ಔರಂಗಜೇಬ್
ಔರಂಗಜೇಬ್(3 ನವೆಂಬರ್ 1618 – 3 ಮಾರ್ಚ್ 1707),[೧] ಭಾರತದ ಆರನೆಯ ಮೊಘಲ್ ಚಕ್ರವರ್ತಿ. ಷಹಜಹಾನನ (ನೋಡಿ- ಷಾಜಹಾನ್) ಮೂರನೆಯ ಮಗ. ಇವನು ೧೬೫೯ರಿಂದ ೧೭೦೭ ರವರೆಗೆ ೪೯ ವರ್ಷಗಳ ಕಾಲ ಆಳ್ವಿಕೆ ಮಾಡಿದನು. ಇವನು ಒಬ್ಬ ವಿಸ್ತರಣಾವಾದಿಯಾಗಿದ್ದು ಇವನ ಕಾಲದಲ್ಲಿ ಮೊಘಲ ಸಾಮ್ರಾಜ್ಯವು ತನ್ನ ಅತ್ಯಂತ ವಿಸ್ತಾರವಾಗಿತ್ತು.ಇವನು ಒಬ್ಬ ಕಟ್ಟಾ ಮುಸ್ಲಿಮನಾಗಿದ್ದು, ಹಿಂದು ಧರ್ಮ ವಿರೋಧಿಯಾಗಿದ್ದನು. ಅಕ್ಬರನ ಕಾಲದಲ್ಲಿದ್ದ ಜಾತ್ಯಾತೀತ ತತ್ವಗಳನ್ನು ಬದಿಗೆ ತಳ್ಳಿದ್ದನು.ಇವನ ಆಡಳಿತದಲ್ಲಿ ಧರ್ಮ ಅಸಹಿಷ್ಣುತೆಯು ತಾಂಡವವಾಡುತ್ತಿತ್ತು. ಇವನು ಒಬ್ಬ ಉತ್ತಮ ಆಡಳಿತಗಾರನಾಗಿದ್ದು ಇವನ ಕಾಲದಲ್ಲಿ ಮೊಘಲ್ ಸಾಮ್ರಾಜ್ಯವು ತನ್ನ ಉಚ್ಚ್ರಾಯ ಸ್ಥಿತಿಯನ್ನು ಮುಟ್ಟಿತ್ತು. ಇವನ ನಿಧನಾನಂತರ ಮೊಘಲ್ ಸಂತತಿ ವೇಗವಾಗಿ ತನ್ನ ಅವನತಿಯನ್ನು ಕಂಡಿತು.
ಔರಂಗಜೇಬ್ | |
---|---|
ಮಯೂರ ಸಿಂಹಾಸನದಲ್ಲಿ ಆಸೀನನಾಗಿರುವ ಔರಂಗಜೇಬ್. | |
ಆರನೆಯ ಮೋಘಲ್ ಸಾಮ್ರಾಟ | |
ಆಳ್ವಿಕೆ | ೩೧ ಜುಲೈ ೧೬೫೮ – ೩ ಮಾರ್ಚ್ ೧೭೦೭ |
ಪಟ್ಟಾಭಿಷೇಕ | ೧೫ ಜೂನ್ ೧೬೫೯ at ಕೆಂಪು ಕೋಟೆ, ದೆಹಲಿ |
ಪೂರ್ವಾಧಿಕಾರಿ | ಷಹ ಜಹಾನ್ |
ಉತ್ತರಾಧಿಕಾರಿ | ಮುಹಮ್ಮದ್ ಅಝಮ್ ಷಾ |
ಪತ್ನಿಯರು | ದಿಲ್‍ರಾಸ್ ಬಾನು ಬೇಗಮ್ ನವಾಬ್ ಬಾಯಿ ಔರಂಗಾಬಾದಿ ಮಹಲ್ ಉದಯ್‍ಪುರಿ ಮಹಲ್ ಜೈನಾಬಾದಿ ಮಹಲ್ ದೌಲತಾಬಾದಿ ಮಹಲ್ |
ಸಂತಾನ | |
ಜೆಬ್-ಉನ್-ನ್ನೀಸಾ ಝೀನತ್ ಉನ್ನೀಸಾ ಮುಹಮ್ಮದ್ ಅಜ಼ಮ್ ಷಾ ಮೆಹರುನ್ನೀಸಾ ಸುಲ್ತಾನ್ ಮುಹಮ್ಮದ್ ಅಕ್ಬರ್ ಮುಹಮ್ಮದ್ ಸುಲ್ತಾನ್ ಬಹದೂರ್ ಷಾ- I ಬದ್ರುನ್ನೀಸಾ ಜುಬಾದತ್ ಉನ್ನೀಸಾ ಮುಹಮ್ಮದ್ ಕಮ್ ಬಕ್ಷ್ | |
ಪೂರ್ಣ ಹೆಸರು | |
ಅಬುಲ್ ಮುಜಾಫರ್ ಮುಹಿ-ಉದ್-ದಿನ್ ಮೊಹಮ್ಮದ್ ಔರಂಗಜೇಬ್ | |
ಮನೆತನ | ತಿಮುರಿಡ್ |
ತಂದೆ | ಷಹ ಜಹಾನ್ |
ತಾಯಿ | ಮುಮ್ತಾಜ್ ಮಹಲ್ |
ಜನನ | (N.S.) ದಾಹೋಡ್, ಮೊಘಲ್ ಸಾಮ್ರಾಜ್ಯ | ೪ ನವೆಂಬರ್ ೧೬೧೮
ಮರಣ | 3 March 1707 ಅಹಮದ್ ನಗರ, ಭಾರತ | (aged 88)
Burial | ಖುಲ್ಡಾಬಾದ್ |
ಧರ್ಮ | ಇಸ್ಲಾಂ |
ಬಾಲ್ಯ
ಬದಲಾಯಿಸಿ1618ರ ನವೆಂಬರ್ 23 ರಂದು ಗುಜರಾತಿನ ದೋಹಾದಿನಲ್ಲಿ ಜನಿಸಿದ. ತಾಯಿ ಮಮ್ತಾಜ್ ಮಹಲ್. ಚಿಕ್ಕಂದಿನಲ್ಲಿ ಈತ ಒಳ್ಳೆಯ ಶಿಕ್ಷಣ ಪಡೆದ. ಅರಬ್ಬೀ ಮತ್ತು ಪಾರಸೀ ಭಾಷೆಯನ್ನು ಚೆನ್ನಾಗಿ ಅರಿತ. ಈತನ ತಾಯಿನುಡಿ ಉರ್ದು. ಹಿಂದಿ ಮತ್ತು ತುರ್ಕಿ ಭಾಷೆಗಳಲ್ಲಿ ಮಾತಾಡಬಲ್ಲವನೂ ಆಗಿದ್ದ.
ರಾಜಕೀಯ ಜೀವನ
ಬದಲಾಯಿಸಿ1636ರಲ್ಲಿ ದಖನ್ ಪ್ರಾಂತ್ಯಗಳ ವೈಸ್ರಾಯಿಯಾಗಿ ನೇಮಕವಾದಾಗಲೇ ಈತನ ಯೋಗ್ಯತೆ ಪ್ರಥಮವಾಗಿ ಪ್ರಕಾಶಕ್ಕೆ ಬಂತು. ಆದರೆ ಅಣ್ಣನಾದ ದಾರಾಗೂ ಈತನಿಗೂ ಮನಸ್ತಾಪ ಬಂದುದರಿಂದ ಔರಂಗ್ಜೇಬ್ ಈ ಹುದ್ದೆಗೆ ರಾಜೀನಾಮೆ ಕೊಟ್ಟ. ಮರುವರ್ಷ ಇವನಿಗಾಗಿ ಗುಜರಾತಿನ ರಾಜ್ಯಪಾಲ ಹುದ್ದೆ ಕಾದಿತ್ತು. 1647ರಲ್ಲಿ ಇವನನ್ನು ಬಲ್ಜ್ ಮತ್ತು ಬಡಕ್ಷಾನ್ ಪ್ರದೇಶಕ್ಕೆ ಕಳಿಸಲಾಯಿತು. ಮಧ್ಯ ಏಷ್ಯದಲ್ಲಿ ಮೊಗಲರಿಗೆ ಹಿಂದೆ ಸೇರಿದ್ದ ಪ್ರಾಂತ್ಯಗಳನ್ನು ಗೆಲ್ಲಬೇಕೆಂದು ತಂದೆ ಷಾಜಹಾನನ ಆಕಾಂಕ್ಷೆಯಾಗಿತ್ತು. ಆದರೆ ಈ ಯುದ್ಧಗಳು ನಿರ್ಣಾಯಕವಾಗಿ ಪರಿಣಮಿಸಲಿಲ್ಲ. ಖಜಾನೆ ಬರಿದಾಯಿತು. ಔರಂಗಜೇಬನ ಶೌರ್ಯಕೌಶಲಗಳು ಅಸಾಧಾರಣವಾದುವಾಗಿದ್ದರೂ ಆ ಚಳಿನಾಡಿನಲ್ಲಿ ಹೋರಾಟ ಮುಂದುವರಿಸುವುದು ಸೂಕ್ತವೆನಿಸಲಿಲ್ಲವಾದ್ದರಿಂದ ತಂದೆ ಇವನನ್ನು ಹಿಂದಕ್ಕೆ ಕರೆಯಿಸಿಕೊಂಡ. 1648ರಲ್ಲಿ ಈತ ಮುಲ್ತಾನಿನ ರಾಜ್ಯಪಾಲನಾದ. ಮರುವರ್ಷ ಸಿಂಧ್ ಕೂಡ ಇವನ ಆಡಳಿತಕ್ಕೆ ಒಳಪಟ್ಟಿತು. ಪರ್ಷಿಯನ್ನರು ಏರಿಬಂದಿದ್ದ ಕಾಂದಹಾರಿನ ವಿಮೋಚನೆಗಾಗಿ 1649ರಲ್ಲಿ ಇವನನ್ನು ಸೈನ್ಯದೊಂದಿಗೆ ಕಳಿಸಲಾಯಿತು. ಆದರೆ ಔರಂಗ್ಜೇóಬ್ ಹೋಗುವ ವೇಳೆಗೆ ಅದು ಅವರಿಗೆ ಅಧೀನವಾಗಿತ್ತು. ಪರ್ಷಿಯನ್ನರನ್ನು ಜಗ್ಗಿಸಲು ಇವನ ಸೈನ್ಯದಿಂದಾಗಲಿಲ್ಲ. ಮೂರು ವರ್ಷಗಳ ಅನಂತರ ಮತ್ತೆ ನಡೆಸಿದ ಯತ್ನವೂ ವಿಫಲವಾಯಿತು. 1652ರಲ್ಲಿ ಈತ ಮತ್ತೆ ದಖನ್ನಿನ ವೈಸ್ರಾಯಿಯಾದ. ಅಲ್ಲಿಯ ಆಡಳಿತವನ್ನು ಸುಧಾರಿಸಿ, ವರಮಾನ ಹೆಚ್ಚಿಸಿದ. ಗೋಲ್ಕಂಡ ಮತ್ತು ಬಿಜಾಪುರಗಳ ಮೇಲೆ ಕ್ರಮವಾಗಿ 1656 ಮತ್ತು 1657ರಲ್ಲಿ ದಂಡೆತ್ತಿಹೋದ. ಆದರೆ ಷಾಜಹಾನ್ ಅಡ್ಡಬಂದುದರಿಂದ ಈ ಆಕ್ರಮಣಗಳನ್ನು ಔರಂಗ್ಜೇóಬ್ ಮುಂದುವರಿಸಲಾಗಲಿಲ್ಲ.
ಅಧಿಕಾರಕ್ಕಾಗಿ ಹೋರಾಟ
ಬದಲಾಯಿಸಿ1657 ರಲೀ ಷಾಜಹಾನ್ ಕಾಯಿಲೆಯಿಂದ ಮಲಗಿದ. ತನ್ನ ಹಿರಿಯ ಮಗ ದಾರಾ ಷುಕೋ ಚಕ್ರವರ್ತಿಯಾಗಬೇಕೆಂಬುದು ಷಾಜಹಾನನ ಇಚ್ಛೆಯಾಗಿತ್ತು. ಆತ ತಂದೆಯೊಡನೆಯೇ ದೆಹಲಿಯಲ್ಲಿದ್ದ. ಎರಡನೆಯ ಮಗ ಷೂಜಾ ಬಂಗಾಲದಲ್ಲಿ ವೈಸ್ರಾಯಿಯಾಗಿದ್ದ. ಔರಂಗಜೇಬನ ತಮ್ಮ-ಷಾಜಹಾನನ ಕೊನೆಯ ಮಗ-ಮುರಾದ್ ಇದ್ದದ್ದು ಗುಜರಾತಿನಲ್ಲಿ ವೈಸ್ರಾಯಿಯಾಗಿ. ತಂದೆಯ ಜಡ್ಡಿನ ಸುದ್ದಿ ಬಂದೊಡನೆಯೇ ಷೂಜಾ ಬಂಗಾಳದ ಚಕ್ರವರ್ತಿಯೆಂದು ಸಾರಿಕೊಂಡ. ಮುರಾದನೂ ಷೂಜಾನ ಮಾರ್ಗವನ್ನೇ ಅನುಸರಿಸಿದ. ಈ ಸ್ಪರ್ಧೆಯಲ್ಲಿ ಔರಂಗ್ಜೇ಼ಬ್ ಹಿಂದೆ ಬೀಳಲಿಲ್ಲ. ಸಾಮ್ರಾಜ್ಯವನ್ನು ಎರಡು ಭಾಗ ಮಾಡಿ ತನಗೊಂದು ಪಾಲು ಕೊಡಬೇಕೆಂಬ ಷರತ್ತಿನ ಮೇಲೆ ಮುರಾದನಿಗೆ ಜೊತೆಯಾದ. ಇವರಿಬ್ಬರ ಸಂಯುಕ್ತ ಸೇನೆಗಳಿಗೂ ಷಾಜಹಾನನ ಸೇನೆಗೂ ನಡುವೆ ಯುದ್ಧಗಳು ನಡೆದುವು. ದಾರಾ ಷುಕೋ ಸೋತು ಆಗ್ರಕ್ಕೆ ಪಲಾಯನ ಮಾಡಿದ. ಔರಂಗಜೇಬ್ ಮುರಾದರ ಸೈನ್ಯಗಳು ಬೆನ್ನಟ್ಟಿ ನಡೆದು, ಆಗ್ರವನ್ನು ಮುತ್ತಿ ಗೆದ್ದುವು (1658ರ ಜೂನ್ 8). ಷಾಜಹಾನ್ ಆಮರಣಾಂತ ಬಂದಿಯಾದ. 1657ರಲ್ಲಿ ಗುಜರಾತಿನಲ್ಲಿ ತನ್ನ ದಿವಾನನ ಕೊಲೆ ಮಾಡಿಸಿದನೆಂಬ ಅಪವಾದವನ್ನು ಮುರಾದನ ಮೇಲೆ ಔರಂಗ್ಜೇóಬ್ ಹೊರಿಸಿ ಅವನನ್ನು ಮರಣಕ್ಕೆ ಗುರಿಪಡಿಸಿದ. ಈ ನಡುವೆ ದಾರಾನ ಮಗನಿಂದ ಹಿಂದೆಯೇ ಸೋತಿದ್ದ ಷೂಜಾ ಗರಿಗೂಡಿಸಿಕೊಳ್ಳುತ್ತಿದ್ದದ್ದನ್ನು ಅರಿತ ಔರಂಗ್ಜೇóಬ್ ಅವನ ವಿರುದ್ದವಾಗಿ ಖುದ್ಧಾಗಿ ಯುದ್ಧ ನಡೆಸಿದಾಗ ಷೂಜಾ ಸೋತ. ಓಡಿಹೋಗುತ್ತಿದ್ದ ಅವನನ್ನು ಔರಂಗ್ಜೇóಬನ ಸೈನ್ಯ ಬೆನ್ನಟ್ಟಿತು. ಆತ ದಖನ್ನಿಗೆ ಹೋಗಿ ಅಲ್ಲಿಂದ ಅರಕಾನಿಗೆ ಪಲಾಯನ ಮಾಡಿದ. ಅವನೂ ಅವನ ಸಂಸಾರದವರೂ ಅಲ್ಲಿ ನಾಶಹೊಂದಿದರು. ಇನ್ನುಳಿದಿದ್ದವ ದಾರಾ ಮಾತ್ರ. ಆಗ್ರದಿಂದ ಓಡಿಹೋಗಿದ್ದ ಅವನೊಂದಿಗೆ ಔರಂಗ್ಜೇóಬನ ಸೈನ್ಯ ಕಾದಿ ಅವನನ್ನು ಹಿಡಿತಂದಿತು. ದಾರಾಗೆ ಔರಂಗ್ಜೇóಬನಿಂದ ಆದ ಅವಮಾನ ಅಷ್ಟಿಷ್ಟಲ್ಲ. ಧರ್ಮಭ್ರಷ್ಟನೆಂಬ ಅಪವಾದದ ಮೇಲೆ ಅವನನ್ನು ವಿಚಾರಣೆಗೆ ಗುರಿಪಡಿಸಲಾಯಿತು. ತಪ್ಪು ಸಾಬೀತಾಯಿತು. 1659ರ ಆಗಸ್ಟ್ 30ರಂದು ಆತ ಮರಣದಂಡನೆಗೆ ಗುರಿಯಾದ. ಔರಂಗ್ಜೇóಬನ ಸೋದರರೆಲ್ಲ ನಿರ್ನಾಮವಾದ ಮೇಲೆ ಅವನಿಗೆ ನಿರಾತಂಕವಾಯಿತು. 1658ರ ಜುಲೈ 21ರಂದೇ ಷಾ ಜಹಾನ್ ಬಂಧನಕ್ಕೊಳಗಾದಾಗ-ಅನೌಪಚಾರಿತನಾಗಿ ಕಿರೀಟಧಾರಿಯಾಗಿದ್ದ ಔರಂಗ್ಜೇóಬನ ಕೈ ತಡೆಯುವವರು ಯಾರೂ ಇರಲಿಲ್ಲ. 1659ರ ಜೂನಿನಲ್ಲಿ ಆತ ಅಲಂಗೀರ್ (ವಿಶ್ವವಿಜೇತ) ಎಂಬ ಬಿರುದು ತಾಳಿ ಅಧಿಕೃತವಾಗಿ ಸಿಂಹಾಸನವನ್ನೇರಿ ದೀರ್ಘಕಾಲ ಆಳ್ವಿಕೆ ನಡೆಸಿದ.
ಸಾಮ್ರಾಜ್ಯ ವಿಸ್ತರಣೆ
ಬದಲಾಯಿಸಿತನ್ನ ಹಿರಿಯರಂತೆ ಔರಂಗಜೇಬನೂ ಭಾರತದಲ್ಲಿ ಮೊಗಲ್ ಚಕ್ರಾಧಿಪತ್ಯವನ್ನು ವಿಸ್ತರಿಸಿದ. ಇವನ ಆಳ್ವಿಕೆಯ ಮೊದಲ ಭಾಗ (1658-81) ಉತ್ತರ ಭಾರತದಲ್ಲಿ ತನ್ನ ಅಧಿಕಾರವನ್ನು ಕ್ರೋಡೀಕರಿಸಿಕೊಳ್ಳುವುದಕ್ಕೇ ವಿನಿಯೋಗವಾಯಿತು. 1662ರಲ್ಲಿ ಪಶ್ಚಿಮ ಅಸ್ಸಾಂ ಇವನ ಅಧೀನವಾಯಿತು. ಔರಂಗ್ಜೇóಬ್ 1666ರಲ್ಲಿ ಚಿತ್ತಗಾಂಗನ್ನು ವಶಪಡಿಸಿಕೊಂಡ. ವಾಯವ್ಯಗಡಿನಾಡಿನಲ್ಲಿ ದಂಗೆಯೆದ್ದ (1667) ಆಫ್ಘನರನ್ನು 1675ರ ವೇಳೆಗೆ ಅಡಗಿಸಲಾಯಿತು. ಅನೇಕ ವಿದೇಶೀ ಮುಸ್ಲಿಂ ರಾಜ್ಯಗಳು ಇವನೊಂದಿಗೆ ರಾಯಭಾರ ಸಂಬಂಧ ಬೆಳೆಸಿದುವು. 1679ರಲ್ಲಿ ರಜಪುತರೊಂದಿಗೆ ಔರಂಗ್ಜೇಬ್ ಯುದ್ಧ ಹೂಡಿದ. 1681ರ ಮೇವಾಡದ ರಾಣನೊಂದಿಗೆ ಶಾಂತಿಯ ಒಪ್ಪಂದ ಮಾಡಿಕೊಳ್ಳಲಾಯಿತು. ಅನಂತರ ಔರಂಗ್ಜೇóಬನ ಗಮನ ದಕ್ಷಿಣದತ್ತ ತಿರುಗಿತು. 1685ರಲ್ಲಿ ಈತ ಬಿಜಾಪುರದ ಮುಸ್ಲಿಂ ಷಿಯ ರಾಜ್ಯಗಳನ್ನು ಗೆದ್ದುಕೊಂಡ. 1689ರಲ್ಲಿ ಗೋಲ್ಕಂಡ ಇವನ ಬಗಲಿಗೆ ಬಿತ್ತು. ಹೀಗೆ ಇವನ ಚಕ್ರಾಧಿಪತ್ಯ ಕೋರಮಂಡಲದಿಂದ ಚಿತ್ತಗಾಂಗಿನವರೆಗೂ ಉತ್ತರದಲ್ಲಿ ಹಿಂದೂಕುಷ್ವರೆಗೂ ಹಬ್ಬಿತಾದರೂ ದಖನ್ ಪ್ರದೇಶ ಇವನಿಗೆ ತೊಂದರೆ ಕೊಡುತ್ತಲೇ ಇತ್ತು. ಮರಾಠರನ್ನು ಅಡಗಿಸುವುದು ಸಾಧ್ಯವಾಗಲಿಲ್ಲ. 1689ರಲ್ಲಿ ಶಿವಾಜಿಯ ಮಗನಾದ ಶಂಭುಜಿಯನ್ನು ಹಿಡಿದು ಕೊಲ್ಲಲಾಯಿತು. ರಾಜಧಾನಿ ರಾಯಗಢವೂ ವಶವಾಯಿತು. ಶಿವಾಜಿಯ ಕಿರಿಯ ಮಗ ಸಾಹುವನ್ನು ಔರಂಗಜೇಬ್ ಸೆರೆಯಲ್ಲಿಟ್ಟ. ತಂಜಾವೂರು ತಿರುಚಿನಾಪಳ್ಳಿಗಳ ಹಿಂದೂ ರಾಜರು ಔರಂಗಜೇಬನ ಸಾಮಂತರಾದರು.
ಅವನತಿಯ ಹಾದಿ
ಬದಲಾಯಿಸಿಆದರೂ ಔರಂಗ್ಜೇóಬನಿಗೆ ನೆಮ್ಮದಿ ದೊರಕಲಿಲ್ಲ. ಇವನ ಮಹಾ ಸಾಮ್ರಾಜ್ಯದ ಅತಿಯಾದ ವಿಸ್ತೀರ್ಣವೇ ಒಂದು ಹೊರೆಯಾಯಿತು. ಇದರ ಮೇಲೆ ಹತೋಟಿ ಇಟ್ಟುಕೊಳ್ಳುವುದು ಸುಲಭವಾಗಲಿಲ್ಲ. ಒಂದು ಕೇಂದ್ರದಿಂದ ಒಬ್ಬನ ನಿರ್ವಹಣೆಗೆ ಇದನ್ನೆಲ್ಲ ಒಳಪಡಿಸುವುದು ಅಸಾಧ್ಯವೇ ಎನಿಸಿತು. 1667-75ರ ಆಪ್ಘನ್ ಯುದ್ಧಗಳಿಂದಾಗಿ ಔರಂಗ್ಜೇóಬನ ಬೊಕ್ಕಸ ಬರಿದಾಗಿತ್ತು. ಆಫ್ಘನ್ ಸಿಪಾಯಿಗಳನ್ನು ಯುದ್ದಕ್ಕೆ ಬಳಸಿಕೊಳ್ಳುವುದಂತೂ ಸಾಧ್ಯವಿರಲಿಲ್ಲ. ಶಿವಾಜಿಯ ವಿರುದ್ಧವಾಗಿ ಸೆಣಸುವುದು ಕಠಿಣವಾದುದಕ್ಕೆ ಇದೂ ಒಂದು ಕಾರಣ. 1669ರಲ್ಲಿ ಮಥುರಾದಲ್ಲಿ ಜಾಟರೂ 1671ರಲ್ಲಿ ಬುಂದೇಲ್ಖಂಡ ಮತ್ತು ಮಾಳ್ವದಲ್ಲಿ ಬುಂದೇಲರೂ 1672ರಲ್ಲಿ ಪಟಿಯಾಲದ ಶತಮಾನಿಗಳು ಆಳ್ವರದ ಮೇವಟಿಗಳೂ ದಂಗೆಯೆದ್ದರು. ಇವರನ್ನೆಲ್ಲ ನಿರ್ದಯೆಯಿಂದ ಔರಂಗ್ಜೇóಬ್ ಅಡಗಿಸಿದ. ಆದರೂ ಈ ದಂಗೆಗಳು ಮೊಗಲ್ ಆಳ್ವಿಕೆಯ ವಿರುದ್ಧ ಇದ್ದ ಶಕ್ತಿಗಳ ಪ್ರತೀಕಗಳಾಗಿದ್ದುವು. ಪಂಜಾಬಿನಲ್ಲಿ ಸಿಖ್ಖರಲ್ಲಿ ಜಾಗೃತಿ ಉಂಟಾಗಿತ್ತು. ಅವರೂ ಸಂಘಟಿತರಾಗುತ್ತಿದ್ದರು. 1663ರಲ್ಲಿ ತಮ್ಮ ಮೇಲೆ ಹೊರಿಸಲಾಗಿದ್ದ ಕೌಲನ್ನು ಅಸ್ಸಾಮಿನ ಅಹೋಂಗಳು ಕಿತ್ತೊಗೆದು 1671ರಲ್ಲಿ ತಮ್ಮ ನೆಲವನ್ನು ಮತ್ತೆ ಗೆದ್ದುಕೊಂಡರು. ಮರಾಠರಾದರೂ ಸುಮ್ಮನಿರಲಿಲ್ಲ. ಶಂಭೂಜಿಯ ತಮ್ಮ ರಾಜಾರಾಮನೂ ಅವನ ಮರಣಾನಂತರ ಅವನ ಪತ್ನಿ ತಾರಾಬಾಯಿಯೂ ಮೊಗಲರ ವಿರುದ್ಧ ಹೋರಾಟ ಮುಂದುವರಿಸಿದರು. ಔರಂಗಜೇಬನ ಕಣ್ಣಮುಂದೆಯೇ ಎಷ್ಟೋ ಪ್ರದೇಶಗಳು ಮರಾಠರ ವಶವಾದುವು. ಹೀಗೆ ಔರಂಗ್ಜೇóಬನ ಆಳ್ವಿಕೆಯ ಕಾಲದ ಉತ್ತರಾರ್ಧವನ್ನೆಲ್ಲ (1681-1707) ಆತ ದಖನನ್ನು ಮೆಟ್ಟಿನಿಲ್ಲುವುದಕ್ಕೆ ವಿನಿಯೋಗಿಸಬೇಕಾಯಿತು. ಇದಕ್ಕಾಗಿ ಮಾಡಬೇಕಾಗಿಬಂದ ವೆಚ್ಚ ಅಗಾಧ. ಈ ಘಟನೆಗಳು ಮೊಗಲ್ ಸಾಮ್ರಾಜ್ಯವನ್ನು ವಿನಾಶದ ಹಾದಿಯಲ್ಲಿ ಕೊಂಡೊಯ್ದುವು. 1679-80ರ ರಜಪುತ ಯುದ್ಧದಲ್ಲಿ ಔರಂಗ್ಜೇóಬ್ ಗೆದ್ದಿದ್ದನಾದರೂ ಅಲ್ಲೂ ಈತ ಹಿಂದೂ ದೊರೆಗಳ ವಿರೋಧ ಗಳಿಸಿಕೊಂಡ. ಅಕ್ಬರನ ಸ್ನೇಹಮಾರ್ಗವನ್ನು ಈತ ಅನುಸರಿಸಲಿಲ್ಲ. ರಾಷ್ಟ್ರವೇ ಧರ್ಮಕ್ಕೆ ಅಧೀನವಾಯಿತು. ಕುರಾನಿನ ನ್ಯಾಯಕ್ಕನುಸಾರನಾಗಿ ರಾಜ್ಯವಾಳಲು ಯತ್ನಿಸಿದ ಈ ಸುನ್ನಿ ಮುಸಲ್ಮಾನ ಬುದ್ಧಿವಂತನಾದರೂ ಅವಿವೇಕಿ; ವಾಸ್ತವದೃಷ್ಟಿಹೀನ; ಮತಾಂಧ. ನಿಷ್ಠಾವಂತ ಮುಸ್ಲಿಮನ ನಿಷ್ಠುರ ನಿಯಮಗಳನ್ನೆಲ್ಲ ಈತ ತನ್ನ ಮೇಲೆ ವಿಧಿಸಿಕೊಂಡನಷ್ಟೇ ಅಲ್ಲ; ಇಡೀ ಚಕ್ರಾಧಿಪತ್ಯವನ್ನೇ ಇಸ್ಲಾಂ ಸಾಮ್ರಾಜ್ಯವಾಗಿ (ದಾರ್-ಉಲ್-ಇಸ್ಲಾಂ) ಪರಿವರ್ತಿಸಲೆತ್ನಿಸಿದ. ಇದರಿಂದ ಉದ್ಭವವಾದ ಅಸಹನೆಯ ನೆಲೆಗಟ್ಟಿನ ಮೇಲೆ ಆಡಳಿತ ನಡೆಸಲು ಯತ್ನಿಸಿದ್ದೇ ಔರಂಗಜೇಬನ ಆಳ್ವಿಕೆಯ ಮಹಾದುರಂತ. 1564ರಲ್ಲಿ ಅಕ್ಬರ್ ರದ್ದುಮಾಡಿದ್ದ ಜೆಸಿಯಾ ಕಂದಾಯವನ್ನು ಈತ 1679 ರಲ್ಲಿ ಮತ್ತೆ ವಿಧಿಸಿದ. ಉನ್ನತ ಹುದ್ದೆಗಳಿಗೆ ಹಿಂದೂಗಳನ್ನು ನೇಮಿಸಿಕೊಳ್ಳುವುದನ್ನು ನಿಷೇಧಿಸಿದನೆಂದೂ ಅನೇಕ ಹಳೆಯ ಹಿಂದೂ ದೇವಸ್ಥಾನಗಳನ್ನು ನಾಶಗೊಳಿಸಿದನೆಂದೂ ಹೊಸದಾಗಿ ದೇಗುಲಗಳ ನಿರ್ಮಾಣ ಮಾಡಕೂಡದೆಂದು ವಿಧಿಸಿದನೆಂದೂ ಜೋಧಪುರದ ದೊರೆಯಾಗಿದ್ದ ಜಸ್ವಂತ್ ಸಿಂಗನ ಮಗನನ್ನು ಬಲಾತ್ಕಾರದಿಂದ ಹಿಡಿದು ಇಸ್ಲಾಂ ಮತಕ್ಕೆ ಪರಿವರ್ತಿಸಲು ಪ್ರಯತ್ನಸಿದನೆಂದೂ ಹೇಳಲಾಗಿದೆ. ವಿ. ರಾಘವೇಂದ್ರರಾಯರು ಹಿಂದೂ ಮುಸ್ಲಿಂ ಮೈತ್ರಿಯನ್ನು ಬೆಳೆಸಿದ ರಾಜರು ಎಂಬ ಪುಸ್ತಕದಲ್ಲಿ ಔರಂಗ್ಜೇóಬನ ರಾಜ್ಯಭಾರದ ಬಗ್ಗೆ ಹೀಗೆ ಹೇಳುತ್ತಾರೆ; ಔರಂಗಜೇಬನ ರಾಜ್ಯವ್ಯವಹಾರ ಭಿನ್ನಾಭಿಪ್ರಾಯಗಳಿಗೆ ಗುರಿಯಾಗಿದೆ. ಮುಸಲ್ಮಾನರು ಇವನನ್ನು ಒಬ್ಬ ಪೀರ್ ಅಂದರೆ ಸಂತನೆಂದು ತಿಳಿದಿರುವರು. ಕೆಲವು ಹಿಂದೂಗಳು ಇವನನ್ನು ಅಸರೀ ಸ್ವಭಾವದವನೆಂದು ತಿಳಿದಿದ್ದಾರೆ. ಇವನಿಗೆ ಹಿಂದೂಗಳ ಮೇಲೆ ವೈಷಮ್ಯವಿದ್ದುದೇನೋ ನಿಜ. ಆದರೆ ಅದು ಅವನ ಮನಸ್ಸಿನಲ್ಲಿ ಏಕಾಏಕಿ ಹುಟ್ಟಲಿಲ್ಲ. ಪಟ್ಟಾಭಿಷಿಕ್ತನಾದ ಹತ್ತು ವರ್ಷಕಾಲ ಹಿಂದೂಗಳನ್ನು ರಕ್ಷಣೆಮಾಡಲು ಪ್ರಯತ್ನಪಟ್ಟ. ಕಾಶಿ ದೇವಾಲಯದ ಅರ್ಚಕರಿಗೆ ಅವರ ಹಕ್ಕು ಬಾಧ್ಯತೆಗಳನ್ನು ಸುರಕ್ಷಿತವಾಗಿ ಪಾಲಿಸುವೆನೆಂದು ಒಂದು ಅಭಯಪತ್ರ ಕೊಟ್ಟ. ಕಾಲಕ್ರಮದಲ್ಲಿ ಧರ್ಮಬೋಧಕರ ಕೈಯ ಸೂತ್ರದ ಬೊಂಬೆಯಾದ. ಹಿಂದೂಗಳ ಮೇಲೆ ಜೆóಸಿಯಾ ತಲೆಗಂದಾಯವನ್ನು ಹಾಕಿದ. ಇಸ್ಲಾಮೀ ರಾಜನೀತಿಯಲ್ಲಿ ಜಿಮ್ಮಿಗಳ ಪುರಾತನ ದೇವಾಲಯಗಳನ್ನು ಸುರಕ್ಷಿತವಾಗಿ ಇಡಬಹುದು; ಆದರೆ ಹೊಸ ದೇವಸ್ಥಾನಗಳ ಸ್ಥಾಪನೆಗೆ ಅವಕಾಶವಿಲ್ಲ. ಈ ನೀತಿಯನ್ನು ಅನುಸರಿಸಿ ಔರಂಗ್ಜೇóಬ್ ಅರ್ವಾಚೀನ ದೇವಸ್ಥಾನಗಳನ್ನು ನೆಲಸಮ ಮಾಡಬೇಕೆಂದು ಆಜ್ಞೆ ಇತ್ತ. ಇದೊಂದು ಸುಸಮಯವೆಂದು ತಿಳಿದು ಅಶಿಕ್ಷಿತರಾದ ಇವನ ಅಧಿಕಾರಿಗಳು ಹಿಂದಿನವು ಇಂದಿನವು ಎಂದು ಎಣಿಸದೆ ಎಲ್ಲಾ ದೇವಸ್ಥಾನಗಳನ್ನು ಲೂಟಿಮಾಡಿ ತಮ್ಮ ಚಕ್ರವರ್ತಿಯನ್ನು ಅಪಕೀರ್ತಿಗೆ ಗುರಿಮಾಡಿದರು; ರಾಜ್ಯದಲ್ಲಿ ದೊಡ್ಡ ಕ್ರಾಂತಿಯ ಬೀಜ ಬಿತ್ತಿದರು. ಔರಂಗಜೇóಬನಿಗೆ ಹಿಂದೂಗಳಲ್ಲಿ ವ್ಯಕ್ತಿಶಃ ದ್ವೇಷವಿರಲಿಲ್ಲ. ರಜಪುತರಾಜರು ಮೊದಲಿನಂತೆ ಇವನ ಸೈನ್ಯದಲ್ಲಿ ದುಡಿದರು; ಇವನಿಗೋಸ್ಕರ ಕಾಬೂಲ್ ಪ್ರಾಂತ್ಯದಲ್ಲೂ ದಖನ್ ಪ್ರಾಂತ್ಯದಲ್ಲೂ ತಮ್ಮ ಜೀವಗಳನ್ನು ಅರ್ಪಿಸಿದರು. ಇವನ ಖಾಸ ಕಾರ್ಯದರ್ಶಿ ವಾಲೀರಾಮ್ ಹಿಂದೂ ಇವನ ಹಣಕಾಸಿನ ಮಂತ್ರಿಗಳಲ್ಲಿ ಒಬ್ಬನಾದ ರಘುನಂದನರಾಯನೂ ಹಿಂದೂವೇ. ಈ ಚಕ್ರವರ್ತಿ ಕೇವಲ ಸಂಕುಚಿತ ಮನಸ್ಕನಾಗಿ ಸ್ವಂತ ಮಕ್ಕಳನ್ನೂ ಕೂಡ ನಂಬಲಿಲ್ಲ. ಆದ್ದರಿಂದಲೇ ಇವನ ತನುಜರೂ ಇವನ ಮುಸಲ್ಮಾನ್ ಸರದಾರರೂ ಇವನ ಮೇಲೆ ದಂಗೆ ಎದ್ದು ರಾಜ್ಯವನ್ನು ಚೂರುಚೂರಾಗಿ ಮಾಡಿದರು. ಇವರು ಹಾಕಿದ ಮೇಲ್ಪಂಕ್ತಿಯನ್ನು ರಜಪುತರೂ ಮರಾಠರೂ ಸಿಖ್ಖರೂ ಅನುಸರಿಸಿದರು. ಇವರ ದಂಗೆ ಸ್ವರಾಜ್ಯಸ್ಥಾಪನೆಗೋಸ್ಕರ ಕೈಗೊಂಡದ್ದು; ಧರ್ಮವೈಷಮ್ಯದಿಂದ ಉದಿಸಿದುದು ಎಂಬುದು ನಿರಾಧಾರವಾದ ತಪ್ಪಿನ ಅಭಿಪ್ರಾಯ. ಮುಸಲ್ಮಾನರೂ ದಂಗೆಯೆದ್ದರು, ಹಿಂದೂಗಳೊಬ್ಬರೇ ಔರಂಗ್ಜೇóಬನನ್ನು ಹಾಳು ಮಾಡಿದರೆಂಬುದು ತಪ್ಪಭಿಪ್ರಾಯ.
ನಿಧನ
ಬದಲಾಯಿಸಿಈ ವಿಚಾರ ಹೇಗಾದರೂ ಇರಲಿ, ಔರಂಗ್ಜೇóಬ್ ದಖನ್ನನ್ನು ಹತೋಟಿಯಲ್ಲಿಟ್ಟುಕೊಳ್ಳುವ ಪ್ರಯತ್ನದಲ್ಲೇ ಅಹಮದ್‍ನಗರದಲ್ಲಿ ಸತ್ತ (1707ರ ಮಾರ್ಚ್ 3); ಅಶಾಂತಿಯ ಗೊಂದಲವನ್ನೆಬ್ಬಿಸಿ ಚಕ್ರಾಧಿಪತ್ಯವನ್ನು ತನ್ನ ಉತ್ತರಾಧಿಕಾರಿಗಳಿಗೆ ಬಿಟ್ಟುಹೋದ. ಇವನ ಜೀವಮಾನದ ಕಾಲದಲ್ಲೇ ಐರೋಪ್ಯ ಶಕ್ತಿಗಳು ಭಾರತದ ಮೇಲೆ ಕಣ್ಣುಹಾಕಿದ್ದುವು. ಈ ಸುಪ್ತ ಅಪಾಯವನ್ನು ಔರಂಗ್ಜೇóಬ್ ಕಂಡರಿಯಲಿಲ್ಲ. ಹಿಂದೂ-ಮುಸ್ಲಿಂ, ಷಿಯ-ಸುನ್ನಿ ಮುಂತಾದ ಬಗೆಬಗೆಯ ಒಡಕುಗಳನ್ನು ಹೆಚ್ಚಿಸಿ ಭಾರತವನ್ನು ಪಾಶ್ಚಾತ್ಯರ ಕೈಯಲ್ಲಿಡಲು ಈತನೂ ತನಗರಿವಿಲ್ಲದೆಯೇ ಕಾರಣನಾದ.
ಕುಟುಂಬ
ಬದಲಾಯಿಸಿಔರಂಗ್ಜೇóಬನ ಮುಖ್ಯ ಪತ್ನಿ ದಿಲ್ರಸ್ ಬಾನು ಬೇಗಂ. ಇವನಿಗೆ ಐವರು ಮಕ್ಕಳಿದ್ದರು. ತಾನು ತನ್ನ ತಂದೆಗೆ ಮಾಡಿದ್ದನ್ನೆ ತನ್ನ ಮಕ್ಕಳು ತನಗೂ ಮಾಡಿಯಾರೆಂದು ಈತ ಬಹಳ ಅಂಜಿದ್ದ. ಅವರನ್ನು ಆದಷ್ಟು ದೂರ ಇಟ್ಟಿದ್ದ. ಯಾರನ್ನೇ ಆಗಲಿ ನಂಬುವುದು ಇವನ ಸ್ವಭಾವವೇ ಅಲ್ಲ. ಈತನ ಮಕ್ಕಳ ಪೈಕಿ ಮಹಮ್ಮದ್ 1676ರಲ್ಲಿ ಗುಪ್ತ ಕೊಲೆಗೀಡಾದ. ಔರಂಗ್ಜೇóಬನ ಅನಂತರ ಅಧಿಕಾರಕ್ಕೆ ಬಂದಾತ ಮುಅಜ಼ಮ್. ಮೂರನೆಯ ಅಜ಼ಂ. ಸಿಂಹಾಸನಕ್ಕಾಗಿ ನಡೆಸಿದ ಹೋರಾಟದಲ್ಲಿ ಈತ ಮಡಿದ. ನಾಲ್ಕನೆಯ ಮಗ ಅಕ್ಬರ್ ತಂದೆಯ ವಿರುದ್ಧವಾಗಿ ದಂಗೆ ಎದ್ದು ದೇಶಭ್ರಷ್ಟನಾಗಿ ಪರ್ಷಿಯಕ್ಕೆ ಹೋಗಿ ಅಲ್ಲಿ ಸತ್ತ (1704). ಕೊನೆಯ ಕಾಂ ಬಕ್ಷನೂ ಸಿಂಹಾಸನಕ್ಕಾಗಿ ನಡೆದ ಬಡಿದಾಟದಲ್ಲಿ 1700ರಲ್ಲಿ ಪ್ರಾಣ ತೆತ್ತ.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Aurangzeb, as he was according to Mughal Records
- Article on Aurganzeb from MANAS group page, UCLA
- The Tragedy of Aureng-zebe Archived 2005-08-29 ವೇಬ್ಯಾಕ್ ಮೆಷಿನ್ ನಲ್ಲಿ. Text of John Dryden's drama, based loosely on Aurangzeb and the Mughal court, 1675
- Coins of Aurangzeb
ಉಲ್ಲೇಖಗಳು
ಬದಲಾಯಿಸಿ- ↑ Spear, Percival. "Aurangzeb". Encyclopædia Britannica. Retrieved 6 April 2016.