ಕರಾಡ ಪರಂಪರೆ :

ಕರ್ಹಾಡ (ಕರಾಡ)
ಜನಸಂಖ್ಯಾ ಬಾಹುಳ್ಯದ ಪ್ರದೇಶಗಳು
ಪಾಥಮಿಕ ವಸತಿ ಪ್ರದೇಶಗಳು:

ಮಹಾರಾಷ್ಟ್ರ - ಮುಖ್ಯವಾಗಿ ತಾಳ್ - ಕೊಂಕಣ, ಗೋವಾ, ಕರ್ನಾಟಕ - ಮುಖ್ಯವಾಗಿ ಕರಾವಳಿ ಕರ್ನಾಟಕ,ಮಂಗಳೂರು ಉಡುಪಿ ಮತ್ತು ಒಳನಾಡು ಶಿವಮೊಗ್ಗ ಜಿಲ್ಲೆ ಯಿಂದ ಬೆಳಗಾವಿ,ಮದ್ಯಪ್ರದೇಶ - ಹಿಂದೆ ಮರಾಠರ ಆಡಳಿತವಿದ್ದ ಪ್ರದೇಶಗಳು ಗ್ವಾಲಿಯರ್, ಇಂದೋರ್, ಉತ್ತರ ಪ್ರದೇಶ - ಝಾನ್ಸಿ, ಕಾನ್ಪುರ್, ಬುಂದೇಲ್‍ಖಂಡ್,ಕೇರಳದ ಕಾಸರಗೋಡು ಜಿಲ್ಲೆಯ ಕೆಲವು ಪ್ರದೇಶಗಳು.

ಹೊರ ದೇಶಗಳಲ್ಲಿ:

ಭಾಷೆಗಳು
Marathi in Maharashtra, Kannada in Karnataka and parts of Canarese Kerala, Konkani in Goa, Karadi in Canarese Kerala, Bhati Bhasha in Goa and Malayalam in Hosdrug, Kerala. English used for professional purposes, Sanskrit used for religious purposes
ಧರ್ಮ
ಹಿಂದೂ ಧರ್ಮ
ಸಂಬಂಧಿತ ಜನಾಂಗೀಯ ಗುಂಪುಗಳು
Deshastha Brahmins

Konkanastha Brahmins
Nagar & Bhojaka of Gujarat.

Havyaka and Shivalli of Coastal Karnataka.

ಎಲ್ಲಾ ಬ್ರಾಹ್ಮಣ ವರ್ಗಕ್ಕಿರುವಂತೆ ಕರಾಡಕ್ಕೂ ತನ್ನದೇ ಆದ ಆಚಾರ-ವಿಚಾರ-ಪರಂಪರೆ ಇದೆ. ಋಗ್ವೇದಾನುಯಾಯಿಗಳಾಗಿದ್ದು, ಆಶ್ವಲಾಯನ ಗೃಹ್ಯ ಸೂತ್ರವನ್ನು ಅನುಸರಿಸುತ್ತಿರುವವರು. ಬಹುತೇಕ ವೈದಿಕ ಕ್ರಿಯಾಭಾಗಗಳು ಇತರ ಬ್ರಾಹ್ಮಣ ವರ್ಗಗಳಾದ ಶಿವಳ್ಳಿ , ಹವ್ಯಕ, ಕೋಟ, ಇತ್ಯಾದಿ ಜನವರ್ಗದವರು ಅನುಸರಿಸುತ್ತಿರುವ ಕ್ರಮಗಳಂತಿರದೆ ಔತ್ತರೇಯ ಆಚರಣೆಗಳಾಗಿಯೇ ಉಳಿದು ಬಂದಿವೆ. ಬಹಳಷ್ಟು ಹಳೆಯ ಕ್ರಮನಿಯಮಗಳು ಶಿಥಿಲವಾಗುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ , ಕರಾಡರು ತಕ್ಕ ಮಟ್ಟಿಗೆ ಅಗತ್ಯ ಸಂಸ್ಕಾರಗಳನ್ನು ಆಚರಿಸುತ್ತಾ ಬರುತ್ತಿದ್ದಾರೆನ್ನುವುದು ತೃಪ್ತಿದಾಯಕ ವಿಚಾರ.

ಜನ್ಮಾಂತರ ಸುಕೃತದಿಂದ ಮನುಷ್ಯ ಜನ್ಮ ಪ್ರಾಪ್ತವಾಗಿ ಸತ್ಕರ್ಮಗಳ ಮೂಲಕ "ಮುಕ್ತಿ" ಪಡೆಯಬೇಕೆನ್ನುವು ದರಲ್ಲಿ ಕರಾಡ ಸಮುದಾಯದ ಪೂರ್ವಜರು ನಂಬಿಕೆ ಇಟ್ಟ0ತಿದ್ದು, ಅದಕ್ಕನುಗುಣವಾಗಿ ಪರಂಪರೆಯು ಬೆಳೆದುಬಂದಿದೆ. ಜನ್ಮತ: ಪ್ರಾಣಿಯಾಗಿರುವ ಒಂದು ಜೀವ "ಸಂಸ್ಕಾರ"ಗಳ ಫಲ ಸ್ವರೂಪವಾಗಿ ಪರಿಪೂರ್ಣ ಮನುಷ್ಯನಾಗುತ್ತಾನೆ ಎನ್ನುವ ವಿಚಾರದಲ್ಲಿ ಪೂರ್ಣ ನಂಬಿಕೆ ಇಂದಿಗೂ ಕರಾಡಲ್ಲಿದೆ . ಅದರಂತೆ ಗರ್ಭೋತ್ಪತ್ತಿಯಿಂದ ಮರಣದವರೆಗೆ ಮಾಡುವ ಪೂರ್ವ ಸಂಸ್ಕಾರಗಳು , ಮರಣಾನಂತರ ಮಾಡುವ ಅಪರ ಸಂಸ್ಕಾರಗಳು ಕರಾಡರಲ್ಲಿ ಇಂದಿಗೂ ಪ್ರಚಲಿತ. ಶಾಸ್ತ್ರಗ್ರಂಥಗಳಲ್ಲಿ ಐವತ್ತೆರಡು ಸಂಸ್ಕಾರಗಳು ಉಲ್ಲೇಖವಾಗಿವೆಯಂತೆ. ಆದರೆ ಪ್ರಸ್ತುತ ಮರಣ ಪೂರ್ವ ಹದಿನಾರು ಹಾಗೂ ಮರಣೋತ್ತರ ಹದಿನಾರು ಸಂಸ್ಕಾರಗಳನ್ನು ಮಾತ್ರ ಪ್ರಮುಖವೆಂದು ತಿಳಿದು ಆಚರಿಸಲಾಗುತ್ತಿದೆ. ಕರಾಡರ ಪೂರ್ವಜರು ಈ ಎರಡೂ ವಿಧವಾದ ಷೋಡಶ ಕರ್ಮಗಳನ್ನು ಸ್ತ್ರೀ - ಪುರುಷರಿಗೆ ಸಮಾನವಾಗಿ ಆಚರಿಸುತ್ತಿದ್ದರು. ಆದರೆ ಕಾಲಾಂತರದಲ್ಲಿ ಕೆಲವು ಸ್ತ್ರೀ ಪ್ರಧಾನ ಸಂಸ್ಕಾರಗಳು ಕಣ್ಮರೆಯಾದವು. ಇಂದಿನ ಯಾಂತ್ರಿಕ ವಾತಾವರಣದಲ್ಲಿ ಬ್ರಾಹ್ಮಣರೆನಿಸಿದವರು ತಮ್ಮ ಬ್ರಾಹ್ಮಣ್ಯವನ್ನು ಕರಾಡ ಪೂರ್ವಜರಂತೆ ಕ್ರಮಬದ್ಧವಾಗಿ ಉಳಿಸುವಲ್ಲಿ ವಿಫಲರಾಗಿರುವುದು ದೇಶ-ಕಾಲ-ಪರಿಸ್ಥಿತಿಗಳ ಬದಲಾವಣೆಯೊಂದಿಗಷ್ಟೆ. ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ನಮ್ಮ ಬದುಕು ಕ್ರಮಿಸಿದಂತೆ ಸಹಜವಾಗಿ ನಮ್ಮ ಪೂರ್ವ ಪರಂಪರೆಗಳು , ಸಂಪ್ರದಾಯಗಳು , ಕಟ್ಟುಪಾಡುಗಳು ನೈಜತೆ ಕಳೆದುಕೊಂಡು ಕೇವಲ ಆಚರಣೆಗಳಾಗಿ ಮಾತ್ರ ರೂಢಿಯಲ್ಲಿರುತ್ತವೆ. ಇದು ಇಂದಿನ ಬದುಕಿನ ವಾಸ್ತವ. ಆದರೂ ವಿಶೇಷ ಆಸಕ್ತಿ ವಹಿಸಿ ಕರಾಡ ಸಂಸ್ಕಾರಗಳ ಬಗ್ಗೆ , ಕ್ರಮಗಳ ಬಗ್ಗೆ ಅರಿತು ಆಚರಣೆ ಮಾಡಿದಾಗಲಷ್ಟೇ ಆಧುನಿಕತೆಯ ಪ್ರಭಾವದಿಂದ ಸ್ವಲ್ಪ ಮಟ್ಟಿಗಾದರೂ ಕರಾಡ ಸಂಪ್ರದಾಯಗಳನ್ನು ಸಂರಕ್ಷಿಸಿದಂತಾಗುತ್ತದೆ

ಕರಾಡ ಹಬ್ಬ – ಹರಿದಿನಗಳು :

ಹಬ್ಬ – ಹರಿದಿನಗಳು ಹಿಂದೂ ಧರ್ಮದ ಧಾರ್ಮಿಕ ಆಚರಣೆಯ ಅವಿಭಾಜ್ಯ ಅಂಗವಾಗಿ ಬೆಳೆದುಕೊಂಡು ಬಂದಿವೆ. ಎಲ್ಲಾ ಹಬ್ಬಗಳಿಗೂ ತನ್ನದೇ ಆದ ಮಹತ್ವ , ಚಾರಿತ್ರಿಕ ಹಿನ್ನೆಲೆ ಹಾಗೂ ಆಚರಣೆಯ ವಿಧಾನವಿದೆ. ಕರಾಡ ಬ್ರಾಹ್ಮಣರು ದುರ್ಗೆ , ಗಣಪತಿ, ಸುಬ್ರಹ್ಮಣ್ಯೇಶ್ವರ , ಮಹಾವಿಷ್ಣು, ಶಿವ , ನಾಗ ಹೀಗೆ ಅನೇಕ ದೇವ - ದೇವತೆಗಳನ್ನು ಆರಾಧಿಸುವವರಾದರೂ ಶ್ರೀ ದುರ್ಗಾಪರಮೇಶ್ವರಿಯು ನಮ್ಮ ಆರಾಧ್ಯ ದೇವತೆಯಾಗಿ ನೆಲೆ ನಿಂತಿದ್ದಾಳೆ. ಪರ್ವ ಕಾಲದ ಸಂದರ್ಭಗಳಲ್ಲಿ ಆಯಾ ದೇವರ ಹಬ್ಬಗಳನ್ನು,ವ್ರತಗಳನ್ನು ವಿಶೇಷ ಫಲ ಪ್ರಾಪ್ತಿಗಾಗಿ ಆಚರಿಸಲಾಗುತ್ತದೆ. ಕರಾಡರಲ್ಲಿ ಆಚರಣೆಯಲ್ಲಿರುವ ಕೆಲವು ಮುಖ್ಯ ಹಬ್ಬ, ದೇವತಾ ಪೂಜೆಗಳನ್ನು , ವ್ರತಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.

ಚಾಂದ್ರಮಾನ ಯುಗಾದಿ, ಅಷ್ಟಮಿ , ಚೌತಿ, ಗೌರೀ ಪೂಜೆ , ಮಹಾಲಯ ಅಮಾವಾಸ್ಯೆ , ನಾಗರ ಪಂಚಮಿ , ಶರನ್ನವರಾತ್ರಿ , ದೀಪಾವಳಿ , ತುಳಸೀ ಪೂಜೆ , ಗೋಪೂಜೆ , ಬಲೀಂದ್ರ ಪೂಜೆ , ಮಹಾಶಿವರಾತ್ರಿ , ಸುಬ್ರಹ್ಮಣ್ಯ ಷಷ್ಠಿ , ವರಮಹಾಲಕ್ಷ್ಮೀ ವ್ರತ , ಅನಂತನ ಚತುರ್ದಶಿ , ನೂಲ ಹುಣ್ಣಿಮೆ , ನವಾನ್ನ ಭೋಜನ , ಇತ್ಯಾದಿಗಳು ಪ್ರಮುಖ ಹಬ್ಬಗಳಾದರೆ ತ್ರಿಕಾಲ ಪೂಜೆ , ದುರ್ಗಾ ನಮಸ್ಕಾರ , ದುರ್ಗಾ ಪೂಜೆ , ಶ್ರೀ ಸತ್ಯನಾರಾಯಣ ವ್ರತ , ಸೋಮವಾರ ವ್ರತ , ಏಕಾದಶಿ ವ್ರತ , ಪ್ರದೋಷ ಪೂಜೆ , ಶುಕ್ರವಾರ ಪೂಜೆ, ಅಶ್ವತ್ಥ ಪೂಜೆ , ನಾಗಾರಾಧನೆ, ಲಕ್ಷ್ಮೀ ಪೂಜೆಗಳು ಪ್ರತೀ ಮನೆ ಅಥವಾ ತರವಾಡು ಮನೆಗಳಲ್ಲಿ ಕಾಲಕಾಲಕ್ಕೆ ನಡೆಸುತ್ತಾ ಬರುವ ಪೂಜೆಗಳಾಗಿವೆ. ಈ ಎಲ್ಲಾ ಆಚರಣೆಗಳು ಇಂದು ಹಳ್ಳಿಗಳಲ್ಲಿ ಮಾತ್ರ ಬಹಳವಾಗಿ ಚಾಲ್ತಿಯಲ್ಲಿದ್ದರೂ ನಗರ ಪ್ರದೇಶಗಳಲ್ಲಿ ವಾಸಿಸುವವರು ಬಹುತೇಕ ಸಂಪ್ರದಾಯ ಹಾಗೂ ವ್ರತಾಚರಣೆಗಳಿಂದ ವಿಮುಖರಾಗಿ ಕೆಲವೇ ಕೆಲವು ಪ್ರಸಿದ್ಧ ಹಬ್ಬಗಳನ್ನು ಮಾತ್ರ ಆಚರಿಸುವುದು ಕಂಡುಬರುತ್ತಿದೆ.

ಕರಾಡ ಸ್ತ್ರೀ :

ಶಕ್ತಿಯ ಅಧಿದೇವತೆಯಾಗಿ ನಮ್ಮ ದೇಶದಲ್ಲಿ ಗುರುತಿಸಲ್ಪಡುವ ಸ್ತ್ರೀ ವರ್ಗವನ್ನು ನಮ್ಮ ಸಮಾಜವೂ ವಿಶೇಷ ಗೌರವ ಹಾಗೂ ಆದರದಿಂದ ನೋಡುತ್ತದೆ. ಪುರುಷನಿಗೆ ಮನೆಯ ಎಲ್ಲಾ ಕೆಲಸಗಳಲ್ಲಿ ಸಮಾನವಾಗಿ ಜವಾಬ್ದಾರಿ ವಹಿಸಿ ತನ್ನ ಮಕ್ಕಳು ಹಾಗೂ ಕುಟುಂಬದವರೊಡನೆ ಸಹಬಾಳ್ವೆಯ ಬದುಕು ನಿಭಾಯಿಸಲು ಸ್ತ್ರೀಯೇ ಭದ್ರ ಬುನಾದಿಯಾಗಿದ್ದ ಒಂದು ಕಾಲವಿತ್ತು. ಆದರೆ ಇಂದಿನ ಕಾಲದಲ್ಲಿ ಆಕೆ ಪುರುಷನಷ್ಟೇ ಸಮರ್ಥಳೆನ್ನುವ ವಿಚಾರವನ್ನು ಸ್ಪಷ್ಟಪಡಿಸುವ ಸಾಕಷ್ಟು ಪುರಾವೆಗಳಿಗೆ ಸಾಕ್ಷಿಯಾಗಿ ನಿಂತಿದ್ದಾಳೆ. ವೇದ ಕಾಲದಲ್ಲಿ ಬಾಲಕಿಯರಿಗೂ ಉಪನಯನ ಮಾಡಿಸಿ ಬ್ರಹ್ಮಚರ್ಯ ಹಾಗೂ ವಿದ್ಯಾಭ್ಯಾಸಕ್ಕೆ ಅವಕಾಶ ಕಲ್ಪಿಸಿಕೊಡಲಾಗುತ್ತಿತ್ತೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ದೇಶದಲ್ಲಿ ಮುಸ್ಲೀಂ ಧಾಳಿಯಿಂದ ಸ್ತ್ರೀ ವರ್ಗ ಭದ್ರತೆ ಕಳೆದುಕೊಂಡು ಎಳೆಯ ವಯಸ್ಸಲ್ಲೇ ವಿವಾಹ ಮಾಡಬೇಕಾದ ಪರಿಸ್ಥಿತಿ ಇತ್ತು. ಇದರ ಪರಿಣಾಮವಾಗಿ ನಮ್ಮ ಸಮಾಜದಲ್ಲಿ ಇತ್ತೀಚಿನ 40-50 ವರ್ಷಗಳಷ್ಟು ಹಿಂದಿನ ತನಕ ಬಾಲ್ಯ ವಿವಾಹ ಪದ್ಧತಿ ಮುಂದುವರಿಯುವುದಕ್ಕೆ ಕಾರಣವಾಯಿತು. ಅದೇ ರೀತಿ ಹಿಂದಿನ ಕಾಲದಲ್ಲಿ ವಿಧವೆಯರನ್ನು ತಲೆ ಬೋಳಿಸಿ, ಕೆಂಪು ವಸ್ತ್ರ ಉಡಿಸಿ ಪ್ರತ್ಯೇಕವಾಗಿ ನೋಡುವ ಸಂಪ್ರದಾಯವಿತ್ತು. ಆದರೆ ಇಂದು ಈ ತೆರನಾದ ಹಳೆಯ ಪದ್ಧತಿಗಳು ಚಾಲನೆಯಲ್ಲಿಲ್ಲವೆಂದೇ ಹೇಳಬಹುದು. ಪುರುಷಪ್ರಧಾನವಾದ ನಮ್ಮ ಸಮಾಜದಲ್ಲಿ ಪುರುಷನಿಗೆ ಒಂದಕ್ಕಿಂತ ಹೆಚ್ಚು ವಿವಾಹವಾಗುವ ಅವಕಾಶ ಕಲ್ಪಿಸಿರುವುದು ಹಿಂದಿನಿಂದಲೂ ಚಾಲ್ತಿಯಲ್ಲಿರುವ ಒಂದು ಪದ್ಧತಿ. ಆದರೆ ಸ್ತ್ರೀಯರಿಗೆ ತಮ್ಮ ಜೀವಿತ ಕಾಲದಲ್ಲಿ ಒಂದೇ ವಿವಾಹವಾಗುವ ಕಟ್ಟುಪಾಡುಗಳನ್ನು ಸಮಾಜ ವಿಧಿಸಿದೆ. ವಿಧವಾ ಸ್ತ್ರೀಯರನ್ನು ಸಮಾಜದಲ್ಲಿ ಪ್ರತ್ಯೇಕವಾಗಿ ಕಾಣಲಾಗುತ್ತಿತ್ತು. ಆದರೆ ಕಾಲಕ್ರಮದಲ್ಲಿ ಈ ಪದ್ಧತಿಗಳು ಮಾಯವಾಗಿ ಗಂಡು ಹೆಣ್ಣು ಇಬ್ಬರಿಗೂ ಸಮಾನ ಸ್ಥಾನ ಹಾಗೂ ಹಕ್ಕುಗಳು ಲಭಿಸುತ್ತಿವೆ.

ಸುಮಾರು ಇಪ್ಪತೈದು ವರ್ಷಗಳಷ್ಟು ಹಿಂದೆ ಕರಾಡ ಸ್ತ್ರೀ ವರ್ಗದ ವಿದ್ಯಾಭ್ಯಾಸ ಕೇವಲ ಹತ್ತನೆಯ ತರಗತಿಯ ತನಕವಷ್ಟೇ ಸೀಮಿತವಾಗಿತ್ತು. ಕಾಲಾಂತರದಲ್ಲಿ ಹೆಣ್ಣು ಮಕ್ಕಳು ಕಲಿಕೆಯಲ್ಲಿ ಬಹಳಷ್ಟು ಆಸಕ್ತಿ ವಹಿಸಿ ಇದ್ದ ಸೌಕರ್ಯಗಳನ್ನು ಸದುಪಯೋಗಪಡಿಸಿಕೊಂಡು ಉನ್ನತ ವಿದ್ಯಾಭ್ಯಾಸದ ಕಡೆ ಒಲವು ತೋರಿಸುವ ಅವಕಾಶಗಳು ಬಂದವು. ಕ್ರಮೇಣ ಸ್ತ್ರೀ ಶಿಕ್ಷಣ ಪುರೋಗತಿ ಕಾಣುತ್ತಾ ಇಂದು ಗಂಡು ಮಕ್ಕಳಂತೆ ಹೆಣ್ಣು ಮಕ್ಕಳೂ ಉನ್ನತ ವ್ಯಾಸಂಗಗಳಾದ ಸ್ನಾತಕೋತ್ತರ ಪದವಿ , ಡಾಕ್ಟರೇಟ್ , ಮಾತ್ರವಲ್ಲದೆ ವೃತ್ತಿ ಶಿಕ್ಷಣಗಳಾದ ವೈದ್ಯಕೀಯ , ಇಂಜಿನೀಯರಿಂಗ್ ಕ್ಷೇತ್ರಗಳಲ್ಲೂ ತಮ್ಮ ಸಾಧನೆಯನ್ನು ಮೆರೆಯುತ್ತಿದ್ದಾರೆ.

ಕರಾಡ ಮಹಿಳೆಯರು- ಶಿಕ್ಷಕಿಯರಾಗಿ , ಸಂಗೀತ ಕಲಾವಿದರಾಗಿ , ಯಕ್ಷಗಾನ, ಬ್ಯಾಂಕಿಂಗ್ ಕ್ಷೇತ್ರದಲ್ಲಿ, ವೈದ್ಯಕೀಯ ರಂಗದಲ್ಲಿ , ಕಾನೂನು ಸೇವೆಯಲ್ಲಿ, ಇತ್ತೀಚಿನ ಸಾಫ್ಟ್ವೇರ್ ಕ್ಷೇತ್ರದಲ್ಲಿ ಮಾತ್ರವಲ್ಲದೆ ಇನ್ನೂ ಅನೇಕರು ಮ್ಯಾನೇಜ್ಮೆಂಟ್ ಶಿಕ್ಷಣ ಪಡೆದು ಉತ್ತಮ ನೌಕರಿ ಹೊಂದಿದವರಾಗಿದ್ದಾರೆ. ನಗರ ಜೀವನ ನಿಭಾಯಿಸುವಲ್ಲಿ ಸ್ತ್ರೀ ಪುರುಷನಿಗೆ ಸಮಾನವಾಗಿ ದುಡಿದು ಕುಟುಂಬ ಜೀವನದ ಸಂಪೂರ್ಣ ಹೊಣೆಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾಳೆ. ಹಿಂದಿನ ಕಾಲದಲ್ಲಿ ಸ್ತ್ರೀ ಶಿಕ್ಷಣಕ್ಕೆ ಅಷ್ಟೊಂದು ಮಹತ್ವವಿಲ್ಲದಿದ್ದ ಕಾರಣ ಬಹುತೇಕ ಎಲ್ಲಾ ಹೆಣ್ಣು ಮಕ್ಕಳು ಮನೆಯಲ್ಲೇ ಇದ್ದು ಕಸೂತಿ , ಗುಡಿ ಕೈಗಾರಿಕೆ ಇತ್ಯಾದಿ ನಡೆಸಿ ಬದುಕಿನ ಬವಣೆಗಾಗಿ ಹಣ ಸಂಪಾದಿಸುತ್ತಿದ್ದುದುಂಟು. ಅ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಮನೆಯಲ್ಲೇ ಹೆತ್ತವರು - ಅಜ್ಜಿಯಂದಿರು ಕಲಿಸುತ್ತಿದ್ದ ಪರಂಪರಾಗತ ಕ್ರಮಗಳು ತಮ್ಮ ಮುಂದಿನ ಜನಾಂಗಕ್ಕೆ ಬಹಳ ದೊಡ್ಡ ದಾರಿದೀಪವಾಗಿ ಸಹಕರಿಸುತ್ತಿತ್ತು. ಒಂದೇ ಮನೆಯಲ್ಲಿ ಒಬ್ಬಳೇ ಮಹಿಳೆ ಇದ್ದರೂ ಬಹುತೇಕ ಮನೆಕೆಲಸ, ತೋಟದ ಕೆಲಸ , ದನಕರುಗಳ ನಿರ್ವಹಣೆ ಅನಾಯಾಸವಾಗಿ ಮಾಡುವ ಸಾಮರ್ಥ್ಯ ಹೊಂದಿದ್ದರು. ಇಂದು ಆಧುನಿಕತೆಯ ಪರಿಣಾಮವಾಗಿ ಹಿಂದಿನ ಕಾಲದಂತೆ ಅನಿವಾರ್ಯವಾಗಿ ದುಡಿಯಬೇಕಾದ ಪರಿಸ್ಥಿತಿ ಇಲ್ಲ . ಎಲ್ಲವೂ ಸರಳ - ಸುಲಭ!

ಬದುಕಿನಲ್ಲಿ ವಿವಾಹಿತ ಸ್ತ್ರೀಯರಿಗೆ ವಿಶೇಷ ಸ್ಥಾನವಿದೆ. ಪುರುಷ ನಡೆಸುವ ಯಾವುದೇ ಶುಭ ಕಾರ್ಯಗಳಲ್ಲಿ ಅವನು ತನ್ನ ಧರ್ಮ ಪತ್ನಿಯೊಡನಿದ್ದು ವೈದಿಕ ಕಾರ್ಯಗಳನ್ನು ನೆರವೇರಿಸಿದಾಗ ಮಾತ್ರ ಅದು ಪರಿಪೂರ್ಣವಾಗುತ್ತದೆನ್ನುವುದು ನಮ್ಮ ಪರಂಪರಾಗತ ನಂಬಿಕೆ.

ಕಲೆ-ಸಾಹಿತ್ಯ – ಸಂಗೀತ : ಮಹಾರಾಷ್ಟ್ರಾದಿಂದ ವಲಸೆ ಬಂದ ನಮ್ಮ ಪೂರ್ವಜರು ದಕ್ಷಿಣಕನ್ನಡ, ಕಾಸರಗೋಡು ಭಾಗಗಳಲ್ಲಿ ಬೀಡು ಬಿಟ್ಟ ನಂತರ ಈ ಮಣ್ಣಿನ ಕಸುವು ಪಡೆದು ಕಲೆ-ಸಾಹಿತ್ಯ–ಸಂಗೀತ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ಸಲ್ಲಿಸಿದ್ದಾರೆ . ಕರಾಡ ಭಾಷೆಯಲ್ಲಿ ರಚಿಸಿದ ಶೋಭಾನೆ ಹಾಡುಗಳು , ಒಗಟುಗಳು , ಗಾದೆಮಾತುಗಳು ಇಂದಿಗೂ ಖ್ಯಾತವಾಗಿವೆ. ನಮ್ಮ ಭಾಷೆಯ ಸಾಹಿತ್ಯ ರಚನೆಯಲ್ಲದೆ, ಸಂಸ್ಕೃತ ಭಾಷಾ ಕಾವ್ಯಗಳು , ಸ್ತೋತ್ರಗಳು, ಬಹಳ ವ್ಯಾಪಕವಾಗಿ ರಚಿತವಾಗಿವೆ. ಖಂಡೇರಿ ಅನಂತ ಶಾಸ್ತ್ರಿಗಳು , ಚಾಂಗುಳಿ ಸುಬ್ರಾಯ ಶಾಸ್ತ್ರಿಗಳು , ಗುರು ಶ್ರೀಪತಿ ಶಾಸ್ತ್ರಿಗಳು, ಗುರು ಕೇಶವ ಶಾಸ್ತ್ರಿಗಳು, ದರ್ಭೆ ಜ್ಯೋತಿಷಿ ರಾಮ ಭಟ್ಟ ಮೊದಲಾದವರು ಸಂಸ್ಕೃತದಲ್ಲಿ ಅಪೂರ್ವ ಪಾಂಡಿತ್ಯವಿದ್ದ ಮಹಾನ್ ವ್ಯಕ್ತಿಗಳು. ಗುರು ಶ್ರೀಪತಿ ಶಾಸ್ತ್ರಿಗಳು ಬರೆದ "ಪ್ರಹ್ಲಾದ ಚರಿತ್ರೆ " ಕರಾಡದ ಆದಿ ಕಾವ್ಯವೆಂದೇ ಖ್ಯಾತವಾಗಿದೆ. ಬದುಕಿನ ಅಪಾರ ಅನುಭವ ಹಾಗೂ ಜ್ಞಾನ ಹೊಂದಿದ್ದ ಈ ಕವಿಗಳು ನ್ಯಾಯ-ನೀತಿ, ಹಾಸ್ಯ-ಲಾಸ್ಯ, ಬಡತನ , ವೈರಾಗ್ಯ ಇತ್ಯಾದಿ ಅನೇಕ ವಿಚಾರಗಳ ಬಗ್ಗೆ ಬರೆದ ಸಾಹಿತ್ಯ ರಚನೆಗಳು ಪುಸ್ತಕ ರೂಪದಲ್ಲಿ ಇಂದು ಲಭ್ಯವಿಲ್ಲದಿದ್ದರೂ ಹಳೆಯ ತಲೆಮಾರಿನ ಬಹುತೇಕ ಮಂದಿಗೆ ಅವೆಲ್ಲ ಹೃದ್ಗತವಾಗಿವೆ.

ನಮ್ಮ ಮಂದಿ ಕಲಾ ಕ್ಷೇತ್ರವಾದ ಯಕ್ಷಗಾನದಲ್ಲೂ ಎತ್ತಿದ ಕೈ. ತುಳುನಾಡಿನ ಹೆಗ್ಗುರುತಾದ ಯಕ್ಷಗಾನಕ್ಕೆ ಕರಾಡರ ಕೊಡುಗೆ ಅಪಾರ. ತೆಂಕುತಿಟ್ಟಿನ ಕಲಾಪ್ರಕಾರವನ್ನು ಅಳವಡಿಸಿಕೊಂಡು ಉಡುಪಿ, ದಕ್ಷಿಣಕನ್ನಡ, ಕಾಸರಗೋಡು ಜಿಲ್ಲೆಗಳಲ್ಲಿ ಯಕ್ಷಗಾನ ಪ್ರಸಿದ್ಧಿ ಪಡೆದಿದೆ. ಬಲಿಪ ನಾರಾಯಣ ಭಾಗವತರು ಯಕ್ಷಗಾನ ಕ್ಷೇತ್ರದ ಸರ್ವ ಶ್ರೇಷ್ಠ ಭಾಗವತರಾಗಿ ಪ್ರಸಿದ್ಧರಾದವರು.ಇವರ ಕಲಾ ಪ್ರೌಢಿಮೆಗೆ ಮೈಸೂರು ಸಂಸ್ಥಾನದ ಸಂಗೀತ ನಾಟಕ ಅಕಾಡೆಮಿಯ ರಾಜ್ಯ ಪ್ರಶಸ್ತಿ ಲಭ್ಯವಾಗಿದೆ . ಯಕ್ಷಗಾನ ಕಲೆಗೆ ಮೌವ್ವಾರು ಕಿಟ್ಟಣ್ಣ ಭಾಗವತರ ಕೊಡುಗೆಯೂ ಅಪಾರ. ಚೆಂಡೆ ಮೃದಂಗ ಮಾತ್ರವಲ್ಲದೆ ಭಾಗವತರಾಗಿಯೂ ಪ್ರಸಿದ್ಧರಾದ ಇವರು ಅನೇಕ ಕೃತಿಗಳನ್ನು ಯಕ್ಷಗಾನ ಕ್ಷೇತ್ರಕ್ಕೆ ಕೊಟ್ಟಿದ್ದಾರೆ. ಮಂದಾರ ಕೇಶವ ಭಟ್ಟರೂ ಇವರ ಸಾಲಿಗೆ ಸೇರುವ ಓರ್ವ ಮಹಾನ್ ಕಲಾಕಾರ. ಅವರು ಅನೇಕ ಯಕ್ಷಗಾನ ಪ್ರಸಂಗಗಳನ್ನು , ಕವನ ಸಂಕಲನಗಳನ್ನು ಬರೆದಿದ್ದಾರೆ. ಅವರು ಬರೆದ "ಮಂದಾರ ರಾಮಾಯಣ" ಎಂಬ ತುಳು ಭಾಷಾ ಕೃತಿ ಅವರನ್ನು " ತೌಳವ ವಾಲ್ಮೀಕಿ" ಎಂಬ ಕೀರ್ತಿಗೆ ಭಾಜನರಾಗುವಂತೆ ಮಾಡಿತು.

ಇಂದಿನ ಕಾಲದಲ್ಲಿ ಹಳೆಯ ಕಾಲದಂತೆ ರಾತ್ರಿ ಇಡೀ ನಡೆಯುವ ಯಕ್ಷಗಾನ ಬಯಲಾಟಗಳು ಕಡಿಮೆಯಾಗುತ್ತಿವೆ. ಇದಕ್ಕೆ ಬದಲಾಗಿ ತಾಳಮದ್ದಳೆ ಕಾರ್ಯಕ್ರಮಗಳು ನಡೆಯುತ್ತವೆ. ಗ್ರಾಮೀಣ ಜನಜೀವನದ ಅಂಗವಾಗಿ ಬೆಳೆದ ಯಕ್ಷಗಾನ ತಾಳಮದ್ದಳೆ ಎಲ್ಲರಲ್ಲೂ ಉತ್ಸಾಹ ತುಂಬುವ ಒಂದು ಪ್ರೌಢ ಕಲೆಯಾಗಿ ಬೆಳೆದಿದೆ. ಈ ದಿಸೆಯಲ್ಲಿ ಯಕ್ಷಗಾನ ಬಯಲಾಟ ಅಥವಾ ತಾಳಮದ್ದಳೆಯನ್ನು ಮತ್ತಷ್ಟು ಬೆಳೆಯುವಂತೆ ಮಾಡಿದ ಕೀರ್ತಿ ಪೆರ್ಲ ಕೃಷ್ಣ ಭಟ್ , ಬಲಿಪ ಕಿರಿಯ ನಾರಾಯಣ ಭಾಗವತರು ಹಾಗೂ ಡಾ. ಡಿ. ಸದಾಶಿವ ಭಟ್ ಇವರಿಗೆ ಸಲ್ಲುತ್ತದೆ. ಇಷ್ಟೇ ಅಲ್ಲದೆ ಇಂದಿನ ಯುವ ಸಮೂಹದಲ್ಲಿ ಯಕ್ಷಗಾನದ ಅಭಿರುಚಿ ಸದಾ ದೀಪ್ತವಾಗಿರುವಂತೆ ಮಾಡುವಲ್ಲಿಯೂ ಅವರು ಸಾಕಷ್ಟು ಶ್ರಮಿಸಿರುವುದು ಈ ಕಲೆಯ ಜೀವಂತಿಕೆಗೆ ಸಾಕ್ಷಿಯಾಗಿದೆ.

ಕರಾಡರಲ್ಲಿ ಅನೇಕ ವ್ಯಕ್ತಿಗಳು ತಮ್ಮ ಪ್ರತಿಭೆಯಿಂದ ಜನ ಮನಸ್ಸನ್ನು ಗೆದ್ದವರಿದ್ದಾರೆ. ಶ್ರೀ ಗಿರೀಶ್ ಭಾರದ್ವಾಜ್ ಇವರು ತೂಗುಸೇತುವೆಗಳ ನಿರ್ಮಾತೃ. ಶ್ರೀ ಬಾಲಕೃಷ್ಣ ಭಟ್ ಇವರು ವಿಧಾನ ಪರಿಷತ್ ಕರ್ನಾಟಕದ ಸದಸ್ಯರಾಗಿದ್ದವರು. ಶ್ರೀ ಬಳ್ಳಪದವು ಮಾಧವ ಭಟ್ಟರು ವೈದಿಕ ಕ್ಷೇತ್ರದಲ್ಲಿ ಹೆಸರು ಮಾಡಿದವರು. ಶ್ರೀ ಪೆರ್ಲ ಕೃಷ್ಣ ಭಟ್, ಪೆರ್ಲ ಮಾಧವ ಭಟ್ ಇವರು ಬರಹಗಾರರು. ಶ್ರೀ ಯೋಗೀಶ ಶರ್ಮ, ಜಗದೀಶ್ ಕೊರೆಕ್ಕಾನ, ಬಾಲರಾಜ್ ಬೆದ್ರಡಿ ಇವರುಗಳು ಕರ್ನಾಟಕ ಶಾಸ್ತ್ರೀಯ ಸಂಗೀತದ ವಿವಿಧ ಪ್ರಾಕಾರಗಳಲ್ಲಿ ಪ್ರಖ್ಯಾತರು.

ಕರ್ನಾಟಕದ ಬೆಂಗಳೂರು, ಸುಳ್ಯ, ಪುತ್ತೂರು, ಮಂಗಳೂರುಗಳಲ್ಲಿ, ಕೇರಳದ ಕಾಸರಗೋಡು, ಪೆರ್ಲ, ಬದಿಯಡ್ಕಗಳಲ್ಲಿ ಕರಾಡ ಸಮುದಾಯದ ಜನ ವಾಸವಾಗಿದ್ದು ಕರಾಡ ಎಂದೇ ಕರೆಯಲ್ಪಡುವ ಭಾಷೆಯನ್ನು ಮಾತನಾಡುತ್ತಾರೆ.

ನಮ್ಮದೇ ಆದ "ಕರಾಡ ಸಿರಿ" ಮಾಸಪತ್ರಿಕೆಯು ಸಮುದಾಯದ ಆಗು - ಹೋಗುಗಳನ್ನು ಹಂಚಿಕೊಳ್ಳುವಲ್ಲಿ ಸಹಕಾರಿಯಾಗಿದೆ.

ಕರಾಡ ದೇವಸ್ಥಾನಗಳು:

ಕರಾಡ ಬ್ರಾಹ್ಮಣರು ದಕ್ಷಿಣ ಭಾಗಕ್ಕೆ ವಲಸೆ ಬಂದ ಅನಂತರ ದುರ್ಗೆಯನ್ನು ತಮ್ಮ ಆರಾಧ್ಯ ದೇವತೆಯಾಗಿ ಪೂಜಿಸುತ್ತಾ ಬಂದಿದ್ದಾರೆ. ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ - ಅಗಲ್ಪಾಡಿ,ತೈರೆ,ಅವಳ ಪಂಜೆ ಹಾಗು ಕೊಂಗೂರು ಪ್ರದೇಶಗಳಲ್ಲಿ ಸುಮಾರು 500-600 ವರ್ಷಗಳಷ್ಟು ಹಿಂದೆ ಸ್ಥಾಪಿತವಾಯಿತೆಂದು ಅಲ್ಲಿನ ಕ್ಷೇತ್ರ ಪ್ರಶ್ನೆಗಳಿಂದ ತಿಳಿಯಲಾಗಿದೆ. . ಇಷ್ಟೇ ಅಲ್ಲದೆ, ಮಲ್ಲದ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನವೂ ನಮ್ಮವರ ಆಡಳಿತದಲ್ಲಿ ಬಹಳಷ್ಟು ಪುರೋಗತಿಯಲ್ಲಿ ಮುಂದುವರಿಯುತ್ತಿದೆ.ಈ ಪ್ರಮುಖ ದೇವಾಲಯಗಳಲ್ಲದೆ ಆಯಾ ಊರುಗಳಲ್ಲಿ ಕೆಲವು ಪ್ರಮುಖ ಮನೆತನದವರು ತಮ್ಮ ಕುಲದೇವರಾಗಿ ಮುನ್ನಡೆಸುವ ಅನೇಕ ದೇವಾಲಯಗಳಿವೆ.

ಉಪ್ಪಂಗಳ, ಚೆರ್ಕುಡ್ಲು, ಕುಂಟಿಕ್ಕಾನ, ಆಟಿಕುಕ್ಕೆ, ಕುಂಜಿರ್ಕಾನ,ನೆಕ್ಕಂಜೆ,ಬಡಕೆಕರೆ, ಇತ್ಯಾದಿ ಮನೆಯವರು ಶ್ರೀ ದುರ್ಗಾಪರಮೇಶ್ವರೀ ದೇವಿಯ ಪ್ರತ್ಯೇಕ ಗುಡಿ ಅಥವಾ ದೇವಾಲಯ ನಿರ್ಮಿಸಿ ಪೂಜಿಸುತ್ತಿದ್ದಾರೆ. ಅದೇ ರೀತಿ ಮೌವ್ವಾರು,ವಾಟೆತ್ತಿಲ ಜಾಲು,ಚಕ್ಕಣಿಕೆ, ಗುಲುಗುಂಜಿ ಮನೆಯವರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನಗಳನ್ನು ನಡೆಸುತ್ತಿದ್ದಾರೆ.ಸೈಪಂಗಲ್ಲು,ಅಡ್ಕಾರು,ಕೊಟ್ಟ0ಗುಳಿ ಮನೆಯವರು ಶ್ರೀಶಾಸ್ತಾರ ಸುಬ್ರಹ್ಮಣ್ಯೇಶ್ವರ ದೇವರನ್ನು ಆರಾಧಿಸುತ್ತಿದ್ದಾರೆ.ಇಷ್ಟೇ ಅಲ್ಲದೆ,ತೈರೆ ಸಮೀಪದ ಶ್ರೀಮಹಾಲಕ್ಷ್ಮೀ ದೇವಸ್ಥಾನ, ಮುಂಡೋಳು ಮನೆತನದ ಶ್ರೀ ಮಹಾವಿಷ್ಣು ದೇವಸ್ಥಾನ ಹಾಗೂ ಮಂಗಳೂರಿನ ಶ್ರೀರಾಧಾಕೃಷ್ಣ ದೇವಾಲಯ -ಇವೂ ನಮ್ಮವರಿಂದಲೇ ನಡೆಸಲ್ಪಡುತ್ತಿರುವ ದೇವಾಲಯಗಳು.

ಪ್ರತಿ ದಿನದ ಪೂಜೆ

ಮಾತ್ರವಲ್ಲದೆ,ಪರ್ವ ದಿನಗಳಲ್ಲಿ ಈ ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜೆಗಳಿರುತ್ತವೆ.ಬಹುತೇಕ ದೇವಾಲಯಗಳು ಜೀರ್ಣೋದ್ಧಾರವಾಗಿದ್ದರೂ ಭಕ್ತಾದಿಗಳ ಉದಾರ ನೆರವಿನಿಂದ ಇನ್ನಷ್ಟು ಅಭಿವೃದ್ಧಿ ಕಾರ್ಯಗಳಾಗಬೇಕಾಗಿವೆ.

ಮೂಲ ಕರಾಡ ಅಂತರಜಾಲ Archived 2011-02-09 ವೇಬ್ಯಾಕ್ ಮೆಷಿನ್ ನಲ್ಲಿ.

ಬಾಹ್ಯ ಅಂತರಜಾಲ ತಾಣಗಳು

ಬದಲಾಯಿಸಿ

http://www.thekarhaadaa.org/

http://www.karada.in/ Archived 2016-03-05 ವೇಬ್ಯಾಕ್ ಮೆಷಿನ್ ನಲ್ಲಿ.

"https://kn.wikipedia.org/w/index.php?title=ಕರಾಡ&oldid=1233938" ಇಂದ ಪಡೆಯಲ್ಪಟ್ಟಿದೆ