶಿವಕಾಶಿಯಲ್ಲಿರುವ ಕಾರ್ಖಾನೆಗಳಿಗೂ ವಿಮ್ಕೋ ಕಂಪನಿಗೂ ಮಾರುತ್ತವೆ. ವಿಮ್ಕೋ ಕಂಪನಿ ಚೆನ್ನೈ, ಅಂಬರನಾಥ, ಚೂಟರ್ ಬುಕ್ಗಂಜ್, ಕಲ್ಲಿಕೋಟೆ ಹಾಗೂ ಪೋರ್ಟ್ಬ್ಲೆರ್ಗಳಲ್ಲಿರುವ ತನ್ನ ಕಾರ್ಖಾನೆಗಳಿಗೆ ಬೆಂಕಿಕಡ್ಡಿಗಳನ್ನು ಕಳುಹಿಸಿ ಪೊಟ್ಟಣಗಳನ್ನು ತಯಾರಿಸುತ್ತದೆ. ಶಿವಮೊಗ್ಗದಲ್ಲಿ ಬೆಂಕಿ ಪೊಟ್ಟಣಗಳನ್ನು ತಯಾರಿಸುವ ಕಾರ್ಖಾನೆ ಇದೆ. ಇತ್ತೀಚೆಗೆ ಕೆಲವು ಅದ್ದುವ ಕಾರ್ಖಾನೆಗಳು ಪ್ರಾರಂಭವಾಗಿವೆ. ಮರದ ಕಡ್ಡಿಯ ಬದಲು ಎಣ್ಣೆ ಕಾಗದದ ಕಡ್ಡಿಗಳನ್ನು ತಯಾರಿಸಲಾಗುತ್ತದೆ.

ಹರಿಹರ ಪಾಲಿಫೈಬರ್ ಕಾರ್ಖಾನೆ ಬದಲಾಯಿಸಿ

ಇದು ೧೯೭೦ರಲ್ಲಿ ಕಾರ್ಯಾರಂಭ ಮಾಡಿತು. ಈ ಕಾರ್ಖಾನೆಗೆ ದಿನವಹಿ ೧೨೦೦ ಟನ್ನು ನೀಲಗಿರಿ ಮರ ಕಚ್ಚಾವಸ್ತುವಾಗಿ ಬೇಕಾಗುತ್ತದೆ. ಈ ಕಾರ್ಖಾನೆ ಸಾವಿರಾರು ಮಂದಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿಕೊಟ್ಟಿದೆಯಲ್ಲದೆ ಪರೋಕ್ಷವಾಗಿ ೧೦,೦೦೦ ಮಂದಿಗೆ ಉದ್ಯೋಗ ದೊರಕುವಂತೆ ಮಾಡಿದೆ. ಇದರೊಂದಿಗೆ ಕೇರಳದ ಮಾವೂರಿನಲ್ಲಿರುವ ಗ್ವಾಲಿಯರ್ ರೆಯಾನ್ ಕಾರ್ಖಾನೆಗೆ ಇತ್ತೀಚಿನವರೆಗೂ ಕರ್ನಾಟಕದ ಅರಣ್ಯಗಳಿಂದ ಬೊಂಬು ಮತ್ತು ಸೌದೆ ಸರಬರಾಜಾಗುತ್ತಿದ್ದವು.

ಮರ ಸಂರಕ್ಷಣೆ ಕಾರ್ಯಗಾರ ಬದಲಾಯಿಸಿ

ಎರಡನೆಯ ಮಹಾಯುದ್ಧದ ಅನಂತರ ಸಾಗುವಾನಿ ಮರ ನಶಿಸುತ್ತ ಬಂದಿದ್ದರಿಂದ ಕೆಳದರ್ಜೆಯ ಜಾತಿಯ ಮರಗಳನ್ನು ಸಾಗುವಾನಿ ಮರದ ಬದಲು ಉಪಯೋಗಿಸುವ ಸಾಧ್ಯತೆಯನ್ನು ಕುರಿತು ಅಧ್ಯಯನ ನಡೆಸಲಾಗಿದೆ. ರಕ್ಷಕ ರಾಸಾಯನಿಕ ಪದಾರ್ಥವನ್ನು ಉಪಯೋಗಿಸಿ ಮರಗಳನ್ನು ಅಧಿಕ ಕಾಲಾವಧಿಯವರೆಗೂ ಉಪಯೋಗಕ್ಕೆ ಬರುವಂತೆ ಮಾಡುವ ತಂತ್ರವನ್ನು ಕಂಡುಹಿಡಿಯಲಾಗಿದೆ. ಈಗ ಸರ್ಕಾರದ ಅಧೀನದಲ್ಲಿ ಮಂಗಳೂರು ಮತ್ತು ಶಿವಮೊಗ್ಗದಲ್ಲಿ ಮರ ಸಂರಕ್ಷಕ ಕಾರ್ಯಾಗಾರಗಳಿವೆ. ಮುಖ್ಯವಾಗಿ ವಿದ್ಯುಚ್ಫಕ್ತಿ ಕಂಬಗಳಿಗೆ ಹಾಗೂ ರೈಲ್ವೆ ಹಳಿಗಳ ಕೆಳಗೆ ಉಪಯೋಗಿಸುವ ಅಡಿಮರಗಳನ್ನು ಇಲ್ಲಿ ಸಂಸ್ಕರಿಸಲಾಗುವುದು. ಖಾಸಗಿ ಆಡಳಿತಕ್ಕೊಳಪಟ್ಟ ಇನ್ನೊಂದು ಕಾರ್ಯಾಗಾರ ಹುಬ್ಬಳ್ಳಿಯಲ್ಲಿದೆ. ಇತ್ತೀಚೆಗೆ ವಿದ್ಯುತ್ ಕಂಬಗಳಿಗೆ ಹಾಗೂ ರೈಲ್ವೆ ಹಳಿಗಳ ಅಡಿಪಟ್ಟಿಗಳಿಗೆ ಮರದ ಬದಲು ಕಾಂಕ್ರೀಟ್ ಕಂಬಗಳನ್ನು ಬಳಸುವುದರ ಮೂಲಕ ಮರಗಳನ್ನು ಕಡಿದು ಉಪಯೋಗಿಸುವುದನ್ನು ಕಡಿಮೆ ಮಾಡಲಾಗುತ್ತಿದೆ. ಕರ್ನಾಟಕದ ಕಾಡುಗಳಲ್ಲಿ ನಾಟಾಕ್ಕೆ ಉಪಯುಕ್ತವಾದ ಮರಗಳ ಪ್ರಮಾಣ ತುಂಬಾ ಕ್ಷೀಣಿಸಿದ್ದರಿಂದ ಆಗ್ನೇಯ ಏಷ್ಯದ ರಾಷ್ಟ್ರಗಳಿಂದ ಮತ್ತು ಆಫ್ರಿಕದಿಂದ ಮರದ ದಿಮ್ಮಿಗಳನ್ನು ಆಮದು ಮಾಡಿಕೊಳ್ಳುವುದು ಹೆಚ್ಚಿದೆ.

ಪೀಠೋಪಕರಣಗಳ ಉದ್ಯಮ ಬದಲಾಯಿಸಿ

ಈ ಉದ್ಯಮಕ್ಕೆ ಬೆತ್ತ, ಮರ ಮತ್ತು ಪ್ಲೈವುಡ್ಗಳನ್ನು ಉಪಯೋಗಿಸುತ್ತಾರೆ. ಕೊಡಗಿನ ಮೂರ್ಕಲ್ ಮತ್ತು ಶಿವಮೊಗ್ಗದಲ್ಲಿ ಸರ್ಕಾರದ ಅಧೀನಕ್ಕೊಳಪಟ್ಟ ಪೀಠೋಪಕರಣ ತಯಾರಿಕೆಯ ಎರಡು ಘಟಕಗಳಿವೆ. ಇವುಗಳ ಜೊತೆಗೆ ಖಾಸಗಿ ಕ್ಷೇತ್ರದಲ್ಲಿ ಸಾವಿರಾರು ಘಟಕಗಳು ಕೆಲಸಮಾಡುತ್ತಿವೆ. ಇದಲ್ಲದೆ ವಿವಿಧ ಜಿಲ್ಲೆಗಳಲ್ಲಿರುವ ಬಂದೀಖಾನೆಗಳಲ್ಲಿ ಕೂಡಾ ಪೀಠೋಪಕರಣಗಳ ತಯಾರಿಕೆಯ ಕೆಲಸ ನಡೆಯುತ್ತದೆ.

ಚಿಪ್ ಬೋರ್ಡ್ ಉದ್ಯಮ ಬದಲಾಯಿಸಿ

ಯಾವ ಕೈಗಾರಿಕೆಗಳಿಗೂ ಬಾರದ ವಿವಿಧ ಜಾತಿಯ ಸಣ್ಣಮರದ ತುಂಡುಗಳಿಂದ ಚಿಪ್ ಬೋರ್ಡ್ನ್ನು ತಯಾರಿಸಬಹುದು. ಅರಣ್ಯ ಉದ್ಯಮದಲ್ಲಿ ಇದೊಂದು ಬಹುಮುಖ್ಯ ಪ್ರಗತಿಪರ ಹೆಜ್ಜೆ. ಚಿಪ್ ಬೋರ್ಡ್ಗಳನ್ನು ಶಕ್ತಿ ಪ್ರಾಧನ್ಯವಿಲ್ಲದ ಭಾಗಗಳಲ್ಲಿ ಹಲಗೆಗಳ ಬದಲಾಗಿ ಉಪಯೋಗಿಸಬಹುದು.

ಕರ್ನಾಠಕದಲ್ಲಿ ಅರಣ್ಯ ಅತಿಕ್ರಮಣ ಬದಲಾಯಿಸಿ

  • 8 Jul, 2017;
  • ವೈ.ಗ. ಜಗದೀಶ್‌;
  • ರಾಜ್ಯದಲ್ಲಿ ಎರಡು ದಶಕಗಳ ಅವಧಿಯಲ್ಲಿ ಅರಣ್ಯ ಅತಿಕ್ರಮಣ ನಾಲ್ಕು ಪಟ್ಟು ಹೆಚ್ಚಾಗಿದೆ ಎಂಬಂತಹ ಆತಂಕಕಾರಿ ಅಂಶ ಮಹಾಲೇಖಪಾಲರ (ಸಿಎಜಿ) ವರದಿಯಿಂದ ಬಹಿರಂಗವಾಗಿದೆ. ರಾಷ್ಟ್ರೀಯ ಅರಣ್ಯ ನೀತಿಯ ಪ್ರಕಾರ ದೇಶದ ಭೂಭಾಗದಲ್ಲಿ ಶೇ 33ರಷ್ಟು ಅರಣ್ಯ ಇರಬೇಕು. ಆದರೆ ನಮ್ಮ ರಾಜ್ಯದಲ್ಲಿ ಇದು ಶೇ 19ರ ಆಸುಪಾಸಿನಲ್ಲಿದೆ. ಅರಣ್ಯ ಒತ್ತುವರಿ ಆದಂತೆ ಮಾನವ – ವನ್ಯಪ್ರಾಣಿ ಸಂಘರ್ಷ ಹೆಚ್ಚುತ್ತಿದೆ.
  • ಸಹ್ಯಾದ್ರಿ, ನೀಲಗಿರಿ ಪರ್ವತಶ್ರೇಣಿಯಲ್ಲಿ ಕಾಡುನಾಶವಾಗಿದ್ದರಿಂದ ಪ್ರಾಣಿಗಳು ಮತ್ತು ಮಾನವ ಸಂಘರ್ಷ ಹೆಚ್ಚಾಗಿದೆ. ಆನೆ ಕಾರಿಡಾರ್‌ಗಳು ಒತ್ತುವರಿಯಾಗಿದ್ದರಿಂದಾಗಿ ಸಾಯುವವರ ಸಂಖ್ಯೆ ಹೆಚ್ಚಾಗಿದೆ. ಕೊಡಗಿನಲ್ಲಿ ಕಳೆದ ವರ್ಷ ಆನೆದಾಳಿಯಿಂದ ಐವರು ಮೃತಪಟ್ಟಿದ್ದಾರೆ. ಆನೆ, ಹುಲಿ, ಚಿರತೆಗಳು ಜನವಸತಿ ಪ್ರದೇಶಕ್ಕೆ ನುಗ್ಗಿ ಜನರನ್ನು ಆತಂಕಕ್ಕೆ ಈಡು ಮಾಡುವ ಪ್ರಕರಣ ವರದಿಯಾಗುತ್ತಲೇ ಇವೆ.

ಮಾನವ ಮತ್ತು ವನ್ಯಜೀವಿ ಸಂಘರ್ಷ ಬದಲಾಯಿಸಿ

  • ‘2011–2016ರ ಅವಧಿಯಲ್ಲಿ 26 ಹುಲಿಗಳು ದೇಶದಲ್ಲಿ ಸಾವು ಕಂಡಿದ್ದು, ಕರ್ನಾಟಕದಲ್ಲಿ 9 ಹುಲಿಗಳು ಸತ್ತಿವೆ. ಕುದುರೆಮುಖ ವನ್ಯಜೀವಿ ವಿಭಾಗದಲ್ಲಿ 45 ದಿನ ನಡೆದ ಸಮೀಕ್ಷೆಯಲ್ಲಿ 1,338 ಪ್ರಾಣಿಗಳು ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿವೆ’ ಎಂದು ಮಹಾಲೇಖಪಾಲರ ವರದಿ ಉಲ್ಲೇಖಿಸಿದೆ.
  • ಅರಣ್ಯ ಇಲಾಖೆಯ ಅಧಿಕೃತ ದಾಖಲೆ ಪ್ರಕಾರ ರಾಜ್ಯದಲ್ಲಿ ಒಟ್ಟು 43,356 ಚದರ ಕಿ.ಮೀ ವಿಸ್ತೀರ್ಣದಲ್ಲಿ ಅರಣ್ಯ ಪ್ರದೇಶ ಹರಡಿಕೊಂಡಿದೆ. ಅಂದರೆ ಇದು ಒಟ್ಟು ಭೌಗೋಳಿಕ ಪ್ರದೇಶದ ಶೇ 22ರಷ್ಟಿದೆ. ಆದರೆ, 2015ರಲ್ಲಿ ನಡೆದ ಭಾರತ ಅರಣ್ಯ ಸಮೀಕ್ಷೆ ಪ್ರಕಾರ ಈ ಪ್ರಮಾಣ ಶೇ 19.96ಕ್ಕೆ ಕುಸಿದಿದೆ. ಅಂದರೆ, 38,284 ಚದರ ಕಿ.ಮೀಯಷ್ಟು ಮಾತ್ರ ಉಳಿದಿದೆ.
  • ‘2001ರಿಂದ 2015ರ ಅವಧಿಯಲ್ಲಿ ದಟ್ಟ ಅರಣ್ಯ ಪ್ರದೇಶವೂ ಗಣನೀಯ ಪ್ರಮಾಣದಲ್ಲಿ ಕರಗಿದೆ. ಅರಣ್ಯದ ಶೋಷಣೆ ದಿನೇದಿನೇ ಹೆಚ್ಚುತ್ತಲೇ ಇದೆ’ ಎಂದು 2016–17ರಲ್ಲಿ ಕರ್ನಾಟಕ ಸರ್ಕಾರ ಪ್ರಕಟಿಸಿದ ‘ಕರ್ನಾಟಕ ಆರ್ಥಿಕ ಸಮೀಕ್ಷೆ’ ಆತಂಕ ವ್ಯಕ್ತಪಡಿಸಿದೆ.
  • ‘2001ರಲ್ಲಿ 26,156 ಚದರ ಕಿ.ಮೀ ದಟ್ಟ ಅರಣ್ಯ ಇತ್ತು. 2015ರ ಹೊತ್ತಿಗೆ ಇದು 21,844 ಚದರ ಕಿ.ಮೀಗೆ ಇಳಿಕೆಯಾಗಿದೆ’ ಎಂದು ಸಮೀಕ್ಷೆ ವಿವರಿಸಿದ್ದು, ಅರಣ್ಯದ ಮೇಲೆ ಮಾನವನ ಆಕ್ರಮಣಕ್ಕೆ ಇದು ಸಾಕ್ಷಿಯಾಗಿದೆ.

ವತ್ತುವರಿ ಜಿಲ್ಲಾವಾರು ಅಂಕಿಅಂಶ ಬದಲಾಯಿಸಿ

(ಮುಂದುವರಿಯುವುದು) [೧]

ಉಪಸಂಹಾರ ಬದಲಾಯಿಸಿ

೧೯೭೩ರಲ್ಲಿ ಕರ್ನಾಟಕ ಸರ್ಕಾರ ಅರಣ್ಯ ಕೈಗಾರಿಕಾ ನಿಗಮವನ್ನು ರಚಿಸಿತು. ನಿರ್ದೇಶಕರೊಬ್ಬರ ನೇತೃತ್ವದಲ್ಲಿ ಈ ನಿಗಮ ಅರಣ್ಯೋತ್ಪನ್ನಗಳನ್ನು ಅವಲಂಬಿಸಿದ ಉದ್ಯಮಗಳ ಉಸ್ತುವಾರಿ ನಡೆಸುತ್ತದೆ. ಈ ನಿಗಮ ಉತ್ತರ ಕನ್ನಡದಲ್ಲಿ ಕಾಗದದ ಕಾರ್ಖಾನೆ, ಧಾರವಾಡ ಮತ್ತು ದಕ್ಷಿಣ ಕನ್ನಡದಲ್ಲಿ ವಿನೀರ್ ಉದ್ಯಮ, ಅನೇಕ ಜಿಲ್ಲೆಗಳಲ್ಲಿ ಹುಲ್ಲಿನ ಪೆಲ್ಲಟೈಸೇಶನ್ ಉದ್ಯಮ, ಶಿವಮೊಗ್ಗದಲ್ಲಿ ಬೆಂಕಿಕಡ್ಡಿ ಕಾರ್ಖಾನೆಗಳನ್ನು ಸ್ಥಾಪಿಸಿದೆ. ಮೈಸೂರಿನಲ್ಲಿರುವ ಖಾಸಗಿ ಸ್ವಾಮ್ಯದ ರಬ್ಬರ್ ಚಕ್ರದ ಉದ್ಯಮಗಳ ಮೇಲುಸ್ತುವಾರಿಯನ್ನೂ ಮಾಡುತ್ತಿದೆ. ೧೯೭೧ರಲ್ಲಿ ಸರ್ಕಾರದಿಂದ ಸ್ಥಾಪಿಸಲ್ಪಟ್ಟ ಕರ್ನಾಟಕದ ಅರಣ್ಯ ಅಭಿವೃದ್ಧಿ ನಿಗಮ ರಾಜ್ಯದಲ್ಲಿ ವಿವಿಧ ಪ್ರಕಾರದ ನೆಡುತೋಪುಗಳನ್ನು ಬೆಳೆಸಿ ಅರಣ್ಯಪ್ರದೇಶವನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದೆ. ಗೇರು ನೆಡುತೋಪುಗಳನ್ನು ಬೆಳೆಸಲು ೧೯೭೮ರಲ್ಲಿ ಗೇರು ಅಭಿವೃದ್ಧಿ ನಿಗಮ ರಚಿತವಾಗಿದೆ. ಇದಲ್ಲದೆ ಅರಣ್ಯ ಪ್ರವಾಸಿ ವಸತಿ ಗೃಹಗಳು ಮತ್ತು ಪ್ರವಾಸಿ ತಾಣಗಳ ನಿಗಮವೂ ಇದೆ. ಇದಕ್ಕೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳೇ ವ್ಯವಸ್ಥಾಪಕ ನಿರ್ದೇಶಕರು. ಇಷ್ಟೆಲ್ಲ ಬೃಹತ್ ವ್ಯವಸ್ಥೆಯೊಂದಿಗೆ ಅರಣ್ಯವನ್ನು ಉಳಿಸಿ, ಬೆಳೆಸಿ, ಬಳಸಿಕೊಳ್ಳುವ ಏರ್ಪಾಡು ನಡೆದಿದೆ. ಆದರೆ ಅರಣ್ಯ ನೋಡುನೋಡುತ್ತಲೇ ಕ್ಷೀಣಿಸುತ್ತಿರುವುದು ಮತ್ತು ಅದರಲ್ಲಿನ ಬೆಲೆಬಾಳುವ ಮರಗಳು ಕಣ್ಮರೆಯಾಗುತ್ತಿರುವುದು ವ್ಯವಸ್ಥೆಯಲ್ಲಿನ ದೌರ್ಬಲ್ಯಕ್ಕೆ ಸಾಕ್ಷಿಯಾಗಿದೆ. ಇದರಿಂದ ಪಾರಾಗುವ ಅಗತ್ಯವಿದೆ.

ಉಲ್ಲೇಖ ಬದಲಾಯಿಸಿ

  1. "ಕಾಡು ಒತ್ತು'ವರಿ': ತೆರವಿಗೆ ನಿರಾಸಕ್ತಿ;ವೈ.ಗ. ಜಗದೀಶ್‌;8 Jul, 2017". Archived from the original on 2017-07-11. Retrieved 2017-07-08.